Sunday, February 8, 2026

ತಪ್ಪುಗಳ ಪ್ರಾಯಶ್ಚಿತ್ತವೆ ಪುನರ್ಜನ್ಮ - 1969 (ಅಣ್ಣಾವ್ರ ಚಿತ್ರ ೧೧೦/೨೦೭)

ರಾಜಕುಮಾರ್ ಅವರಿಗೆ ಅರಸಿ ಬರುತ್ತಿದ್ದ ಪಾತ್ರಗಳು, ಕಥೆಗಳು ಕುತೂಹಲ ಮೂಡಿಸುತ್ತಿದ್ದವು. ಅಷ್ಟೊಂದು ಹರಿವಿದ್ದ ಪಾತ್ರಗಳಲ್ಲಿ ಕೆಲವು ಚಿತ್ರಗಳು ಮಿಂದೆದ್ದರೆ ಕೆಲವು ಚಿತ್ರಗಳೇ ಅವರ ಪಾತ್ರವನ್ನು ಮೇಲೆಕ್ಕೇರಿಸುತ್ತಿದ್ದವು. ಅಂತಹ ಒಂದು ಚಿತ್ರ ಪುನರ್ಜನ್ಮ. 

ಕಥೆ ರಾಜಕುಮಾರ್ ಅವರ ಪಾತ್ರದ ಸುತ್ತ ಸುತ್ತುವುದಿಲ್ಲ.. ಆದರೆ ಅವರಿಲ್ಲದೆ ಚಿತ್ರಕಥೆ ಮುಂದುವರೆಯುವುದಿಲ್ಲ. ಅದೇ ಈ ಚಿತ್ರದ ವಿಶೇಷತೆ. 


ಮುಗ್ಧ ಅಣ್ಣ ತಮ್ಮಂದಿರು, ಊರಿನ ಕಿತಾಪತಿ ಪೂಜಾರಪ್ಪ, ಮತ್ತು ಅವನ ಶಿಷ್ಯ, ಗಂಡನೇ ದೇವರೆಂದು ಭಾವಿಸುವ ಮಡದಿ, ಅತ್ತಿಗೆಯೇ ದೇವರೆನ್ನುವ ಮೈದುನ, ಯಾರನ್ನು ಹೆಚ್ಚು ಪ್ರೀತಿಸಬೇಕು ಅಥವ ಮನೆಯ ಗೌರವ ಹೆಚ್ಚು ಅಂತ ಅಂದು ಕೊಳ್ಳುವ ಅಮ್ಮ, ಅನಾಥೆ ಹುಡುಗಿಯನ್ನು ಮನೆಗೆ ಕರೆತಂದು, ಆಕೆಯಿಂದ ಸೃಷ್ಟಿಯಾಗುವ ಕಷ್ಟಕೋಟಲೆಗಳಿಗೆ ತಲೆ ಕೊಡುವುದಾ ಅಥವ ಮನೆಯನ್ನು ಉಳಿಸುವುದಾ ಎನ್ನುವ ತಾಕಲಾಟದಲ್ಲಿ ತನ್ನ ಮಡದಿಯನ್ನು ಕಳೆದುಕೊಳ್ಳುವ ನಾಯಕ. ಎಷ್ಟೇ ಕಷ್ಟವಾಗಲಿ ಅನಾಥೆ ಹುಡುಗಿಯ ರಕ್ಷಣೆಯೇ ಮುಖ್ಯ ಎಂದು ಟೊಂಕ ಕಟ್ಟಿ ನಿಲ್ಲುವ ನಾಯಕ... ಕಡೆಯಲ್ಲಿ ತಪ್ಪು ಮಾಡಿದ ತಮ್ಮ ಪಶ್ಚಾತಾಪ ಪಟ್ಟು ವಾಪಸ್ ಬಂದಾಗ ಕ್ಷಮೆ ನೀಡಿ ಮತ್ತೆ ಪರಿವಾರಕ್ಕೆ ಸೇರಿಸಿಕೊಳ್ಳುವುದರ ಮೂಲಕ ಸುಖಾಂತ್ಯ 

ಈ ಸರಳ ಕಥೆಯನ್ನು ಅಚ್ಚುಕಟ್ಟಾಗಿ ರೂಪಿಸಿದ ಕೀರ್ತಿ ನಿರ್ದೇಶಕ ಪೆಕೇಟಿ ಶಿವರಾಂ ಅವರದ್ದು. ಅವರ ಕೆಲಸವನ್ನು ಸುಲಭ ಮಾಡಿದ್ದು ಕತೆ ಚಿತ್ರಕತೆ ಮತ್ತು ಸಂಭಾಷಣೆ ರಚಿಸಿದ ಕಾದಂಬರಿ ಕತೃ ತ. ರಾ. ಸು ಅವರು. 

ಶ್ರೀ ಭಗವತಿ ಪ್ರೊಡಕ್ಷನ್ಸ್ ಅವರ ಲಾಂಛನದಲ್ಲಿ ತಯಾರಾದ ಚಿತ್ರವಿದು. 

ಸಂಗೀತ ದುಲಾಲ್ ಸೇನ್ ಅವರದ್ದು, ಹಾಡುಗಳು ಆರ್ ಎನ್ ಜಯಗೋಪಾಲ್, ಗಾಯನದಲ್ಲಿ ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಇದ್ದಾರೆ. ಛಾಯಾಗ್ರಹಣ ಆರ್ ಚಿಟ್ಟಿಬಾಬು. 

ತಾರಾಗಣಕ್ಕೆ ಬಂದರೆ ರಾಜಕುಮಾರ್ ಅಣ್ಣನಾಗಿದ್ದಾರೆ, ರಂಗ ತಮ್ಮನಾಗಿ, ಜಯಂತಿ ನಾಯಕಿಯಾಗಿ, ಚಂದ್ರಕಲಾ ರಂಗ ಅವರಿಗೆ ಜೋಡಿಯಾಗಿದ್ದಾರೆ. ಇವರನ್ನು ಸಲಹುವ ತಾಯಿಯಾಗಿ ಜಯಶ್ರೀ. ಇಷ್ಟೆಲ್ಲಾ ಒಳ್ಳೆ ಮನಸ್ಸುಗಳ ಮಿಲನವಾದ ಮೇಲೆ ಅದಕ್ಕೆ ಹುಳಿ ಹಿಂಡುವ ಪಾತ್ರ ಬೇಕಲ್ಲವೇ ಅದಕ್ಕೆ ಬಾಲಣ್ಣ ಮತ್ತು ಎಂ ಎಸ್ ಸತ್ಯು ಇದ್ದಾರೆ, 

ಹಳ್ಳಿಯವನ ಪಾತ್ರ ರಾಜಕುಮಾರ್ ಅವರಿಗೆ ಸಲೀಸು. ಈ ಚಿತ್ರದಲ್ಲಿ ಹಳ್ಳಿಯವನಾಗಿದ್ದರೂ ವಿದ್ಯೆ ಬುದ್ದಿ ಇರುವ ಪಾತ್ರ. ಹಳ್ಳಿಯ ಜನಕ್ಕೆ ನ್ಯಾಯ ನೀಡುವ ಪ್ರಮುಖ, ತನ್ನ ಮನೆಯಲ್ಲಿ ನೆಡೆದ ತಪ್ಪಿಗೆ ತಮ್ಮನಾದರೂ ಸರಿ ಅದಕ್ಕೆ ತಕ್ಕ ಶಿಕ್ಷೆಯಾಗಲೇ ಬೇಕು,  ತಪ್ಪಿಗೆ ಒಳಗಾದವ ಹುಡುಗಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕು ಎನ್ನುವ ಉದಾತ್ತ ಗುಣದ ಪಾತ್ರದಲ್ಲಿ ರಾಜಕುಮಾರ್ ಮಿಂಚುತ್ತಾರೆ. ತಮ್ಮನ ಯೋಗಕ್ಷೇಮವನ್ನು ಗಮನಿಸಬೇಕು ಎಂದು ತನ್ನ ಮಡದಿ ಜಯಂತಿಗೆ ತಿಳಿ ಹೇಳುವ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಪಾತ್ರವನ್ನು ಜೀವಿಸುವ ಕಲೆಯನ್ನು ರೂಢಿಸಿಕೊಂಡಿರುವ ರಾಜಕುಮಾರ್ ಅವರ ಪಾತ್ರ ಪೋಷಣೆ ಮತ್ತು ಅದನ್ನು ಅವರು ಬಳಸಿಕೊಂಡಿರುವ ರೀತಿಗೆ ಶಭಾಷ್ ಎನ್ನಬೇಕು. 

ಜಯಂತಿ ನಾಯಕಿಯಾಗಿ ಕಥಾನಾಯಕನ ಪಾತ್ರಕ್ಕೆ ಹೊಂದಿಕೊಂಡು ಅಭಿನಯಿಸಿದ್ದಾರೆ. ಚಿತ್ರದ ಅರ್ಧಭಾಗದಲ್ಲಿ ಮಾತ್ರ ಇರುವ ಅವರು, ದೃಶ್ಯಗಳಲ್ಲಿ ಮಿನುಗುತ್ತಾರೆ. ಕಪ್ಪು ಬಿಳುಪು ಸಂಯೋಜನೆಯಲ್ಲಿ ಅವರು ಮುಗ್ಧ ಸೌಂದರ್ಯ ಸೊಗಸಾಗಿದೆ. 

ರಂಗ ತಮ್ಮನ ಪಾತ್ರದಲ್ಲಿ ತಕ್ಕ ಅಭಿನಯ ನೀಡಿದ್ದಾರೆ. ಪೂಜಾರಪ್ಪ ತಲೆತಿರುಗುವಂತೆ ಕುಬುದ್ಧಿ ಮಾತು ಹೇಳಿದಾಗ ಅದಕ್ಕೆ ಅವರ ಮುಖಾಭಿನಯ ಸೊಗಸಾಗಿದೆ, ಹಾಗೆಯೇ ತಪ್ಪನ್ನು ಒಪ್ಪಿಕೊಳ್ಳುವ ದೃಶ್ಯವೂ ಕೂಡ.

ಜಯಶ್ರೀ ತಾಯಿಯಾಗಿ ಪರಿಣಾಮಕಾರಿ ಅಭಿನಯ. ಅದರಲ್ಲಿಯೂ ಚಂದ್ರಕಲಾಗೆ ತನ್ನ ಮಗನೆ ಈ ತಪ್ಪು ಮಾಡಿದ್ದಾನೆ ಅಂತ ಯಾರ ಬಳಿಯೂ ಹೇಳಬೇಡ ಅಂತ ಅನ್ನುವಾಗ ಅವರ ಇಬ್ಬಂಧಿ  ಭಾವನೆ ಸೊಗಸಾಗಿದೆ. 

ಬಾಲಣ್ಣ.. ಏನು ಹೇಳೋದು.. ಇವರ ಅಭಿನಯ ನೋಡೋದೇ ಒಂದು ಖುಷಿ.. ಒಳ್ಳೆಯ ಪಾತ್ರವೋ, ಖಳನೊ ಯಾವುದೇ ಪಾತ್ರವಾದರೂ ಅದರೊಳಗೆ ಜಾರಿಕೊಳ್ಳುವ ಅವರ ಅಭಿನಯ ಪ್ರತಿಭೆ ಅನನ್ಯ. ಪ್ರತಿ ದೃಶ್ಯವೂ ಹಬ್ಬವೇ ಹೌದು. ಉಚ್ಚಾರಣೆ, ಏರಿಳಿತ, ಅದಕ್ಕೆ ಕೊಡುವ ಮುಖಭಾವ.. ಅದ್ಭುತ

ಸತ್ಯು ಬಾಲಣ್ಣ ಅವರಿಗೆ ಸಾತ್ ನೀಡುತ್ತಾ ಹಾಸ್ಯ ಉಕ್ಕಿಸುತ್ತಾರೆ. 

ಸಹನಾಯಕಿಯಾಗಿ ಚಂದ್ರಕಲಾ ತಮ್ಮ ಮುಗ್ಧ ಸೌಂದರ್ಯದಿಂದ ಮತ್ತು ನಟನೆಯಿಂದ ಇಷ್ಟವಾಗುತ್ತಾರೆ. 

ಹಾಡುಗಳು ಸುಮಧುರವಾಗಿವೆ.. ದೃಶ್ಯ ಕಲ್ಪನೆ ಚಪ್ಪಾಳೆ ಗಿಟ್ಟಿಸುತ್ತೆ














No comments:

Post a Comment