Wednesday, July 24, 2013

ಬೆಳ್ಳಿ ಮೋಡದ ಅಂಚಿನಿಂದ - ಬೆಳ್ಳಿ ಮೋಡ (1966)

ಚಿತ್ರ ನಿರ್ದೇಶನಕ್ಕೆ ಮಾಂತ್ರಿಕ ಸ್ಪರ್ಶ ತಂದ ಗಾರುಡಿಗನ ತೆರೆಕಂಡ ಮೊದಲ ಚಿತ್ರದ ಹೆಸರು ಇದಕ್ಕಿಂತ ಅಮೋಘ ಹೆಸರು ಬೇಕಿರಲಿಲ್ಲ ಅನ್ನಿಸುತ್ತೆ.. ಬೆಳ್ಳಿ ಮೋಡ.....  ವಾಹ್!


ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಎಸ್ ಜಾನಕಿ, ಬಿ ಕೆ ಸುಮಿತ್ರ ಅವರ ಸುಮಧುರ ಕಂಠದಲ್ಲಿ
ದ ರಾ ಬೇಂದ್ರೆ  ಮತ್ತು ಅರ್ ಏನ್ ಜಯಗೋಪಾಲ್  ಬರೆದಿರುವ ಸಾಹಿತ್ಯವನ್ನು
ತಮ್ಮ ಉತ್ಕ್ರುಷ್ಟ ಸಂಗೀತದಲ್ಲಿ ಮಿಳಿತಗೊಳಿಸಿರುವ ಸಂಗೀತ ಗಾರುಡಿಗ ವಿಜಯಭಾಸ್ಕರ್
ಕಪ್ಪು ಬಿಳುಪಿನಲ್ಲಿ ಸೆರೆ ಹಿಡಿದು ಕೊಟ್ಟಿರುವ ಛಾಯಾಗ್ರಾಹಕ ಆರ್ ಏನ್ ಕೃಷ್ಣಪ್ರಸಾದ್ 
ಬಿಗಿ ಹಿಡಿತದಲ್ಲಿ ಸಂಕಲನ ಮಾಡಿರುವ ವಿ ಪಿ ಕೃಷ್ಣನ್ 
ಮತ್ತು ಇವರ ಪ್ರತಿಭೆಯನ್ನೆಲ್ಲ ಸರಿಯಾಗಿ ಕಲೆಹಾಕಿದ ನಿರ್ಮಾಪಕ ಪಾರಿಜಾತ ಪಿಕ್ಚರ್ಸ್ ನ ಟಿ ಏನ್ ಶ್ರೀನಿವಾಸನ್ 
ಒಂದು ಸುಂದರಕಥೆಯನ್ನು ಅಷ್ಟೇ ಮಧುರವಾದ ಸಂಭಾಷಣೆಯನ್ನು ಬರೆದ ಲೇಖಕಿ ತ್ರಿವೇಣಿ 
ಈ ಸುಂದರ ಕಲಾವಿದರ ದಂಡಿನ ಹಡಗನ್ನು ಸಮರ್ಥವಾಗಿ ಮುನ್ನೆಡೆಸಿದ ನಾವಿಕರ ಕಪ್ತಾನ ಪುಟ್ಟಣ್ಣ ಕಣಗಾಲ್ 
ಇವರೆಲ್ಲರ ಸಮಾಗಮ ೧೯೬೬ರ ಅಮೋಘ ಕೊಡುಗೆ ಬೆಳ್ಳಿ ಮೋಡ.  

ಚಿತ್ರದ ಆರಂಭಿಕ ದೃಶ್ಯದಲ್ಲಿ ಕಥಾ ಲೇಖಕಿ ದಿವಗಂತ ತ್ರಿವೇಣಿ ಅವರಿಗೆ ನಮನ ಸಲ್ಲಿಸುತ್ತಲೇ.. ತಾವೊಬ್ಬ ವಿಭಿನ್ನ ಹಾದಿ ತುಳಿಯುವವರು ಎನ್ನುವುದನ್ನು ತೋರುತ್ತಾರೆ. ಇದು ಒಬ್ಬ ನಿರ್ದೇಶಕ ತಾನು ಬಳಸಿಕೊಳ್ಳುವ ಕಥಾ ಲೇಖಕ/ಕಿ ಅವರಿಗೆ ಕೊಡುವ ಉತ್ಕೃಷ್ಟ ಸನ್ಮಾನ ಎನ್ನಬಹುದು.

"ಸರ್ ನೀವು ಎಲ್ಲಿಂದ ಬಂದ್ರಿ ಎಲ್ಲಿಗೆ ಹೋಗುತ್ತಿದ್ದೀರಿ?"
ಏನಯ್ಯ ಮಹಾತ್ಮರಿಗೆ ಅರಿವಾಗದ ಪ್ರಶ್ನೆಯನ್ನು ಸಾಮಾನ್ಯನಾದ ನನಗೆ ಕೇಳುತಿದ್ದೀಯ?"

ಈ ಸಂಭಾಷಣೆ ದ್ವಾರಕೀಶ್ ಮತ್ತು ನಾಯಕ ಕಲ್ಯಾಣ್ ಕುಮಾರ್ ಮಧ್ಯೆ ಆರಂಭಿಕ ದೃಶ್ಯದಲ್ಲಿ ಸಿಗುತ್ತದೆ. ಚಿತ್ರದ ಆರಂಭದಲ್ಲೇ ಚಿತ್ರದ ನಾಯಕ ತಾನೂ ಒಬ್ಬ ಸಾಮಾನ್ಯ, ರಾಗ ಭಾವ ದ್ವೇಷಗಳನ್ನು ಒಳಗೊಂಡವ ಎನ್ನುವ ಸಂದೇಶ ಸಾರುತ್ತದೆ.

ಹಾದಿಯಲ್ಲಿ ಹೋಗುತ್ತಾ ಹೋಗುತ್ತಾ ಕರುನಾಡಿನ ಸುಂದರ ಸ್ಥಳ ಚಿಕಮಗಳೂರಿನ ಪ್ರಕೃತಿ ಮಾತೆಯ ಸೌಂದರ್ಯವನ್ನು ಕಪ್ಪು ಬಿಳುಪಿನಲ್ಲಿ ನೋಡುವುದೇ ಒಂದು ಭಾಗ್ಯ.

ಸಂಭಾಷಣೆ ಎಂದು ತೋರಿಸುವ ಫಲಕದಲ್ಲಿ ಕಥಾ ಲೇಖಕಿ ತ್ರಿವೇಣಿಯವರ ಹೆಸರು ಜೊತೆಗೆ ಅರ್ ಏನ್ ಜಯಗೋಪಾಲ್ ಅವರ ಹೆಸರು ತೋರುವುದು ತಾನೊಬ್ಬ ವಸ್ತು ನಿಷ್ಠ ನಿರ್ದೇಶಕ ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ.

ಹಾಸ್ಯ ಬ್ರಹ್ಮ ಬಾಲಕೃಷ್ಣ, ದ್ವಾರಕೀಶ್, ಕುಳ್ಳಿ ಜಯ, ಗಣಪತಿ ಭಟ್ಟ ಅವರ ಮಧ್ಯೆ ನಡೆಯುವ ದೃಶ್ಯಗಳು ಕಥೆಯನ್ನು ಅಡ್ಡಾದಿಡ್ಡಿ ಓಡಿಸದೇ ಕಚಗುಳಿ ಇಡುವ ದೃಶ್ಯಗಳನ್ನು ಸೇರಿಸಿರುವುದರಲ್ಲಿ ನಿರ್ದೇಶಕನ ಜಾಣ್ಮೆ ಕಾಣುತ್ತದೆ.

"ನಾ ನಿಮ್ಮ ವಯಸ್ಸಿನಲ್ಲಿದ್ದಾಗ ತಲೆಯ ಮೇಲೆ ಹಾಕಿದ ನೀರು ಕಾಲಿಂದ ಬಿಸಿನೀರಾಗಿ ಹರಿದು ಹೋಗುತ್ತಿತ್ತು. ನನ್ನ ಮೈ ಕಂಚು ಕಂಚು" ಎನ್ನುವ ಬಾಲಣ್ಣ

"ಒಹ್ ಅದಕ್ಕೆ ಕಂಬದಿಂದ ಬರದೆ ಕಾಫಿ ಬೀಜದಿಂದ ಬಂದೆ ಅಲ್ವೇ ಮಾವಯ್ಯ" ಎನ್ನುವ ದ್ವಾರಕೀಶ್

"ಸತಿ ಸಾವಿತ್ರಿಯ ಗಂಡ ಡ್ರೈವರ್ ಆಗಿರಲಿಲ್ಲ" ಎನ್ನುವ ಕುಳ್ಳಿ ಜಯ

 ಈ ಎಲ್ಲಾ ಸಂಭಾಷಣೆಗಳು ನೋಡುಗರಿಗೆ ಒಂದು ವೇದಿಕೆಯನ್ನು ಸಿದ್ಧ ಮಾಡಿಕೊಡುತ್ತಾ ಹೋಗುತ್ತದೆ.

ಭಾವುಕ ದೃಶ್ಯಗಳ ಮಧ್ಯೆ ಈ ರೀತಿಯ ಕಚಗುಳಿ ದೃಶ್ಯಗಳು ಒಂದು ಭಿನ್ನ ಅನುಭವ ಕೊಡುತ್ತದೆ. ಭಾವದ ಏರಿಳಿತದಲ್ಲಿ ಪ್ರೇಕ್ಷಕ ಕಳೆದು ಹೋಗದೆ ಇರುವುದನ್ನು ತಡೆಯುತ್ತದೆ.

ನಾಯಕ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಸಹಾಯ ಹಸ್ತ ಕೇಳಲು ಬರುತ್ತಾನೆ. ಕಾರಣಾಂತರಗಳಿಂದ ಬೆಳ್ಳಿಮೋಡದ ಮಾಲೀಕನ ಸಮಿತಿಗೆ ಸಹಾಯ ಮಾಡಲು ಆಗದ ಕಾರಣ ಮುಂದಿನ ವರ್ಷ ಹೋಗಬಹುದು ಎನ್ನುವ ಭರವಸೆ ನೀಡುತ್ತಾನೆ.

ಅಷ್ಟರಲ್ಲಿ ಮಾಲೀಕನ ಮಡದಿ ತನ್ನ ಮಗಳಿಗೆ ನಾಯಕನ್ನು ಕೊಟ್ಟು ಮದುವೆ ಮಾಡಿ.. ತಮ್ಮ ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ಕಳಿಸಬಹುದು ಎನ್ನುವ ಬಯಕೆ ವ್ಯಕ್ತಪಡಿಸುತ್ತಾಳೆ. ಮೊದಲು ಒಪ್ಪದ ಮಾಲೀಕ ನಂತರ ವಿಧಿಯಿಲ್ಲದೇ ಒಪ್ಪಿಕೊಂಡು ನಾಯಕ ನಾಯಕಿಯ ನಿಶ್ಚಿತಾರ್ಥ ಏರ್ಪಡಿಸಿ ವಿದ್ಯಾಭ್ಯಾಸ ಮುಗಿದ ಮೇಲೆ ಮದುವೆ ಎಂದು 
ನಿರ್ಧಾರವಾಗುತ್ತದೆ.

ಈ ದೃಶ್ಯದಲ್ಲಿ ನಾಯಕನ ತಂದೆ ತಾಯಿಯ ದುರಾಸೆ, ದುರಾಲೋಚನೆ ಬಯಲಿಗೆ ಬರುತ್ತೆ. ಬೆಳ್ಳಿ ಮೋಡದ ಆಸ್ತಿಗೆ ನಾಯಕಿಯೇ ಹಕ್ಕು ಭಾದ್ಯಳು  ಎಂದು ಅಷ್ಟೇನೂ ಸುಂದರಿಯಲ್ಲದ ನಾಯಕಿಯನ್ನು ತಮ್ಮ ಸೊಸೆ ಮಾಡಿಕೊಳ್ಳಲು ಹವಣಿಸುತ್ತಾರೆ.

ಅನೀರೀಕ್ಷಿತ ಘಟನೆಯಲ್ಲಿ ಬೆಳ್ಳಿಮೋಡದ ಆಸ್ತಿಗೆ ಇನ್ನೊಬ್ಬ ಹಕ್ಕುದಾರ ಬರುತ್ತಾನೆ. ಮಾಲೀಕನ ಹೆಂಡತಿಗೆ ಗಂಡು ಮಗುವಾಗಿ, ನಾಯಕನ ತಂದೆ ತಾಯಿಯ ಆಸೆ ಮಂಜಿನ ಹನಿಯಂತೆ ಕರಗಿ ಹೋಗುತ್ತದೆ. ನಂತರ ನಾಯಕ ಬರೆದ ಪತ್ರದಲ್ಲಿ ಅವನ ದುರಾಸೆ ಕೂಡ ಸೂಕ್ಷ್ಮವಾಗಿ ಬಯಲಿಗೆ ಬರುತ್ತದೆ. ಈ ನಡುವೆ ಮಾಲೀಕನ ಹೆಂಡತಿ ಮಗುವಿನ ಜವಾಬ್ದಾರಿಯನ್ನು ತನ್ನ ಗಂಡ ಹಾಗೂ ಮಗಳಿಗೆ ಕೊಟ್ಟು ಕೊನೆಯುಸಿರು ಬಿಡುತ್ತಾಳೆ.

ವಿದ್ಯಾಭ್ಯಾಸ ಮುಗಿಸಿದ ನಾಯಕ, ಮರಳಿ ಬಂದಾಗ ಹಿಂದಿನ  ಪ್ರೀತಿ ವಿಶ್ವಾಸ ಮಮಕಾರ ಯಾವುದೂ ಅವನಲ್ಲಿ ಕಾಣುವುದಿಲ್ಲ. ಎಲ್ಲಾ ವಿಷಯ ಬಯಲಾದಾಗ ನಾಯಕಿಗೆ ಮದುವೆಯಲ್ಲಿ ಆಸಕ್ತಿಯೇ ಇರುವುದಿಲ್ಲ. ಹತಾಶನಾದ ನಾಯಕ ಕಾಲು ಜಾರಿ ಕಮರಿಗೆ ಬಿದ್ದು ನಾಯಕಿಯ ಶುಶ್ರೂಷೆಯಲ್ಲಿ ಚೇತರಿಸಿಕೊಳ್ಳುವಾಗ ಅವಳ ನಿಸ್ವಾರ್ಥ ಸೇವೆಯನ್ನು ಕಂಡು ತನ್ನ ದುರಾಸೆಗೆ ನಾಚಿಕೆ ಪಟ್ಟುಕೊಳ್ಳುತ್ತಾ ಪ್ರೀತಿಯ ಮೊಳಕೆ ಒಡೆಯಬಹುದು ಎನ್ನುವ ಆಶಾ ಭಾವಕ್ಕೆ ನಾಯಕಿ "ನೀವು ರೋಗಿ ಎನ್ನುವ ಭಾವದಲ್ಲಿ ನಾ ನಿಮ್ಮನ್ನು ಆರೈಕೆ ಮಾಡಿದೆ" ಎಂದು ತಣ್ಣೀರು ಸುರಿಯುತ್ತಾಳೆ. ಅಲ್ಲಿಗೆ ನಾಯಕನ ಆಸೆ ಕರಗಿ ಹೋಗುತ್ತದೆ.

ಈ ಸರಳ ಕಥೆಯನ್ನು ಸುಂದರವಾಗಿ ವಿಹಂಗಮ ಪ್ರಕೃತಿ ಮಡಿಲಲ್ಲಿ ಚಿತ್ರೀಕರಿಸಿ ಕಲಾವಿದರಿಂದ ಪಾತ್ರಕ್ಕೆ ಎಷ್ಟು ಬೇಕೊ ಅಷ್ಟು ಭಾವವನ್ನು ಮಾತ್ರ ಹೊರಹೊಮ್ಮಿಸಿ ಒಂದು ಸುಂದರ ಕಲಾಕೃತಿಯನ್ನು ಕೊಟ್ಟಿದ್ದಾರೆ ನಮ್ಮೆಲ್ಲರ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್.

ಅವರ ಕುಸುರಿ ಕೆಲಸಕ್ಕೆ ಸಾಕ್ಷಿಯಾದ ಅನೇಕ ದೃಶ್ಯಗಳು ಕಾಣಸಿಗುತ್ತವೆ ಹಾಗೆಯೇ ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಗಾದೆಯಂತೆ ಮುಂದಿನ ಅಮೋಘ ಕೊಡುಗೆ ನೀಡುವ ಚಿತ್ರಗಳ ಬಗ್ಗೆ ಸೂಚನೆ ಕೊಡುತ್ತಾರೆ.
  1. ಮಲೆನಾಡಿನಲ್ಲಿ ಹೊಟ್ಟೆ ಪಾಡಿಗೆ ಚತುರತೆಯಿಂದ ಒಂದಷ್ಟು ಕಾಸು ಮಾಡಿಕೊಳ್ಳುವ ಬಸ್ ನಿಲ್ದಾಣದ ಕೂಲಿಯ ಚಿಕ್ಕ ಪಾತ್ರ ಸೊಗಸಾಗಿದೆ     
  2. ದ್ವಾರಕೀಶ್,  ಬಾಲಣ್ಣ, ಕುಳ್ಳಿ ಜಯ ಅವರ ದೃಶ್ಯಗಳು ತಾನು ಹಾಸ್ಯ ದೃಶ್ಯಗಳಿಗೂ ಸೈ ಎಂದು ತೋರಿಸುತ್ತಾರೆ
  3. ನಾಯಕಿಯ ಭಾವಚಿತ್ರ ನೋಡುತ್ತಲೇ ಅಕಸ್ಮಾತ್ ಕೈಜಾರಿ ಆ ಚಿತ್ರದ ಗಾಜು ಒಡೆದು ಹೋದಾಗ, ತಣ್ಣನೆ ಭಾವ ವ್ಯಕ್ತ ಪಡಿಸುವ ನಾಯಕಿಯ ಸಂಭಾಷಣೆ ಸುಂದರ ಎನಿಸುತ್ತದೆ. ಮತ್ತು ಚಿತ್ರದ ಅಂತ್ಯದ ಬಗ್ಗೆ ಒಂದು ಸುಳಿವು ನೀಡುತ್ತಾರೆ. 
  4. ನಾಯಕ ಮತ್ತು ನಾಯಕಿಯ ಪ್ರೇಮ ನಿವೇದನೆ, ಆ ನವಿರು ಭಾವ ಬೆಟ್ಟದ ಮೇಲಿನ ಒಂಟಿ ಮರದ ಸುತ್ತ ಸುಂದರವಾಗಿ ಚಿತ್ರೀಕರಿಸಿದ್ದಾರೆ 
  5. "ಮೂಡಲ ಮನೆಯ ಮುತ್ತಿನ ನೀರನು"  ಹೆಮ್ಮೆಯ ಕವಿ  ದ ರಾ ಬೇಂದ್ರೆಯವರ ಲೇಖನಿಯಲ್ಲಿ ಮೂಡಿದ ಹಾಡನ್ನು ಅಷ್ಟೇ ಸುಂದರವಾಗಿ ಚಿತ್ರಿಸಲು ದಿನಗಟ್ಟಲೆ ಅಲೆದಾಡಿ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಿಸಿದ್ದು ಅವರ ಒಳಗಿನ ಕಲಾವಿದ ನಿರ್ದೇಶಕನ ಅವತಾರ ಎನ್ನಬಹುದು. 
  6. ಅಪ್ಪ ತನ್ನ ಮಗಳಿಗೆ ಮತ್ತೆ ತಾನು ಅಪ್ಪನಾಗುತ್ತಿರುವ ಸಂಕೋಚದ ವಿಷಯವನ್ನು ಒಂದು ಹಾಸ್ಯ ರೂಪದಲ್ಲಿ ಹೇಳಿ ನಂತರ ಮಗಳಿಗೆ "ಇನ್ನು ಮೇಲೆ ನೀನು ಅವಳ ಮಗಳಲ್ಲಮ್ಮ... ಅವಳ ತಾಯಿ" ಎನ್ನುವ ದೃಶ್ಯ ಸೂಪರ್
  7. ಬೆಳ್ಳಿ ಮೋಡದ ಮಾಲೀಕ ಮತ್ತು ಕೊನೆಯುಸಿರು ಎಳೆಯುತ್ತಿರುವ ಮಡದಿಯ ನಡುವೆ ನಡೆಯುವ ಮೊದಲ ಪ್ರೇಮ ಪತ್ರದ ವಾಚನ, ಮತ್ತು ಅದನ್ನು ನೆನೆದು ಆ ದುಃಖದ ಸನ್ನಿವೇಶದಲ್ಲೂ ದಂಪತಿಗಳು ನಗುವ, ನೆನೆಸಿಕೊಳ್ಳುವ ದೃಶ್ಯ ಒಂದು ಕಡೆಯಲ್ಲಿ ಅವರಿಬ್ಬರ ಪ್ರೇಮ ಪ್ರೀತಿಯನ್ನು ಕಂಡು ಬೀಗಿದರೆ ಇನ್ನೊಂದೆಡೆ ಜವರಾಯನ  ಬಾಗಿಲಿಗೆ ತೆರೆಳಲು ಸಿದ್ಧವಾಗುವುದು ಕಣ್ಣೀರು ತರಿಸುತ್ತದೆ. ನಿರ್ದೇಶನ ಚಾತುರ್ಯ ಈ ದೃಶ್ಯದಲ್ಲಿ ಕಾಡುತ್ತದೆ. 
  8. ನಾಯಕಿ ತಾನೇ ಮದುವೆಗೆ ನಿರಾಕರಿಸುತ್ತೇನೆ ಎಂದು ಹೇಳುವ ದೃಶ್ಯ ನಾಯಕ ನಾಯಕಿ ಮಧ್ಯೆ ನಡೆಯುವ ಭಾವ ಸಂಘರ್ಷ, ನಾಯಕ ಕೂಗಾಡಿದರೂ ನಾಯಕಿಯ ಪ್ರಶಾಂತತೆ, ಸಂಭಾಷಣೆ ಹೇಳುವ ಧಾಟಿ ಅಬ್ಬಾ ಎನಿಸುತ್ತದೆ 
  9. ನಾಯಕ ಮತ್ತೆ ನಾಯಕಿಯ ಪ್ರೀತಿಗೆ ಬಿದ್ದು, ದ್ವೇಷಿಸುತ್ತಿದ್ದ ಅವಳ ತಮ್ಮನನ್ನು ಮುದ್ದಾಡುವ ದೃಶ್ಯ, ಮತ್ತು ನಾಯಕಿ ನಾಯಕನನ್ನು ಶುಶ್ರೂಷೆ ಮಾಡುವ ದೃಶ್ಯಗಳು ಎಲ್ಲೂ ಅತಿರೇಕಕ್ಕೆ ಹೋಗದೆ ನೈಜತೆ ಮೂಡುವಂತೆ ಮಾಡಿರುವುದು ನಿರ್ದೇಶನ ತಾಕತ್.
  10. ಕಡೆಯ ದೃಶ್ಯದಲ್ಲಿ ನಾಯಕಿ ಹೇಳುವ "ಮುದುಕಿಯ ಬದುಕಿಗೆ ಯೌವನ ಒಂದು ನೆನಪು ಮಾತ್ರ.... ಬೆಳ್ಳಿ ಕರಗಿತು ಮೋಡ ಉಳಿಯಿತು" ಎಂದು ಹೇಳಿ ತಮ್ಮ ಪ್ರೇಮದ ಸಂಕೇತ ಪ್ರತಿನಿಧಿಸುತ್ತಿದ್ದ ಮರವನ್ನು ಕಡಿಯಲು ಮುಂದಾಗುವ ದೃಶ್ಯ  ಮನಸಲ್ಲಿ ಬಹುಕಾಲ ಕಾಡುತ್ತದೆ.  ನಿರಾಶನಾದ ನಾಯಕಿಯ ಅಪ್ಪ ಬೇಸರದಿಂದ ನಿಲ್ಲುವುದು , ನಾಯಕಿಯ ಪುಟ್ಟ ತಮ್ಮ ಇಬ್ಬರ ಜಗಳ ನಿಲ್ಲಿಸಲು ಕೈ ಚಾಚಿ ನಿಲ್ಲುವುದು, ನಾಯಕ ಮರವನ್ನು ಕಡಿಯ ಬೇಡ ಎಂದು ತಡೆಯಲು ಹೋಗುವುದು, ನಾಯಕಿ ಮುಖದಲ್ಲಿ ಹತಾಶೆ ತೋರುತ್ತಾ ಕೊಡಲಿ ಎತ್ತಿ ನಿಲ್ಲುವುದು.. ಇದು ನಿಜಕ್ಕೂ ಬೆಳ್ಳಿ ಮೋಡದ ಹೈ-ಲೈಟ್ ದೃಶ್ಯ ಎನ್ನಬಹುದು. ನೂರಾರು ಸಾಲುಗಳಲ್ಲಿ ಹೇಳುವುದನ್ನು ಒಂದು ದೃಶ್ಯದಲ್ಲಿ ತೋರುವ ಜಾಣ್ಮೆ ನಮ್ಮ ಹೆಮ್ಮೆಯ ನಿರ್ದೇಶನ ಮೊದಲ ಚಿತ್ರದಲ್ಲಿ ತೋರಿದ್ದಾರೆ. 
  • ನಾಯಕಿಯಾಗಿ ಕಲ್ಪನಾ ಹದಬರಿತ, ಯಾವುದೇ ಅತಿರೇಕಕ್ಕೆ ಹೋಗದೆ, ಪ್ರಶಾಂತ ಅಭಿನಯ. ಸಂಭಾಷೆಣೆ ಹೇಳುವ ಶೈಲಿ, ಆ ಧ್ವನಿಯಲ್ಲಿ ಏರಿಳಿತ ಎಲ್ಲವೂ  ತಾನೊಬ್ಬ ಅತ್ಯುತ್ತಮ ನಿರ್ದೇಶಕನ ಕೂಸು ಎನ್ನುವುದನ್ನು ಸಾಬೀತು ಪಡಿಸುತ್ತದೆ 
  • ನಾಯಕನಾಗಿ ಕಲ್ಯಾಣ್ ಕುಮಾರ್ ತಮ್ಮ ಉಚ್ಚ್ರಾಯ ಕಾಲದಲ್ಲಿ ಇಂತಹ ಒಂದು ನಕಾರಾತ್ಮಕ ಪಾತ್ರ ಮಾಡಿರುವುದು ಹುಬ್ಬೇರಿಸುವಂತೆ ಮಾಡುತ್ತದೆ. ಆ ತೊಳಲಾಟ, ಹೇಳಲಾಗದೆ ಒಳಗೆ ಒದ್ದಾಡುವ ತಳಮಳ ಎಲ್ಲವೂ  ಅವರ ಅಭಿನಯದಲ್ಲಿ ಸೊಗಸಾಗಿ ಮೂಡಿಬಂದಿದೆ. ಕಪ್ಪು ಬಿಳುಪಿನಲ್ಲಿ ಮನೋಹರವಾಗಿ ಕಾಣುವ ಅವರ ಮುದ್ದು ಮುಖ ಚೆಲುವಾಂತ ಚೆನ್ನಿಗ ಎನ್ನುವಂತೆ ಮಾಡುತ್ತದೆ 
  • ಕರುನಾಡಿನ ಅಪ್ಪ ಎಂದೇ ಹೆಸರಾದ ಕೆ ಎಸ್ ಅಶ್ವಥ್ ಅವರ ಅಭಿನಯದ ಬಗ್ಗೆ ಏನು ಹೇಳಿದರೂ ಕಡಿಮೆ. ಪ್ರತಿ ದೃಶ್ಯದಲ್ಲೂ, ಅದರಲ್ಲೂ ತನ್ನ ಮಡದಿಗೆ ತಮ್ಮ ಮೊದಲ ಪ್ರೇಮ ಪತ್ರವನ್ನು ಓದುವಾಗ ಆ ನವಿರು ಭಾವದ ಸಂಭಾಷಣೆ ಹೇಳುವ ಶೈಲಿ ಅಶ್ವಥ್ ಅವರಿಗೆ ಮಾತ್ರ ಸಾಧ್ಯ. ಅವರ ಮಾತುಗಳು ನಮ್ಮ ಮನೆಯಲ್ಲಿ ಹೇಳುವ ಸಂಭಾಷಣೆಗಳಷ್ಟೇ ಆಪ್ತತೆ ಕಾಣುತ್ತದೆ. 
  • ಕರುನಾಡಿನ ಅಮ್ಮ ಪಂಡರಿ ಬಾಯಿ ಅಶ್ವಥ್ ಅವರಿಗೆ ಪೈಪೋಟಿ ನೀಡುವಂತೆ ಅಭಿನಯಿಸಿದ್ದಾರೆ. ಅದರಲ್ಲೂ ತಾನು ತಾಯಿಯಾಗುತಿದ್ದೇನೆ ಎನ್ನುವಾಗ ಆ ನಾಚಿಕೆ, ಸಂಕೋಚದ ಮುದ್ದೆಯಾಗುವುದು, ತನ್ನ ಬೆಳೆದ ಮಗಳ ಎದುರಲ್ಲಿ ತಾನು ತಾಯಿಯಾಗುತಿದ್ದೇನೆ ಎಂದು ಹೇಳುವುದು, "ನೀನು ತಾಯಿಯಾಗುವ ವಯಸ್ಸಲ್ಲಿ ನಾನು ತಾಯಿಯಾಗುತ್ತಿದ್ದೇನೆ" ಎನ್ನುವಾಗ ಅವರ ತೊಳಲಾಟ.. ಆಹಾ ಎನ್ನಿಸುತ್ತದೆ. ತನ್ನ ಕೊನೆ ಘಳಿಗೆಯಲ್ಲಿ ತನ್ನ ಪತಿಗೆ ಆ ಪ್ರೇಮದ ಪತ್ರವನ್ನು ಓದಿ ಎಂದು, ನಂತರ ಆ ಪತ್ರದ ಪದಗಳ ಭಾವದ ಸುಖವನ್ನು ಮುಖದಲ್ಲಿ ಅರಳಿಸುವ ಪರಿ ನೋಡಿಯೇ ಅನುಭವಿಸಬೇಕು. 
  • ಇನ್ನೂ ಬಾಲಣ್ಣ, ದ್ವಾರಕೀಶ್, ಕುಳ್ಳಿ ಜಯ, ಗಣಪತಿ ಭಟ್ ಇವರ ಸಂಭಾಷಣೆಗಳು, ಚಿಕ್ಕ ಪಾತ್ರದಲ್ಲಿ ನಾಯಕನ ಅಪ್ಪ ಅಮ್ಮನಾಗಿ ಬರುವ  ರಾಘವೇಂದ್ರ ರಾವ್ ಮತ್ತು ಪಾಪಮ್ಮ ಎಲ್ಲರೂ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. 
ಹಾಡುಗಳನ್ನು ಚಿತ್ರಿಕರಿಸುವುದರಲ್ಲಿ ಪುಟ್ಟಣ್ಣ ಎತ್ತಿದ ಕೈ. ಆ ವಿರಾಟ್ ಪ್ರತಿಭೆಯ ಅನಾವರಣ ಈ ಚಿತ್ರದಿಂದ ಶುರುವಾಯಿತು. ಆಯ್ದ ಸುಂದರ ತಾಣಗಳಲ್ಲಿ ಕಷ್ಟವಾದರೂ ಸರಿ ಇಲ್ಲಿಯೇ ಚಿತ್ರಿಕರಿಸಬೇಕೆಂಬ ಛಲ ಎಲ್ಲವು ಸೇರಿ ಅಮೋಘ ದೃಶ್ಯಗಳನ್ನು ಕಣ್ಣಿಗೆ ಕಟ್ಟು ಕೊಟ್ಟಿದ್ದಾರೆ. 

"ಮೂಡಲ ಮನೆಯ" ಹಾಡಿನಲ್ಲಿ ಸುಮಧುರ ಸಾಹಿತ್ಯಕ್ಕೆ ಅಷ್ಟೇ ಸುಮಧುರ ಸಂಗೀತ, ದೃಶ್ಯಗಳ ಜೋಡಣೆ ಸೊಗಸಾಗಿದೆ 
"ಇದೆ ನನ್ನ ಉತ್ತರ" ಹಾಡಿನಲ್ಲಿ ನಾಯಕಿಯ ನಾಚಿಕೆ, ನಾಯಕನ ಪ್ರೀತಿ ಸುಂದರ ಹೊರಾಂಗಣದಲ್ಲಿ ಮೂಡಿಬಂದಿದೆ 
"ಬೆಳ್ಳಿ ಮೋಡದ ಅಂಚಿನಿಂದ" ಹಾಡಿನಲ್ಲಿ ತೋರಿಸುವ ತಾಣಗಳು ಸೊಗಸು. 
"ಮುದ್ದಿನ ಗಿಣಿಯೇ ಬಾರೋ" ಮಕ್ಕಳ ಚೇಷ್ಟೆ, ತುಂಟಾಟ ಕಲ್ಪನಾ ಅಭಿನಯ, ಪುಟ್ಟ ಮಗುವಿನ ಮುದ್ದಾದ ನೃತ್ಯ ಸುಂದರವಾಗಿದೆ 
"ಒಡೆಯಿತು ಒಲವಿನ ಕನ್ನಡಿ" ಉತ್ತಮ ಸಾಹಿತ್ಯ,ಸಂಗೀತದಿಂದ ಮನಸ್ಸೆಳೆಯುತ್ತದೆ.  
  
ಸಹಾಯ ಹಸ್ತ ಚಾಚಿದಾಗ ದುರಾಸೆ ಇರಬಾರದು.. ಉತ್ತಮ ಜೀವನಕ್ಕೆ ಸುಂದರ ಮುಖವಲ್ಲ ಸುಂದರ ಮನಸ್ಸು ಮುನ್ನುಡಿ ಎನ್ನುವ ಸಂದೇಶ ಈ ಚಿತ್ರದಲ್ಲಿ ಹೊರಹೊಮ್ಮಿದೆ. ನಂಬಿದ ಸಿದ್ಧಾಂತಗಳು ಜೀವನಕ್ಕೆ ಹೂ ರಾಶಿ ಚೆಲ್ಲಬಲ್ಲದು ಹಾಗೆಯೇ ಮುಳ್ಳು ಕಲ್ಲು ಕೂಡ ಸಿಗುತ್ತದೆ ಅದನ್ನು ದಾಟಿ ಸಾಗಬೇಕು ಎನ್ನುವ ತಾರ್ಕಿಕ  ಸಂದೇಶ ಅನಾವರಣಗೊಂಡಿದೆ. 

ಚಿತ್ರ ಬ್ರಹ್ಮನ ಮೊದಲ ಕಾಣಿಕೆ ಅಮೋಘ. 

ಕನ್ನಡ ನಾಡಿನ ಚಲನಚಿತ್ರ ಇತಿಹಾಸದಲ್ಲಿ ಪವಾಡ ಶುರುಮಾಡಿದ ಈ ನಿರ್ದೇಶಕ ಮಲ್ಲಮ್ಮನ ಪವಾಡದಲ್ಲಿ ನಮಗೆ ಏನು ಜಾದೂ ತೋರಿಸುತ್ತಾರೆ.... ಮುಂದಿನ ಸಂಚಿಕೆಯಲ್ಲಿ ನೋಡೋಣ!  

13 comments:

  1. ತುಂಬ ವಿವರವಾದ ಬರಹ ಶ್ರೀಮಾನ್.ಇಲ್ಲೊಂದು ಮಾತು ಛಾಯಾಗ್ರಾಹಕ ದಿ. ಆರ್.ಎನ್.ಕೆ ಹಲವು ನಿರ್ದೇಶಕರ ಮೊದಲ ಚೆತ್ರಗಳ ಛಾಯಾಗ್ರಾಹಕ. ಅವರು ಕನ್ನಡದಲ್ಲಿ

    ಚಲನಚಿತ್ರ ಛಾಯಾಗ್ರಹಣಕ್ಕೆ ಸಂಬಂಧಪಟ್ಟಂತೆ ಸರಳವಾದ ಪುಸ್ತಕ ಬರರದಿದ್ದಾರೆ.

    ReplyDelete
    Replies
    1. ಛಾಯಗ್ರಾಹಕರ ಅನೇಕ ಮುತ್ತುಗಳಲ್ಲಿ ಅರ್ ಎನ್ ಕೆ ಒಬ್ಬರು. ನಿಮ್ಮ ಪ್ರತಿಕ್ರಿಯೆಯಲ್ಲಿ ಸಿಕ್ಕ ಮಾಹಿತಿ ನಿಜಕ್ಕೂ ಒಂದು ಮುತ್ತಿನಂಥಹ ಮಾಹಿತಿ. ಧನ್ಯವಾದಗಳು ಬದರಿ ಸರ್

      Delete
  2. ಸವಿವರ ಶ್ರೀಕಾಂತ್... ನಿಮಗೊಂದು ಸಲಾಮು... ಬೆಳ್ಳಿಮೋಡ ಚಿತ್ರವನ್ನು ಅದೆಷ್ಟು ಬಾರಿ ನೋಡಿದ್ದೇನೋ.. ನನಗೆ ತುಂಬಾ ಇಷ್ಟವಾದ ಚಿತ್ರ.

    ReplyDelete
    Replies
    1. ಪುಟ್ಟಣ್ಣ ಅವರನ್ನು ನಾಯಕಿ ಕೇಂದ್ರೀಕೃತ ಚಿತ್ರಗಳ ನಿರ್ದೇಶಕ ಎನ್ನುತ್ತಾರೆ. ಆದರೆ ನನ್ನ ಮನಸ್ಸಿಗೆ ಈ ಮಾತು ಒಪ್ಪುವುದಿಲ್ಲ. ಕಾರಣ ಅವರ ಎಲ್ಲ ಚಿತ್ರಗಳಲ್ಲೂ ಗಂಡು ಪಾತ್ರಧಾರಿ ಒಂದು ವಿಶಿಷ್ಟ ಪಾತ್ರ ಮಾಡೇ ಇರುತ್ತಾರೆ. ಬೆಳ್ಳಿ ಮೋಡದಲ್ಲಿ ಕಲ್ಯಾಣ್, ಕಥಾಸಂಗಮದಲ್ಲಿ ರಜನಿ ಮತ್ತು ಎಂ ಎಸ ಉಮೇಶ್, ಹೀಗೆ ಅನೇಕ ಉದಾಹರಣೆಗಳು ಸಿಗುತ್ತವೆ. ಸುಂದರ ಪ್ರತಿಕ್ರಿಯೆ ನಿಮ್ಮದು ಧನ್ಯವಾದಗಳು ಅಕ್ಕಯ್ಯ

      Delete
  3. ಹಳೆ ಚಿತ್ರಗಳ ವ್ಯಾಮೋಹ ನನ್ನಲ್ಲಿ ಜಾಸ್ತಿಯಾಗುತ್ತಿರುವಂತಹ ಹೊತ್ತಿನಲ್ಲಿ ಇಂಥ ಒಂದು ಅದ್ಭುತ ಚಿತ್ರದ ಸುಂದರ ನಿರೂಪಣೆ ನಿಮ್ಮಿಂದ.. ಚಿತ್ರ ಅದೆಷ್ಟು ಚೆನ್ನಾಗಿದೆ ಅಂದಿದ್ದಿರೋ ಅಷ್ಟೇ ಚೆನ್ನಾಗಿದೆ ನಿಮ್ಮ ಬರಹ...ನಾನು ನೋಡಬೇಕಾಗಿರೋ ಚಿತ್ರಗಳ ಲಿಸ್ಟ್ ನಲ್ಲಿ ಈ ಚಿತ್ರವೂ ಸೇರಿದೆ.. ಧನ್ಯವಾದಗಳು ಅಣ್ಣಯ್ಯ..

    ReplyDelete
    Replies
    1. ಯಾವುದೇ ಭಾಷೆಯಲ್ಲಿ ಮುಂಚೆ ತಯಾರಾಗುತ್ತಿದ್ದ ಚಿತ್ರಗಳು ಸಂದೇಶಗಳ ಜೊತೆಗೆ ಒಂದು ಮುತ್ತಿನ ಚಿತ್ರವಾಗಿರುತಿತ್ತು. ಹಾಗಾಗಿಯೇ ಮನಸು ಮುದುಡಿದಾಗ,, ಇಲ್ಲವೇ ಅರಳಿದಾಗ ನನಗೆ ಸಿಗುವ ಮೊದಲ ಸ್ನೇಹಿತ ಈ ಚಿತ್ರಗಳು. ಸುಂದರ ಪ್ರತಿಕ್ರಿಯೆ ಪಿ ಎಸ್ ಧನ್ಯವಾದಗಳು

      Delete
  4. ಚಿಕ್ಕ ವಿವರವನ್ನು ಬಿಡದೆ ಬಹಳ ಸವಿವರವಾಗಿ ಬರೆದಿದ್ದೀರಿ.. ಬೆಳ್ಳಿಮೋಡದಂತಹ ಅಮೋಘ ಚಿತ್ರವನ್ನು ಮತ್ತೆ ನೊಡಿದ್ದಂತಾಯಿತು. ಚಿಕ್ಕ ವಯಸ್ಸಿನಲ್ಲಿ ಅಮ್ಮ ಸುಧಾದಲ್ಲಿ ಬರುತ್ತಿದ್ದ ಕಾದಂಬರಿ ಓದಲು ಹೇಗೆ ವಾರವೆಲ್ಲ ಚಡಪಡಿಸಿ ಕಾಯುತ್ತಿದ್ದರೋ ಹಾಗೆ ನಿಮ್ಮ ಮುಂದಿನ ಸಂಚಿಕೆಗೆ ಕಾತರದ ಕಾಯುವಿಕೆ. ಶುಭವಾಗಲಿ ..........

    ReplyDelete
    Replies
    1. ಸುಧಾ ಪ್ರಜಾಮತ ಇವುಗಳಲ್ಲಿ ಬರುವ ಧಾರಾವಾಹಿಗಳಿಗೆ ಕಾಯುತ್ತಿದ್ದ ಅನೇಕರಲ್ಲಿ ನಾನು ಒಬ್ಬ. ಓದಿನ ಹುಚ್ಚು ಹತ್ತಿಸಿದ್ದು ಈ ವಾರ ಪತ್ರಿಕೆಗಳು. ಈ ಚಿತ್ರದ ಬರೆದಷ್ಟು ಮುಗಿಯುವುದಿಲ್ಲ.. ಧನ್ಯೋಸ್ಮಿ ನಿವಿ.

      Delete
  5. ಈ ಚಿತ್ರವನ್ನ ಇನ್ನೂ ನೋಡಿಲ್ಲ ಶ್ರೀ ಸಾರ್.. ಯಾಕಾದ್ರೂ ನೋಡಿಲ್ವೋ ಅಂತ ಪರಿತಪಿಸಿಕೊಳ್ಳುವಂತೆ ಮಾಡಿದ ಚಿತ್ರ ಪರಿಚಯ.. ನಿಮ್ಮ ಬರಹಕ್ಕೆ ನನ್ನ ಸಲಾಂ ನ್ಯಾಯವಾಗಿ ತಟ್ಟುವ ಸಲುವಾಗಿಯಾದರೂ ಈ ಚಿತ್ರವನ್ನ ನಾನು ನೋಡಿಯೇ ತೀರುತ್ತೇನೆ.. :)

    ReplyDelete
    Replies
    1. ಕನ್ನಡ ಚಿತ್ರಗಳ ತೋಟದಲ್ಲಿ ಇಂತಹ ಅನೇಕ ಸುಮಧುರ ಹೂವಗಳು ಸದಾ ಸಿಗುತ್ತವೆ ಸತೀಶ್. ಖಂಡಿತ ನೋಡಿ. ಓದಿದಕ್ಕಾಗಿ, ಪ್ರತಿಕ್ರಿಯೆ ನೀಡಿದಕ್ಕಾಗಿ ಧನ್ಯವಾದಗಳು

      Delete
  6. ಕನ್ನಡ ನಾಡಿನ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ 1 9 6 6 ರ ಬೆಳ್ಳಿ ಮೋಡ ಚಿತ್ರದ ಬಗ್ಗೆ ನಿಮ್ಮ ಲೇಖನ ಬಹಳ ವಿಸ್ತೃತ ನೋಟವನ್ನೇ ನೀಡಿದೆ, ಒಂದು ವೇಳೆ ಪುಟ್ಟಣ್ಣ ಕಣಗಾಲ್ ಬದುಕಿದ್ದರೆ ಖಂಡಿತಾ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು, ಚಿತ್ರದಲ್ಲಿನ ಆರೋ ಹಾಡುಗಳೂ ಅಮರವಾದ ಹಾಡುಗಳೇ, ತ್ರಿವೇಣಿ ಯವರ ಕಥೆಗೆ ಚಿನ್ನದ ಚಿತ್ತಾರದ ಲೇಪನ ನೀಡಿ ಕನ್ನಡಿಗರ ಪಾಲಿಗೆ ಉಡುಗೊರೆ ನೀಡಿದ ಕೀರ್ತಿ ಪುಟ್ಟಣ್ಣ ಅವರದು, ಹಾಗು ಈ ಚಿತ್ರಕ್ಕೆ ಉತ್ತಮ ಚಿತ್ರವೆಂದು ಕರ್ನಾಟಕ ರಾಜ್ಯ ಪ್ರಶಸ್ತಿ ಸಿಕ್ಕಿದೆ . ಬಹಳ ಉತ್ತಮ ಕೆಲಸ ಮಾಡುತ್ತಿರುವ ನಿಮ್ಮ ಪಯಣದಲ್ಲಿ ನಾವೆಲ್ಲರೂ ಇದ್ದೆವೆ. ನಿಮಗೆ ಅಭಿನಂದನೆಗಳು ಶ್ರೀಕಾಂತ್ , ಪಯಣ ಸಾಗಲಿ, ಮುಂದೆ ಹೋಗಲಿ ಪುಟ್ಟಣ ಅವರು ಅಮರವಾಗಲಿ.

    ReplyDelete
    Replies
    1. ಒಹ್ ಒಹ್ ಬಾಲೂ ಸರ್ ನಿಮ್ಮ ಪ್ರತಿಕ್ರಿಯೆಯಿಂದ ನಾಚಿಕೆಯಿಂದ ಸಂಕೋಚವಾಗುತ್ತಿದೆ . ಅವರು ನೀಡಿದ ಅಮೋಘ ಚಿತ್ರಗಳ ಬಗ್ಗೆ ಈ ಬಾಲ ಭಾಷೆ ಬಾಲಕ ನೀಡುತ್ತಿರುವ ವಿವರಣೆಯ ಬಗ್ಗೆ ನನಗೆ ಸಣ್ಣ ಕಂಪನ ಉಂಟು ಮಾಡುತಿತ್ತು. ಅನಿಸಿದ್ದನ್ನ ಬರೆದು ಬಿಡೋಣ ಎಂದು ಬರೆದುಬಿಟ್ಟೆ. ನಿಮ್ಮ ಪ್ರತಿಕ್ರಿಯೆ ಉತ್ಸಾಹ ತುಂಬುತ್ತಿದೆ. ಧನ್ಯವಾದಗಳು ಬಾಲೂ ಸರ್

      Delete