Sunday, February 8, 2026

ಪಟ್ಟಣಕ್ಕೆ ಬಂದು ಭಲೇ ಎನಿಸಿಕೊಳ್ಳುವ ಭಲೇ ರಾಜ 1969 (ಅಣ್ಣಾವ್ರ ಚಿತ್ರ ೧೧೧/೨೦೭)

ಕೋಪ ಅನರ್ಥಕ್ಕೆ ದಾರಿ ಎನ್ನುತ್ತಾರೆ 

ಅಪರಿಮಿತ ಪ್ರೀತಿ ಅನರ್ಥಕ್ಕೆ ದಾರಿ ಎನ್ನುತ್ತಾರೆ 

ಹೌದು ಈ ಎರಡು ವಾಕ್ಯಗಳ ಮೇಲೆ ರಚಿಸಿರುವ ಕಥೆಯಿದು. ಕತೆಯ ಕತೃ ಪೂವೈ ಕೃಷ್ಣನ್ ಅವರದ್ದು. 



ಎಕ್ಸ್ಕ್ಯೂಟಿವ್ ಪ್ರೊಡ್ಯೂಸರ್, ಚಿತ್ರಕತೆ ಮತ್ತು ನಿರ್ದೇಶನ ವೈ ಆರ್ ಸ್ವಾಮಿ ಅವರದ್ದು 

ನಿರ್ಮಾಣ ಎಜಮಾನ್ ಮೋತಿ ವೀರಣ್ಣ 

ಸಂಗೀತ ಸತ್ಯಂ ಅವರದ್ದು 

ಹಾಡುಗಳು ಸೋರಟ್ ಅಶ್ವಥ್ ಮತ್ತು ಕಣಗಾಲ್ ಪ್ರಭಾಕರ್ ಶಾಸ್ತ್ರೀ 

ಹಾಡುಗಳನ್ನು ಪಿ ಬಿ ಶ್ರೀನಿವಾಸ್, ಪಿ ಸುಶೀಲ ಮತ್ತು ಬಾಲಸುಬ್ರಮಣ್ಯಂ  ಅವರ ಕಂಠಸಿರಿಯಲ್ಲಿ ಮೂಡಿಸಿದ್ದಾರೆ. 

ಛಾಯಾಗ್ರಹಣ ಆರ್ ಮಧು ಅವರದ್ದು

ರೈಲು ಅಪಘಾತದಲ್ಲಿ ತನ್ನ ಇಬ್ಬರು ಮಕ್ಕಳನ್ನು ದೂರ ಮಾಡಿಕೊಳ್ಳುವ ಜಯಶ್ರೀ, ಕೊನೆಯುಸಿರು ಎಳೆಯುತ್ತಿದ್ದ ಸಹಪ್ರಯಾಣಿಕನ ಇಚ್ಛೆಯಂತೆ ಆತನ ಮಗನನ್ನು ಸಾಕುವ ಮತ್ತು ಆಸ್ತಿಯನ್ನು ನೋಡಿಕೊಳ್ಳುವ ಹೊಣೆ ಹೊತ್ತುಕೊಳ್ಳುತ್ತಾರೆ. 

ಇತ್ತ ತಾಯಿಯಿಂದ ದೂರವಾದ ಮಕ್ಕಳಿಬ್ಬರು ಒಬ್ಬ ಸಿರಿವಂತನ ಆಶ್ರಯದಲ್ಲಿ ಬೆಳೆಯುತ್ತಾರೆ. ಆದರೆ ತಂಗಿಯ ಮೇಲೆ ಅಪಾರ ಪ್ರೀತಿಯಿದ್ದ ಅಣ್ಣ, ತನ್ನ ತಂಗಿಯನ್ನು ಆಕೆಯ ಸಹಪಾಠಿ ರೇಗಿಸಿದ ಎನ್ನುವ ಕಾರಣಕ್ಕೆ ಅವನನ್ನು ನೀರಿಗೆ ತಳ್ಳಿ, ತಂಗಿಯ ಮಾತಿನಂತೆ ಓಡಿ ಹೋಗುತ್ತಾನೆ ಪೋಲೀಸರ ಭಯದಿಂದ. 

ಮುಂದೆ ಆತ ಬೀದಿ ಬಸವನಾಗುತ್ತಾನೆ, ಇತ್ತ ತಂಗಿ ಸಿರಿವಂತನ ಮನೆಯಲ್ಲಿ ಅಚ್ಚುಕಟ್ಟಾಗಿ ಬೆಳೆಯುತ್ತಾಳೆ.  ಸಂದರ್ಭಗಳು ಮತ್ತೆ ಎಲ್ಲರನ್ನೂ ಒಂದುಗೂಡಿಸುತ್ತೆ. ಅದಕ್ಕೆ ಒಂದಷ್ಟು ತರ್ಕಬದ್ಧವಾದ ಕಥೆ. ಖಳನಾಯಕ ಆತ ಸೃಷ್ಟಿ ಮಾಡುವ ಕುಯುಕ್ತಿಯ ತಂತ್ರ, ಅದನ್ನು ನಾಯಕ ನಾಯಕಿ ಭೇದಿಸಿ, ಖಳನನ್ನು ಹಿಡಿಯುವುದು ಚಿತ್ರದ ಉಳಿದ ಭಾಗ. 

ಬಡವನಾಗಿ, ಜೇಬು ಕತ್ತರಿಸುವ ಪಾತ್ರದಲ್ಲಿ ರಾಜಕುಮಾರ್ ಸೂಪರ್. ಬಡತನವಿದ್ದರೂ, ಮಾಡುತ್ತಿದ್ದದ್ದು ಕಳ್ಳತನವೇ ಆದರೂ ಅದರಲ್ಲಿಯೂ ಮಾನವೀಯತೆ ತೋರುವ ಪಾತ್ರ. ತನ್ನ ತಂಗಿ ತನಗೆ ಸಿಕ್ಕಿದ್ದಾಳೆ ಎಂದಾಗ ಅವರು ತೋರುವ ಅಭಿನಯ, ಆದರೆ ತಾನೇ ಅಣ್ಣ ಎಂದು ಹೇಳಿಕೊಳ್ಳಲಾಗದ ಸಂಕಟ.. ಮತ್ತೆ ತನ್ನ ತಂಗಿಯ ಗಂಡ ಕಾರಣಾಂತರಗಳಿಂದ ಅಣ್ಣ ತಂಗಿಯ ಬಂಧವನ್ನು ಅನುಮಾನಿಸಿದಾಗ, ತನ್ನ ಭಾವನಿಗೆ ಒಂದಷ್ಟು ಏಟು ಕೊಡುವ ದೃಶ್ಯ, ಮತ್ತೆ ಮನೆಯ ಯಜಮಾನಿ ಮನೆಯಿಂದ ಹೊರಗೆ ಹೋಗು ಎನ್ನುವಾಗ ಸಂಕಟಪಡುತ್ತಾ ಹೇಳುವ ಸಂಭಾಷಣೆ.. ಮತ್ತೆ ಅಂತ್ಯದಲ್ಲಿ ಖಳನನ್ನು ಸದೆಬಡಿಯಲು ನಾಯಕಿಯೊಂದಿಗೆ ತಂತ್ರ ಹೂಡಿಕೆ. ಹಲವಾರು ಆಯಾಮಗಳ ಪಾತ್ರ.. ಗೆದ್ದಿದ್ದಾರೆ ರಾಜಕುಮಾರ್ ... ಎಲ್ಲಾ ದೃಶ್ಯಗಳಲ್ಲಿಯೂ ಅದ್ಭುತವಾಗಿದ್ದಾರೆ. 

ನಾಯಕಿಯಾಗಿ ಮತ್ತೆ ಜಯಂತಿ ಇಲ್ಲಿ ಘಟವಾಣಿಯಾಗಿ ಕಾಣಿಸಿಕೊಂಡಿದ್ದಾರೆ.. ಜೊತೆಗೆ ಅಷ್ಟೇ ನಾಜೂಕಾಗಿ ತಾನು ಹಿಡಿದ ಕಾರ್ಯವನ್ನು ಸಾಧಿಸುವ ಹೆಣ್ಣಾಗಿದ್ದಾರೆ. ಹಳ್ಳಿಗರ ಭಾಷೆ, ಅದಕ್ಕೆ ಒಪ್ಪುವ ಒಯ್ಯಾರ, ತಾನು ಹಿಡಿದ ಕಾರ್ಯ ಸಾಧಿಸುವಾಗಿನ ಚಾಲಾಕಿತನ ಎಲ್ಲವೂ ಸೊಗಸು. 

ಖಳನಾಗಿ ಎಂಪಿ ಶಂಕರ್ ಅವರಿಗೆ ಕೆಲವು ದೃಶ್ಯಗಳಿದ್ದರೂ ಅಬ್ಬರಿಸುತ್ತಾರೆ. 

ರಂಗ ಮತ್ತು ಬಿ ವಿ ರಾಧಾ ಅವರ ಪಾತ್ರ ಪೋಷಣೆ ಕಥೆಯ ಪರಿಮಿತಿಗೆ ಚೆನ್ನಾಗಿದೆ

ಜಯಶ್ರೀ, ಮಹದೇವಪ್ಪ, ನಾಗಪ್ಪ, ಈಶ್ವರಪ್ಪ, ಅಶ್ವಥ್ ಸಹಯೋಗ ನೀಡಿದ್ದಾರೆ. 












No comments:

Post a Comment