Monday, October 20, 2014

ಮನದಲ್ಲೇ ಹೆಜ್ಜೆ ಇಟ್ಟು ಕಾಡುವ "ಗೆಜ್ಜೆ ಪೂಜೆ"! (1969)

ಮೊದಲಿಗೆ ಪುಟ್ಟಣ್ಣ ಕಣಗಾಲ್ ಕ್ಷಮೆ ಕೇಳಬೇಕು.. ಅವರು ಚಿತ್ರಿಸಿದ ಎಲ್ಲಾ ಚಿತ್ರಗಳು ಮಾಣಿಕ್ಯವೇ ಆದರೂ, ನನಗೆ ತುಂಬಾ ಹಿಡಿಸಿದ ಚಿತ್ರಗಳನ್ನು ಮತ್ತೆ ಮತ್ತೆ ನೋಡಿ ಅವರ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನ ಬೆಳೆಸಿಕೊಂಡಿದ್ದೆ. ಗೆಜ್ಜೆ ಪೂಜೆ ಚಿತ್ರ ಮಹಾನ್ ಕೃತಿ ಎಂದು ಎಲ್ಲರ ಮೆಚ್ಚುಗೆಗಳಿಸಿದ್ದರೂ, ಅನೇಕ ಬಾರಿ ಈ ಚಿತ್ರ ನೋಡಿದ್ದರೂ ಯಾಕೋ ನನಗೆ ಇಷ್ಟವಾದ ಚಿತ್ರಗಳೇ ಕಣ್ಣ ಮುಂದೆ ಕುಣಿಯುತ್ತಿದ್ದವು.  

ಅವರ ಕನ್ನಡದ ಎಲ್ಲಾ ಚಿತ್ರಗಳ ಬಗ್ಗೆ ಬರೆಯಲು ಶುರುಮಾಡಿದಾಗ, ಮಾಡಿಕೊಂಡ ಒಂದು ನಿಯಮ, ಬರೆಯುವ ಮೊದಲು ಮತ್ತೊಮ್ಮೆ ಆ ಚಿತ್ರವನ್ನು ನೋಡಬೇಕು, ಚಿಕ್ಕ ಪುಟ್ಟ ಟಿಪ್ಪಣಿ ಮಾಡಿಕೊಂಡು, ಆ ಚಿತ್ರದ ಬಗ್ಗೆ ಬರೆಯಬೇಕು.  

ಅಬ್ಬಾ, ಮೊದಲ ದೃಶ್ಯದಿಂದ ಕಡೆಯ ತನಕ ನೋಡಿದ ಮೇಲೆ, ಸೂಕ್ಷ್ಮವಾಗಿ ಗಮನಿಸು ಎನ್ನುತ್ತಾ ನನ್ನ ಮನಸ್ಸು ಇನ್ನಷ್ಟು ಒಳಹೋಗಲು ಅಣು ಮಾಡಿಕೊಟ್ಟಿತು. ಹಲವಾರು ದೃಶ್ಯಗಳಲ್ಲಿ ಕಣ್ಣಲ್ಲಿ ನೀರು ತುಂಬಿ, ಮೊದಲೇ ಕಪ್ಪು ಬಿಳುಪಿನ ಚಿತ್ರ ಇನ್ನಷ್ಟು ಮಂಜಾಯಿತು. 


ಗುರುಗಳೇ ಪುಟ್ಟಣ್ಣ ಕಣಗಾಲ್ ನಿಮಗೆ ನನ್ನ ಅನಂತ ಧನ್ಯವಾದಗಳು ಇಂತಹ ಸೂಕ್ಷ್ಮ ವಿಚಾರವನ್ನು ಅಶ್ಲೀಲತೆಯ ಸೊಂಕಿಲ್ಲದೆ, ಕೆಟ್ಟ ಪದಗಳ ಬಳಕೆಯಿಲ್ಲದೆ, ಎಲ್ಲಾರು ಒಟ್ಟಾಗಿ ಕೂತು ನೋಡುವ ಚಿತ್ರ ರತ್ನವನ್ನು ಕೊಟ್ಟಿದ್ದಕ್ಕೆ. 

ಒಂದು ವಿಚಿತ್ರ ವಿಚಾರವನ್ನು ಎರಡು ರೀತಿಯಲ್ಲಿ ಹೇಳಬಹುದು.. ಒಂದು ಹೇಳಬಾರದ ರೀತಿಯಲ್ಲಿ.. ಇನ್ನೊಂದು ಹೇಳಬಹುದಾದ ರೀತಿಯಲ್ಲಿ.. ಪುಟ್ಟಣ್ಣ ಯಾವಾಗಲು ಎರಡನೇ ದಾರಿಯಲ್ಲಿ ಹೊರಳಿದವರು ಮತ್ತು ತಮ್ಮ ಛಾಪನ್ನು ಮೂಡಿಸಿದವರು. 

* * * * * * * * * * * * * * * * * * * * * * * * * * * *

ಒಂದು ಚಿತ್ರದ ಆರಂಭದಲ್ಲೇ ಎಷ್ಟು ನಾಜೂಕಾಗಿ ಹೇಳಬೇಕಾದ ವಿಷಯವನ್ನು ಮಾತಿನ ರೂಪದಲ್ಲಿಯೂ, ದೃಶ್ಯರೂಪದಲ್ಲಿಯೂ ಹೇಳಿ ತಮ್ಮ ಮುದ್ರೆಯನ್ನು ಒತ್ತಿ ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಹೇಳಬಯಸುವ ಸಮಸ್ಯೆ ಮತ್ತು ಅದರ ಪರಿಣಾಮ ಎಲ್ಲವನ್ನೂ ಸ್ಥೂಲವಾಗಿ ಚಿತ್ರಿಸಿದ್ದಾರೆ. 

ಪುಟ್ಟಣ್ಣ ಅವರ ಮಧುರ ಧ್ವನಿಯಲ್ಲಿ ಪರಿಚಯ ಮಾಡಿಕೊಳ್ಳುವ ಚಿತ್ರ ಹಿನ್ನೆಲೆಯಲ್ಲಿ ಆ ಸಮಸ್ಯೆಯನ್ನು ಹೇಳುತ್ತಾ ಹೋಗಿ ಪಾತ್ರವರ್ಗವನ್ನು ತೋರಿಸುತ್ತಾ ಹೋಗುತ್ತಾರೆ. 

ಸಮಸ್ಯೆಯ ಮೇಲೆ ಬೆಳಕು ಚೆಲ್ಲಲು ತೆಗೆದ ಈ ಚಿತ್ರವನ್ನು ತಯಾರಿಸಿದ್ದು "ಚಿತ್ರಜ್ಯೋತಿ" ಲಾಂಛನದಲ್ಲಿ ಆಹಾ ಎಂಥ ಸುಂದರ ಲಾಂಛನ., ರಾಶಿ ಸಹೋದರರು ಎಂದೇ ಪ್ರಖ್ಯಾತರಾದ ರಾಮ ಮೂರ್ತಿ ಮತ್ತು ನಟ ಶಿವರಾಂ ಅವರ ಪಾಲುದಾರಿಕೆಯಲ್ಲಿ ಮೂಡಿಬಂತು ಈ ಚಿತ್ರ. 

ಶ್ರೀಮತಿ ಎಂ ಕೆ ಇಂದಿರಾರವರ ಇದೆ ಹೆಸರಿನ ಕಾದಂಬರಿ ಅಂದಿನ ಜನಪ್ರಿಯ "ಪ್ರಜಾಮತ" ವಾರ ಪತ್ರಿಕೆಯಲ್ಲಿ ಧಾರಾವಾಹಿ ಹರಿದು ಜನರ ಮನಸ್ಸನ್ನು ಸೂರೆಗೊಂಡಿತ್ತು. ಅವರ ಈ ಕಥೆಗೆ ನವರತ್ನ ರಾಮ್ ಅವರ ಸೊಗಸಾದ ಸಂಭಾಷಣೆ,  ಶ್ರೀಕಾಂತ್ ಅವರ ಸುಂದರ ಛಾಯಾಗ್ರಹಣ ಒದಗಿ ಬಂದರೆ, ವಿಜಯನಾರಸಿಂಹ, ಆರ್ ಏನ್ ಜಯಗೋಪಾಲ್, ಚಿ ಉದಯಶಂಕರ್ ಅವರ ಸುಲಲಿತ ಸಾಹಿತ್ಯ ಹೊಂದಿದ್ದ ಹಾಡುಗಳಿಗೆ ಸಂಗೀತದ ಚೌಕಟ್ಟು ಕೊಟ್ಟವರು ವಿಜಯಭಾಸ್ಕರ್.  ಇಂಥಹ ಒಂದು ಸುಂದರ ತಂಡದ ಸಾರಥ್ಯವಹಿಸಿ ಚಿತ್ರಕಥೆ ಬರೆದು ದಿಗ್ದರ್ಶನ ಮಾಡಿದ ಪುಟ್ಟಣ್ಣ ಸದಾ ಸ್ಮರಣೀಯರು. 

ಈ ಚಿತ್ರದಿಂದ ಲೋಕನಾಥ್ ಮತ್ತು ಆರತಿ ಬೆಳ್ಳಿತೆರೆಗೆ ಪರಿಚಯವಾಗುತ್ತಾರೆ.  

ಲೀಲಾವತಿ ಅಭಿನಯ, ನೋವನ್ನು ನುಂಗಿಕೊಂಡು, ನಗಲಾರದೆ, ಜೀವನ ದೂಕುವ ಶೋಷಿತೆಯ ಪಾತ್ರದಲ್ಲಿ ಮನ ಕಲಕುತ್ತಾರೆ. "ಮಗುವೆ ನಿನ್ನ ಹೂ ನಗೆ ಒಡವೆ ಎನ್ನ ಬಾಳಿಗೆ" ಎನ್ನುವ ಹಾಡಿನಲ್ಲಿ ಅವರ ಅಭಿನಯಕ್ಕೆ ಶಕ್ತಿ ತುಂಬುವುದು ಜಾನಕಿಯಮ್ಮನವರ ಗಾಯನ, ನೋವು ತುಂಬಿಕೊಂಡ ಮನಕ್ಕೆ ಪದಗಳನ್ನು ತುಂಬಿಕೊಟ್ಟ ವಿಜಯನಾರಸಿಂಹ ಅವರ ಸಾಹಿತ್ಯ ಆಹಾ ಮನಕ್ಕೆ ಛತ್ರಿ ಬೇಕೋ ಏನೋ ಅನ್ನಿಸುತ್ತದೆ. ಅಷ್ಟು ಗಾಢವಾಗಿದೆ  ಆ ಗೀತ ದೃಶ್ಯ. 

ಅವರು ಮಗುವಿಗೆ ಹೇಳುವ ಮಾತು "ನೀ ಬದುಕಲು.. ನಾ ಬದುಕಿದ್ದು ಸತ್ತಂತೆ ಬದುಕುತ್ತೇನೆ" ಎನ್ನುವಾಗ ನೋವಿದ್ದರೂ, ತನ್ನ ಮುಂದಿನ ಪೀಳಿಗೆಯನ್ನು ಉಳಿಸಲು ಸೋಲುವ ಮನಸ್ಸು, ಮತ್ತು "ಹಂಚಿ"ಕೊಂಡ ಸಾಹುಕಾರ ಸತ್ತಾಗ ಅಳದೆ ನಾ ಅಳೋಲ್ಲ ಎಂದು ಹೇಳುವಾಗ ಮುಖದಲ್ಲಿ ತೋರುವ ಭಾವನಾ ರಹಿತ ನೋಟ, ಬರಿ ತನುವನ್ನು ಮಾತ್ರ ಹಂಚಿಕೊಂಡ, ಆದರೆ ಮನವನ್ನು ಮುಟ್ಟದ ಆ ಸಾಹುಕಾರರ ಬಗೆಗಿನ ತಿರಸ್ಕಾರ ಸೂಪರ್ ಎನ್ನಿಸುತ್ತದೆ. 

ನೋವಿದ್ದರೂ, ತನ್ನ ಮಗಳ ಜನ್ಮಕ್ಕೆ ಕಾರಣವಾದ ಮನುಷ್ಯ ಸಿಕ್ಕರೂ, ಅವರ ಒಳಿತಿಗಾಗಿ, ಸಮಾಜದಲ್ಲಿ ಅವರಿಗಿರುವ ಹೆಸರಿಗೆ ಮಸಿಬಳಿಯಬಾರದು ಎನ್ನುವ ಮಾತು, ಅದರ ಜೊತೆಯಲ್ಲಿಯೇ ಆ ಮನುಷ್ಯ ಹೇಳುವ ಮಾತು "ನೋಡು ನಾವಿಬ್ಬರು ಅರ್ಧ ಆಯುಷ್ಯ ಕಳೆದಾಗಿದೆ ಇನ್ನೇನಿದ್ದರೂ ಮಕ್ಕಳ ಭವಿಷ್ಯದ ಕಡೆಗೆ ಮಾತ್ರ ನಮ್ಮ ಗಮನ" ಎನ್ನುವ ಮಾತಿನಲ್ಲಿ ಹಿಂದೆ ನಡೆದ ಘಟನೆಯನ್ನು ಅಳಿಸಿ, ಮರೆತು ಮುಂದಕ್ಕೆ ಹೆಜ್ಜೆ ಇಡಿ ಎನ್ನುವ ಸಂದೇಶ ತಾಕುತ್ತದೆ. 

ಕಥೆಗಾರ್ತಿ, ಸಂಭಾಷಣಕಾರ, ನಿರ್ದೇಶಕ ಇವರ ಸಮ್ಮಿಳಿತದಲ್ಲಿ ಮೂಡಿ ಬಂದ ಈ ದೃಶ್ಯ ಅಮೋಘ ಅಮೋಘ.

ಮಗಳು ಎದುರು ಮನೆಯ ಮಗಳ ಮದುವೆಯಲ್ಲಿ ಹಾಡುವ ಹಾಡು "ಪಂಚಮ ವೇದ ಪ್ರೇಮದ ನಾದ" ಜಾನಕಿಯಮ್ಮ ಅವರ ಅಮೋಘ ಧ್ವನಿಯಲ್ಲಿ ಕಿವಿಯಿಂದ ಹೃದಯಕ್ಕೆ ಬಂದು ನಿಂತರೆ, ಸರಳ ಸಾಹಿತ್ಯ ವಿಜಯನಾರಸಿಂಹ ಅವರ ಲೇಖನಿಯಿಂದ ಹೊರಮ್ಮುವ ಪದಗಳಿಗೆ ಸಂಗೀತ ಬರಸೆಳೆದು ಅಪ್ಪಿಕೊಳ್ಳುತ್ತದೆ. 

ಇದೆ ಹಾಡಿನಲ್ಲಿ ಮಗಳ ಭವಿಷ್ಯ ಎತ್ತರಕ್ಕೆ ಏರುತ್ತದೆ ಎನ್ನುವ ಒಂದು ಸಣ್ಣ ಭರವಸೆ ಲೀಲಾವತಿಗೆ ಸಿಕ್ಕಾಗ ಅದನ್ನು ದೃಶ್ಯದಲ್ಲಿ ತೋರಿಸಲು ಕ್ಯಾಮೆರಾ ಚಾಲನೆಯನ್ನು ಹಾಗೆ ಮೇಲಕ್ಕೆ ಏರಿಸುತ್ತಾರೆ. ಇದು ಒಂದು ಅದ್ಭುತ ದೃಶ್ಯ ಕಲ್ಪನೆ. 

ಈ ಹಾಡಿನ ನಂತರ ಕೆಲವೇ ದೃಶ್ಯಗಳ ಬಳಿಕ ಮತ್ತೊಮ್ಮೆ ಮೂಡಿ ಬರುತ್ತದೆ "ಪಂಚಮ ವೇದ ಪ್ರೇಮದ ನಾದ" ಈ ಬಾರಿ ಜೇನು ಸ್ವರದ ಪಿ ಬಿ ಎಸ್ ಸಿರಿ ಕಂಠದಲ್ಲಿ.. 

ಎಲ್ಲಾ  ಪರಿಸ್ಥಿತಿಯಲ್ಲೂ ಅತಿ ಕ್ರಮಣ ಮಾಡುವುದಿಲ್ಲ ಎನ್ನುವ ಧರ್ಮೇಚ ಅರ್ಥೆಚ ಕಾಮೇಚ ನಾತಿ ಚರಿತವ್ಯಃ ಶ್ಲೋಕಕ್ಕೆ   ಧರ್ಮೇಚ ಅರ್ಥೆಚ ಕಾಮೇಚ ನಾತಿಚರಾಮಿ ಎಂಬ ಉತ್ತರ, ಭರವಸೆ ನೀಡುವ ನಾಯಕನ ಮಾತಿಗೆ ಸಂತಸದಿಂದ ನಲಿದಾಡುವ ನಾಯಕಿ ಹಾಡುವ ಹಾಡೇ " ಗಗನವು ಎಲ್ಲೋ ಭೂಮಿಯೂ ಎಲ್ಲೋ" ಎರಡು ಕಾರಣದಿಂದ ಗಮನ 
ಸೆಳೆಯುತ್ತದೆ. 

೧. ಗಗನವು ಎಲ್ಲೋ ಭೂಮಿಯು ಎಲ್ಲೋ ಎನ್ನುವಾಗ ಕ್ಯಾಮೆರಾವನ್ನು ಗರ ಗರ ಎಂದು ಪೂರ್ತಿ ತಿರುಗಿಸಿ ತೋರಿಸುವ ರೀತಿ 
೨. ಆ ಆ ಆಆಅ ಆಆಅ ಆಆ ಆಆಆಅ ಎನ್ನುವಾಗ ಉಸಿರು ಕಟ್ಟಿ ಜಾನಕಿಯಮ್ಮ ಹೇಳುವ ತಾಕತ್.. ರೋಮಾಂಚನ ಗೊಳಿಸುತ್ತದೆ. 

ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಬೆಳೆಸಬೇಕು ಎನ್ನುವ ಅದಮ್ಯ ಉತ್ಸಾಹವಿದ್ದ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಮದುವೆ ಸಮಾರಂಭಗಳಲ್ಲಿ ಬರುವ ಆಚಾರ ವಿಚಾರಗಳನ್ನು ಶಾಸ್ತ್ರೋಕ್ತವಾಗಿ ತೋರಿಸುತ್ತಿದ್ದ ರೀತಿ ಇಷ್ಟವಾಗುತ್ತದೆ. ಈ ಚಿತ್ರದಲ್ಲಿಯೂ ಕೆಲವು ಸಂಸ್ಕೃತ ಮಂತ್ರಗಳಿಗೆ ಅದರ ಅರ್ಥವನ್ನು ಹೇಳಿಸುವುದು ಅವರ ಸಂಸ್ಕಾರ ಹೃದಯವನ್ನು ತೋರಿಸುತ್ತದೆ. 

ಒಂದು ಹಾಡನ್ನು ಬರಿಯ ಸಾಹಿತ್ಯ, ಸಂಗೀತ, ನೃತ್ಯಗಳ ಸಂಗಮ ಅನ್ನಿಸದೆ ಅದನ್ನು ಕೂಡ ಕಥೆಯನ್ನು ಮುಂದಕ್ಕೆ ತರಲು ಸಹಾಯ ಮಾಡುತ್ತಲೇ ತಮ್ಮ ಕಥಾದೃಶ್ಯಗಳನ್ನೂ ಹಾಡಿನಲ್ಲಿ ತೋರಿಸುವಲ್ಲಿ ಸಿದ್ಧ ಹಸ್ತರಾಗಿದ್ದರು ಪುಟ್ಟಣ್ಣ. ಅವರ ಸಾಮರ್ಥ್ಯ "ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ" ಹಾಡಿಗೆ ಜಾನಕಿಯಮ್ಮ ಮತ್ತೆ ಟೊಂಕ ಕಟ್ಟಿ ನಿಂತು ಹಾಡಿದರೆ, ಅದನ್ನು ಚಿತ್ರೀಕರಿಸಿದ ರೀತಿಗೆ ಪುಟ್ಟಣ್ಣ ಅವರಿಗೆ ಶ್ರೇಯಸ್ಸು ತಲುಪುತ್ತದೆ. ಸಾಹಿತ್ಯ ರತ್ನ ಚಿ ಉದಯಶಂಕರ್ ಅವರ ಪದಗಳ ಬಳಕೆ ಬಹು ಇಷ್ಟವಾಗುತ್ತದೆ. 

ಚಿತ್ರದ ಅಂತಿಮ ಭಾಗದಲ್ಲಿ ವೇಶ್ಯ ಪದ್ಧತಿಯ ಗೆಜ್ಜೆ ಪೂಜೆಯನ್ನು ವಿಸ್ತೃತವಾಗಿ ತೋರಿಸುತ್ತಾ ಅದಕ್ಕೆ ಹಾಡಿನ ಪೋಷಾಕು ಹಾಕುವಲ್ಲಿ ಸುಗಮ ಸಂಗೀತದ ಪ್ರತಿಭೆ ಬಿ ಕೆ ಸುಮಿತ್ರ ಬರುತ್ತಾರೆ. ಅರ್ ಏನ್ ಜಯಗೋಪಾಲ್ ಅವರ ಸಾಹಿತ್ಯ  ಸಿರಿ ಈ ಹಾಡಿಗೆ ಜೀವ ತುಂಬುತ್ತದೆ. 

 ಈ ಚಿತ್ರದಲ್ಲಿ ನಾನು ಇದ್ದೇನೆ ಎಂದು ಸಾರಿ ಸಾರಿ ಹೇಳುವ ಅಭಿನಯ ನಾಲ್ವರದು. 

ನನ್ನ ಮೆಚ್ಚಿನ ಬಾಲಣ್ಣ ಒಂದು ಐದು ದೃಶ್ಯದಲ್ಲಿ ತಮ್ಮ ಟ್ರೇಡ್ ಮಾರ್ಕ್ ಛಾಪನ್ನು ಮೂಡಿಸುತ್ತಾರೆ. ಅವರ ಪಂಚಿಂಗ್ ಮಾತುಗಳು ಬಿಕ್ಕುವ ರೀತಿಯಲ್ಲಿ ಹೇಳುವ ಶೈಲಿ ಆಹಾ ಅದರ ಕೆಲವು ತುಣುಕುಗಳು

೧. ಹೋಟೆಲ್ ಗೆ ಹೋದರೆ ನಮಗೆ ಬೇಕಾಗಿದ್ದು ಅವನೆಲ್ಲೇ ಕೊಡ್ತಾನೆ.. ಅವನು ಮಾಡಿದ್ದು ನಾವು ತಿನ್ನಬೇಕು.. ಎಲ್ಲಯ್ಯ ರವೆ ಇಡ್ಲಿ ಅಂತ ಎಗರ್ಲಾಡಿದರೆ.. ಹೋಗಯ್ಯ ತೀರ್ಥಹಳ್ಳಿ ಜಾತ್ರೆಗೆ ಅಂತಾನೆ 

೨. ಈ ಸಿಗರೆಟ್ ಪ್ಯಾಕೆಟ್, ಅದನ್ನು ಬಿಟ್ಟು ಹೋದ ಆ ಕೈ, ಅದಕ್ಕೆ ಸಂಬಂಧ ಪಟ್ಟ ತಲೆ ಇದು ಯಾವುದು ಅಂತ ನನ್ನ ತಲೆಗೆ ಹೊಳಿತ ಇಲ್ಲವಲ್ಲ 

೩. ನನ್ನ ಸಾವಿತ್ರ್ಹಿ ಹಣೆಯ ಮೇಲೆ ಕ್ವೆಶ್ಚನ್ ಮಾರ್ಕು 
     ತುಟಿಯ ಮೇಲೆ ಡೇಂಜರ್ ಮಾರ್ಕು 
     ಕಣ್ಣಲ್ಲಿ ಹೊಸ ಸ್ಪಾರ್ಕು 
     ಇದೆಲ್ಲ ನನ್ನ ತಲೇಲಿ ಆಗಿದೆಯೋ ಕ್ವೆಶ್ಚನ್ ಮಾರ್ಕು  

೩. ದ್ವಾಪರ ಯುಗದಲ್ಲಿ ದುಶ್ಯಾಸನ ದ್ರೌಪದಿ ಸೀರೆ ಎಳೆದು ಎಳೆದು ಬೆವತು ಹೋದನಂತೆ.. ಈ ಕಲಿಯುಗದಲ್ಲಿ ನನ್ನ ಮೂರನೇ ಹೆಂಡತಿ ಸೀರೆ ಕುಪ್ಪುಸ ಇಸ್ತ್ರಿ ಮಾಡಿ ಕೈ ಸೋತು ಹೋಗಿದೆ 
೪. ತಾಳಿ ಕಟ್ಟಿದೊಳು ಗಾಳಿಲಿ ಬಿಟ್ಟು ಹೋದಳು 
     ಟೈ ಕಟ್ಟಕೊಂಡವ್ನ ಕಂಕುಳಲ್ಲಿ ಇಟ್ಕೊಂಡು ಹೋದಳು 

ಕುಲ ಯಾವುದಾದರೂ ಜ್ಞಾನಕ್ಕೆ ಪರದೆಯಿಲ್ಲ ಎನ್ನುವ ತರ್ಕದ ಅಶ್ವಥ್ ಪಾತ್ರ ಗಮನ ಸೆಳೆಯುತ್ತದೆ. ಪಂಡರಿಬಾಯಿ ಅವರ ಜೊತೆ ಜಗಳ ಬಂದಿ, ಆವಾಗ ಅವರ ಸಂಭಾಷಣ ಶೈಲಿ, ಅಂಗೀಕ ಅಭಿನಯ, ಮುಖದಲ್ಲಿ ಮಾಸದ ನಗು.. ಧರ್ಮೇಚ ಅರ್ಥೆಚ ಮತ್ತು ತೀರ್ಥ ಕೊಡುವಾಗ ಹೇಳುವ ಮಂತ್ರಗಳ ಅರ್ಥ ಅದನ್ನ ಹೇಳುವ ಶೈಲಿ ಆಹಾ ಸೂಪರ್ ಸೂಪರ್.  ವೇಶ್ಯೆ ಕುಲದ ಹೆಣ್ಣು ಮಗಳನ್ನು  ಗೌರವ ಕೊಟ್ಟು ತನ್ನ ಮಗಳಷ್ಟೇ ಪ್ರೀತಿಸುವ ಆ ಪಾತ್ರದಲ್ಲಿ ನುಗ್ಗಿ ಬಿಟ್ಟಿದ್ದಾರೆ. 

ನವಿರಾದ ಅಭಿನಯ, ಹಿತವಾದ ಮಾತು, 
"ಅಮ್ಮ ಅವರು ನಿನಗೆ ಬೆಲೆ ಕೊಟ್ಟಿದ್ದಾರೆಯೇ ಹೊರತು ನಿನ್ನ ಭಾವನೆಗಳಿಗೆ, ನಿನ್ನ ಕಣ್ಣೀರಿಗೆ ಅಲ್ಲಾ"

"ಅಮ್ಮ ಅಪ್ಪಾಜಿ ಸತ್ತು ಹೋದರು ಎನ್ನುವ ಸುದ್ಧಿ ಕೇಳಿದರೂ ... " 

"ಪಂಚಮವೇದ ಪ್ರೇಮದ ನಾದ" ಹಾಡಿನಲ್ಲಿನ ಅಭಿನಯ 

"ಗಗನವು ಎಲ್ಲೋ ಭೂಮಿಯು ಎಲ್ಲೋ" ಹಾಡಿಗಿಂತ ಮುಂಚೆ ಗಂಗಾಧರ್ ಜೊತೆಯಲ್ಲಿ ನಡೆವ ಸಂಭಾಷಣೆಯಲ್ಲಿ ತನಗೆ ಹೊಸ ಜೀವನದ ರಹದಾರಿ ಸಿಗುತ್ತಿದೆ ಎಂಬ ಭಾವ ಸಿಕ್ಕಾಗ ಅವರ ಅಭಿನಯ.. 

ತನ್ನ ಜನ್ಮಕ್ಕೆ ಕಾರಣವಾದ ಮನುಷ್ಯನ ಬಳಿ ನಿಂತು "ನಿಮ್ಮನ್ನು ಅಪ್ಪಾ ಎನ್ನಬಹುದೇ.. ನಿಮ್ಮನ್ನು ಮುಟ್ಟಬಹುದೇ" ಈ ದೃಶ್ಯ ಈ ಚಿತ್ರದ ಹೈ ಲೈಟ್. 

ಇಂತಹ ಒಂದು ಸುಂದರ ಅಭಿನಯ ಕೊಟ್ಟ ಕಲ್ಪನಾ ಈ  ಚಿತ್ರದಲ್ಲಿ ಮಿನುಗುತ್ತಾರೆ. 

ಕಾಮ ನೋಡುವ ದೇಹದಲ್ಲಲ್ಲ.. ನೋಡುವ ನೋಟದಲ್ಲಿ ಎನ್ನುವ ಮಾತಿನಂತೆ ಇಡಿ ಚಿತ್ರದಲ್ಲಿ ಕಣ್ಣಲ್ಲೇ ಬೆರಗುಗೊಳಿಸುವ ಮೂಗೂರು ಸುಂದರಮ್ಮ ಅವರ ಅಭಿನಯ ವಾಹ್ ವಾಹ್ ಎಂದು ಹೇಳಿಸುತ್ತದೆ. 

ಹೆಣ್ಣು ಈ ಮನೆಗೆ ಹೊನ್ನು ತರುತ್ತದೆ.. ಗಂಡು ಈ ಮನೆಗೆ ಬರಬೇಕು ಹೊರತು, ಹುಟ್ಟ ಬಾರದು ಅಪರ್ಣ ಎನ್ನುವಾಗ ಕಣ್ಣಲ್ಲಿ ತೋರುವ ಮಿಂಚು, ಗೆಜ್ಜೆ ಪೂಜೆ ಮಾಡಿಸ್ತೀನಿ, ಗೆಜ್ಜೆ ಪೂಜೆ ಮಾಡಿಸ್ತೀನಿ ಎನ್ನುವಾಗ ಕಣ್ಣಲ್ಲೇ ತೋರಿಸುವ ಭಾವ ಅಬ್ಬಾ ಅನ್ನಿಸುತ್ತದೆ. ಇಡಿ ಚಿತ್ರವನ್ನು ನುಂಗಿ ಬಿಡುವ ಸಾಮರ್ಥ್ಯ ಇರುವ ಈ ಕಲಾವಿದೆಯಿಂದ ತೆಗಿಸಿರುವ ಅಭಿನಯ ಪುಟ್ಟಣ್ಣ ಅವರ ತಾಕತ್.  

ಮನದಲ್ಲಿ ಅಶ್ಲೀಲವೆನಿಸುವ ಯೋಚನೆಯನ್ನು ಬೆಳ್ಳಿ ತೆರೆಯ ಮೇಲೆ ಸಹ್ಯವಾಗಿ ತಂದು ಒಂದು ಪುಟ್ಟ ಮಗುವಿನ ಜೊತೆಯಲ್ಲಿ ಕೂಡ ನೋಡಬಹುದು ಎನ್ನಿಸುವ ಚಿತ್ರವನ್ನು ಕೊಟ್ಟಿರುವ ಪುಟ್ಟಣ್ಣ ಚಿತ್ರದುದ್ದಕ್ಕೂ ಕಾಡುತ್ತಾರೆ. ಒಂದೇ ಒಂದು ಅಶ್ಲೀಲ ಸಂಭಾಷಣೆ, ದೃಶ್ಯ ಇರದ ಆದರೆ ಹೇರಳವಾಗಿ ತುಂಬಲು ಎಲ್ಲಾ ಸಾಧ್ಯಗಳಿರುವಂಥಹ  ಕಥಾವಸ್ತುವನ್ನು ಅಷ್ಟೇ ನವಿರಾಗಿ ಮಾತಿನಲ್ಲೇ ಕಟ್ಟಿ ಕೊಟ್ಟಿರುವ ಈ ಸುಂದರ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದದ್ದು ಈ ಚಿತದ ಹೆಗ್ಗಳಿಕೆ. 

ಅಬ್ಬಬ್ಬ ಎನ್ನಿಸುವ ಈ ಚಿತ್ರವನ್ನು ನೋಡುತ್ತಾ ಹಲವಾರು ದೃಶ್ಯಗಳಲ್ಲಿ ಮನ, ಕಣ್ಣು ಅಶ್ರು ಧಾರೆಯನ್ನು ಸುರಿಸಿತು. 

ಪುಟ್ಟಣ್ಣ ಗುರುಗಳೇ ಹಾಟ್ಸ್ ಆಫ್ ನಿಮಗೆ!!!

4 comments:

  1. ನಿಜಕ್ಕೂ ನಿಮ್ಮ ಬಗ್ಗೆ ಹೆಮ್ಮೆ ಮೂಡುತ್ತದೆ, ಯಾವುದೇ ವಿಚಾರ ವಾಗಲಿ ನೀವು ಅದರ ಅಂತರಾಳಕ್ಕೆ ಇಳಿದು ಬಿಡುತ್ತೀರಿ, ಅದರಲ್ಲಿನ ವಿಚಾರಗಳನ್ನು ಹೆಕ್ಕಿ ತಿಗೆದು ಉಣಬಡಿಸುವ ನಿಮ್ಮ ಒಂದು ಕಲೆ ಎಲ್ಲರಿಗೂ ನಿಲುಕದ್ದು . ಇಲ್ಲಿಯೂ ಹಾಗೆ ಪುಟ್ಟಣ ಕಣಗಾಲ್ ನವರ ಗೆಜ್ಜೆ ಪೂಜೆ ಚಿತ್ರದ ಬಗ್ಗೆ ಪ್ರತೀ ವಿಚಾರವನ್ನು ಮನಮುಟ್ಟುವಂತೆ , ಕಣ್ಣಿಗೆ ಕಟ್ಟುವಂತೆ ಇಲ್ಲಿ ನಿರೂಪಿಸಿದ್ದೀರ . ಗೆಜ್ಜೆ ಪೂಜೆ ಚಿತ್ರ ಭಾರತೀಯ ಚಿತ್ರರಂಗಕ್ಕೆ ಒಂದು ಅದ್ಭುತ ಕೊಡುಗೆ, ಒಂದು ಸಾಮಾಜಿಕ ಪಿಡುಗನ್ನು ತೆರೆಯ ಮೇಲೆ ಸಹ್ಯವಾಗಿ ತರುವುದು ಪುಟ್ಟಣ್ಣ ಅವರಿಗೆ ಬಿಟ್ಟರೆ ಇನ್ನಾರಿಗೂ ಸಾಧ್ಯವಿಲ್ಲದ ಮಾತು. ಒಂದು ವೇಳೆ ಇದೆ ಚಿತ್ರ ಇತ್ತೀಚಿನ ದಿನಗಳಲ್ಲಿ ಚಿತ್ರಿಸಿದ್ದಾರೆ ಎಷ್ಟು ಅಸಹ್ಯ ದೃಶ್ಯಗಳು, ಸಂಭಾಷಣೆ , ಹಾಡುಗಳು ಇರುತ್ತಿದ್ದವು ಎಂಬುದನ್ನು ಕಲ್ಪಿಸಿಕೊಳ್ಳಿ . ಚಿತ್ರದಲ್ಲಿನ ಕಲ್ಪನಾ ಲೀಲಾವತಿ ಅಶ್ವಥ್, ಬಾಲಕೃಷ್ಣ , ಲೋಕನಾಥ್, ಆರತಿ, ಇವರೆಲ್ಲರ ಅಭಿನಯಕ್ಕೆ ಖಂಡಿತಾ ೧೦೦ ಅಂಕ ಕೊಡಲೇಬೇಕು, ನೆನಪಿಡಿ ಇವರೆಲ್ಲಾ ನಿರ್ದೇಶಕರ ನಟರು . ಇನ್ನು ಚಿತ್ರದಲ್ಲಿನ ಸಾಹಿತ್ಯ ವಿಜಯನಾರಸಿಂಹ , ಆರ್. ಎನ್. ಜಯಗೋಪಾಲ್ , ಚಿ. ಉದಯ ಶಂಕರ್ . ಪೈಪೋಟಿಗೆ ಬಿದ್ದಂತೆ ಅಮರ ಗೀತೆಗಳನ್ನು ಬರೆದು ತಾವು ಅಮರತ್ವ ಹೊಂದಿದ್ದಾರೆ . ಸಂಗೀತ ನೀಡಿದ ವಿಜಯ ಭಾಸ್ಕರ್ ಚಿತ್ರಕಥೆಗೆ ಸಂಗೀತದ ಸ್ವರಗಳ ಕವಚ ತೊಡಿಸಿ ಚಿತ್ರಕ್ಕೆ ಮೆರುಗು ನೀಡಿದ್ದಾರೆ , ಅಂದು ಚಿತ್ರ ನಿರ್ದೇಶಕ ಕಥೆಗಳನ್ನು ಹುಡುಕುತಿದ್ದ ರೀತಿಗೆ ಸಂದ ಪ್ರತಿಫಲ ಈ ಚಿತ್ರ. ಮೂಲ ಕಥೆ ಗಾರ್ತಿ ಶ್ರೀಮತಿ ಎಂ ಕೆ ಇಂದಿರಾರವರು ಕಾದಂಬರಿ ಬರೆಯಲು ಪಟ್ಟ ಸಾಹಸ ಹಾಗು ಅದನ್ನು ಅಂದಿನ ಜನಪ್ರಿಯ "ಪ್ರಜಾಮತ" ವಾರ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿದ್ದು ಒಂದು ಐತಿಹಾಸಿಕ ಘಟನೆಯೇ ಸರಿ . ಚಿತ್ರದ ಬಗ್ಗೆ ಎಲ್ಲಾ ವಿವರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ರಸದೌತಣ ಉನ ಬಡಿಸಿದ್ದೀರಿ ಶ್ರೀಕಾಂತ್ ನಿಮಗೆ ನನ್ನ ಪ್ರೀತಿಯ ಗುದ್ದು, ಹಾಗು ಚಪ್ಪಾಳೆ

    ReplyDelete
  2. ನಾನಿನ್ನೂ ನೋಡಿಲ್ಲ...
    ಆಸೆ ಹುಟ್ಟಿಸಿದ್ದೀರಿ... ಇವತ್ತೇ ಟೋಟಾಲ್ ಕನ್ನಡಾ ಶಾಪಿಗೆ ಹೋಗಿ ತರುವೆ..

    ಪುಟ್ಟಣ್ನ ಕಣಗಾಲ್ ಕನ್ನಡ ಚಿಂತ್ರರಂಗಕ್ಕೆ ಹೊಸ ಸ್ಪರ್ಷ ಕೊಟ್ಟ ಮಾಂತ್ರಿಕರು..

    ReplyDelete
  3. ಆಣಿ ಮುತ್ಯದ ಸವಿವರಣೆ ಇದು.
    ಮತ್ತೊಮ್ಮೆ ಚಿತ್ರ ನೋಡಲು ಪ್ರೇರೇಪಿಸಿತು.

    ReplyDelete