Showing posts with label kannada movies. Show all posts
Showing posts with label kannada movies. Show all posts

Saturday, December 22, 2018

ಕನ್ನಡ ಗುಡ್ ಫಿಲ್ಮ್ - ಕೆ.ಜಿ.ಎಫ್ (2018)

ಯಾವುದೇ ಆಟವಿರಲಿ, ಸವಾಲಿರಲಿ, ಕಾಳಗವಿರಲಿ, ಯುದ್ಧವಿರಲಿ.. ಸರಿಯಾದ ವಿವರಗಳನ್ನು ಇಟ್ಟುಕೊಂಡು, ಬಲಾಬಲಗಳನ್ನು ಅಳೆದು, ತಮ್ಮ ಬಳಿ ಇರುವ ಸರಕು ಸಾಮಗ್ರಿಗಳನ್ನು ಜೋಪಾನವಾಗಿ ನೋಡಿಕೊಂಡು ಮುನ್ನುಗ್ಗಿದ್ದಾಗ ಯಶಸ್ಸು ಅಂಗೈಯಲ್ಲಿ ಅನ್ನುತ್ತದೆ ಜನಜನಿತ ಮಾತು..

ಸುಮಾರು ವಾರಗಳಿಂದ ಮಾಧ್ಯಮಗಳಲ್ಲಿ ಕೇಳಿಬರುತ್ತಿದ್ದ ಒಂದೇ ಪದ ಕೆಜಿಎಫ್.. ನನ್ನ ಮಗಳು ಅಪ್ಪ ಆ ಮೂವಿಗೆ ಹೋಗೋಣ ಅಂದಿದ್ದಳು.. ಜೀವನದಲ್ಲಿ ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳೋಕೆ ಮ್ಯಾನೇಜ್ಮೆಂಟ್ ಕೋರ್ಸ್ ಬೇಕಾಗಿಲ್ಲ ಅಲ್ಲವೇ..

ಮನೆ ಹತ್ತಿರವೇ ಥೀಯೇಟರ್.. ಸ್ವರ್ಗಕ್ಕೆ ಮೂರೇ ಗೇಣು ಅನ್ನುವ ಹಾಗಾಯ್ತು.. .ಚಿತ್ರ ಬಿಡುಗಡೆಯಾದ ಮೊದಲ ದಿನ.. ಸಂಜೆ ಆಟಕ್ಕೆ ಟಿಕೆಟ್ ಕೊಳ್ಳೋಣ ಅಂತ ಹೋದ್ರೆ.. ಟಿಕೆಟ್ ಇಲ್ಲ.. ಸಂಜೆ ಆಟಕ್ಕೆ ಸಿಗುತ್ತೆ.. ಅಂದ್ರು.. ಟಾಕೀಸಿನವರು.. ಸರಿ ನಿಗದಿತ ಸಮಯಕ್ಕೆ ಹೋದರೆ... ಟಿಕೆಟ್ ಎಲ್ಲಾ ಮುಗಿದಿದೆ ಆನ್ಲೈನ್ ನೋಡಿ ಅಂದ್ರು.. ಆನ್ಲೈನ್ ಟಿಕೆಟ್ ಇಲ್ಲ ಅಂತ ನೋಟಿಫಿಕೇಶನ್ ತೋರಿಸ್ತಾ ಇತ್ತು.. ಸರಿ ರಾತ್ರಿ ಆಟಕ್ಕೆ ನೋಡೋಣ ಅಂತ ಸರತಿಯಲ್ಲಿ ನಿಂತಿದ್ರೆ ಅಲ್ಲೂ ನಿರಾಶೆ.. ಟಿಕೆಟುಗಳು ಬೇಗನೆ ಬಿಸಿ ದೋಸೆಯಂತೆ ಖಾಲಿ..

ಅರೆ ಕನ್ನಡ ಸಿನಿಮಾಗಳಿಗೆ ಈ ಪಾಟಿ ಕ್ರೇಜ್ ಕಳೆದ ಸುಮಾರು ವರ್ಷಗಳಲ್ಲಿ ಇರಲಿಲ್ಲ ಅನ್ನುವ ಮಾತು ಕಷ್ಟವಾದರೂ ಅರಗಿಸಿಕೊಳ್ಳಲು ಬೇಕಿತ್ತು.. ಕನ್ನಡ ಸಿನೆಮಾಗಳ ಅಭಿಮಾನಿಯಾಗಿ.. ಅಣ್ಣಾವ್ರ ಚಿತ್ರಗಳ ಸಮಯದಲ್ಲಿ.. ವಿಷ್ಣುದಾದ ಚಿತ್ರಗಳು, ಅಂಬಿ ಸಿನೆಮಾಗಳು ಆ ಎಂಭತ್ತರ ದಶಕದಲ್ಲಿ ಹುಟ್ಟಿಸಿದ್ದ ಕ್ರೇಜ್ ನೋಡಿದ್ದರಿಂದ.. ಆ ರೀತಿಯ ಹಬ್ಬದ ವಾತಾವರಣ ನೋಡಬೇಕಿತ್ತು ಎಂದು ಮನಸ್ಸು ಬಯಸಿದ್ದು ಸುಳ್ಳಲ್ಲ..

ಸರಿ.. ಎರಡನೇ ದಿನದ ಆಟಕ್ಕೆ ಬುಕ್ ಮಾಡಿದ್ದರಿಂದ.. ನಿರಾಳವಾಗಿತ್ತು.. ಟಾಕೀಸಿನ ಮುಂದೆ ಆಗಲೇ ಜನಸಂದಣಿ.. ಟಾಕೀಸಿನ ಒಳಗೆ.. ತಮ್ಮ ತಮ್ಮ ಸೀಟಿನಲ್ಲಿ ಆಸೀನರಾಗಿದ್ದ ಜನತೆ.. ತಂತ್ರಜ್ಞಾನ ಎಷ್ಟೇ ಮುಂದುವರೆದಿರಲಿ.. ಟಾಕೀಸಿನಲ್ಲಿ ಆ ಕೂಗಾಟ, ಚೀರಾಟ, ಶಿಳ್ಳೆ, ಚಪ್ಪಾಳೆಗಳ ನಡುವೆ... ಅಭಿಮಾನ ಹುಟ್ಟಿಸುವ ಅಭಿಮಾನಿಗಳ ಜೊತೆಯಲ್ಲಿ ಸಿನಿಮಾಗಳನ್ನು ನೋಡುವ ಖುಷಿಯೇ ಖುಷಿ..

ಕೆಜಿಎಫ್ ಎಂಬ ಫಲಕ ಬೆಳ್ಳಿ ಪರದೆಯ ಮೇಲೆ ಬಂದ ಕೂಡಲೇ.. ಹೋ ಅಂತ ಕೂಗಾಟ, ಚೀರಾಟ.. ಸೊಗಸಾಗಿತ್ತು.. ರೆಬೆಲ್ ಸ್ಟಾರ್ ಅಂಬಿಗೆ ಶ್ರದ್ದಾಂಜಲಿ ಸಲ್ಲಿಸಿದ್ದು.. ಶಿಳ್ಳೆಗಳು ಇನ್ನಷ್ಟು ಹೆಚ್ಚಾಗಲು ಕಾರಣವಾಗಿತ್ತು..

ಸಿನಿಮಾಗಳನ್ನು ಮಾಡುವುದು ಸುಲಭವಲ್ಲ.. ಅದರಲ್ಲೂ ಒಂದು ನಾಲ್ಕು ಐದು ದಶಕಗಳ ಹಿಂದಕ್ಕೆ ಹೋಗಿ ಅಲ್ಲಿದ್ದ ವಾತಾವರಣ ಸೃಷ್ಟಿಮಾಡುವುದು ಸುಲಭದ ಮಾತಲ್ಲ.. ಇಂದಿನ ಪೀಳಿಗೆಯ ನಟರಿಗೆ, ನಿರ್ದೇಶಕರಿಗೆ, ಸಂಗೀತ, ಛಾಯಾಗ್ರಹಣ ಮಾಡುವವರಿಗೆ ತಂತ್ರಜ್ಞಾನ ವರವಾಗಿದೆ.. ಅಂದುಕೊಂಡಿದ್ದನ್ನು ಹಾಗೆಯೇ ತೆರೆಯ ಮೇಲೆ ಮೂಡಿಸೋದುಆಗುತ್ತದೆ ..


ನಿರ್ದೇಶಕ ಪ್ರಶಾಂತ್ ನೀಲ್ ತುಂಬಾ ಹೋಂ ವರ್ಕ್ ಮಾಡಿ ಈ ಚಿತ್ರ ಸಿದ್ಧ ಮಾಡಿದ್ದಾರೆ.. ಮೊದಲನೇ ಚಾಪ್ಟರ್ ಎನ್ನುವ ಟ್ಯಾಗ್ ಲೈನ್ ಇರೋದರಿಂದ.. ಕುತೂಹಲ ಹುಟ್ಟಿಸುವ ಹಾಗೆ ಚಿತ್ರಕಥೆ ಮಾಡಿದ್ದಾರೆ.. ಚಿತ್ರ ನೋಡಿ ಹೊರಗೆ ಬಂದಾಗ.. ಯಶ್ ಮತ್ತು ಪ್ರಶಾಂತ್ ನೀಲ್ ಜೊತೆ ಮಾತಾಡಿಸಬೇಕು ಅನ್ನಿಸಿತು..

ಇಬ್ಬರೂ Virtual ಆಗಿ ಸಿಕ್ಕರು..

ಅವರ ಜೊತೆ ಮಾತುಕತೆ"

ಶ್ರೀ : ಯಶ್ ಅವರೇ ಇಡೀ ಚಿತ್ರದಲ್ಲಿ ನೀವು ಎದ್ದು ಕಾಣುತ್ತೀರಾ.. ನಿಮ್ಮ ಕೇಶ ವಿನ್ಯಾಸ, ಬಟ್ಟೆಗಳು, ಇರಿಯುವಂಥಹ ನೋಟ.. ಮಾತುಗಳು.. ನಿಮ್ಮ ಹೆಜ್ಜೆ ಇಡುವ ಶೈಲಿ ಎಲ್ಲವೂ ಸೊಗಸಾಗಿದೆ.. ಇದಕ್ಕೆ ನಿಮ್ಮ ತಯಾರಿ ಹೇಗಿತ್ತು..

ಯಶ್ : ಅಣ್ತಮ್ಮ.. ಪ್ರಶಾಂತ್ ಈ ಚಿತ್ರದ ಕತೆ ಹೇಳಿದಾಗ ಮನದೊಳಗೆ ಒಂದು ಸ್ಪಷ್ಟ ರೂಪ ತಾಳುವಂತೆ ಅವರು ಹೇಳಿದ್ದು.. ನಾ ರಾಕಿ ಪಾತ್ರದೊಳಗೆ ನುಗ್ಗುವಂತೆ ಮಾಡಿತು.. ರಾಕಿ ಪಾತ್ರಕ್ಕೂ ನನಗೂ ತುಂಬಾ ಸಾಮ್ಯತೆ ಇದ್ದದ್ದು ಅನುಕೂಲವಾಯಿತು..

ಪ್ರಶಾಂತ್ : ನೋಡಿ ಶ್ರೀ ಜೊತೆಗೆ. ನನಗನ್ನಿಸಿದ್ದು.. ಈ ಚಿತ್ರಕಥೆ ಮಾಡುವಾಗ.. ಅರಿವಿಲ್ಲದೆ ಯಶ್ ಅವರು ಈ ನನ್ನ ಕತೆಯೊಳಗೆ ಬಂದುಬಿಟ್ಟಿದ್ದರು.. ಹಾಗಾಗಿ ಬರೆದದ್ದೆಲ್ಲ ಅವರನ್ನು ಮನದೊಳಗೆ ಇಟ್ಟುಕೊಂಡು ಬರೆದೆನೋ.. ಅಥವಾ ಅವರು ಕತೆಯೊಳಗೆ ಹೋಗಿ.. ನನಗೆ ಹೀಗೆ ಅಂತ ಹೇಳಿದರೂ ಗೊತ್ತಿಲ್ಲ.. ಇದೊಂತರ.. ಕುಂಬಳ ಕಾಯಿ ನಮ್ಮದೇ.. ಮಚ್ಚು ನಮ್ಮದೇ.. ಅಡ್ಡವಾದರೂ ಸರಿ ಉದ್ದವಾದರೂ ಸರಿ.. ಕುಂಬಳ ಕಾಯಿ ಕತ್ತರಿಸೋದು ಬೇಕಿತ್ತು.. ಅದೇ ರೀತಿ ಇಲ್ಲೂ ಆಗಿದ್ದು... ನನಗೆ ನಾಯಕ ಹೇಗೆ ಬೇಕಿತ್ತೂ ಹಾಗೆ ಯಶ್ ಸಿಕ್ಕಿದರು.. ಯಶ್ ಅವರಿಗೆ ಅವರಿಗೆ ಚಿತ್ರದ ನಾಯಕ ಹೇಗೆ ಇರಬೇಕಿತ್ತೋ ಅವರು ಪರಕಾಯ ಪ್ರವೇಶ ಮಾಡಿದರು.. ಅದರ ಪರಿಣಾಮ ಈ ಚಿತ್ರ ನಿಮ್ಮ ಮುಂದೆ..

ಶ್ರೀ : ನಿಮ್ಮ ಸೆಟ್ ಡಿಸೈನ್, ಮೇಕಿಂಗ್, ಫೋಟೋಗ್ರಫಿ, ಸಂಗೀತ, ಬಿಜಿಎಂ ಎಲ್ಲವೂ ಹೊಂದಿಕೊಂಡು ಸಾಗಿದೆ.. ಅಷ್ಟೊಂದು ಕಲಾವಿದರು, ಅಷ್ಟು ದೊಡ್ಡ ಕ್ಯಾನವಾಸ್ ಇದನ್ನೆಲ್ಲಾ ಹೇಗೆ ನಿಭಾಯಿಸಿದಿರಿ..

ಪ್ರಶಾಂತ್ : ನಿರ್ಮಾಪಕರಿಗೆ ಕತೆ ಹೇಳಿದೆ.. ಇಷ್ಟು ಬಡ್ಜೆಟ್ ಆಗಬಹುದು ಎಂದು ಹೇಳಿದ್ದೆ.. ವಿಜಯ್ ಕಿರಗಂದೂರು ಒಪ್ಪಿ ನಮ್ಮ ಕಲ್ಪನೆಗೆ ಒಂದು ಚೂರು ಕಮ್ಮಿಯೆಯಾಗದಂತೆ ಎಲ್ಲಾ ಸಿದ್ಧತೆ ಮಾಡಿದರು.. ಭುವನ್ ಗೌಡ ಅವರು ಇಡೀ ಚಿತ್ರವನ್ನು ದೃಶ್ಯಕಾವ್ಯವಾಗಿ ಮಾಡಿದ್ದಾರೆ.. ರವಿ ಬಸ್ರೂರ್ ಅವರ ಸಂಗೀತ ಈ ಚಿತ್ರಕ್ಕೆ ತೂಕಬದ್ಧವಾಗಿ ನೀಡಿದ್ದಾರೆ..

ಯಶ್ : ಅಣ್ತಮ್ಮ.. ಇದೊಂತರಹ ಜೇನುಗೂಡು ಕಟ್ಟಿದ ಹಾಗೆ.. ಪ್ರತಿಯೊಬ್ಬರ ಶ್ರಮ ಇದರ ಹಿಂದೆ ಇದೆ.. ನಾವಿಕನ ಯೋಜನೆ ಸರಿಯಾಗಿದ್ದಾಗ ಹಡಗು ಸಮುದ್ರದಲ್ಲಿ ಸಲೀಸಾಗಿ ಸಾಗುತ್ತದೆ ಎನ್ನುತ್ತಾರೆ ಅಲ್ವೇ.. ಈ ಚಿತ್ರವೂ ಹಾಗೆ

ಶ್ರೀ : ಯಶ್ ಅವರೇ ಮತ್ತು ಪ್ರಶಾಂತ್ ಅವರೇ.. ನೀವು ಬ್ಯುಸಿ ಇದ್ದೀರಾ ಅಂತ ಗೊತ್ತು.. ಕನ್ನಡ ನಾಡಿನ ಚಿತ್ರ ಭಾಷಾ ಗಡಿಯನ್ನು ತೊರೆದು ಇಡೀ ಚಿತ್ರಜಗತ್ತಿನಲ್ಲಿಯೇ ಸುದ್ದಿ ಮಾಡುತ್ತಿರುವುದು ಚಿತ್ರಪ್ರೇಮಿಯಾಗಿ ನನಗೆ.. ಹಾಗೂ ಕನ್ನಡಾಭಿಮಾನಿಯಾಗಿ ನನಗೆ ಖುಷಿ ಕೊಟ್ಟಿದೆ..

ಪ್ರಶಾಂತ್ ಮತ್ತು ಯಶ್ : ಶ್ರೀ ಧನ್ಯವಾದಗಳು.. ಚಿತ್ರ ಯಶಸ್ವಿಯಾಗಿ ಚಿತ್ರಾಭಿಮಾನಿಗಳ ಹೃದಯ ಗೆದ್ದರೆ ಎಲ್ಲರೂ ಗೆದ್ದ ಹಾಗೆ.. ಜೊತೆಯಲ್ಲಿ ನಮ್ಮ ಇಡೀ ಚಿತ್ರ ತಂಡದ ಸುಮಾರು ಎರಡು ವರ್ಷದ ಪರಿಶ್ರಮ ಸಾರ್ಥಕ ಅನ್ನಿಸುತ್ತದೆ.. ನಮಸ್ಕಾರ.. ಶ್ರೀ ... ಎನ್ನುತ್ತಾ ತಮ್ಮ ಕಾರು ಹತ್ತಿ ಹೊರಟೆ ಬಿಟ್ಟರು..



                                                                   ****

ಈ ಸಿನಿಮಾ ಮೂಡಿ ಬಂದ ರೀತಿ ಸೊಗಸಾಗಿದೆ.. ಕನ್ನಡ ಚಿತ್ರರಂಗವನ್ನು ಅನೇಕ ಚಿತ್ರ ರತ್ನಗಳು ನಾನಾ ಕಾರಣಗಳಿಂದ ಬೆಳಗಿವೆ .. ಈ ಸಿನೆಮಾವೂ ಹಾಗೆ.. ಪ್ರತಿಯೊಂದು ವಿಭಾಗದಲ್ಲಿಯೂ ನುರಿತ ತಂತ್ರಜ್ಞರು ಪರಿಶ್ರಮ ವಹಿಸಿದ್ದಾರೆ..

  • ಯಶ್ ಅವರು ಇಷ್ಟವಾಗದೇ ಇರೋಕೆ ಸಾಧ್ಯವೇ ಇಲ್ಲ ಅನ್ನುವ ಮಟ್ಟಿಗೆ ಚಿತ್ರದಲ್ಲಿ ಆವರಿಸಿಕೊಂಡಿದ್ದಾರೆ.. 
  • ಇಡೀ ಚಿತ್ರವನ್ನು ತಮ್ಮ ಭುಜದ ಮೇಲೆ ಹೊತ್ತಿಕೊಂಡಿರುವುದು ಸ್ಪಷ್ಟವಾಗುತ್ತದೆ ಮತ್ತು ಅದರಲ್ಲಿ ಗೆದ್ದಿದ್ದಾರೆ
  • ಹೊಡೆದಾಟದ ದೃಶ್ಯಗಳು, ಅದಕ್ಕೇ ಉಪಯೋಗಿಸಿರುವ ಬಣ್ಣ, ಅದರ ಹಿನ್ನೆಲೆ ಮನಸೆಳೆಯುತ್ತದೆ.. 
  • ಸಂಗೀತ ಅಬ್ಬರಿಸುತ್ತದೆ.. 
  • ಆ ಗಣಿ ದೃಶ್ಯಗಳು, ಅದನ್ನೂ ನಾಜೂಕಾಗಿ ತೆರೆದಿಟ್ಟಿರುವ ಪರಿ ಅಬ್ಬಬ್ಬಾ ಅನಿಸುತ್ತದೆ
  • ಆ ಗಣಿಯಲ್ಲಿ ಹಾಕಿರುವ ಸೆಟ್ ನಯನ ಮನೋಹರ
  • ಗಣಿಗಳಲ್ಲಿ ಕೆಲಸ ಮಾಡುವವರ ನೋವುಗಳನ್ನು ಬೋರ್ ಆಗದಂತೆ ಹಿಡಿದಿಟ್ಟಿರುವ ಪರಿ..  
  • ಸಂಕಲನಕಾರನ ಚಾಕಚಕ್ಯತೆ ಈ ಚಿತ್ರದ ಹೈ ಲೈಟ್ 
  • ಅಪಾರ ಕಲಾವಿದರನ್ನು ಹಿಡಿದಿಟ್ಟುಕೊಂಡು ಚಿತ್ರಕ್ಕೆ ಬೇಕಾದ ರೀತಿಯಲ್ಲಿ ಉಪಯೋಗಿಸಿರುವುದು ನಿರ್ದೇಶಕ ಜಾಣ್ಮೆ 
  • ಮುದ್ದಾಗಿ ಕಾಣುವ ಅನಂತ್ ನಾಗ್..ಅವರ ನಿರೂಪಣೆ, ಅವರ ಧ್ವನಿ, ಭಾಷಾ ಶುದ್ಧತೆ ಇಷ್ಟವಾಗುತ್ತದೆ 
  • ಅಷ್ಟೇ ಮುದ್ದಾಗಿ ಮಾಳವಿಕಾ..ಅವರ ಧ್ವನಿ ಸ್ಪಷ್ಟ ಕನ್ನಡ ಮಾತುಗಳು ಇಷ್ಟವಾಗುತ್ತದೆ . 
  • ಒಂದು ಕಾಲದಲ್ಲಿ ಕನ್ನಡ ಚಿತ್ರಗಳ ಕಡೆಗೆ ಇಡೀ ಭಾರತ ಚಿತ್ರರಂಗ ಕಣ್ಣು ತಿರುಗಿಸುತಿತ್ತು.. ಇಂತಹ ಚಿತ್ರಗಳ ಬಂದಷ್ಟು ಮತ್ತೆ ಆ ದಿನಗಳು ದೂರವಿಲ್ಲ ಅನ್ನಿಸುತ್ತದೆ.. 
  • ಆ ಭಾಷೆ ಚಿತ್ರ. .ಈ ಭಾಷೆ ಚಿತ್ರ ಅಂತ ಅಂತ ಸುದ್ದಿ ಕೇಳಿ ಕೇಳಿ ಬೇಸತ್ತಿದ್ದ ಕಿವಿಗಳು.. ಕನ್ನಡ ಸಿನಿಮಾ ಈ ಪಾಟಿ ಸುದ್ದಿ ಮಾಡುತ್ತಿರುವುದು.. ಕರುನಾಡಿನ ಪ್ರತಿಯೊಬ್ಬ ಸಿನಿಪ್ರಿಯನಿಗೂ ಇದು ಯುಗಾದಿ ಹಬ್ಬವೆಂದರೆ ತಪ್ಪಿಲ್ಲ ಅಲ್ವೇ.. !!!




ಎರಡನೇ ಚಾಪ್ಟರ್ ಬೇಗನೆ ತೆರೆಯ ಮೇಲೆ ಅಪ್ಪಳಿಸಲಿ.. ಶುಭವಾಗಲಿ ಕೆಜಿಎಫ್ ತಂಡಕ್ಕೆ!!!

Sunday, November 25, 2018

ಅಜಾತಶತ್ರು .. ಸ್ನೇಹಮಯ ಅಂಬಿ ಅಜರಾಮರ

ಎಂಭತ್ತರ ದಶಕದ ಆರಂಭ.. ಆಗ ನಮ್ಮ ಮನೆ ತ್ಯಾಗರಾಜನಗರದದಲ್ಲಿ.. ನನ್ನ ಅಣ್ಣ ಇವರ  ದೊಡ್ಡ ಅಭಿಮಾನಿ.. ನಮಗೆ ಚಿತ್ರಗಳು ನೋಡುವುದೆಂದರೆ ಒಂದು ಹಬ್ಬ ಅನ್ನುವ ಪರಿಸ್ಥಿತಿ...

ಒಂದು ದಿನ ಅಣ್ಣ ಮನೆಗೆ ದೊಡ್ಡ ಪೇಪರ್ ತಂದು.. ಅದರಲ್ಲಿ ಇವರ ಅನೇಕ ಪುಟ್ಟ ಪುಟ್ಟ ಚಿತ್ರಗಳನ್ನು ತಂದು. ಅಂಟಿಸುತ್ತಿದ್ದ.. ಬಾಲ್ಯ ಸಹಜ ಕುತೂಹಲ.. ನಾವು ಕೈ ಹಾಕಿದೆವು.. ಜಾಕೆಟಿನಲ್ಲಿ, ಜರ್ಕಿನಲ್ಲಿ, ಜೀನ್ಸ್ ಪ್ಯಾಂಟ್, ಕಪ್ಪು ಕನ್ನಡಕ, ತಲೆಗೆ ಟೋಪಿ, ಗಜೇಂದ್ರ ಚಿತ್ರದ ಒಂದು ಪ್ಲಾಸ್ಟಿಕ್ ಬ್ಯಾರೆಲ್ ಎತ್ತಿ ಹಿಡಿದ ಚಿತ್ರ.. ಹೀಗೆ ತರಹಾವರಿ ಚಿತ್ರಗಳನ್ನು ಅಂಟಿಸಿದ ಒಂದು ಪೋಸ್ಟರ್ ಸಿದ್ಧಪಡಿಸಿದ ಅವನು ಮತ್ತು ಅವನ ಗೆಳೆಯರು.. ಆಮೇಲೆ ಒಂದು ಥೀಯೇಟರ್ ನಲ್ಲಿ ಹಾಕಿದರು ಎಂದು ಹೇಳಿದ..  ಅದು ಬೇರೆ ವಿಷಯ.. ಆದರೆ ಜನರನ್ನು ಅಭಿಮಾನಿಗಳನ್ನಾಗಿ ಮಾಡಿದ ನಟ ಇವರು ಎಂದು ಹೇಳಲು ಇಷ್ಟಪಡುತ್ತೇನೆ.. ಆರು

ಇಮೇಜ್,  ಸ್ಟಾರ್ ಗಿರಿ, ಹಿರಿತನ, ಪಾತ್ರ ದೊಡ್ಡದು ಚಿಕ್ಕದು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ, ತನಗೆ ತೋಚಿದಂತೆ ಪಾತ್ರಕ್ಕೆ ನ್ಯಾಯ ಸಲ್ಲಿಸಿ ರೆಬಲ್ ಸ್ಟಾರ್ ಎಂಬ ಬಿರುದು ಪಡೆದ ನಟ..

ಮಠ ಚಿತ್ರ.. ಸಾಧುಕೋಕಿಲ ನಿರ್ಮಾಪಕರಿಗೆ ಕತೆ ಹೇಳುತ್ತಿರುತ್ತಾರೆ.. ಮಹಾಭಾರತವನ್ನು ಈಗಿನ ಕಾಲಕ್ಕೆ ಹೊಂದಿಸುವ ಕತೆ.. ಪಾಂಡವರ, ಕೌರವರ ಪಾತ್ರಕ್ಕೆ ಈ ಈ ನಟರನ್ನು ಆಯ್ಕೆ ಮಾಡೋಣ ಅಂತ ಹೇಳುತ್ತಾರೆ.. ಆಗ ಅಲ್ಲಿದ್ದ ಒಬ್ಬ ಅಣ್ಣ ಕರ್ಣ ಪಾತ್ರ  ಯಾರು ಮಾಡುತ್ತಾರೆ ಎಂದಾಗ..

"ಅಯ್ಯೋ ನಿನ್ನ ಯೋಗ್ಯತೆಗೆ ಬೆಂಕಿ ಹಾಕ.. ಇಂಡಸ್ಟ್ರಿನಲ್ಲಿ ಎಷ್ಟು ವರ್ಷದಿಂದ ಇದ್ದೀಯ.. "ಕರ್ನಾಟಕದ ಕರ್ಣ ಯಾರು "ಅಂಬರೀಷ್"  ಎಂದು ಸಾಧುಕೋಕಿಲ ಹೇಳುತ್ತಾರೆ.. ಇದೊಂದು ಮಾತು ಅಂಬರೀಷ್  ಅವರ ಜೀವನದ ಸಾರ್ಥಕತೆಯನ್ನು ಹೇಳುತ್ತದೆ..

ಕಷ್ಟ ಎಂದು ಹೋದವರ್ಯಾರಿಗೂ ಬರಿಗೈಯಲ್ಲಿ ಕಳಿಸಿದ ಉದಾಹರಣೆ ಇಲ್ಲ ಎಂದು ಅವರಿಂದ ಸಹಾಯ ಪಡೆದ ನೂರಾರು ಮಂದಿ ಹೇಳುತ್ತಾರೆ.. ಯಾರಿಗೂ ತಿಳಿಯದೆ ಸಹಾಯ ಮಾಡಿರೋದು ಅವರಿಗೆ, ಸಹಾಯ ಪಡೆದವರಿಗೆ ಮತ್ತು ಆ ಭಗವಂತನಿಗೆ ಗೊತ್ತು..

ಪುಟ್ಟ ಹನಿ ಜಿನುಗಿ ಮುಂದೆ ಅದೇ ಹೊನಲಾಗಿ, ಝರಿಯಾಗಿ, ತೊರೆಯಾಗಿ, ನದಿಯಾಗಿ, ಸಾಗರವಾಗುವಂತೆ, ಮೈಲಿಗಲ್ಲು ಚಿತ್ರ ನಾಗರಹಾವು ಚಿತ್ರದ ಒಂದೆರಡು ದೃಶ್ಯಗಳಲ್ಲಿ ಬರುವ ಜಲೀಲ ಪಾತ್ರದಿಂದ ಬೆಳೆಯುತ್ತ ಹೋದ ಪರಿ ಅಚ್ಚರಿಯಾಗುತ್ತದೆ.

ಅವರ ಸ್ನೇಹಪರತೆ, ವಿಷ್ಣುವಿನ ಜೊತೆಯ ಅಗಾಧ ಗೆಳೆತನ, ಎಲ್ಲರೊಡನೆ ಬೆರೆಯುವ ಅವರ ಮನೋಭಾವ ಅವರ ಪಾತ್ರಗಳಿಗಿಂತ ಹೆಚ್ಚು ಕಾಡಿದ್ದು ಸುಳ್ಳಲ್ಲ.. ಅವರ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನನ್ನ ಕಾಡುವ ಹತ್ತು ಚಿತ್ರಗಳ ಬಗ್ಗೆ ಒಂದಷ್ಟು ಹೇಳುವೆ..

ನ್ಯೂ ಡೆಲ್ಲಿ
ಪತ್ರಕರ್ತ ತನಗಾದ ನೋವು, ಅವಮಾನ ಮತ್ತು ತನ್ನ ಗೆಳತಿಗಾದ ಅವಮಾನವನ್ನು ತಣ್ಣಗಿನ ಕ್ರೌರ್ಯದಿ ತಣಿಸಿಕೊಳ್ಳುವ ಪಾತ್ರದಲ್ಲಿ ನಿಜಕ್ಕೂ ಮನಕ್ಕೆ ಇಳಿಯುತ್ತಾರೆ.. ಎರಡನೇ ಭಾಗದಲ್ಲಿ ವಿಗ್ ಧರಿಸಿದ್ದರೂ ಮುದ್ದಾಗಿ ಕಾಣುವ ಅಂಬರೀಷ್ ಈ ಚಿತ್ರದ ಜೀವವಾಗಿದ್ದರೆ.  "ಚಂದ್ರಪ್ಪ" ಎನ್ನುವ ಅವರ ರಾಗವಾಗಿ ಹೇಳುವ ದನಿ ಬಲು ಇಷ್ಟ

ಶುಭಮಂಗಳ
ಈ ಶತಮಾನದ ಮಾದರಿ ಹೆಣ್ಣು ಎನ್ನುವ ಹಾಡಿನಲ್ಲಿ ಕುಣಿಯುವ ದೃಶ್ಯ,
ನಾಯಕಿ ಆರತಿಗೆ ಅವಮಾನವಾದಾಗ.. ನಾಯಕಿ ಅಂಬರೀಷ್ ಅವರಿಗೆ ಏನಾಯಿತು ಎಂದು ಮೂಕಭಾಷೆಯಲ್ಲಿ ಹೇಳಿದಾಗ ಅಂಬಿ ಅಭಿನಯ
ಮೂಕನಾದರೂ ಭಾವ ತುಂಬುವ ಆ ಪಾತ್ರ ಚಿತ್ರದುದ್ದಕ್ಕೂ ಕಾಡುತ್ತದೆ.

ಪಡುವಾರಹಳ್ಳಿ ಪಾಂಡವರು
"ಸಾಹುಕಾರ್ರೆ ನನಗೆ ದುಡ್ಡು ಕೊಡಿ.. ಒಂದು ಚಿನ್ನದ ಸರ ಮಾಡಿಸಿ ಮದುವೆ ಆಯ್ತು ಎನ್ನಿಸಿಬಿಡಿ.. ಸಾಯೊಗಂಟ ನಿಮ್ಮ ಮನೆಯಲ್ಲಿ ನಾನು ಚೆನ್ನೈ ಜೀತ ಮಾಡುತ್ತೀವಿ.. " ಎನ್ನುವಾಗ ಅವರ ಕಣ್ಣಿನಲ್ಲಿ ಕಾಣುವ ಧೈನ್ಯತೆ ಅಬ್ಬಾ.. !
"ನೀವು ಹೋಗದೆ ಇದ್ರೆ ..  ಸಾಹುಕಾರ ಕರಿಯ ಅವರಿಗೆ ಹೊಡಿ ಅಂತಾನೆ, ನಾ ಅವನ ಮನೆ ಉಪ್ಪು ತಿಂದಿದ್ದೀನಿ.. ಆಗೋಲ್ಲ ಅನ್ನೋಕಾಗಲ್ಲ.. ಒಂದೇ ಏಟು.. ಬೇಡಪ್ಪಾ.. ಹೋಗ್ರೋ, ಹೋಗ್ರಣ್ಣ ..." ಎನ್ನುವ ಕಾಳಜಿ..

ರಂಗನಾಯಕಿ
ಏನ್ ಅಪ್ಪಾಜಿ ಎಲ್ಲರೆದುರು ಕೈ ಇದೆ ಅಂತ ಪಟ ಪಟ ಅಂತ ಹೊಡೆದುಬಿಟ್ರಲ್ಲ. .ನಾ ಮಾಡಿದ್ದು ತಪ್ಪು ಅಂದ್ರೆ ಹೇಳಿ.. ಆ ಸಾಹುಕಾರನ ಕಾಲು ಮುಟ್ಟಿ ಕರೆದುಕೊಂಡು ಬರ್ತೀನಿ.. ಎನ್ನುತ್ತಾರೆ.. ಆಗ ರಾಜಾನಂದ್ "ಇಲ್ಲ ಕಣೋ ರಾಮಣ್ಣ ನಾಟಕ ಮಾಡುವವರಿಗೂ ಮರ್ಯಾದೆ ಇದೆ ಅಂತ ಹೇಳೋ ನಿನ್ನಂತ ಲಕ್ಷ ಲಕ್ಷ ರಾಮಣ್ಣ ಇರಬೇಕು ಕಣೋ" ಎಂದಾಗ ಅಂಬಿ ಮೊಗ.. ಸೂಪರ್

ಇಂದ್ರಜಿತ್  
ತನ್ನ ಮೇಲೆ ಆಪಾದನೆ ಹೊರಿಸಿದ ಸಾಕ್ಷಿಯನ್ನು ಕರೆತಂದು ಕಮಿಷನರ್ ಮುಂದೆ ತಳ್ಳಿ "ನನ್ನ ತಲೆಮೇಲೆ ಕೂರಿಸಲು ಪ್ರಯತ್ನ ಪಟ್ಟ ಗೊಂಬೆಯಿದು" ಎಂದು ಹೇಳುವ ಅಂಬರೀಷ್.. ಈ ಚಿತ್ರದುದ್ದಕ್ಕೂ ಸಂಭಾಷಣೆಯಲ್ಲಿ ಗಮನಸೆಳೆಯುತ್ತಾರೆ.. ಈ ಚಿತ್ರ ಅವರ ಚಿತ್ರಜೀವನದಲ್ಲಿ ಒಂದು ತಿರುವು ಕೂಡ.. ಯಶಸ್ಸು ಕಂಡ ಚಿತ್ರವಿದು..

ಮಸಣದ ಹೂವು 
ಯಾಕೆ ಈ ಪಾತ್ರ ಒಪ್ಪಿಕೊಂಡಿರಿ ಎಂದು ಈ ಚಿತ್ರ ನೋಡಿದ ಅಭಿಮಾನಿಗಳು ಕೇಳುವಷ್ಟು ವಿಚಿತ್ರ ಪಾತ್ರವಿದು.. ತಲೆಹಿಡುಕನ ಪಾತ್ರ.. ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾಗ ಈ ಚಿತ್ರ ಗುರುಗಳು ಪುಟ್ಟಣ್ಣನವರು ನೀಡಿದಾಗ ಮರು ಮಾತಿಲ್ಲದೆ ಒಪ್ಪಿಕೊಂಡು ಅಚ್ಚುಕಟ್ಟಾಗಿ ಅಭಿನಯಿಸಿದ್ದರು.. ಈ ಪಾತ್ರಕ್ಕೆ ಪೋಷಕ ಪಾತ್ರ ಪ್ರಶಸ್ತಿ ಸಿಕ್ಕಿತು. ಪುಟ್ಟಣ್ಣನವರು ಚಿತ್ರಿಸಿದ ಇಡೀ ಪಾತ್ರ ಸೊಗಸಾಗಿ ಮೂಡಿಬಂದಿದೆ..

ಅಂತ
ಕುತ್ತೆ ಕನ್ವರ್ ನಹಿ ಕನ್ವರ್ ಲಾಲ್ ಬೋಲೋ ಎನ್ನುವ ಈ ಸಂಭಾಷಣೆ ಪ್ರಸಿದ್ಧಿಯಾಗಿದ್ದು ಅವರು ಹೇಳುವ ಶೈಲಿ ಮತ್ತು ಸಿಗರೇಟಿನ ಹೊಗೆಯನ್ನು ಒಳಗೆ ಎಳೆದುಕೊಂಡು ಕೆಂಡ ಕಾರುವ ಕಣ್ಣುಗಳನ್ನು ದೊಡ್ಡದಾಗಿ ಬಿಡುವ ಆ ಅಭಿನಯ ಚಿತ್ರರಸಿಕರ ಮನದಲ್ಲಿ ಕೂತು ಬಿಟ್ಟಿದೆ.. ಹಿಂಸೆ ಮಾಡಿದಾಗ ಅವರು ಕಿರುಚುವ ಅಭಿನಯ.. ಒಬ್ಬೊಬ್ಬ ಖಳನನ್ನು ಮುಗಿಸುವಾಗ ಅವರ ಮಾತುಗಳು ಸೊಗಸಾಗಿದೆ.. ಈ ಚಿತ್ರ ಹಲವಾರು ಭಾಷೆಯಗಳಲ್ಲಿ ಬಂದರೂ ಅಂಬರೀಷ್ ಅಭಿನಯ ಮುಟ್ಟಲಾಗಿಲ್ಲ..

ಚಕ್ರವ್ಯೂಹ 
ಭಾರತ ಚಿತ್ರರಂಗದ ಮೊದಲ ರಾಜಕೀಯ ಚಿತ್ರವಿದು ಎಂದು ಬಾಲ್ಯದಲ್ಲಿ ಎಲ್ಲೋ ಓದಿದ ನೆನಪು.. ಈ ಚಿತ್ರದಿಂದ ಅವರ ಅಭಿಮಾನಿಗಳ ಬಳಗ ಇನ್ನಷ್ಟು ದೊಡ್ಡದಾಯಿತು.. ಮತ್ತು ಚಿತ್ರರಂಗದ ಒಂದು ಆಸ್ತಿಯಾದರು..

ಹೃದಯ ಹಾಡಿತು
ರೆಬೆಲ್ ಸ್ಟಾರ್ ಬರಿ ಹೊಡೆದಾಟ ಬಡಿದಾಟದ ಸಿನೆಮಾಗಳಲ್ಲಿ ಕಳೆದು ಹೋಗಿದ್ದಾರೆ ಅನ್ನಿಸುವಾಗ ಧುತ್ ಎಂದು ಬಂದ ಚಿತ್ರವಿದು.. ವಿಭಿನ್ನ ಮೇಕಪ್.. ಸುಂದರವಾಗಿ ಇವರನ್ನು ಸೆರೆಹಿಡಿದ ಛಾಯಾಗ್ರಾಹಕ ಗೌರಿಶಂಕರ್ ಇಷ್ಟವಾಗುತ್ತಾರೆ.. ಚಿತ್ರಕ್ಕೋಸ್ಕರ ಒಂದೇ ಒಂದು ಫೈಟ್ ಇದ್ದರೂ ಪೂರ್ತಿ ಕೌಟುಂಬಿಕ ಚಿತ್ರವಿದು..ಸಂಯಮದ ಅಭಿನಯದಲ್ಲಿ ಇಷ್ಟವಾಗುತ್ತಾರೆ..

ಏಳು ಸುತ್ತಿನ ಕೋಟೆ 
ಛಾಯಾಗ್ರಾಹಕ ಗೌರಿಶಂಕರ್ ನಿರ್ದೇಶಿಸಿದ ಈ ಚಿತ್ರ ಯಶಸ್ಸಾಗಲಿಲ್ಲ ಆದರೆ ಕತೆ, ಚಿತ್ರಕತೆ ಮತ್ತು ಅಂಬರೀಷ್ ಅಭಿನಯ ಅದ್ಭುತವಾಗಿದೆ.. ಕೋಪದ ಭರದಲ್ಲಿ ಮಾಡಿದ ಒಂದು ತಪ್ಪು ಅವರನ್ನು ಕಾಡುವ ಪರಿ ಜೊತೆಯಲ್ಲಿ ಅದನ್ನು ವ್ಯಕ್ತ ಪಡಿಸುವ ರೀತಿ ಅಮೋಘವಾಗಿದೆ.. ಹಾಡುಗಳು, ಅಭಿನಯ ಎಲ್ಲವೂ ಸೊಗಸು..

ಇಲ್ಲಿ ಪರಿಗಣಿಸದ ಚಿತ್ರಗಳು ನನ್ನ ಮನ ಮುಟ್ಟಿದ ಕೆಲವು ಚಿತ್ರಗಳು.. ಆದರೆ ಅವರು ಅಭಿನಯಿಸಿದ ಅಷ್ಟೂ ಚಿತ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅವರ ತಾಕತ್ತು ತೋರಿಸಿದ್ದಾರೆ.. ಯಾರಿಗೂ ಹೆದರದೆ, ಯಾರಿಗೂ ಬಗ್ಗದೆ,, ಆದರೆ ವಿನಯ ಬಿಟ್ಟು ಹೋಗದೆ, ಮಾತು ಬಿರುಸಾದರೂ ಹೃದಯವಂತ ಜೀವಿ ಅಂಬರೀಷ್..

ಅವರ ಮಿತಿ ಅವರಿಗೆ ಗೊತ್ತಿತ್ತು ಆದರೂ ಅಭಿನಯದಲ್ಲಿ ಆಹಾ ಎನ್ನಿಸುವಂತೆ ಅಭಿನಯಿಸಿದ್ದಷ್ಟೇ ಅಲ್ಲದೆ, ಎಲ್ಲರ ಸ್ನೇಹಿತನಾಗಿದ್ದರು.. ಇದಕ್ಕೆ ಸಾಕ್ಷಿ ಅಂಬಿ ೬೦:೪೦ ಕಾರ್ಯಕ್ರಮದಲ್ಲಿ ಭಾರತ ಚಿತ್ರರಂಗದ ದಿಗ್ಗಜರೆಲ್ಲಾ ವೇದಿಕೆಬಂದಿದ್ದು..

ಅವರ ನಿರ್ಮಾಪಕರಿಗೆ, ನಿರ್ದೇಶಕರಿಗೆ ಯಾವತ್ತೂ ತೊಂದರೆಯಾಗದಂತೆ ನೋಡಿಕೊಂಡ ಅಪರೂಪದ ನಟ ಇವರು.

ಎಲ್ಲರಿಗೂ ಒಂದು ಆಸೆ ಇರುತ್ತೆ.. ನಾವಿಲ್ಲದೆ ಇದ್ದಾಗ ನಮ್ಮ ಬಗ್ಗೆ ಜನರ ಅಭಿಪ್ರಾಯ ಹೇಗಿರುತ್ತೆ ಅಂತ.. ಇದು ನಿಜವಾಗಿದ್ದು ಕೆಲವು ವರ್ಷಗಳ ಹಿಂದೆ.. ಆರೋಗ್ಯ ಹದಗೆಟ್ಟಿದ್ದಾಗ ಚಿಕಿತ್ಸೆ ತೆಗೆದುಕೊಳ್ಳುವ ಸಮಯದಲ್ಲಿ ಕಾಲಯಮನೊಡನೆ ಹೋರಾಡಿ ಬಂಡ ಸಂಧರ್ಭ ದೃಶ್ಯ ಮಾಧ್ಯಮ, ಪತ್ರಿಕೆ ಎಲ್ಲದರಲ್ಲೂ ಅವರ ಬಗ್ಗೆ ಬಂದಿದ್ದನ್ನು ಅವರು ಹುಷಾರಾಗಿ ಬಂದ ಮೇಲೆ ಅವರೇ ಹೇಳಿದ್ದು "ನಾ ಹೋದ ಮೇಲೆ ನನ್ನ ಮೇಲಿನ ಅಭಿಮಾನ ಹೇಗಿರುತ್ತೆ ಅಂತ ಜೀವಂತವಾಗಿದ್ದಾಗಲೇ ನೋಡಿ ಮನತುಂಬಿ ಬಂತು"

ಅವರ ಕಾಲಘಟ್ಟದ ಎಲ್ಲಾ ನಂತರ ಜೊತೆ ಅಭಿನಯಿಸಿದ್ದ ನಟ.. ನಂತರ ಬದಲಾದ ಕಾಲಮಾನದಲ್ಲಿಯೂ ಕಿರಿಯ ನಟರ ಜೊತೆಯಲ್ಲಿಯೂ ಅದೇ ರೀತಿ ಅಭಿನಯಿಸಿ ಎಲ್ಲರೊಡನೆ ಒಂದಾಗಿದ್ದು ಅವರ ಹೆಗ್ಗಳಿಕೆ.. 

ನಟರಾಗಿ, ಸ್ನೇಹಿತನಾಗಿ, ಎಲ್ಲರ ಜೊತೆ ಬೆರೆಯುವ ಹಿರಿಯನಾಗಿ ಚಿತ್ರರಂಗಕ್ಕೆ ಒಂದು ಶಕ್ತಿಯಾಗಿದ್ದ ಅಂಬರೀಷ್ ಧ್ರುವತಾರೆಯಾಗಿದ್ದಾರೆ.. ಅವರ ಚಿತ್ರಗಳಲ್ಲಿ, ಅವರ ಅಭಿನಯದಲ್ಲಿ, ಅವರ ಮಾತುಗಳಲ್ಲಿ ಸದಾ ಅಮರ.. !!!

ಪುಟ್ಟಣ್ಣ ಕಣಗಾಲ್ ಕುಲುಮೆಯಲ್ಲಿ ಎದ್ದು ಬಂದ ಚಿನ್ನ ತಾಯಿ ಭುವನೇಶ್ವರಿ ಕೊರಳಿನಲ್ಲಿ ಆಭರಣವಾಗಿದ್ದರೆ!!!
ಅಜಾತಶತ್ರು .. ಸ್ನೇಹಮಯ ಅಂಬಿ ಅಜರಾಮರ