Saturday, October 3, 2026

ನನ್ನ ಭಾಗ್ಯವೆಂದರೂ ಅದು ನಾಡಿನ ಭಾಗ್ಯ ಹೌದು 1970 (ಅಣ್ಣಾವ್ರ ಚಿತ್ರ ೧೨೭/೨೦೭)

ಆ ಸಮಯದಲ್ಲಿ ರಾಜಕುಮಾರ್ ಅವರ ಹೆಸರು, ಅವರ ಉಪಸ್ಥಿತಿ ಎಷ್ಟು ಚಿತ್ರಕ್ಕೆ ಅನುಕೂಲಕರವಾಗಿತ್ತು.. ಅಥವ ಉಪಯುಕ್ತತೆ ಇತ್ತು.. ಎನ್ನುವುದು ಈ ಚಿತ್ರ ನೋಡಿದಾಗ ಅರಿವಾಗುತ್ತೆ.. ಸಿನೆಮಾದ ಉದ್ದದ ಕಡೆಯ ಇಪ್ಪತ್ತೈದು ನಿಮಿಷಗಳು ಸರಸರ ಓಡುತ್ತದೆ... ಕಾರಣ ರಾಜಕುಮಾರ್ ಅವರು ಅವಾಗ ತೆರೆಯ ಮೇಲೆ ಬರುತ್ತಾರೆ.. 

ಇದೊಂದು ಹಳ್ಳಿಯ ಕತೆ.. ಮತ್ತು ಪಟ್ಟಣದಲ್ಲಿ ಕೋರ್ಟ್ ಕಚೇರಿ ಅಂತ ಅಹಂ ಅನ್ನು ಮುಂದಿಟ್ಟುಕೊಂಡು ಬರುವ ಹಳ್ಳಿಯ ಮಂದಿ ನರಸಿಂಹರಾಜುವಿಗೆ ವಕೀಲ ಮಹಾಶಯರು ಹೇಗೆ ಹಳ್ಳ ಹಿಡಿಸುತ್ತಾರೆ.. ಮತ್ತು ಅದೇ ಕ್ಷಣಕ್ಕೆ ಮನೆ ಮಠ ಮಾರಿಯಾದರೂ ತಮ್ಮ ಅಹಂಗೆ ಗೆಲುವಾಗಬೇಕು ಅಂತ ತಮ್ಮ ಹಳ್ಳವನ್ನು ತಾವೇ ತೋಡಿಕೊಳ್ಳುತ್ತಾರೆ ಎಂದು ತೋರಿಸಿದ ಸಿನಿಮಾ.. 

ಹಳ್ಳಿಯ ಒಬ್ಬ ಪ್ರಮುಖ ಆ ಪಾತ್ರದಲ್ಲಿ ಆರ್ ನಾಗೇಂದ್ರರಾವ್ .. , ತನ್ನ ಹಿತಾಸಕ್ತಿಯನ್ನು ಮಾತ್ರ ಮುಂದಿಟ್ಟುಕೊಂಡು ಮಿಕ್ಕವರನ್ನು ಸುಲಿಗೆ ಮಾಡುವ ಗುಣದಿಂದ ಕಡೆಯಲ್ಲಿ ತನ್ನ ಮನೆಯಲ್ಲಿಯೇ ಹೆಗ್ಗಣ ಬಿಲ ತೊಡುವ ರೀತಿ .. ಊರನ್ನು ಸುಲಿಗೆ ಮಾಡಿ.. ತನ್ನ ಮಗನೆ ಕೆಟ್ಟ ದಾರಿಯನ್ನು ಹಿಡಿದು.. ಸೆರೆವಾಸಕ್ಕೆ ಬಲಿಯಾಗುವುದು ದುರಂತ ಅನಿಸಿದರೂ.. ಮನೆ ಗೆದ್ದು ಮಾರು ಗೆದಿ ಎನ್ನುವ ನಾಣ್ಣುಡಿಯನ್ನು ನೆನಪಿಸುತ್ತದೆ.. ಬಚ್ಚಿಟ ಹಣವಾಗಲಿ, ಆಸ್ತಿಯಾಗಲಿ ಎಂದೂ ಪರರ ಪಾಲೇ ಎಂದು ಅರಿವು ಮೂಡಿಸುವ ಸಂದೇಶ ಈ ಚಿತ್ರದಲ್ಲಿದೆ . 

ಸಂಸ್ಕಾರವಂತ ಕುಟುಂಬದ ಸದಸ್ಯ.. ಪಟ್ಟಣದಲ್ಲಿಯೇ ಓದಿ ಬೆಳೆದರೂ.. ಹಳ್ಳಿಯ ಬೇರನ್ನು ಮರೆಯದೆ.. ಹಳ್ಳಿಗೆ ಮರಳಿ ವ್ಯವ್ಯಸಾಯದಲ್ಲಿ ತೊಡಗಿಕೊಂಡು.. ಮನೆಯನ್ನು ಉತ್ತಮ ಸ್ಥಿತಿಗೆ ತರುವುದಷ್ಟೇ ಅಲ್ಲದೆ.. ಹಳ್ಳಿಯ ಜನರಿಗೆ ಉತ್ತಮ ಮಾರ್ಗದರ್ಶನ ನೀಡುವ ಪಾತ್ರದಲ್ಲಿ ಸುದರ್ಶನ್ ಮಿಂಚುತ್ತಾರೆ.. 

ಅದೇ ರೀತಿ ಪಟ್ಟಣದ ಓದಿಗೆ ಶರಣಾಗಿದ್ದರು ಹಳ್ಳಿಯ ವಾತಾವರಣಕ್ಕೆ ಹೊಂದಿಕೊಳ್ಳುವ ಪಾತ್ರದಲ್ಲಿ ಶ್ರೀಲಲಿತಾ  ಉತ್ತಮ ಅಭಿನಯ ನೀಡಿದ್ದಾರೆ. 

ಸುಲಿಗೆಯೊಂದೇ ಬದುಕು ಪಾತ್ರದಲ್ಲಿ ಅನ್ನುವ ಸುರೇಖಾ.. ಅಂತ್ಯದಲ್ಲಿ ಕೊಲೆಯಾಗುತ್ತಾರೆ ..
ಹೆಚ್ಚಿನ ಹಣ ಮಾಡಬೇಕೆಂದು ಕಳ್ಳಸಾಗಾಣಿಕೆಯಲ್ಲಿ ತೊಡಗಿಸಿ ಕೊಂಡು ತನ್ನ ಅಪ್ಪ ಹಳ್ಳಿಯ ಪ್ರಮುಖ ಎಂಬ ದರ್ಪದಲ್ಲಿ ತನ್ನನ್ನು ಪ್ರೀತಿಸುತ್ತಿದ್ದ (ಅಥವ ನಾಟವಾಡುತ್ತಿದ್ದ) ಸುರೇಖಾಳು ಮಾಡುತ್ತಿದ್ದ ಬಲವಂತದ ಮಾಡುವೆ ಅಥವ ಹಣಕ್ಕಾಗಿ ಪೀಡಿಸುತ್ತಿದ್ದ ಆಕೆಯನ್ನು ಕೊಲ್ಲಿಸುವ ಪ್ರಕ್ರಿಯೆಗೆ ಇಳಿಯುತ್ತಾನೆ ಆತನ ಮಗನ ಪಾತ್ರದಲ್ಲಿ ಬಿ ಎಂ ವೆಂಕಟೇಶ್.. 

ಎಲ್ಲಾ ಪಾತ್ರಧಾರಿಗಳು ಕತೆಗೆ ತಕ್ಕಂತೆ ಅಭಿನಯ ನೀಡಿದ್ದಾರೆ.. ಸಾಹಿತಿ, ನಿರ್ದೇಶಕರಾಗಿ ಹೆಸರು ಮಾಡಿದ್ದ ಕು. ರ. ಸೀತಾರಾಮ ಶಾಸ್ತ್ರೀ.. (ಕು ರ ಸೀ) ಈ ಚಿತ್ರದಲ್ಲಿ ಒಂದು ಮುಖ್ಯ  ಪಾತ್ರದಲ್ಲಿ ಚೊಕ್ಕದಾಗಿ ಅಭಿನಯಿಸಿದ್ದಾರೆ.. 

ಚಿತ್ರದ ಉತ್ತರಾರ್ಧದ ಉತ್ತರಾರ್ಧದಲ್ಲಿ ಬರುವ ರಾಜಕುಮಾರ್ ಚಿತ್ರಕ್ಕೆ ಅಗತ್ಯವಿದ್ದ ವೇಗವನ್ನು ದೊರಕಿಸಿ ಕೊಡುತ್ತಾರೆ.. ಅವರ ಪ್ರಥಮ ದೃಶ್ಯದಲ್ಲಿ ತಮ್ಮ ಸಿಬ್ಬಂಧಿಯೊಡನೆ ಕಸರತ್ತು ಮಾಡುವ ದೃಶ್ಯದಲ್ಲಿ ಅವರ ದೇಹದಾಢ್ಯ ನೋಡಬೇಕು.. 

ನಂತರ ಕೊಲೆಯಾದ ಘಟನೆಗಳನ್ನು ಒಂದೊಂದಾಗಿ ಅವಲೋಕಿಸಿ ವಿಶ್ಲೇಷಣೆ ಮಾಡುತ್ತಾ.. ಕೊಲೆಯ ಬುಡಕ್ಕೆ ತಲುಪುವುದು. ಮತ್ತು ಚಿತ್ರಕ್ಕೆ ಅಗತ್ಯವಿದ್ದ ಅಂತ್ಯ ದೊರಕಿಸಿಕೊಡುವುದರಲ್ಲಿ ಯಶಸ್ವೀಯಾಗುತ್ತಾರೆ .. ಇಲ್ಲಿ ಗಮನಿಸಬೇಕಾದ ಅಂಶವೆಂದರೆ.. ತಾವೊಬ್ಬ ಆ ಹೊತ್ತಿಗೆ ದೊಡ್ಡ ಯಶಸ್ವೀ ನಟ ಎಂದು ಅರಿವಿದ್ದರೂ.. ಪುಟ್ಟ ಪಾತ್ರದಲ್ಲಿ ಯಾವುದೇ ಹಮ್ಮು ಬಿಮ್ಮು ಇಲ್ಲದೆ ನಟಿಸಿರುವುದು ಅವರ ಗುಣಸಿರಿವಂತಿಕೆಯನ್ನು ತೋರಿಸುತ್ತದೆ.. 

ಆ ಪಾತ್ರಕ್ಕೆ ಬೇಕಾದ ಗತ್ತು ಗೈರತ್ತು.. ತೀಕ್ಷ್ಣ ಗಮನಿಸುವಿಕೆ, ಗ್ರಹಿಕೆ.. ಮಾತಾಡುತ್ತಲೇ ಉಳಿದ ಅಂಶಗಳನ್ನು ಹೆಕ್ಕಿ ತೆಗೆಯುವ ಜಾಣ್ಮೆ ಎಲ್ಲವನ್ನೂ ಅತಿ ಉತ್ತಮವಾಗಿ ಅಭಿನಯಿಸಿದ್ದಾರೆ.. 

ಆರ್ ನಾಗೇಂದ್ರರಾವ್, ಬಿ ಎಂ ವೆಂಕಟೇಶ್ ಸುದರ್ಶನ್ ಕು ರ ಸೀ ಶಾಂತಮ್ಮ ಶ್ರೀಲಲಿತಾ, ಸುರೇಖ ಪ್ರತಿಯೊಂದು ಪಾತ್ರವೂ ಹಿತಮಿತವಾಗಿದೆ. 

ಆರ್ ರತ್ನಂ ಅವರ ಸಂಗೀತ, ಕು ರ ಸೀ, ನಂಜುಕವಿ (ಆನೇಕಲ್) ಮತ್ತು ಕೆ ಎಸ್ ಸತ್ಯನಾರಾಯಣ 
ಗಾಯನದಲ್ಲಿ ಪಿ ಬಿ ಶ್ರೀನಿವಾಸ್, ಬಾಲಸುಬ್ರಮಣ್ಯಮ್, ಪೀಠಾಪುರಂ ನಾಗೇಶ್ವರರಾವ್, ಆರ್ ಶಂಕರ್, ಬಿ ವಸಂತ, ಕಮಲ ಮತ್ತು ಕೌಶಲ್ಯ ಇದ್ದಾರೆ. 

ಮೂಲಕಥೆ ಎಂ ವಿ ಗೌಡ ಅವರದ್ದು.. ಅದನ್ನು ಅಚ್ಚುಕಟ್ಟಾಗಿ ಚಿತ್ರಕಥೆ ಮಾಡಿ ನಿರ್ದೇಶನ ಮಾಡಿರುವುದು ಆರ್ ನಾಗೇಂದ್ರರಾವ್ ಅವರು.. ಅದಕ್ಕೆ ತಕ್ಕ ಸಂಭಾಷಣೆ ಒದಗಿಸಿರೋದು ಎಂ ವಿ ಗೌಡ ಮತ್ತು  ಕೋ ಸು ಸಂಪುಟಾಣಿ.. 

ಚಿಟ್ಟಿಬಾಬು ಛಾಯಾಗ್ರಹಣ ಮತ್ತು ನಿರ್ಮಾಣ ಎಸ್ ನಾರಾಯಣಪ್ಪ ಮತ್ತು ಎನ್ ನರಸಿಂಹರಾಜು ಅವರದ್ದು... 

ಇದೊಂದು ಹಳ್ಳಿಯ ವಾತಾವರಣದಲ್ಲಿ ನೆಡಯುವ ಚಿಕ್ಕ 






  




































Friday, October 2, 2026

ಪರೋಪಕಾರಿ ಪಾಪಣ್ಣ ಎಂಬ ಗಾದೆಯಂತೆ ನಾಯಕ - ಪರೋಪಕಾರಿ 1970 (ಅಣ್ಣಾವ್ರ ಚಿತ್ರ ೧೨೬/೨೦೭)

ಒಂದರ ಹಿಂದೆ ಒಂದು ಚಿತ್ರ.. ಒಂದಕ್ಕಿಂತ ಒಂದು ಭಿನ್ನ.. ಎಲ್ಲದರಲ್ಲೂ ಸಾಮಾನ್ಯ ಸಂಗತಿ ಎಂದರೆ ರಾಜಕುಮಾರ್ ಅವರ ಲೀಲಾಜಾಲ ಅಭಿನಯ.. ನೀರು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಹಾಕಿದಾಗ ಆ ಪಾತ್ರೆಯಾಕಾರ ತೆಗೆದುಕೊಳ್ಳುವಂತೆ.. ಪ್ರತಿ ಚಿತ್ರದಲ್ಲೂ ಆ ಕಥಾವಸ್ತುವಿಗೆ ತಕ್ಕಂತೆ ಆ ಪಾತ್ರವೇ ಆಗಿಬಿಡುವುದು ರಾಜಕುಮಾರ್ ಅವರಿಗೆ ಸಲೀಸಾಗಿ ಹೋಗಿದೆ. 

ಹೌದು ಇಲ್ಲಿ ಸಿರಿವಂತರ ಮಗನಾದರೂ ದರ್ಪವಿಲ್ಲ. ಅಹಂಕಾರವಿಲ್ಲ.. ಬಡವರನ್ನು ನಿಕೃಷ್ಟವಾಗಿ ಕಾಣುವ ಗುಣವಿಲ್ಲ ಬದಲಿಗೆ ತನ್ನ ಸುತ್ತಲ ಬಡಬಗ್ಗರನ್ನು ಕಂಡು ಮರುಗುವಂಥಹ ಹೃದಯವಂತ.

 

ಮಾತಿಗೆ ಮಾತು ಬಂದು, ತನ್ನ ಸ್ವಾಭಿಮಾನಕ್ಕೆ ಪೆಟ್ಟು ಬೀಳುವಂಥಹ ಮಾತು ಕೇಳಿಬಂದಾಗ ಅದನ್ನೇ ಸವಾಲಾಗಿ ತೆಗೆದುಕೊಂಡು ಆ ಸವಾಲಿನಲ್ಲಿ ಗೆಲ್ಲುವ ನಾಯಕ ನಮ್ಮ ರಾಜಕುಮಾರ್. ಅವರ ಪಾತ್ರಾಭಿನಯವೋ, ಅವರೇ ಆ ಪಾತ್ರವೋ, ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ ಅನ್ನುವಂತಹ ಅದ್ಭುತವಾಗಿದ್ದಾರೆ. 

ಸಿನಿಮಾದುದ್ದಕ್ಕೂ ನೀರಿನಂತೆ ಪ್ರವಹಿಸುತ್ತಲೇ ಇರುವ ಅವರ ಅಭಿನಯ ಕಂಡು ಮೂಕವಿಸ್ಮಿತನಾಗುವುದೇ ಉಳಿದಿರುವುದು. ಕಥೆ ತಂದೊಡ್ಡುವ ಸವಾಲುಗಳಲ್ಲಿ ಕೂಡ ಸಮರಸ ಚಿತ್ತದಿಂದ ಸಾಗುವುದು.. ನಾಯಕಿಯ ಜೊತೆಯಲ್ಲಿ ತಮಾಷೆ, ಕೀಟಲೆ, ಪ್ರೀತಿ, ಮಮತೆ, ತನ್ನ ಗುರು ಹಿರಿಯರನ್ನು, ತಂದೆಯನ್ನು, ಸಹೋದರನನ್ನು ಎಲ್ಲರನ್ನೂ ಪ್ರೀತಿಯಿಂದ ಕಾಣುವುದು.. ಹೀಗೆ ಹತ್ತಾರು ಸನ್ನಿವೇಶಗಳಲ್ಲಿ ಅವರ ಅಭಿನಯದ ಪ್ರತಿಭೆ ಹೊರಹೊಮ್ಮಿದೆ. 

ಈ ಚಿತ್ರವನ್ನು ಅನೇಕ ಅವರ ಚಿತ್ರಗಳಂತೆ ತನ್ನ ಹೆಗಲ ಮೇಲೆ ಹೊತ್ತು ನಿಭಾಯಿಸಿದ್ದಾರೆ. 

ನಾಯಕಿಯಾಗಿ ಜಯಂತಿ ಕಂಗೊಳಿಸುತ್ತಾರೆ. ಅವರ ಮುದ್ದು ಮುದ್ದಾದ ಕನ್ನಡ ರಾಜಕುಮಾರ್ ಪಾತ್ರಧಾರಿಯನ್ನು ಹೋಗೋ ಬಾರೋ ಎಂದು ಮಾತಾಡುವುದು, ಪ್ರೀತಿಯಿಂದ ಮಾತಾಡುವುದು, ಅಷ್ಟೇ ಜಾಣತನದಿಂದಲೂ ಇರುವುದು.. ಹೀಗೆ ನಾಯಕನ ಜೊತೆಯಲ್ಲಿ ಪ್ರತಿಯೊಂದು ಸನ್ನಿವೇಶದಲ್ಲೂ ಜಯಂತಿ ಕಂಗೊಳಿಸುತ್ತಾರೆ. 

ಅಪ್ಪನಾಗಿ ಸಂಪತ್ ಭಾವಾಭಿನಯಕ್ಕೆ ಹೆಸರುವಾಸಿ.. ಅದನ್ನು ಇಲ್ಲಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟೋದು ಕಣೋ ಅನ್ನುವಾಗ ಅವರ ಮುಖಾಭಿನಯ, ಅದೇ ರೀತಿ ಮಗ ಮನೆ ಬಿಟ್ಟು ಹೋಗುವಾಗ ಕಣ್ಣೀರಾಗುವುದು. ಸಂಪತ್ ಇಷ್ಟವಾಗುತ್ತಾರೆ. 

ನಾಗಪ್ಪ.. ಮತ್ತೆ ಇಲ್ಲಿ ಖಳ.. ಆದರೆ ಆರಂಭದ ದೃಶ್ಯಗಳಲ್ಲಿ ಅರೆ ಇಷ್ಟು ಒಳ್ಳೆ ಪಾತ್ರವೇ.. ಸೂಟುಬೂಟಿನಲ್ಲಿ ಕಾಣಸಿಗುವ ಅವರು.. ಮುದ್ದಾಗಿ ಕಾಣುತ್ತಾರೆ. ಬಹುತೇಕ ಸಿನೆಮಾಗಳಲ್ಲಿ ಕಲರ್ ಕಲರ್ ಲುಂಗಿ, ಜುಬ್ಬಾ, ಬಾಯಲ್ಲಿ ಬೀದಿ, ಗಿರಿಜಾ ಮೀಸೆ, ಕೆನ್ನೆಯ ಮೇಲೊಂದು ಮಚ್ಚೆ.. ಕೆದರಿದ ಕೂದಲು.. ಹವಾಯಿ ಚಪ್ಪಲಿ ಇದು ಸಾಮಾನ್ಯವಾದ ವೇಷಭೂಷಣ.. ಆದರೆ ಈ ಚಿತ್ರದಲ್ಲಿ ಸೂಟುಬೂಟಿನಲ್ಲಿ ಕಾಣುತ್ತಾರೆ. ಜೊತೆಗೆ ಸುಂದರವಾಗಿ ಕೂಡ ಕಾಣುತ್ತಾರೆ. 

ಉಳಿದಂತೆ ಭಟ್ಟಿ ಮಹದೇವಪ್ಪ, ಎಚ್ ರಾಮಚಂದ್ರ ಶಾಸ್ತ್ರೀ, ಜೋಕರ್ ಶ್ಯಾಮ್, ಕಮೆಡಿಯನ್ ಗುಗ್ಗು, ಪಾಪಮ್ಮ ಮತ್ತಿರರು ಕತೆಯ ಓಟಕ್ಕೆ ತಕ್ಕಂತೆ ಬರುತ್ತಾರೆ. 

ಚಿತ್ರದ ವಿಶೇಷತೆ ಹಾಡುಗಳು.. ಉಪೇಂದ್ರಕುಮಾರ್ ಅವರ ಸಂಗೀತ.. 

ಜೋಕೇ ನಾನು ಬಳ್ಳಿಯ ಮಿಂಚು 
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೇ 
ಕಣ್ಣ ರೆಪ್ಪೆ ಒಂದನೊಂದು ಮರೆವುದೆ 
ಹೋದರೆ ಹೋಗು ನನಗೇನು 
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 

ಐದು ಹಾಡುಗಳು ಜನಪ್ರಿಯವಾಗಿವೆ.. 

ಚಿ ಉದಯಶಂಕರ್ ಮತ್ತು ಆರ್ ಎನ್ ಜಯಗೋಪಾಲ್ ರಚಿಸಿದ್ದಾರೆ

ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಎಲ್ ಆರ್ ಈಶ್ವರಿ ಹಾಡಿದ್ದಾರೆ

ವೈ ಆರ್ ಸ್ವಾಮಿ ಈ ಚಿತ್ರದ ಕತೃ ಅಂದರೆ ಚಿತ್ರಕತೆ ಮತ್ತು ನಿರ್ದೇಶನ

ಆರ್ ಚಿಟ್ಟಿಬಾಬು ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ 

 ಭಗವತಿ ಪ್ರೊಡಕ್ಷನ್ಸ್ ಅವರ ಲಾಂಛನದಲ್ಲಿ ತಯಾರಾದ ಈ ಚಿತ್ರದ ಕಥೆ ಕೂಡ ಅವರದ್ದೇ.