Sunday, October 21, 2018

ನಾದ ನಮನ ಸುಂದರ ಸಂಜೆ !!!

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ತಾಲೂಕಿನ ಬಳಿಯ ಕಣಗಾಲ್  ಎಂಬ ಪುಟ್ಟ ಗ್ರಾಮದ ಒಂದು ಹಳ್ಳಿಯ ಮನೆಯ  ಜಗಲಿಯ ಮೇಲೆ ಮೂರು ಬಾಲಕರು ಚೌಕಾಭಾರ ಆಟವಾಡುತ್ತಿದ್ದರು.. 

ಕಣಗಾಲ್ ಸಹೋದರರು ಆಡಿ ಬೆಳೆದ ಮನೆ!
"ಹೋಗ್ರೋ ಆಟವಾಡಿದ್ದು ಸಾಕು.. ಸ್ವಲ್ಪ ಗುಡಿಯ ಕಸಗುಡಿಸಿ ಬನ್ರೋ" ಎಂದು ಅವರ ಅಪ್ಪ ಹೇಳಿದ್ದು ಕೇಳಿ.. ಮೂವರು ಪರಕೆಯನ್ನು ಹಿಡಿದು.. ಆ ಊರಿನ ಮುಖ್ಯ  ದೇಗುಲದ ಅಂಗಳವನ್ನು ಶ್ರದ್ದೆಯಿಂದ ಸ್ವಚ್ಛಗೊಳಿಸಿ ಮತ್ತೆ ಆಡಲು ಜಗಲಿಗೆ ಬಂದರು.. 
ಆ ಊರಿನ ಜನತೆ ಹೇಳುವ ಪ್ರಕಾರ ಕಣಗಾಲ್ ಸಹೋದರರು ಸದಾ ಈ ಗುಡಿಗೆ ಬರುತ್ತಿದ್ದರು 

ಆಟ ಕುತೂಹಲಕಾರಿಯಾಗಿತ್ತು.. ಅಷ್ಟರಲ್ಲಿ ಟುರ್ ಟುರ್ ಟ್ರಾ ಎನ್ನುತ್ತಾ ಜೋಗಿ ಸಿದ್ದರು ಮನೆಯ ಮುಂದೆ ಬಂದು.. "ಏನ್ರಪ್ಪ ಹೇಗೆ ನೆಡಿತಿದೆ ಆಟ" ಎಂದಾಗ.. ಅವರಲ್ಲಿ ದೊಡ್ಡ ಬಾಲಕ.. 
ನೆಡೆದಾಡಿ ಹೆಜ್ಜೆ ಗುರುತು ಮೂಡಿಸಿದ ಹಾದಿ 
"ಚೆನ್ನಾಗಿ ನೆಡಿತಿದೆ ಸ್ವಾಮ್ಗಳೇ .. ನೀವು ಭವಿಷ್ಯ ಹೇಳ್ತಿರಂತೆ.. ಯಾರೂ ಗೆಲ್ತಾರೆ ಅಂತ ಹೇಳಿ ಸ್ವಾಮ್ಗಳೇ"

ಆ ಜೋಗಿ ಸಿದ್ಧರು ನಗುತ್ತಾ.. 

"ಮಕ್ಕಳೆ . ನಿಮಗೆ ಈ ಆಟದ ಭವಿಷ್ಯ ಬೇಡ .ನಿಮ್ಮ ಭವಿಷ್ಯ ಹೇಳುತ್ತೇನೆ ಕೇಳಿ.. ದೊಡ್ಡವ ನೀನು...  ನಿನ್ನ ಹೆಸರು ಪ್ರಭಾಕರ ಶಾಸ್ತ್ರಿ ಅಲ್ಲವೇ.. ?..

ಚಕಿತನಾದ ಹುಡುಗ "ಹೌದು.. ನಿಮಗೆ ಹೇ.. " ಮಾತಿನ್ನೂ ಮುಗಿದಿರಲಿಲ್ಲ.. 

"ಇವನು ಪುಟ್ಟಣ್ಣ.. ಇವನು ನರಸಿಂಹ" ಎಂದು ಎರಡನೇ ಮತ್ತು ಮೂರನೇ ಬಾಲಕರ ಹೆಸರು ಹೇಳಿದಾಗ ..ಆಡುತ್ತಿದ್ದ ಕವಡೆಯನ್ನು ಹಾಗೆ ಇಟ್ಟು ಮೂವರು ಜಗಲಿಯಿಂದ ರಸ್ತೆಗೆ ನೆಗೆದರು .. ಮಳೆ ಬಂದು ತೊಪ್ಪೆಯಾಗಿದ್ದ ಮಣ್ಣಿನ ರಸ್ತೆ.. ಮಕ್ಕಳಿಗೆ ಬಟ್ಟೆ ಕೊಚ್ಚೆಯಾಗುತ್ತೆ ಎಂಬ ಅರಿವಿರಲಿಲ್ಲ.. ಅವರಿಗಿದ್ದದ್ದು ಕುತೂಹಲ... 

ದೊಡ್ಡವ "ಹೇಳಿ ಸ್ವಾಮಿಗಳೇ.. ನಮ್ಮ ಪರಿಚಯ ನಿಮಗೆ ಹೇಗೆ.. ನೀವು ಯಾರು.. ಎಲ್ಲಿಂದ ಬಂದಿರಿ.. ಹೇಗೆ ಬಂದಿರಿ.. ? ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಾಗ.. 

ನಗುತ್ತ "ಬಾಲಕ.. ಆ ಪ್ರಶ್ನೆಗಳಿಗೆಲ್ಲ ಉತ್ತರ ಬೇಡ. .. ನಿಮಗೊಂದು ಭವಿಷ್ಯದಲ್ಲಿ ನೆಡೆಯುವ ಘಟನೆಯನ್ನು ಪೋಣಿಸಿ.. ಒಂದು ಘಟನೆಯನ್ನು ಹೇಳುತ್ತೇನೆ ಕೇಳಿ.. "

ಮೂವರು ಮೈಯೆಲ್ಲಾ ಕಿವಿಯಾಗಿ ಕೇಳುತ್ತಾ ಕುಳಿತರು.. ಪ್ರಪಂಚವೇ ಅವರಿಗೆ ಈ ಜೋಗಿ ಸಿದ್ಧರಾಗಿದ್ದರು.. ಅದು ಬಿಟ್ಟು ಮಿಕ್ಕಿದ್ದೆನು ಅವರ ಕಿವಿಗೆ ಕಣ್ಣಿಗೆ ಬೀಳುತ್ತಿರಲಿಲ್ಲ.. 

"ಬೆಂಗಳೂರಿನ ಸಾಂಸ್ಕತಿಕ ತಾಣ ರವೀಂದ್ರ ಕಲಾಕ್ಷೇತ್ರ.. ಅಲ್ಲಿ ಶ್ರೀ ವಿಳಂಬಿ ನಾಮ ಸಂವತ್ಸರ ದಕ್ಷಿಣಾಯಣ ಶರಧೃತು ಆಶ್ವಯುಜ ಮಾಸ ಶುಕ್ಲ ಪಕ್ಷದ ದಶಮಿಯಂದು ಒಂದು ಸುಂದರ ಸಮಾರಂಭ.. ಪ್ರಭಾಕರ ನಿನ್ನ "ಸಾವಿ"ರದ ಗೀತೆಗಳನ್ನು ಸಕಿ ಸಮೂಹ ಸಂಸ್ಥೆಗಳು "ನಾದ ನಮನ" ಎಂಬ ಸುಂದರ ಕಾರ್ಯಕ್ರಮದಲ್ಲಿ ಆಯೋಜಿಸುತ್ತಾರೆ.. ಅಲ್ಲಿ ನಿನ್ನ ಬಗ್ಗೆ ಮಾತಾಡುವುದಷ್ಟೇ ಅಲ್ಲದೆ.. ನಿನ್ನ ಗೀತೆಗಳ ಗಾಯನ ಇರುತ್ತದೆ ಮತ್ತು ನಿನ್ನ ಜೀವನದ ಸ್ಮರಣೀಯ ಕ್ಷಣಗಳ ಶ್ಲಾಘನೆ ನೆಡೆಯುತ್ತದೆ.. ನೆರೆದಿರುವ ನಿನ್ನ ಅಭಿಮಾನಿಗಳು ನಿನ್ನ ನೆನಪನ್ನು ಹೃದಯದಲ್ಲಿ ಹೊತ್ತು ಮನೆಗೆ ಹೋಗುತ್ತಾರೆ..ಆ ಒಲವಿನ ನೆನಪೇ ಹೃದಯಕೆ ಮಧುರ ಒಲವೇ ದೈವದ ಸಾಕ್ಷಾತ್ಕಾರ ಎನ್ನುತ್ತಾ ನಿನ್ನ ಗುಣಗಾನ ಮಾಡುತ್ತಾರೆ" ಎನ್ನುತ್ತಾ ಮುಂದಿನ ಮನೆಯ ಕಡೆ ಹೆಜ್ಜೆ ಇಟ್ಟರು.. 

ಬಾಲಕನಿಗೆ ಅರ್ಥವಾಗಲಿಲ್ಲ.. ಮೂರು ಘಂಟೆಯ ಸಿನೆಮಾವನ್ನು ಒಂದು ಹತ್ತು ಕ್ಷಣದಲ್ಲಿ ಹೇಳಿದಂತೆ ಭಾಸವಾಯಿತು.. ಆರಂಭ ಮಧ್ಯಭಾಗ ಅಂತ್ಯ ಎಲ್ಲವೂ ಗೊಂದಲಮಯ.. ಅವರನ್ನೇ ಹಿಂಬಾಲಿಸಿ  "ಸ್ವಾಮಿಗಳೇ ಅದೇನು ಸರಿಯಾಗಿ ಹೇಳಿ.. ಭವಿಷ್ಯ ಹೇಳುತ್ತೀನಿ ಅಂದ್ರಿ .. ಭವಿಷ್ಯ ಹೇಳಲಿಲ್ಲ ..ಘಟನೆ ಹೇಳುತ್ತೀನಿ ಅಂದ್ರಿ.. ಘಟನೆಯನ್ನು ಪೂರ್ತಿ ಹೇಳಲಿಲ್ಲ.. ಏನು ವಿಷಯ ಹೇಳಿ.. "

ಟುರ್ ಟುರ್ ಟ್ರಾ ಎಂದು ಸದ್ದು ಮಾಡುತ್ತಾ "ಮಗೂ ನೀನು ಪ್ರಭಾಕರ.. ಕಣಗಾಲ್ ಪ್ರಭಾಕರ ಶಾಸ್ತ್ರೀ ಎಂದು ಕನ್ನಡದ ಚಿತ್ರ ಜಗತ್ತಿನಲ್ಲಿ ಬರಹಗಾರ, ನಟ, ನಿರ್ದೇಶಕ, ನಿರ್ಮಾಪಕ, ಅದ್ಭುತ ಸಾಹಿತಿ ಎಂದು ಹೆಸರು ಮಾಡುತ್ತೀಯ.. ನಿನ್ನ ಬರವಣಿಗೆ ನಿನಗೆ ಉತ್ಸಾಹ ತುಂಬುತ್ತದೆ, ಶಕ್ತಿ ಕೊಡುತ್ತದೆ.. ಕನ್ನಡ ಚಿತ್ರ ಜಗತ್ತಿನಲ್ಲಿ ಅಪರೂಪದ ವ್ಯಕ್ತಿಯಾಗುತ್ತೀಯ.. ಅಂದಿನ ಕಾರ್ಯಕ್ರಮದ ಬಗ್ಗೆ ತುಸು ಮಾತು..ಪುಟ್ಟದಾಗಿ ಹೇಳುವೆ.. ಕೇಳು.. "

                                                                    ****
ಪರದೆ ಸರಿಯುತ್ತದೆ.. ನಿನ್ನ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆಯಾಗುತ್ತದೆ.. ನಿನ್ನ ಬಂಧುಗಳು ಅದನ್ನು ನೋಡಿ ಭಾವುಕರಾಗುತ್ತಾರೆ.. ನಿನ್ನ ಪುಟ್ಟ ಪರಿಚಯವಾಗುತ್ತದೆ.. ನಂತರ ಕಾರ್ಯಕ್ರಮ ಶುರು.. 

"ಶ್ರೀ ಚಾಮುಂಡೇಶ್ವರಿ ಅಮ್ಮ ಶ್ರೀ ಚಾಮುಂಡೇಶ್ವರಿ"  ಹಾಡಿಗೆ ಅದ್ಭುತ ನೃತ್ಯ ಮಾಡುವ ಮಕ್ಕಳು.. 
"ಆಡೋಣ ಒಲವಿನ ರಾಗಮಾಲೆ" ಎನ್ನುತ್ತಾ ಜೀವನದ ಉತ್ಸಾಹಕ್ಕೆ ತುಂಬುವ "ಶುಭ ಮಂಗಳ ಸುಮುಹೂರ್ತವೇ"  ಎಂದು ಜೀವನದಲ್ಲಿ ಸಂತಸ ತುಂಬಿಕೊಳ್ಳುತ್ತಾ ಪ್ರೇಮವಿಲ್ಲದೇ ಇರಲು ಸಾಧ್ಯವೇ.. ಅಸಾಧ್ಯ ಎಂದು "ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ" ಎನ್ನುತ್ತಾ ಪ್ರೇಮದ ಅದ್ಭುತ ಶಕ್ತಿಯನ್ನು ಹೊಗಳಬೇಕಾದರೆ ತಿರುಪತಿ ಗಿರಿವಾಸನ ಕೃಪೆ ಸದಾ ಇರಬೇಕು ಕಣಯ್ಯಾ ಎಂದು "ತಿರುಪತಿ ಗಿರಿವಾಸ ಶ್ರೀ ವೆಂಕಟೇಶ.. ನೀ ಒಲಿದ ಮನೆ ಮನೆಯೂ ಲಕ್ಷ್ಮಿ ನಿವಾಸ" ಎಂದ ಮೇಲೆ.. ಇನ್ನೇನೂ "ಅತಿ  ಮಧುರ ಅನುರಾಗ ಜೀವನ ಸಂಧ್ಯಾರಾಗ" ಆಗಲೇ ಬೇಕಲ್ಲವೇ.. ಜೀವನದಲ್ಲಿ ಆನಂದ ತುಂಬಿ ಹರಿಯುವಾಗ ಕರುನಾಡಿನ ಜೀವನದಿ ಕಾವೇರಿಯ ಬಣ್ಣನೆ ಮಾಡುತ್ತಾ "ಕೊಡಗಿನ ಕಾವೇರಿ.. ಕಾವೇರಿ ನೀ ಬೆಡಗಿನ ವೈಯ್ಯಾರಿ" ಎನ್ನುತ್ತಾ ಸಂಗಾತಿಯನ್ನು ಮತ್ತು ಜೀವನದಿಯನ್ನು ಬಣ್ಣಿಸುತ್ತಾ ಸಾಗುವ ಹಾಡು ಬರೆದ ನೀನು . ದೇಶದ ಸ್ಥಿತಿಯನ್ನು ಕಂಡು ಯುವ ಪೀಳಿಗೆಗೆ ಸಂದೇಶ ನೀಡುವ "ಇಂದಿನ ಹಿಂದೂ ದೇಶದ ನವ ಯುವಕರೇ ನವ ಯುವತಿಯರೇ" ಎಂದು ಬರೆದ ಹಾಡು ಅಮರವಾಗುತ್ತೆ.. ಈ ಪೀಳಿಗೆಗೆ ಸರಿದಾರಿಯಲ್ಲಿ ನೆಡೆಸುವ ಮೊದಲ ಗುರುಗಳು ತಂದೆ ತಾಯಿಯರು.. ಅವರ ಮಹತ್ವವನ್ನು "ತಾಯಿಯ ತಂದೆಯ ಮಮತೆ ವಾತ್ಸಲ್ಯ"  ಎಂದು ಹೃದಯದಲ್ಲಿ ಮಮತೆಯ ಝೇಂಕಾರ ಹುಟ್ಟಿಸುತ್ತಾ "ನಾನು ನೀನು ಜೋಡಿ.. ಒಲವೇ ನಮ್ಮಯ ಒಡನಾಡಿ" ಎಂದು ಆ ಮಧುರ ಪ್ರೇಮಕ್ಕೆ ನಮನ ಹೇಳುತ್ತಾ .. ಆ ನಾದ ಸರಸ್ವತಿಗೆ ತಲೆಬಾಗುತ್ತಾ ನಟರಾಜನನ್ನು ಹೊಗಳುತ್ತಾ "ನಟನ ವಿಶಾರದ ನಟಶೇಖರ" ಎನ್ನುವ ನಿನ್ನ ಮನಸ್ಸು ಸದಾ ಹೇಳುವುದು ಕನ್ನಡ ಭಾಷೆಯ ಬಗ್ಗೆ "ಒಲವಿನ ಪ್ರಿಯಲತೆ ಅವಳದೇ ಚಿಂತೆ.. ಅವಳ ಮಾತೆ ಮಧುರ ಗೀತೆ.. ಅವಳೇ ಎನ್ನ ದೇವತೆ" ಎನ್ನುವ ನಿನ್ನ ಕರುನಾಡ ಅಭಿಮಾನ ಸದಾ ಅಮರ ಮಧುರ.. ಅಮರ ಪ್ರೇಮಿಗಳನ್ನು ಸದಾ ಉಲ್ಲಸಿತವಾಗಿಡುವ "ಸುವ್ವಿ ಸುವ್ವಿ ಸುವ್ವಾಲೆ" .. ಪ್ರೇಮ ಒಂದು ದೇವರು ಅದಕ್ಕೆ ಕೈ ಮುಗಿಯುವ "ಶರಣೆಂಬೆನಾ ಶಶಿ ಭೂಷಣ".. ಈ ನಾಡಿನ ಮಣ್ಣಲ್ಲಿ ಹುಟ್ಟಿದ್ದೇ ನನ್ನ "ಬಹುಜನ್ಮದ ಪೂಜಾಫಲ" ಎನ್ನುವ ನಿನ್ನ ಮಾತು ಸದಾ ಗುನುಗುನಿಸುತ್ತದೆ..ಹರನಿಗೆ ಸಮನಾರು ಇಲ್ಲ ಅಲ್ಲವೇ ಅಂದರೆ ಅದಕ್ಕೆ ನೀ ಹೇಳುವುದು "ಶರಣು ವಿರುಪಾಕ್ಷ ಶಶಿಶೇಖರ ಪಂಪಾವತಿ ಪ್ರಣಯ ಪರಮೇಶ್ವರಾ".. ಹೀಗೆ ನಿನ್ನ ಪ್ರತಿಭೆಗೆ ನಮಸ್ಕರಿಸಲೇ.. ಅಥವಾ ಬೆನ್ನು ತಟ್ಟಲೇ ಎಂದ ಕೂಡಲೇ "ಇದೆ ಹೊಸ ಹಾಡು ಹೃದಯ ಸಾಕ್ಷಿ ಹಾಡು" ಎನ್ನುತ್ತೀಯಾ.. ಅಕ್ಷರಗಳಲ್ಲೇ ಮಜ್ಜನ ಮಾಡಿಸುವ ನೀನು ಅಕ್ಷರಗಳಿಗೆ ಕೈಮುಗಿಯುತ್ತ ಹೇಳುವುದು "ನಾ ಕಂಡೆ ನಿನ್ನಲ್ಲೇ ಮನೆ ದೇವರ" ಅಬ್ಬಾ ಎಂಥಹ ಧೈರ್ಯ ನಿನದು .. ಅದು ಹೇಗೆ ಬಂತು ಈ ಧೈರ್ಯ ಎಂದು ನನ್ನ ಹುಬ್ಬು ಮೇಲೆ ಏರಿದಾಗ ನೀ ನನಗೆ ಸಮಾಧಾನ ಮಾಡುತ್ತಾ ಉತ್ತರ ಕೊಡುವೆ "ಮಾತೆಗೆ ಮಿಗಿಲಾದ ದೇವರಿಲ್ಲ ಭೀತಿಗೆ ಹಿರಿದಾದ ಭೂತವಿಲ್ಲ" ಎಂದು ಎಲ್ಲವೂ ಮಾತೃದೇವೋಭವ ಎನ್ನುವೆ.. ಈ ಪೀಳಿಗೆ ಜನತೆ ನಿನ್ನ ಬಗ್ಗೆ ತಿಳಿಯದೆ ಯಾರಪ್ಪಾ ಈ ಮಹಾನುಭಾವ ಎಂದೊಡನೆ ನಿನ್ನ ಲೇಖನೀ ಬರೆದೇ ಬಿಡುತ್ತೆ "ಯಾವೂರವ್ವ ಏನ್ ಚಂದ ಕಾಣಿಸ್ತೌನೇ" ಎಂದು ನಿನ್ನ ಪರಿಚಯ ಮಾಡಿಕೊಡುತ್ತೀಯ.. ನೀ ಕರುನಾಡಿನ ಜನಮಾನಸದಲ್ಲಿ ಸದಾ ಹಸಿರಾಗಿರುತ್ತೀಯ ಎಂಬ ನನ್ನ ಮಾತಿಗೆ ನೀ ಒಮ್ಮೆ ನಕ್ಕರು ನೀ ಬರೆದ ಹಾಡು "ಕನ್ನಡ ನಾಡಿನ ರಸಿಕರ ಮಾನವ ಸೂರೆಗೊಂಡ" ನಾಯಕಿ ಅಂತ ಹೇಳಲೇ ನಾಯಕ ಅಂತ ಹೇಳಲೇ ಎನ್ನುವ ಗೊಂದಲ ಮೂಡಿಸುತ್ತದೆ.. ಇದೆಲ್ಲ ನಿನಗೆ ಹೇಗೆ ಸಾಧ್ಯವಾಯಿತು ಎಂದು ನಾನು ಅಚ್ಚರಿಗೊಂಡೆ.. ಆದರೆ ಅದು ನಿನಗೆ ಒಲಿದ ಅಕ್ಷರಗಳ ಸಾಕ್ಷಾತ್ಕಾರ.. ತಮಾಷೆ ಗೊತ್ತಾ ನಿನ್ನ ಪ್ರೀತಿಯ ತಮ್ಮ ನಿರ್ದೇಶಿಸುವ ಚಿತ್ರದಲ್ಲಿ ನೀ ಬರೆದ ಹಾಡು ಅಮರವಾಗಿ ಉಳಿಯುತ್ತೆ ಮತ್ತು ಆ ಹಾಡನ್ನು ನಿನ್ನ ತಮ್ಮ ಅಷ್ಟೇ ಸ್ಮರಣೀಯವಾಗಿ ಚಿತ್ರೀಕರಿಸುತ್ತಾನೆ.. ಏಕೆ ಗೊತ್ತೇ ನಿಮ್ಮ ಪ್ರತಿಭೆ ಆ ದೇವಾ ಕೊಟ್ಟ ವರ ಅದಕ್ಕೆ ನಾ ಹೇಳೋದು "ಒಲವೇ ಜೀವನ ಸಾಕ್ಷಾತ್ಕಾರ.. ಒಲವೇ ಮರೆಯದ ಮಮಕಾರ.. " ಶುಭವಾಗಲಿ ಕಂದ.. 

ಕಾರ್ಯಕ್ರಮದ ಕೆಲವು ದೃಶ್ಯಗಳನ್ನು ನಿನ್ನ ಕಣ್ಣ ಮುಂದೆ ತಂದಿಡುತ್ತೇನೆ.. ನೋಡು ಆನಂದಿಸು.. ಸೊಗಸಾದ ವಿವರಣೆ.. ಸೊಗಸಾದ ಸಂಗೀತ ... ಅಚ್ಚುಕಟ್ಟಾದ ಗಾಯನ.. ವಾದ್ಯವೃಂದ.. ನೃತ್ಯ.. ಎಲ್ಲವೂ ಸೊಗಸು.. !

















ಟುರ್ ಟುರ್ ಟ್ರ್ರಾ ಎಂದು ಸದ್ದು ಮಾಡುತ್ತಾ ಮತ್ತೆ ಹಿಂದೆ ತಿರುಗಿ ನೋಡದೆ ಜೋಗಿ ಸಿದ್ಧರು ಆ ಊರಿನ ಬೀದಿ ಹಾದು ಹೋದರು.. 

****
"ಮಗು ಪ್ರಭಾಕರ.. ಪ್ರಭಾಕರ ಏಳಪ್ಪ.. ಬೇಗ ಎದ್ದು ಸ್ನಾನ ಮಾಡಿ.. ಸಂಧ್ಯಾವಂದನೆ ಮಾಡಿ.. ಆ ಗುಡಿಯಲ್ಲಿ ಲಲಿತಾ ಸಹಸ್ರ ನಾಮ ಹೇಳಿ ಬಾರಪ್ಪ"

ಕಣ್ಣುಜ್ಜುತ್ತಾ ಎದ್ದ ಮುದ್ದು ಪ್ರಭಾಕರ ... ಸುತ್ತ ನೋಡಿದ.. ತಮ್ಮ ಪುಟ್ಟಣ್ಣ, ನರಸಿಂಹ ಶಾಸ್ತ್ರಿ ತನ್ನ ಹೊದ್ದಿಕೆಯನ್ನೇ ಹಂಚಿಕೊಂಡು ಇನ್ನೂ ಮಲಗಿದ್ದಾರೆ.. ಅವರ ಮುದ್ದು ಮುಖ ನೋಡುತ್ತಾ.. ಇಬ್ಬರ ಕೆನ್ನೆಯನ್ನೊಮ್ಮೆ ಸವರಿ.. ಪ್ರಾತಃಕರ್ಮ ಮುಗಿಸಲು ಹೊರಟ. ಮನಸ್ಸು ಹಗುರಾಗಿತ್ತು.. ತಾನು ಕಂಡದ್ದು ಕನಸೋ ನನಸೋ ಅರಿವಾಗಲಿಲ್ಲ.... 

ಆದರೆ ಕನ್ನಡ ಕುಲಕೋಟಿಗೆ ಅದ್ಭುತ ಸಾಹಿತಿ ಸಿಗುತ್ತಾರೆ.. ತಾಯಿ ಭುವನೇಶ್ವರಿಗೆ ಅಕ್ಷರಗಳ ಪೂಜೆ ಸಲ್ಲಿಸಲು ಅದ್ಭುತ ಬರಹಗಾರ ಬೆಳ್ಳಿ ಪರದೆಯನ್ನು ಬೆಳಗುತ್ತಾರೆ ಎನ್ನುವ ಸೂಚನೆ ಸಿಕ್ಕ ಕನಸು ಮುಂದೆ ನನಸಾಗಿದ್ದು ಇತಿಹಾಸ.. 

*****

ಕಣಗಾಲ್ ಊರಿನ ಸುಂದರ ದೃಶ್ಯ 

ಆಡಿ ಬೆಳೆದ ಮನೆ ಹಲವಾರು ಕನಸಿನ ತಾಣವಿದು 

ಕನಸು ಹೊತ್ತು ಓಡಾಡಿದ ಬೀದಿ 

ಆ ಶಕ್ತಿಗಳು ಬೆಳೆದ ಮನೆಯಂಗಳದಲ್ಲಿ ಈ ಜೀವಿಯೂ ಕೂತಿತ್ತು ಎನ್ನುವ ಹೆಮ್ಮೆ 

ಹೌದು ಸರ್ ನಾನೇ ನರಸಿಂಹ ಶಾಸ್ತ್ರಿ ಕಣಗಾಲ್ ಸಹೋದರರಲ್ಲಿ ನಾನು ಒಬ್ಬ 

ಶ್ರೀ ನರಸಿಂಹ ಶಾಸ್ತ್ರಿಗಳ ಜೊತೆಯಲ್ಲಿ ನಮ್ಮ ಸ್ನೇಹಿತರು 

ಆ ದಿವ್ಯಶಕ್ತಿಯ ಜೊತೆಯಲ್ಲಿ 
(ವಿಜಯದಶಮಿಯಂದು ಅಕ್ಟೋಬರ್ ೧೯ ೨೦೧೮ ರವೀಂದ್ರ ಕಲಾಕ್ಷೇತ್ರದಲ್ಲಿ ನಾದ ನಮನ ಎಂದು ಶ್ರೀ ಕಣಗಾಲ್ ಪ್ರಭಾಕರ್ ಶಾಸ್ತ್ರೀ ಅವರ ಅಮರ ಗೀತೆಗಳನ್ನು ಹಾಡಿ ರಂಜಿಸಿದ ಸಕಿ ಸಮೂಹ ಸಂಸ್ಥೆಗಳ ಅದ್ಭುತ ಕಾರ್ಯಕ್ರಮವನ್ನು ನೋಡುತ್ತಾ ಹೋದ ಹಾಗೆ ಸುಮಾರು ನಾಲ್ಕು ವರ್ಷಗಳ ಹಿಂದೆ.. ಶ್ರೀ ಪುಟ್ಟಣ್ಣ ಕಣಗಾಲ್ ಅವರ ಮನೆಯನ್ನು ಹುಡುಕುತ್ತಾ ಹೋಗಿ ಅವರು ಓಡಾಡಿದ ಮನೆ.. ದೇವಸ್ಥಾನ.. ಅವರು ಹೆಜ್ಜೆ ಇಟ್ಟು .. ಚಿತ್ರ ಜಗತ್ತಿನಲ್ಲಿ ಹೆಜ್ಜೆ ಗುರುತು ಮೂಡಿಸಿದ ಆ ರಸ್ತೆ.. ಅವರ ತಮ್ಮ ಶ್ರೀ ನರಸಿಂಹ ಶಾಸ್ತ್ರೀ ಅವರನ್ನು ರಾಮನಾಥಪುರದ ಅವರ ಮನೆಯಲ್ಲಿ ಭೇಟಿ ಮಾಡಿ ಬೆಳ್ಳಿಮೋಡ ಚಿತ್ರ ರೂಪುಗೊಂಡ ಅದ್ಭುತ ಕತೆಯನ್ನು ಅವರ  ಬಾಯಲ್ಲಿ ಸುಮಾರು ಒಂದೂವರೆ ಘಂಟೆ ಕೇಳಿದ್ದು .. ಅವರಿಗೆ ಪ್ರವರ ಹೇಳುತ್ತಾ ನಮಸ್ಕರಿಸಿದ್ದು ಹಾಗೆ ಕಣ್ಣ ಮುಂದೆ ಬಂತು.. ಅದೇ ಗುಂಗಿನಲ್ಲಿ ಮೂಡಿದ ಲೇಖನವಿದು ..ಓದಿರಿ ನಲಿಯಿರಿ..ಆಶೀರ್ವದಿಸಿ!!!)

Tuesday, September 18, 2018

ಧರ್ಮ ಯಾವಾಗಲೂ ಜಯವನ್ನೇ ನೋಡುತ್ತವೆ ಎನ್ನುವ ಧರ್ಮ ವಿಜಯ (1959) (ಅಣ್ಣಾವ್ರ ಚಿತ್ರ ೧೨ / ೨೦೭)

ಪೂರ್ವಾಗ್ರಹ ಪೀಡಿತರಾಗಿ ಸಿನಿಮಾಗಳನ್ನು ನೋಡಬಾರದು.. ಅನೇಕ ಬಾರಿ ಈ ರೀತಿಯ ಅನುಭವಗಳಾಗಿದ್ದರೂ ಮತ್ತೆ ಮತ್ತೆ ಅದೇ ಕೂಪಕ್ಕೆ ಜಾರುತ್ತೇನೆ.. ಮತ್ತೆ ಖುಷಿ ಪಡುತ್ತೇನೆ.. ಮತ್ತೆ ಹೀಗೆ ಪುನರಪಿ ಜಾರಂ ಪುನರಪಿ ಏಳುಂ..

ಬಲು ದಿನಗಳೇ.. ಅಲ್ಲ ಬಹಳ ವಾರಗಳಾದ ಮೇಲೆ ಮತ್ತೆ ಅಣ್ಣಾವ್ರ ಜೈತ್ರ ಯಾತ್ರೆ ಮುಂದುವರೆಸಬೇಕೆಂಬ ಹಠ ಹೊತ್ತು ಧರ್ಮ ವಿಜಯ ಚಿತ್ರ ನೋಡಿದೆ.. ಕಳೆದ ಹನ್ನೊಂದು ಸಿನೆಮಾಗಳು ನೋಡಿದ್ದ ನನಗೆ ಇದು ಹೀಗೆ ಇರಬಹುದು ಎನ್ನುವ ಒಂದು ಸೂತ್ರ ಹೊಳೆದಿತ್ತು...

ಈ ಚಿತ್ರ ಬಿಚ್ಚಿಕೊಳ್ಳುತ್ತಾ ಹೋದ ಹಾಗೆ ಒಂದು ರೀತಿಯ ವಿಭಿನ್ನ ಅನುಭವ.. ಕಾಲದ ಚಕ್ರದಲ್ಲಿ ಹೇಗೆ ಬದಲಾವಣೆಗಳಾಗುತ್ತವೆ ಎನ್ನುವ ಒಂದು ನೋಟ ಇಲ್ಲಿ ಸಿಗುತ್ತದೆ..

ಆರಂಭಿಕ ದೃಶ್ಯದಲ್ಲಿ ಆ ರಾಜ್ಯದ ಸೇನಾಧಿಪತಿ ರೋಗಗ್ರಸ್ತನಾಗಿ ಮಲಗಿರುತ್ತಾನೆ ..ಅವನಿಗೆ ಸ್ವಪ್ನ ಅಂದರೂ ಸರಿ ಅಥವಾ ಹಿಂದಿನ ಜನ್ಮದ ನೆನಪು ಅಂದರೂ ಸರಿ.. ಒಂದು ಘಟನೆಯನ್ನು ಬಿಂಬಿಸುತ್ತದೆ.

ಒಂದು ಹೆಂಗಸು.. ಎಂಜಲು ಕೈಯಲ್ಲಿಯೂ ಕಾಗೆ ಓಡಿಸದಂತಹವಳು.. ಅವಳನ್ನು ಪರೀಕ್ಷಿಸಲು ಯಮಧರ್ಮ ಸನ್ಯಾಸಿಯಾಗಿ ಬಂದು.. ಭವತಿ ಭಿಕ್ಷಾಂದೇಹಿ ಎನ್ನುತ್ತಾನೆ .. ಹೆಂಗಸು ಹೊಟ್ಟೆ ತುಂಬಾ ತಾ ಊಟ ಮಾಡುತ್ತಾಳೆಯೇ ವಿನಃ.. ಹೊರಗೆ ಬಂದು ನೋಡುವುದಿಲ್ಲ.. ಆ ಬಿಕ್ಷು ಸಂಜೆಯ ತನಕ ಅಲ್ಲಿಯೇ ನಿಂತಿರುತ್ತಾನೆ.. ಕಡೆಗೆ ಕುಪಿತನಾಗಿ ಬೆಳಗಿನಿಂದ ಸಂಜೆ ತನಕ ನಿಲ್ಲಿಸಿದ್ದೀಯಾ.. ಭಿಕ್ಷೆ ನೀಡಬಾರದೇ ಎಂದಾಗ.. ತೊಗರಿಯ ಸಿಪ್ಪೆಯನ್ನು ಭಿಕ್ಷೆ ಎಂದು ಹಾಕಿ ಬಯ್ದು ಕಳಿಸುತ್ತಾಳೆ.  ನರಕಲೋಕಕ್ಕೆ ಬರುವ ಯಮ.. ಆ ತೊಗರಿಯ ಹೊಟ್ಟನ್ನು ಚೆಲ್ಲುತ್ತಾನೆ.. ಅಲ್ಲಿ ತೊಗರಿಯ ಗಿಡ ಬೆಳೆಯುತ್ತದೆ..

 ಆಯಸ್ಸು ತುಂಬಿದ ಅವಳನ್ನು ನರಕಲೋಕಕ್ಕೆ ಕರೆದೊಯ್ದಾಗ ಹೊಟ್ಟೆ ಹಸಿವು ಎನ್ನುತ್ತಾಳೆ.. ಆಗ ಆ ಯಮಧರ್ಮರಾಜ ಅವಳಿಗೆ ಅದೇ ತೊಗರಿಯ ಗಿಡವನ್ನು ತೋರಿಸಿ. ಹೋಗು ಅದನ್ನು ತಿನ್ನು ಎಂದು ಕಳಿಸುತ್ತಾನೆ.. ಆದರೆ ಅವಳು ತೊಗರಿ ಕಾಯಿಯನ್ನು ಸುಳಿದಾಗ ಒಳಗೆ ಖಾಲಿ ಇರುತ್ತದೆ.. ನನಗೆ ನೀ ಸಿಪ್ಪೆಯನ್ನು ಕೊಟ್ಟೆ ಅದೇ ನಿನಗೂ ಸಿಕ್ಕಿದೆ.. ಎನ್ನುತ್ತಾನೇ ಯಮ..

ಈ ದೃಶ್ಯ ಸೇನಾಧಿಪತಿಯ ಸ್ಮೃತಿಪಟಲದಲ್ಲಿ ಬಂದು.. ತನ್ನ ಹೆಂಡತಿಗೆ. ಇದ್ದದ್ದನ್ನೆಲ್ಲ ದಾನ ಮಾಡಿ ಬಿಡು ಎಂದು ಹೇಳಿ ಇಹಲೋಕ ತ್ಯಜಿಸುತ್ತಾನೆ.. ಇದ್ದ ಸಂಪತ್ತೆಲ್ಲವನ್ನು ದಾನ ಮಾಡಿ ತನ್ನ ಮಗನೊಂದಿಗೆ ಊರು ಬಿಟ್ಟು ಹೋಗುತ್ತಾಳೆ ಆತನ ಹೆಂಡತಿ..

ಇತ್ತ ಆ ಊರಿನ ರಾಜ. ಋಷಿಮುನಿಗಳ ಜೊತೆಯಲ್ಲಿ ಚರ್ಚಿಸಿ.. ದಾನ  ಧರ್ಮ ಮಾಡಿದೆ.. ಜನರಿಗೆ ಉಪಕಾರವಾಗಲಿ ಎಂದು ಕೆರೆ ಕಟ್ಟಿಸಿದೆ ಆದರೆ.. ನೀರು ಬರಲಿಲ್ಲ ಅಂದಾಗ.. ಆ ಮುನಿಪುಂಗವ "ಮಾಡಿದ್ದಕ್ಕೆ ಮನವೇ ಸಾಕ್ಷಿ.. ತೋಡಿದ್ದಕ್ಕೆ ಜಲವೇ ಸಾಕ್ಷಿ" ಎನ್ನುತ್ತಾ ದಾನ ಧರ್ಮ ಮಾಡಿದ್ದು ಸಾಲದು.. ಹೆಚ್ಚು ಮಾಡು.. ಮಳೆ ಬರುತ್ತದೆ.. ಕೆರೆ ತುಂಬುತ್ತದೆ ಎನ್ನುತ್ತಾರೆ.. ಆದ್ರೆ ರೀತಿಯಲ್ಲಿ ಮಾಡಿದ ಮೇಲೆ ಕೆರೆ ತುಂಬುತ್ತದೆ..

ಊರಿನ  ಪ್ರಮುಖ ಶ್ರೀಮಂತರು ದಾನ ಮಾಡಿ ಹೆಸರುಮಾಡಬಹುದು .. ಬಿರುದುಗಳನ್ನು ಕೊಡುತ್ತೇವೆ ಎಂದು ಸಾರಿಸುತ್ತಾನೆ . ಜೊತೆಯಲ್ಲಿ ಅಗಲಿದ ಸೇನಾಧಿಪತಿಯ ಮಗನನ್ನು ಕರೆಸಿ ಸರದಾರನನ್ನಾಗಿ ಮಾಡುತ್ತಾರೆ.. ಬಾಲ್ಯದಲ್ಲಿಯೇ ಬಡತನದಿಂದ ರೋಸಿ ಹೋಗಿದ್ದ  ಆ ಹುಡುಗ.. ದಾನ ಧರ್ಮ, ಅತಿಥಿ ಸತ್ಕಾರ ಎನ್ನುವುದೆಲ್ಲ ಸುಳ್ಳು ಎನ್ನುತ್ತಾ.. ಆ ರೀತಿ ಮಾಡುತ್ತಿದ್ದ ತನ್ನ ತಾಯಿಯನ್ನು ಬಹುವಾಗಿ ತಡೆಯಲು ಪ್ರಯತ್ನ ಪಡುತ್ತಾನೆ.. ಆದರೆ ಫಲಕಾರಿಯಾಗುವುದಿಲ್ಲ.. ಜೊತೆಯಲ್ಲಿ ಆತನ ಹೆಂಡತಿ ಕೂಡ ತನ್ನ ಅತ್ತೆಯ ಮಾರ್ಗದರ್ಶನದಲ್ಲಿಯೇ ನೆಡೆಯುತ್ತಾ.. ಪತಿಗೆ ಬುದ್ದಿ ಹೇಳಲು ಪ್ರಯತ್ನ ಪಡುತ್ತಾಳೆ..

ರಾಜ್ಯದಲ್ಲಿ ನೆಡೆಯುತ್ತಿದ್ದ ಈ ಸುಳ್ಳು ಸುಳ್ಳು ದಾನ ಧರ್ಮಗಳ ಬಗ್ಗೆ ಕುಪಿತನಾಗಿ ರಾಜ ಸಭೆಯಲ್ಲಿ ಪುರ ಪ್ರಮುಖರ ವಿರುದ್ಧ ಮಾತಾಡಿ ರಾಜ ಅವಕೃಪೆ ಪಾತ್ರನಾಗಿ ಮಾತಾಡಿದ್ದಕ್ಕಾಗಿ ರಾಜ್ಯದಿಂದ ಗಡೀಪಾರಾಗುತ್ತಾನೆ.. ಇತ್ತ ತನ್ನ ತಾಯಿ ಮತ್ತು ಹೆಂಡತಿ.. ದಾನ ಧರ್ಮ ಮಾಡುವ ಕೆಲಸದಿಂದ ವಿಮುಖರಾಗದೆ ಇದ್ದದ್ದನ್ನು ಕಂಡು.. ಕೋಪಗೊಂಡು ಮನೆಯನ್ನು ಬಿಟ್ಟು ಪಕ್ಕದ ಊರಿಗೆ ಹೋಗುತ್ತಾನೆ..

ಹಸಿವು, ಕೋಪ, ಆತಂಕ.. ಎಲ್ಲವೂ ಸೇರಿಕೊಂಡು..ದಾರಿ ಕಾಣದಂತಾಗುತ್ತಾನೆ.. ಊರಿನ ಜನರ ಮೌಢ್ಯವನ್ನು ಹೋಗಲಾಡಿಸಿ .. ಪ್ರಾಣಿ ಬಲಿಯನ್ನು ತಪ್ಪಿಸುತ್ತಾನೆ. .. ಆದರೆ ದಾರಿಗಳ್ಳರ ದಾಳಿಗೆ ಸಿಲುಕಿದ ಜನರನ್ನು ರಕ್ಷಿಸಲು ಹೋಗಿ ತನ್ನ ಕೈಯನ್ನು ಕಳೆದುಕೊಳ್ಳುತ್ತಾನೆ.. ತನ್ನ ತಾಯಿ ಮಡದಿಯನ್ನು ಭೇಟಿ ಮಾಡಲು ತನ್ನ ರಾಜ್ಯಕ್ಕೆ ಬರುವ ಇವನನ್ನು ಹಿಡಿದು ರಾಜಸಭೆಗೆ ಕರೆತಂದು.. ಗಲ್ಲಿಗೆ ಹಾಕುವ ಶಿಕ್ಷೆಗೆ ಗುರಿಯಾಗುತ್ತಾನೆ.. ಆದರೆ ದೇವರ ಅನುಗ್ರಹ.. ಇವನದೇನು ತಪ್ಪಿಲ್ಲ.. ಪುರಪ್ರಮುಖರ ಲಂಚಗುಳಿತನ.. ಹೆಸರು ಮಾಡಲು ಅಡ್ಡ ದಾರಿ ಹಿಡಿದು ರಾಜ ಬೊಕ್ಕಸವನ್ನು ಬರಿದು ಮಾಡುವ ಕೋಶಾಧಿಕಾರಿ..  ಹೆಣ್ಣಿನ ಸಹವಾಸಕ್ಕೆ ಹಾತೊರೆದು ತಪ್ಪು ದಾರಿ ಹಿಡಿವ ಸಿರಿವಂತ.. ಹೀಗೆ ಅವಿವೇಕಭಾವ ಹೊತ್ತ ರಾಜ..ಇದರಿಂದ ಪ್ರಕೃತಿ ಮಾತೆ ಕುಪಿತಗೊಂಡು ಕೆರೆ ತೂತು ಬಿದ್ದು.. ಊರು ಕೊಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾದಾಗ ಮತ್ತೆ ಸನ್ಯಾಸಿ ಬಂದು.. ಇಲ್ಲಿ ಆದ ಅಚಾತುರ್ಯ ಹೇಳುತ್ತಾ.. ಸಾಧ್ವಿಯೊಬ್ಬಳು ಭಕ್ತಿಯಿಂದ ನಮಸ್ಕರಿಸಿದರೆ ಕೆರೆ ತೂತು ಮುಚ್ಚುವುದೆಂದು ಹೇಳಿ.. ಸರದಾರನ ಹೆಂಡತಿಯನ್ನು ಕರೆದು ನಮಸ್ಕರಿಸಲು ಹೇಳುತ್ತಾರೆ.. ಅದರಂತೆ ಎಲ್ಲವೂ ಸರಿ ಹೋಗುತ್ತದೆ.. ಸರದಾರನ ನೇಣು ಶಿಕ್ಷೆ ತಪ್ಪಿಸುತ್ತದೆ.. ಮತ್ತೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ..

ಹೀಗೆ ಒಂದು ಸರಳ ಕಥೆಯನ್ನು ಅಚ್ಚುಕಟ್ಟಾಗಿ ಹೇಳುವ ವಿಶಿಷ್ಟ ಪ್ರಯತ್ನ ಈ ಚಿತ್ರದ್ದಾಗಿದೆ.. ಎಲ್ಲೂ ವೈಭವೀಕರಣವಿಲ್ಲ.. ಕತೆಯನ್ನು ಹೇಳುವ ಪ್ರಯತ್ನ ಮಾತ್ರ ಮಾಡಿದ್ದಾರೆ.. ಆದರೆ ಈ ಕತೆಯೊಳಗೆ ನುಗ್ಗಿ ಬರುವ ಅನೇಕ ದೃಶ್ಯಗಳು, ಸಂಭಾಷಣೆಗಳು , ಪಾತ್ರಧಾರಿಗಳ ಅಭಿನಯ ಈ ಚಿತ್ರವನ್ನು ಮೇಲೆತ್ತಿದೆ..

ಸರದಾರನ ಪಾತ್ರದಲ್ಲಿ ಅಚ್ಚುಕಟ್ಟಾಗಿ ಮಾಡಿರುವ ರಾಜ್.. ಭಾಷ ಪ್ರಯೋಗ.. ಮುಖಾಭಿನಯ.. ಇಷ್ಟವಾಗುತ್ತದೆ.. ನರಸಿಂಹರಾಜು ಅವರ ಜೊತೆಯಲ್ಲಿನ ಕೆಲವು ಹಾಸ್ಯ ದೃಶ್ಯಗಳು ಸೊಗಸಾಗಿವೆ.. ಚಿತ್ರದಿಂದ ಚಿತ್ರಕ್ಕೆ ಅವರ ಅಭಿನಯ ನೋಡುವುದೇ ಒಂದು ಖುಷಿ.. ಪಾತ್ರಕ್ಕೆ ಬೇಕಾಗುವಷ್ಟು ಅಭಿನಯ ಕೊಡುವ ಕಲೆ ಸಿದ್ಧಿಯಾಗುತ್ತಿರುವ ಲಕ್ಷಣಗಳು ಈ ಚಿತ್ರದಲ್ಲಿ ಕಾಣುತ್ತದೆ.. ಕುದುರೆ ಸವರಿ.. ಕತ್ತಿಯಲ್ಲಿ ಹೊಡೆದಾಟ.. ಕೋಲಿನಲ್ಲಿ ಹೊಡೆದಾಟ.. ಕೋಪ ಬಂದಾಗ ನಿಯಂತ್ರಣದ ಅಭಿನಯ.. ರಾಜ್ ಬೆಳೆಯುತ್ತಿರುವ ಸಂಕೇತ ಸಿಗುತ್ತದೆ..
ಸರದಾರನಾಗಿ ರಾಜ್ 

ಇದು ರಾಜ್ ಚಿತ್ರ ಅನ್ನೋದಕ್ಕಿಂತ ಎಲ್ಲರ ಚಿತ್ರ ಎನ್ನಬಹುದು..ಕಾರಣ ಎಲ್ಲರಿಗೂ ಸಮಾನ ಅಭಿನಯಕ್ಕೆ ಅವಕಾಶವಿದೆ.. ರಾಜನ ಪಾತ್ರಧಾರಿ.. ಜಂಗಮ ಪಾತ್ರಧಾರಿಯಾಗಿ ರಾಮಚಂದ್ರ ಶಾಸ್ತ್ರಿ.. ರಾಜ್ ಹೆಂಡತಿಯಾಗಿ ಹರಿಣಿ.. ಆತನ ಅಮ್ಮನ ಪಾತ್ರಧಾರಿ.. ಇಷ್ಟವಾಗುತ್ತಾರೆ..
ಸೋರಟ್ ಅಶ್ವತ್, ವಾದಿರಾಜ್ ಮತ್ತು ಹರಿಣಿ 
ರಾಜ್ ಅವರ ಮಾವನ ಪಾತ್ರದಲ್ಲಿ ಸೋರಟ್ ಅಶ್ವಥ್ ಉತ್ತಮ ಅಭಿನಯ ನೀಡಿದ್ದಾರೆ.. ಜಿಪುಣಾಗ್ರೇಸರನಾದ ಈತ.. ಹೆಣ್ಣಿನ  ಒನಪು ವಯ್ಯಾರ ನೋಡುವುದಕ್ಕೆ  ಆ ಊರಿನಲ್ಲಿದ್ದ ಚಂಚಲೆಯನ್ನು ಆತನ ಸಂಗಡಿಗರ ಜೊತೆಯಲ್ಲಿ ಕರೆದು ನೃತ್ಯವನ್ನು ನೋಡುತ್ತಾನೆ.. ಅವರು ಸಂಭಾವನೆ ಕೊಡಿ ಎಂದಾಗ ಚಿನ್ನದ ನಾಣ್ಯದ ಥೈಲಿಯನ್ನು ತಂದು.. ಅಲ್ಲಾಡಿಸಿ ಶಬ್ದ ಕೇಳಿಸಿ.. ಅದನ್ನು ನೆಲದ ಮೇಲೆ ಸುರಿದು ತೋರಿಸುತ್ತಾನೆ..
ತನ್ನ ಮಗಳು ನಿರ್ಗತಿಕಳಾಗಿ ತನ್ನ ಅಪ್ಪನ ಹತ್ತಿರ ಸಹಾಯ ಕೇಳಲು ಬಂದಾಗ.. ಅಯ್ಯ್ಯೋ ಸುಮ್ಮನೆ ನನ್ನ ನೋಡೋಕೆ ಏಕೆ ಬಂದೆ.. ನಾ ಚೆನ್ನಾಗಿದ್ದೀನಿ ..ಸಹಾಯ ಬಿಟ್ಟು ಬೇರೆ ಏನೇ ಕೇಳು.. ಕೊಡುತ್ತೇನೆ.. ಸರಿ ಮಗಳೇ ಹೋಗಿ ಬಾ.. ಆಶೀರ್ವಾದ ನಿನಗೆ ಎನ್ನುತ್ತಾ ಅವಳನ್ನು ಕಳಿಸಿ ಲಕ್ಷ್ಮಿಯ ಫೋಟೋ ಮುಂದೆ ನಿಂತು.. ನಿನ್ನ ಮೇಲಿನ ಅಭಿಮಾನ.. ಮನುಷ್ಯರನ್ನು ಪಿಶಾಚಿಯನ್ನಾಗಿ ಮಾಡುತ್ತದೆ.. ಮಗಳಿಗೆ ಸಹಾಯ ಮಾಡಲಾಗಲಿಲ್ಲ ಎಂದು ಗೋಳಾಡುವ ಪುಟ್ಟ ದೃಶ್ಯ ಮನಸ್ಸೆಳೆಯುತ್ತದೆ.. 

ಅಷ್ಟೇನೆ ಎಂದಾಗ.. ನೀವು ನೃತ್ಯವಾದಿ ಕಣ್ಣಿಗೆ ಮತ್ತು ಸಂಗೀತದಿಂದ ಕಿವಿಗೆ ಖುಷಿಪಡಿಸಿದಿರಿ.. ನಾನು ನಾಣ್ಯ ತೋರಿಸಿ ಮತ್ತು ಸಡ್ಡು ಕೇಳಿಸಿ ನಿಮಗೆ ಖುಷಿ ಪಡಿಸಿದ್ದೇನೆ.. ಸರಿ ಹೋಯ್ತು ಅಲ್ವೇ.. ಎನ್ನುತ್ತಾನೆ. .. ಸರಳ ಮಾತುಗಳು ಆದರೆ ಅದನ್ನು ಹೇಳುವ ಶೈಲಿ ಸೊಗಸಾಗಿದೆ..

ವಂಚಕರನ್ನು ಬಯಲಿಗೆ ಎಳೆಯುವ ಪಾತ್ರದಲ್ಲಿ ನರಸಿಂಹರಾಜು ಚಿತ್ರದುದ್ದಕ್ಕೂ ಆವರಿಸಿಕೊಳ್ಳುತ್ತಾರೆ.. ಮುದ್ದಾದ ಅಭಿನಯ... ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಾ.. ಸಾಗುವ ಅವರ ಪಾತ್ರದ ಅಭಿನಯ ಸೊಗಸಾಗಿದೆ..
ನರಸಿಂಹರಾಜು 
ಪುಟ್ಟ ಪಾತ್ರವಾದರೂ ಗಮನ ಸೆಳೆಯುವ ಪಾತ್ರದಲ್ಲಿ ಲೀಲಾವತಿ ಅಭಿನಯ ಸೊಗಸಾಗಿದೆ.. ರಾಜ್ ಅವರ ಪತ್ನಿಯಾಗಿ ಹರಿಣಿ ಮುಗ್ಧವಾಗಿ ಅಭಿನಯಿಸಿದ್ದಾರೆ..

ಮತ್ತೊಂದು ಪುಟ್ಟ ಪಾತ್ರದಲ್ಲಿ ವಾದಿರಾಜ್ ಹೇಳುವ ಮಾತು "ಏನು ಶ್ರೀಮಂತರೇ ನಿಮ್ಮ ಕುದುರೆಗೆ ನೀರು ಕುಡಿಸೋಲ್ಲವೇ.. ಕೂತವರಿಗೆ ಕುಡಿಸುತ್ತದೆ" ಆ ದೃಶ್ಯವನ್ನು ನೋಡಬೇಕು ಖುಷಿ ಪಡಬೇಕು..

ಚಿತ್ರದ ಕೆಲವು ಮುಖ್ಯ ಸನ್ನಿವೇಶಗಳು ಕೆಳಗಿವೆ
ಸಿರಿವಂತರ ಅವಗುಣಗಳನ್ನು ಬಯಲಿಗೆ ಎಳೆಯುವ ದೃಶ್ಯ 

ಜಿಪುಣಾಗ್ರೇಸರನ ಬುದ್ದಿವಂತಿಕೆ 

ನರಸಿಂಹರಾಜು ಬುದ್ದಿವಂತಿಕೆ 

ರಾಜ್ ಮತ್ತು ರಾಜು 

ಮನಸೆಳೆಯುವ ಪುಟ್ಟ ಪಾಠದಲ್ಲಿ ರತ್ನಾಕರ್ ಜೊತೆ ರಾಜ್ 

ಸುಂದರ ಜೋಡಿಯಾಗಿ ರಾಜ್ ಮತ್ತು ಹರಿಣಿ ಈ ಚಿತ್ರದಲ್ಲಿ 

ಜಿಕೆ ವೆಂಕಟೇಶ್ ಅವರ ಸಂಗೀತವಿರುವ, ಎಸ ಏನ್ ವರ್ಮಾ ಅವರ ಛಾಯಾಗ್ರಹಣವಿರುವ ಈ ಚಿತ್ರವನ್ನು ಎಚ್ ಎಂ ಬಾಬಾ ಪ್ರೊಡಕ್ಷನ್ಸ್ ನಲ್ಲಿ ಏನ್ ಜಗನ್ನಾಥ್ ನಿರ್ದೇಶಿಸಿದ್ದಾರೆ.. ೧೯೫೯ರಲ್ಲಿ ತೆರೀಕಂಡ ಈ ಚಿತ್ರ ತನ್ನ ಸರಳ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ...

ಧರೆಯಲ್ಲಿ ಧರ್ಮವಿರಬೇಕು. ಧರ್ಮವೇ ನಮ್ಮನ್ನು ಕಾಪಾಡುತ್ತದೆ ಎನ್ನುವ  ಸಂದೇಶವನ್ನು ಸಾರುವ ಚಿತ್ರ ರಾಜ್ ಅವರ ಹನ್ನೆರಡನೆಯ ಚಿತ್ರವಾಗಿ ಬಂದಿದೆ. 

Saturday, July 21, 2018

ವಿಭಿನ್ನ ಅನುಭವ - ನಾಗರಹಾವು

ಮತ್ತೆ ನಾಗರಹಾವು ಬರುತ್ತಿದೆ ಎಂದು ತಿಳಿದಾಗ ಖುಷಿಯಾಯಿತು... ಇದರಲ್ಲಿ ಮತ್ತೆ ಏನೂ ಮಾಡ್ತಾರೆ ಅಂತ ಯು ಟ್ಯೂಬ್ ನಲ್ಲಿ ಟ್ರೈಲರ್ /ಟೀಸರ್ ನೋಡಿದಾಗ ನೋಡಲೇ ಬೇಕು ಎನ್ನುವ ಹಠ ಹುಟ್ಟಿತು.. ಆದದ್ದು ಆಗಲಿ.. ನೋಡಿಯೇ ಬಿಡೋಣ ಅಂತ ಹೋಗಲು ತೀರ್ಮಾನಿಸಿದಾಗ.. ನನ್ನ ಅಣ್ಣ ಹೋಗೋಣ ನೆಡಿ ಅಂತ ಇಡೀ ಪರಿವಾರ ಮೈನಸ್ ಮುರಳಿ ಆದಿತ್ಯ ಹೊರಟೆವು..

ಥೀಯೇಟರ್ ಮುಂದೆ ಒಂದು ಸೆಲ್ಫಿ .. ಈ ಸಿನಿಮಾದ ಹುಚ್ಚನ್ನು ಹೆಚ್ಚು ಮಾಡಿತು.. ಮನೆಯ ಹತ್ತಿರವೇ ಟಾಕೀಸು ಇದ್ದದರಿಂದ ಆರಾಮಾಗಿ ಹೋದೆವು.. ರೂರಲ್ ಪ್ರದೇಶ.. ಪಟ್ಟಣದ ಗಿಜಿ ಗಿಜಿ ಇರಲಿಲ್ಲ.. ಸಿನೆಮಾವನ್ನು ಅನುಭವಿಸಿ ನೋಡಬಹುದಿತ್ತು.. ಆದರೆ ಪಟ್ಟಣದಲ್ಲಿ ಸಿಗುವ ಶಿಳ್ಳೆ .. ಚಪ್ಪಾಳೆ..ಪರದೆಗೆ ವಿಷ್ಣು ಬಂದಾಗ ಕರ್ಪೂರದ ಆರತಿ.. ಕೂಗಾಟ. .ಜೈಕಾರ.. ಇವುಗಳು ಇರಲಿಲ್ಲ ಅಂತಲ್ಲ.. ಆದರೆ ಪ್ರಮಾಣ ಕಮ್ಮಿ ಇದ್ದವು. ... ಹಾಗಾಗಿ ಸಿನೆಮಾವನ್ನು ಸಿನೆಮವನ್ನಾಗಿ ನೋಡಲು ಸಾಧ್ಯವಾಯಿತು..
ಪರಿವಾರ @ ನಾಗರಹಾವು 

ಇಡೀ ಚಿತ್ರ ಮೊದಲೇ ಅದ್ಧೂರಿಯಾಗಿ ಅಂದಿನ ಕಾಲಕ್ಕೆ ತಕ್ಕನಾಗೆ ನಿರ್ಮಿಸಿದ್ದರು.. ಪ್ರಸಿದ್ಧ ನಿರ್ಮಾಪಕ ಶ್ರೀ ವೀರಾಸ್ವಾಮಿ ಅವರು... ಈ ಮರುಸೃಷ್ಟಿ ಕೂಡ ಅಷ್ಟೇ ಅದ್ಧೂರಿಯಾಗಿ ಮಾಡಿದ್ದಾರೆ.. ಆಧುನಿಕ ವರ್ಣ ಸ್ಪರ್ಶ.. ಸಂಗೀತದ ಪುನರ್ ನಿರ್ಮಾಣ.. ಹಳೆಯದನ್ನು ಉಳಿಸಿಕೊಂಡು ಅದಕ್ಕೆ ಅಲ್ಲಲ್ಲಿ ಸ್ಪರ್ಶ ನೀಡಿದ್ದಾರೆ.. ಆದರೂ ಒಮ್ಮೆ ಅನ್ನಿಸಿತು ಹಳೆಯ ಸಂಗೀತವನ್ನೇ ಇಟ್ಟುಕೊಂಡು ವರ್ಣ ಸ್ಪರ್ಶ.. ಮತ್ತೆ ೭೦ಎಂಎಂಗೆ ಮಾಡಿದ್ದಾರೆ ಚೆನ್ನ ಅಂತ.. ಆದರೆ ಇದು ನೆಗೆಟಿವ್ ಸಿಕ್ಕಿದ್ದು.. ಅದರ ಹಿಂದೆ ಪಟ್ಟ ಬವಣೆ.. ಹೊಸ ತಂತ್ರಜ್ಞಾನಕ್ಕೆ ಒಗ್ಗಿಸುವಲ್ಲಿ ಇರುವ ಮಿತಿ.. ಇದನ್ನು ದಾಟಿ ಅದ್ಭುತವಾಗಿ ಮಾಡಿದ್ದಾರೆ..

ಒಂದು ತಲೆಮಾರನ್ನು ದಾಟಿ ಅದರ ಮುಂದಿನ ತಲೆಮಾರಿನ ಜನತೆ ನೋಡುತ್ತಿರುವುದರಿಂದ ಈ ತಲೆಮಾರಿಗೆ ಖಂಡಿತಾ ಇಷ್ಟವಾಗುತ್ತದೆ ಅನ್ನುವ ಭರವಸೇ ನನ್ನದು..

ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಕನ್ನಡ ಚಿತ್ರಗಳ ಬಗ್ಗೆ ಬರೆಯುವಾಗ ನನ್ನ ಅನುಭವಕ್ಕೆ ತಲುಪಿದ ರೀತಿಯನ್ನು ಬರೆದಿದ್ದೆ.. ಅದರ ಕೊಂಡಿ ಇಲ್ಲಿದೆ.. ಸ್ಪೆಷಾಲಿಟಿ... ಪುಟ್ಟಣ್ಣ ಸ್ಪೆಷಾಲಿಟಿ - ನಾಗರಹಾವು (1972)  ಹಾಗಾಗಿ ಮತ್ತೆ ಅದೇ ವಿಷಯ ಹೇಳಿ ನಿಮಗೆ ಬೋರ್ ಹೊಡೆಸೋಲ್ಲ :-)

ಏನೋ ಒಂದು ಸೆಳೆತ ಇದೆ ಈ ಚಿತ್ರದಲ್ಲಿ.. ಅಂದುಕೊಂಡಿದ್ದು ಏನೂ ಸಾಗೊಲ್ಲ... ದುರಂತದಲ್ಲಿ ಕೊನೆಗಾಣುತ್ತದೆ.. ಒಂದು ಬದುಕು ಸುಂದರವನವಲ್ಲ ... ಅಲ್ಲಿ ನೂರಾರು ತಾಕಲಾಟಗಳು ಸುತ್ತುತ್ತವೆ.. ಪ್ರೀತಿ ಪ್ರೇಮ .. ಜಾತಿ.. ಧರ್ಮ.. ಆಸ್ತಿ.. ಅಂತಸ್ತು..    ಭಿನ್ನಾಭಿಪ್ರಾಯ.. ಸಂಬಂಧದ ಬಗ್ಗೆ ಒಡುಕು ಮೂಡಿಸೋದು.. ಹೊಟ್ಟೆ ಉರಿಗೆ ಬೆಂಕಿ ಹಚ್ಹೋದು ಎಲ್ಲವೂ ಇದೆ..
ಗುರು ಶಿಷ್ಯ 

ಈ ದೃಶ್ಯದ ಸಂಗೀತ.. ಸೂಪರ್ 

ನಿರ್ಮಾಪಕರು - ವೀರಾಸ್ವಾಮಿ 

ಆಚಾರ್.. ಅಯ್ಯಂಗಾರ್.. ಸ್ಮಾರ್ಥ ಈ ಮೂರು ಪಂಗಡಗಳ  ಘರ್ಷಣೆ ಒಂದು ಕಡೆ.. ಕ್ರಿಶ್ಚಿಯನ್.. ಮತ್ತು ಇಸ್ಲಾಮ್ ಧರ್ಮ ಪಾತ್ರಗಳು ತರುವ ಬಿಕ್ಕಟ್ಟು .. ಇಡೀ ಚಿತ್ರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತೆ..

ಜಲೀಲ ಅಲಮೇಲುವನ್ನು ರೇಗಿಸದಿದ್ದರೆ.. ರಾಮಾಚಾರಿಗೂ ಅಲಮೇಲುಗೂ ಪ್ರೀತಿ ಬೆಳೆಯುತ್ತಿರಲಿಲ್ಲ.. ಮಾರ್ಗರೇಟ್ ಪಾತ್ರ ಬರದೇ ಇದ್ದಿದ್ದರೆ ಅಂತ್ಯ ಹೀಗಿರುತ್ತಿತ್ತಾ... ಅನ್ನಿಸುತ್ತದೆ..

ಈ ಚಿತ್ರ ನೋಡುತ್ತಾ ಹೋದ ಹಾಗೆ.. ಈ ಚಿತ್ರದ ಅನೇಕ ಪಾತ್ರಗಳ ನಟ ನಟಿಯರು ಈಗಿಲ್ಲ ಎನ್ನುವ ಅಂಶ ಬೇಸರ ತರಿಸುತ್ತದೆ..

೧) ಚಿತ್ರದ ನಿರ್ದೇಶಕ - ಪುಟ್ಟಣ್ಣ ಕಣಗಾಲ್
೨) ನಿರ್ಮಾಪಕ - ವೀರಾಸ್ವಾಮಿ
೩) ಚಾಮಯ್ಯ ಮೇಷ್ಟ್ರು - ಅಶ್ವಥ್
೪) ರಾಮಾಚಾರಿ - ವಿಷ್ಣುವರ್ಧನ್
೫) ತುಕಾರಾಂ - ಧೀರೇಂದ್ರ ಗೋಪಾಲ್
೬) ನಾಯ್ಡು ಅಂಕಲ್ - ಶಕ್ತಿ ಪ್ರಸಾದ್
೭) ಸಾಹಿತಿಗಳು - ಆರ್ ಏನ್ ಜಯಗೋಪಾಲ್
೮) ಸಾಹಿತಿಗಳು - ವಿಜಯನಾರಸಿಂಹ
೯) ಸಾಹಿತಿಗಳು - ಚಿ ಉದಯಶಂಕರ್
೧೦) ಸಂಗೀತ - ವಿಜಯಭಾಸ್ಕರ್
೧೧) ಕಾದಂಬರಿಕಾರರು - ತ ರಾ ಸುಬ್ಬರಾಯರು
೧೨) ಲಕ್ಷಮು - ವಜ್ರಮುನಿ
೧೩) ಮಂಡಿ ಸಾಹುಕಾರರು - ರಂಗ
೧೪) ಪೈಲ್ವಾನ್ - ಎಂ ಪಿ ಶಂಕರ್
೧೫) ರಾಮಾಚಾರಿ ಅಪ್ಪ - ರಾಘವೇಂದ್ರ ರಾವ್
೧೬) ರಾಮಚಾರಿ ಅಮ್ಮ - ಜಯಶ್ರೀ
೧೭) ಅಲಮೇಲು ಅಪ್ಪ - ರಾಮಚಂದ್ರ ಶಾಸ್ತ್ರೀ

ಇದು ತೆರೆಯ ಮೇಲೆ ಹೆಸರಾಗಿದ್ದ ನಟ ನಟಿಯರು ಮತ್ತು ಕೆಲವು ತಂತ್ರಜ್ಞರು.. ಇದರ ಹಿಂದೆ ಶಕ್ತಿ ಮೀರಿ ದುಡಿದ್ದಿದ್ದ ಅನೇಕಾನೇಕ ತಂತ್ರಜ್ಞರು.. ಯೂನಿಟ್ ಕೆಲಸಗಾರರು.. ಮರೆಯಾಗಿದ್ದರು ಅವರೆಲ್ಲರ ಅನುಭವದ ಶ್ರಮ ಈ ಚಿತ್ರ..

ಪುಟ್ಟಣ್ಣ ಕಣಗಾಲ್ ಎನ್ನುವ ಮಾಂತ್ರಿಕ ನಿರ್ದೇಶಕ.. ತರಾಸು ಎನ್ನುವ ಅದ್ಭುತ ಕತೆಗಾರರ ಕಾದಂಬರಿಯ ಒಳ ನೋಟವನ್ನು ಅನುಭವಿಸಿ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿ ಅವರಿಂದ ಚಿತ್ರಕ್ಕೆ ಬೇಕಾದ ರೀತಿಯಲ್ಲಿ ಅಭಿನಯ ತೆಗೆದು.. ಇದನ್ನೊಂದು ಅದ್ಭುತ ಕಲಾಕೃತಿ ನಿರ್ಮಿಸಿದ ವೀರಾಸ್ವಾಮಿ ಎಲ್ಲರೂ ಸ್ವರ್ಗದಲ್ಲಿಯೇ ಈ ಚಿತ್ರದ ಬಗೆಗಿನ ಹೊಸ ತಂತ್ರಜ್ಞಾನದ ಲೇಪದೊಂದಿಗೆ ಬೆಳ್ಳಿತೆರೆಯನ್ನು ಬೆಳೆಗುತ್ತಿರುವ ಯಶಸ್ಸನ್ನು ಕಂಡು ಕರುನಾಡ ಚಿತ್ರರಂಗವನ್ನು ಆಶೀರ್ವದಿಸುತ್ತಿದ್ದರೆ ಎನ್ನುವ ನಂಬಿಕೆ ನನ್ನದು..

ಈಶ್ವರಿ ಸಂಸ್ಥೆಯ ಈ ಪರಿಶ್ರಮ ಸೋದರ ಬಾಲಜಿಯ ಜೊತೆಯಲ್ಲಿ ನಿಂತು ರವಿಚಂದ್ರನ್ ಕುಟುಂಬ ಮಾಡಿದ ಈ ಸಾಹಸ ಮೆಚ್ಚುವಂತದ್ದು..

ಮೇಷ್ಟ್ರೇ ನಾನು ಬರುತ್ತಿದ್ದೇನೆ ಆದರೆ ಮಾರ್ಗರೆಟ್ ಜೊತೆಯಲ್ಲಿ ಈ ಸಂಭಾಷಣೆ ಥೀಯೇಟರ್ ಹೊರಗೆ ಬಂದ ಮೇಲೂ ಗುಯ್ ಅನ್ನುತ್ತಿರುತ್ತದೆ..

ಎಲ್ಲರೂ ನೋಡಿ.. ಈ ಪರಿಶ್ರಮವನ್ನು ಗುರುತಿಸಿ.. ನೋಡಿ.. ಮತ್ತು ಬೆಂಬಲಿಸಿ.. !

Friday, May 25, 2018

ಜಗವ ಬೆಳಗಿದ ಬಸವೇಶ್ವರರ ಜೊತೆಯಲ್ಲಿ ಬಿಜ್ಜಳ ರಾಜ (1959) (ಅಣ್ಣಾವ್ರ ಚಿತ್ರ ೧೧ / ೨೦೭)

ಹತ್ತು ಎನ್ನುವುದು ಒಂದು ಮೈಲಿಗಲ್ಲು.. ಅದನ್ನು ದಾಟಿ ಮುನ್ನೆಡೆಯುವಾಗ ಸಿಗುವ ಖುಷಿಗೆ ಅಂಕೆಯಿಲ್ಲ.. ಹತ್ತು ಚಿತ್ರಗಳನ್ನು ದಾಟಿ ಹನ್ನೊಂದಕ್ಕೆ ಕಾಲಿಟ್ಟಾಗ ಸಿಕ್ಕಿದ್ದು.. ಜಗವನ್ನೇ ಬೆಳಗಿದ ಬಸವೇಶ್ವರರ ಜೀವನಗಾಥೆಯನ್ನು ಬಿಂಬಿಸುವ ಚಿತ್ರ.. ಬಸವೇಶ್ವರ ತತ್ವಗಳು, ಅವರು ಮಾಡಿದ ಕ್ರಾಂತಿ, ಅನುಭವ ಮಂಟಪದ ಅನುಭವಗಳು, ತಾವು ಅಂದುಕೊಂಡಿದ್ದನ್ನು ಮಾಡುವ ಛಲ.. ಇವೆಲ್ಲವನ್ನೂ ಒಂದು ತಟ್ಟೆಯಲ್ಲಿ ಹಾಕಿ ಉಣಬಡಿಸಿದ್ದು ಜಗಜ್ಯೋತಿ ಬಸವೇಶ್ವರ ಚಿತ್ರದಲ್ಲಿ. 


ವಿಕ್ರಂ ಪ್ಯಾರಮೌಂಟ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಿತವಾದ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಟಿ ವಿ ಸಿಂಗ್ ಠಾಕೂರ್, ನಿರ್ಮಾತೃ ಜಿ ಎಸ್ ಎಸ್ ಮೂರ್ತಿ, ಸಂಗೀತದ ನೆಲೆ ಒದಗಿಸಿದ್ದು ಜಿಕೆ ವೆಂಕಟೇಶ್, ರಾಜಕುಮಾರ್ ಅವರ ಅನೇಕ ಚಿತ್ರಗಳನ್ನು ನಿರ್ದೇಶಿಸಿದ ದೊರೈ ಭಗವಾನ್ ಜೋಡಿಯ ದೊರೈ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇತ್ತು. 

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಗಳ ಸಂಗಮ ಈ ಚಿತ್ರ.. ಹೊನ್ನಪ್ಪ ಭಾಗವತರ್, ಲೀಲಾವತಿ, ಸರೋಜಾದೇವಿ, ಕೆ ಎಸ್ ಅಶ್ವಥ್, ಬಾಲಕೃಷ್ಣ, ಜಿ ವಿ ಅಯ್ಯರ್, ನರಸಿಂಹರಾಜು, ಆದವಾನಿ ಲಕ್ಷ್ಮೀದೇವಿ, ರಮಾದೇವಿ, ರಾಮಚಂದ್ರ ಶಾಸ್ತ್ರಿ ಇವೆರೆಲ್ಲರ ಜೊತೆಯಲ್ಲಿ ರಾಜಕುಮಾರ್.  ರಾಜಕುಮಾರ್ ಅವರ ಹಲವಾರು ಚಿತ್ರಗಳನ್ನು ಸಾಹಿತ್ಯ ರಸದಲ್ಲಿ ಅದ್ದಿ ತೆಗೆದ ಚಿ ಉದಯಶಂಕರ್ ಒಂದು ಪುಟ್ಟ ಪಾತ್ರದಲ್ಲಿ ಬಂದು ಹೋಗುತ್ತಾರೆ. 


ಹೊನ್ನಪ್ಪ ಭಾಗವತರ್ ಬಸವಣ್ಣನ ಪಾತ್ರದಲ್ಲಿ ಬೆಳಗಿದ್ದಾರೆ. ಆ ಪಾತ್ರಕ್ಕೆ ಬೇಕಾದ ಶಿಷ್ಟ ನುಡಿ, ಮಾತುಗಾರಿಕೆ, ಸೌಮ್ಯತೆ, ಮೃದುತ್ವ ಎಲ್ಲವನ್ನು ಹೊದ್ದು ಓಡಾಡಿದಂತೆ ಅಭಿನಯಿಸಿದ್ದಾರೆ.. ಬಸವೇಶ್ವರ ಹೀಗಿದ್ದರೂ ಎನ್ನುವಷ್ಟು ನಿಖರತೆ ಅವರ ಅಭಿನಯದಲ್ಲಿ.  

ಬಿಜ್ಜಳ ಮಹಾರಾಜನಾಗಿ ರಾಜಕುಮಾರ್ ಅವರ ಅಭಿನಯ ಹತ್ತು ಚಿತ್ರಗಳ ಅಭಿನಯದ ಅನುಭವದ ಝಲಕ್ ತೋರಿಸುತ್ತದೆ. ಮಹಾರಾಜನ ಪಾತ್ರಕ್ಕೆ ಬೇಕಾದ ಗಾಂಭೀರ್ಯತೆ, ಭಾಷ ಶುದ್ಧತೆ, ಆಂಗೀಕ ಅಭಿನಯ ಎಲ್ಲದರಲ್ಲೂ ಹೊಳೆಯುತ್ತಾರೆ. 
ತಮ್ಮ ತಪ್ಪು ನಿರ್ಧಾರಗಳಿಂದ ಬಸವಣ್ಣ ಅವರ ಅನುಭವ ಮಂಟಪದ ಅಧೋಪತನಕ್ಕೆ ಕಾರಣವಾದದ್ದು, ಮತ್ತು ಬಸವೇಶ್ವರರು ತಾವು ಕೊಟ್ಟ ಅಧಿಕಾರದಿಂದ ಹೊರನೆಡೆದದ್ದು ಇದನ್ನು ಯೋಚಿಸಿ ನೊಂದುಕೊಳ್ಳುವಾಗ ಅವರ ಅಭಿನಯ ಪುಟವಿಟ್ಟ ಚಿನ್ನದಂತಾಗುತ್ತದೆ. 

ಇನ್ನೂ ಬಾಲಕೃಷ್ಣ, ಜಿವಿ ಅಯ್ಯರ್ ಇದರೋಂತು ಮುಗಿಯಿತು.. ಕಿಡಿಕಿಡಿ ಬಾಣಗಳು, ಅಸೂಯೆಗಳು, ದ್ವೇಷ ಇವೆಲ್ಲವನ್ನು ನಿರೀಕ್ಷಿತ ಮಟ್ಟಕ್ಕೆ ಕೊಂಡೊಯ್ಯೋದರಲ್ಲಿ ಅನುಮಾನವೇ ಇಲ್ಲ.. ನಾಟಕೀಯ ಮಾತುಗಳು ಗಮನಸೆಳೆಯುತ್ತದೆ. ನರಸಿಂಹರಾಜು ಅವರಿಗೆ ಹೆಚ್ಚಿನ ದೃಶ್ಯಗಳಿಲ್ಲದಿದ್ದರೂ.. ಸಿಕ್ಕ ಅವಕಾಶ ಸರಿಯಾಗಲಿ ಉಪಯೋಗಿಸಿಕೊಂಡಿದ್ದಾರೆ.. 

ಉಳಿದ ಪಾತ್ರಧಾರಿಗಳು ಕಥೆಗೆ ತಕ್ಕ ಹಾಗೆ ಅಭಿನಯಿಸಿದ್ದಾರೆ. ಬಸವೇಶ್ವರರ ಅನೇಕ ವಚನಗಳನ್ನು ಸಂಗೀತದಲ್ಲಿ ತೇಲಿಸಿದ್ದಾರೆ. 




ಒಂದು ಚಿಕ್ಕ ಚೊಕ್ಕ ಚಿತ್ರವಾಗಿ ಮೂಡಿಬಂದಿದೆ ಈ ಚಿತ್ರ.. 

ಸಮಯಕ್ಕೆ ಸರಿಯಾದ ನಿರ್ಧಾರಗಳು, ಸಮಯಕ್ಕೆ ಸರಿಯಾದ ಆಲೋಚನೆಗಳು ಮನುಜನ ಜೀವನದ ದಿಕ್ಕನ್ನು ಬದಲಿಸುತ್ತದೆ ಎನ್ನುವುದನ್ನು ಹೊನ್ನಪ ಭಾಗವತರ್ ಮತ್ತು ರಾಜಕುಮಾರ್ ಅವರ ಪಾತ್ರಗಳಿಂದ ನೋಡಿ ತಿಳಿಯಬಹುದು.. 

ತಮಗೆ ದೊರೆತಿರುವ ಪಾತ್ರ ಚಿಕ್ಕದು ಅಥವಾ ಹೆಚ್ಚು ದೃಶ್ಯಗಳಿಲ್ಲ ಎನ್ನುವುದನ್ನು ತಲೆಗೆ ಹಾಕಿಕೊಳ್ಳದೆ, ಕಥೆಗೆ ತಕ್ಕ ಹಾಗೆ ಚಿತ್ರದಲ್ಲಿ ಬಂದು ಹೋಗುವ ರಾಜಕುಮಾರ್ ಇಷ್ಟವಾಗುತ್ತಾರೆ.. ನನ್ನ ಕರ್ತವ್ಯ ನನ್ನದು .. ಫಲಾಫಲ ದೇವನದ್ದು ಎನ್ನುವ ಭಾವ ತೋರಿಸುತ್ತಾರೆ.. 

ಇನ್ನೊಂದು ಚಿತ್ರದ ಜೊತೆಗೆ ಮುಂದಿನ ಕಂತಿನಲ್ಲಿ ಸಿಗೋಣವೇ.. !

Tuesday, April 24, 2018

ಯಾವ ಉಪಕರಣವೂ ಇದನ್ನು ಮಾಪನ ಮಾಡಲಾಗುವುದಿಲ್ಲ..ಅಣ್ಣಾವ್ರೇ ಜನುಮದಿನದ ಶುಭಾಶಯಗಳು..

"ಯಾರದು ಒಳಗೆ"

"ನಾನು"

"ನಾನು ಅಂದರೆ" 

"ನಾನವ್ವೋ ... ಕುರುಬರ ಪಿಳ್ಳೆ.. ಬಾಗಿಲು ಜಡಾಯಿಸಿಕೊಂಡಿವ್ನಿ.. "

"ಬಾಗಿಲು ತೆಗಿ" 

"ನಾ ಕೇಳಿದ್ದು ಕೊಡ್ತಿಯೋ.." 

"ಕೊಡ್ತೀನಿ.. "

"ಹಾ.. ಹಂಗಾದ್ರೆ ಒಪ್ಪಕ್ಕಿಲ್ಲ, ,ಮುಕ್ಕಣ್ಣನ ಮೇಲೆ ಪ್ರಮಾಣ ಮಾಡು.. ಕೇಳಿದ್ದು ಕೊಡ್ತೀನಿ ಅಂತ"

"ಹಾ ಖಂಡಿತವಾಗಿ ಕೊಡ್ತೀನಿ. "

ಈ ಸಂಭಾಷಣೆ ಕರುನಾಡ ಚಿತ್ರರಸಿಕರ ನಾಲಿಗೆಯ ಮೇಲೆ ಹರಿದಾಡುತ್ತಲೇ ಇರುತ್ತದೆ... 

ಮುಂದೆ 

ಮುಂದೆ ನೆಡೆದದ್ದು ಪವಾಡ..

ಅಲ್ಲಿಯ ತನಕ ಕುರುಬರ ಪಿಳ್ಳೆಯಾಗಿ.. ಸ್ವಲ್ಪ ಜ್ಞಾನ.. ಬೇಕಾದಷ್ಟು ಮುಗ್ಧತೆ.. ಹೆದರಿಕೆಯಿಲ್ಲದ ಅಭಿನಯ ನೀಡಿದ್ದ ಅಣ್ಣಾವ್ರು.. ಕಾಳಿಮಾತೆಯ ಮುಂದೆ ನಿಂತಾಗ ಬೆದರುಬೊಂಬೆ ಆಗುತ್ತಾರೆ.. ನಾಲಿಗೆ ತೊದಲುತ್ತದೆ.. ಶರೀರ ನಡುಗುತ್ತದೆ.. ಕಾಳಿಯ ಚರಣಕಮಲಗಳ ಮೇಲೆ ತಲೆ ಇಟ್ಟು ಧನ್ಯರಾಗುತ್ತಾರೆ.. ತಮ್ಮ ಎತ್ತರದ ನಿಲುವನ್ನು ಕುಬ್ಜ ಮಾಡಿಕೊಂಡು.. 

"ನಿನಗೆ ಏನೂ ಬೇಕು" ಎಂದು ಕಾಳಿ ಮಾತೆ ಕೇಳಿದಾಗ 

"ವಿದ್ಯಾ ಬುದ್ದಿ" ಎನ್ನುವ ಮಾತನ್ನು ಗೊಗ್ಗರು ದನಿಯಲ್ಲಿ ಹೇಳುತ್ತಾರೆ. 

ಮತ್ತೆ ಕೇಳಿದಾಗ.. ಸ್ವಲ್ಪ ದೃಢ ಧ್ವನಿಯಲ್ಲಿ "ನನ್ನ ಹೆಂಡತಿ ಅದನ್ನೇ ಕೇಳು ಅಂದಿದ್ದಾಳೆ ನನಗೆ ಅದೇ ಬೇಕು" 

"ಕುಳಿತುಕೋ.. ನಾಲಿಗೆ ಹೊರಗೆ ತೆಗಿ ... "
ಓಂಕಾರ ಬರೆಸಿಕೊಂಡ ಕಾಳಿದಾಸ ಪಾತ್ರಧಾರಿಯ ಅಭಿನಯದ ಮಾರ್ಪಾಡು ನೋಡಬೇಕು.. 

ಈ ದೃಶ್ಯದ ತನಕ ಪೆದ್ದು ಪೆದ್ದಾಗಿ.. ಗಿಳಿಪಾಠದಂತೆ ಹೇಳಿದ್ದನ್ನು ಮಾತ್ರ ಹೇಳುತ್ತಾ.. ಇರುವ ಅಣ್ಣಾವ್ರು.. ನಂತರದ ಅಭಿನಯ ಕಂಡು ಬೆರಗಾಗುವ ಸರದಿ ಪ್ರೇಕ್ಷಕರದು.. 

ಅದೇ ಬಟ್ಟೆ.. ಅದೇ ಮೇಕಪ್.. ವಿಭೂತಿ.. ಕೈಯಲ್ಲಿದ್ದ ಉಂಗುರಗಳು.. ಕೊರಳಲ್ಲಿ ಸರ.. ಯಾವುದೂ ಬದಲಾಗಿಲ್ಲ.. ಕೇವಲ ಹತ್ತು ನಿಮಿಷಗಳಲ್ಲಿ ಅಣ್ಣಾವ್ರ ಅಭಿನಯದಲ್ಲಿನ ಬದಲಾವಣೆ.. ಯಾವ ವಿಜ್ಞಾನಿಯ ಉಪಕರಣಗಳಲ್ಲೂ ಅಳೆಯೋಕೆ ಆಗೋಲ್ಲ.. 

ನಾನು ನೂರಾರು ಬಾರಿ ಕವಿರತ್ನ ಕಾಳಿದಾಸ ಚಿತ್ರ ನೋಡಿದ್ದೇನೆ.. ಈ ದೃಶ್ಯ ಬಂದಾಗ ಮೈ ಜುಮ್ ಎಂದಿದೆ.. ಆದರೂ ಪ್ರತಿ ಸಾರಿ ಈ ದೃಶ್ಯ ನೋಡಿದಾಗಲೂ ಒಂದು ಅನಿರ್ವಚನೀಯ ಅನುಭವ.. ಪದಗಳಲ್ಲಿ ಕಟ್ಟಿಕೊಡಲಾಗದ ಅನುಭವ.. 

ನಿನ್ನೆ ರಾತ್ರಿ ಅದೇ ದೃಶ್ಯವನ್ನು ನೋಡಿ ಮಲಗಿದ್ದೆ.. 

ಯಾರೋ ತಟ್ಟಿ ಎಬ್ಬಿಸಿದಂತೆ ಭಾಸವಾಯಿತು.. 

"ಅಣ್ಣಾವ್ರೇ.. ನಮಸ್ಕಾರ.. ಇದೇನು ನೀವೇ ಇಲ್ಲಿ ಬಂದಿದ್ದೀರಿ... .ಅಥವಾ ನಾನೇ ನಿಮ್ಮ ಹತ್ತಿರ ಬಂದಿದ್ದೇನೆಯೇ"

"ಅದು ಇರಲಿ.. ಶ್ರೀಕಾಂತಾ.. ನಿನ್ನಲ್ಲಿ ಏನೋ ಪ್ರಶ್ನೆ ಉದ್ಭವಿಸಿದೆ.. ಅದಕ್ಕೆ ಉತ್ತರ ನೀಡಲು ನಾ ಬಂದೆ.. ಹೇಳಪ್ಪ.. "

"ಅಣ್ಣಾವ್ರೇ.. ಕುರುಬರ ಪಿಳ್ಳೆಯಿಂದ ಕಾಳಿದಾಸನಾಗಿ ಮಾರ್ಪಾಡಾಗುವ ಆ ದೃಶ್ಯ.. ಇದನ್ನು ಅಳೆಯಲು ಯಾವುದೇ ಪರಿಕರಗಳಿಲ್ಲ ..ಯಾವ ಪುಸ್ತಕದಲ್ಲಿಯೂ ಇದನ್ನು ವಿವರಿಸೋಕೆ ಆಗೋಲ್ಲ.. ಅದು ಹೇಗಾಯಿತು.. ಅದರ ಬಗ್ಗೆ ನಿಮ್ಮ ಮಾತು ಬೇಕಿತ್ತು.. ಹೇಳಿ ಅಣ್ಣಾವ್ರೇ"

"ಶ್ರೀಕಾಂತಾ.. ನಾನು ನಾನಾಗಿಲ್ಲದೆ.. ಹಾಗೆ ಸುಮ್ಮನೆ ಆ ಪಾತ್ರದೊಳಗೆ ಇಳಿದಾಗ ಮಾತ್ರ ಸಾಧ್ಯವಾಗುತ್ತದೆ..  "ನಾ" ಹೋದರೆ ಹೋದೇನು ಎನ್ನುವ ಕನಕದಾಸರ ಅಮೃತವಾಣಿ ನೆನಪಿಗೆ ಬಂದಿತ್ತು.. ನಿರ್ದೇಶಕರು ಹೇಳಿದಂತೆ ಅಭಿನಯಿಸಿದೆ.. ಅಷ್ಟೇ ನಿಮಗೆ ಪವಾಡ ಅನ್ನಿಸುವ ದೃಶ್ಯ ನನಗೆ ತೀರಾ ಸಾಧಾರಣ ಅನ್ನಿಸುತ್ತೆ.. ನನ್ನ ಚಿತ್ರಗಳನ್ನು ನಾ ನೋಡಿಲ್ಲ.. ಮಂತ್ರಾಲಯ ಮಹಾತ್ಮೆ ಮತ್ತು ಕವಿರತ್ನ ಕಾಳಿದಾಸ ಎರಡೇ ಚಿತ್ರಗಳನ್ನು ನಾ ನೋಡಿರೋದು.. ಕಾಳಿದಾಸ ಚಿತ್ರದ ದೃಶ್ಯವನ್ನು ನೋಡಿದಾಗ ನನಗೆ ಅನ್ನಿಸೋದು.. ಅಯ್ಯೋ ಇನ್ನಷ್ಟು ಚೆನ್ನಾಗಿ ಅಭಿನಯಿಸಬಹುದಿತ್ತು.. ಅಲ್ಲಿ ತಪ್ಪಾಗಿದೆ.. ಇಲ್ಲಿ ತಪ್ಪಾಗಿದೆ.. ಅನ್ನಿಸುತ್ತಲೇ ಇರುತ್ತದೆ.. ಹಾಗಾಗಿ ಈ ಚಿತ್ರ ಟಿವಿಯಲ್ಲಿ ಬಂದಾಗಲೂ ಚಿತ್ರ ನೋಡದೆ ಹೊರಗೆ ಹೋಗಿ ಬಿಡುತ್ತೇನೆ.. "

ಮನಸ್ಸಿಗೆ ನೆಮ್ಮದಿ ಸಿಕ್ಕಿತು.. ಅಣ್ಣಾವ್ರ ಮಾತುಗಳು ನಿಜ ಎನಿಸಿತು.. ನಾ ನಾನಾಗದೇ "ನಾ" ಅಳಿದು ಪಾತ್ರವಾದಾಗ ಮಾತ್ರ ಪರಕಾಯ ಪ್ರವೇಶ ಸಾಧ್ಯ.. ಹೌದಲ್ವಾ!

ನಿದ್ದೆಗೆ ಜಾರಿದೆ.. 

ಒಂದೆರಡು ಘಂಟೆಗಳ ಕಳೆದಿದ್ದವು ಅನ್ನಿಸುತ್ತೆ.. 

ಯಾರೋ ತಲೆ ಸವರಿದ ಅನುಭವ.. 

ಮತ್ತೆ ಅಣ್ಣಾವ್ರು.. 

"ಇನ್ನೊಂದು ವಿಷಯ ಹೇಳೋದು ಮರೆತಿದ್ದೆ.. ನಿನಗೆ ಆಗಲೇ ಉತ್ತರಸಿಕ್ಕಿತ್ತು ಆಲ್ವಾ ಮತ್ತೆ ಯಾಕೆ ಪ್ರಶ್ನೆ ಮಾಡಿದೆ.. ಮತ್ತೆ ಯಾಕೆ ತಲೆಯಲ್ಲಿ ಹುಳ ಬಿಟ್ಟ್ಕೊಂಡೆ.. ?"

"ನನಗೆ ಉತ್ತರವಾ.. ಎಲ್ಲಿ ಸಿಕ್ಕಿದೆ ಯಾರಿಂದ ಸಿಕ್ಕಿದೆ.. "

"ನೀನು ಗುರುಗಳು ಎಂದು ಕರೆಯುವ ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಫೇಸ್ಬುಕ್ ನಲ್ಲಿನ ನಿನ್ನ ಪೋಸ್ಟಿಗೆ ಪ್ರತಿಕ್ರಿಯೆ ನೀಡಿದ್ದರಲ್ಲ... ಆಹಾ ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ..ಅದೇ ಎಲ್ಲವನ್ನು ಹೇಳುತ್ತೆ.. ಆದರೂ ಕಳ್ಳ ನೀನು.. ನನ್ನ ನೋಡಬೇಕು ಎನ್ನುವ ಹಂಬಲ.. ನನ್ನೊಡನೆ ಮಾತಾಡಬೇಕು ಎನ್ನುವ ಹಂಬಲ ಇಟ್ಕೊಂಡು ನಾಟಕ ಮಾಡ್ತೀಯ.." ಎನ್ನುತ್ತಾ ನಗುತ್ತಾ ನಗುತ್ತಾ ನವಿರಾಗಿ ತಲೆ ಸವರಿ.. ಮಾಯವಾದರು..  

"ಹೌದು ಗುರುಗಳು ಇದರ ಬಗ್ಗೆ ಮಾತಾಡಿದ್ದರು.. ಪ್ರತಿಕ್ರಿಯೆ ನೀಡಿದ್ದರು.. " ನೋಡೋಣ... ಎನುತ್ತ ಫೇಸ್ಬುಕ್ ಖಾತೆ ತೆಗೆದೇ.. ಆ ಪೋಸ್ಟ್ ಹುಡುಕಿದೆ... ಸಿಕ್ಕಿಯೇ ಬಿಟ್ಟಿತು.. 



ಆ ಸಂಭಾಷಣೆಯ ತುಣುಕು ಇಲ್ಲಿ ಹಾಕಿದ್ದೇನೆ.. 

ಶ್ರೀ : ಯಾವ ಉಪಕರಣವೂ ಇದನ್ನು ಮಾಪನ ಮಾಡಲಾಗುವುದಿಲ್ಲ..

ಅಣ್ಣಾವ್ರ ಕುರುಬರ ಪಿಳ್ಳೆಯಿಂದ 
ಕಾಳಿದಾಸನ ಪಾತ್ರಕ್ಕೆ ಮಾರ್ಪಾಡು...

ಶ್ರೀ ಮಂಜುನಾಥ ಕೊಳ್ಳೇಗಾಲ

ನೂರಕ್ಕೆ ನೂರು ನಿಜ... ಅದೊಂದು ಅದ್ಭುತಕ್ಷಣ... ಅದನ್ನು ರಾಜ್ ಕುಮಾರ್ ಸೆರೆಹಿಡಿದಿರುವ ರೀತಿಯೂ ಅಷ್ಟೇ ಅದ್ಭುತ, ಒಂದೆಳೆ ಹೆಚ್ಚಿಲ್ಲ ಒಂದೆಳೆ ಕಡಿಮೆಯಿಲ್ಲ. ಅದೊಂದು multiple ಪರಕಾಯಪ್ರವೇಶದ ಕ್ಷಣ - ರಾಜ್ ಕುಮಾರ್ ಎಂಬ ವ್ಯಕ್ತಿ ಕುರುಬರ ಬೀರನಾಗಿ, ಕುರುಬರ ಬೀರನಿಂದ ಕಾಳಿದಾಸನಾಗಿ... ಸ್ವಂತ ವ್ಯಕ್ತಿತ್ವವನ್ನು ಆ ಕ್ಷಣಕ್ಕೆ ಪೂರ್ಣ ಕೈಬಿಟ್ಟಾಗ ಮಾತ್ರ ಸಾಧ್ಯ ಈ ಜಾದೂ

ಅಣ್ಣಾವ್ರು ಹಾಗೆ ಒಮ್ಮೆ ನಕ್ಕು.. ಸೂಪರ್ ಕಣೋ ಶ್ರೀಕಾಂತ ಅಂದ ಹಾಗೆ ಆಯ್ತು.. 


****
ಅಣ್ಣಾವ್ರ ಜನುಮದಿನವಿಂದು.. ಯುಗ ಯುಗಕ್ಕೂ ಒಬ್ಬರೇ ಅಣ್ಣಾವ್ರು.. ಹರಿವ ನೀರಿನಂತೆ.. ಯಾವುದೇ ಪಾತ್ರಕ್ಕೂ.. ಪಾತ್ರೆಗೂ ಸಲೀಸಾಗಿ ಇಳಿಯುವ ಆ ಅಭಿನಯ ಕರುನಾಡ ಚಿತ್ರ ಪ್ರೇಮಿಗಳಿಗಾಗಿಯೇ ಹುಟ್ಟು ಬಂದಿದ್ದರು ಅನ್ನಿಸುತ್ತೆ.. ಅನ್ನಿಸೋದೇನು ಅದೇ ನಿಜ .. ಅಲ್ಲವೇ.. 

ಅಣ್ಣಾವ್ರೇ ಜನುಮದಿನದ ಶುಭಾಶಯಗಳು.. 

Thursday, April 12, 2018

ಆ ಒಂದು ದಿನ.. ಅಣ್ಣಾವ್ರ ನೆನಪಲ್ಲಿ

ಅಣ್ಣಾವ್ರು ನಗುತ್ತಿದ್ದರು..

ನಾ ಸುತ್ತಲೂ ನೋಡುತ್ತಿದ್ದೆ ಮಂಗನ ತರಹ..

"ಶ್ರೀಕಾಂತ.. ನಿನ್ನೆ ಕಣಪ್ಪ.. ನಿನ್ನ ನೋಡಿಯೇ ನಗುತ್ತಿರುವೆ ನಾನು"

 "ಯಾಕೆ ಅಣ್ಣಾವ್ರೇ..  ನಿಮ್ಮ ಪ್ರೇಮದ ಕಾಣಿಕೆ ಚಿತ್ರದ ಹಾಡು ನೆನಪಿಸಲಾ "ನಗುವಿರಾ ಅಣ್ಣಾವ್ರೇ ನಾನು ಜಾರಿ ಬೀಳುವಾಗ.."

"ಇಲ್ಲ ಕಣಪ್ಪ.. ನೀ ಪ್ರತಿ ವರ್ಷವೂ ನನ್ನ ಪುಣ್ಯ ತಿಥಿಯ ದಿನಕ್ಕೆ ಮತ್ತು ಜನುಮದಿನಕ್ಕೆ  ಬರೆಯುತ್ತಿರುವ ಲೇಖನ ಓದುತ್ತಿದ್ದೇನೆ.. ನೀ ಆಯ್ದುಕೊಳ್ಳುವ ವಿಷಯ ಸೊಗಸಾಗಿರುತ್ತದೆ.. ಅದಕ್ಕೆ ಈ ಬಾರಿ ಏನು ವಿಷಯ ಆಯ್ದುಕೊಳ್ಳುವೆ ಎನ್ನುವ ಕುತೂಹಲ ಇದೆ.. ಅದಕ್ಕೆ ನಿನ್ನ ಮೊಗವನ್ನು ನೋಡುತ್ತಿರುವೆ.. ಮೊಗದಲ್ಲಿ ಮೂಡುತ್ತಿರುವ ನೆರಿಗೆಗಳನ್ನು ನೋಡಿ ನಗು ಬರುತ್ತಿದೆ.. "

"ಹ ಹ ಹ.. ನೀವೂ ನನ್ನ ತಮಾಷೆ ಮಾಡ್ತಿದ್ದೀರಾ ಅಣ್ಣಾವ್ರೇ.. ನಿಮ್ಮ ಚಿತ್ರಗಳು ಕಡಲಿನ ತರಂಗಗಳ ಹಾಗೆ.. ಪ್ರತಿಯೊಂದು ವಿಭಿನ್ನ ಮತ್ತು ತರಂಗಗಲು ಎಂದಿಗೂ ಖಾಲಿಯಾಗೋಲ್ಲ.. ನಿಮ್ಮ ಆಶೀರ್ವಾದ ಇದೆ ಅಂತ ಒಂದು ಸಲ ಹಂಗೆ ಅನ್ನಿ.. ತಲೆಗೆ ಬಂದ ವಿಷಯ ಬರೆಯುತ್ತೇನೆ.. "

"ಅಭಿಮಾನಿಗಳೇ ದೇವರು... ಅಭಿಮಾನಿ ದೇವರು ಎಂದು ನನ್ನ ಬಾಯಲ್ಲಿ ನುಡಿಸಿದವರು ನೀವೇ.. ನನ್ನ ಆಶೀರ್ವಾದ ಅನ್ನುವ ಮಾತೆ ಇಲ್ಲ.. ನಾವೆಲ್ಲರೂ ಕನ್ನಡಾಂಬೆಯ ಮಕ್ಕಳು.. ಆಕೆಯ ಅಭಯ ಹಸ್ತ ಇದ್ದೆ ಇದೆ.. ಮುಂದುವರೆಸು.. "

"ಸರಿ ಅಣ್ಣಾವ್ರೇ.. ಜೈ ಕನ್ನಡಾಂಬೆ.. "

***********

ಅಂದು ಆಫೀಸಿನಲ್ಲಿ ಕೆಲಸ ಸಾಗುತ್ತಿತ್ತು.. ನನ್ನ ಸಹೋದರ ದೀಪು ಕರೆ ಮಾಡಿದ.. "ಅಣ್ಣಯ್ಯ ನಾನು ಊರಿಗೆ ಹೋಗುತ್ತಿದ್ದೀನಿ.. ನನ್ನ ಫ್ರೆಂಡ್ ಕಡೆಯಿಂದ ಸುದ್ದಿ ಗೊತ್ತಾಯಿತು.. ಅಣ್ಣಾವ್ರು ಹೋಗಿಬಿಟ್ರಂತೆ... ಅಂತಿಮ ದರ್ಶನಕ್ಕೆ ಎಲ್ಲಿ ಸಿದ್ಧತೆ ಎಂದು ಇನ್ನೂ ನಿರ್ಧಾರವಾಗಿಲ್ಲ ಅಂತೇ.. ನೀನು ಬೇಗನೆ ಹೊರತು ಬಿಡು.. ಬಂದ್ ಶುರುವಾಗುತ್ತೆ.. ಸರಿ ಅಣ್ಣಯ್ಯ ಕೇರ್ ಫುಲ್ ಓಕೆ" ಅಂತ ಹೇಳಿ ಫೋನ್ ಇಟ್ಟ..

ಸುದ್ಧಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.. ನಾ ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ... ತಕ್ಷಣ ನಾ ನನ್ನ ಆಫೀಸಿಗೆ (ಬಿಟಿಎಂ ಲೇಔಟ್) ಗೆ ಕರೆ ಮಾಡಿ... ಇದು ನಿಜಾ ನಾ ಅಂದೇ.. ಅವರಿಗೆಲ್ಲ ಗೊತ್ತಿತ್ತು ಅಣ್ಣಾವ್ರ ಸಿನೆಮಾಗಳ ಅಭಿಮಾನಿ ನಾನು ಅಂತ... ಆದರೆ ಅವತ್ತು ಅಂತರ್ಜಾಲ ಜಾಮ್ ಆಗಿ ಬಿಟ್ಟಿತ್ತು..ಇಂಟರ್ನೆಟ್ ಕೂಡ ಅಣ್ಣಾವ್ರು ಇನ್ನಿಲ್ಲ ಅನ್ನುವ ಸುದ್ಧಿಯನ್ನು ಅರಗಿಸಿಕೊಳ್ಳಲಾಗದೆ ಅಳುತ್ತಿತ್ತು ಅನ್ನಿಸುತ್ತೆ..

ತಕ್ಷಣ ನಮ್ಮ ಎಚ್ ಆರ್ ಡಿಪಾರ್ಟ್ಮೆಂಟ್ ನಿರ್ಧಾರ ತೆಗೆದುಕೊಂಡು... ಎಲ್ಲರೂ ಬೇಗನೆ ಹೊರಡೋದು ಅಂತ ಹೇಳಿ.. ಎಲ್ಲರಿಗೂ ಸುತ್ತೋಲೆ ಕಳಿಸಿದರು.. ಹತ್ತಿರವಿದ್ದವರು.. ತಮ್ಮ ಬೈಕ್, ಸೈಕಲ್, ನೆಡೆದು ಹೊರಟೆ ಬಿಟ್ಟರು..

ನಮ್ಮ ಮ್ಯಾನೇಜರ್ ಡ್ರೈವರ್ ಓಡುತ್ತಾ ನನ್ನ ಬಳಿ ಬಂದು.. "ಸರ್ ಅಣ್ಣಾವ್ರ ಒಂದು ಚಿತ್ರ ಕೊಡಿ ಸರ್.. ಅದೇನೋ ಕಂಪ್ಯೂಟರ್ ನಲ್ಲಿ ಸಿಗುತ್ತಂತಲ್ಲಾ.. ಪ್ರಿಂಟ್ ಕೊಡಿ ಸರ್"

ನಾನು ಶತ ಪ್ರಯತ್ನ ಮಾಡಿದೆ.. ಇಂಟರ್ನೆಟ್ ಇಲ್ಲ.. ಇದ್ದರೂ ತುಂಬಾ ನಿಧಾನವಾಗಿತ್ತು.. ಪೇಜುಗಳು ಓಪನ್ ಆಗ್ತಾ ಇರಲಿಲ್ಲ.. ಆಗ ಈಗಿನಷ್ಟು ತಾಂತ್ರಿಕತೆ ನನಗೆ ಗೊತ್ತಿರಲಿಲ್ಲ (ಈಗಲೂ ಗೊತ್ತಿಲ್ಲ ಅದು ಬೇರೆ ವಿಷ್ಯ).. ಏನೇ ಲಾಗ ಹಾಗಿದ್ದರೂ ಅಣ್ಣಾವ್ರ ಚಿತ್ರ ಇರುವ ವೆಬ್ಸೈಟ್ ಓಪನ್ ಆಗ್ತಾನೆ ಇಲ್ಲ. ನಮ್ಮ ಆಫೀಸಿಗೂ ಫೋನ್ ಮಾಡಿ.. ಒಂದು ಅಣ್ಣಾವ್ರ ಚಿತ್ರ ಪ್ರಿಂಟ್ ತೆಗೆದು ಫ್ಯಾಕ್ಸ್ ಕಳಿಸಿ.. ಇಲ್ಲಿ ಜೆರಾಕ್ಸ್ ತಗೋತೀನಿ ಅಂದೇ.. ಪಾಪ ಅವರು ಏನೇನೇ ಪ್ರಯತ್ನ ಮಾಡಿದರೂ ಆಗಲೇ ಇಲ್ಲ. .

ಇತ್ತ ನಮ್ಮ ಸೆಕ್ಯೂರಿಟಿ ಸರ್ ಕ್ಯಾಬ್ಗಳೆಲ್ಲ ಹೋರಾಡತ ಇದೆ.. ಎಲ್ಲರೂ ಬೇಗ ಬೇಗ ಬನ್ನಿ ಅಂತ ಕೂಗುತ್ತಿದ್ದರು..

ಏನೂ ಹೊಳೆಯದೆ ನಾವೆಲ್ಲಾ ಕ್ಯಾಬ್ ಹತ್ತಿರ ಹೋದಾಗ ನನಗೆ ಅಚ್ಚರಿ ಕಾದಿತ್ತು.. ನಮ್ಮ ಡ್ರೈವರ್ ತಾನೂ ಎಲ್ಲಾ ಕಡೆ ಪ್ರಯತ್ನ ಮಾಡಿ.. ಸೋತು ಕಡೆಗೆ ತಲೆ ಉಪಯೋಗಿಸಿ.. ಗಾಜಿನ ಮೇಲೆ ಒಂದು ಹಾಳೆ ಅಂಟಿಸಿದ್ದರು.. ಅದರಲ್ಲಿ ಇದ್ದದ್ದು "ಅಣ್ಣಾವ್ರ ಪಾರ್ಥಿವ ಶರೀರದ ದರ್ಶನಕ್ಕೆ" 

ನಾ ಡ್ರೈವರಿಗೆ ಶಭಾಷ್ ಹೇಳಿದೆ.. ಮನೆಯಿಂದ ಆಗಲೇ ಹಲವಾರು ಫೋನ್ ಬಂದಿತ್ತು.. ಹೊರಟಿದ್ದೇನೆ.. ಬರುತ್ತಿದ್ದೇನೆ ಎಂದು ಹೇಳಿ ಅವರ ಉದ್ವೇಗ ಕಡಿಮೆ ಮಾಡಿದ್ದೆ..

ಅಲ್ಲಿಂದ ಇಪ್ಪತೇಳು ಕಿಮೀಗಳು.. ನನ್ನ ಜೀವನದ ಮರೆಯಲಾರದ ಕ್ಷಣಗಳು.. ದಾರಿಯುದ್ದಕ್ಕೂ ಬಸ್ಸಿಗೆ ಕಾಯುತಿದ್ದ ಜನತೆ.. ಎಲ್ಲಾ ಕಡೆಯೂ "ಅಣ್ಣ ಮತ್ತೊಮ್ಮೆ ಹುಟ್ಟಿ ಬನ್ನಿ" ಎನ್ನುವ ಫಲಕಗಳು.. ಅಣ್ಣಾವ್ರ ವಿವಿಧ ಚಿತ್ರಗಳ ಪೋಸ್ಟರುಗಳು.. ಕನ್ನಡ ಬಾವುಟ.. ರೇಡಿಯೋದಲ್ಲಿ ಅಣ್ಣಾವ್ರ ಚಿತ್ರಗಳ ಹಾಡುಗಳು.. ಜೊತೆಯಲ್ಲಿ ಅಣ್ಣಾವ್ರ ಬಗ್ಗೆ ಅವರ ಸಹ ಕಲಾವಿದರ ಮಾತುಗಳು.. .. ಮೈ ರೋಮಾಂಚನವಾಗುತ್ತಿತ್ತು.. ಕ್ಯಾಬಿನಲ್ಲಿ ಸಹೋದ್ಯೋಗಿಗಳ ಜೊತೆ ಮಾತಾಡಬೇಕು ಆದರೆ ಅಣ್ಣಾವ್ರ ಬಗ್ಗೆ ಮಾತುಗಳು ಕೇಳಬೇಕು ಈ ಸಂದಿಗ್ಧದಲ್ಲಿ ಗೆದ್ದದ್ದು ಅಣ್ಣಾವ್ರ ಹಾಡುಗಳೇ..

ಮನೆಗೆ ತಲುಪಿದೆ.. ನನ್ನ ಸೋದರ ಮಾವ ರಾಜ ಮನೆಗೆ ಬಂದಿದ್ದ.. ನನ್ನ ಅಪ್ಪ ಬೆಳಗಿಂದ ಟಿವಿ ಮುಂದೆ ಕೂತಿದ್ದರು.. ಅಣ್ಣಾವ್ರ ಹಾಡುಗಳು.. ಸಿನಿಮಾ.. ಸುದ್ಧಿಗಳು.. ಸಂದರ್ಶನ ಎಲ್ಲವನ್ನು ಅಚ್ಚುಕಟ್ಟಾಗಿ ನೋಡುತ್ತಾ ಕೂತಿದ್ದರು.. ಅಣ್ಣ, ತಮ್ಮ, ಅಕ್ಕ ಎಲ್ಲರೂ ಮನೆ ಸೇರಿಯಾಗಿತ್ತು.

ಅಲ್ಲಿಂದ ಮುಂದೆ ರಾತ್ರಿಯ ತನಕ ಮಾತುಗಳು ಬರಿ ಅಣ್ಣಾವ್ರ ಸುತ್ತಲೇ ಸುತ್ತುತ್ತಿದ್ದವು.. ರಾಜ ಹೇಳಿದ "ಭಕ್ತ ಅಂಬರೀಷ" ಚಿತ್ರ ಮಾಡಬೇಕಿತ್ತು.. ಅದೊಂದು ಆಸೆ ಹಾಗೆ ಉಳಿದುಬಿಟ್ಟಿದ್ದು ಬೇಸರ ಕಣೋ" ಅಂದ.. ಆಗ ನಾ ಹೇಳಿದೆ.. ಅಣ್ಣಾವ್ರ ರಾಜಾಸ್ಥಾನದ ಸಾಹಿತಿ ಶ್ರೀ ಚಿ ಉದಯಶಂಕರ್ ಹೋದ ಮೇಲೆ "ಭಕ್ತ ಅಂಬರೀಷ" ಸಾಧ್ಯವೇ ಇಲ್ಲ ಕಣೋ .. ಅದು ಅಣ್ಣಾವ್ರಿಗೂ ಗೊತ್ತಿತ್ತು ಅನ್ನಿಸುತ್ತೆ..

ಮಾರನೇ ದಿನವೂ ಕೂಡ ಸರ್ಕಾರಿ ರಜೆ ಘೋಷಿಸಿದ್ದರು.. ಆಫೀಸಿಗೆ ರಜೆ ಇತ್ತು.. ಅಂತಿಮ ದರ್ಶನಕ್ಕೆ ಜನಸಾಗರ ಹರಿದಿದ್ದು.. ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋದತ್ತ ಸಾಗಿದ್ದ ಪಾರ್ಥಿವ ಶರೀರ ನಂತರದ ಅಂತಿಮ ಸಂಸ್ಕಾರ ಎಲ್ಲವನ್ನೂ ಟಿವಿಯಲ್ಲಿ ನೋಡುತ್ತಾ ಕೂತಿದ್ದೆವು..

ಕಡೆಗೆ ಅನ್ನಿಸಿದ್ದು.. ಒಬ್ಬ ಕಲಾವಿದನನ್ನು ಈ ಪಾಟಿ ಹಚ್ಚಿಕೊಳ್ಳಲು ಕಾರಣವೇನು ಎಂದಾಗ.. ನನಗೆ ಅನ್ನಿಸಿದ್ದು.. ಅಣ್ಣಾವ್ರ ೨೦೭ ಚಿತ್ರಗಳಲ್ಲಿ.. ಕಂಡದ್ದು ೨೦೭ ವ್ಯಕ್ತಿತ್ವಗಳು. ಒಂದಕ್ಕೊಂದು ಸಂಬಂಧವಿರದ.. ಆದರೆ ಪ್ರತಿಯೊಂದು ಪಾತ್ರವೂ ಕೂಡ ಕಲಿಸಿದ ಪಾಠ.. ಅದರಿಂದ ಅರಿತುಕೊಂಡ ಜೀವನ ದರ್ಶನ.. ಇದು ಅಣ್ಣಾವ್ರನ್ನು ಆ ಸ್ಥಾನಕ್ಕೆ ಒಯ್ದಿತ್ತು.. ಪ್ರತಿಯೊಬ್ಬರೂ ಪರದೆಯ ಮೇಲೆ ಅಣ್ಣಾವ್ರನ್ನು ಕಾಣುತ್ತಿರಲಿಲ್ಲ ಬದಲಿಗೆ ಆ ಪಾತ್ರವನ್ನು ಕಾಣುತ್ತಿದ್ದರು.. ಐತಿಹಾಸಿಕ ಪಾತ್ರ ಮಾಡಿದಾಗ ಆ ರಾಜ ಮಹಾರಾಜರನ್ನೇ ಕಾಣುತಿದ್ದೆವು.. ಪೌರಾಣಿಕ ಪಾತ್ರಗಳಲ್ಲಿ ಕೃಷ್ಣ, ರಾಮ, ರಾವಣ ಅಂದರೆ ಕಣ್ಣಿಗೆ ಕಾಣುವುದು ಅಣ್ಣಾವ್ರ ಮುಖವೇ... ಕೌಟುಂಬಿಕ ಪಾತ್ರಗಳಲ್ಲಿ ನಮ್ಮ ಅಣ್ಣ, ಅಪ್ಪ, ಬಂಧುಗಳು ಕಾಣುತ್ತಿದ್ದರು... ಹೀಗೆ ಮನೆ ಮನೆಗೂ ಮನ ಮನದಲ್ಲೂ ಅಚ್ಚಳಿಯದೆ ನಿಲ್ಲಬೇಕಾದರೆ ಆ ಸೃಷ್ಟಿಕರ್ತ ಬ್ರಹ್ಮ ಕರುನಾಡಿಗಾಗಿಯೇ ಸೃಷ್ಟಿಸಿದ ಅದ್ಭುತ ಜೀವ ನಮ್ಮ ಅಣ್ಣಾವ್ರು..

ಅಣ್ಣಾವ್ರೇ.. ನಿಮ್ಮ ಚಿತ್ರಗಳು ಬರಿ ಚಿತ್ರಗಳಲ್ಲ ಬದಲಿಗೆ ಅದು ೨೦೭ ವಿಶ್ವವಿದ್ಯಾಲಯಗಳು.. ಪ್ರತಿಯೊಂದು ದೃಶ್ಯವೂ ಒಂದೊಂದು ಪದವಿಯ ಪಠ್ಯ.. ಜೀವನ ದರ್ಶನ ಮಾಡಿಸುವ ನಿಮ್ಮ ಚಿತ್ರಗಳ ನೋಡುತ್ತಾ ಬೆಳೆದ ಈ ಜೀವವೇ ಧನ್ಯ..

ಇನ್ನೊಮ್ಮೆ ಅಲ್ಲ ..ಇನ್ಯಾವತ್ತಿಗೂ ಈ ಭುವಿಯಲ್ಲಿ ಇಂತಹ ಒಂದು ಅನರ್ಘ್ಯ ರತ್ನ ಮತ್ತೆ ಜನಿಸೋದು ಸಾಧ್ಯವೇ ಇಲ್ಲ.. ಕಾರಣ ಗೊತ್ತೇ.. ಅಣ್ಣಾವ್ರು ಕರುನಾಡ ಚಿತ್ರರಸಿಕರ ಮನದಿಂದ ಹೊರಗೆ ಹೋಗಿದ್ದರೇ ತಾನೇ ಮತ್ತೊಮ್ಮೆ ಹುಟ್ಟಿ ಬರೋಕೆ ಸಾಧ್ಯ..

ಅಣ್ಣಾವ್ರೇ ನೀವು ಅಜರಾಮರ.. !!!

********

 ಏನೂ ಹೇಳಲಿ.. ನಾನೂ ಏನೂ ಹೇಳಲಿ.
ಕಣ್ಣುಗಳು ತುಂಬಿ ಬಂದಾಗ ಮಾತುಗಳು ಕಷ್ಟ ಕಣೋ ಕಾಂತಾ.. ಶ್ರೀಕಾಂತ
ನಿನ್ನ ಸೋದರಮಾವನ ರಾಜನ ಜೊತೆ ಅವಾಗವಾಗ ಮಾತಾಡುತ್ತಲೇ ಇರುತ್ತೀನಿ..
ಆತನ ಸಿನಿಮಾ ಜ್ಞಾನ.. ನೆನಪು ಅಬ್ಬಬ್ಬಾ ಅನಿಸುತ್ತದೆ.. ಪ್ರತಿಯೊಂದು ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಅವನ ಜಾಣೆ ಇಷ್ಟವಾಗುತ್ತದೆ..
ಅದರಲ್ಲೂ ನನ್ನ ಸಿನೆಮಾಗಳಲ್ಲಿ ಬಾಲಣ್ಣ ಇದ್ದುಬಿಟ್ಟರಂತೂ ಅವನ ವರ್ಣನೆ ಮುಗಿಯೋದೇ ಇಲ್ಲ.. ನೀನು ಅವರು.. ನನ್ನ ಸಿನಿಮಾಗಳನ್ನು ನೋಡಲು ಬೆಂಗಳೂರಿನ ಟಾಕೀಸುಗಳನ್ನು ಸುತ್ತಿದ್ದು.. ಶಂಕರ್ ಗುರು ಚಿತ್ರವನ್ನು ಬೆಂಗಳೂರಿನಲ್ಲಿ ಮರು ಬಿಡುಗಡೆಯಾದ ಚಿತ್ರಮಂದಿರಗಳಲ್ಲಿ ಇನೋಡಿದ್ದು.. ಎಲ್ಲವೂ ನನಗೆ ಗೊತ್ತು..

ಶ್ರೀಕಾಂತ ಶುಭವಾಗಲಿ.. ಹನ್ನೆರಡು ದಿನ.. ಮತ್ತೆ ನಿನ್ನ ಕೀಲಿ ಮನೆಯಲ್ಲಿ ಬಂದು ಕೂರುತ್ತೇನೆ.. ಬರುತ್ತೇನೆ..

ಅಣ್ಣಾವ್ರು ಹಾಗೆ ಬೆಳಕಿಂದ ಕಿರಣವಾಗಿ.. ಕರುನಾಡ ಚಿತ್ರರಸಿಕರ ಆಗಸದಲ್ಲಿ ಹೊಳೆಯುವ ತಾರೆಯಾಗಿಬಿಟ್ಟರು. .


*******

Sunday, January 7, 2018

ಮಲೆಗಳಲ್ಲಿ ಮಧುಮಗಳು.. ವಿಭಿನ್ನ ಅನುಭವ (2018)

"ಅಪ್ಪ ಚಿಂಕ್ರಾ ಅಂಕಲ್ ಅಲ್ಲಿ.. "

ನನ್ನ ಮಗಳು ಪೂರಾ ಖುಷಿ ಆಗಿದ್ದಳು..

ಒಂದು ಪಾತ್ರ ಸೃಷ್ಟಿಸುವ ಹವಾ ಇದು ಅಂದರೆ ತಪ್ಪಾಗಲಾರದು..

ಅವಳು ಗೆದ್ದಿದ್ದಳು.. ನನ್ನ ಸರದಿ.. ದೇವರ ಹತ್ತಿರ ಬೇಡುವ ಸ್ಥಿತಿ ನನ್ನದು ..

ಸ್ವಲ್ಪ ಹೊತ್ತು.. ಕಲಾಪಗಳು ಶುರುವಾದವು..

"ಅಪ್ಪ ನಿಮ್ಮ ಇಷ್ಟವಾದ ಪಾತ್ರ ಪಿಂಚುಲು" ದೇವರಿಗೆ ಮೊರೆ ಕೇಳಿಸಿತು ಅನ್ನಿಸುತ್ತೆ

ತಕ್ಷಣ ನನ್ನ  ಹೇಳಿದೆ.. "ಟಿಕೆಟಿಗೇ ಕೊಟ್ಟ ದುಡ್ಡು ಬಂತು"

ಹೌದು ಉತ್ಪ್ರೇಕ್ಷೆ ಅನ್ನಿಸುತ್ತದೆಯೇ.. ಹೌದು ನಿಜ..

ನಿನ್ನೆ ರಾತ್ರಿ (೦೬. ೦೧. ೨೦೧೮) ಮಲೆಗಳಲ್ಲಿ ಮಧುಮಗಳು ನಾಟಕವನ್ನು ಐದನೇ ಬಾರಿಗೆ ನೋಡಲು ಹೋದಾಗ ನೆಡೆದ ಘಟನೆ ಇದು..

ನಾಟಕ ಅಂದರೆ.. ಓಹ್ ಅನ್ನುತ್ತಿದ್ದ ಮನಸ್ಸು.. ಮೊದಲ ಬಾರಿಗೆ ಮಧುಮಗಳು ಕಲಾಗ್ರಾಮದಲ್ಲಿ ಅವತರಿಸಿದ್ದನ್ನು ನೋಡಿದ್ದೇ ಮಧುಮಗಳು ಬೆಂಗಳೂರಿಗೆ ಮೊದಲ ಬಾರಿಗೆ ಬಂದಾಗ . ಮನಸ್ಸೆಳೆದದ್ದು ಚಿಂಕ್ರಾ ಮತ್ತು ಪಿಂಚುಲು.. ಹುಲಿಯ, ಗುತ್ತಿ, ವೆಂಕಟ, ಮುಕುಂದಯ್ಯ, ಚಿನ್ನಮ್ಮ,, ಜಕ್ಕಣಿ.. ಹೀಗೆ ಅನೇಕ ಪಾತ್ರಗಳು ಮನಸೆಳೆದಿದ್ದರೂ ಮೇಲಿನ ಎರಡು ಪಾತ್ರಗಳು ಮನದಲ್ಲಿ ಮನೆ ಮಾಡಿದವು..

ಆಮೇಲೆ ಹಠಕ್ಕೆ ಬಿದ್ದು ಮಲೆಗಳಲ್ಲಿ ಮಧುಮಗಳು ಕಾದಂಬರಿಯನ್ನು ಓದಿದಾಗ ಈ ಎರಡು ಪಾತ್ರಗಳ ಮೇಲೆ ವ್ಯಾಮೋಹ ಮತ್ತಷ್ಟು ಹೆಚ್ಚಾಯಿತು.. ಕುವೆಂಪು ಚಿತ್ರಿಸಿರುವ ಕಾದಂಬರಿಯಲ್ಲಿ ಇರಬೇಕಾದ ಪಾತ್ರಗಳ ಸತ್ವವನ್ನು ಈ ಎರಡು ಪಾತ್ರಗಳು ಹೀರಿದ್ದಾವೆ ಅನ್ನಿಸಿತು...

ಚಿಂಕ್ರ ಪಾತ್ರಧಾರಿ ಖಳ ವರ್ಚಸ್ಸಿನದ್ದು, ಆದರೆ ಆ ಪಾತ್ರದ ಒಳ ಹರಿವನ್ನ ಅರಿತು, ಎಲ್ಲಿಯೂ ಕ್ರೌರ್ಯ ಪ್ರದರ್ಶಿಸದೆ, ತಣ್ಣಗೆ ಅಭಿನಯಿಸಿರುವ ಈ ಕಲಾವಿದ ಶ್ರೀ ವಿನಯ್ ಚೌಹಾಣ್ ಶೀಟಿ ಗಿಟ್ಟಿಸುತ್ತಾರೆ.. ಆ ಪಾತ್ರದ ವೇಷಭೂಷಣ, ಹಾವಭಾವ,  ಆಂಗೀಕ ಅಭಿನಯ, ಸಂಭಾಷಣೆ ಹೇಳುವ ಶೈಲಿ.. ಊರಲ್ಲಿ ಏನಾದರೇನು ಅದರಲ್ಲಿ  ತಾನು ಲಾಭವನ್ನಾಗಿಸುವುದು ಹೇಗೆ ಎಂಬ ಸದಾ ಲೆಕ್ಕಾಚಾರದ ಮನೋಭಾವವನ್ನ.. ಅರೆ ಹೀಗಿದ್ದರೆ ಹೀಗೆ ಅಭಿನಯಿಸಬೇಕು ಎನ್ನುವಷ್ಟು ಲೆಕ್ಕಾಚಾರದ ಅಭಿನಯ.. ಕೆಲವು ದೃಶ್ಯಗಳಲ್ಲಿ ಅಭಿನಯ ಅನ್ನಿಸುವುದೇ ಇಲ್ಲ.. ಸೂಪರ್ ಚಿಂಕ್ರ

ಪಿಂಚುಲು ಪಾತ್ರ.. ಅನುಮಾನದ ಆದರೆ ಮುಗ್ಧ ಸ್ವಭಾವ ಮತ್ತು ತನ್ನ ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಐತಾ ಪಾತ್ರ, ಗಂಡನ್ನು ಸಂಭಾಳಿಸುತ್ತಾ, ಚಿಂಕ್ರನ ಕಣ್ಣು ತಪ್ಪಿಸುತ್ತಾ, ತನ್ನ ಮೇಲೆ ಅಪಾರ ಭರವಸೆ ಇಟ್ಟಿರುವ ಮುಕುಂದಯ್ಯನ ನಂಬಿಕೆ ಉಳಿಸಿಕೊಂಡುವು, ಚಿನ್ನಮ್ಮನನ್ನು ಮುಕುಂದಯ್ಯನಿಗೆ ವಹಿಸುವ ಪಾತ್ರ.. ಜೊತೆಯಲ್ಲಿ ಗುತ್ತಿ ಮತ್ತು ತಿಮ್ಮಿಯನ್ನು ಒಂದು ಮಾಡಲು ಪಡುವ ಶ್ರಮ.. ಆ ಪಾತ್ರಕ್ಕೆ ಬೇಕಾಗಿರುವ ತಾಳ್ಮೆ, ಯೋಚನಾ ಲಹರಿ, ತೂಕಬದ್ಧವಾದ ಬುದ್ದಿವಂತಿಕೆ ಮಾತುಗಳು.. ಇವಿಷ್ಟು ವಿಷಯಗಳನ್ನು ತನ್ನ ಹೆಗಲ ಮೇಲೆ ಹೊತ್ತು ನಿಭಾಯಿಸಿರುವ ಪರಿ ಶಭಾಷ್ ಎನ್ನಿಸುತ್ತದೆ..


ಆ ಚಳಿಯಲ್ಲಿಯೂ ಮಲೆನಾಡಿನ ಪೋಷಾಕನ್ನು ಧರಿಸುವ ಪಾತ್ರಧಾರಿಗಳ ಶ್ರಮ ಅಬ್ಬಬ್ಬಾ ಎನ್ನಿಸುತ್ತದೆ..

ಗುತ್ತಿ ಇಡೀ ಕಥೆಯ ಕೇಂದ್ರ ಬಿಂಧು ಆರಂಭದಿಂದ ಅಂತ್ಯದ ತನಕ ಹರಿಯುವ ಈ ಪಾತ್ರವನ್ನು ಮೈಮೇಲೆ ಆವಹಿಸಿಕೊಂಡಿರುವಂತೆ ಅಭಿನಯಿಸಿರುವ ಗುತ್ತಿ ಪಾತ್ರಧಾರಿ ಚಪ್ಪಾಳೆ ಗಿಟ್ಟಿಸುತ್ತಾರೆ.. ಗಟ್ಟಿ ಧ್ವನಿ.. ಸೊಗಸಾದ ಮೈಕಟ್ಟು.. ಸಂಭಾಷಣೆಗೆ ಬೇಕಾದ ಹಾವಭಾವ.. ಸೊಗಸು ಸೊಗಸು

ಹುಲಿಯ ಪಾತ್ರ.. ಏನೂ ಹೇಳಲಿ.. ಕಡೆ ಪಾತ್ರವಾಗಬಹುದಾಗಿದ್ದ ಈ ಪಾತ್ರ.. ಇಡೀ ನಾಟಕದಲ್ಲಿ ಗುತ್ತಿಯ ಜೊತೆಗೆ ನಿಲ್ಲುವುದು.. ಮತ್ತೆ ಕೊನೆಯಲ್ಲಿ ಅಂತ್ಯ.. ಕಣ್ಣೀರು ತರಿಸುತ್ತದೆ.. ಸಂಭಾಷಣೆ ಇಲ್ಲ.. ಜನರು ಗುರುತಿಸುತ್ತಾರೋ .ಇಲ್ಲವೋ ಗೊತ್ತಿಲ್ಲದ ಪಾತ್ರ ಅದು.. ಆದರೆ ಕಡೆಯಲ್ಲಿ ಪಾತ್ರ ಪರಿಚಯ ಮಾಡಿಕೊಳ್ಳುವಾಗ.. ಬಂದಿದ್ದವರೆಲ್ಲ ಹುಲಿಯ ಹುಲಿಯ ಅಂಥಾ ಕೂಗಿದ್ದು..

ಮತ್ತೆ ಗುತ್ತಿ ಪಾತ್ರದ ಬಗ್ಗೆ ತೋರಿದ ಚಪ್ಪಾಳೆ..

ಈ ಎರಡು ಪಾತ್ರಗಳ ಶ್ರಮವನ್ನು ಗುರುತಿಸಿದ ಪರಿಗೆ ಸಲಾಂ ಹೇಳುತ್ತದೆ..

ಮೊಡಂಕಿಲ, ಐತಾ, ಮುಕುಂದಯ್ಯ, ಭರಮಯ್ಯ ಹೆಗ್ಗಡೆ, ಚಿನ್ನಮ್ಮ, ನಾಗಕ್ಕ, ನಾಗತ್ತೆ, ಮಂಜ, ವೆಂಕಟ, ಪಾದ್ರಿ ಜೀವರತ್ನಯ್ಯ, ಹೆಗ್ಗಡೆ ಕುಟುಂಬ, ಸುಂದರ ತಿಮ್ಮು, ತಿಮ್ಮಿ ಹೀಗೆ ಪ್ರತಿಯೊಂದು ಪಾತ್ರವನ್ನು  ಹೋದಹಾಗೆ ಕಣ್ಣು ತುಂಬಿಕೊಳ್ಳುತ್ತಾ ಅದ್ಭುತ ಅನುಭವ ಕೊಡುತ್ತದೆ..

೮೦೦ ಪುಟಗಲ ಬೃಹತ್ ಕಾದಂಬರಿಯನ್ನು ಒಂಭತ್ತು ತಾಸುಗಳಲ್ಲಿ ತೋರಿಸುವುದು.. ಮತ್ತೆ ಓದುಗರಿಗೆ ವಿಭಿನ್ನ ಅನುಭವ ಕೊಡುವ ಕಾದಂಬರಿಗೆ ಯಾವುದೇ ರೀತಿ  ದೃಷ್ಟಿಕೋನ ಬದಲಾಗದೆ ಇರುವ ರೀತಿ ದೃಶ್ಯ  ಮಾಧ್ಯಮಕ್ಕೆ ಇಳಿಸುವ ಸಾಹಸ ಅದ್ಭುತ..

ಅಭಿನಯಿಸಿರುವ ಪ್ರತಿಯೊಂದು ಪಾತ್ರ.. ಆ ಪಾತ್ರ ಮಾಡಲೆಂದೇ ಹುಟ್ಟಿದ್ದಾರೇನೋ ಅನುವಷ್ಟು ಕರಾರುವಕ್ಕಾಗಿದೆ.. ನಾ ಐದನೇ ಬಾರಿ ನೋಡುತ್ತಿದ್ದರೂ, ಕಾದಂಬರಿ ಓದಿದ್ದರೂ.. ಪ್ರತಿಯೊಂದ ದೃಶ್ಯ ಬರುವಾಗಲೂ. ಇದು ಹೊಸದು ಅನ್ನುವ ಅನುಭವ ಕೊಟ್ಟಿತು..

ಶ್ರೀ ನಾರಾಯಣ ಸ್ವಾಮೀ ಸರ್ , ಶ್ರೀ ಬಸು ಸರ್ ಇವರುಗಳ ಸಾಹಸ  ಶ್ಲಾಘನೀಯ.. ಹಿನ್ನೆಲೆ ಸಂಗೀತ ಶ್ರೀ ಹಂಸಲೇಖ, ರಂಗ ಸಜ್ಜಿಕೆ ಶ್ರೀ ಶಶಿಧರ್ ಅಡಪ.. ಇವರ ಜೊತೆಯಲ್ಲಿ ದುಡಿದ ತಂತ್ರಜ್ಞಾನದ ತಂಡಕ್ಕೆ ಒಂದು ವಿಶೇಷ ಸುತ್ತಿನ ಚಪ್ಪಾಳೆ..

ಕರುನಾಡಿನ ಸರ್ಕಾರ ತೋರಿದ ಸಹಾಯ ಹಸ್ತ.. ಈ ಅಮೋಘ ಪ್ರಯೋಗವನ್ನು ನೂರು ಪ್ರದರ್ಶನದತ್ತ ಕೊಂಡೊಯ್ಯಲು ಸಹಾಯ ಮಾಡುತ್ತಿರುವ ಸರಕಾರದ ತಂಡಕ್ಕೆ ಒಂದು ನಮನಗಳು..

ಅರೆ  ಕಥೆ ಏನೂ ಅಂದೀರಾ.. ಇದಕ್ಕೆ ಕಥೆಯಿಲ್ಲ.. ಆರಂಭವಿಲ್ಲ.. ಕೊನೆಯಿಲ್ಲ.. ಹೀಗೆ ಇಲ್ಲ ಇಲ್ಲ ಅನ್ನುತ್ತಾ ಸಾಗುವ ಕಥೆ.. ಎಲ್ಲಿಂದ ಬೇಕಾದರೂ ಎಲ್ಲಿಗೆ ಬೇಕಾದರೂ ನಾಲ್ಕು ರಂಗಗಳಲ್ಲಿ ನೆಡೆಯುತ್ತದೆ. ಸುಮಾರು ಎರಡು ತಾಸುಗಳು ಒಂದು ಅಂಗಣದಲ್ಲಿ ನೆಡೆಯುತ್ತದೆ..ನೋಡಲು  ಬಂದವರಿಗೆ ಬೋರಾಗದಂತೆ ಈ  ರೀತಿಯ ಕಥೆಯನ್ನು ಹಿಡಿದಿಡುವುದು ಸುಲಭದ ಮಾತಲ್ಲ.. ಅದರಲ್ಲಿ ಮಲೆಗಳಲ್ಲಿ ಮಧುಮಗಳು ತಂಡವು ಗೆದ್ದಿದೆ.. ಗೆದ್ದಿದೆ ಏನೂ ನೂರನೇ ಪ್ರದರ್ಶನಕ್ಕೆ  ಇಟ್ಟಿರುವುದೇ ಅದಕ್ಕೆ ಸಾಕ್ಷಿ..

*****

ನಾಟಕ ನೋಡಲು ಒಳ್ಳೆಯ ತಂಡವಿದ್ದರೆ ಸೊಗಸು ಎನ್ನುವಾಗ ಹೂಂ ಎಂದವರು ಜಗನ್,, ಮತ್ತೆ ಎಂದಿನಂತೆ ಮಲ್ಲೇಶ್ ಜೊತೆಯಾದರು.. ಅವರಿಬ್ಬರ ಅಜೊತೆ ಸೂರಿ ಮತ್ತು ಮನೆಯಾಕೆ.. ಇನ್ನಷ್ಟು ಮೀಡಿಯಾದವರು ಜೊತೆಯಲ್ಲಿ ಇದ್ದರು.. ಸುಮಾರು ೨೩ ಮಂದಿ ಒಂದೇ ತಾಣದಲ್ಲಿ ಕೂತು ನೋಡಲಾಗಲಿಲ್ಲವಾದರೂ ಪ್ರತಿಯೊಂದು ಅಂಕ ಮುಗಿದಮೇಲೆ ಸಿಕ್ಕು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದದು ವಿಶೇಷವಾಗಿತ್ತು..

ಒಟ್ಟಿನಲ್ಲಿ ಒಂದು ಸುಂದರ ಶನಿವಾರ ರಾತ್ರಿಯನ್ನು ನಿದ್ದೆ ಮಾಡಿ ಕಳೆಯದೆ.. ಒಂದು  ಕಲೆಗೆ ತಮ್ಮ ಅಲ್ಪ ಅಳಿಲು ಸೇವೆ ಮತ್ತು ಕಲಾವಿದರಿಗೆ ಹುಮ್ಮಸ್ಸು.. ಎರಡೂ ಕಾರ್ಯ ನೆರವೇರಿತ್ತು..

ನಾಟಕ ನೋಡಲು ಹೊರಟವರಿಗೆ ಕಲಾಗ್ರಾಮದ ತನಕ ಬಂದು ಶುಭಕೋರಿದ DFR ಅವರಿಗೆ ಧನ್ಯವಾದಗಳು..

*****

ನಾಟಕ ನೋಡಿ ಕಾದಂಬರಿ ಓದಿದ್ದ ನನಗೆ.. ಕಾದಂಬರಿ ಓದಿ ನಾಟಕ ನೋಡಿದ್ದ ನನಗೆ ಸಿಕ್ಕ ಅನುಭವ ಹಾಲು ಜೇನಿನ ಮಿಲನವಾಯಿತು.. ಈ ಕಾದಂಬರಿಯ ಸುವರ್ಣ ಸಂಭ್ರಮದಲ್ಲಿ ಜೀವನದ ಒಂಭತ್ತು ಘಂಟೆಗಳನ್ನು ಕಳೆಯಿರಿ.. ನಲಿಯಿರಿ.. ಮಲೆನಾಡಿನ ಒಂಭತ್ತು ಘಂಟೆಗಳ ಪ್ರವಾಸ ಖಂಡಿತ ಸುಖಕರವಾಗಿರುತ್ತೆ ಮತ್ತು ಆಸಕ್ತಿದಾಯಕವಾಗಿರುತ್ತದೆ..