ಪುಟ್ಟಣ್ಣ ಕಣಗಾಲ್.... ಪ್ರಾಯಶಃ ಭಾರತೀಯ ಚಿತ್ರರಂಗದಲ್ಲಿ ಮರೆಯಲಾರದ, ಮರೆಯಲಾಗದ, ಮರೆಯಬಾರದ ಹೆಸರು!
ಭಾರತೀಯ ಚಿತ್ರರಂಗ ಶತಮಾನದ ಸಂಭ್ರಮದಲ್ಲಿರುವಾಗ.. ಈ ರಂಗವನ್ನು ಬೆಳಗಿದ, ಬೆಳಗಿಸಿದ ನಿರ್ದೇಶಕರ ಸಾಲಿನಲ್ಲಿ ನಿಲ್ಲುವ ತಾಕತ್ ಇರುವ ಅನೇಕರಲ್ಲಿ ಕನ್ನಡಾಂಬೆಯ ಸುಪುತ್ರ ಶ್ರೀ ಪುಟ್ಟಣ್ಣ ಕಣಗಾಲ್ ಅವರ ಹೆಸರು ಮುಂಚೂಣಿಯಲ್ಲಿ ಇರುವುದು.
ಇದು ನನ್ನ ಸ್ಟೈಲ್ ಎನ್ನುತ್ತಿದ್ದ ಪುಟ್ಟಣ್ಣ |
ಕನ್ನಡ ಚಿತ್ರರಂಗವನ್ನು ಬೆಳಗಿಸಿದ ಅನೇಕ ನಿರ್ದೇಶಕರಲ್ಲಿ ಪ್ರಮುಖರು ಆರ್ ನಾಗೇಂದ್ರರಾಯರು, ಬಿ ಆರ್ ಪಂತುಲು, ಹೆಚ್ ಎಲ್ ಏನ್ ಸಿಂಹ, ಟಿ ವಿ ಸಿಂಗ್ ಠಾಕುರ್, ಶಂಕರ್ ಸಿಂಗ್, ಹುಣಸೂರು ಕೃಷ್ಣಮೂರ್ತಿ, ಬಿ ಎಸ್ ರಂಗ, ಕು ರಾ ಸೀತಾರಾಮ ಶಾಸ್ತ್ರಿ, ದೊರೈ ಭಗವಾನ್, ಸಿದ್ದಲಿಂಗಯ್ಯ, ಶಂಕರ್ ನಾಗ್ ಹೀಗೆ ಪಟ್ಟಿಯಲ್ಲಿ ಬರುವ ಅನೇಕರು. ಇಂತಹ ಘಟಾನುಘಟಿಗಳ ಮಧ್ಯೆ ತನ್ನದೇ ವಿಶಿಷ್ಟ ಛಾಪನ್ನು ಒತ್ತಿ ನಿರ್ದೇಶಕ ಎನ್ನುವ ಸ್ಥಾನಕ್ಕೆ ಘನತೆ, ಗತ್ತು ತಂದು ಕೊಟ್ಟು, ಅನೇಕ ಹಿರಿ-ಕಿರಿ ಕಲಾವಿದರ ಏಳಿಗೆಗೆ ಕಾರಣವಾಗಿ ಹೆಸರು ಪುಟ್ಟಣ್ಣ ಎಂದಾದರೂ ಆ ಸ್ಥಾನಕ್ಕೆ ದೊಡ್ಡಣ್ಣನ ಗಾಂಭೀರ್ಯ ತಂದುಕೊಟ್ಟ ಮಹನೀಯ ನಮ್ಮೆಲ್ಲರ ಹೆಮ್ಮೆಯ ಪುಟ್ಟಣ್ಣ ಕಣಗಾಲ್.
ನಿರ್ದೇಶಕ ಎನ್ನುವ ಸ್ಥಾನಕ್ಕೆ ಘನತೆ, ಗತ್ತು ತಂದು ಕೊಟ್ಟರು ಪುಟ್ಟಣ್ಣ |
ಇಂದು ದೈಹಿಕವಾಗಿ ನಮ್ಮೊಡನೆ ಇದ್ದಿದ್ದರೆ ಎಂಭತ್ತು ವಸಂತಗಳನ್ನು ಕಂಡು.. ಸಂಪ್ರದಾಯದ ಪ್ರಕಾರ ಸಹಸ್ರ ಚಂದ್ರ ದರ್ಶನದ ಭಾಗ್ಯ ಪಡೆದುಕೊಳ್ಳುತ್ತಿದ್ದರು. ಆದರೆ ಜೀವಿತವಾವದಿಯ ಐವತ್ತೊಂದು ವಸಂತಗಳಲ್ಲಿ ಸಾಧನೆಯ ಶಿಖರವನ್ನು ಮುಟ್ಟಿ ಕಳಶಪ್ರಾಯರಾದರು. ಅನೇಕ ಕಲಾವಿದರ, ತಂತ್ರಜ್ಞರ ಬಾಳಿಗೆ ಸಹಸ್ರ ಚಂದ್ರನ ಬೆಳದಿಂಗಳನ್ನು ತಂದು ಕೊಟ್ಟರು. ಕಲಾವಿದರ, ತಂತ್ರಜ್ಞರ ಸುಪ್ತ ಪ್ರತಿಭೆಯನ್ನು ಹೊರತರಲು ಕಾರಣಕರ್ತರಾದರು. ಹಾಗಾಗಿಯೇ ಅವರ ನಿಧನ ನಂತರವೂ ನಿರ್ದೇಶಕರ ಹೆಸರು ಬಂದಾಗ ಮೊದಲು ಹೆಸರು ಬರುವುದು "ಪುಟ್ಟಣ್ಣ" ಎಂದು.
ಎಂಭತ್ತರ ದಶಕದ ಆದಿಯಲ್ಲಿ, ನಾನು ಹತ್ತು ಹನ್ನೊಂದು ವರ್ಷದವನಾಗಿದ್ದಾಗ, ದೂರದರ್ಶನ ಬೆಂಗಳೂರಿಗೆ ಕಾಲಿಟ್ಟ ಸಮಯದಲ್ಲಿ, ಶನಿವಾರಗಳಂದು ಬಿತ್ತರಗೊಳಿಸುತ್ತಿದ್ದ ಕನ್ನಡ ಚಿತ್ರ ನೋಡುತ್ತಾ ಬೆಳೆದ ನನಗೆ, ಮೊದಲು ಪುಟ್ಟಣ್ಣ ಅವರ ಚಿತ್ರ ನೋಡಿದ್ದು "ಉಪಾಸನೆ", ಯಾಕೋ ಕಾಣೆ ಆ ಚಿತ್ರವನ್ನು ದೂರದರ್ಶನದಲ್ಲಿ ಬೇರೊಬ್ಬರ ಮನೆಯ ಕಿಟಕಿಯ ಮೂಲಕ ಇಡಿ ಚಿತ್ರವನ್ನು ನೋಡಿದ್ದು ಇಂದಿಗೂ ಹಸಿರಾಗಿದೆ. ಪ್ರತಿ ಪಾತ್ರ,ಸಂಭಾಷಣೆ, ಹಾಡು, ಚಿತ್ರೀಕರಣ ನಡೆದ ಸ್ಥಳಗಳು ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ. ಅಲ್ಲಿಂದ ಶುರುವಾದ ಅವರ ಚಿತ್ರಗಳ ವ್ಯಾಮೋಹ ಇಂದಿಗೂ ನನ್ನನ್ನು ಬೆನ್ನು ಬಿಡದಂತೆ ಕಾಡುತ್ತಿದೆ.
ಅವರ ಚಿತ್ರಗಳನ್ನು ನೋಡಬೇಕು, ಅದರ ಸಾರವನ್ನು ಅರಿಯಬೇಕು, ಅಳವಡಿಸಿಕೊಳ್ಳಬೇಕು, ಎನ್ನುವ ತವಕ ಶುರುವಾದದ್ದು ಬಾಲ್ಯದ ದಿನಗಳಲ್ಲಿಯೇ. ಪ್ರತಿ ಚಿತ್ರವೂ ಒಂದು ದೃಶ್ಯ ಕಾವ್ಯ, ಮತ್ತು ಪ್ರತಿ ಚಿತ್ರವೂ ಒಂದೊಂದು ಸಮಸ್ಯೆಯ ಮೇಲೆ ಬೆಳಕು , ಉತ್ತಮ ಸಂದೇಶಗಳನ್ನ ಹೊತ್ತು ತರುತ್ತದೆ. ತಾಂತ್ರಿಕವಾಗಿಯೂ ಶ್ರೀಮಂತವಾಗಿದ್ದ ಅವರ ಚಿತ್ರಗಳು ಆ ಕಾಲದ ತಂತ್ರಜ್ಞಾನವನ್ನು ಉತ್ಕೃಷ್ಟ ಮಟ್ಟದಲ್ಲಿ ಉಪಯೋಗಿಸಿಕೊಂಡ ಅವರ ಪ್ರಚಂಡ ಪ್ರತಿಭೆಗೆ ಅವರೇ ಸಾಟಿ. ಅವರ ಮಾನಸ ಗುರುಗಳಾದ ಶ್ರೀ ಬಿ ಆರ್ ಪಂತುಲು ಅವರ ಗರಡಿಯಲ್ಲಿ ಚೆನ್ನಾಗಿಯೇ ಪಳಗಿ ತನ್ನ ಛಾಪನ್ನು ಮೂಡಿಸಿದ ಸಾಹಸಿ ಪುಟ್ಟಣ್ಣ ಎನ್ನಬಹುದು.
ಅವರ ನಿರ್ದೇಶನದಲ್ಲಿ ಮೂಡಿಬಂದ ಎಲ್ಲಾ ಇಪ್ಪತ್ತನಾಲ್ಕು ಚಿತ್ರಗಳನ್ನು ನನ್ನ ಅನುಭವದ ಪಾಕದಲ್ಲಿ ನೆನೆಸಿ ನನಗೆ ತಲುಪಿದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು ಎನ್ನುವ ಆಸೆ ತುಂಬಾ ವರ್ಷಗಳದ್ದು. ಈಗ ಕಾಲ ಕೂಡಿ ಬಂದಿದೆ :-)
ಅವರ ಚಿತ್ರಗಳನ್ನು ಏಕೆ, ಹೇಗೆ, ನೋಡಬೇಕು ಎನ್ನುವ ನನ್ನ ತವಕಕ್ಕೆ ನೀರೆರೆದಿದ್ದು ನನ್ನ ಪ್ರೀತಿಯ ಸೋದರಮಾವ ಶ್ರೀಕಾಂತ (ರಾಜ).. ಈ ಲೇಖನಗಳ ಮಾಲೆ ಪುಟ್ಟಣ್ಣ ಅವರ ಚರಣ ಕಮಲಗಳಿಗೆ ಹಾಗೂ ಸುಮಾರು ಆರು ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಅಗಲಿದ ನನ್ನ ಸೋದರಮಾವ ರಾಜನ ನೆನಪಿಗೆ ಅರ್ಪಿತ.
ಪುಟ್ಟಣ್ಣ ಅವರ ಚಿತ್ರಗಳಲ್ಲಿ ಕಥೆಯೇ ನಾಯಕ. ನಂತರ ಸಂಭಾಷಣೆ, ಹಾಡುಗಳು, ಸಾಹಿತ್ಯ, ಸಂಗೀತ, ಗಾಯನ, ಇದರ ಜೊತೆಯಲ್ಲಿ ಪುಟ್ಟಣ್ಣ ಅವರ ಗರಡಿಯಲ್ಲಿ ಪಳಗಿ ಅಭಿನಯಿಸುತ್ತಿದ್ದ ಕಲಾವಿದರು, ಹಾಗೂ ಇಪ್ಪತ್ತ ನಾಲ್ಕು ಚಿತ್ರಗಳಲ್ಲಿ ಕರುನಾಡಿನ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯ, ಹಾಗೆಯೇ ಅನೇಕ ಹೆಸರಾದ ಸಾಹಿತಿಗಳ, ಅನೇಕ ಬೆಳಕಿಗೆ ಬಾರದ ಸಾಹಿತಿಗಳ ಕಥೆಗಳನ್ನು, ಕವನಗಳನ್ನು ಯಶಸ್ವಿಯಾಗಿ ಬೆಳ್ಳಿ ಪರದೆಗೆ ಅಳವಡಿಸಿದ್ದು, ಕನ್ನಡ ನಾಡು, ನುಡಿಯ ಬಗ್ಗೆ ಅಪರಿಮಿತ ಪ್ರೇಮ ಇವೆಲ್ಲವೂ ಪುಟ್ಟಣ್ಣ ಕಣಗಾಲ್ ಚಿತ್ರಗಳಲ್ಲಿ ಕಾಣಸಿಗುತ್ತದೆ.
ಮುಂದಿನ ಹಲವಾರು ಲೇಖನಗಳಲ್ಲಿ ಅವರ ಚಿತ್ರಗಳ ಬಗ್ಗೆ ನನಗೆ ತಿಳಿದ ಜ್ಞಾನದಲ್ಲಿ, ಅರಿವಿಗೆ ಬಂದಷ್ಟು, ಎಟುಕಿದಷ್ಟು ವಿಚಾರಗಳನ್ನು ಬರೆಯುತ್ತಾ ಹೋಗುತ್ತೇನೆ.
ಪುಟ್ಟಣ್ಣ ನಿರ್ದೇಶನದ ಭಾಗ್ಯವನ್ನು ಕಂಡ ಚಿತ್ರಗಳು ಇಪ್ಪತ್ತನಾಲ್ಕು. ಅನೇಕ ಪ್ರಶಸ್ತಿಗಳ ಕಿರೀಟ ತೊಟ್ಟುಕೊಂಡ ಚಿತ್ರಗಳು ಹಲವಾರು. ಜನಪ್ರಿಯತೆ, ವಾಣಿಜ್ಯವಾಗಿಯೂ ಯಶಸ್ಸು ಕಂಡ ಚಿತ್ರಗಳು ಹಲವಾರು. ಆ ಚಿತ್ರಗಳ ಪಟ್ಟಿ ನಿಮಗಾಗಿ ಇಲ್ಲಿದೆ
ಬೆಳ್ಳಿ ಮೋಡ (1966)
ಮಲ್ಲಮ್ಮನ ಪವಾಡ (1969)
ಕಪ್ಪು ಬಿಳುಪು (1969)
ಗೆಜ್ಜೆ ಪೂಜೆ (1969)
ಕರುಳಿನ ಕರೆ (1970)
ಶರಪಂಜರ (1971)
ಸಾಕ್ಷಾತ್ಕಾರ (1971)
ನಾಗರ ಹಾವು (1972)
ಎಡಕಲ್ಲು ಗುಡ್ಡ ಮೇಲೆ (1973)
ಉಪಾಸನೆ (1974)
ಶುಭಮಂಗಳ (1975)
ಕಥಾ ಸಂಗಮ (1975)
ಬಿಳಿ ಹೆಂಡ್ತಿ (1975)
ಫಲಿತಾಂಶ (1976)
ಕಾಲೇಜು ರಂಗ (1976)
ಪಡುವಾರಹಳ್ಳಿ ಪಾಂಡವರು (1978)
ಧರ್ಮಸೆರೆ (1979)
ರಂಗನಾಯಕಿ (1981)
ಮಾನಸ ಸರೋವರ (1982)
ಧರಣಿ ಮಂಡಲ ಮಧ್ಯದೊಳಗೆ (1983)
ಋಣ ಮುಕ್ತಳು (1984)
ಅಮೃತ ಘಳಿಗೆ (1984)
ಮಸಣದ ಹೂವು (1984)
ಸಾವಿರ ಮೆಟ್ಟಿಲು (2006) (ನಿರ್ಮಾಪಕರು ಮಧ್ಯದಲ್ಲಿ ನಿಂತು ಹೋಗಿದ್ದ ಚಿತ್ರವನ್ನು ಪೂರ್ಣ ಮಾಡಿ ಬಿಡುಗಡೆ ಮಾಡಿದರು)
ಬನ್ನಿ ಹೆಮ್ಮೆಯ ಕನ್ನಡಾಂಬೆಯ ಸುಪುತ್ರ, ಕನ್ನಡ ಮಣ್ಣಿನ ಹಿರಿಮೆಯನ್ನು ಭಾರತದ ಉದ್ದಗಲಕ್ಕೂ ಹರಡಿಸಿದ ಪ್ರತಿಭಾ ಪರ್ವತ ಶ್ರೀ ಪುಟ್ಟಣ್ಣ ಕಣಗಾಲ್ ಅವರ ಚಿತ್ರ ಯಾತ್ರೆಯನ್ನು ಶುರುಮಾಡೋಣ!
ವಾಹ್ ಶ್ರೀಕಾಂತ್ ಬಹಳ ಒಳ್ಳೆಯ ಸಾಹಸ ಮಾಡಲು ಹೊರಟಿದ್ದೀರಿ , ಹೌದು ಕನ್ನಡ ನಾಡು ಕಂಡ ಅದ್ಭುತ ಚಲನಚಿತ್ರ ನಿರ್ದೆಶಕ. ಅವರ ಬೆಳ್ಳಿ ಮೋಡ (1966)
ReplyDeleteಮಲ್ಲಮ್ಮನ ಪವಾಡ (1969)
ಕಪ್ಪು ಬಿಳುಪು (1969)
ಗೆಜ್ಜೆ ಪೂಜೆ (1969)
ಕರುಳಿನ ಕರೆ (1970)
ಶರಪಂಜರ (1971)
ಸಾಕ್ಷಾತ್ಕಾರ (1971)
ನಾಗರ ಹಾವು (1972)
ಎಡಕಲ್ಲು ಗುಡ್ಡ ಮೇಲೆ (1973)
ಉಪಾಸನೆ (1974)
ಶುಭಮಂಗಳ (1975)
ಕಥಾ ಸಂಗಮ (1975)
ಬಿಳಿ ಹೆಂಡ್ತಿ (1975)
ಫಲಿತಾಂಶ (1976)
ಕಾಲೇಜು ರಂಗ (1976)
ಪಡುವಾರಹಳ್ಳಿ ಪಾಂಡವರು (1978)
ಧರ್ಮಸೆರೆ (1979)
ರಂಗನಾಯಕಿ (1981)
ಮಾನಸ ಸರೋವರ (1982)
ಧರಣಿ ಮಂಡಲ ಮಧ್ಯದೊಳಗೆ (1983)
ಋಣ ಮುಕ್ತಳು (1984)
ಅಮೃತ ಘಳಿಗೆ (1984)
ಮಸಣದ ಹೂವು (1984)
ಒಂದೊಂದು ಚಿತ್ರವೂ ಅದ್ಭತ ರಸಕಾವ್ಯಮಯ ಚಿತ್ರಗಳೇ ಆಗಿದ್ದವು. ನಮ್ಮ ಕನ್ನಡ ಚಿತ್ರರಂಗ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ , ಹಾಗು ಅವರ ವಯಕ್ತಿಕ ಜೀವನದ ಕೆಲವು ತಪ್ಪು ನಿರ್ಧಾರಗಳು ಅವರನ್ನು ಬಲಿತೆಗೆದುಕೊಂಡಿದ್ದು ಸುಳ್ಳಲ್ಲ . ಬಹುಷಃ ನಿಮ್ಮ ಲೇಖನ ಮಾಲಿಕೆಯಲ್ಲಿ ನಿಮ್ಮದೇ ವಿಶೇಷ ಶೈಲಿಯಲ್ಲಿ ಬರುವ ಸರಣಿಗೆ ಕಾತರದಿಂದ ಕಾಯುತ್ತಿದ್ದೆನೆ. ಬೆಳ್ಳಿಮೋಡ ದಿಂದ ಶುರುವಾಗಿ ಮಸಣದ ಹೂವರೆಗೆ ನಿಮ್ಮ ಲೇಖನ ವಿಶೇಷತೆ ಖಂಡಿತ ಚೆನ್ನಾಗಿ ಮೂಡಿಬರಲಿದೆ ನಿಮಗೆ ಜೈ ಹೊ ಶ್ರೀ .
ಹೌದು ಸರ್.. ಪುಟ್ಟಣ್ಣ ಅವರ ಚಿತ್ರಗಳ ಬಗ್ಗೆ ಅವರ ಸಾಧನೆಗಳ ಬಗ್ಗೆ ಬರೆದಷ್ಟು ಮುಗಿಯದ ಕಥೆ. ತಾನು ನಂಬಿದ್ದ ಸಿದ್ಧಾಂತಗಳನ್ನು ಕೊನೆ ಚಿತ್ರದವರೆಗೂ ಕಾಣಿಸಿಕೊಂಡು ಬಂದಿದ್ದರು. ಅವರು ಇನ್ನಷ್ಟು ವರ್ಷಗಳು ಇರಬೇಕಿತ್ತು ಅನ್ನಿಸುತ್ತದೆ ಒಮ್ಮೆ.. ಉತ್ತಮ ಕಾದಂಬರಿಗಳು ಬೆಳ್ಳಿ ತೆರೆಯಲ್ಲಿ ರಾರಾಜಿಸುತ್ತಿದ್ದವು. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಬಾಲೂ ಸರ್
Deleteಅವರ ಚಿತ್ರದ ಜನಪ್ರಿಯ ಗೀತೆ "ಈ ಶತಮಾನದ ಮಾದರಿ ಹೆಣ್ಣು" ಅದನ್ನೇ ತುಸು ಬದಲಿಸಿದರೆ ಅದು ಪುಣ್ಣರಿಗೆ ಅನ್ವರ್ಥ ""ಈ ಶತಮಾನದ ಮಾದರಿ ನಿರ್ದೇಶಕ"
ReplyDeleteಬಹುಶಃ ಚಲನಚಿತ್ರದ ಪರಿಭಾಷೆಯನ್ನು ಸರಿಯಾಗಿ ಅರ್ಥೈಸಿಕೊಂಡಿದ್ದವರು ಪುಟ್ಟಣ್ಣ. ನನಗೆ ಚೆನ್ನಾಗಿ ನೆನಪಿದೆ 2002ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಜರ್ಮನ್ ಚಲಚಿತ್ರೋತ್ಸವವಿತ್ತು. ಅದರಲ್ಲಿ ಕನ್ನಡ ಚಿತ್ರಗಳ ಸಾಲಲ್ಲಿ ಪ್ರದರ್ಶನಗೊಂಡ ಚಿತ್ರ ರಂಗನಾಯಕಿ. ಅಲ್ಲಿ ಬಂದಿದ್ದ ಜರ್ಮನ್ ಮಿತ್ರರು ಹೇಳಿದ ಮಾತು "ಸಬ್ ಟೈಟಲು"ಗಳ ಹಂಗಿಲ್ಲದೆ ಸುಲಭವಾಗಿ ಅರ್ಥವಾಗುವ ಚಿತ್ರವೆಂದರೆ ಇದು ಎಂದು. ರಂಗನಾಯಕಿಯ ಕಥಾವಸ್ತು ಜರ್ಮನರಿಗೆ ಹೊಸದೇ, ಆದರೂ ಅವರಿಗೆ ಅದು ಕಬ್ಬಿಣದ ಕಡಲೆ ಅಲ್ಲ. ಅದೇ ಪುಟ್ಟಣ್ಣರ ಗಿರಿಮೆ.
ಅವರ ವೈಶಿಷ್ಟ್ಯಗಳು:
1. ಸ್ಟಾರುಗಳಿಂದ ಹೊಸಬರವರೆಗೆ ನಾಯಕರಾಗಿಸಿ ಗೆದ್ದು ತೋರಿಸಿದ್ದು.
2. ಸಂಗೀತದ ಸದ್ಭಳಕೆ.
3. ಆದಷ್ಟೂ ಕಾದಂಬರಿಗಳನ್ನೇ ತೆರೆಗೆ ತಂದದ್ದು.
4. ಜಾಳು ಜಾಳಾಗಿರದ ಬಿಗಿಯಾದ ಚಿತ್ರ ಕಥೆ.
5. ನಾಯಕಿಯರನ್ನು ಮೇರೆಸಿದ್ದು.
6. ಕರ್ನಾಟಕದ ಹಲವಾರು ತಾಣಗಳನ್ನು ಪರಿಚಯಿಸಿದ್ದು.
ಹೀಗೆ...
ಈ ಯಾತ್ರೆ ಮುಂದುವರೆಸಿರಿ. ಸಿಲ್ವರ್ ಜುಬಿಲಿ ಮಾಡೋಣ.
ಸುಂದರ ಮಾಹಿತಿ ಕೊಟ್ಟಿರಿ ಬದರಿ ಸರ್. ಪ್ರತಿ ಚಿತ್ರದಲ್ಲೂ ಏನಾದರು ವಿಶೇಷತೆ ಕಾಪಾಡಿಕೊಂಡು ಬರುತ್ತಿದ್ದರು.ಅವರನ್ನು ಬರಿ ಹೆಣ್ಣು ಮಕ್ಕಳ ಚಿತ್ರ ನಿರ್ದೇಶಕ ಎನ್ನುವವರಿಗೆ ಪಡುವಾರಹಳ್ಳಿ ಪಾಂಡವರು, ಕರುಳಿನ ಕರೆ, ಸಾಕ್ಷಾತ್ಕಾರ, ಕಾಲೇಜು ರಂಗ, ಮಾನಸ ಸರೋವರ ದಂತಹ ಕೆಲವು ಚಿತ್ರಗಳಲ್ಲಿ ನಾಯಕರು ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿದ್ದರು. ಸೂಪರ್ ಬದರಿ ಸರ್ ಧನ್ಯವಾದಗಳು
Deletebest of luck.... keep us posted with your experiences of movie journey :)
ReplyDeleteThank you Nivi. Surely with wonderful readers like you people..it gives necessary energy to write about all the kannada movies directed by him....
DeleteWonderful.... nanna fav. nirdheshakaralli Puttannanavaroo saha obbaru. SambandhagaLa - aaLathe, aLathe.... Manushyana Naija GunagaLa saraLathe.... ellavoo acchukattaagi kanna munde, namma pakkada maneyalli naDeyuthiruva ghataNeyanthe bimbisuva Puttanna Sir ge dodda salaam.
ReplyDeleteSrikanth, oLLeya lekhana....tumbaa ishtavaaythu.....
ಧನ್ಯವಾದಗಳು ರೂಪ.. ಕನ್ನಡ ಕಂಡ ಮೊದಲ ಹಾಗೂ ಪ್ರಾಯಶಃ ಕಡೆಯ ಸ್ಟಾರ್ ನಿರ್ದೇಶಕ. ಶಂಕರ್ ನಾಗ್ ಇದ್ದಿದ್ದರೆ ಅವರ ಹಾದಿಯಲ್ಲಿ ಬರುತಿದ್ದರು ಅನ್ನಿಸುತ್ತೆ. ಅವರ ಚಿತ್ರಗಳು ಒಂದು ಭಾವ ಜೀವಕ್ಕೆ
Deleteಪಾಠವಿದ್ದಂತೆ.
ಕನ್ನಡ ಚಲನಚಿತ್ರ ಕಂಡ ಒಬ್ಬ ಅದ್ಭುತ ನಿರ್ದೇಶಕ. ಇವರು ಎಂತಹಾ ಒಳ್ಳೊಳ್ಳೆ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದರು. ಶ್ರೀಕಾಂತ ಸದಾ ನೀವು ವಿಭಿನ್ನ ವಿಷಯಗಳತ್ತಲೇ ಗಮನ ಧನ್ಯವಾದಗಳು ಪುಟ್ಟಣ್ಣ ಕಣಗಾಲ್ ಅವರ ಇಷ್ಟು ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ.
ReplyDeleteಧನ್ಯವಾದಗಳು ಅಕ್ಕಯ್ಯ.. ಅವರ ಚಿತ್ರಗಳ ಬಗ್ಗೆ ಬರೆಯಬೇಕು ಅನ್ನುವ ಹಂಬಲ ಬಹಳ ವರ್ಷಗಳದ್ದು ಕಾಲ ಈಗ ಕೂಡಿ ಬಂದಿದೆ. ಇಷ್ಟವಾಗಿದ್ದಕ್ಕೆ ಖುಷಿಯಾಗುತ್ತಿದೆ.
Deleteಮುಂದಿನ ಭಾಗಕ್ಕೆ ಕಾಯುತ್ತೇವೆ
ReplyDeleteಅವರು ಆಯ್ದು ಕೊಂಡ ಭಾಗಶಃ ಹೆಣ್ಣೇ ಕೇಂದ್ರ ಬಿಂದುವಾಗಿದ್ದ ವಿಷಯ ವೈವಿಧ್ಯತೆ ಬೆರಗು ಹುಟ್ಟಿಸುತ್ತದೆ
ಸಹೋದರಿ ಸ್ವರ್ಣ ಧನ್ಯವಾದಗಳು ಸುಂದರ ಪ್ರತಿಕ್ರಿಯೆಗೆ. ನಿಮಗೆಲ್ಲಾ ಇಷ್ಟವಾದರೆ ಬರೆದದ್ದು ಸಾರ್ಥಕ ಅನ್ನಿಸುತ್ತೆ.
Deleteನನಗೆ ತುಂಬ ಇಷ್ಟವಾದ ಚಿತ್ರಗಳು ಅಮೃತ ಘಳಿಗೆ, ರಂಗನಾಯಕಿ... ಮುಂದಿನ ಭಾಗ ಬೇಗ ಬರಲಿ ಶ್ರೀಕಾಂತಣ್ಣ :)
ReplyDeleteಎಸ್ ಎಸ್ ಹೌದು ಅಮೃತ ಘಳಿಗೆ ಸಾಗರದ ಸುತ್ತಾ ಮುತ್ತಾ ಚಿತ್ರೀಕರಣ ಮಾಡಿದ್ದರು, ರಂಗನಾಯಕಿ ಕೊಲ್ಲೂರು, ಧರ್ಮಸ್ಥಳ ಎಲ್ಲವನ್ನು ತೋರಿಸಿದ್ದರು. ಸುಂದರ ಚಿತ್ರಗಳು ಅವು. ಧನ್ಯವಾದಗಳು ಓದಿದ್ದಕ್ಕೆ
Delete