ಎನ್ ಲಕ್ಷ್ಮೀನಾರಾಯಣ್ ಭಾವನೆಗಳನ್ನು ಹಿಡಿದಿಡುವ ನಿರ್ದೇಶಕ. ಅವರು ಆಯ್ದುಕೊಳ್ಳುವ ಕಥಾವಸ್ತುವೂ ಹಾಗೆ ಇರುತ್ತದೆ. ಮತ್ತೆ ಅದರ ತಾರಾಗಣ ಕೂಡ.
ವಯಸ್ಸಿಗೆ ಬಂದು ಹತ್ತಾರು ಕನಸ್ಸುಗಳನ್ನು ಕಟ್ಟಿಕೊಂಡಿರುವ ನಾಯಕಿ
ಜೀವನದಲ್ಲಿ ಮದುವೆ ಎಂಬ ವೃತ್ತಕ್ಕೆ ಬಂದು ಮತ್ತೆ ಕಾರಣಾಂತರಗಳಿಂದ ಇನ್ನೊಂದು ಮದುವೆಯಾದರೂ, ಅದರಲ್ಲಿ ಅಷ್ಟೇನೂ ಆಸಕ್ತಿಯಿಲ್ಲದೆ ತನ್ನ ವೃತ್ತಿ, ಓದು ಇದರಲ್ಲಿಯೇ ಸಮಾಧಾನ ಕಂಡುಕೊಳ್ಳುವ ನಾಯಕ.
ಬದುಕಲ್ಲಿ ಹುರುಪು ತುಂಬಿಕೊಂಡು ಪ್ರತಿ ಕ್ಷಣವನ್ನು ಅನುಭವಿಸುವ ನಾಯಕನ ಗೆಳೆಯ
ತಮ್ಮ ಬದುಕಲ್ಲಿ ಏನೇ ಆಗಿದ್ದರೂ ಕಂಡವರ ಮನೆಯಲ್ಲಿ ನೆಡೆಯುವ ಘಟನೆಗಳೇ ತಮಗೆ ಉಸಿರು ಎಂದು ಬದುಕುವ ನೆರೆಹೊರೆಯ ಕುಟುಂಬ.
ಈ ನಾಲ್ಕು ಮಂದಿಯ ಸುತ್ತಾ ಸುತ್ತುವ ಕಥೆಯೇ ಉಯ್ಯಾಲೆ.
ನಾಯಕಿಯಾಗಿ ಕಲ್ಪನಾ ಹದಭರಿತ ಅಭಿನಯ.. ಭಾವನೆಗಳನ್ನು ಮುಖದಲ್ಲಿಯೇ ತೋರಿಸುತ್ತಾ, ನಿಧಾನವಾಗಿ ಅರ್ಥಗರ್ಭಿತವಾಗಿ ಹೇಳುವ ಸಂಭಾಷಣೆ.. ಕಣ್ಣಂಚಿನಲ್ಲಿಯೇ ದುಃಖ, ಸಂತೋಷ ಭಾವಗಳನ್ನು ಉಕ್ಕಿಸುವ ದೃಶ್ಯಗಳು ಅಬ್ಬಬ್ಬಾ ಎನಿಸುತ್ತದೆ.
ನಾಯಕನಾಗಿ ತನ್ನ ಸಿದ್ಧಾಂತಕ್ಕೆ, ಭಾವನೆಗೆ ತಕ್ಕಂತೆ ರೂಪುಗೊಂಡ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಅಶ್ವಥ್.
ನಾಯಕನ ಗೆಳೆಯನಾಗಿ ಮನೆಗೆ ಬರುವ ರಾಜಕುಮಾರ್ ನಿಧಾನವಾಗಿ ಕಥೆಯಲ್ಲಿ ಆವರಿಸಿಕೊಳ್ಳುವ ಪರಿ, ಮತ್ತೆ ತನ್ನ ಗೆಳೆಯನ ಮಡದಿಯ ಮೇಲೆ ಮನಸ್ಸಾಗಿರಬಹುದು ಎನ್ನುವ ಭಾವನೆಯನ್ನು ಅವರು ತೋರಿಸುವ ರೀತಿ.. ಅದರ ತಳಮಳ, ಸಂಭಾಷಣೆ.. ಅರೆ ರಾಜಕುಮಾರ್ ಅವರು ಈ ರೀತಿಯ ಸಂಕೀರ್ಣತೆಯ ಪಾತ್ರವನ್ನು ಹೇಗೆ ಒಪ್ಪಿಕೊಂಡರು ಎನ್ನುವ ಪ್ರಶ್ನೆ ಮೂಡಿದರು, ಅದಕ್ಕೆ ತಕ್ಕ ಅಭಿನಯ ನೀಡಿ ಗೆದ್ದಿದ್ದಾರೆ.
ಸದಾ ಓಸಿ ಅಂದರೆ ಉಚಿತವಾಗಿ ನೆರೆಹೊರೆಯ ಮೇಲೆ ಅವಲಂಬಿತವಾಗಿ ಬದುಕುವುದೇ ತಮ್ಮ ಜೀವನದ ಗುರಿ ಎಂದು ಬದುಕುವ ಬಾಲಕೃಷ್ಣ ಅವರ ಹಾಸ್ಯ ಸಂಭಾಷಣೆ.. ಅದಕ್ಕೆ ಒಗ್ಗರಣೆ ಹಾಕುವ ರಮಾದೇವಿ ಜೀವ ತುಂಬಿದ್ದಾರೆ
ನಿರ್ದೇಶಕರು ಅನೇಕ ದೃಶ್ಯಗಳನ್ನು ಹೆಣೆಯುವಾಗ ತೋರುವ ಜಾಣ್ಮೆ ಇಷ್ಟವಾಗುತ್ತದೆ. ನಾಯಕ ಮತ್ತು ನಾಯಕಿ ತಳಮಳಗೊಳ್ಳುವ ದೃಶ್ಯಗಳನ್ನು ನೆರಳು ಬೆಳಕಿನ ಮೂಲಕ ತೋರಿಸಿದ್ದಾರೆ. ನಾಯಕಿ ಒಂದು ಹೆಜ್ಜೆ ಮುಂದಿಡಲು ಹೋದಾಗ ಸಹನಾಯಕ ಒಂದು ಹೆಜ್ಜೆ ಹಿಂದೆ ಹೋಗೋದು.. ಆತ ಒಂದು ಹೆಜ್ಜೆ ಮುಂದೆ ಇಟ್ಟಾಗ ನಾಯಕಿ ಓಡಿ ಹೋಗುವ ದೃಶ್ಯ ಕಲ್ಪನೆ ಸೊಗಸಾಗಿದೆ.
ಕಥೆಯ ಆಶಯಕ್ಕೆ ಜೊತೆಯಾಗಿ ಕಿಸಾ ಗೌತಮಿಯ ಸಾವಿಲ್ಲದ ಮನೆಯ ಸಾಸಿವೆ ರೂಪಕ ಅಚ್ಚುಕಟ್ಟಾಗಿ ಮೂಡಿಬಂದಿದೆ.
ಬಹುಶಃ ರಾಜಕುಮಾರ್ ಅವರು ಬುದ್ಧನಾಗಿ ಅಭಿನಯಿಸಿದ್ದು ಇದುವರೆಗಿನ ಚಿತ್ರದಲ್ಲಿ ಇದೆ ಮೊದಲು. ಮುದ್ದಾಗಿ ಕಾಣುತ್ತಾರೆ. ಗೌತಮಿಯಾಗಿ ಲೀಲಾವತಿ ಅತಿಥಿ ಪಾತ್ರದಲ್ಲಿ ಬರುತ್ತ್ತಾರೆ.
ನಿರ್ದೇಶಕರ ಮೆಚ್ಚಿನ ಸಂಗೀತ ನಿರ್ದೇಶಕ ವಿಜಯಭಾಸ್ಕರ್.
ಹಾಡುಗಳನ್ನು ಆರ್ ಎನ್ ಜಯಗೋಪಾಲ್, ಚಿ ಉದಯಶಂಕರ್ ವಿಜಯನಾರಸಿಂಹ ಮತ್ತು ಗೀತಪ್ರಿಯ ರಚಿಸಿದ್ದಾರೆ.
ಛಾಯಾಗ್ರಹಣ ಎನ್ ಜಿ ರಾವ್ ಅವರು ನಿಭಾಯಿಸಿದ್ದಾರೆ
ಪಿ ಬಿ ಶ್ರೀನಿವಾಸ್ ಪಿ ಸುಶೀಲ ಗಾಯನಕ್ಕೆ ಬಂದಿದ್ದಾರೆ
ನಿರ್ಮಾಣ ನಿರ್ವಣೆ ಗೋಪಾಲ್ ಮತ್ತು ಲಕ್ಶ್ಮಣ್
ಕಥೆ ಮತ್ತು ಸಂಭಾಷಣೆ ಸಾಹಿತಿ ಚದುರಂಗ (ಎಂ ಸುಬ್ರಮಣ್ಯ ರಾಜ್ ಅರಸ್) ಅವರದ್ದು.
ನಿರ್ದೇಶನ ಎನ್ ಲಕ್ಷ್ಮೀನಾರಾಯಣ್
ಭಾವಗಳ ಉಯ್ಯಾಲೆಗೆ ಕಡಿವಾಣ ಹಾಕಬೇಕು ಎನ್ನುವ ಉಯ್ಯಾಲೆ ಒಂದು ಅರ್ಥಗರ್ಭಿತ ಚಿತ್ರ.
No comments:
Post a Comment