Saturday, October 25, 2014

ಒಂದೇ ಒಂದು ಅವಕಾಶ ಕೊಡಬೇಕಿತ್ತು - ಶರಪಂಜರ (1971)

ಒಂದು ಭಾನುವಾರದ ರಾತ್ರಿ.. ಉದಯ ವಾಹಿನಿಯಲ್ಲಿ ಶರಪಂಜರ ಚಿತ್ರ ಶುರುವಾಗಿತ್ತು.. ಎಲ್ಲರೂ ನೋಡುತ್ತಾ ಕೂತಿದ್ದೆವು..
ನೋಡುತ್ತಾ ನೋಡುತ್ತಾ ಒಬ್ಬೊಬ್ಬರೇ ನಿದ್ರಾದೇವಿಯ ಮಡಿಲಿಗೆ ಜಾರಿಕೊಂಡಿದ್ದೆವು..

ನನ್ನ ಸೋದರ ಮಾವ ರಾಜ (ಶ್ರೀಕಾಂತ) ಒಬ್ಬನೇ ಇಡಿ ಚಿತ್ರವನ್ನು ಜಾಹಿರಾತುಗಳ ಮಧ್ಯೆ ನೋಡಿ. ಮಲಗಿದಾಗ ಸರಿ ರಾತ್ರಿ ಯಾಗಿತ್ತು..

ಸೋಮವಾರ ಬೆಳಿಗ್ಗೆ ಯತಾವತ್ತು ನಮ್ಮ ನಿತ್ಯ ಕರ್ಮಗಳತ್ತ ಗಮನ ಹರಿಸುತ್ತಾ ಇದ್ದಾಗ.. ನಿಧಾನವಾಗಿ ಎದ್ದ ರಾಜ.. ರೂಮಿನ ಬಾಗಿಲಿನ ಹತ್ತಿರ ನಿಂತು ತನ್ನ ದೇಶಾವರಿ ನಗೆ ಕೊಡುತ್ತಾ.. "ಒಂದೇ ಒಂದು ಅವಕಾಶ ಕೊಡಬೇಕಿತ್ತು" ಎಂದು ಬೆರಳು ತೋರಿಸುತ್ತಾ ಹೇಳಿದ.. ನಮಗೆ ಆ ಬೆಳಗಿನ ಪುರುಸೊತ್ತಿಲ್ಲದ ಹೊತ್ತಿನ ನಡುವೆಯೂ ಹೊಟ್ಟೆ ಹಿಡಿದುಕೊಂಡು ನಗಲಾರಂಬಿಸಿದೆವು..

ಅಲ್ಲಿನ ಮುಂದೆ ಅವನನ್ನು ಮಾತಾಡಿಸುವಾಗಲೆಲ್ಲಾ .. "ರಾಜ ನನಗೆ ಒಂದೇ ಒಂದು ಅವಕಾಶ ಕೊಡಬೇಕಿತ್ತು" ಎಂದು ಶುರು ಮಾಡುತ್ತಿದ್ದೆ..

ಪುಟ್ಟಣ್ಣ ಚಿತ್ರಗಳನ್ನು ನೋಡುವ ಬಗೆ ಹೇಳಿಕೊಟ್ಟ ರಾಜ.. ನಿನಗೆ ಈ ಲೇಖನ ಅರ್ಪಿತ..

* * * * * * * * * * * * * * * 

ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು.. ಕಲಾವಿದನಿಗೆ ಸವಾಲು ಅಂದರೆ ಹುಚ್ಚನ ಪಾತ್ರ ಅಥವಾ ಮಾನಸಿಕ ಸ್ಥಿಮಿತವಿರದ ಪಾತ್ರ.. ಪ್ರೇಕ್ಷಕರಿಗೆ ಹುಚ್ಚು ಹಿಡಿಸದೆ.. ನಟನೆ ಎನ್ನುವ ಒಂದು ದಾರದ ನಡಿಗೆಯ ಮೇಲೆ ಜಾರದೆ ಬೀಳದೆ ಅಭಿನಯಿಸುವ ಒಂದು ಪಾತ್ರ. ಅಂಥಹ ಪಾತ್ರವನ್ನು ಸೃಷ್ಟಿಸಿ ಗೆದ್ದ ಶ್ರೀಮತಿ ತ್ರಿವೇಣಿಯವರ ಕಾದಂಬರಿಯನ್ನು ಬೆಳ್ಳಿ ಪರದೆಯ ಮೇಲೆ ಸ್ವಲ್ಪವೂ ಮಾಸದೆ ತಂದವರು ಪುಟ್ಟಣ್ಣ ಕಣಗಾಲ್.. ಗೆರೆದಾಟದೆ ಒಂದು ವೃತ್ತದ ಪರಿಧಿಯಲ್ಲೇ ಅಭಿನಯವನ್ನು ಹೊರಹೊಮ್ಮಿಸಲು ತಮ್ಮ ಸಾಮರ್ಥ್ಯವನ್ನೆಲ್ಲ ಧಾರೆ ಎರೆದು ಎರಕ ಮಾಡಿಕೊಂಡ ಪಾಕವನ್ನು ಕೊಟ್ಟವರು ಮಿನುಗುತಾರೆ ಕಲ್ಪನಾ. 



ಇಂದಿಗೂ ಮಾನಸಿಕ ತೊಳಲಾಟ ಅಂದ ಕೂಡಲೇ  "ಯಾಕೋ ಶರಪಂಜರ ಕಾವೇರಿ ತರಹ ಆಡ್ತೀಯ" ಎನ್ನುವ ಮಾತು ಈ ಚಿತ್ರ ರತ್ನ ತಂದಿಟ್ಟ ಪರಿಣಾಮ ಎಂದರೆ ಖಂಡಿತ ಇದು ಈ ಚಿತ್ರಕ್ಕೆ ಮತ್ತು ಪುಟ್ಟಣ್ಣ ಅವರಿಗೆ ಕೊಡುವ ದೊಡ್ಡ ಗೌರವ ಎನ್ನುವುದು ನನ್ನ ಅಭಿಮತ. 

ವರ್ಧಿನಿ ಆರ್ಟ್ಸ್ ಪಿಕ್ಕ್ಚರ್ಸ್ ಲಾಂಛನದಲ್ಲಿ ಸಿ ಎಸ್ ರಾಜ ಅವರ ನಿರ್ಮಾಣದಲ್ಲಿ ತೆರೆಗೆ ಬಂದ ಚಿತ್ರ ರತ್ನ ಇದು. ಶ್ರೀಮತಿ ತ್ರಿವೇಣಿಯವರ ಶರಪಂಜರ ಎನ್ನುವ ಕಾದಂಬರಿಯನ್ನು ತೆರೆಗೆ ಅಳವಡಿಸಿದ್ದು ನಿರ್ದೇಶಕ ರತ್ನ ಪುಟ್ಟಣ್ಣ. 

ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಚುಂಚನಕಟ್ಟೆಯ  ಸುಂದರ ಮಡಿಲಿನಲ್ಲಿ ಮೂಡಿ ಬಂದ ಚಿತ್ರಕ್ಕೆ ಛಾಯಾಗ್ರಹಣ ಡಿ ವಿ ರಾಜಾರಾಂ ಅವರದ್ದು, ಸಂಗೀತ ವಿಜಯಭಾಸ್ಕರ್ ಮತ್ತು ಸಾಹಿತ್ಯ ವಿಜಯನಾರಸಿಂಹ ಮತ್ತು ಪುಟ್ಟಣ್ಣ ಅವರ ಅಗ್ರಜ ಕಣಗಾಲ್ ಪ್ರಭಾಕರಶಾಸ್ತ್ರಿ ಅವರದ್ದಾಗಿತ್ತು,  ಉತ್ತಮ ಸಾಹಿತ್ಯಕ್ಕೆ ಅಷ್ಟೇ ಉತ್ತಮ ಕಂಠ ನೀಡಿದವರು ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ.  ಬಂಧನ ಶರಪಂಜರದಲಿ ಬಂಧನ ಎನ್ನುವ ಪುಟ್ಟ ಪುಟ್ಟ ಗೀತೆಯ ಸಾಲುಗಳು ಚಿತ್ರದ ಉತ್ತರಾರ್ಧದಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಅದನ್ನು ಹಾಡಿದವರು ಮೈಸೂರು ದೇವದಾಸ್. 

ಈ ಚಿತ್ರಮಾಡಿದಾಗ ಶ್ರೀಮತಿ ತ್ರಿವೇಣಿಯವರು ಇಹಲೋಕದಲ್ಲಿ ಇರಲಿಲ್ಲ.. ಆದರೂ ಸಂಭಾಷಣೆಯ ಫಲಕದಲ್ಲಿ  ತ್ರಿವೇಣಿ ಜೊತೆಯಲ್ಲಿ ಹಂಚಿಕೊಂಡದ್ದು ಸಾಹಿತಿಗಳಿಗೆ ಪುಟ್ಟಣ್ಣ ಅವರು ಕೊಡುತ್ತಿದ್ದ ಗೌರವ ಸೂಚಿಸುತ್ತದೆ. 

ಮುಂದಿನ ಸೀಟ್ ನಲ್ಲಿ ಕಿತ್ತಳೆ ಹಣ್ಣನ್ನು ಬಿಡಿಸಿ ತಿಂದರು.. ಸಿಪ್ಪೆಯ ರಸ ಹಿಂದಿನ ಸೀಟ್ ತನಕ ಹಾರಿತು ಎಂದು ಕೂಗುವ  ನಾಯಕನ ದೃಶ್ಯದಲ್ಲಿಯೇ ಚಿತ್ರದ ತಿರುಳನ್ನು ಬಿಡಿಸಿ ಇಟ್ಟಿದ್ದಾರೆ.  ಸಿಪ್ಪೆ ಸುಲಿದ ಮೇಲೆ ಹಣ್ಣನ್ನು ತಾನೇ ತಿನ್ನುವುದು ಸಿಪ್ಪೆಯ ಹಂಗೇಕೆ, ಸಿಹಿಯಾದ ವಸ್ತುವಿಗೆ ಯಾವಾಗಲೂ ಕಹಿಯಾದ ಒಂದು ಬೇಲಿ ಇರುತ್ತದೆ ಎನ್ನುವ ತರ್ಕದ ಅರಿವಿಲ್ಲದೆ, ನಾಯಕ ನಾಯಕಿಯನ್ನು ಚಿತ್ರದ ದ್ವೀತಿಯ ಭಾಗದಲ್ಲಿ ತಿರಸ್ಕಾರ ನೋಟದಿಂದ ನೋಡುವುದಕ್ಕೆ ಬುನಾದಿ ಹಾಕಿಕೊಡುತ್ತದೆ.. ಹಾಗೆಯೇ ಮದುವೆಗೆ ಆಹ್ವಾನ ನೀಡುವ ಮುಂಚೆ ನಾಯಕನ ಸ್ನೇಹಿತ ಹುಡುಗಿಯ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯ ಕೇಳಿಲ್ಲ ಅಂದಾಗ ನಾಯಕನೇ "ಸೌಂದರ್ಯ ಇದ್ದ ಕಡೆ ಅಪವಾದ ಇದ್ದೆ ಇರುತ್ತದೆ" ಎನ್ನುತ್ತಾನೆ. 

ಆದರೆ ಕಡೆಗೆ ತರ್ಕವನ್ನೆಲ್ಲ ಬದಿಗಿಟ್ಟು ನಾಯಕಿಯ ಜೀವನದಲ್ಲಿ ಬಲವಂತವಾಗಿ ನಡೆದ ಒಂದು ಅಚಾತುರ್ಯವನ್ನೇ ಮನದಲ್ಲಿಟ್ಟುಕೊಂಡು ಸಿಹಿಯಾದ ಹಣ್ಣನ್ನು ತಿನ್ನದೇ ರಸ ಸಿಡಿಸಿ ಕಣ್ಣಿಗೆ ಉರಿ ಕೊಡುವ ಪರ ಸ್ತ್ರೀ ಬಗ್ಗೆ ಮಾತ್ರ ಗಮನ ಕೊಡುವ ಇಡಿ ಚಿತ್ರಣ ಮೊದಲ ದೃಶ್ಯದಲ್ಲಿ ಮೂಡಿ ಬಂದಿದೆ.  

ಇದೆ ತರಹದ ಮಾತನ್ನು ಪುಷ್ಟಿಕರಿಸುವ ನಾಯಕನ ಸ್ನೇಹಿತ ನೋಡೋ "ಬ್ಯೂಟಿ ಜಾಗದಲ್ಲಿ ಬೀಸ್ಟ್ ಇರುತ್ತೆ" ಎನ್ನುವ ಎಚ್ಚರಿಕೆ ಮಾತಿನಲ್ಲಿ ಚಿತ್ರದ ಇನ್ನೊಂದು ಮುಖವನ್ನು ತೆರೆದಿಡುತ್ತಾರೆ. 

ಈ ತರಹದ ಸಾಂಕೇತಿಕ ದೃಶ್ಯಗಳಿಗೆ ಪುಟ್ಟಣ್ಣ ಚಿತ್ರಗಳು ಅತ್ಯುತ್ತಮ ವೇದಿಕೆ. 

ಸಂಪ್ರದಾಯಗಳು ಎಂಬ ಮಾತು ಬಂದಾಗ ಪುಟ್ಟಣ್ಣ ಅದನ್ನು ಬೆಳ್ಳಿ ತೆರೆಗೆ ತರುವ ರೀತಿ ಖುಷಿ ಕೊಡುತ್ತದೆ. ಈ ಚಿತ್ರದಲ್ಲೂ ಮಡಿಕೇರಿಯ ಕೊಡವ ಸಂಸ್ಕೃತಿಯ ಮದುವೆಯ ಶಾಸ್ತ್ರ, ಹಾಗೆಯೇ ನಾಯಕ ನಾಯಕಿಯ ಮದುವೆಯ ಶಾಸ್ತ್ರ ಸಿಕ್ಕ ಪುಟ್ಟ ಪುಟ್ಟ ಘಳಿಗೆಯಲ್ಲಿ ಅನಾವರಣ ಮಾಡಿಬಿಡುತ್ತಾರೆ. 

ಹಾಗೆಯೇ ಸ್ಥಳ ವೈಶಿಷ್ಟ್ಯವನ್ನು ಸಾರುವ "ಇಡಿ ಎಪ್ಪತೆರಡು ಎಕರೆ ತೋಟದಲ್ಲಿ ಇನ್ನೂರ ಎಪ್ಪತೆರಡು ಬಗೆಯ ಕಿತ್ತಳೆ ಇದೆ" ಎನ್ನುತ್ತಾ ಮಡಿಕೇರಿಯ ಕಿತ್ತಳೆ ತೋಟದ ಬಗ್ಗೆ ಅರ್ಧ ನಿಮಿಷದಲ್ಲಿ ವಿವರ ಕೊಡುತ್ತಾರೆ. 

ನಾಯಕಿ ಕಾವೇರಿ ಅಪ್ಪನ ಪಾತ್ರದಲ್ಲಿ ಅಶ್ವತ್ ಮತ್ತು ಅಮ್ಮ ಆದವಾನಿ ಲಕ್ಷಿ ದೇವಿ ಇಬ್ಬರೂ ಅಪ್ಪ ಅಮ್ಮ ಅಂದರೆ ಹೀಗೆ ಇರಬೇಕು ಎನ್ನುವ ಮೇಲ್ಪಂಕ್ತಿಯನ್ನು ಹಲವಾರು ಚಿತ್ರಗಳಲ್ಲಿ ಅಭಿನಯಸಿದ್ದಾರೆ. 
"ಅರೆ ಸುಂದರಮ್ಮ ಎಲ್ಲಾ ವಿಷಯವನ್ನು ಬರೆದಿದ್ದಾರೆ ಈ ಹಣ್ಣಿನ ವಿಚಾರವನ್ನೇ ಬಿಟ್ಟಿದ್ದಾರೆ"
"ಗುಡುಗು ಬಂದ ಮೇಲೆ ಮಳೆ ಬರುವುದು.. ನಾ ಕೂಗಿದಾಗಲೇ ನೀ ತಣ್ಣಗಾಗುವುದು"
"ನಾ ಅಜ್ಜ ಆದರೂ ಪರವಾಗಿಲ್ಲ.. ನೀ ಅಜ್ಜಿ ಆಗಬೇಡ ಕಣೆ" ಅಂದಾಗ ಆಕೆ "ಅರೆ ಇದೊಳ್ಳೆ ಚೆನ್ನಾಯಿತು.. ನೀವು ಅಜ್ಜ ಆದ ಮೇಲೆ ನಾ ಅಜ್ಜಿ ಆಗೋಲ್ವೇ"
"ಅಯ್ಯೋ ನೀ ನಮ್ಮ ಮೊಮ್ಮಗುವಿಗೆ ಅಜ್ಜಿ ಕಣೆ ನನಗಲ್ಲ"
"ನೋಡು ಹಿರಿಯರು ಒಂದು ಕಾಗದ ನೋಡಿದ ಕೂಡಲೇ ಈ ಅರಿಶಿನ ಬಣ್ಣ ನೋಡಿ ಶುಭ ಸಮಾಚಾರವೆ ಹೊರತು ಬೇರೆ ಏನೂ ಎಲ್ಲ ಎನ್ನುವುದನ್ನು ಎಷ್ಟು ಸುಂದರ ಸಂಪ್ರದಾಯ ಮಾಡಿದ್ದಾರೆ"

ಹೀಗೆ ಒಂದು ಸಂಭಾಷಣೆ ಸರಪಳಿಯ ಮೂಲಕ ಗಂಡ ಹೆಂಡತಿಯ ನಡುವೆ ಸೌಹಾರ್ಧ ಸಂಬಂಧ ಇರಬೇಕು ಎನ್ನುವುದನ್ನು ಪ್ರತಿಪಾದಿಸುತ್ತಾರೆ ನಿರ್ದೇಶಕರು. 

ಇನ್ನೂ ಸಂಭಾಷಣೆಯಲ್ಲಿ ಚುರುಕುತನ.. ಚಿಕ್ಕ ಚೊಕ್ಕ ಸಂದೇಶಗಳು ಕಾಣಸಿಗುತ್ತವೆ. 

"ಟೈಪ್ ರೈಟರ್ ನಲ್ಲಿ A ಒತ್ತಿದರೆ A ಬೀಳುತ್ತದೆ
ಆದರೆ ಹಣೆಬರಹದಲ್ಲಿ A ಒತ್ತಿದರೆ B ಬೀಳುವ ಸಂಭವವೇ ಹೆಚ್ಚು ಎನ್ನುವ ಮಾತಲ್ಲಿ ತಾನೊಂದು ನೆನದರೆ ದೈವ ಒಂದು ಬಗೆಯುತ್ತದೆ ಎನ್ನುವ ಮಾತು 

"ಕಾಫಿ ಬೇಡ,  ಕಾಫಿಯಲ್ಲಿ ಕಾ ಜೊತೆಗೆ "ವೇರಿ" ಬಂದರೆ ಫೀ ನಾ ಕೊಡುತ್ತೇನೆ" ಮದುವೆಯ ಹೊಸತರಲ್ಲಿ ಪತಿ ಪತ್ನಿಯರ ಸರಸ ಸಂಭಾಷಣೆಗೆ ಒಂದು ಝಲಕ್. 

"ತುಲಾ ಮಾಸೇತು ಕಾವೇರಿ ಎನ್ನುವ ಶ್ಲೋಕದಿಂದ ಶುರುವಾಗುವ ಕೊಡಗಿನ ಕಾವೇರಿ ಹಾಡು ಮನಸ್ಸಿಗೆ ಮುದ ನೀಡುತ್ತದೆ, ಕೊಡಗಿನ ವೇಷಭೂಷಣಗಳಲ್ಲಿ ಮಿಂಚುವ ನಾಯಕ ನಾಯಕಿ ಇಷ್ಟವಾಗುತ್ತಾರೆ. ಈ ಹಾಡಿನ ಬಗ್ಗೆ ಮಣಿಕಾಂತ್ ಸರ್ ಅವರ ಹಾಡು ಹುಟ್ಟಿದ ಸಮಯ ಅಂಕಣದಲ್ಲಿ ಹೇಳಿದ್ದರು.. ನಾಯಕ ಕಾವೇರಿಯನ್ನು ಹೊಗಳಿದರೆ.. ನಾಯಕಿ ಕರುನಾಡಿನ ಜೀವನದಿ ಕಾವೇರಿ ಬಗ್ಗೆ ಹಾಡುತ್ತಾರೆ ,  ಎರಡರ್ಥ ಇರುವ ಹಾಡು ಇದು. ಪುಟ್ಟಣ್ಣ ಹೇಳಿ ಬರೆಸಿದರು ಈ ಹಾಡನ್ನು ತಮ್ಮ ಅಣ್ಣ ಕಣಗಾಲ್ ಪ್ರಭಾಕರ ಶಾಸ್ತ್ರಿ ಹತ್ತಿರ ಎಂದು ಓದಿದ್ದೇನೆ.

ಈ ಚಿತ್ರ ಕೆಲವೊಮ್ಮೆ ಹಾಸ್ಯ ರಸ ಉಕ್ಕಿಸುತ್ತದೆ.. ಕೆಲವೊಮ್ಮೆ ದುಃಖದ ಛಾಯೆಯನ್ನು ಹೊದ್ದಿಸಿಬಿಡುತ್ತದೆ . 

ಅಶ್ವತ್ ಅವರ ಮಜ್ಜಿಗೆ ಹುಳಿ ಪುರಾಣ, "ಏನು ಅಳಿಯಂದಿರೆ ನೀವು ಹೊದ್ದಿರುವ ವಸ್ತ್ರ ಮಗುಟ ಮಾರುಕಟ್ಟೆಗೆ ಬಂದಿಲ್ವಾ", 
ನಾಯಕ ನಾಯಕಿಯನ್ನು ಹೆರಿಗೆಗೆ ತವರಿಗೆ ಬಿಡಲು ಬಂದಾಗ ಅಶ್ವತ್ ನಾಯಕನ ಮುಖವನ್ನು ನೋಡಿ ಒಮ್ಮೆ ನಗುತ್ತಾರೆ, ನಾಯಕ ಹಾಗೆ ನಕ್ಕಾಗ ಇನ್ನೊಮ್ಮೆ ನಗುತ್ತಾರೆ.. ಹೀಗೆ ಮುಂದುವರೆಯುತ್ತದೆ, ಕಡೆಗೆ ಮನೆಯಲ್ಲಿ ಇರುವ ಎಲ್ಲರೂ ನಗುತ್ತಾರೆ.. "ಅಂತೂ ಕಾವೇರಿಯನ್ನು ತವರಿಗೆ ಕರೆದುಕೊಂಡು ಬಂದ್ರಿ ಅಳಿಯಂದಿರೆ" ಎಂದಾಗ ಕಕ್ಕಾಬಿಕ್ಕಿಯಾಗುವ ನಾಯಕ.

ಗೆಜ್ಜೆ ಪೂಜೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಶಿವರಾಂ ಈ ಚಿತ್ರದಲ್ಲಿ ಚಿಕ್ಕ ಚೊಕ್ಕ  ಭಟ್ಟರ ಪಾತ್ರವನ್ನು ಮಾಡಿರುವುದು ಆ ಕಾಲದ ಕಲಾವಿದ, ನಿರ್ಮಾಪಕ, ನಿರ್ದೇಶಕರ ನಡುವೆ ಇರುತ್ತಿದ್ದ ಸಾಮರಸ್ಯವನ್ನು ತೋರಿಸುತ್ತದೆ. 

ಅಡಿಗೆ ಭಟ್ಟರ ಪಾತ್ರದಲ್ಲಿ ಶಿವರಾಂ ನಗೆ ಉಕ್ಕಿಸುತ್ತಾರೆ.. ಕಿಟಕಿ ಕಾಮಾಕ್ಷಮ್ಮ, ಇವರು ಏಕೆ ನನ್ನನ್ನು ಹೀಗೆ ಹೀಗೆ ಪಡೆ ನೋಡುವುದು, ಸದಾ ಅಡಿಕೆ, ಎಲೆ, ಹೊಗೆಸೊಪ್ಪು ತಿನ್ನುತ್ತಾ ಅರ್ಧ ಅರ್ಧ ಮಾತಾಡುವುದು.. ಜೊತೆಯಲ್ಲಿ ನಾಯಕಿ ಮಾನಸಿಕ ಸ್ಥಿಮಿತವನ್ನು ಮತ್ತೆ ಕಳೆದುಕೊಳ್ಳಲು ಈ ಪಾತ್ರವು ಕಾರಣ ಆಗುವುದು ಇವೆಲ್ಲಾ ನೋಡುವಾಗ ಒಂದು ಪಾತ್ರದಲ್ಲಿ ಎಲ್ಲಾ ರಸಗಳನ್ನು ತುಂಬಬಲ್ಲರು ಎನ್ನುವುದಕ್ಕೆ ಉತ್ತಮ ನಿದರ್ಶನ., 

ಸಂಧರ್ಭಕ್ಕೆ ತಕ್ಕ ಹಾಡುಗಳು ಮನಸ್ಸೆಳೆಯುತ್ತದೆ 

"ಉತ್ತರ ಧ್ರುವಧಿಂ " ವರಕವಿ ದ ರಾ ಬೇಂದ್ರೆ ಯವರ ಸುಂದರ ಕವನವನ್ನು ದಂಪತಿಗಳ ಮಧುಚಂದ್ರದ, ಮಧುರ ಮೈತ್ರಿಗೆ ಧ್ಯೋತಕವಾಗಿ ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಬಂದರೆ 

ಉಪಮೆಗಳ ಮಹಾಪೂರ "ಬಿಳಿಗಿರಿ ರಂಗಯ್ಯ ನೀನೆ ಹೇಳಯ್ಯ" ಬಿಳಿಗಿರಿ ರಂಗನ ಬೆಟ್ಟದ ಸುಂದರ ತಾಣವನ್ನು ತೋರಿಸುತ್ತಲೇ, ಮನುಜನ ಭಾವನೆಗಳು ಆಸೆಗಳು ಎಲ್ಲವನ್ನು ಪದಗಳಲ್ಲಿ ತುಂಬಿ ಕೊಟ್ಟಿರುವ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಸಾಹಿತ್ಯ ಗಮನ ನೀಡುತ್ತದೆ. ಜೊತೆಯಲ್ಲಿಯೇ ಪಿ ಸುಶೀಲ ಅವರ ಸುಶ್ರಾವ್ಯ ಗಾಯನ.. ಆಹಾ 

ಹಾಡು ಮುಗಿದ ಮೇಲೆ.. ತನ್ನ ಕಚೇರಿಯ ಮಾದಕ ಬೆಡಗಿ ವಿಮಲಾ ಬಗ್ಗೆ ನಾಯಕ ಹೇಳುವ ಮಾತು ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ" ಎನ್ನುವ ನಾಯಕ ಕಡೆಗೆ ಆ ಮೂರು ಕಾಸಿಗೆ ಜೋತು ಬೀಳುವುದು ಮನುಜನ ಅವಕಾಶ ಅವಲಂಬಿತ ಮನಸ್ಸಿನ ಬಗ್ಗೆ ಹೇಳುತ್ತದೆ. 

ಇಡಿ ಚಿತ್ರವನ್ನು ಒಂದು ಬಂಗಾರದ ಚೌಕಟ್ಟಿನಲ್ಲಿ ಪುಟ್ಟಣ್ಣ ಕಟ್ಟಿಕೊಟ್ಟರೆ.. ಆ ಚೌಕಟ್ಟಿನೊಳಗೆ ಮುತ್ತು ರತ್ನಗಳ ಹಾಗೆ ಕೂತು ತಮ್ಮ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಿಸಿಕೊಂಡವರು ಈ ಚಿತ್ರದ ಎಲ್ಲಾ ಪಾತ್ರಧಾರಿಗಳು. ಪ್ರತಿ ಪಾತ್ರಕ್ಕೂ ಅದರದೇ ಆದ ಚೌಕಟ್ಟು, ಪ್ರಾಮುಖ್ಯತೆ ಇದೆ. 

ಗಂಗಾಧರ್ ಚೆಲುವಾಂತ ಚಿನ್ನಿಗನ ಹಾಗೆ ಕಂಗೊಳಿಸುತ್ತಾ, ಪ್ರೇಮಯಾಚನೆ ಮಾಡುವುದು, ಮಾವನ ಮನೆಯಲ್ಲಿ ಪಜೀತಿಗೆ ಒಳಗಾಗುವುದು, ನಾಯಕಿ ತನ್ನ ಮಿತಿಯನ್ನು ಕಳೆದುಕೊಂಡಾಗ ತೊಳಲಾಡುತ್ತಾ ಅದರಿಂದ ಹೊರಗೆ ಬರಲಾರದೆ ಅನ್ಯ ಮಾರ್ಗ ಹುಡುಕುವುದು ಈ ದೃಶ್ಯಗಳಲ್ಲಿ ಅಭಿನಯ ನಿಜವಾಗಿದೆ. 

ಅಶ್ವತ್ ಮತ್ತು ಆದವಾನಿ ಲಕ್ಷ್ಮೀದೇವಿ ತಮ್ಮ ಮಕ್ಕಳ ಬಗ್ಗೆ ಕಾಳಜಿ ತೋರಿಸುತ್ತಾ ಅವರಿಬ್ಬರ ನಡೆಯುವ ಸರಸ ಸಂಭಾಷಣೆ 
ಮುದ ನೀಡುತ್ತದೆ. 

ಶರಪಂಜರ ಅಯ್ಯಂಗಾರ್ ಎಂದೇ ಹೆಸರಾದ ಪಾತ್ರಧಾರಿ ಹೇಳುವ ಮಾತು "ಪುರುಷ-ಪ್ರಕೃತಿ ಎರಡು ಒಂದೇ ಕಡೆ ಇದ್ದ ಮೇಲೆ ಸಮಸ್ಯೆ ಉದ್ಭವ" ಎಷ್ಟು ನಿಜ ಈ ಮಾತು 

ಮೋಹ ಪಾಶಕ್ಕೆ ತುತ್ತಾಗಿ ಒಮ್ಮೆಯಾದರೂ ನಾಯಕ ನನ್ನವನಾದರೆ ಸಾಕು ಎನ್ನುವ ವ್ಯಾಮೋಹಿ ಪಾತ್ರದಲ್ಲಿ ರಂಗಭೂಮಿಯ ಕಲಾವಿದೆ ಚಿಂದೋಡಿ ಲೀಲಾ ಗಮನ ಸೆಳೆಯುತ್ತಾರೆ. 



ಇನ್ನೂ ಇಡಿ ಚಿತ್ರವನ್ನು ಅಭಿನಯದಲ್ಲಿಯೇ ನುಂಗಿದ ಕಲ್ಪನಾ ಅವರ ಬಗ್ಗೆ ಹೇಳಲೇ ಬೇಕು
  • ಹಿತವಾದ ಮಧುರವಾದ ಸಂಭಾಷಣೆ ಆರಂಭಿಕ ದೃಶ್ಯಗಳಲ್ಲಿ 
  • ಹಣ್ಣು ಕೊಟ್ಟೆಯೋ ಹೃದಯ ಕೊಟ್ಟೆಯೋ ಅನ್ನುವಾಗ ನಡುಗುವ ಪ್ರೀತಿ ತುಂಬಿದ ಮಾತುಗಳು 
  • ತನ್ನ ಅಪ್ಪ ನಾಯಕ ನಾಯಕಿಯ ಪ್ರೇಮದ ಬಗ್ಗೆ ವಿಚಾರಿಸಿದಾಗ ಗಾಬರಿಗೊಳ್ಳುವ ಅಭಿನಯ 
  • ಮದುವೆಯಾಗಿ ಪತಿರಾಯನ ಮನೆಗೆ ಬಂದ ಮೇಲೆ ತನ್ನ ಅತ್ತೆಗೆ ಪ್ರೀತಿಯಿಂದ ತಂದು ಕೊಟ್ಟ ರೇಡಿಯೋ ಬಗ್ಗೆ ಹೇಳುವಾಗ ಪುಟ್ಟ ಮಗುವಿನ ಹಾಗೆ ಕುಣಿಯುವ ದೃಶ್ಯ
  •  ಶ್ರೀರಂಗಪಟ್ಟಣದ ನದಿ ತೀರದಲ್ಲಿನ ಅಭಿನಯ ಕಣ್ಣೀರು ತರೆಸುತ್ತದೆ. ಸ್ತ್ರೀಯರಿಗೆ ಪ್ರತಿ ತಿಂಗಳೂ ಒಂದು ಮರು ಹುಟ್ಟು ಜೊತೆಯಲ್ಲಿ ಗರ್ಭಿಣಿ ಸ್ಥಿತಿಯಿಂದ ಪಾರಾಗಿ ಹೊರಬರುವುದು ನಿಜಕ್ಕೂ ಇನ್ನೊಂದು ಮರು ಜನ್ಮವೇ ಎಂಬ ಮಾತು ಈ ದೃಶ್ಯದಲ್ಲಿದೆ. ಬರಿ ಭೋಗದ ವಸ್ತುವಾಗಿ ಬಿಂಬಿತವಾಗುವ ಹೆಣ್ಣಿನ ಪಾತ್ರವನ್ನು ಎಷ್ಟು ನಾಜೂಕಾಗಿ ಅವರ ಮನಸ್ಸು ಎಷ್ಟು ನವಿರು.. ಅದಕ್ಕೆ ಸ್ವಲ್ಪ ಘಾಸಿಯಾದರೂ ಮುಂದಿನ ಜೀವನ ನರಕ ಎನ್ನುವ ಭಾವನ್ನು ಈ ಚಿತ್ರ ಹೊರಹಾಕುತ್ತದೆ. 
  • ಅಡಿಗೆ ಭಟ್ಟನ ಜೊತೆಯಲ್ಲಿ ಸಂಭಾಷಣೆ, ಕಿಟಕಿ ಕಾಮಾಕ್ಷಮ್ಮ ತಮ್ಮನ್ನು ತಿರಸ್ಕಾರ ಮಾಡುವಾಗ, ಮಹಿಳ ಸಮಾಜ ಇವರನ್ನು ಹುಚ್ಚಿ ಎಂದಾಗ, ಶೆಟ್ಟರ ಅಂಗಡಿ, ಶಾಲೆಯಲ್ಲಿ ಕಡೆಗೆ ತನ್ನ ಅಪ್ಪ ಮಾತಿಗೆ "ಅದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಾರಾ ಹುಚ್ಚಿ ಹುಚ್ಚಿ" ಎಂದಾಗ ಅವರ ಅಭಿನಯ ವಾಹ್ ಎನ್ನಿಸುತ್ತದೆ 
  • ಇನ್ನೂ "ಹದಿನಾಲ್ಕು ವರುಷ ವನವಾಸದಿಂದ" ವಿಜನಾರಸಿಂಹ ಅವರ ಸಾಹಿತ್ಯಕ್ಕೆ ಅಮೋಘ ಅಭಿನಯ, ತನ್ನ ಕಥೆಯನ್ನು ಸೀತೆಗೆ ಹೋಲಿಸಿಕೊಂಡು ಅಳುತ್ತಾ ಹಾಡುವಾಗ ಕಲ್ಲು ಕರಗುತ್ತದೆ 
  • "ಸಂದೇಶ ಮೇಘ ಸಂದೇಶ" ಹಾಡಿನಲ್ಲಿ ಮಕ್ಕಳ ಜೊತೆಯಲ್ಲಿ ಹಾಡುತ್ತಾ ಕುಣಿಯುತ್ತಾ ತಾನು ಮತ್ತೊಮ್ಮೆ ಹೊಸಬಾಳಿನತ್ತ ಹೆಜ್ಜೆ ಇಡುತ್ತಿದ್ದೇನೆ ಎನ್ನುವ ವಿಜಯನಾರಸಿಂಹ ಅವರ ಸಾಹಿತ್ಯಕ್ಕೆ ತೋರುವ ಭಾವ ಪೂರ್ಣ ನಟನೆ 
  • ತನಗೆ ಹುಚ್ಚು ಹಿಡಿದಿದೆ ಎಂದು ನಿಂತು ಹೋಗುವ ತನ್ನ ತಂಗಿಯ ಮದುವೆಗೆ ಪ್ರಯತ್ನಿಸುವ ದೃಶ್ಯ 
  • ಬಹುಕಾಲ ನೆನಪಲ್ಲಿ ಉಳಿಯುವ ಚಿತ್ರದ ಅಂತಿಮ ದೃಶ್ಯ.. ಅಬ್ಬಾ ನೋಡುಗರ ಎದೆಯನ್ನು ಕಣ್ಣೀರಿನಿಂದ ತೋಯಿಸುತ್ತದೆ. ಎಲ್ಲೋ ಕೇಳಿದ ನೆನಪು.. ಆ ದೃಶ್ಯ ಮುಗಿದ ಮೇಲೂ ಸ್ವಲ್ಪ ಹೊತ್ತು ಅದೇ ಭಾವದಲ್ಲಿ, ಅದೇ ಗುಂಗಿನಲ್ಲಿ  ಕಲ್ಪನಾ ಇದ್ದರೆಂದು.. ಕೆಲವೊಮ್ಮೆ ನೋಡುಗರನ್ನೇ ತಲ್ಲಣ ಗೊಳಿಸುವ ಆಭಿನಯ ಮಾಡಿದ ಅವರನ್ನು ಕೆಲವು ಘಂಟೆಗಳು ಕಾಡಿದ್ದು ಸುಳ್ಳಲ್ಲ ಅನಿಸುತ್ತದೆ. 
ಈ ಚಿತ್ರದ ಸಂಗೀತಬಗ್ಗೆ ಎರಡು ಮಾತೆ ಇಲ್ಲ.. ಪುಟ್ಟಣ್ಣ ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್ ತಮ್ಮೆಲ್ಲ ಪ್ರತಿಭೆಯನ್ನು ಅವರ ಚಿತ್ರಗಳಿಗೆ ಮೀಸಲಿಟ್ಟಿದ್ದರು. ಪ್ರತಿ ಹಾಡು, ಹಿನ್ನೆಲೆ ಸಂಗೀತ ವಿಭಿನ್ನವಾಗಿರುತ್ತಿತ್ತು. ಈ ಚಿತ್ರದ ಎಲ್ಲಾ ಹಾಡುಗಳು ಇಷ್ಟವಾಗುತ್ತವೆ. 

ಪುಟ್ಟಣ್ಣ ಈ ಚಿತ್ರವನ್ನು ತಮ್ಮ ಎಲ್ಲಾ ಚಿತ್ರಗಳಂತೆ ತಮ್ಮ ಮನಕ್ಕೆ ಹತ್ತಿರವಾಗಿ ಚಿತ್ರೀಕರಿಸಿದ್ದಾರೆ. ಪ್ರತಿಯೊಂದು ದೃಶ್ಯಕ್ಕೆ ಅವರು ಪಟ್ಟ ಪರಿಶ್ರಮ ಎದ್ದು ಕಾಣುತ್ತದೆ. ಯಾವುದನ್ನು ಅವರು ಗೌಣ ಮಾಡಿಲ್ಲ. ಸುಂದರ ಹೊರಾಂಗಣ, ಒಳಾಂಗಣ, ಮನೆಯಲ್ಲಿನ ಎಲ್ಲಾ ಪದಾರ್ಥಗಳು ಅವರ ಶ್ರಮಕ್ಕೆ ಜೊತೆಯಾಗಿ ನಿಂತಿವೆ. 

"ಸಂದೇಶ ಮೇಘ ಸಂದೇಶ" ಎನ್ನುವ ಹಾಡಿಗೆ ನಾಯಕ ನಾಯಕಿಯ ಪ್ರೇಮಾಂಕುರ ಮೂಡಲು ಸಹಾಯ ಮಾಡುವ ಕಿತ್ತಳೆ ಹಣ್ಣನ್ನೇ ರಾಶಿ ರಾಶಿಯಾಗಿ ಸುರಿಸಿ ಚಿತ್ರೀಕರಿಸುವ ಜಾಣ್ಮೆ ಪುಟ್ಟಣ್ಣ ಅವರದು. 

ಮೊದಲ ರಾತ್ರಿ ದೃಶ್ಯದಲ್ಲಿ ಹೂವು, ದೀಪ, ಅಗರಬತ್ತಿಯ ಧೂಪ ತೋರಿಸುವ ಜಾಣ್ಮೆ.. ಹೂವಿನಂತ ನಾಯಕಿಯ ಮನಸ್ಸು, ಒಂದು ಸಂಶಯ ಎನ್ನುವ ಧೂಪದ ಹೊಗೆಗೆ ಸಿಕ್ಕಿ, ದೀಪ ಜ್ವಾಲೆಯಾಗಿ ನಾಯಕಿಯ ಬಾಳನ್ನೇ ಸುಡುವ ಸಾಂಕೇತಿಕ ದೃಶ್ಯ. 


ಮಾನಸಿಕ ಚಿಕಿತ್ಸಾಲಯವನ್ನು ಪರಿಚಯಿಸುತ್ತಾ ಅವರು ಆಡುವ ಕೆಲ ಮಾತುಗಳು ಗಮನ ಸೆಳೆಯುತ್ತದೆ. 

"ನಿಮಗೆ ಕಾರಣ ಮುಖ್ಯವೋ ಅವಳು ಗುಣವಾಗುವುದು ಮುಖ್ಯವೋ" ಎನ್ನುವ ಮಾತುಗಳನ್ನು ವೈದ್ಯರ ಮೂಲಕ ಹೇಳಿಸಿ ಪ್ರತಿ ಘಟನೆಗೂ/ಸಮಸ್ಯೆಗೂ ಒಂದು ಕಾರಣ ಇರುತ್ತದೆ ಆದರೆ ಕಾರಣ ಹುಡುಕಿಕೊಂಡು ಹೋದಾಗ ಮೂಡುವ ಭಾವನೆ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಅದರ ಬದಲು ಅದಕ್ಕೆ ಉತ್ತರ ಹುಡುಕಿಕೊಂಡು ನಿವಾರಣೆ ಮಾಡಿಕೊಂಡು ಹೊಸ ಹೆಜ್ಜೆ ಇಡಿ ಎನ್ನುವ ಸಂದೇಶ ಸಾರುವ ಈ ಚಿತ್ರ.. ಚಿತ್ರಜಗತ್ತಿನಲ್ಲಿಯೇ ಒಂದು ಮಹೋನ್ನತ ಕೃತಿ, 

ಇದಕ್ಕೆ ಕಾದಂಬರಿಗಾರ್ತಿ ಶ್ರೀಮತಿ ತ್ರಿವೇಣಿ ಅವರಿಗೂ ಮತ್ತು ಪುಟ್ಟಣ್ಣ ಕಣಗಾಲ್ ಅವರಿಗೂ ಸಹಸ್ರ ಧನ್ಯವಾದಗಳು. 

Monday, October 20, 2014

ಮನದಲ್ಲೇ ಹೆಜ್ಜೆ ಇಟ್ಟು ಕಾಡುವ "ಗೆಜ್ಜೆ ಪೂಜೆ"! (1969)

ಮೊದಲಿಗೆ ಪುಟ್ಟಣ್ಣ ಕಣಗಾಲ್ ಕ್ಷಮೆ ಕೇಳಬೇಕು.. ಅವರು ಚಿತ್ರಿಸಿದ ಎಲ್ಲಾ ಚಿತ್ರಗಳು ಮಾಣಿಕ್ಯವೇ ಆದರೂ, ನನಗೆ ತುಂಬಾ ಹಿಡಿಸಿದ ಚಿತ್ರಗಳನ್ನು ಮತ್ತೆ ಮತ್ತೆ ನೋಡಿ ಅವರ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನ ಬೆಳೆಸಿಕೊಂಡಿದ್ದೆ. ಗೆಜ್ಜೆ ಪೂಜೆ ಚಿತ್ರ ಮಹಾನ್ ಕೃತಿ ಎಂದು ಎಲ್ಲರ ಮೆಚ್ಚುಗೆಗಳಿಸಿದ್ದರೂ, ಅನೇಕ ಬಾರಿ ಈ ಚಿತ್ರ ನೋಡಿದ್ದರೂ ಯಾಕೋ ನನಗೆ ಇಷ್ಟವಾದ ಚಿತ್ರಗಳೇ ಕಣ್ಣ ಮುಂದೆ ಕುಣಿಯುತ್ತಿದ್ದವು.  

ಅವರ ಕನ್ನಡದ ಎಲ್ಲಾ ಚಿತ್ರಗಳ ಬಗ್ಗೆ ಬರೆಯಲು ಶುರುಮಾಡಿದಾಗ, ಮಾಡಿಕೊಂಡ ಒಂದು ನಿಯಮ, ಬರೆಯುವ ಮೊದಲು ಮತ್ತೊಮ್ಮೆ ಆ ಚಿತ್ರವನ್ನು ನೋಡಬೇಕು, ಚಿಕ್ಕ ಪುಟ್ಟ ಟಿಪ್ಪಣಿ ಮಾಡಿಕೊಂಡು, ಆ ಚಿತ್ರದ ಬಗ್ಗೆ ಬರೆಯಬೇಕು.  

ಅಬ್ಬಾ, ಮೊದಲ ದೃಶ್ಯದಿಂದ ಕಡೆಯ ತನಕ ನೋಡಿದ ಮೇಲೆ, ಸೂಕ್ಷ್ಮವಾಗಿ ಗಮನಿಸು ಎನ್ನುತ್ತಾ ನನ್ನ ಮನಸ್ಸು ಇನ್ನಷ್ಟು ಒಳಹೋಗಲು ಅಣು ಮಾಡಿಕೊಟ್ಟಿತು. ಹಲವಾರು ದೃಶ್ಯಗಳಲ್ಲಿ ಕಣ್ಣಲ್ಲಿ ನೀರು ತುಂಬಿ, ಮೊದಲೇ ಕಪ್ಪು ಬಿಳುಪಿನ ಚಿತ್ರ ಇನ್ನಷ್ಟು ಮಂಜಾಯಿತು. 


ಗುರುಗಳೇ ಪುಟ್ಟಣ್ಣ ಕಣಗಾಲ್ ನಿಮಗೆ ನನ್ನ ಅನಂತ ಧನ್ಯವಾದಗಳು ಇಂತಹ ಸೂಕ್ಷ್ಮ ವಿಚಾರವನ್ನು ಅಶ್ಲೀಲತೆಯ ಸೊಂಕಿಲ್ಲದೆ, ಕೆಟ್ಟ ಪದಗಳ ಬಳಕೆಯಿಲ್ಲದೆ, ಎಲ್ಲಾರು ಒಟ್ಟಾಗಿ ಕೂತು ನೋಡುವ ಚಿತ್ರ ರತ್ನವನ್ನು ಕೊಟ್ಟಿದ್ದಕ್ಕೆ. 

ಒಂದು ವಿಚಿತ್ರ ವಿಚಾರವನ್ನು ಎರಡು ರೀತಿಯಲ್ಲಿ ಹೇಳಬಹುದು.. ಒಂದು ಹೇಳಬಾರದ ರೀತಿಯಲ್ಲಿ.. ಇನ್ನೊಂದು ಹೇಳಬಹುದಾದ ರೀತಿಯಲ್ಲಿ.. ಪುಟ್ಟಣ್ಣ ಯಾವಾಗಲು ಎರಡನೇ ದಾರಿಯಲ್ಲಿ ಹೊರಳಿದವರು ಮತ್ತು ತಮ್ಮ ಛಾಪನ್ನು ಮೂಡಿಸಿದವರು. 

* * * * * * * * * * * * * * * * * * * * * * * * * * * *

ಒಂದು ಚಿತ್ರದ ಆರಂಭದಲ್ಲೇ ಎಷ್ಟು ನಾಜೂಕಾಗಿ ಹೇಳಬೇಕಾದ ವಿಷಯವನ್ನು ಮಾತಿನ ರೂಪದಲ್ಲಿಯೂ, ದೃಶ್ಯರೂಪದಲ್ಲಿಯೂ ಹೇಳಿ ತಮ್ಮ ಮುದ್ರೆಯನ್ನು ಒತ್ತಿ ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಹೇಳಬಯಸುವ ಸಮಸ್ಯೆ ಮತ್ತು ಅದರ ಪರಿಣಾಮ ಎಲ್ಲವನ್ನೂ ಸ್ಥೂಲವಾಗಿ ಚಿತ್ರಿಸಿದ್ದಾರೆ. 

ಪುಟ್ಟಣ್ಣ ಅವರ ಮಧುರ ಧ್ವನಿಯಲ್ಲಿ ಪರಿಚಯ ಮಾಡಿಕೊಳ್ಳುವ ಚಿತ್ರ ಹಿನ್ನೆಲೆಯಲ್ಲಿ ಆ ಸಮಸ್ಯೆಯನ್ನು ಹೇಳುತ್ತಾ ಹೋಗಿ ಪಾತ್ರವರ್ಗವನ್ನು ತೋರಿಸುತ್ತಾ ಹೋಗುತ್ತಾರೆ. 

ಸಮಸ್ಯೆಯ ಮೇಲೆ ಬೆಳಕು ಚೆಲ್ಲಲು ತೆಗೆದ ಈ ಚಿತ್ರವನ್ನು ತಯಾರಿಸಿದ್ದು "ಚಿತ್ರಜ್ಯೋತಿ" ಲಾಂಛನದಲ್ಲಿ ಆಹಾ ಎಂಥ ಸುಂದರ ಲಾಂಛನ., ರಾಶಿ ಸಹೋದರರು ಎಂದೇ ಪ್ರಖ್ಯಾತರಾದ ರಾಮ ಮೂರ್ತಿ ಮತ್ತು ನಟ ಶಿವರಾಂ ಅವರ ಪಾಲುದಾರಿಕೆಯಲ್ಲಿ ಮೂಡಿಬಂತು ಈ ಚಿತ್ರ. 

ಶ್ರೀಮತಿ ಎಂ ಕೆ ಇಂದಿರಾರವರ ಇದೆ ಹೆಸರಿನ ಕಾದಂಬರಿ ಅಂದಿನ ಜನಪ್ರಿಯ "ಪ್ರಜಾಮತ" ವಾರ ಪತ್ರಿಕೆಯಲ್ಲಿ ಧಾರಾವಾಹಿ ಹರಿದು ಜನರ ಮನಸ್ಸನ್ನು ಸೂರೆಗೊಂಡಿತ್ತು. ಅವರ ಈ ಕಥೆಗೆ ನವರತ್ನ ರಾಮ್ ಅವರ ಸೊಗಸಾದ ಸಂಭಾಷಣೆ,  ಶ್ರೀಕಾಂತ್ ಅವರ ಸುಂದರ ಛಾಯಾಗ್ರಹಣ ಒದಗಿ ಬಂದರೆ, ವಿಜಯನಾರಸಿಂಹ, ಆರ್ ಏನ್ ಜಯಗೋಪಾಲ್, ಚಿ ಉದಯಶಂಕರ್ ಅವರ ಸುಲಲಿತ ಸಾಹಿತ್ಯ ಹೊಂದಿದ್ದ ಹಾಡುಗಳಿಗೆ ಸಂಗೀತದ ಚೌಕಟ್ಟು ಕೊಟ್ಟವರು ವಿಜಯಭಾಸ್ಕರ್.  ಇಂಥಹ ಒಂದು ಸುಂದರ ತಂಡದ ಸಾರಥ್ಯವಹಿಸಿ ಚಿತ್ರಕಥೆ ಬರೆದು ದಿಗ್ದರ್ಶನ ಮಾಡಿದ ಪುಟ್ಟಣ್ಣ ಸದಾ ಸ್ಮರಣೀಯರು. 

ಈ ಚಿತ್ರದಿಂದ ಲೋಕನಾಥ್ ಮತ್ತು ಆರತಿ ಬೆಳ್ಳಿತೆರೆಗೆ ಪರಿಚಯವಾಗುತ್ತಾರೆ.  

ಲೀಲಾವತಿ ಅಭಿನಯ, ನೋವನ್ನು ನುಂಗಿಕೊಂಡು, ನಗಲಾರದೆ, ಜೀವನ ದೂಕುವ ಶೋಷಿತೆಯ ಪಾತ್ರದಲ್ಲಿ ಮನ ಕಲಕುತ್ತಾರೆ. "ಮಗುವೆ ನಿನ್ನ ಹೂ ನಗೆ ಒಡವೆ ಎನ್ನ ಬಾಳಿಗೆ" ಎನ್ನುವ ಹಾಡಿನಲ್ಲಿ ಅವರ ಅಭಿನಯಕ್ಕೆ ಶಕ್ತಿ ತುಂಬುವುದು ಜಾನಕಿಯಮ್ಮನವರ ಗಾಯನ, ನೋವು ತುಂಬಿಕೊಂಡ ಮನಕ್ಕೆ ಪದಗಳನ್ನು ತುಂಬಿಕೊಟ್ಟ ವಿಜಯನಾರಸಿಂಹ ಅವರ ಸಾಹಿತ್ಯ ಆಹಾ ಮನಕ್ಕೆ ಛತ್ರಿ ಬೇಕೋ ಏನೋ ಅನ್ನಿಸುತ್ತದೆ. ಅಷ್ಟು ಗಾಢವಾಗಿದೆ  ಆ ಗೀತ ದೃಶ್ಯ. 

ಅವರು ಮಗುವಿಗೆ ಹೇಳುವ ಮಾತು "ನೀ ಬದುಕಲು.. ನಾ ಬದುಕಿದ್ದು ಸತ್ತಂತೆ ಬದುಕುತ್ತೇನೆ" ಎನ್ನುವಾಗ ನೋವಿದ್ದರೂ, ತನ್ನ ಮುಂದಿನ ಪೀಳಿಗೆಯನ್ನು ಉಳಿಸಲು ಸೋಲುವ ಮನಸ್ಸು, ಮತ್ತು "ಹಂಚಿ"ಕೊಂಡ ಸಾಹುಕಾರ ಸತ್ತಾಗ ಅಳದೆ ನಾ ಅಳೋಲ್ಲ ಎಂದು ಹೇಳುವಾಗ ಮುಖದಲ್ಲಿ ತೋರುವ ಭಾವನಾ ರಹಿತ ನೋಟ, ಬರಿ ತನುವನ್ನು ಮಾತ್ರ ಹಂಚಿಕೊಂಡ, ಆದರೆ ಮನವನ್ನು ಮುಟ್ಟದ ಆ ಸಾಹುಕಾರರ ಬಗೆಗಿನ ತಿರಸ್ಕಾರ ಸೂಪರ್ ಎನ್ನಿಸುತ್ತದೆ. 

ನೋವಿದ್ದರೂ, ತನ್ನ ಮಗಳ ಜನ್ಮಕ್ಕೆ ಕಾರಣವಾದ ಮನುಷ್ಯ ಸಿಕ್ಕರೂ, ಅವರ ಒಳಿತಿಗಾಗಿ, ಸಮಾಜದಲ್ಲಿ ಅವರಿಗಿರುವ ಹೆಸರಿಗೆ ಮಸಿಬಳಿಯಬಾರದು ಎನ್ನುವ ಮಾತು, ಅದರ ಜೊತೆಯಲ್ಲಿಯೇ ಆ ಮನುಷ್ಯ ಹೇಳುವ ಮಾತು "ನೋಡು ನಾವಿಬ್ಬರು ಅರ್ಧ ಆಯುಷ್ಯ ಕಳೆದಾಗಿದೆ ಇನ್ನೇನಿದ್ದರೂ ಮಕ್ಕಳ ಭವಿಷ್ಯದ ಕಡೆಗೆ ಮಾತ್ರ ನಮ್ಮ ಗಮನ" ಎನ್ನುವ ಮಾತಿನಲ್ಲಿ ಹಿಂದೆ ನಡೆದ ಘಟನೆಯನ್ನು ಅಳಿಸಿ, ಮರೆತು ಮುಂದಕ್ಕೆ ಹೆಜ್ಜೆ ಇಡಿ ಎನ್ನುವ ಸಂದೇಶ ತಾಕುತ್ತದೆ. 

ಕಥೆಗಾರ್ತಿ, ಸಂಭಾಷಣಕಾರ, ನಿರ್ದೇಶಕ ಇವರ ಸಮ್ಮಿಳಿತದಲ್ಲಿ ಮೂಡಿ ಬಂದ ಈ ದೃಶ್ಯ ಅಮೋಘ ಅಮೋಘ.

ಮಗಳು ಎದುರು ಮನೆಯ ಮಗಳ ಮದುವೆಯಲ್ಲಿ ಹಾಡುವ ಹಾಡು "ಪಂಚಮ ವೇದ ಪ್ರೇಮದ ನಾದ" ಜಾನಕಿಯಮ್ಮ ಅವರ ಅಮೋಘ ಧ್ವನಿಯಲ್ಲಿ ಕಿವಿಯಿಂದ ಹೃದಯಕ್ಕೆ ಬಂದು ನಿಂತರೆ, ಸರಳ ಸಾಹಿತ್ಯ ವಿಜಯನಾರಸಿಂಹ ಅವರ ಲೇಖನಿಯಿಂದ ಹೊರಮ್ಮುವ ಪದಗಳಿಗೆ ಸಂಗೀತ ಬರಸೆಳೆದು ಅಪ್ಪಿಕೊಳ್ಳುತ್ತದೆ. 

ಇದೆ ಹಾಡಿನಲ್ಲಿ ಮಗಳ ಭವಿಷ್ಯ ಎತ್ತರಕ್ಕೆ ಏರುತ್ತದೆ ಎನ್ನುವ ಒಂದು ಸಣ್ಣ ಭರವಸೆ ಲೀಲಾವತಿಗೆ ಸಿಕ್ಕಾಗ ಅದನ್ನು ದೃಶ್ಯದಲ್ಲಿ ತೋರಿಸಲು ಕ್ಯಾಮೆರಾ ಚಾಲನೆಯನ್ನು ಹಾಗೆ ಮೇಲಕ್ಕೆ ಏರಿಸುತ್ತಾರೆ. ಇದು ಒಂದು ಅದ್ಭುತ ದೃಶ್ಯ ಕಲ್ಪನೆ. 

ಈ ಹಾಡಿನ ನಂತರ ಕೆಲವೇ ದೃಶ್ಯಗಳ ಬಳಿಕ ಮತ್ತೊಮ್ಮೆ ಮೂಡಿ ಬರುತ್ತದೆ "ಪಂಚಮ ವೇದ ಪ್ರೇಮದ ನಾದ" ಈ ಬಾರಿ ಜೇನು ಸ್ವರದ ಪಿ ಬಿ ಎಸ್ ಸಿರಿ ಕಂಠದಲ್ಲಿ.. 

ಎಲ್ಲಾ  ಪರಿಸ್ಥಿತಿಯಲ್ಲೂ ಅತಿ ಕ್ರಮಣ ಮಾಡುವುದಿಲ್ಲ ಎನ್ನುವ ಧರ್ಮೇಚ ಅರ್ಥೆಚ ಕಾಮೇಚ ನಾತಿ ಚರಿತವ್ಯಃ ಶ್ಲೋಕಕ್ಕೆ   ಧರ್ಮೇಚ ಅರ್ಥೆಚ ಕಾಮೇಚ ನಾತಿಚರಾಮಿ ಎಂಬ ಉತ್ತರ, ಭರವಸೆ ನೀಡುವ ನಾಯಕನ ಮಾತಿಗೆ ಸಂತಸದಿಂದ ನಲಿದಾಡುವ ನಾಯಕಿ ಹಾಡುವ ಹಾಡೇ " ಗಗನವು ಎಲ್ಲೋ ಭೂಮಿಯೂ ಎಲ್ಲೋ" ಎರಡು ಕಾರಣದಿಂದ ಗಮನ 
ಸೆಳೆಯುತ್ತದೆ. 

೧. ಗಗನವು ಎಲ್ಲೋ ಭೂಮಿಯು ಎಲ್ಲೋ ಎನ್ನುವಾಗ ಕ್ಯಾಮೆರಾವನ್ನು ಗರ ಗರ ಎಂದು ಪೂರ್ತಿ ತಿರುಗಿಸಿ ತೋರಿಸುವ ರೀತಿ 
೨. ಆ ಆ ಆಆಅ ಆಆಅ ಆಆ ಆಆಆಅ ಎನ್ನುವಾಗ ಉಸಿರು ಕಟ್ಟಿ ಜಾನಕಿಯಮ್ಮ ಹೇಳುವ ತಾಕತ್.. ರೋಮಾಂಚನ ಗೊಳಿಸುತ್ತದೆ. 

ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಬೆಳೆಸಬೇಕು ಎನ್ನುವ ಅದಮ್ಯ ಉತ್ಸಾಹವಿದ್ದ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಮದುವೆ ಸಮಾರಂಭಗಳಲ್ಲಿ ಬರುವ ಆಚಾರ ವಿಚಾರಗಳನ್ನು ಶಾಸ್ತ್ರೋಕ್ತವಾಗಿ ತೋರಿಸುತ್ತಿದ್ದ ರೀತಿ ಇಷ್ಟವಾಗುತ್ತದೆ. ಈ ಚಿತ್ರದಲ್ಲಿಯೂ ಕೆಲವು ಸಂಸ್ಕೃತ ಮಂತ್ರಗಳಿಗೆ ಅದರ ಅರ್ಥವನ್ನು ಹೇಳಿಸುವುದು ಅವರ ಸಂಸ್ಕಾರ ಹೃದಯವನ್ನು ತೋರಿಸುತ್ತದೆ. 

ಒಂದು ಹಾಡನ್ನು ಬರಿಯ ಸಾಹಿತ್ಯ, ಸಂಗೀತ, ನೃತ್ಯಗಳ ಸಂಗಮ ಅನ್ನಿಸದೆ ಅದನ್ನು ಕೂಡ ಕಥೆಯನ್ನು ಮುಂದಕ್ಕೆ ತರಲು ಸಹಾಯ ಮಾಡುತ್ತಲೇ ತಮ್ಮ ಕಥಾದೃಶ್ಯಗಳನ್ನೂ ಹಾಡಿನಲ್ಲಿ ತೋರಿಸುವಲ್ಲಿ ಸಿದ್ಧ ಹಸ್ತರಾಗಿದ್ದರು ಪುಟ್ಟಣ್ಣ. ಅವರ ಸಾಮರ್ಥ್ಯ "ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ" ಹಾಡಿಗೆ ಜಾನಕಿಯಮ್ಮ ಮತ್ತೆ ಟೊಂಕ ಕಟ್ಟಿ ನಿಂತು ಹಾಡಿದರೆ, ಅದನ್ನು ಚಿತ್ರೀಕರಿಸಿದ ರೀತಿಗೆ ಪುಟ್ಟಣ್ಣ ಅವರಿಗೆ ಶ್ರೇಯಸ್ಸು ತಲುಪುತ್ತದೆ. ಸಾಹಿತ್ಯ ರತ್ನ ಚಿ ಉದಯಶಂಕರ್ ಅವರ ಪದಗಳ ಬಳಕೆ ಬಹು ಇಷ್ಟವಾಗುತ್ತದೆ. 

ಚಿತ್ರದ ಅಂತಿಮ ಭಾಗದಲ್ಲಿ ವೇಶ್ಯ ಪದ್ಧತಿಯ ಗೆಜ್ಜೆ ಪೂಜೆಯನ್ನು ವಿಸ್ತೃತವಾಗಿ ತೋರಿಸುತ್ತಾ ಅದಕ್ಕೆ ಹಾಡಿನ ಪೋಷಾಕು ಹಾಕುವಲ್ಲಿ ಸುಗಮ ಸಂಗೀತದ ಪ್ರತಿಭೆ ಬಿ ಕೆ ಸುಮಿತ್ರ ಬರುತ್ತಾರೆ. ಅರ್ ಏನ್ ಜಯಗೋಪಾಲ್ ಅವರ ಸಾಹಿತ್ಯ  ಸಿರಿ ಈ ಹಾಡಿಗೆ ಜೀವ ತುಂಬುತ್ತದೆ. 

 ಈ ಚಿತ್ರದಲ್ಲಿ ನಾನು ಇದ್ದೇನೆ ಎಂದು ಸಾರಿ ಸಾರಿ ಹೇಳುವ ಅಭಿನಯ ನಾಲ್ವರದು. 

ನನ್ನ ಮೆಚ್ಚಿನ ಬಾಲಣ್ಣ ಒಂದು ಐದು ದೃಶ್ಯದಲ್ಲಿ ತಮ್ಮ ಟ್ರೇಡ್ ಮಾರ್ಕ್ ಛಾಪನ್ನು ಮೂಡಿಸುತ್ತಾರೆ. ಅವರ ಪಂಚಿಂಗ್ ಮಾತುಗಳು ಬಿಕ್ಕುವ ರೀತಿಯಲ್ಲಿ ಹೇಳುವ ಶೈಲಿ ಆಹಾ ಅದರ ಕೆಲವು ತುಣುಕುಗಳು

೧. ಹೋಟೆಲ್ ಗೆ ಹೋದರೆ ನಮಗೆ ಬೇಕಾಗಿದ್ದು ಅವನೆಲ್ಲೇ ಕೊಡ್ತಾನೆ.. ಅವನು ಮಾಡಿದ್ದು ನಾವು ತಿನ್ನಬೇಕು.. ಎಲ್ಲಯ್ಯ ರವೆ ಇಡ್ಲಿ ಅಂತ ಎಗರ್ಲಾಡಿದರೆ.. ಹೋಗಯ್ಯ ತೀರ್ಥಹಳ್ಳಿ ಜಾತ್ರೆಗೆ ಅಂತಾನೆ 

೨. ಈ ಸಿಗರೆಟ್ ಪ್ಯಾಕೆಟ್, ಅದನ್ನು ಬಿಟ್ಟು ಹೋದ ಆ ಕೈ, ಅದಕ್ಕೆ ಸಂಬಂಧ ಪಟ್ಟ ತಲೆ ಇದು ಯಾವುದು ಅಂತ ನನ್ನ ತಲೆಗೆ ಹೊಳಿತ ಇಲ್ಲವಲ್ಲ 

೩. ನನ್ನ ಸಾವಿತ್ರ್ಹಿ ಹಣೆಯ ಮೇಲೆ ಕ್ವೆಶ್ಚನ್ ಮಾರ್ಕು 
     ತುಟಿಯ ಮೇಲೆ ಡೇಂಜರ್ ಮಾರ್ಕು 
     ಕಣ್ಣಲ್ಲಿ ಹೊಸ ಸ್ಪಾರ್ಕು 
     ಇದೆಲ್ಲ ನನ್ನ ತಲೇಲಿ ಆಗಿದೆಯೋ ಕ್ವೆಶ್ಚನ್ ಮಾರ್ಕು  

೩. ದ್ವಾಪರ ಯುಗದಲ್ಲಿ ದುಶ್ಯಾಸನ ದ್ರೌಪದಿ ಸೀರೆ ಎಳೆದು ಎಳೆದು ಬೆವತು ಹೋದನಂತೆ.. ಈ ಕಲಿಯುಗದಲ್ಲಿ ನನ್ನ ಮೂರನೇ ಹೆಂಡತಿ ಸೀರೆ ಕುಪ್ಪುಸ ಇಸ್ತ್ರಿ ಮಾಡಿ ಕೈ ಸೋತು ಹೋಗಿದೆ 
೪. ತಾಳಿ ಕಟ್ಟಿದೊಳು ಗಾಳಿಲಿ ಬಿಟ್ಟು ಹೋದಳು 
     ಟೈ ಕಟ್ಟಕೊಂಡವ್ನ ಕಂಕುಳಲ್ಲಿ ಇಟ್ಕೊಂಡು ಹೋದಳು 

ಕುಲ ಯಾವುದಾದರೂ ಜ್ಞಾನಕ್ಕೆ ಪರದೆಯಿಲ್ಲ ಎನ್ನುವ ತರ್ಕದ ಅಶ್ವಥ್ ಪಾತ್ರ ಗಮನ ಸೆಳೆಯುತ್ತದೆ. ಪಂಡರಿಬಾಯಿ ಅವರ ಜೊತೆ ಜಗಳ ಬಂದಿ, ಆವಾಗ ಅವರ ಸಂಭಾಷಣ ಶೈಲಿ, ಅಂಗೀಕ ಅಭಿನಯ, ಮುಖದಲ್ಲಿ ಮಾಸದ ನಗು.. ಧರ್ಮೇಚ ಅರ್ಥೆಚ ಮತ್ತು ತೀರ್ಥ ಕೊಡುವಾಗ ಹೇಳುವ ಮಂತ್ರಗಳ ಅರ್ಥ ಅದನ್ನ ಹೇಳುವ ಶೈಲಿ ಆಹಾ ಸೂಪರ್ ಸೂಪರ್.  ವೇಶ್ಯೆ ಕುಲದ ಹೆಣ್ಣು ಮಗಳನ್ನು  ಗೌರವ ಕೊಟ್ಟು ತನ್ನ ಮಗಳಷ್ಟೇ ಪ್ರೀತಿಸುವ ಆ ಪಾತ್ರದಲ್ಲಿ ನುಗ್ಗಿ ಬಿಟ್ಟಿದ್ದಾರೆ. 

ನವಿರಾದ ಅಭಿನಯ, ಹಿತವಾದ ಮಾತು, 
"ಅಮ್ಮ ಅವರು ನಿನಗೆ ಬೆಲೆ ಕೊಟ್ಟಿದ್ದಾರೆಯೇ ಹೊರತು ನಿನ್ನ ಭಾವನೆಗಳಿಗೆ, ನಿನ್ನ ಕಣ್ಣೀರಿಗೆ ಅಲ್ಲಾ"

"ಅಮ್ಮ ಅಪ್ಪಾಜಿ ಸತ್ತು ಹೋದರು ಎನ್ನುವ ಸುದ್ಧಿ ಕೇಳಿದರೂ ... " 

"ಪಂಚಮವೇದ ಪ್ರೇಮದ ನಾದ" ಹಾಡಿನಲ್ಲಿನ ಅಭಿನಯ 

"ಗಗನವು ಎಲ್ಲೋ ಭೂಮಿಯು ಎಲ್ಲೋ" ಹಾಡಿಗಿಂತ ಮುಂಚೆ ಗಂಗಾಧರ್ ಜೊತೆಯಲ್ಲಿ ನಡೆವ ಸಂಭಾಷಣೆಯಲ್ಲಿ ತನಗೆ ಹೊಸ ಜೀವನದ ರಹದಾರಿ ಸಿಗುತ್ತಿದೆ ಎಂಬ ಭಾವ ಸಿಕ್ಕಾಗ ಅವರ ಅಭಿನಯ.. 

ತನ್ನ ಜನ್ಮಕ್ಕೆ ಕಾರಣವಾದ ಮನುಷ್ಯನ ಬಳಿ ನಿಂತು "ನಿಮ್ಮನ್ನು ಅಪ್ಪಾ ಎನ್ನಬಹುದೇ.. ನಿಮ್ಮನ್ನು ಮುಟ್ಟಬಹುದೇ" ಈ ದೃಶ್ಯ ಈ ಚಿತ್ರದ ಹೈ ಲೈಟ್. 

ಇಂತಹ ಒಂದು ಸುಂದರ ಅಭಿನಯ ಕೊಟ್ಟ ಕಲ್ಪನಾ ಈ  ಚಿತ್ರದಲ್ಲಿ ಮಿನುಗುತ್ತಾರೆ. 

ಕಾಮ ನೋಡುವ ದೇಹದಲ್ಲಲ್ಲ.. ನೋಡುವ ನೋಟದಲ್ಲಿ ಎನ್ನುವ ಮಾತಿನಂತೆ ಇಡಿ ಚಿತ್ರದಲ್ಲಿ ಕಣ್ಣಲ್ಲೇ ಬೆರಗುಗೊಳಿಸುವ ಮೂಗೂರು ಸುಂದರಮ್ಮ ಅವರ ಅಭಿನಯ ವಾಹ್ ವಾಹ್ ಎಂದು ಹೇಳಿಸುತ್ತದೆ. 

ಹೆಣ್ಣು ಈ ಮನೆಗೆ ಹೊನ್ನು ತರುತ್ತದೆ.. ಗಂಡು ಈ ಮನೆಗೆ ಬರಬೇಕು ಹೊರತು, ಹುಟ್ಟ ಬಾರದು ಅಪರ್ಣ ಎನ್ನುವಾಗ ಕಣ್ಣಲ್ಲಿ ತೋರುವ ಮಿಂಚು, ಗೆಜ್ಜೆ ಪೂಜೆ ಮಾಡಿಸ್ತೀನಿ, ಗೆಜ್ಜೆ ಪೂಜೆ ಮಾಡಿಸ್ತೀನಿ ಎನ್ನುವಾಗ ಕಣ್ಣಲ್ಲೇ ತೋರಿಸುವ ಭಾವ ಅಬ್ಬಾ ಅನ್ನಿಸುತ್ತದೆ. ಇಡಿ ಚಿತ್ರವನ್ನು ನುಂಗಿ ಬಿಡುವ ಸಾಮರ್ಥ್ಯ ಇರುವ ಈ ಕಲಾವಿದೆಯಿಂದ ತೆಗಿಸಿರುವ ಅಭಿನಯ ಪುಟ್ಟಣ್ಣ ಅವರ ತಾಕತ್.  

ಮನದಲ್ಲಿ ಅಶ್ಲೀಲವೆನಿಸುವ ಯೋಚನೆಯನ್ನು ಬೆಳ್ಳಿ ತೆರೆಯ ಮೇಲೆ ಸಹ್ಯವಾಗಿ ತಂದು ಒಂದು ಪುಟ್ಟ ಮಗುವಿನ ಜೊತೆಯಲ್ಲಿ ಕೂಡ ನೋಡಬಹುದು ಎನ್ನಿಸುವ ಚಿತ್ರವನ್ನು ಕೊಟ್ಟಿರುವ ಪುಟ್ಟಣ್ಣ ಚಿತ್ರದುದ್ದಕ್ಕೂ ಕಾಡುತ್ತಾರೆ. ಒಂದೇ ಒಂದು ಅಶ್ಲೀಲ ಸಂಭಾಷಣೆ, ದೃಶ್ಯ ಇರದ ಆದರೆ ಹೇರಳವಾಗಿ ತುಂಬಲು ಎಲ್ಲಾ ಸಾಧ್ಯಗಳಿರುವಂಥಹ  ಕಥಾವಸ್ತುವನ್ನು ಅಷ್ಟೇ ನವಿರಾಗಿ ಮಾತಿನಲ್ಲೇ ಕಟ್ಟಿ ಕೊಟ್ಟಿರುವ ಈ ಸುಂದರ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದದ್ದು ಈ ಚಿತದ ಹೆಗ್ಗಳಿಕೆ. 

ಅಬ್ಬಬ್ಬ ಎನ್ನಿಸುವ ಈ ಚಿತ್ರವನ್ನು ನೋಡುತ್ತಾ ಹಲವಾರು ದೃಶ್ಯಗಳಲ್ಲಿ ಮನ, ಕಣ್ಣು ಅಶ್ರು ಧಾರೆಯನ್ನು ಸುರಿಸಿತು. 

ಪುಟ್ಟಣ್ಣ ಗುರುಗಳೇ ಹಾಟ್ಸ್ ಆಫ್ ನಿಮಗೆ!!!

Saturday, September 13, 2014

ಮನೋವರ್ಣಮಯ - ಕಪ್ಪು ಬಿಳುಪು.. ! (1969)

ಕೆಲವು ಚಿತ್ರಗಳು ವರ್ಣಮಯ ಅಲ್ಲದೆ ಹೋದರು ಮನಸಲ್ಲಿ ಹಲವಾರು ಬಣ್ಣಗಳನ್ನು ಹುಟ್ಟು ಹಾಕುತ್ತದೆ. ಯೋಚಿಸುವುದೊಂದು ಆಗುವುದೊಂದು ಎನ್ನುವ ಮಾತು ಹೌದೆ ಆದರೂ.. ವಿಧಿ ವಿಪರೀತವಾಗಿ ಅಂದುಕೊಂಡದ್ದು ತಲೆಕೆಳಕು ಮಾಡಿಕೊಂಡು ವಿಕ್ರಮನ ಹೆಗಲ ಮೇಲೆ ಏರಿದ ಬೇತಾಳನಾಗಿ ಜೀವನದ ಉದ್ದಕ್ಕೂ ಕಾಡುತ್ತದೆ.. 

ಪುಟ್ಟಣ್ಣ ಕಣಗಾಲ್ ಒಂದು ವಿಭಿನ್ನ ದೃಶ್ಯಕಾವ್ಯವನ್ನು ೧೯೬೯ ರಲ್ಲಿ ಬಿಡುಗಡೆ ಕಂಡ ಕಪ್ಪು ಬಿಳುಪು ಚಿತ್ರದಲ್ಲಿ ಕೊಟ್ಟಿದ್ದಾರೆ. ಶ್ರೀಮತಿ ಆರ್ಯಾಂಬ ಪಟ್ಟಾಭಿ ಅವರ ಅದೇ ಹೆಸರಿನ ಕಾದಂಬರಿಯನ್ನು ಪರಿಣಾಮಕಾರಿ ಚಿತ್ರವಾಗಿ ಮೂಡಿಸಿದ್ದಾರೆ. 
ರವಿಕುಮಾರ್ ಮೂವೀಸ್ ಲಾಂಛನದಲ್ಲಿ ಒದಗಿಬಂದ ಈ ಚಿತ್ರದಲ್ಲಿ ಕಲ್ಪನಾ ಎರಡು ಪಾತ್ರದಲ್ಲಿ ಕಾಡುವುದು ವಿಶೇಷ. ಒಂದಕ್ಕೊಂದು ವಿಭಿನ್ನ ಪಾತ್ರ..


ಒಂದು ಪಾತ್ರ ನಾವೆಲ್ಲರೂ ಹಲವಾರು ಚಿತ್ರಗಳಲ್ಲಿ ನೋಡಿದ ಸೌಮ್ಯ ಮೂರ್ತಿ ಪಾತ್ರವಾದರೆ.. ಇನ್ನೊಂದು ಅದಕ್ಕೆ ತೀರ ವಿರುದ್ಧ ಗಡಸುಮಾತು.. ವಿಶಿಷ್ಟ ಅಂಗೀಕ ಅಭಿನಯ, ವಸ್ತ್ರ ವಿನ್ಯಾಸ ಹದವಾಗಿ ಅಭಿನಯಿಸಿದ್ದಾರೆ. ಕಲ್ಪನಾ ಅಭಿನಯ ಎರಡೂ (ಚಂದ್ರ ಮತ್ತು ವತ್ಸಲ) ಪಾತ್ರಗಳಲ್ಲೂ ಮಿಂಚಿದ್ದರೂ ಕಾಡುವುದು ವತ್ಸಲ ಪಾತ್ರವೇ. 

ಈ ಚಿತ್ರದಲ್ಲಿ ಅವರ ಎಲ್ಲಾ ಚಿತ್ರಗಳಂತೆ ಸಂಭಾಷಣೆಗೆ ಯಾವಾಗಲು ಮಿಂಚು ಹರಿಸುತ್ತದೆ. ಅವರ ಪ್ರೀತಿಯ ಅರ್ ಎನ್ ಜಯಗೋಪಾಲ್ ಸಂಭಾಷಣೆ ಮತ್ತು ಹಾಡುಗಳು ಎರಡರ ಜವಾಬ್ಧಾರಿ ಹೊತ್ತು ಸಾಗಿದ್ದಾರೆ. ಅವರು ಬರೆದ ಹಾಡುಗಳಿಗೆ ಜೀವ ತುಂಬಲು ಪಿ ಬಿ ಎಸ್. ಪಿ ಸುಶೀಲ ಎಲ್ ಆರ್ ಈಶ್ವರಿ ಜೊತೆಯಾಗಿದ್ದಾರೆ. ಚಿತ್ರಕ್ಕೆ ಕಾಮನಬಿಲ್ಲಿನಂತ ಸಂಗೀತ ಒದಗಿಸಿದ್ದು ಆರ್ ರತ್ನ.  ಚಿತ್ರದ ಪೂರ್ತಿ ಕಾಡುವುದು ಕಲ್ಪನಾ ಅಭಿನಯ ಮತ್ತು ಹಿನ್ನೆಲೆ ಸಂಗೀತ, 

"ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು"  ಎನ್ನುವ ಗಾಯಕಿ ಪಿ ಸುಶೀಲ ವೇಗವಾಗಿ ಹಾಡುವ ಹಾಡಿನಿಂದ ಶುರುವಾಗುವ ಈ ಚಿತ್ರ.. ಕನಸಿನ ಬೆನ್ನೇರಿ ಹೋಗುವಂತೆ ಚಿತ್ರೀಕರಿಸುವ ರೀತಿ ಇಷ್ಟವಾಗುತ್ತದೆ. ಹುಲ್ಲುಗಾವಲಿನಲ್ಲಿ ಡಿ ವಿ ರಾಜಾರಾಮ್ ಅವರ ಕ್ಯಾಮೆರ ಸಾಗುವ ಪರಿ ಇಷ್ಟವಾಗುತ್ತದೆ. ಪುಟ್ಟಣ್ಣ ಅವರ ಚಿತ್ರಗಳಲ್ಲಿ ಕ್ಯಾಮೆರ ಕೈಚಳಕವೇ ಒಂದು ದೃಶ್ಯ ಕಾವ್ಯ. 

ನನ್ನ ನೆಚ್ಚಿನ ಬಾಲಣ್ಣ ಈ ಚಿತ್ರದಲ್ಲಿ ವಿಶಿಷ್ಟವಾಗಿ ಮಾತಾಡುತ್ತ ಪ್ರತಿ ದೃಶ್ಯದಲ್ಲೂ ಒಂದು ಕಥೆ ಎಂದು ಹೇಳುತ್ತಾ ಆ ಘಟನೆಗೆ ತಕ್ಕಂತೆ ಒಂದು ಕಥೆ ಹೇಳುತ್ತಾ ಸಾಗುವ ರೀತಿಯಲಿ ಮಿಂಚುತ್ತಾರೆ. 

ಅವರ ಪಂಚಿಂಗ್ ಮಾತುಗಳು 

"ದನಾ ಅಲ್ಲಾ ದನ ಹೆಣ್ಣುಮಕ್ಕಳ ಬೆಳವಣಿಗೆ ಸುತ್ತಲಿರುವ ಪರಿಸರ ಅವಲಂಭಿಸಿರುತ್ತೆ ಕಣೋ" ಎನ್ನುವಾಗ ಅವರು ಹೊತ್ತು ತರುವ ಸಂದೇಶ "ಮನೆಯಲ್ಲಿ ಹಿತಕರ ವಾತಾವರಣ ಸೃಷ್ಟಿಯಾಗಿದ್ದರೆ ಮಕ್ಕಳು ಹಾಗೆ ಸಂಸ್ಕಾರ ಹೊತ್ತು ಬೆಳೆಯುತ್ತವೆ". 

"ಇದೆ ಓವಲ್ ಆಂಗಲ್ ಬಾಯಲ್ಲಿ ಸದಾ ನಗುತ್ತಿದ್ದಳು ನಿಮ್ಮ ಅಮ್ಮಾ"

"ಇಂಗು ತಿಂದ ಇಂಜಿನಿಯರ್ ನಾನು"

"ಈ ಇಂಜಿನಿಯರ್ ಥಾಟ್ ಎಲ್ಲಾ ಈ ಹ್ಯಾಟಲ್ಲೇ ಇರೋದು.. ಈ ಹ್ಯಾಟಿನ ಹೀಟು ನಿನ್ನ ತಲೆಯೊಳಗೆ ಇಳಿಯೋದು ಬ್ಯಾಡಮ್ಮ"

"ಇವರು ಕೋಕ ಕೋಲಾ ಕುಂಭಾಭಿಷೇಕ ಶಾಸ್ತ್ರಿ.. ಯಾವುದೇ ಸಮಾರಂಭವಿರಲಿ ಇವರು ಕೇಳುವುದು ಕೋಕಾ ಕೋಲಾ"

ಪಕ್ಕದಲ್ಲಿ ಯಾರು ಇದ್ದಾರೆ ಎಂದು ಗಮನಿಸದೆ "ದನಾ ಅಲ್ಲಾ ಜನಾ.. ನಾನು ಇವರಮ್ಮನನ್ನು ಮದುವೆಯಾದಾಗ" ಎಂದು ಒಬ್ಬನ ಎದೆಯನ್ನು ತಟ್ಟಿ ಹೇಳಿದಾಗ ಪಕ್ಕದಲ್ಲಿದ್ದ ವ್ಯಕ್ತಿ ಹೌಹಾರುತ್ತಾನೆ.. .ತಕ್ಷಣ "ಕ್ಷಮಿಸಿ.. ನನ್ನ ಮಗಳ ಅಮ್ಮನನ್ನು ಮದುವೆಯಾದಾಗ" ಎಂದಾಗ ಉಸಿರು ಬಿಡುತ್ತಾನೆ.. ಈ ದೃಶ್ಯದಲ್ಲಿ ಬಾಲಣ್ಣ ಅವರ ಸಹಜ ಅಭಿನಯ ಸುಂದರ. 

"ಭಲೇ ಬ್ರಹ್ಮಚಾರಿ" ಎಲ್ ಆರ್ ಈಶ್ವರಿ ತಮ್ಮ ಮಾದಕ ಧ್ವನಿಯಲ್ಲಿ ಕಾಡಿದರೆ.. ಕಲ್ಪನಾ ಆ ಕಾಲದಲ್ಲಿಯೇ ಹುಡುಗರನ್ನು ಗೋಳು ಹುಯ್ಕೊಳೋದು, ಹಟಕ್ಕೆ ಬಿದ್ದು ಹುಡುಗರನ್ನು ಆಟ ಆಡಿಸೋದು ಹೇಗೆ ಎನ್ನುವುದನ್ನು ತೋರುತ್ತಾರೆ.. ಹಾಡಿನ ಉದ್ದಕ್ಕೂ ಸ್ಥಿತ ಪ್ರಜ್ಞರಂತೆ ಅಭಿನಯಿಸುವ ಸ್ಪುರಧ್ರೂಪಿ ಆರ್ ಎನ್ ಸುದರ್ಶನ ಹಾಡಿನ ಅಂತಿಮ ಘಳಿಗೆಯಲ್ಲಿ ಆ ಪಾತ್ರಧಾರಿಗೆ ಮನಸೋತು ಅವಳ ಹಿಂದೆ ಸುತ್ತುತ್ತಾರೆ.. ಪ್ರೇಮ ಪ್ರೀತಿ ಸದಾ ಕಾಡಿದರೆ ಎಂಥಹ ಕಲ್ಲು ಕರುಗುತ್ತದೆ ಎನ್ನುವ ಸಾಂಕೇತಿಕ ದೃಶ್ಯಾವಳಿ ಈ ಹಾಡಿನ ಶಕ್ತಿ. 

ಚಂದ್ರ ಪಾತ್ರಧಾರಿ ಕೆಲ ಕಾರಣಗಳಿಂದ ಹಳ್ಳಿಗೆ ಹೊಗುವುದನ್ನು ತಪ್ಪಿಸಿಕೊಳ್ಳಲು ವತ್ಸಲಳನ್ನು ಹಳ್ಳಿಗೆ ಕಲಿಸಲು ಸಂಚು ಮಾಡಿ.. ಅವಳು ಒಳ್ಳೆ ಎಂದಾಗ ಬಟ್ಟೆ, ಒಡವೆ ಇವುಗಳ ಆಮೀಷ ಒಡ್ಡಿ ಸ್ವಲ್ಪ ದಿನವಾದರೂ ಚಿಕ್ಕಮ್ಮನ ಕಾಟದಿಂದ ದೂರಾಗಬಹುದು ಎನ್ನುತ್ತಾ ಅವಳನ್ನು ಉತ್ತೇಜಿಸುವಾಗ ವತ್ಸಲ ಅಭಿನಯ ಇಷ್ಟವಾಗುತ್ತದೆ..ಬಿಟ್ಟ ಬಾಯಿ ಬಿಟ್ಟಂಗೆ ಕೆಲ ಕ್ಷಣ ಇರುವ ಅಭಿನಯ.. ಸವಲತ್ತುಗಳಿಗೆ ಮನಸ್ಸು ಹೇಗೆ ಪ್ರತಿಕ್ರಯಿಸುತ್ತದೆ.. ಆಸೆ ಯಾರನ್ನೂ ಬಿಡದು ಎನ್ನುವ ಮಾತು ಎಷ್ಟು ನಿಜ ಅಲ್ಲವೇ.. 

"ಚೆಲುವಿನ ಚೆನ್ನಿಯೇ ಚಿನ್ನದ ಬೊಂಬೆಯೇ" ಹಾಡಲ್ಲಿ ಎಲ್ ಆರ್ ಈಶ್ವರಿ ಮತ್ತೆ ಕಾಡುತ್ತಾರೆ 

ಈ ಚಿತ್ರದ ನೀತಿ ಭೋದಕ ಹಾಡು "ಇಂದಿನ ಹಿಂದೂ ದೇಶದ ನವ ಯುವಕರೇ" ಈ ಹಾಡಿನಲ್ಲಿ ಪುಟ್ಟಣ್ಣ ಅವರ ಅಣ್ಣ ಕಣಗಾಲ್ ಪ್ರಭಾಕರ ಶಾಸ್ತ್ರಿ ಮಿಂಚುತ್ತಾರೆ. ಹಾಡಿನ ಚಿತ್ರೀಕರಣ ಮಾಗಡಿಯ ಸಾವನ ದುರ್ಗದ ತಪ್ಪಲಲ್ಲಿ ಸಾಗುತ್ತದೆ.. ಚಟಕ್ಕೆ ಬಿದ್ದ ನವ ಪೀಳಿಗೆಗೆ ಕೊಡುವ ಸಂದೇಶದ ಜೊತೆಯಲ್ಲಿ ಹಿಂದೂ ಸನಾತನ ಧರ್ಮದ ಪ್ರತಿ ಪಾದಕರಲ್ಲಿ ಮೂರು ಹೊಳೆಯುವ ರತ್ನಗಳು ಶ್ರೀ ಶಂಕರಾಚಾರ್ಯ, ಶ್ರೀ ಸ್ವಾಮಿ ವಿವೇಕಾನಂದ ಮತ್ತು ಶ್ರೀ ಸುಭಾಶ್ ಚಂದ್ರ ಬೋಸ್ ಅವರ ಪ್ರತಿಕೃತಿಯನ್ನು ನೆರಳು ಬೆಳಕಿನ ಮೂಲಕ ಉತ್ತಮವಾಗಿ ತೋರಿದ್ದಾರೆ.. ಪ್ರಾಯಶಃ ಈ ರೀತಿಯ ದೃಶ್ಯ ಸಂಯೋಜನೆಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡದ್ದು ಪುಟ್ಟಣ್ಣ ಅವರ ತಂತ್ರಜ್ಞ ಮನಸ್ಸು. 

ಸಾಂಕೇತಿಕವಾಗಿ ದೃಶ್ಯಗಳನ್ನು ಹೆಣೆದು ಅದಕ್ಕೆ ವಿಭಿನ್ನ ಅರ್ಥ, ಮನುಷ್ಯನ ಮನಸ್ಥಿತಿ ಇವೆಲ್ಲವನ್ನೂ ಪರಿಣಾಮಕಾರಿಯಾಗಿ ರೂಪಿಸುವ ದೃಶ್ಯಾವಳಿಗಳು ಪುಟ್ಟಣ್ಣ ಚಿತ್ರಗಳಲ್ಲಿ ಸದಾ ಇರುತ್ತದೆ. 

ಈ ಚಿತ್ರದಲ್ಲೂ ತನ್ನ ಸಾವಿಗೆ ಕಾರಣ ಚಂದ್ರ ಎನ್ನುವ ಸಂದೇಶ ಸಿಕ್ಕ ಮೇಲೆ.. ಅವಳು ಕೊಟ್ಟ ಹೂವನ್ನು ನೀರಲ್ಲಿ ಹಾಕಿ ಅದನ್ನು ಕೋಲಿನಿಂದ ಚುಚ್ಚಿ ಮುಳುಗಿಸಲು ಪ್ರಯತ್ನ ಪಡುತ್ತಾನೆ. ಹೂವಿನಂತ ಮನಸ್ಸಿನ ಮನುಜನ ಮನಸ್ಸು ಆಕ್ರೋಶ ಮತ್ತು ಪ್ರತಿಕಾರಕ್ಕೆ ಹೇಗೆ ಗಲಿಬಿಲಿಗೊಳ್ಳುತ್ತದೆ.. ಎನ್ನುವ ಸಂಕೇತ ಈ ದೃಶ್ಯದಲ್ಲಿ.. ತಕ್ಷಣ ಮನಸ್ಸು ಬದಲಾಯಿಸಿ ಆ ಹೂವನ್ನು ದಡಕ್ಕೆ ತಂದು ಹುಲ್ಲಿನ ಮೇಲೆ ನಿಧಾನವಾಗಿ ಇತ್ತು ಸಾಗುತ್ತಾನೆ.. ಈ ದೃಶ್ಯದಲ್ಲಿ ಹೂವು ನೀರು ಕೋಲು ಮೂರೇ ಕಾಣುವುದು. 

ನಂತರ ಚಂದ್ರಳನ್ನೇ (ಬದಲಾದ ಪಾತ್ರ) ಸಾಯಿಸಲು  ನಾಯಕ, ಅದನ್ನು ತಪ್ಪಿಸಿಕೊಂಡು ನಾನು ಯಾರನ್ನು ಪ್ರೀತಿಸಿಲ್ಲ ನನ್ನಾಣೆ ನಿಮ್ಮನ್ನೇ ಪ್ರೀತಿಸಿದ್ದು ಎಂದು ಕಲ್ಪನಾ ಹೇಳುತ್ತಾ ಓಡಿ ಹೋಗುತ್ತಾ ಒಂದು ನೀರಿನ ಹೊಂಡದಲ್ಲಿ ಬಿದ್ದು ಬಿಡುತ್ತಾರೆ.. 

ಕೆಲವೇ ದೃಶ್ಯದ ಹಿಂದೆ ಅವಳು ಕೊಟ್ಟ ಹೂವನ್ನು ನೀರಲ್ಲಿ ಮುಳುಗಿಸಲು ಹೋರಾಟ ನಾಯಕ.. ಆದ್ರೆ ರೀತಿಯ ಹೊಂಡದಿಂದ ಚಂದ್ರಳನ್ನು ಕಾಪಾಡುತ್ತಾನೆ... ಎರಡು ದೃಶ್ಯ ಎರಡು ವಿಭಿನ್ನ ಪಾಠಗಳು, 

ಸಿಟ್ಟು ಸಿಡುಕು ರಾಗದ್ವೇಷ ಸೇಡು ಇವೆಲ್ಲಗಳ ಪರಿಣಾಮ ಘೋರ ಅದರ ಬದಲು ಪ್ರೀತಿ ಪ್ರೇಮ ಎಂಥಹ ವಿಷಮ ಸಂಬಂಧವನ್ನು ಗಟ್ಟಿ ಗೊಳಿಸುತ್ತದೆ.. ಪುಟ್ಟಣ್ಣ ಅವರ ಚಿತ್ರಗಳಲ್ಲಿ ಸಿಗುವ ಈ ಮಾತುಗಳೇ ನನಗೆ ಅವರ ಚಿತ್ರಗಳ ಸರಣಿಯ ಬಗ್ಗೆ ಬರೆಯಲು ಪ್ರೇರೇಪಿಸುತ್ತಿದೆ. 

"ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ " ಪಿ ಸುಶೀಲ ಹಾಡಲ್ಲೇ ನಮ್ಮನ್ನು ನೂರಾರು ಲೋಕಗಳಿಗೆ ಕರೆದೊಯ್ಯುತ್ತಾರೆ..ಮನೆಯಲ್ಲಿನ ಸಂಸ್ಕಾರ ಎಲ್ಲರ ಮನಸ್ಸನ್ನು ಎಷ್ಟು ಉಲ್ಲಸಿತ ಗೊಳಿಸುತ್ತದೆ ಎನ್ನುವುದಕ್ಕೆ ಸಾಕ್ಷಿ ಈ ಹಾಡು ಮತ್ತು ಚಿತ್ರೀಕರಣ.. ಕನ್ನಡ ಚಿತ್ರರಂಗದ ಇನ್ನೊಬ್ಬ ತಾಯಿ ಆದವಾನಿ ಲಕ್ಷ್ಮೀದೇವಿಯವರ ಅಭಿನಯ ಈ ಹಾಡಿನ ಉತ್ತಮ ಅಂಶ. "ಅರಿಶಿನ ಕುಂಕುಮ ನಗು ನಗುತಿರಲಿ" ಹಾಡಿನ ಸಾಲಿನಲ್ಲಿ ಅವರ ಹೊಳೆಯುವ ಕಣ್ಣುಗಳು, ನಗು,. ತಾಯಿ ಮಮತೆಯ ಒಂದು ಝಲಕ್ ಜೋಗವಾಗುತ್ತದೆ. 

ತನ್ನ ತಪ್ಪು ಭಾವನೆ ಎಂಥ ಅನಾಹುತಕ್ಕೆ ದಾರಿ ಮಾಡಿಕೊಟ್ಟಿತು ಎಂದು ಪೇಚಾಡುವ ನಾಯಕ ಪಾತ್ರಧಾರಿ ರಾಜೇಶ್ "ಇದೆ ರೂಪ ಅದೇ ನೋಟ" ಹಾಡಿನಲ್ಲಿ ಇಡಿ ತನ್ನ ಮನಸ್ಸಿನ ತಾಕಲಾಟ, ಅಂದುಕೊಂಡಿದ್ದ ಭಾವ ಎಲ್ಲಾ ತಪ್ಪು ಎನ್ನುವ ಅಭಿನಯ ಇಷ್ಟವಾಗುತ್ತದೆ.. 

ಕೆಟ್ಟ ಮಕ್ಕಳು ಇರಬಹುದು ಕೆಟ್ಟ ತಾಯಿ ಇರೋಲ್ಲ ಎನ್ನುವ ಗಾದೆ ಮಾತಿದೆ.. ಹಾಗೆಯೇ ಕೆಸರಲ್ಲೂ ಕಮಲವಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಮಾತು.. 

ವತ್ಸಲ ತನ್ನ ಅಪ್ಪನ ಕಡು ಬಡತನ , ಚಿಕ್ಕಮ್ಮನ ಕಾಟ ಇದ್ದರೂ ತನ್ನ ಚಿಕ್ಕಮ್ಮನ ಮಗಳು ಪೆದ್ದು ಪೆದ್ದಾಗಿ ಆಡಿದರೂ ಆ ಮನಸ್ಸಲ್ಲಿ ಕೂಡ ಒಂದು ಒಳ್ಳೆಯ ಪ್ರಜ್ಞೆ ಇದೆ ಎನ್ನುವುದಕ್ಕೆ ಅಪ್ಪ ಸತ್ತ ಮೇಲೆ ಮನೆ ಪಾತ್ರೆ ಸಾಮಾನು ಎಲ್ಲವನ್ನು ಮಾರಿ ಬೇರೆ ಕಡೆಗೆ ಹೋಗಲು ಸೋದರಮಾವನ ಮಾತಿನಂತೆ ಸಿದ್ಧವಿದ್ದ ಚಿಕ್ಕಮ್ಮ ಮತ್ತು ಮಗಳ ಜೊತೆಯಲ್ಲಿ ಮಾರಿಬಂದ ಹಣದಲ್ಲಿ ತನ್ನ ಭಾಗವನ್ನು ಇಟ್ಟುಕೊಂಡು ನಿದ್ರಿಸಿರುತ್ತಾಳೆ.. 

ಕಪಟಿ ಸೋದರಮಾವ ಅವಳ ಪೆಟ್ಟಿಗೆಯಲ್ಲಿದ್ದ ಹಣವನ್ನು ತೆಗೆದುಕೊಂಡು... ಈ ಪೀಡೆ ಎಲ್ಲಿಯಾದರೂ ಹಾಳಾಗಿ ಹೋಗಲಿ ಎಂದು ಶಪಿಸುತ್ತಾನೆ.,, ಇದನ್ನು ಕೇಳಿಸಿಕೊಂಡ ಆ ಪೆದ್ದು ಮಗಳು (ಆರ್ ಟಿ ರಮ).. ಅವರು ನಿದ್ದೆ ಮಾಡಿದಮೇಲೆ ಮತ್ತೆ ಆ ದುಡ್ಡನ್ನು ವತ್ಸಲಳ ಪೆಟ್ಟಿಗೆಯಲ್ಲಿಟ್ಟು ತನ್ನ ಟ್ರೇಡ್ ಮಾರ್ಕ್ "ಗುಡ್ ಮಾರ್ನಿಂಗ್" ಹೇಳಿ ಅಳುತ್ತಾ ಮುತ್ತು ಕೊಡುತ್ತಾಳೆ. ಸುಂದರ ದೃಶ್ಯ ಇದು. ಕಟುಕರ ಜೊತೆಯಲ್ಲಿ ಇದ್ದ ಮಾತ್ರಕ್ಕೆ ಮನಸ್ಸು ಕಟುಕತನ ಹೊಂದಿರಬೇಕಿಲ್ಲ ಎನ್ನುವ ಅಂಶ ಹೊಳೆಯುತ್ತದೆ. 

ವತ್ಸಲ ತನ್ನ ಚಿಕ್ಕಮ್ಮನ ಮೋಸದಿಂದ ಬೀದಿ ಪಾಲದ ಮೇಲೆ, ತನ್ನ ಪೆಟ್ಟಿಗೆಯನ್ನು ಹೊತ್ತು ಬೀದಿ ಬೀದಿ ಅಲೆಯುತ್ತಾ ಬರುವಾಗ ಅವಳನ್ನು ಮುಳ್ಳಿನ ಬೇಲಿಯ ಹಿನ್ನೆಲೆಯಲ್ಲಿ ತೋರಿಸಿರುವುದು.. ಮುಂದಿನ ಹಾದಿ ಮುಳ್ಳಿನ ಜೀವನ.. ಎಂದು ತೋರಿಸುತ್ತದೆ.. 

ಒಂದು ಚಿತ್ರದಲ್ಲಿ ಏನಿರಬೇಕು ಏನಿರಬಾರದು ಎನ್ನುದಕ್ಕಿಂತ.. ನೋಡುವ ಪ್ರೇಕ್ಷಕನಿಗೆ ಒಂದು ಸಂದೇಶ ಕೊಡಬೇಕು, ನಮ್ಮ ಮಣ್ಣಿನ ಗುಣವನ್ನು ಎತ್ತಿ ತೋರಬೇಕು ಎನ್ನುವ ತವಕ ಪುಟ್ಟಣ್ಣ ಅವರಿಗೆ ಸದಾ ಇತ್ತು.. ನಾಡಿನ ಸಂಸ್ಕೃತಿ, ಹೆಣ್ಣು ಮಕ್ಕಳ ಬೆಳವಣಿಗೆ, ಮನೆಯಲ್ಲಿನ ಸುಂದರ ಪರಿಸರ.. ಆಹಾ ಪ್ರತಿಯೊಂದನ್ನು ಹದವಾಗಿ ಬೆರೆಸಿದ್ದಾರೆ. ಚಿತ್ರಕಥೆ ಅವರ ಚಿತ್ರಗಳ ಶಕ್ತಿ.. 

ಅಂಥಹ ಒಂದು ಸುಂದರ ಕಥೆಯನ್ನು ಎರಡು ವಿರುದ್ಧ ಸ್ವಭಾವಗಳ ಮತ್ತು ಆ ಸ್ವಭಾವಗಳು ತಮ್ಮ ಜೀವನದಲ್ಲಿ ತರುವ ಬದಲಾವಣೆಗಳನ್ನು ಹಿಡಿದಿಡುವ ಒಂದು ಚಿಕ್ಕ ಚೊಕ್ಕ ಕಥೆಯನ್ನು ಅಷ್ಟೇ ಭಿನ್ನವಾಗಿ ಸುಂದರ ಹಾಡುಗಳು, ಸಂಭಾಷಣೆ, ದೃಶ್ಯಗಳ ಸಂಯೋಜನೆಯೊಂದಿಗೆ ನಮ್ಮ ಮುಂದೆ ತಂದು ಒಂದು ಅಪರೂಪದ ಚಿತ್ರ ಮಾಣಿಕ್ಯವನ್ನು ಕೊಟ್ಟಿದ್ದಾರೆ. 

ಒಂದು ಸುಂದರ ಚಿತ್ರದ ಬಗ್ಗೆ ಬರೆದ ತೃಪ್ತಿ ನನಗೆ.. ಮುಂದಿನ ಚಿತ್ರದೊಂದಿಗೆ  ಮತ್ತೆ ಬರುವೆ.. !!!

Friday, September 5, 2014

ಕರೆಯುತ್ತಲೇ ಇರುವ ಕರುಳಿನ ಕರೆ...! (1970)

ಈ ರೀತಿಯೆಂದೂ ನನಗೆ ಆಗಿರಲಿಲ್ಲ.. ಒಂದು ಚಿತ್ರ ನೋಡಬೇಕೆಂದು ಅನ್ನಿಸಿದರೆ ಶತಾಯಗತಾಯ ನೋಡಿ ಬಿಡುತ್ತಿದ್ದೆ.. ಚಿತ್ರರಂಗದಲ್ಲಿ ನಿರ್ದೇಶಕರ ಗುರು ಎಂದೇ ಹೆಸರಾಗಿದ್ದ ನನ್ನ ನೆಚ್ಚಿನ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ 
ಪ್ರಭಾವಿತನಾಗಿದ್ದು ಎಲ್ಲರಿಗೂ ತಿಳಿದ ವಿಷಯವೇ ಸರಿ... ಬೆಳ್ಳಿ ಮೋಡ, ಮಲ್ಲಮ್ಮನ ಪವಾಡ ಚಿತ್ರಗಳಿಂದ ನಾ ಕಲಿತ ವಿಷಯಗಳ ಬಗ್ಗೆ ಬರೆದ ಮೇಲೆ ಅವರ ಮುಂದಿನ ಚಿತ್ರರತ್ನ ಕರುಳಿನ ಕರೆ ನೋಡಬೇಕಿತ್ತು.. 

ಬರೋಬ್ಬರಿ ಒಂದು ವರ್ಷ ತೆಗೆದುಕೊಂಡೆ ಈ ಚಿತ್ರವನ್ನು ನೋಡಲು ಎಂದರೆ ನನಗೆ ನನ್ನ ಮೇಲೆ ಅಸಮಾಧಾನ ಮತ್ತು ನಾಚಿಕೆಯಾಗುತ್ತಿತ್ತು.. ಹಲವಾರು ಬಾರಿ ನೋಡಿದ್ದರು ಪುಟ್ಟಣ್ಣ ಚಿತ್ರಸರಣಿ ಬರೆಯುವ ಮುನ್ನ ಆ ಚಿತ್ರವನ್ನು ನೋಡುವುದು ನನ್ನ ಅಭ್ಯಾಸ.. 

ಶತಾಯಗತಾಯ ನೋಡಿಬಿಡಲೇ ಬೇಕು ನಿದ್ದೆ ಗೆಟ್ಟು ಕಚೇರಿ ಕೆಲಸ ಮುಗಿಲೆತ್ತರಕ್ಕೆ ಇದ್ದರೂ ಲೆಕ್ಕಿಸದೆ ನೋಡಿಯೇ ಬಿಟ್ಟೆ.. ಆಮೇಲೆ ಹೊಳೆಯಿತು.. ಅರೆ ಇಂದು ಶಿಕ್ಷಕರ ದಿನಾಚರಣೆ.. ಪ್ರಾಯಶಃ ನನ್ನ ಮಾನಸಿಕ ಗುರುಗಳಾದ ಪುಟ್ಟಣ್ಣ ಇವತ್ತಿಗೆ ಅವರ ಮೂರನೇ ಚಿತ್ರದ ಬಗ್ಗೆ ಬರೆಯಲು ಆಶಿರ್ವದಿಸಿದ್ದರು ಅನ್ನಿಸುತ್ತಿದೆ.. ತಗೊಳ್ಳಿ ಪುಟ್ಟಣ್ಣ ಕಣಗಾಲ್ ಅವರ ಚಿತ್ರಸರಣಿಯ ಪಾಠ ಮತ್ತೆ ಕರುಳಿನ ಕರೆ ಚಿತ್ರದ ಮೂಲಕ ಮುಂದೆ ಸಾಗುತ್ತಿದೆ.. 

ಕ್ಷಮೆ ಇರಲಿ ಬಹಳ ದಿನ ಕಾಯಿಸಿದ್ದಕ್ಕಾಗಿ!!!!

ಪುಟ್ಟಣ್ಣ ಚಿತ್ರಗಳಲ್ಲಿ ಒಂದು ವಿಧದ ಮಾಯೆ.. ಮೋಡಿ.. ಇರುತ್ತದೆ.. ಒಂದು ಸಾಧಾರಣ ಕಥೆಯನ್ನು ಅಸಾಧಾರಣ ರೀತಿಯಲ್ಲಿ ಪ್ರಸ್ತುತ ಪಡಿಸುವುದು.. ಅದಕ್ಕೆ ಬೇಕಾದ ಹಿತ ಮಿತವಾದ ಅಳವಡಿಕೆಗಳನ್ನು ತೊಡಿಸುವುದು ಅವರ ಶಕ್ತಿ. 

ಅವರೇ ಬರೆದ ಕಥೆಯನ್ನು ಅಚ್ಚುಕಟ್ಟಾದ ಚಿತ್ರ ಕಥೆಯ ಮೂಲಕ ನಿರ್ದೇಶನ ಮಾಡಿ ಚಿತ್ರ ಮೂಡಿಬಂದದ್ದು ಶ್ರೀಕಾಂತ್ & ಶ್ರೀಕಾಂತ್ ಲಾಂಛನದಲ್ಲಿ ಮೂರನೇ ಮಾರ್ಚ್ ೧೯೭೦ ಇಸವಿಯಲ್ಲಿ.  ಅವರ ನೆಚ್ಚಿನ ಆರ್ ಎನ್ ಜಯಗೋಪಾಲ್ ಸಂಭಾಷಣೆ ಹಾಡುಗಳನ್ನು ಬರೆದರೆ ವೀಣೆ ಮಾಂತ್ರಿಕ ಎಂ ರಂಗರಾವ್ ಇಂಪಾದ ಸಾಹಿತ್ಯಕ್ಕೆ ಸುಶ್ರಾವ್ಯ ಸಂಗೀತ ನೀಡಿದ್ದರು. ಕಪ್ಪು ಬಿಳುಪು ವರ್ಣದಲ್ಲಿ ನೋಡುವ ಕಾಣುವ ನೋಟವೇ ಬೇರೆ.. ಪ್ರತಿಯೊಂದು ಸುಂದರವಾದ ಕಲಾಕೃತಿಯ ಹಾಗೆ ಕಾಣಲು ಮಾಡಿದ್ದ ನೆರಳು ಬೆಳಕಿನ ಸಂಯೋಜನೆ ಮತ್ತು ಛಾಯಾಗ್ರಹಣದ ರೂವಾರಿ ಶ್ರೀಕಾಂತ್.  
ಚಿತ್ರಕೃಪೆ - ಅಂತರ್ಜಾಲ 
ಇಂತಹ ಮಧುರ ಗೀತೆಗಳನ್ನು ಸಂಗೀತವನ್ನು ಒಳಗೊಂಡಿದ್ದ ಹಾಡುಗಳನ್ನು ಉಲಿದದ್ದು ಮಾಂತ್ರಿಕ ಗಾಯಕ ಪಿ ಬಿ ಶ್ರೀನಿವಾಸ್ ಅವರ ಜೊತೆಗೆ ಎಸ್ ಜಾನಕಿ, ಎಲ್ ಆರ್ ಈಶ್ವರಿ ಮತ್ತು ಬಿ ಕೆ ಸುಮಿತ್ರ. 

ಚಿತ್ರರಂಗದ ಭೀಷ್ಮ ಅರ್ ನಾಗೇಂದ್ರರಾಯರ ಅಮೋಘ ಅಭಿನಯದಿಂದ ಕೂಡಿದ್ದ ಈ ಚಿತ್ರದಲ್ಲಿ ಅನೇಕ ನುಡಿಮುತ್ತುಗಳನ್ನು ಉಣಬಡಿಸಿದ್ದಾರೆ. ಶ್ರೀಮಂತನ ವಂಚನೆಗೆ ಒಳಗಾದ ಮಹಿಳೆ ಜನ್ಮ ಕೊಡುವ ಮಗುವೆ ರಾಜ್. ಆ ಮಗುವನ್ನು ಧರೆಗೆ ಇಳಿಸಿದ ಆ ತಾಯಿ ಲೋಕದ ಹಂಗು ಬೇಡ ಎಂದು ಹೊರಟೆ ಬಿಡುತ್ತಾಳೆ. 

ಪರದೇಶಿಯಾಗಿ ಸಿಗುವ ಈ ಮಗುವನ್ನು ಪರಮೇಶಿ ಎನ್ನುತ್ತೇನೆ ಎನ್ನುವ ನಾಗೇಂದ್ರರಾಯರ ಮಾತು ಇಷ್ಟವಾಗುತ್ತದೆ.. ಪ್ರಪಂಚ ಎನ್ನುವ ಗಡಿಯಾರಕ್ಕೆ ದಾನ ಧರ್ಮ ಅನ್ನುವ ಕೀಲಿ ಕೊಡುತ್ತಲೇ ಇರಬೇಕು ಎನ್ನುವ ಸಂಭಾಷಣೆಗೆ ಹೃದಯದಲ್ಲಿ ಶಿಳ್ಳೆ ಗಿಟ್ಟಿಸಿಕೊಳ್ಳುತ್ತದೆ. ಪ್ರತಿ ಹಂತದಲ್ಲೂ ಶಾಂತ ಸ್ವಭಾವ, ಮೃದು ಮಾತು, ತನ್ನ ತಮ್ಮನ ಮಕ್ಕಳೇ ತನ್ನ ಮನೆಯಿಂದ ಹೊರಗೆ ಹಾಕಿದಾಗಲೂ, ಮತ್ತು ತನ್ನ ಇಡಿ ಆಸ್ತಿ ಪಾಸ್ತಿ ದೂರಾದಾರೂ ನಗುತ್ತಲೇ ಹೊರಗೆ ಬರುವ ಅವರ ಅಭಿನಯ ಮನ ತಾಕುತ್ತದೆ. 

ಅದರಲ್ಲೂ ಕಡೆ ದೃಶ್ಯದಲ್ಲಿ ಅವರ ಹಿಂದೆ ಸಾವಿರಾರು ರೂಪಾಯಿಗಳು ಬಿದ್ದಿದ್ದರು ಅವರ ಸಾತ್ವಿಕ ನೋಟ.. ಪ್ರಪಂಚದಲ್ಲಿ ಸತ್ಯ ಧರ್ಮ ಯಾವತ್ತೂ ಮುಂದೆ ಮಿಕ್ಕಿದೆಲ್ಲವೂ ಹಿಂದೆ ಎನ್ನುವ ದೃಶ್ಯ ಸಂಯೋಜನೆ ನಿಜಕ್ಕೂ ಈ ಚಿತ್ರದ ಮಿಂಚಿನ ಅಂಶ. 

ಲಾರಿ ಡ್ರೈವ್ ಮಾಡುವುದನ್ನೇ ಇಷ್ಟಪಡುವ ರಾಜ್ ಅಭಿನಯ ಕಣ್ಣಿಗೆ ಕಟ್ಟುತ್ತದೆ. ಹಳ್ಳಿ ಮತ್ತು ದಿಳ್ಳಿಯ ನಡುವಿನ ಸಂಭಾಷಣೆ ಖುಷಿ ಕೊಡುತ್ತದೆ. ಭಾವಾಭಿನಯದಲ್ಲಿ ರಾಜ್ ನಿಜವಾಗಿಯೂ ರಾಜರೆ. ತಾ ಕೆಲಸ ಮಾಡುವ ಸಾಹುಕಾರರ ಮಡದಿ ಪರಮೇಶಿ ಇಷ್ಟು ದಿನ ನನ್ನ ನೋವನ್ನು ಹೇಳಿಕೊಳ್ಳಲು ಯಾರೂ ಇರಲಿಲ್ಲ ಈಗ ನೀ ಇದ್ದೀಯ ಎಂದಾಗ ರಾಜ್ ಕಣ್ಣಲ್ಲಿ ಜಿನುಗಲೇ ಬೇಡವೇ ಎಂದು ಇಣುಕುವ ಭಾಷ್ಪ, ಜೊತೆಯಲ್ಲಿ "ಅಷ್ಟು ಪುಣ್ಯವಂತನಾ ತಾಯಿ ನಾನು" ಎಂದು ಹೇಳುವಾಗ ಅವರ ಧ್ವನಿ.. ವಾವ್ ಸೂಪರ್ ಸೂಪರ್ 

ರಾಜ್ ಚಿತ್ರ ಪೂರ್ತಿ ಆವರಿಸಿಕೊಳ್ಳುತ್ತಾರೆ.. ಹಾಡಿರಲಿ, ಸಂಭಾಷಣೆ ಇರಲಿ, ನೃತ್ಯ, ಹೊಡೆದಾಟ ಎಲ್ಲದರಲ್ಲಿಯೂ ಮಿಂಚುತ್ತಾರೆ.. ಅವರ ಇಡಿ ಚಿತ್ರದ ಅಭಿನಯಕ್ಕೆ ಕಲ್ಪನಾ ಚಿತ್ರದಲ್ಲಿ ಹೇಳುವ ಒಂದು ಮಾತು "ಬಡ್ಡಿ ಮಗ ರಾಜ ರಾಜ ಏನು ಗತ್ತು ಆಹಾ ರಾಜ " ಎನ್ನುವಾಗ ಕಲ್ಪನಾ ನಿಲ್ಲುವ ಭಂಗಿ, ಮತ್ತು ಹೇಳುವ ಬರಿ ರಾಜ್ ಅಭಿನಯಕ್ಕೆ ಒಂದು ಪಾರಿತೋಷಕ ತೊಡಿಸುತ್ತದೆ.. ಅದರ ಪಾಡಿಗೆ ನಮ್ಮ ಒಳ್ಳೆ ಕೆಲಸ ಮಾತಾಡುವಾಗ ಗುರುತಿಸುವಿಕೆ ಸಿಕ್ಕೆ ಸಿಗುತ್ತದೆ ಎನ್ನುವ ನೀತಿ ಇಲ್ಲಿ ಸಿಗುತ್ತದೆ. 

ಕಳ್ಳೆಕಾಯಿ ಮಾರುವ ಕಲ್ಪನಾ ಪಾತ್ರಧಾರಿ ಇನ್ನೊಂದು ರೀತಿಯಲ್ಲಿ ಮನ ಗೆಲ್ಲುತ್ತಾರೆ. ಹಳ್ಳಿ ಸೊಗಡು, ನಾಚಿಕೆ, ಹೆದರಿಕೆ, ಗಯ್ಯಾಳಿ ಸಂಭಾಷಣೆ ಸೂಪರ್ ಸೂಪರ್. ರಾಜ್ ಪ್ರೇಮ ನಿವೇದನೆ ಮಾಡುವಾಗ ಗಾಬರಿ, ನಾಚಿಕೆ, ಹೆದರಿಕೆ, ಪ್ರೀತಿ ಎಲ್ಲವೂ ತುಂಬಿಕೊಂಡು ನೋಡುವ ನೋಟ ಅಭಿನಯ ಕಣ್ಣಿಗೆ ಕಟ್ಟುತ್ತದೆ. 

ಆದವಾನಿ ಲಕ್ಷ್ಮೀದೇವಿ ಪಾತ್ರ ಕರುನಾಡಿನ ಇನ್ನೊಬ್ಬ ಅಮ್ಮನನ್ನಾಗಿಸಿ ಬಿಡುತ್ತದೆ. ಪಂಡರಿ ಬಾಯಿ ಆದ ನಂತರ ಅಮ್ಮನ ಸ್ಥಾನಕ್ಕೆ ನಿಲ್ಲುವ ಲಕ್ಷ್ಮೀದೇವಿ ಯವರ ಎಲ್ಲಾ ಅಮ್ಮನ ಪಾತ್ರಗಳು ಇಷ್ಟವಾಗುತ್ತದೆ. ಮಲ್ಲಮ್ಮನ ಪವಾಡದಲ್ಲಿ ರಾಜ್ ರನ್ನು ಶೋಷಿಸುವ ಮಲತಾಯಿ ಪಾತ್ರದಲ್ಲಿದ್ದಾರೆ ಇಲ್ಲಿ ಮಗುವನ್ನು ಲಾಲಿಸುವ ಯಶೋದೆ ರೀತಿಯಲ್ಲಿ ಬಿಂಬಿತವಾಗುತ್ತಾರೆ. ಪತಿರಾಯ ದಾರಿ ತಪ್ಪಿದ್ದರೂ ಒಂದಲ್ಲ ಒಂದು ದಿನ ನೆಟ್ಟಗಾಗುತ್ತಾರೆ ಎನ್ನುವ ಹಂಬಲ ಕೂಡಿದ ಪಾತ್ರದಲ್ಲಿ ಅವರ ಅಭಿನಯ ಸೂಪರ್... 

ಅಬ್ಬರಿಸುವ ಪಾತ್ರದಲ್ಲಿ ದಿನೇಶ್ ಮಿಂಚುತ್ತಾರೆ. ಪ್ರತಿ ಹಂತದಲ್ಲೂ ತಾನು ಮಾಡುವ ತಪ್ಪು ತಪ್ಪು ಎಂದು ಅರಿವಿದ್ದರೂ ನಾ ಹೀಗೆ ಎನ್ನುವ ಧೋರಣೆ.. ಕಡೆ ದೃಶ್ಯದಲ್ಲಿ ನೋಟಿನ ಮಳೆಯನ್ನೇ ಸುರಿಸುವಾಗ ಅವರ ಕಣ್ಣಲ್ಲಿ ತೋರುವ ದರ್ಪ.. ದುಡ್ಡಿದ್ದರೆ ಎಲ್ಲವೂ ಎನ್ನುವ ಅವರ ಧೋರಣೆ.. ನೋಡಿಯೇ ಅನುಭವಿಸಬೇಕು.. ತನ್ನ ತಪ್ಪು ಅರಿವಾದಾಗ ಕ್ಷಮೆ ಕೇಳುತ್ತ ಕಣ್ಣೀರಾಗುವ ದಿನೇಶ್ ಇಷ್ಟವಾಗುತ್ತಾರೆ.. 

ಇನ್ನೂ ಉಳಿದ ಹಿತ ಮಿತ ಪಾತ್ರಗಳಲ್ಲಿ ಎತ್ತರದ ನಿಲುವಿನ ಸುದರ್ಶನ್, ಚೆಲುವೆ ರೇಣುಕ ಗಮನ ಸೆಳೆಯುತ್ತಾರೆ. 

ಪುಟ್ಟಣ್ಣ ತಮ್ಮ ಚಿತ್ರಗಳಲ್ಲಿ ಹಾಸ್ಯವನ್ನು ಗುಪ್ತ ಗಾಮಿನಿಯಾಗಿ ತೋರಿಸುತ್ತಾರೆ ಎನ್ನುವುದಕ್ಕೆ ವಧು ಪರೀಕ್ಷೆಯಲ್ಲಿ ನಡೆಯುವ ಹಾಸ್ಯ ಸಮಾವೇಶ ನಗಿಸುತ್ತದೆ . ರತ್ನಾಕರ್, ಬೆಂಗಳೂರು ನಾಗೇಶ್, ಸುಂದರ ಕೃಷ್ಣ ಅರಸ್ ಜೊತೆಯಲ್ಲಿ ಇನ್ನಿಬ್ಬರು ಗಮನ ಸೆಳೆಯುತ್ತಾರೆ. 

ಸರಿಯಾದ ಜಾಗದಲ್ಲಿ ಉತ್ತಮ ಹಾಡುಗಳನ್ನು ಪೋಣಿಸುವುದು ಪುಟ್ಟಣ್ಣ ಅವರ ಶಕ್ತಿ ಮತ್ತು ಆ ಹಾಡುಗಳಿಗೆ ತಮ್ಮ ಸ್ಪರ್ಶ ನೀಡುವುದು ಕೂಡ. 

"ಮೈಸೂರು ದಸರಾ ಎಷ್ಟೊಂದು ಸುಂದರ" ಹಾಡಿನಲ್ಲಿ ನಮ್ಮ ಕರುನಾಡಿನ ದಸರಾ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಾರೆ. ಪಿ ಬಿ ಎಸ್ ಗಾಯನ, ರಾಜ್ ಮತ್ತು ಸಂಗಡಿಗರ ನೃತ್ಯ ಎಲ್ಲವೂ ಸುಂದರವಾಗುತ್ತದೆ. 

"ಕಂಡೆ ನ ಕಂಡೆ ನಾ ಕಾಣದ ತಾಯಿಯ" ಈ ಹಾಡಿನಲ್ಲಿ ಸಾಹಿತ್ಯ ಸಂಗೀತ ಇದಕ್ಕಿಂತ ಮೇಲೆ ಪಿ ಬಿ ಎಸ್ ಅವರ ಮೇಲು ಧ್ವನಿ ಮನಸೆಳೆಯುತ್ತದೆ.. 

"ಹೊಡೆಯುವ ಕೈ ಯೊಂದು..ಕಣ್ ಒರೆಸುವ ಕೈ ಒಂದು" ಹಾಡು  ಮಾತೃ ಪ್ರೇಮವನ್ನು ಸಂತೈಸುವ ಹೃದಯವನ್ನು ತೋರಿಸುವ ಪಿ ಬಿ ಎಸ್ ಗಾಯನ ಸೂಪರ್ 

"ಅ ಆ ಇ ಈ ಕನ್ನಡ ಅಕ್ಷರ ಮಾಲೆ" ಸಾಹಿತಿಯ ಕನ್ನಡ ಪ್ರೇಮ ಪದಗಳನ್ನು ಜೋಡಿಸುವ ಮಾಂತ್ರಿಕತೆ ಸೊಗಸಾಗಿದೆ. ಬಿ ಕೆ ಸುಮಿತ್ರ ಮತ್ತು ಎಸ್ ಜಾನಕಿ ಗಾಯನ ಹೃದಯಕ್ಕೆ ತಾಕುತ್ತದೆ. ಕನ್ನಡದ ಭಾಷೆಯ ಮೇಲಿನ ಪ್ರೇಮ ಪುಟ್ಟಣ್ಣ ಅವರ ಶಕ್ತಿ ಯಾವಾಗಲೂ. 

"ನನ್ನವರಿಗೆ ಯಾರೋ ಸಾಟಿಯೇ" ಎಲ್ ಆರ್ ಈಶ್ವರಿ ಮತ್ತು ಎಸ್ ಜಾನಕಿ ಪೈಪೋಟಿಗೆ ಬಿದ್ದಂತೆ ಹಾಡಿದರೆ ಕಲ್ಪನಾ ಮತ್ತು ರೇಣುಕ ಹಟಕ್ಕೆ ಬಿದ್ದಂತೆ ನೃತ್ಯ ಮಾಡುತ್ತಾ ಅಭಿನಯಿಸಿದ್ದಾರೆ.. 

ಚಿತ್ರದ ಉತ್ತಮ ಅಂಶ ಎಂದರೆ.. ಮೊದಲ ದೃಶ್ಯದಲ್ಲಿ ಒಂದು ಬೂಟು ಕಾಲು ಮತ್ತೊಂದು ಬರಿಗಾಲು ಬಡವ ಶ್ರೀಮಂತರ ಅಂತರ ತೋರಿದರೆ.. ಅಂತಿಮ ದೃಶ್ಯಕ್ಕೆ ಮೊದಲು ಬರಿಗಾಲಲ್ಲಿ ನಿಂತ ಅರ್ ನಾಗೇಂದ್ರ ರಾಯರ ಹಿಂದೆ ಹಣದ ರಾಶಿಯೇ ಇರುವುದು.. ಮತ್ತು ಅವರು ನಿರ್ಲಿಪ್ತರಾಗಿ ಅದಕ್ಕೆ ಮುಖ ಮಾಡಿ ನಿಲ್ಲುವುದು. ಹಣವಲ್ಲ ಮುಖ್ಯ ಗುಣ ಎನ್ನುವ ಅಂಶ ತೋರುತ್ತದೆ.. ಪುಟ್ಟಣ್ಣ ಅವರ ಚಿತ್ರಗಳಲ್ಲಿ ಈ ತರಹದ ಉದಾಹರಣೆ ಹೋಲಿಕೆಗಳು ಹೇರಳವಾಗಿ ಸಿಗುತ್ತದೆ.. 

ಮಾನಸಿಕ ಗುರುಗಳಾದ ಪುಟ್ಟಣ್ಣ ಅವರ ಚಿತ್ರಗಳಿಂದ ಕಲಿತದ್ದು ಅನೇಕ ಪಾಠಗಳು.. ಇಂದು ಶಿಕ್ಷಕರ ದಿನಾಚರಣೆ ಇದಕ್ಕಿಂತ ಸೌಭಾಗ್ಯ ನನಗೇನಿದೆ.. ನನ್ನ ಜೀವನವನ್ನು ತಿದ್ದಿ ತೀಡಿದ ಎಲ್ಲ ಶಿಕ್ಷಕರಿಗೂ, ದಾರಿ ದೀಪವಾದ ಗುರುಗಳಿಗೂ ಈ ಬರಹದ ಮೂಲಕ ಧನ್ಯವಾದಗಳನ್ನು ಹೃದಯದಿಂದ ಅರ್ಪಿಸುತ್ತಿದ್ದೇನೆ.. !!!

ಮುಂದಿನ ಭೇಟಿ ಪುಟ್ಟಣ್ಣ ಅವರ ಇನ್ನೊಂದು ಮುತ್ತಿನಂತ ಚಿತ್ರದ ಜೊತೆಯಲ್ಲಿ!!!

Wednesday, June 25, 2014

ದೃಶ್ಯ.. ಒಂದು ಅಪರೂಪದ ದೃಶ್ಯ (2014)

ಚಲನಚಿತ್ರಗಳು  ಕನಸ್ಸನ್ನು ಮಾರುವ ಒಂದು ಸುಂದರ ಮಾರುಕಟ್ಟೆ.. ಆ ಮಾರುಕಟ್ಟೆಯಲ್ಲಿ ಸಿಗದ ವಸ್ತುಗಳು, ಕನಸುಗಳು ಬಹುಶಃ ಇಲ್ಲ ಎನ್ನಬಹುದು..

ಚಲನಚಿತ್ರಗಳನ್ನು ಬರಿ ಮಾಧ್ಯಮ ಅಂತ ನೋಡದೆ ಅದರಲ್ಲಿ ಸಿಗುವ ಒಳ್ಳೆಯ ಅನುಭವಗಳು, ಕಲಿಸುವ ಪಾಠಗಳು, ಸಿಗುವ ದಾರಿ ಸೂಚಿಗಳನ್ನು ನೋಡುತ್ತಾ ಕಲಿಯುವ ಪರಿ ಪಾಠವನ್ನು ನನಗೆ ಅರಿಯದೆ ಕಲಿಸಿದ್ದು ನನ್ನ ಜನುಮದಾತ, ನನ್ನ ಸೋದರ ಮಾವ ಶ್ರೀಕಾಂತ ಹಾಗೂ ನನ್ನ ಅತ್ತೆಯ ಮಗಳು ವೀಣಾ.

ಇವರೆಲ್ಲ ಚಲನಚಿತ್ರವನ್ನು ನೋಡುವ ಧಾಟಿಯನ್ನೇ ಬದಲಿಸಿದರು. ಅದರೊಳಗಿನ ಹೂರಣ, ಸಂಗೀತ, ಸಾಹಿತ್ಯ ಇವೆಲ್ಲ ಕಲಿಕಾ ಮಾಧ್ಯಮವಾಗಿ ಬದಲಾದದ್ದು ಸೋಜಿಗ.. ಇಂದು ನಾ ಬರೆಯುವ ಲೇಖನಗಳಲ್ಲಿ ಚಲನಚಿತ್ರ ಗುಪ್ತಗಾಮಿನಿಯಾಗಿ ಹರಿಯುತ್ತಿದೆ ಅಂದರೆ ಅದಕ್ಕೆ ಕಾರಣ ಈ ಮೇಲೆ ಹೇಳಿದ ಮೂವರು..

ಚಲನಚಿತ್ರಗಳ ಕನಸಿನ ಲೋಕವನ್ನು ಇನ್ನಷ್ಟು ಅದ್ದೂರಿಯಾಗಿ ತೆರೆಯ ಮೇಲೆ ತಂದದ್ದು ಕನಸುಗಾರ ರವಿಚಂದ್ರನ್.. ಇವರ ಆರಂಭಿಕ ಚಿತ್ರಗಳಿಂದಲೂ ಇವರ ಚಿತ್ರಗಳಲ್ಲಿ ತೋರುತ್ತಿದ್ದ ಸೆಟ್ಟುಗಳು, ಹಾಡುಗಳು, ನೃತ್ಯ, ಸಂಗೀತ, ಛಾಯಾಗ್ರಹಣ ಎಲ್ಲವೂ ತುಸು ಭಿನ್ನವಾಗಿರುತ್ತಿತ್ತು.. ಪ್ರೇಕ್ಷಕರ ಪಾಲಿಗೆ ಕನಸುಗಾರನೆ ಆಗಿದ್ದು ವಿಶೇಷ..

ಈ ಪೀಠಿಕೆಗೆ ಕಾರಣ... "ದೃಶ್ಯ" ಎನ್ನುವ ಚಿತ್ರ.. ರವಿ ವಿಭಿನ್ನ ಅನಿಸುವ ಚಿತ್ರಗಳೆಲ್ಲ ನನಗೆ ಬಹು ಹಿಡಿಸಿದ್ದವು.. ಏಕಾಂಗಿ, ಕಲಾವಿದ, ಇತ್ತೀಚಿನ ದಶಮುಖ.. ಕಾರಣ ಗ್ಲಾಮರ್ ಲೋಕದಿಂದ ಹೊರಗೆ ಬಂದು ತನ್ನ ಛಾಪನ್ನು ಮೂಡಿಸಲು ಪ್ರಯತ್ನಿಸಿದ ಚಿತ್ರಗಳು ಇವು.

ಚಿತ್ರ ಕೃಪೆ : ಅಂತರ್ಜಾಲ 

ದೃಶ್ಯ ಹೆಸರಿಗೆ ತಕ್ಕ ಹಾಗೆ ಒಂದು ವಿಭಿನ್ನ ಚಿತ್ರ. ಇದು ರಿಮೇಕ್ ಚಿತ್ರವಾದರೂ ರವಿ ಇಷ್ಟವಾಗುತ್ತಾರೆ.. ಅಬ್ಬರವಿಲ್ಲದ ಸಂಭಾಷಣೆ, ಹಿತಮಿತ ಸಂಗೀತ, ಛಾಯಾಗ್ರಹಣ, ಸಂಕಲನ ಎಲ್ಲವೂ ಸರಳವಾಗಿದೆ..

ರವಿ ಪಾತ್ರ ತುಂಬಾ ಇಷ್ಟವಾಗುತ್ತದೆ. ಸದ್ದಿಲದೆ, ನಾಯಕ ಎನ್ನುವ ಹಮ್ಮು ಬಿಮ್ಮು ಇಲ್ಲದೆ ಇಮೇಜ್ ಹಂಗು ತೊರೆದು ನಟಿಸಿರುವ ಚಿತ್ರ. ವಯಸ್ಸಾಗಿದೆ ಎನ್ನುವುದಾದರೂ ನಾಯಕ ಎನ್ನುವ ಅಹಂ ಅಷ್ಟು ಸುಲಭವಾಗಿ ಮರೆಯುವುದು ಅಲ್ಲಾ ಮೆರೆಯುವುದು ಇಲ್ಲಾ.. ಆದರೂ ಆ ಅಹಂ ಏನೂ ತೋರದೆ ನಟಿಸಿರುವುದು ಸಂಭಾಷಣೆ ಹೇಳುವಾಗ ತೋರುವ ತಾಳ್ಮೆ ಇಷ್ಟವಾಗುತ್ತದೆ.

ಅರೆ ರವಿ ಯಾಕೆ ಹೀಗೆ ತಾಳ್ಮೆಯಿಂದ ನಟಿಸುತ್ತಿದ್ದಾರೆ ಕೊಂಚ ಕೋಪ ತಾಪ ತೋರಿಸಿ ಮಣ್ಣು ಮುಕ್ಕಿಸಬಾರದೆ ಎನ್ನಿಸುವಷ್ಟು ನಮ್ಮೊಳಗೇ ಆವರಿಸಿಕೊಳ್ಳುತ್ತಾರೆ.. ಇಡಿ ಚಿತ್ರದುದ್ದಕ್ಕೂ ತಮ್ಮ ಹೆಗಲ ಮೇಲೆ ಈ ಚಿತ್ರವನ್ನು ಹೊತ್ತು ಸಾಗಿದ್ದಾರೆ ಎನ್ನುವ ಮಾತು ಸುಳ್ಳಲ್ಲ.

ರವಿಯ ಚಿತ್ರದಲ್ಲಿ ಯಾವಾಗಲೂ ಒಂದು ತೂಕ ನಾಯಕಿಯದ್ದು ಗ್ಲಾಮರ್, ಅಂದ ಚಂದ ತೋರುವುದರಲ್ಲಿ ರವಿ ಎತ್ತಿದ ಕೈ.  ಆದರೆ ಗಂಭೀರ ಗೃಹಿಣಿ ಪಾತ್ರದಲ್ಲಿ ಮನದಾಳಕ್ಕೆ ಇಳಿಯುವುದು ನವ್ಯ ನಾಯರ್ ಎನ್ನುವ ಚೆಲುವೆ. ಹಣೆಯಲ್ಲಿ ಕುಂಕುಮ, ತುಟಿಯಲ್ಲಿ ಕಿರು ನಗೆ, ಹಣೆಯ ಕುಂಕುಮದ ಮೇಲೆ ಅಥವಾ ಕೆಳಗೆ ಇನ್ನೊಂದು ಬೊಟ್ಟು.. ಆಹಾ ಹೆಣ್ಣು ಮಕ್ಕಳ ಚೆಲುವು ಹಣೆಯ ಮೇಲೆ ನೋಡು ಎನ್ನುವ ಮಾತಿನಂತೆ ಇಷ್ಟವಾಗುತ್ತಾರೆ. ಕೊಂಚ ತುಸು ನಗೆ, ಹುಸಿ ಮುನಿಸು, ಉತ್ತಾರರ್ಧದಲ್ಲಿ ತೋರುವ ಆತಂಕ, ತಳಮಳ ಎಲ್ಲವೂ ನವ್ಯಳನ್ನು ಇನ್ನೊಮ್ಮೆ ನೋಡಬೇಕು ಎನ್ನಿಸುತ್ತದೆ. ನವ್ಯ ನಿಜವಾಗಿಯೂ ಚೆಲುವೆ ಎಂಬ ಮಾತು ಹೃದಯಕ್ಕೆತಾಗುತ್ತದೆ.. ಕಣ್ಣಿನ ಸೌಂದರ್ಯಕ್ಕಿಂತ ಹೃದಯಕ್ಕೆ ತಾಕುವ ಸೌಂದರ್ಯ ಸದಾ ಮನದಲ್ಲಿ ಉಳಿಯುತ್ತದೆ ಎನ್ನುವ ಮಾತು ಅಕ್ಷರಶಃ ನಿಜಾ..

ಚಿತ್ರ ಕೃಪೆ : ಅಂತರ್ಜಾಲ 

ರವಿ ಮಗಳ ಪಾತ್ರಧಾರಿ ಕೂಡ ಮನಸ್ಸಿಗೆ ಹತ್ತಿರವಾಗುವುದು ಆ ತಾರುಣ್ಯದ ಆತಂಕ, ಅಪ್ಪ ಅಮ್ಮನ ಮೇಲಿನ ಪ್ರೀತಿ ನಂಬಿಕೆ ಅಚಲ ವಿಶ್ವಾಸ ಇವೆಲ್ಲವನ್ನೂ ಹೊತ್ತುಕೊಂಡು ನಟಿಸಿದ್ದಾರೆ.. ಕಾಲೇಜ್ ನಲ್ಲಿ ಕೇಳುವ ಪ್ರಶ್ನೆಗೆ ತಡಬಡಾಯಿಸದೆ ಉತ್ತರ ಕೊಡುವ ದೃಶ್ಯ  ಇಷ್ಟವಾಗುತ್ತದೆ..

ಇನ್ನೂ ಪುಟಾಣಿ.. ಭಯ, ದುಗುಡ, ಆತಂಕ ಅಪ್ಪನಿಗೆ ಏನಾಗುತ್ತದೆ ಅಮ್ಮನಿಗೆ ಏನಾಗುತ್ತದೆ ಎನ್ನುವ ಮುಖಭಾವ ಹೊಮ್ಮಿಸುವ ತಾಕತ್ ಖುಷಿ ನೀಡುತ್ತದೆ .. ಅದರಲ್ಲೂ ಅಪ್ಪಾ ನಾ ತಪ್ಪು ಮಾಡಿದೆನಾ ಎಂದು ಕೇಳುವ ದೃಶ್ಯ ಮನಕಲುಕುತ್ತದೆ...
ಚಿತ್ರ ಕೃಪೆ : ಅಂತರ್ಜಾಲ 

ಅಚ್ಯುತ್ ಕುಮಾರ್ ಅಬ್ಬರ ಪಾತ್ರ, ಆ ದ್ವೇಷ, ಕೋಪ ಸಿಟ್ಟು ಎಲ್ಲವನ್ನು ಒಂದೇ ಪಾತ್ರೆಯಲ್ಲಿ ಹಾಕಿ ಕಲಸಿ ಅಭಿನಯಿಸಿದ್ದಾರೆ.. ಇನ್ನುಳಿದ ಪಾತ್ರಗಳು ತಮ್ಮ ತಮ್ಮ ತೂಕವನ್ನು ಚಿತ್ರದಲ್ಲಿ ತುಂಬಿದ್ದಾರೆ..

ಇಡಿ ಚಿತ್ರದಲ್ಲಿ ಕಾಣುವುದು ರವಿ.. ದೇಹದ ತೂಕ ಹೇಗೆ ಇದ್ದರೂ ಪಾತ್ರಕ್ಕೆ ತೂಕ ಒದಗಿಸಿದ್ದಾರೆ.. ಒಂದು ಒಳ್ಳೆ ಚಿತ್ರವನ್ನು ಕೊಟ್ಟ ಕೀರ್ತಿ ನಿರ್ದೇಶಕ ಪಿ. ವಾಸು ಅವರಿಗೆ ಸಲ್ಲುತ್ತದೆ.. ಚಿತ್ರವನ್ನು ಇನ್ನಷ್ಟು ಬಿಗಿಗೊಳಿಸಬಹುದಿತ್ತು ಎನ್ನಿಸಿದರೂ.. ಸಂಗೀತ ಪ್ರಚಂಡ ಶ್ರೀ ಇಳಯರಾಜ ಅವರ ಸಂಗೀತಕ್ಕೆ ಇನ್ನಷ್ಟು ಹೊಳಪು ಬೇಕಿತ್ತು ಎನಿಸಿದರೂ ಇಡಿ ಚಿತ್ರದ ಓಟಕ್ಕೆ ಇದು ಯಾವುದು ದಕ್ಕೆ ಬಾರದಿರುವುದು ಈ ಚಿತ್ರದ ವಿಶೇಷ..

ಚಿತ್ರ ಕೃಪೆ : ಅಂತರ್ಜಾಲ 
ಚಲನಚಿತ್ರವನ್ನೇ ಉಸಿರಾಗಿಸಿಕೊಂಡು ಬದುಕಿರುವ ರವಿ ಈ ಚಿತ್ರದಲ್ಲಿ ಚಿತ್ರಗಳ ದೃಶ್ಯಗಳ ಮೂಲಕವೇ ಇಡಿ ಚಿತ್ರವನ್ನು ಕಟ್ಟಿಕೊಂಡಿರುವುದು ಒಂದು ವಿಭಿನ್ನ ಪ್ರಯೋಗ ಮತ್ತು ವಿಶೇಷ.

ರವಿ ನಿಜಕ್ಕೂ ಒಬ್ಬ ಕನಸುಗಾರ.. ಅವರ ಬದಲಾದ ವಯೋಮಾನಕ್ಕೆ ತಕ್ಕಂತೆ ಒಂದು ಸುಂದರ ಚಿತ್ರವನ್ನು ನೀಡಿದ ಇಡಿ ತಂಡಕ್ಕೆ ಅಭಿನಂದನೆಗಳು.. 

Thursday, April 24, 2014

ರಾಜ್ ಆಸ್ಥಾನದಲ್ಲಿ ಅಣ್ಣಾ !!!!

ಕಾಂತ.. ಶ್ರೀಕಾಂತ.. ಶ್ರೀಕಾಂತು.. ಶ್ರೀಕಾಂತೂ...

ಯಾರೋ ಕೂಗಿದ ಹಾಗೆ ಆಯಿತು.. ಮಯೂರ ಶೈಲಿಯಲ್ಲಿಯೇ

"ನಿನಗೆ ನನ್ನ  ಜನುಮ ದಿನ ನೆನಪಿಲ್ಲವೇ.. .. ಇದರ ಬಗ್ಗೆ ಏನಾದರೂ ಬರೆಯುದಿಲ್ಲವೇ.. "

ಅಚಾನಕ್ ಕಣ್ಣು ಬಿಟ್ಟೆ.. ಸುತ್ತ ಮುತ್ತಲು ಕಪ್ಪು ಕತ್ತಲೆ...

ನಿಧಾನವಾಗಿ ಇದ್ದ ಜಾಗವನ್ನು ಪರಿಶೀಲಿಸುತ್ತಾ ಹೋದೆ.. ಅಭಿಮಾನದ ಬೆಳಕಲ್ಲಿ ಅಲ್ಲಿ ಇದ್ದ ದೃಶ್ಯಗಳು ಕಾಣತೊಡಗಿದವು..

ಒಂದು ಕಿರು ನಗೆ ಬೀರಿದೆ..

ಹಾ ಈಗ ಬರಿಯಬಹುದು.. ಬೇಗ ಬರಿ ಕಾಂತ.. ಓದಬೇಕು ಎಂದಿತು ಒಂದು ಅಶರೀರವಾಣಿ... !

ಅದರ ಫಲವೇ ಈ ಲೇಖನ!!!!!

***************

ರಾಜಸ್ಥಾನದಲ್ಲಿ ನಡೆಯುತ್ತಾ ಹೋದೆ.. ಆ ಕಡೆ ಈ ಕಡೆ ಸಾಧು ಸಂತರು, ಸಾಮಂತರು, ಪ್ರಜೆಗಳು, ಗಾಯಕರು, ಕಲಾವಿದರು ಎಲ್ಲರೂ ನೆರೆದಿದ್ದರು.. ನಿಧಾನವಾಗಿ ಕಣ್ಣು ಹಾಯಿಸಿದೆ.. ಬಹು ಪರಾಕ್ ಬರುತ್ತಿತ್ತು..

"ರಾಜಾಧಿರಾಜ.. ರಾಜ ಮಾರ್ತಂಡ.. ಕರುನಾಡಿನ ಅಭಿನಯ ತಿಲಕ, ಹುಟ್ಟು ಕಲಾವಿದ.. ಬಹು ಪರಾಕ್ ಬಹು ಪರಾಕ್.. "

"ಅಭಿಮಾನಿ ದೇವರುಗಳೇ.. ದಯಮಾಡಿ ಎಲ್ಲರೂ ಆಸೀನರಾಗಿ.. ನೀವೆಲ್ಲ ಇಂದು ಬಂದದ್ದು ನನಗೆ ಬಹಳ ಸಂತಸವಾಗುತ್ತಿದ್ದೆ. ನೀವೆಲ್ಲ ಇಂದು ಬಂದ ಕಾರಣ ಹೇಳಿದರೆ ನನಗೆ ಇನ್ನಷ್ಟು ಖುಷಿಯಾಗುತ್ತದೆ.. ಒಬ್ಬೊಬ್ಬರಾಗಿ ನಿಮ್ಮ ಪರಿಚಯ ಮಾಡಿಕೊಳ್ಳಿ..ಹಾಗೆಯೇ ಇಂದು ನಮ್ಮ ಆತಿಥ್ಯ ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡಬೇಕು"

ನೆರೆದಿದ್ದ ಎಲ್ಲರೂ ಒಂದೇ ಉಸಿರಲ್ಲಿ "ಆಗಬಹುದು" ಎಂದರು.. ಇಲ್ಲಿಂದ ಶುರುವಾಯಿತು ಒಂದು ಬೃಹತ್ ಸಭಾ ದೃಶ್ಯ..

******************

ಅಣ್ಣ ನಿಮಗಾಗಿ ನನ್ನ ಕಣ್ಣು ಕೊಡಲು ಸಿದ್ಧ ಅಂತ ಒಬ್ಬರು ನಿಂತರು.. ಅಣ್ಣಾ ನೀವು ಹೇಳಿ.. ನಾ ಅದನು ಮಾಡಲು ಸಿದ್ಧ ಎಂದರು ಇನ್ನೊಬ್ಬರು..


ನಿಮ್ಮ ರಾಜ್ಯದಲ್ಲಿ ಸಾಧು ಸಂತರಿಗೆ.. ದೇವಾನು ದೇವತೆಗಳಿಗೆ ತೊರುತ್ತಿರುವ ಅಭಿಮಾನ, ಭಕ್ತಿ ತುಂಬಾ ಇಷ್ಟವಾಗುತ್ತಿದೆ ಪ್ರಭು ಎಂದರು ಇನ್ನಿಬ್ಬರು.. 


ಪ್ರಭು .. ಕರುನಾಡಿನ ಉಳಿವಿಗಾಗಿ ಹೋರಾಡಲು ಸದಾ ಸಿದ್ಧ.. ನೋಡಿ ಗದೆಯನ್ನು ಯಾವಾಗಲೂ ಹೀಗೆಯೇ ಇಟ್ಟುಕೊಂಡು ನಿಂತಿರುತ್ತೇನೆ..!

ಕನ್ನಡ ನಾಡಿನ ಸಿಂಹಗಳಿಗೆ ನೀವು ಕಳಶಪ್ರಾಯ.. ಅದರಂತೆ ನಾವು ಕೂಡ ಎಂದರು ರಣಧೀರರು!


ದೇವರಿಲ್ಲದ ತಾಣವಿಲ್ಲ.. ನಾಡಿನ ಬಗ್ಗೆ ಅಭಿಮಾನವಿರದ ಪ್ರಜೆಗಳಿಲ್ಲ.. ಕೈವಾರದಿಂದ ಕಿತ್ತೂರಿನ ತನಕ ಎಲ್ಲೆ ಇರದ ಅಭಿಮಾನದ ಭಕ್ತಿ ನಮ್ಮದು ಅಣ್ಣಾ ಎಂದರೂ ಕೈವಾರ ಮತ್ತು ಕಿತ್ತೂರಿನ ಪ್ರಮುಖರು..


"ಕುಲ ಕುಲವೆಂದು ಹೊಡೆದಾಡುತ್ತಲೇ ಇಲ್ಲ ರಾಜರೆ.. ನಮಗೆ ಎಲ್ಲರೂ ಸಮಾನರು ಎನ್ನುವ ನಿಮ್ಮ ತತ್ವವೇ ನಮಗೆ ಆದರ್ಶ.. ಚೇತ ಆಗಿರಲಿ ಕಬೀರ್ ಆಗಿರಲಿ ಎಲ್ಲರೂ ಒಂದೇ ಎನ್ನುವ ನಿಮ್ಮ ಮಾತಿಗೆ ನಮ್ಮ ನಮನಗಳು"


"ಕರುನಾಡಿನ ವಿಷಯಕ್ಕೆ ಬಂದರೆ ಸತಿಶಕ್ತಿ ಮಹತ್ವವೇನು ಎಂದು ತೋರಿಸಿಯೇ ಬಿಡುತ್ತೇನೆ.. ಎಂದು ಟೊಂಕ ಕಟ್ಟಿ ನಿಂತಿದ್ದೇನೆ ಅಣ್ಣ.. ನೀವು ಹೂಂ ಎಂದು ಹೇಳಿ.. ಮುಂದೆ ನಮಗೆ ಬಿಡಿ"


ಕೈಲಾಸದಿಂದ ಬಂದ ಗೌರಿಯೇ ಆದರೂ.. ತ್ರೇತಾಯುಗದ ಸೀತೆಯೇ ಆದರೂ ಹೆಣ್ಣು ಮಕ್ಕಳಿಗೆ ಸದಾ ಗೌರವ ಆದರಗಳು ಇದ್ದೆ ಇವೆ.. ನಮಸ್ಕಾರಗಳು ಪ್ರಭುಗಳೇ!


ನಾ ಹಾಡುವ ಹಾಡು ನಿಮ್ಮ ಸಾಮ್ರಾಜ್ಯದ ಏಳಿಗೆಗಾಗಿ.. ನನ್ನ ಭಕ್ತಿ ನಾಡಿನ ಸಾಧನೆಗಾಗಿ..  ವಿಠಲನ ದಯೆ ಇರಲಿ ಸದಾ ನಿಮ್ಮ ಮೇಲೆ ಎಂದು ಬೇಡಿಕೊಳ್ಳುವೆ ಪ್ರಭು ಎಂದರು ತುಕಾರಾಂ


ಮಹಾರಾಜರೇ.. ನೀವು ಹೀಗೆ ನನ್ನ ತರಹ ಯೋಚಿಸುವುದೇ ಬೇಡ... ನಾ ಸುಮ್ಮನೆ ನಂದಲಾರದ ದೀಪವನ್ನು ಹೇಗೆ ಬೆಳಗಿಸಬೇಕು ಎಂದು ಯೋಚಿಸುತ್ತಿರುವೆ ಅಷ್ಟೇ ..



ಎಮ್ಮೆ ಕಾದರೂ ಸರಿಯೇ.. ಏನೇ ಆದರೂ ನಿಮ್ಮ ನಾಡಿನಲ್ಲಿ ಸತ್ಯಕ್ಕಿರುವ ಬೆಲೆ ಮಹಾರಾಜ ಹರಿಶ್ಚಂದ್ರನ ವರ್ಚಸ್ಸಿಗಿಂತಲೂ ಹೆಚ್ಚು...!

ರಾಘವೇಂದ್ರ ಸ್ವಾಮಿಗಳನ್ನು ಧರೆಗಿಳಿಸಿದ ಪುಣ್ಯ ಭೂಮಿಯಿದು.. ಶಿವನ ಇನ್ನೊಂದು ರೂಪವೇ ಇರುವ ಪುಣ್ಯ ನೆಲೆಯಿದು.. ಆ ನೆಲದಲ್ಲಿರುವ ನಾವೇ ಧನ್ಯ ಪ್ರಭುಗಳೇ


ಗೂಡಾಚಾರರೂ ಎಲ್ಲ ರಾಜ್ಯಗಳಿಗೂ ಬೇಕು.. ನಿಮ್ಮ ರಾಜ್ಯವನ್ನು ಸಂಕಷ್ಟದಿಂದ ಪಾರು ಮಾಡಲು ನಾ ಸದಾ ಎಚ್ಚರದಿಂದ ಇರುವೆ.. ನಾ ಕರುನಾಡಿನ ಬಾಂಡ್ ಜೇಮ್ಸ್ ಬಾಂಡ್..


ನಮ್ಮ ಭಾಗ್ಯ.. ನಿಮ್ಮ ಬೆಳಗು.. ರಾಜರೆ.. ನಾಡಿನಲ್ಲೆಲ್ಲ ಈ ರಾಜ ಭಲೇ ರಾಜ ಎಂದು ಕೊಂಡಾಡುತ್ತಿದ್ದಾರೆ!!!


ನಿಮ್ಮ ಆಶೀರ್ವಾದದ ಫಲ.. ಬೆಂದಕಾಳೂರಿಗೆ ನಾಡ ಪ್ರಭುವಾಗಿದ್ದೇನೆ.. ನಿಮ್ಮನ್ನು ಭೇಟಿ ಮಾಡಲು ಬಂದೆ.. ಮಹಾರಾಜರೇ..


ಮನದ ಉಯ್ಯಾಲೆಗೆ ಕಡಿವಾಣ ಹಾಕಲು ಕೆಲವೊಮ್ಮೆ ಬುದ್ಧನ ಹಿಂದೆ ಹೋಗಬೇಕಾಗುತ್ತದೆ.. ಅವರ ತತ್ವಗಳನ್ನು ನಾಡಿನಲ್ಲಿ ಪ್ರಚಾರ ಮಾಡುತ್ತಿದ್ದೇವೆ.. ಜೊತೆಯಲ್ಲಿ ಬಾಳು ಬೆಳಗಿಸಲು ಬರುವ ಅಡ್ಡಿ ಆತಂಕಗಳನ್ನು ತೊಡೆದು ಹಾಕಲು ನಾವು ಬಂದಿರುವೆವು.,


ಒಬ್ಬರು ಇಬ್ಬರಾಗಿರಲಿ ಇಬ್ಬರು  ಒಬ್ಬರಾಗಿರಲಿ ಆದ್ರೆ ಅಭಿಮಾನ ಮಾತ್ರ ಸದಾ ಏಕ ಮುಖವಾಗಿರಲಿ ಕಾರಣ ನಮ್ಮೆಲ್ಲರದ್ದು ಭಲೇ ಜೋಡಿ.. ಅಲ್ಲವೇ ಮಿ. ರಾಜರೆ

ಮನೆತನದ ಗೌರವ.. ಕುಲದ ಗೌರವ ಕಾಪಾಡಲು ತಾತ ಮಗ ಮೊಮ್ಮಗ ಒಟ್ಟಿಗೆ ಬಂದಿದ್ದೇವೆ.. ಒಲವು ನಮ್ಮ ಬದುಕು.. ಒಲವೆ ಜೀವನ ಸಾಕ್ಶತ್ಕಾರ ಎನ್ನುವ ತತ್ವ ನಮ್ಮದು..


ನಮ್ಮನ್ನು ನಂಬಿರುವ ಜನತೆಗೆ ಉದಾರ ಮನಸ್ಸಿನಿಂದ ದಾನ ಮಾಡಬೇಕು ಸಾಕಬೇಕು ಸಲಹಬೇಕು ಎನ್ನುವ ಕಸ್ತೂರಿ ಸಂದೇಶ... ಭೂ ತಾಯಿಯನ್ನು ನಂಬಿದರೆ ಕೆಡುಕಿಲ್ಲ ಎನ್ನುವ ನೀತಿ ನಮ್ಮ ನಾಡಿನದು.. ಅದಕ್ಕೆ ನಮ್ಮ ನಾಡು ಬಂಗಾರದ ಕಸ್ತೂರಿ ನಿವಾಸ...


 ಹುಚ್ಚು ಮನಸ್ಸನ್ನು ಕಡಿವಾಣದಲ್ಲಿಡುವುದು ಹೇಗೆ ಅಂದರೆ ಹೀಗೆ.. ಅನ್ನುತ್ತಾರೆ ಕೆಲ ಭಲೇ ಹುಚ್ಚರು.. ಆದರೆ ಅದು ಕೆಲ ಕ್ಷಣಗಳು ಮನೋರಂಜನೆಗೆ ಮಾತ್ರ.. ಅದಕ್ಕಾಗಿ ನಾ ಬಂದಿರುವೆ..


ದೂರದ ಬೆಟ್ಟದಲ್ಲಿ ಗಂಧದಗುಡಿ ಇದೆ ಆದರೆ ಗಂಧದ ಘಮ ಘಮ ಎಲ್ಲ ಕಡೆಯೂ ಪಸರಿಸುತ್ತಿದೆ.. ಕನ್ನಡ ನಾಡು ಗಂಧದ ಬೀಡು.. ಅದರ ರಕ್ಷಣೆಗೆ ನಾ ಇರುವೆ..


ವಜ್ರಗಳ ಬಗ್ಗೆ ಕನಸ್ಸು ಕೆಲವೊಮ್ಮೆ ಮುದಕೊಡುತ್ತದೆ.. ಆದರೆ ನಮ್ಮ ನಾಡಿನಲ್ಲಿ ಕಲಾವಿದರೇ ವಜ್ರಗಳು.. ಮುತ್ತು ರತ್ನ ಸೇರಿನಲ್ಲಿ ಅಳೆಯುತ್ತಿದ್ದ ನಾಡು ನಮ್ಮದು.. ಇನ್ನು ಮೂರುವರೆ ವಜ್ರಗಳು ಎರಡು ಕನಸೊಂತು ಅಲ್ಲವೇ ಅಲ್ಲ ಪ್ರಭುಗಳೇ..


 ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡುವ ಕಾಯಕ ಹೊಂದಿರುವ ನಾನು, ಪ್ರತಿ ಜೀವಿಯಲ್ಲೂ ಪಾಂಡುರಂಗನನ್ನು ಕಾಣುತ್ತೇನೆ.. ಆ ಪಾಂಡುರಂಗನ ಒಲುಮೆ ನಿಮ್ಮ ರಾಜ್ಯಕ್ಕೆ ಸದಾ ಇರಲಿ ಎಂದು ಕೈಯೆತ್ತಿ ಆ ದೇವನಲ್ಲಿ ಪ್ರಾರ್ಥಿಸುತ್ತಿದ್ದೇನೆ..


ನಾಡಿನ ಭಾಷೆ ಗಡಿ ರಕ್ಷಣೆಯ ವಿರುದ್ಧ ನಿಲ್ಲುವವರಿಗೆ ನನ್ನ ಸವಾಲ್.. ಭದ್ರವಾಗಿ ನಾ ನಿಲ್ಲುವೆ ನಿಮ್ಮ ಜೊತೆ ಅಣ್ಣಾ!!!


ಪಂಜರ ಹೇಗಾದರೂ ಇರಲಿ.. ಪ್ರಜೆಗಳ ಮುದ್ದಾದ ಮುಗ್ಧತನ... ಅವರು ಇರುವ ಕಡೆಯಲ್ಲಿಯೇ ಬಂಗಾರ ಬೆಳೆವ ಅವರ ಮನಸ್ಸಿಗೆ ನನ್ನ ಒಂದು ಶಿಳ್ಳೆ!!!


ಪಕ್ಕದ ಊರಿನಲ್ಲಿ ತಿಮ್ಮಪ್ಪನ ನೋಡಲು ಹೋಗಬೇಕಿತ್ತು.. ಆದ್ರೆ ನಿಮ್ಮ ರಾಜ್ಯದಲ್ಲಿ ಆ ಶ್ರೀನಿವಾಸನನ್ನು  ಕಂಡದ್ದು ಖುಷಿಯಾಯಿತು.. ತಿರುಪತಿ ಗಿರಿವಾಸ ಶ್ರೀ ವೆಂಕಟೇಶ.. ನೀನೊಲಿದ ಮನೆ ಮನೆಯು ಲಕ್ಷ್ಮಿನಿವಾಸ.. !



ಕರುನಾಡ ಸಿಂಹಾಸನಧೀಶ್ವರ.. ನಿಮಗೆ ಬಲಗೈಯಾಗಿ  ನಾ ಇರುವೆ.. ಕನ್ನಡದ ಪತಾಕೆ ಮುಗಿಲೆತ್ತರಕ್ಕೆ ಏರಲಿ.. !



ದಾರಿ ತಪ್ಪಿದ ಎಷ್ಟೋ ಜನರನ್ನು ನಿಮ್ಮ ರಾಜ್ಯಭಾರದಲ್ಲಿ ದಾರಿಗೆ ತಂದಿದ್ದೀರ .. ಅದಕ್ಕೆ ಧನ್ಯತಾ ಭಾವ ಸೂಸಲು ತ್ರಿಮೂರ್ತಿಯಾಗಿ ನಾವೆಲ್ಲಾ ಬಂದಿದ್ದೇವೆ..


ಅಣ್ಣಾ ನಿಮ್ಮನ್ನು ನಾವು ಮರೆಯಲಾರೆವು... ಬಹದ್ದೂರ್ ಗಂಡು ಮೆಟ್ಟಿದ ಈ  ನೆಲದಲ್ಲಿ ನಿಮ್ಮನ್ನು  ಅಭಿನಂದಿಸಲು ಬಂದಿದ್ದೇವೆ.. ಮೋಟಾರ್ ಬೈಕ್ ನಲ್ಲಿ


ಪ್ರತಿ ಶುಭ ಸಮಾರಂಭಕ್ಕೆ.. ಬೆಳಗಿನ ಪೂಜೆಗೆ ಸನಾಧಿ ನಾದ ಬೇಕೇ ಬೇಕು.. ಹಾಗೆಯೇ ಗಾನ ಸುಧೆ ಕೂಡ.. ನಿಮ್ಮ ಗಾನ ಸಭೆಗೆ ನಾವಿಬ್ಬರು ಜೊತೆಯಲ್ಲಿ ಜುಗಲ್  ಬಂಧಿ... 


ಕರಾವಳಿಯಿಂದ ಬಿಸಿಲಿಂದ ಮಡಿಕೇರಿಯ ತಂಪಿನ ತನಕ ನಿಮ್ಮ ಎಲ್ಲಾ ಪ್ರಜೆಗಳು ಕ್ಷೇಮವಾಗಿದ್ದಾರೆ..ಅದನ್ನು ತಿಳಿಸಲು ನಾವಿಬ್ಬರು ಹೀಗೆಯೇ ಬಂದಿದ್ದೇವೆ


ಕನ್ನಡ ಕಂಪನ್ನು.. ಇಂಗ್ಲಿಷ್ ಪದಗಳ ಜೊತೆಯಲ್ಲಿ ಹಾಡಿ.. ಎಲ್ಲರನ್ನೂ ರಂಜಿಸಲು ನಾ ಇರುವೆ.. ಬರುವೆ.. ಹಾಡುವೆ..


ಕರುನಾಡು ಹೊಸಬಬೆಳಕಲ್ಲಿ ಸದಾ ಬೀಗುತ್ತಿರಬೇಕು,.. ಬೆಳಗುತ್ತಿರಬೇಕು.. ನನ್ನ ಹಾಡು ಆ ಹೊಸಬೆಳಕಿಗಾಗಿ !!!


ಯೋಗ ದೇಹಕ್ಕೆ ಎಷ್ಟು ಮುಖ್ಯವೋ ಹಾಗೆಯೇ ಛಲ ಕೂಡ ಮನಸ್ಸಿಗೆ ಮುಖ್ಯ.. ಅಂದುಕೊಂಡಿದ್ದನ್ನು ಸಾಧಿಸಬೇಕು.. ಸಾಧಿಸಿದ್ದನ್ನು ಹಂಚಿಕೊಳ್ಳಬೇಕು.. ಅದುವೇ ಜೀವನ.. ಕಾಮನಬಿಲ್ಲಿನ ಈ ಸಂದೇಶ ಪ್ರಜೆಗಳಿಗೆ ಸದಾ ನೀಡುತ್ತಿದ್ದೇವೆ..


ನಮ್ಮ ದೇಶದ ಮುತ್ತು  ಕಾಳಿದಾಸ..ಅವರು ಬರೆದ ಪ್ರತಿ ಕಾವ್ಯವು ಒಂದು ಮುತ್ತಿನ ಕಥೆ.. ನಾ ಸಾಗರದ ಆಳದಿಂದ ಮುತ್ತನ್ನು ತಂದರೆ ಇವರು ಅಕ್ಷರಗಳ ಒಡಲಲ್ಲಿರುವ ಮುತ್ತನ್ನು ಹೊರತರುತ್ತಾರೆ..



ದೇವರಿರುವ ಪ್ರತಿ ತಾಣದಲ್ಲೂ ಮನುಷ್ಯಇರುತ್ತಾನೆ .. ಮನುಷ್ಯ ಇರುವ ಪ್ರತಿ ಕ್ಷಣದಲ್ಲೂ ದೇವರು ಇರುತ್ತಾನೆ ಎನ್ನುವ ಮಾತು ನನ್ನದು.. ಅಲ್ಲವೇ ಅಣ್ಣಾ..



ಹಾಡುತ್ತಾ ಹಾಡುತ್ತಾ ಹಿಮಗಿರಿಯಿಂದ ನಾದ ಗಂಗೆಯನ್ನು ಇಳಿಸುವ ಈ ಗಾಯನದಿಂದ ನಿಮ್ಮ ಮನಸ್ಸನ್ನು ತಣಿಸಲು ನಾ ಬಂದಿರುವೆ..

ನೀವು ಹುಟ್ಟಿದ್ದು ಕರುನಾಡಿನಲ್ಲಿ.. ನಾ ಹುಟ್ಟಿದ್ದು ಕರುನಾಡಿನಲ್ಲಿ.. ಮೆಟ್ಟಿದ್ದು ಕರುನಾಡಿನಲ್ಲಿ.. ಅಣ್ಣಾ ನಿಮಗೆ ಜೈ ಜೈ ಜೈ..


ಕನ್ನಡ ಪದಗಳು ಶಬ್ಧವೇದಿ ಇದ್ದ ಹಾಗೆ.. ಅದು ಹೇಳಬೇಕಾದ್ದು ಹೇಳುತ್ತದೆ.. ಹೇಳಿದಂತೆ ಬರೆಯುತ್ತದೆ.. ಅದು ಈ ಭಾಷೆಯ ತಾಕತ್.. ಅಣ್ಣಾ ನಿಮ್ಮನ್ನು ನೋಡಲು ಜೀಪಲ್ಲಿ ಬಂದಿರುವೆ..



***********

"ಅಣ್ಣ ಹೇಗಿದೆ..?" 

ಕಾಂತಾ..ನಾ ಏನೂ ಹೇಳೋಲ್ಲ.. ನೀ ಬರೆದಿದ್ದನ್ನು ಹೇಳಲು.. ಅದರ ಬಗ್ಗೆ ಪ್ರತಿಕ್ರಿಯೆ ಕೊಡಲು ನನ್ನ ಅಭಿಮಾನಿ ದೇವರುಗಳು ಇದ್ದಾರೆ ... ನಿನ್ನ ಓದುಗರಿದ್ದಾರೆ.. ಅವರ ಮಾತುಗಳನ್ನು ನಾ ಹೀಗೆ ಕುಳಿತು ಕೇಳುತ್ತಿರುತ್ತೇನೆ ನೋಡುತ್ತಿರುತ್ತೇನೆ... ನೋಡು ಹೀಗೆ ಇಲ್ಲಿಯೇ ಕುಳಿತಿರುವೆ.. 



ಅಣ್ಣಾವ್ರ ಇನ್ನೊಂದು ಜನುಮ ದಿನ.. ಇನ್ನೊಂದು ವರ್ಷ ಅವರ ಚಲನ ಚಿತ್ರಗಳಿಂದ ಕಲಿತ ಪಾಠ ನೀತಿ ಸಂಯಮಗಳನ್ನು ಅಳವಡಿಸಿಕೊಳ್ಳಲು ಮತ್ತೊಂದು ದಿನ... ಮತ್ತೊಂದು ವರ್ಷ..!!!!

ಅಣ್ಣಾವ್ರೆ ನೀವು..... ಕರುನಾಡಿನ ಮಹಾರಾಜರೇ ಸರಿ.. ಜನುಮದಿನದ ಶುಭಾಶಯಗಳು.... !

Saturday, April 12, 2014

ಅಣ್ಣಾವ್ರ ಚಿತ್ರಗಳಲ್ಲಿ ಅಪ್ಪಾವ್ರು !!!!!


ತ್ರಿಮೂರ್ತಿ ಚಿತ್ರ ಬಿತ್ತರವಾಗುತ್ತಿತ್ತು

"ಏನು ಮಾಡಲಿ ನಾನು ಏನು ಹೇಳಲಿ"

ಮನದಲ್ಲಿ ಹಾಡು ಮೂಡುತ್ತಿತ್ತು.. "ಏನು ಬರೆಯಲಿ ನಾನು ಏನು ಬರೆಯಲಿ" ಬರೆದಷ್ಟು..  ಮುಗಿಯದಷ್ಟು.. ಸಾಗರದಲ್ಲಿನ ಅಲೆಗಳು, . ನಕ್ಷತ್ರ ಎಣಿಸುವುದು.. ಅಣ್ಣಾವ್ರ ಬಗೆಗಿನ ವಿಷಯಗಳು ಇವೆಲ್ಲಾ ಅಕ್ಷಯ ಬತ್ತಳಿಕೆ... 

ನಾ ಗಮನಿಸಿದಂತೆ.. ಅಣ್ಣಾವ್ರಿಗೆ ತಂದೆಯ ಮೇಲೆ ಅಪಾರ ಭಕ್ತಿ ಪ್ರೀತಿ.. ಅಮ್ಮನನ್ನು ಕಂಡರೂ ಹಾಗೆಯೇ.. ಆದರೆ ಅವರು ಅಪ್ಪನ ಬಗ್ಗೆ ತುಂಬಾ ತುಂಬಾ ಹೇಳಿದ್ದರು.  

ವಿಚಿತ್ರ ಆದರೂ ಸತ್ಯ ಅವರ ಚಿತ್ರಗಳಲ್ಲಿ ಅಮ್ಮ ಎನ್ನುವ ಪಾತ್ರ ಆವರಿಕೊಳ್ಳುತ್ತಿತ್ತು.  ಅಣ್ಣಾವ್ರ ಚಿತ್ರ ಅಂದ್ರೆ ಅಲ್ಲಿ ಅಮ್ಮ ಎನ್ನುವ ಪಾತ್ರ ಮುಂಚೂಣಿಯಲ್ಲಿ ಇದ್ದು ಬಿಡುತ್ತಿತ್ತು. ಪಂಡರಿಬಾಯಿ, ಆದವಾನಿ ಲಕ್ಷಿದೇವಿ, ಎಂ ರಾಜಮ್ಮ, ಜಯಶ್ರೀ, ಪಾಪಮ್ಮ, ಶಾಂತಮ್ಮ, ಕಾಂಚನ, ಇವರೆಲ್ಲ ಅಣ್ಣಾವ್ರಿಗೆ ತಾಯಿ ಪ್ರೀತಿಯನ್ನು ಬೆಳ್ಳಿ ತೆರೆಯ ಮೇಲೆ ಬಂಗಾರದ ಬಟ್ಟಲಿನಲ್ಲಿ ಉಣಬಡಿಸಿದವರು. 

ಮನಸ್ಸು ಯೋಚಿಸುತ್ತಿತ್ತು.. ಅಣ್ಣಾವ್ರ ೨೦೦ ಚಿಲ್ಲರೆ ಚಿತ್ರಗಳಲ್ಲಿ ತಾಯಿ ಪಾತ್ರ ಪ್ರಾಮುಖ್ಯತೆ ಪಡೆದುಕೊಂಡಿದ್ದರು.. ಕೆಲವು ಚಿತ್ರಗಳಲ್ಲಿ ಅಪ್ಪನ ಪಾತ್ರಕೂಡ ವಿಜೃಂಭಿಸಿದ್ದು ಸುಳ್ಳಲ್ಲ.  ಅಂಥಹ ಕೆಲವು ಪಾತ್ರಗಳ ಬಗ್ಗೆ ನನ್ನ ಒಂದು ವಿಹಾರ ಪದಗಳಲ್ಲಿ. 

೧. ಬಡವರ ಬಂಧು: 
ಅಂಗವೈಕಲ್ಯ ಹೊಂದಿದ್ದ ಅಪ್ಪನ ಪಾತ್ರದಲ್ಲಿ ಸಂಪತ್ ಅಮೋಘ ಅಭಿನಯ. ಅವರಿಗೆ ಸದಾ ಸೇವೆ ಮಾಡುತ್ತಾ.. ಎಣ್ಣೆ ಹಚ್ಚಿ ಮೈಯೆಲ್ಲಾ ತಿಕ್ಕಿ... ದೈಹಿಕ ನೋವನ್ನು ಕಡಿಮೆ ಮಾಡುವ ದೃಶ್ಯಗಳು ಸುಂದರವಾಗಿ ಮೂಡಿಬಂದಿವೆ. 
ಅಪ್ಪ ಮಗನ ಪ್ರತಿ ದೃಶ್ಯದಲ್ಲೂ ಅಣ್ಣಾವ್ರ ಕಣ್ಣುಗಳು ಸದಾ ತುಂಬಿರುತ್ತಿದ್ದವು. ಬಡತನದ ಬೇಗೆಯಲ್ಲಿ ಬಳಲಿ ಅಣ್ಣಾವ್ರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಬರುವಷ್ಟರಲ್ಲಿ ಅವರ ಅಪ್ಪ ಇಲ್ಲವಾಗಿದ್ದರು..   ಆ ನೋವಿನ ನಿರ್ವಾತ ತುಂಬಲೋ ಎನ್ನುವಂತೆ ಈ ಚಿತ್ರದಲ್ಲಿನ ದೃಶ್ಯಗಳು ಅಪರೂಪವಾಗಿ ಮೂಡಿಬಂದಿವೆ. 


೨. ಧೃವತಾರೆ 
ಈ ಚಿತ್ರದಲ್ಲಿ..  ಹುಟ್ಟಿದಾಗಿನಿಂದ ಅಪ್ಪನ ಪ್ರೀತಿ ಪಡೆಯದ ಅಣ್ಣಾವ್ರು.. ಅದಕ್ಕೆ ತಕ್ಕಂತೆ ಎರಡನೇ ಹೆಂಡತಿಯ ಕೈಗೊಂಬೆಯಾಗಿ ಮಗನನ್ನು ಹೊರಗೆ ಕಳಿಸಿ.. ಅಪ್ಪ ಎನ್ನುವ ಪಾತ್ರ ಕಂಡರೆ ಬೇಸರಗೊಳ್ಳುವ ಕೆಲವು ದೃಶ್ಯಗಳು. 
ಅಪ್ಪನೇ ತನ್ನ ಕಲೆಗೆ ಬೆಳಕು ತುಂಬುವುದರ ಬದಲು ಬೆಂಕಿ ಹಚ್ಚಿದ್ದು ಎಂದು ಗೊತ್ತಾದಾಗ.. ನಂತರ ನಿಜ ಸಂಗತಿ ತಿಳಿದು  ಅಪ್ಪನನ್ನು ಮಾತಾಡಿಸಲು ಬಂದಾಗ.. ಅಪ್ಪನ ಪಾತ್ರಧಾರಿ ರಾಜಾನಂದ್ ಮತ್ತು ಅಣ್ಣಾವ್ರ ನಡುವಿನ ಮಾತುಗಳು... ಬಾಂಧ್ಯವ.. ಆಹಾ ನೋಡಿ ಸವಿಯಬೇಕು 



೩. ಎರಡು ಕನಸು 
ಈ ಚಿತ್ರದಲ್ಲಿ ಹಾಡುಗಳೇ ಜೀವಾಳ.. ಅಭಿನಯ ಸೂಪರ್.. ಮೊದಲ ಪ್ರೀತಿಯ ಗುಂಗು ಇಡಿ ಚಿತ್ರದಲ್ಲಿ ಆವರಿಸಿರುತ್ತೆ  ಆರಂಭಿಕ ದೃಶ್ಯಗಳಲ್ಲಿ ತಂದೆಯ ಪಾತ್ರಧಾರಿ ಅಶ್ವಥ್ ಮತ್ತು ಅಣ್ಣಾವ್ರ ನಡುವೆ ಒಂದು ಚಿಕ್ಕ ಸಂಭಾಷಣೆ ಮನಸ್ಸೆಳೆಯುತ್ತದೆ. 

ಮನೆತನದ ಹಗೆಯಿಂದಾಗಿ ನಡೆಯಬೇಕಾಗಿದ್ದ ಮದುವೇ ನಿಂತು ಹೋಗುತ್ತದೆ.  ಆಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರುತ್ತಾಳೆ. ವೈದ್ಯರು ಮಾತ್ರೆ., ಚಿಕಿತ್ಸೆ ಇಂದ ಗುಣವಾಗೋಲ್ಲ.. ನಿಮ್ಮ ತಾಯಿಯನ್ನು ಉಳಿಸಿಕೊಳ್ಳುವ ಶಕ್ತಿ ನಿಮ್ಮ ಮಾತಲ್ಲಿ ಇದೆ.. ನೀವು ಅವರ ಇಚ್ಛೆಗೆ ವಿರುದ್ಧವಾದ ಕೆಲಸ ಮಾಡೋಲ್ಲ ಎನ್ನುವ ಭರವಸೆ ಕೊಟ್ಟರೆ ಸುಧಾರಿಸುತ್ತಾರೆ.. ಎಂದು ಹೇಳಿದಾಗ.. ಅಣ್ಣಾವ್ರು ತಮ್ಮ ಪ್ರೀತಿಯನ್ನು ಬಿಡಲಾರದೆ  ತಾಯಿಯನ್ನು ಕಳೆದುಕೊಳ್ಳಲಾರದೆ  ತೊಳಲಾಡುತ್ತಾರೆ.. ಆಗ ಅವರ ತಂದೆಯ ಪಾತ್ರಧಾರಿ ಕನ್ನಡ ಸಿನಿಮಾ ಜಗತ್ತಿನ ಅಪ್ಪಾ "ಅಶ್ವತ್" ಹೇಳುವುದು ಎರಡೇ ಮಾತು.. 

"ರಾಮು ಇದು ನಿನ್ನ ಕೈಯಲ್ಲ.. ಕಾಲು"  ಇದೊಂದು ಅಪ್ಪ ಮಗನ ಮಧ್ಯೆ ನಡೆಯುವ ಸುಮಾರು ಹತ್ತು ಸೆಕೆಂಡುಗಳ ಪರಿಣಾಮಕಾರಿ ದೃಶ್ಯ.  ಅಪ್ಪ ತನ್ನ ಹೆಂಡತಿಯನ್ನು ಬದುಕಿಸಿಕೊಳ್ಳಲು ಮಗನ ಮುಂದೆ ಬೇಡುವ ದೃಶ್ಯ.. ಅಣ್ಣಾವ್ರು ಹಾಗು ಅಶ್ವತ್ ಇಬ್ಬರೂ ಸೂಪರ್ ಈ ದೃಶ್ಯದಲ್ಲಿ.. 

೪. ಬಿಡುಗಡೆ
 ಮಾಡದ ತಪ್ಪಿಗೆ ಗಲ್ಲು ಶಿಕ್ಷೆಗೆ ಗುರಿಯಾಗುವ ಅಪ್ಪನ ಪಾತ್ರದಲ್ಲಿ ಅಶ್ವತ್.. ಅವರನ್ನು ಉಳಿಸಿಕೊಳ್ಳುವ ಪಾತ್ರದಲ್ಲಿ ಅಣ್ಣಾವ್ರು.  ಇಡಿ ಚಿತ್ರದಲ್ಲಿ ಅಪ್ಪ ಮಗನ ಸಂಭಾಷಣೆ, ಭಾವಾಭಿನಯ ಸೂಪರ್. ಪ್ರಾಯಶಃ ಅಣ್ಣಾವ್ರ ಚಿತ್ರದಲ್ಲಿ ಅಪ್ಪನ ಪಾತ್ರಕ್ಕೆ ಅತೀವ ಪ್ರಾಮುಖ್ಯತೆ ಕೊಟ್ಟು ಚಿತ್ರದುದ್ದಕ್ಕೂ ಚಿತ್ರಗಳಲ್ಲಿ ಮೊದಲನೆಯದು ಅನ್ನಿಸುತ್ತದೆ. ಇಡಿ ಚಿತ್ರವನ್ನು ನೋಡಬೇಕು ಸುಂದರ ಅನುಭವ.

ಆ ಕಾಲದಲ್ಲಿಯೇ ಬಿಡುಗಡೆಗೊಂದು ಯಶ್ವಸಿಯಾದ ಮೇಲೂ.. ಚಿತ್ರದ ಸಂದೇಶದ ಸ್ಪೂರ್ತಿಯ ಮೇಲೆ ಚಿತ್ರದ ಅಂತ್ಯ ಬದಲಾಯಿಸಿ ಮತ್ತೆ ಬಿಡುಗಡೆಗೊಂಡ ಚಿತ್ರ ಇದು. 



ಹೀಗೆ ಅಣ್ಣಾವ್ರ ಚಿತ್ರಗಳು ಒಂದು ರೀತಿಯಲ್ಲಿ ವಿಶ್ವವಿದ್ಯಾಲಯ ವಿದ್ದಂತೆ ಪ್ರತಿಚಿತ್ರಗಳಲ್ಲೂ ಸಂದೇಶ, ಸಾಮಾಜಿಕ ಕಳಕಳಿ, ಸುಂದರ ಅಭಿನಯ.. ಕಲಾವಿದರೆಲ್ಲರೂ ಮನೆಯೊಳಗಿನ ನೆಂಟರಂತೆ ಅಭಿನಯ ನೀಡುತ್ತಿದ್ದದು.. ಹಾಡುಗಳು, ಸಂಭಾಷಣೆ.. 
೨೦೭ ಚಿತ್ರಗಳು ೨೦೭ ಯುಗಗಳಂತೆ.. 

ಅಣ್ಣಾವ್ರ ಪುಣ್ಯ ತಿಥಿಯ ಸಂದರ್ಭದಲ್ಲಿ ನನಗೆ ಅನ್ನಿಸಿದ ಕೆಲವು ಮಾತುಗಳು ಲೇಖನವಾಗಿ ಮೂಡಿ ಬಂದಿದೆ.. 

ಅವರ ಚಿತ್ರಗಳೇ ಸಾಕು.. ಸುವರ್ಣ ಬದುಕನ್ನು ಬಂಗಾರವಾಗಿಸಲು....!!!!

Sunday, December 1, 2013

ಪುಟ್ಟಣ್ಣ - ಎಂಭತ್ತು ವಸಂತಗಳ ಒಂದು ಚೌಕಟ್ಟು

ಪುಟ್ಟಣ್ಣ ಕಣಗಾಲ್ ಯಾಕೆ ಇಷ್ಟವಾಗುತ್ತಾರೆ.. ಅವರ ಬಗ್ಗೆ ಏನು ಅಂಥಹ ವಿಶೇಷತೆ.. ಎಲ್ಲಾ ನಿರ್ದೇಶಕರ ತರಹ ಅವರು ಒಬ್ಬರು.. ಇದೆಲ್ಲ ನಿಜವೇ ಸುಳ್ಳೇ.. ಈ  ರೀತಿಯ ಪ್ರಶ್ನೆಗಳು ಸದಾ ಉದ್ಭವವಾಗಿರುತ್ತವೆ ಅವರ ಚಿತ್ರಗಳನ್ನು ನೋಡದ ಅಥವಾ ಆರಾಧಿಸದ ಇತ್ತೀಚಿನ ಪೀಳಿಗೆಗೆ..

ಅವರ ಪ್ರತಿಚಿತ್ರದಲ್ಲೂ ವಿಭಿನ್ನ ಕಥಾ ವಸ್ತುವನ್ನು ಒಳಗೊಂಡಿತ್ತು.. ಒಂದು ಸಂದರ್ಶನದಲ್ಲಿ ಅವರೆ ಗುರುತಿಸಿದ ಪ್ರತಿಭೆ ಅಂಬರೀಶ್ ಹೇಳಿದ್ದು "ಗುರುಗಳು ಮಾಡಿದ ಚಿತ್ರಗಳೆಲ್ಲ ನಮ್ಮ ಸಂಸೃತಿಗೆ  ವಿಭಿನ್ನವಾದದ್ದು ಆದರೂ ಅಂಥಹ ಕಥಾ ವಸ್ತುವನ್ನು ಎಲ್ಲರೂ ಒಪ್ಪುವ ರೀತಿಯಲ್ಲಿ ಕಟ್ಟಿಕೊಡುತ್ತಿದ್ದರು" ಪ್ರಾಯಶಃ ಇದು ಅವರ ಚಿತ್ರ ನಿರ್ದೇಶನಕ್ಕೆ ಹಾಗೆಯೇ ಅವರ ವ್ಯಕ್ತಿತ್ವಕ್ಕೆ ಒಂದು ಉತ್ತಮ ಮಾತುಗಳು...

ಇಂದು ಅವರ ಜನುಮ ದಿನ .. ಜನುಮ ದಿನ ಅಂದಾಗ ಅವರ ವ್ಯಕ್ತಿ ವಿಶೇಷಣ ಅಥವಾ ಗುಣಗಳನ್ನು ಹೊಗಳಿ ಹಾಡುವ ಪರಂಪರೆ ಸಾಮಾನ್ಯ.. ಇಂದೇಕೋ ಅವರ ಚಿತ್ರಗಳ ಹಾಡು ನೆನಪಿಗೆ ಬರುತ್ತಿದೆ.. ಅವರನ್ನು ಅವರದೇ ಚಿತ್ರಗೀತೆಗಳ ಮೂಲಕ ಕಟ್ಟಿ ಕೊಡೋಣ ಎನ್ನುವ ವಿಭಿನ್ನ ಚಪಲ ಕಾಡುತ್ತಿದೆ.. ತಗೊಳ್ಳಿ ಇದೋ ಬಂತು ನಿಮ್ಮ ಮುಂದೆ.. ನನಗೆ ಅನ್ನಿಸಿದ ಅವರ ನಿರ್ದೇಶನ ಹತ್ತು ಗೀತೆಗಳು ನಿಮ್ಮ ಮುಂದೆ.. ಇದು ಯಾವುದೇ ಕ್ರಮದಲ್ಲಿ ಇಲ್ಲ.. ನೆನಪಿಗೆ ಬಂದ ನನ್ನ ಮನಸ್ಸಿಗೆ (ಹುಚ್ಚು)ಹಿಡಿಸಿದ ಸಾಹಿತ್ಯ, ಸಂಗೀತ, ಚಿತ್ರೀಕರಣ ಅಷ್ಟೇಯ.. ಸರಿ ನಡೆಯಿರಿ ಹೋಗೋಣ

೧.
ಪ್ರೇಮದಲ್ಲಿ ಸ್ನೇಹದಲ್ಲಿ ಈ ಹಾಡು ರಂಗನಾಯಕಿ ಚಿತ್ರದ್ದು.. ಅದರ ಸಾಹಿತ್ಯ ತುಂಬಾ ವಿಭಿನ್ನ ಆ ಕಾಲದ ಅತ್ಯುತ್ತಮ ಮಸಾಲ ಚಿತ್ರಗೀತೆಯಿಂದೆ ಹೆಸರುವಾಸಿಯಾಗಿತ್ತು.. ಸಾಹಿತ್ಯ ವಿಭಿನ್ನ ಹಾಗೆಯೇ ಮಧುರ ಗೀತೆಗಳಿಗೆ ಹೆಸರಾಗಿದ್ದ ಸಂಗೀತ ನಿರ್ದೇಶಕ ಎಂ ರಂಗರಾವ್ ಈ ಗೀತೆಗೆ ಪಕ್ಕ ಮಸಾಲ ಸಂಗೀತ ನೀಡಿದ್ದಲ್ಲದೆ ಡ್ರಮ್ ಸಂಗೀತವನ್ನು ಅತಿ ಉತ್ತಮವಾಗಿ ಬಳಸಿಕೊಂಡಿದ್ದಾರೆ.. "ಮೈ ಡಿಯರ್" ಎನ್ನುವ ಪದವಾದ ಮೇಲೆ ಬರುವ ಡ್ರಮ್ ಬೀಟ್ಸ್ ಕೇಳಿ.. ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ ಈ ಹಾಡು ನಿಜಕ್ಕೂ ಈಗಿನ ಕಾಲದ ಫುಟ್ ಟ್ಯಾಪಿಂಗ್ ಅಂತಾರಲ್ಲ ಅದಕ್ಕಿಂತ ಸೂಪರ್.. ನಮ್ಮ ಕನ್ನಡ ಚಿತ್ರರಂಗದ ಮೊದಲ ಪ್ಲೇಬಾಯ್ ಎನಿಸುವ ಸ್ಪುರದ್ರೂಪಿ ರಾಮಕೃಷ್ಣ ಅವರ ನೃತ್ಯ ಎಲ್ಲವು ಸೊಗಸು.. ಪುಟ್ಟಣ್ಣ ಅವರ ತಾಕತ್ ಇದು. ಒಂದು ಮಸಾಲ ಚಿತ್ರಗೀತೆಯನ್ನು ಅಶ್ಲೀಲ ಎನಿಸದೆ ಚಿತ್ರೀಕರಿಸಿದ್ದು

೨.

ಮಹೇಶ್ ಪಾತ್ರಧಾರಿ ರಾಜ್ ಸಾಕ್ಷಾತ್ಕಾರದಲ್ಲಿ ಒಲವು ಒಲವು ಎನ್ನುತ್ತಾ ಎಲ್ಲರನ್ನು ಒಂದಾಗಿಸುವ ಪ್ರಯತ್ನದಲ್ಲಿ ಸುಳ್ಳು ಕೊಲೆ ಆಪಾದನೆ ಮೇಲೆ ಜೈಲು ಸೇರಿರುತ್ತಾರೆ.. ಅವರಿಗಾಗಿ ಕಾಯುತ್ತಿದ್ದ ಉಮ ಪಾತ್ರಧಾರಿ ಜಮುನ ಕಾದು ಕಾದು ಬೆಂದಿದ್ದಾಗ... ಬಿಡುಗಡೆಗೊಂಡ  ರಾಜ್ ಬರುವುದನ್ನು ಕಂಡು ಜಮುನ ಓಡೋಡಿ ಬರುತ್ತಾರೆ.. ಆಗ ಶುರುವಾಗುವ ಹಾಡು "ಒಲವೆ ಜೀವನ ಸಾಕ್ಷಾತ್ಕಾರ" ಪಿ ಬಿ ಎಸ್ ಮತ್ತು ಪಿ ಸುಶೀಲ ಹಾಡಿದ ಸುಮಧುರ ಹಾಡು... ಪಿ ಸುಶೀಲ ಹೇಳಿದ್ದನ್ನೇ ಪಿ ಬಿ ಎಸ್ ಹಾಡುವ ರೀತಿಯಲ್ಲಿ ಚಿತ್ರೀಕರಣಗೊಂಡಿದೆ.. ಇಲ್ಲಿ ಗಮನಿಸಬೇಕಾದ ಅಂಶ.
ಛಾಯಾಗ್ರಹಣ.. ಮತ್ತು ಕ್ಯಾಮರ ಓಡಾಟ.. ಹತ್ತಿರ ಬರುತ್ತದೆ ದೂರ ಹೋಗುತ್ತದೆ.. ಒಂದು ವಿಚಿತ್ರ ಅನುಭವ ಕೊಡುವ ಶೈಲಿ. ಒಲವು ಒಲವು ಎಂದು ಒದ್ದಾಡಿದರು ಅದರ ಸಾಪಲ್ಯ ಪಡೆಯದೇ.. ಸಿಕ್ಕಿತು ಆದ್ರೆ ದೂರವಾಯಿತು ಎನ್ನುವ ಅನುಭವ ಕೊಡುವ ಚಿತ್ರ ಇದು.. ಮತ್ತು ಇಬ್ಬರು ಹಾಡಿರುವ ಈ ಗೀತೆ ಪ್ರತಿಧ್ವನಿ ಅಥವಾ ಎಕೋ ಎಫೆಕ್ಟ್.. ಈ ಗೀತೆಯ ನಿಜವಾದ ಶಕ್ತಿ.. ಮತ್ತು ಅದುವೇ ಪುಟ್ಟಣ್ಣ ಅವರ ಶೈಲಿ

೩.

"ಗುರುಗಳೇ ನಾನೆ ಒಂದು ಹಾಡು ಕಟ್ಟಿದ್ದೇನೆ.. ಅದನ್ನು ಹಾಡಲೇ" ಶಾರದ ಪಾತ್ರಧಾರಿ ಆರತಿ ತಮ್ಮ ಗುರುಗಳು ಸೀತಾರಾಮ್ (ಮುಂದೆ ಉಪಾಸನೆ ಸೀತಾರಾಮ್ ಎಂದೇ ಪ್ರಖ್ಯಾತಿ ಹೊಂದಿದರು) ಅವರಿಗೆ ಕೇಳುತ್ತಾರೆ.. ಹಾಡು ತಾಯಿ ಅಂದಾಗ ಶುರುವಾಗುವುದು "ಭಾರತ ಭೂಶಿರ ಮಂದಿರ ಸುಂದರಿ".. ಈ ಗೀತೆಯಲ್ಲಿ ಆರತಿ ಅವರ ಮುಖ.. ಭಾವಾಭಿನಯ.. ಮತ್ತು ಅವರ ಮುಖದ ಮೇಲೆ ಬೀರುವ ಬೆಳಕು ಮತ್ತು ಸ್ವಲ್ಪವು ಕದಲದ ಕ್ಯಾಮರ ಕೈಚಳಕ.. ಪ್ರತಿ ಪದವನ್ನು ಅನುಭವಿಸಿ ಅಭಿನಯಿಸಿರುವ ಆರತಿ.. ಪ್ರತಿ ಪದಕ್ಕೂ ಜೀವ ತುಂಬಿ ಹಾಡಿರುವ ಎಸ್ ಜಾನಕಿ.. ಹಾಡುಗಾರಿಕೆಯಿಂದ ಸಂತಸಗೊಂಡು ಮಧ್ಯದಲ್ಲಿ ಬರುವ ಸಂಗೀತ ವಿಧ್ವಾಂಸ ಪಾತ್ರಧಾರಿ ರಾಮಚಂದ್ರ ಶಾಸ್ತ್ರಿ ಹೇಳುವ ಮಾತು "ನಿನ್ನ ಕರುಳು ಹಿಂಡುವ ಸಂಗೀತ ಅದ್ಭುತ ತಾಯಿ ನಿನಗೆ ಸಂಗೀತ ಶಾರದೆ ಸಂಪೂರ್ಣ ಒಲಿದಿದ್ದಾಳೆ ಎನ್ನುವಾಗ ಆರತಿ ಮುಖದಲ್ಲಿ ತೋರುವ ಭಕ್ತಿ ಭಾವ..
ನನಗೆ ತಿಳಿದಂತೆ ಈ ಚಿತ್ರದಲ್ಲಿ ಬಿಟ್ಟು ಕನ್ಯಾಕುಮಾರಿ ತಾಣದಲ್ಲಿ ಬೇರೆ ಯಾವ ಚಿತ್ರಗೀತೆಯು ಕಂಡಿಲ್ಲ. (ತಪ್ಪಿದ್ದರೆ ದಯವಿಟ್ಟು ತಿದ್ದಿ)..


೪.

"ಮುನಿತಾಯಿ ಪ್ರಸಂಗ" ಇದು ಚಿತ್ರರಂಗದ ಇತಿಹಾಸದಲ್ಲಿ ಒಂದು ಅಭೂತಪೂರ್ವ ಪ್ರಯೋಗ. ಒಂದೇ ಚಿತ್ರದಲ್ಲಿ ಮೂರು ಕಥೆಗಳನ್ನು ಹಾಗೂ ಒಂದಕ್ಕೊಂದು ಸಂಬಂಧವಿಲ್ಲದ ಮೂರು ಕಥಾವಸ್ತುವನ್ನು ತೆರೆಗೆ ತಂದ "ಕಥಾ ಸಂಗಮ ಚಿತ್ರದ ಒಂದು ಕಥೆ. ಕಣ್ಣು ಕಾಣದ ಆರತಿ ಮುನಿತಾಯಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರೆ.. "ಓ ದ್ಯಾವ್ರೆ ನಿನ್ನ ಅಂದ ಚಂದವೇನೋ ಒಂದು ನಾ ಕಾಣೆ.. ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ" ಕಸ್ತೂರಿ ಶಂಕರ್ ಸುಮಧುರ ಹಾಡುಗಾರಿಕೆಯಲ್ಲಿ.. ಅಷ್ಟೇ ಚಂದದ ಸಾಹಿತ್ಯದಲ್ಲಿ ಕಪ್ಪು ಬಿಳುಪಿನ ವರ್ಣದಲ್ಲಿ ಚಿತ್ರೀಕರಿಸುವ ಹಾಡು. ಆರತಿ ಅಭಿನಯ, ಜೊತೆಯಲ್ಲಿ ಒಂದು ವಸ್ತು ಇಲ್ಲದಿದ್ದರೂ ಅದಕ್ಕೆ ಸಡ್ಡು ಹೊಡೆದು ಇನ್ನೊಂದು ಬಗೆಯ ವಿಭಿನ್ನ ಅನುಭವ ಪಡೆಯಬಹುದು ಎನ್ನುವ ಒಂದು ಸುಂದರ ಪ್ರಯತ್ನ.. ನನಗೆ ಬಲು ಮೆಚುಗೆಯಾದ ಸಾಹಿತ್ಯ ಮತ್ತು ಸಂಗೀತ ಜೊತೆಯಲ್ಲಿ ನನ್ನ ನೆಚ್ಚಿನ ನಟಿ ಆರತಿಯ ಮುದ್ದಾದ ಅಭಿನಯ..

೫.
ಬೆಂಕಿ ಚಂಡು ಹೇಗೆ ಇರುತ್ತದೆ ಎನ್ನುವುದನ್ನು ನೋಡಬೇಕೆ.. ನೋಡಿ ನಾಗರಹಾವು ಚಿತ್ರದ "ಹಾವಿನ ದ್ವೇಷ ಹನ್ನೆರಡು ವರುಷ" ಕನ್ನಡ ಬೆಳ್ಳಿ ತೆರೆಗೆ ಒಂದು ಉಲ್ಕೆ ಅಪ್ಪಳಿಸಿದ ಚಿತ್ರವಿದು. ವಿಷ್ಣು ಎಂಬ ಒಬ್ಬ ಸುರಸುಂದರ ನಾಯಕನಾಗಿ ಬೆಳಗಿದ ಚಿತ್ರ. ಕೋಪ ರೋಷ ದ್ವೇಷ ಛಲ ತ್ಯಾಗ ಹೀಗೆ ಎಲ್ಲವನ್ನು ಹೆಗಲ ಮೇಲೆ ಹೊತ್ತು ಆರ್ಭಟಿಸಿದ ಚಿತ್ರವಿದು. ಈ ಹಾಡಿನಲ್ಲಿ "ನಾ ಇಟ್ಟರೆ ಶಾಪ ಕೊಟ್ಟರೆ ವರ ನೀತಿಯ ಮೀರೋಲ್ಲ" ಎನ್ನುವಾಗ ವಿಷ್ಣುವಿನ ಅಭಿನಯ ನೋಡಿಯೇ ಸವಿಯಬೇಕು.. ಕಲ್ಲು ಬಂಡೆ, ಉರಿ ಬಿಸಿಲು, ಒರಟು ವ್ಯಕ್ತಿತ್ವ ಎಲ್ಲವನ್ನು ಒಂದೇ ಪ್ಯಾಕೇಜ್ ನಲ್ಲಿ ಹೊತ್ತು ತಂದ ಹಾಡು. ಒಲವಿನ ಗೆಳೆಯ ವಿಜಯಭಾಸ್ಕರ್ ಸಂಗೀತ, ಜೊತೆಯಲ್ಲಿ ವಿಷ್ಣುವಿಗೆ ಇನ್ನೊಂದು ಧ್ವನಿ ಎಂದೇ ಹೆಸರಾದ ಎಸ್ ಪಿ ಬಾಲಸುಬ್ರಮಣ್ಯಂ ಹಾಡುಗಾರಿಕೆ, ರೋಷ ಉಕ್ಕಿಸುವ ಸಾಹಿತ್ಯ  ಒಂದಕ್ಕೊಂದು ಮೇಳೈಸಿದೆ...

೬.  "ಅಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ" ದಿಲ್ಲಿಯಿಂದ ಬಂದ ಹೆಣ್ಣಿನ ಬದಲಿಗೆ ಅವಳ ಹಾಗೆಯೇ ಕಾಣುವ ಹಳ್ಳಿಯ ಮುಗ್ಧೆ ಹಾಡುವ ಹಾಡು.. ಉತ್ಕೃಷ್ಟ ಸಾಹಿತ್ಯ. ಕಲ್ಪನಾ ತನ್ನ ಅಭಿನಯದ ಇನ್ನೊಂದು ಮಜಲನ್ನು ಹೊರಗೆ ಹಾಕಿದ ಚಿತ್ರ. ಹಾಡುತ್ತಾ ಹಾಡುತ್ತ ತನ್ನೊಳಗೆ ಮುಳುಗಿಹೋಗುತ್ತಾರೆ. ಅರ್ ರತ್ನ ಅವರ ಉತ್ತಮ ಸಂಗೀತ, ಸಾಹಿತ್ಯ ಹೊಂದಿದ ಈ ಗೀತೆಯ ಪರಾಕಾಷ್ಟೆ "ಅರಿಶಿನ ಕುಂಕುಮ ನಗುನಗುತಿರಲಿ" ಎನ್ನುವಾಗ ಅತೀವ ಭಾವನಾತ್ಮಕ ರೂಪವನ್ನು ಹೊರಹೊಮ್ಮಿಸುವ ಆದವಾನಿ ಲಕ್ಷ್ಮೀದೇವಿಯವರ ಹೊಳೆಯುವ ಮೂಗುತಿ, ಕಣ್ಣುಗಳು, ಮತ್ತು ಆನಂದದಿಂದ ಆನಂದ ಭಾಷ್ಪವನ್ನು ಒರೆಸಿಕೊಳ್ಳುವ ಅಮೋಘ ದೃಶ್ಯ. ಮತ್ತು ಹಾಡಿನ ನಂತರ ಬಾಲಣ್ಣ ಹೇಳುವ "ಹೆಣ್ಣು ಮಕ್ಕಳು ಮನೆಯ ವಾತಾವರಣವನ್ನೇ ಅವಲಂಬಿಸಿರುತ್ತಾರೆ" ಎನ್ನುವ ಅಮೋಘ ಸಂದೇಶ ಹೊತ್ತು ಸಾರುವ ಮಾತುಗಳು..

೭.

 "ಹಿಂದುಸ್ಥಾನವೂ ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ" ಬೆಳ್ಳಿ ತೆರೆಗೆ ವರದ ಹಳ್ಳಿ ಅಥವಾ ಶ್ರೀಧರ ಸ್ವಾಮಿಗಳ ಪುಣ್ಯ ಸ್ಥಳವನ್ನು ಪರಿಚಯಿಸಿದ ಚಿತ್ರ ಅಮೃತಘಳಿಗೆ ಚಿತ್ರದ ಸುಂದರ ಹಾಡು. ಈ ಹಾಡಿನಲ್ಲಿ ಭಾರತದ ಹೆಮ್ಮೆಯನ್ನು ಹೇಳುತ್ತಲೇ.. ಕರುನಾಡಿನ ಅಮೋಘ ಚೆಲುವನ್ನು ಒಲವನ್ನು ಕವಿಗಳ ಲೇಖಕರ ಸಂಗಮವನ್ನು ತೋರುವ ಅಭಿಮಾನವನ್ನು ಉಕ್ಕಿಸುವ ಹಾಡು. ಜಯಚಂದ್ರನ್ ಕನ್ನಡ ಚಿತ್ರಗಳಲ್ಲಿ ಹಾಡಿರುವ ಹಾಡೆಲ್ಲ ಸೂಪರ್ ಹಿಟ್ ಗೀತೆಗಳೇ. ಅದರಲ್ಲಿ ಇದು ಮೊಟ್ಟ ಮೊದಲು ನಿಲ್ಲುತ್ತದೆ. ಶ್ರೀಧರ್ ಅವರಿಂದ ಹದಭರಿತ ಅಭಿನಯ ತೆಗೆದ ಪುಟ್ಟಣ್ಣ.. "ಧಮನಿ ಧಮನಿಯಲಿ ತುಂಬಿರಲಿ" ಎನ್ನುವಾಗ ಮುಷ್ಟಿಯಿಂದ ಎದೆಯನ್ನು ತಟ್ಟಿ ಕೊಳ್ಳುವ ದೃಶ್ಯ.. ಹಾಗೆಯೇ "ಭವ್ಯ ಶಾಸನ ಬರೆಯಿಸಲಿ" ಎನ್ನುವಾಗ ಕೈಯಲ್ಲೇ ಬರೆಯುವ ಅಭಿನಯ ತೋರುವ ದೃಶ್ಯ.. ಮತ್ತು ವಿಹಂಗಮ ಶ್ರೀಧರ ತೀರ್ಥದ ದೃಶ್ಯಗಳು ಮನಸ್ಸೆಳೆಯುತ್ತದೆ.

೮. ಕನ್ನಡ ಚಿತ್ರಗೀತೆಗಳಲ್ಲಿ ಶ್ಲೋಕ, ಮಂತ್ರಗಳು ನುಸುಳಿದ್ದು ಅನೇಕ ಚಿತ್ರಗಳಲಿದ್ದರೂ ಶರಪಂಜರದ ಚಿತ್ರದ ಕೊಡಗಿನ ಕಾವೇರಿ ಹಾಡಿನ ಮುಂಚೆ ಬರುವ "ತುಲಮಾಸೇತು ಕಾವೇರಿ" ಶ್ಲೋಕ, ಹಾಗೆಯೇ ಸಾಕ್ಶತ್ಕಾರ ಚಿತ್ರದಲ್ಲಿ "ಫಲಿಸಿತು ಒಲವಿನ  ಪೂಜಾಫಲ" ಹಾಡಿನಲ್ಲಿ ಮದುವೆ ಸನ್ನಿವೇಶದಲ್ಲಿ ಬರುವ ಕ್ರಮಬದ್ಧ ಮಂತ್ರಗಳನ್ನು ಹಾಗೆಯೇ ಹಾಡಿಸಿದ್ದು ಇವೆಲ್ಲ ಅವರ ಸಂಸ್ಕೃತಿಯ ಬಗೆಗಿನ ಅವರ ಅಭಿಮಾನ ಅದನ್ನು ಎಲ್ಲರೆಡೆಯೂ ಪಸರಿಸಲು ಆಯ್ದುಕೊಂಡ ಮಾಧ್ಯಮ ಎಲ್ಲವು ಮನಸ್ಸಿಗೆ ಹಿಡಿಸುತ್ತದೆ. ಕೊಡಗಿನ ಕಾವೇರಿ ಚಿತ್ರದಲ್ಲಿ ಪಿ ಸುಶೀಲ ಒಂದು ರೀತಿಯಲ್ಲಿ ಹಾಡಿದರೆ.. ಪಿ ಬಿ ಶ್ರೀನಿವಾಸ್ ಪ್ರತಿ ಸಾಲಿನಲ್ಲೂ "ಕಾವೇರಿ" ಎನ್ನುವ ಪದವನ್ನು ಉಚ್ಚರಿಸುವ ರೀತಿ ಭಲೇ ಎನ್ನಿಸುತ್ತದೆ.

೯.
"ವಿರಹ ನೂರು ನೂರು ತರಹ" ಪ್ರೇಮಿಗಳ ವಿರಹವನ್ನು ಬಗೆ ಬಗೆಯಾಗಿ ಸಾರುವ ಒಂದು ಉತ್ತಮ ಗೀತೆ. ಜಯಂತಿ ಅವರ ಮಾಗುತ್ತಿರುವ ಸೌಂದರ್ಯವನ್ನು ಅಷ್ಟೇ ಸುಂದರವಾಗಿ ತೆರೆಯ ಮೇಲೆ ತೋರಿಸಿದ್ದು ಹಾಗೆಯೇ ಸಂಜೆಯ ಇಳೀ ಹೊತ್ತಿನಲ್ಲೇ ಹಠ ಮಾಡಿ ಚಿತ್ರೀಕರಿಸಿದ್ದು ಈ ಹಾಡಿನ ತಾಕತ್.  ಪಿ ಸುಶೀಲ ಅವರ ಅಮೋಘ ಕಂಠ ಸಿರಿ, ಅದಕ್ಕೆ ಒಪ್ಪುವ ಸಂಗೀತ, ಸಾಹಿತ್ಯ ಎಲ್ಲವೂ ಅಮೋಘವಾಗಿ ಮೂಡಿ ಬಂದಿದೆ. ಜಯಂತಿ ಬರಿ ಉತ್ತಮ ಅಭಿನಯ ಮಾತ್ರವಲ್ಲ ಅಮೋಘವಾಗಿಯೂ ಕಾಣಬಲ್ಲರು ಎಂಬುದನ್ನೂ ತೋರಿಸಿದ್ದಾರೆ. ಒಂದು ಈ ಹಾಡಿನ ಒಂದು ದೃಶ್ಯದಲ್ಲಿ ಜಯಂತಿಯ ಜೊತೆಯಲ್ಲಿಯೇ ಕ್ಯಾಮರ ಚಾಲನೆಯಲ್ಲಿರುತ್ತದೆ. ಪ್ರತಿ ಫ್ರೇಮ್ ಕೂಡ ನಿಧಾನವಾಗಿ ಚಲಿಸಿರುತ್ತದೆ ಆದರೆ ಜಯಂತಿ ಅವರ ನಡೆಯುತ್ತಿರುವ ಜಾಗ ಮತ್ತು ಫ್ರೇಮ್ ನಲ್ಲಿ ತೋರಿಸುವ ಚೌಕಟ್ಟು ಮಾತ್ರ ಸಮಾನವಾಗಿ ಕಾಣುತ್ತದೆ. ಈ ದೃಶ್ಯ ನನ್ನ ಮೆಚ್ಚುಗೆಯಾಗಿ ಮನದಲ್ಲೇ ನಿಂತಿರುವ ದೃಶ್ಯ

೧೦.

"ಓ ಗುಣವಂತ ನಿನ್ನ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ" ನಿಜಕ್ಕೂ ಈ ಹಾಡು ಪುಟ್ಟಣ್ಣ ಅವರಿಗಾಗಿ ಬರೆದ ಹಾಡು ಅನ್ನಿಸುತ್ತದೆ. ಯಾಕೆಂದರೆ ಒಬ್ಬ ಸೃಜನಶೀಲ ನಿರ್ದೇಶಕ ಸಾಹಿತ್ಯ ಭಂಡಾರವನ್ನು ಹೇಗೆ ಉಪಯೋಗಿಸಬೇಕು, ಕನ್ನಡ ಕಂಪನ್ನು ಹೇಗೆ ವಿಸ್ತರಿಸಬೇಕು ಎನ್ನುವುದನ್ನು ಎತ್ತಿ ತೋರಿಸಿದ ಅಮೋಘ ಪ್ರತಿಭೆ ನಮ್ಮ ಪುಟ್ಟಣ್ಣ ಕಣಗಾಲ್. ಈ ಹಾಡಿನಲ್ಲಿ ಅತಿ ಸುಂದರವಾಗಿ ಕಾಣುವ ವಿಜಯಲಕ್ಷ್ಮಿ ಸಿಂಗ್, ಮುದ್ದಾಗಿ ಕಾಣುವ ಅಂಬರೀಶ್ ಜೊತೆಯಲ್ಲಿ ಬೆಂಗಳೂರು ಅರಮನೆ ಸುತ್ತ ಮುತ್ತಲೇ ಚಿತ್ರೀಕರಿಸಿದ ಸುಂದರ ಗೀತೆ. ಎಸ್ ಜಾನಕಿ ಹಾಡಿರುವ ರೀತಿ, ತನ್ನ ಪ್ರೀತಿಯನ್ನು ಅಥವಾ ತನ್ನ ಅಭಿಮಾನವನ್ನು ಪ್ರಸ್ತುತ ಪಡಿಸುವ ರೀತಿ ಎಲ್ಲವೂ ಅತ್ಯತ್ತಮ. ವಿಜಯನಾರಸಿಂಹ ಅವರ ಸಾಹಿತ್ಯ ಅಷ್ಟೇ ಸುಂದರವಾದ ವಿಜಯಭಾಸ್ಕರ್ ಅವರ ಸಂಗೀತ ಬೆಳ್ಳಿ ಚಿತ್ರಕ್ಕೆ ಸುವರ್ಣ ಚೌಕಟ್ಟು ಒದಗಿಸಿದೆ.

ಇಂಥಹ ಮಹೋನ್ನತ ನಿರ್ದೇಶಕ ಹುಟ್ಟಿದ ಮಣ್ಣಲ್ಲಿ ನಾವು ಹುಟ್ಟಿದ್ದು ನಮ್ಮ ಭಾಗ್ಯ. ಹಾಗೆಯೇ ಅವರ ಚಿತ್ರಗಳಿಂದ ಕಲಿತ ಕಲಿಯಬಹುದಾದ ಉತ್ತಮ ಸಂದೇಶಗಳು ಅವರ ನಿರ್ದೇಶನದ ಎಲ್ಲಾ ಚಿತ್ರಗಳಲ್ಲೂ ಕಾಣಬರುತ್ತದೆ. ಅವರ ಪ್ರತಿ ಚಿತ್ರಗಳು ಒಂದು ವಿಶ್ವ ವಿದ್ಯಾಲಯ ಇದ್ದ ಹಾಗೆ. ಅವರ ಜನುಮದಿನವನ್ನೂ ವಿಭಿನ್ನವಾಗಿ ಕಟ್ಟಿ ಕೊಡೋಣ ಅನ್ನುವ ನನ್ನ ತವಕಕ್ಕೆ ನೀರು ಎರೆದಿದ್ದು ಅವರ ಚಿತ್ರಗೀತೆಗಳು ಮತ್ತು ಗೀತೆಗಳನ್ನೂ ವಿಭಿನ್ನವಾಗಿ ಚಿತ್ರಿಸಿ ಅಷ್ಟೇ ಸುಮಧುರ ಸಂದೇಶ ಹೊತ್ತು ಸಾರುತ್ತಿದ್ದ ಅವರ ಎಲ್ಲಾ ಚಿತ್ರಗಳ ಅವರ ಶೈಲಿ.

ಪುಟ್ಟಣ್ಣ ನೀವು ಹೃದಯದಿಂದ ಚಿತ್ರೀಕರಿಸಿದ ಎಲ್ಲಾ ಚಿತ್ರಗಳನ್ನು ನೋಡಿ ಅದರ ಬಗ್ಗೆ ನನಗನ್ನಿಸಿದ ಮಾತುಗಳನ್ನು ಹೇಳುವ ನನ್ನ ಬಯಕೆ ಈಡೇರಬೇಕು ಅದಕ್ಕೆ ನಿಮ್ಮ ಆಶೀರ್ವಾದವೂ ಇರಬೇಕು.. ಹುಟ್ಟು ಹಬ್ಬದ ಸುಂದರ ಶುಭಾಶಯಗಳು ನಮ್ಮ ಜೊತೆಯಲ್ಲೇ ಇರುವ ನಿಮ್ಮ ಮಹಾನ್ ಚೇತನಕ್ಕೆ!!!

(ಸಿಕ್ಕ ವೀಡಿಯೊ ತುಣುಕುಗಳನ್ನು ಹಾಕಲು ಪ್ರಯತ್ನ ಪಟ್ಟಿದ್ದೇನೆ.. ಕೆಲವು ಸಿಕ್ಕವು ಕೆಲವು ಸಿಕ್ಕಲಿಲ್ಲ... ಯು ಟ್ಯೂಬ್ ನಲ್ಲಿ ಸಿಕ್ಕ ಕೆಲವು ತುಣುಕುಗಳನ್ನು ತುರುಕುತ್ತಿದ್ದೇನೆ.. ಎಲ್ಲಾದರೂ ಈ ತುಣುಕುಗಳು ಬೇಡದ ವಿಷಯಗಳನ್ನು ಬಿತ್ತಿರಿಸಿದರೆ ದಯಮಾಡಿ ಸಂದೇಶ ಕಳಿಸಿ.. ಕಿತ್ತು ಹಾಕುತ್ತೇನೆ)