Sunday, July 12, 2020

ಆಶಾಪಾಶವೆಂಬ ವಲ್ಮೀಕದಲ್ಲಿ ಇರಬಾರದೆಂದು ಸಾರಿದ ವಾಲ್ಮೀಕಿ (1963) (ಅಣ್ಣಾವ್ರ ಚಿತ್ರ ೩೪ / ೨೦೭)

ರಾಮಾಯಣ ಮಹಾಭಾರತ ನಮ್ಮ ಪ್ರಪಂಚದ ಎರಡು ಅದ್ಭುತ ಕಾವ್ಯಗಳು..

ರಾಮಾಯಣ ಕಾವ್ಯವನ್ನು ರಚಿಸಿದ ಕಿರಾತನಾಗಿದ್ದ ವಾಲ್ಮೀಕಿಯ ಕುರಿತಾದ ಚಿತ್ರವಿದು.  ದೇವರ್ಷಿಯ ಶಾಪಗ್ರಸ್ತ ಮಗನಾಗಿದ್ದ ಈತ ಕಿರಾತನಾಗಿ ಭುವಿಯಲ್ಲಿ ಜನ್ಮ ತಾಳುತ್ತಾನೆ. ಕುಲಕಸುಬೆಂಬಂತೆ ದಾರಿ ಹೋಕರನ್ನು ಸುಲಿದು, ಕೊಂದು ದೋಚುವ ಗುಂಪಿನ ನಾಯಕ ಈತ.


ಒಮ್ಮೆ ಕಾಡಿನಲ್ಲಿ ಬರುತ್ತಿದ್ದ ರಾಜಕುಮಾರಿ ಮತ್ತು ಆಕೆಯ ಸಖಿಯರನ್ನು ದೋಚಿದಾಗ.. ಕಿರಾತನ ರೂಪಿಗೆ ಮಾರು ಹೋಗುತ್ತಾಳೆ.. ಅರಮನೆಯಲ್ಲಿ ದಾರಿಗಳ್ಳರಿಂದ ಕಿರಾತನೇ ರಕ್ಷಿಸಿದ್ದು ಎಂದು ಸುಳ್ಳು ಹೇಳಿ.. ಆತನಿಗೆ ಗೌರವ ಕೊಡಿಸುತ್ತಾಳೆ.. ಆದರೆ ಸೇನಾಧಿಪತಿ ಕಿರಾತನನ್ನು ಗುರುತು ಹಿಡಿದು.. ಇವನೇ ದಾರಿಗಳ್ಳ ಅಂತ ಗೊತ್ತಾದಾಗ ರಾಜ ಮರಣ ದಂಡನೆ ಶಿಕ್ಷೆ ವಿಧಿಸುತ್ತಾನೆ.


ಮೋಹಿತಳಾದ ರಾಜಕುಮಾರಿ ಕಿರಾತ ತಪ್ಪಿಸಿಕೊಂಡು ಹೋಗಲು ಸಹಾಯ ಮಾಡುತ್ತಾಳೆ.. ತಪ್ಪಿಸಿಕೊಳ್ಳುವ ಕಿರಾತ.. ಬೆಟ್ಟದಿಂದ ನೀರಿಗೆ ಧುಮುಕುತ್ತಾನೆ .. ಪೆಟ್ಟಾಗಿ ಬಿದ್ದ ಕಿರಾತನನ್ನು.. ಕಿರಾತ ಗುಂಪಿನ ಇನ್ನೊಬ್ಬಳು ರಕ್ಷಿಸುತ್ತಾಳೆ.. ಮತ್ತೆ ಅವನಲ್ಲಿ ಅನುರಕ್ತಳಾಗುತ್ತಾಳೆ..

ದೃಶ್ಯ ಜೋಡಣೆ ಚೆನ್ನಾಗಿದೆ 
ಇತ್ತ ರಾಜಕುಮಾರಿ ಕಿರಾತನನ್ನು ಹುಡುಕಿಕೊಂಡು ಕಾಡಿಗೆ ಬಂದಾಗ.. ಅವನು ಇನ್ನೊಬ್ಬಳಲ್ಲಿ ಅನುರಕ್ತವಾಗಿರುವ ವಿಷಯ ತಿಳಿದು ಬೇಸರಗೊಳ್ಳುತ್ತಾಳೆ.. ತನ್ನ ತಂದೆಯಲ್ಲಿ ತನ್ನ ಪ್ರೀತಿಯನ್ನು ಅರಿಕೆ ಮಾಡಿಕೊಂಡಾಗ ಆತ ಕಿರಾತನ ಕುಟುಂಬದ ಬಳಿ ಕೇಳಿಕೊಳ್ಳುತ್ತಾನೆ.. ಆದರೆ ಕಿರಾತ ತನ್ನನ್ನು ರಕ್ಷಿಸಿದವಳನ್ನು ಮದುವೆಯಾಗಿರುತ್ತಾನೆ..

ಆಗ ರಾಜಕುಮಾರಿ ನಾ  ವಿರಹ ವೇದನೆಯಿಂದ ಒದ್ದಾಡಿದ ಹಾಗೆ.. ನೀನು ವಿರಹವೇದನೆಯಿಂದ ನಶಿಸಿಹೋಗು ಎಂದು ಶಾಪ ಕೊಟ್ಟು ಮೃತಳಾಗುತ್ತಾಳೆ..

ಮುಂದೆ ಕಿರಾತ ಪ್ರೀತಿಯನ್ನು ತೋರಿಸುವ ಬರದಲ್ಲಿ ನಾಗರತ್ನ ಮಾಲೆ  ತಂದು ಕೊಡುತ್ತೇನೆ ಎಂದು ಮಾತು ಕೊಟ್ಟು.. ರತ್ನವನ್ನು ಸಂಗ್ರಹಿಸುವುದಕ್ಕಾಗಿ ಭುವಿಯ ಹಾವನ್ನೆಲ್ಲ ಕೊಂದರೂ ಸಿಗೋದಿಲ್ಲ.. ಹಾವುಗಳೆಲ್ಲ ನಶಿಸಿ ಹೋಗುತ್ತಿರುವುದನ್ನು ಕಂಡು ವಿಷ್ಣು.. ನಾರದನ ಮೂಲಕ ಕಿರಾತನಿಗೆ ಜ್ಞಾನೋದಯವಾಗಿಸಲು ಉಪಾಯ ಮಾಡುತ್ತಾನೆ..









ಮಹಾಲಕ್ಷ್ಮಿ ಮೂರ್ತಿಯಲ್ಲಿದ್ದ ನಾಗರತ್ನ ಮಾಲೆಯನ್ನು ಹೊತ್ತೊಯ್ಯುವಾಗ ನಾರದ ಅಡ್ಡಿ ಬಂದು..  ನಿನ್ನ ಪಾಪ ಪುಣ್ಯಗಳಲ್ಲಿ ನಿನ್ನ ತಂಡ ಪಾಲು ಪಡೆಯುತ್ತದೆಯಾ ಎಂದು ಕೇಳಲು ಹೇಳುತ್ತಾನೆ.. ಆಗ ಅವನ ತಂಡದವರು, ತನ್ನ ಹೆತ್ತವರು, ಕೈ ಹಿಡಿದ ಮಡದಿ ಎಲ್ಲರೂ ಪಾಪದಲ್ಲಿ ಪಾಲು ತೆಗೆದುಕೊಳ್ಳಲು ಹಿಂದೆ ಸರಿದಾಗ.. ಅವನಿಗೆ ಜ್ಞಾನೋದಯವಾಗಿ.. ನಾರದನ ಮಾತಿನಂತೆ ನಾರಾಯಣ ಧ್ಯಾನ ಮಾಡುತ್ತಾ ತಪಸ್ಸಿಗೆ ಕೂರುತ್ತಾನೆ.. ಅದನ್ನು ಕಂಡ ಆತನ ಮಡದಿ ಕೂಡ ಧ್ಯಾನ ಮಾಡುತ್ತಾ .. ವಿಷ್ಣುವಿನ ಆಶೀರ್ವಾದದಂತೆ ಭುವಿಯನ್ನು ತ್ಯಜಿಸಿ ಸ್ವರ್ಗಕ್ಕೆ ಹೋಗುತ್ತಾಳೆ..




ಇತ್ತ ಕಿರಾತ ವರ್ಷಾನುಗಟ್ಟಲೆ ನಾರಾಯಣ ಧ್ಯಾನ ಮಾಡುತ್ತಲೇ ಇರುತ್ತಾನೆ.. ಆಗ ನಾರದ ಮತ್ತೆ ಬಂದು ರಾಮ ಮಂತ್ರ ಜಪಿಸಲು ಉಪದೇಶಿಸುತ್ತಾನೆ....


ಶಿವನು ಪ್ರತ್ಯಕ್ಷನಾಗಿ ವಲ್ಮೀಕ ಅಂದರೆ ಹುತ್ತದಲ್ಲಿ ಇದ್ದವನಾಗಿದ್ದರಿಂದ ವಾಲ್ಮೀಕಿ ಎಂದು  ಹರಸುತ್ತಾನೆ.



ಒಮ್ಮೆ ಕಿರಾತನ ವೇಷದಲ್ಲಿ ವಿಷ್ಣು ಕ್ರೌ೦ಚ ಪಕ್ಷಿಗಳ ವೇಷದಲ್ಲಿದ್ದ ರಾಕ್ಷಸರನ್ನು ಸಂಹಾರ ಮಾಡುತ್ತಾನೆ.. ಇದನ್ನರಿಯದ ವಾಲ್ಮೀಕಿ ಆ ಪಕ್ಷಿಯ ಆರ್ತನಾದ ಕೇಳಲಾರದೆ.. ದುಃಖಪೂರಿತ ಶ್ಲೋಕ ಹೇಳುತ್ತಾನೆ.. ಅದೇ ರಾಮಾಯಣ ಕೃತಿಯ ರಚನೆಗೆ ಸ್ಪೂರ್ತಿಯಾಗುತ್ತದೆ..






ಇಷ್ಟು ಕತೆಯನ್ನು ಉತ್ತಮವಾಗಿ ನೋಡುವಂತೆ ಚಿತ್ರಿಸಿದವರು ನಿರ್ದೇಶಕ ಸಿ ಎಸ್ ರಾವ್..
ಜ್ಯೂಪಿಟರ್ ಪಿಕ್ಚರ್ಸ್ ಲಾಂಛನದಲ್ಲಿ ಎಸ್ ಕೆ ಹಬೀಬುಲ್ಲಾ ನಿರ್ಮಿಸಿದ್ದಾರೆ.

ಚಿತ್ರದ ಅಂತ್ಯದಲ್ಲಿ ಇಡೀ ರಾಮಾಯಣವನ್ನು ತೋರಿಸಿದ್ದಾರೆ..

ನಾಗರತ್ನ ಮಾಲೆ ತೆಗೆದುಕೊಳ್ಳುವ ದೃಶ್ಯ.. ಕಿರಾತನ ಇಬ್ಬರೂ ಪ್ರೇಯಸಿಯರನ್ನು ಬೇರೆ ಬೇರೆ ದೃಶ್ಯಗಳನ್ನು ಒಂದೇ ಫ್ರೇಮಿನಲ್ಲಿ ತೋರಿಸಿರುವುದು ಎಲ್ಲವೂ ಸೊಗಸು.

ಘಂಟಸಾಲ ಅವರ ಸಂಗೀತದಲ್ಲಿ ಜಲಲ ಜಲಲ ಜಲಧಾರೆ ಮತ್ತು ಮನಸೇ ಮಹಾ ಬಯಕೆ ಹಾಡುಗಳು  ಗಮನ ಸೆಳೆಯುತ್ತದೆ.. ಸಾಹಿತ್ಯ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರದ್ದು..

ಘಂಟಸಾಲ, ಸುಶೀಲ, ಲೀಲಾ, ಜಾನಕೀ, ಕೋಮಲ =ಮ್ ರಾಘವುಲು, ಸತ್ಯಂ ಹಿನ್ನೆಲೆ ಗಾಯಕರಾಗಿದ್ದಾರೆ.

ಛಾಯಾಗ್ರಹಣ ಎಂ ಎ ರೆಹಮಾನ್ ಮತ್ತು ಪಿ ದತ್ತಾತ್ರೇಯ..

ಇನ್ನೊಂದು ವಿಶೇಷವೆಂದರೆ ಸಿದ್ದಲಿಂಗಯ್ಯನವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ರಾಜ್ ಕುಮಾರ್ ಅವರ ಅಭಿನಯ ಎತ್ತರಕ್ಕೆ ಏರುತ್ತಿರುವ ಹಂತವನ್ನು ಇಲ್ಲಿ ಗಮನಿಸಬಹುದು.. ದಾರಿಗಳ್ಳನಾಗಿ ಇರಬೇಕಾದ ಕೋಪ, ದರ್ಪ, ಪ್ರೇಮಿಯಾಗಿ ಇರಬೇಕಾದ ನವಿರು ಭಾವ, ಪತ್ನಿಯ ಆಸೆಯನ್ನು ಈಡೇರಿಸುವ ಪತಿಯಾಗಿ ಇರುವ ಅಹಂ..  ಮಾರ್ಪಾಡಾದ ಮೇಲೆ ತಾಳ್ಮೆಯ ಭಾವ, ತಪಸ್ವಿ ಮನಸ್ಸು ಎಲ್ಲದರಲ್ಲೂ ಮಿಂಚುತ್ತಾರೆ.. ಸಂಭಾಷಣೆಯನ್ನು ಕೇಳೋದೇ ಒಂದು ಖುಷಿ..
ಅವರಿರದ ಚಿತ್ರಗಳನ್ನು ಊಹಿಸಿಕೊಳ್ಳಲು ಕಷ್ಟವಾಗುತ್ತಿರುವ ಸನ್ನಿವೇಶ ಸೃಷ್ಟಿಯಾಗುತ್ತಿರುವ ಸೂಚನೆಗಳು ಕಾಣಿಸಲು ಶುರುವಾಗುತ್ತಿದೆ.. ಅಭಿನಯ, ನೃತ್ಯ, ಹೊಡೆದಾಟ, ಸಂಭಾಷಣೆ ಹೇಳು ಭಾವ ಎಲ್ಲದರಲ್ಲಿಯೂ ಗಮನ ಸೆಳೆಯುತ್ತಾರೆ ..



ಉಳಿದ ಪಾತ್ರಗಳಲ್ಲಿ ನಟಿಸಿರುವ ಲೀಲಾವತಿ, ನರಸಿಂಹರಾಜು, ಎಂ ಎನ್ ಲಕ್ಷ್ಮೀದೇವಿ, ಮತ್ತು ಇತರ ಸಹಕಲಾವಿದರ ಅಭಿನಯ ಚಿತ್ರಕ್ಕೆ ಪೂರಕವಾಗಿದೆ.





ಚಿತ್ರವೂ ಎಲ್ಲೂ ಬೋರ್ ಆಗದೆ ನೋಡಿಸಿಕೊಂಡು ಹೋಗುತ್ತದೆ..

ಮುಂದೆ ಇನ್ನೊಂದು ಚಿತ್ರ. ಇನ್ನೊಂದು ಬರಹ.. !

Wednesday, July 8, 2020

ಹೊಳೆಯುವ ತೇಜಸ್ಸಿನ ತೇಜಸ್ವಿನಿ (1962) (ಅಣ್ಣಾವ್ರ ಚಿತ್ರ ೩೩ / ೨೦೭)

ಹೆಣ್ಣು ಮಕ್ಕಳಿಗೆ ಅಂತಹ ಸ್ವತಂತ್ರ ಇಲ್ಲ ಎನ್ನುವ ಆ ಕಾಲದಲ್ಲಿಯೇ ಮಹಿಳಾಮಣಿಗಳು ನಿರ್ಮಾಪಕಿಯರಾಗಿದ್ದು ವಿಶೇಷ.

ಈ ಚಿತ್ರವನ್ನು  ತಮ್ಮ ಸರಳ ಅಭಿನಯಕ್ಕೆ ಹೆಸರಾದ ಪಂಡರಿಬಾಯಿ ನಿರ್ಮಿಸಿದ್ದಾರೆ. ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಚ್ ಎಲ್ ಎನ್ ಸಿಂಹ ಅವರ ಚಿತ್ರಕೆಥೆ, ಸಂಭಾಷಣೆ ,ನಿರ್ದೇಶನ , ಎಂ ವೆಂಕಟರಾಜು ಅವರ ಸಂಗೀತ, ಆರ್ ಸಂಪತ್ ಮತ್ತು ಬಿ ದೊರೈರಾಜ್ ಅವರ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಪಿಬಿ ಶ್ರೀನಿವಾಸ್, ಪಿ ನಾಗೇಶ್ವರ್ ರಾವ್, ಪಿ ಲೀಲಾ, ಎಸ್ ಜಾನಕಿ, ಸ್ವರ್ಣಲತಾ ಹಿನ್ನೆಲೆ ಗಾಯನ ಮಾಡಿದ್ದಾರೆ.


ಪಾಳೇಗಾರರ ಪಾಳೆಪಟ್ಟು, ಅದರ ಕುತಂತ್ರ, ರಾಜಕೀಯ, ಮೋಸ, ವಂಚನೆ, ಮಮತೆ, ಪ್ರೀತಿ ಈ ವಿಷಯಗಳನ್ನು ಚೆನ್ನಾಗಿ ಕಲೆಸಿದ ಚಿತ್ರವಿದು.

ಪದ್ಮ ಎಂಬ ಪಟ್ಟ ಮಹಿಷಿ ಇರುವ ಶಿವಪ್ಪನಾಯಕ ಎನ್ನುವ ರಾಜನಿಗೆ ರಾಮನಾಯಕ ಎನ್ನುವ ಬೇಜವಾಬ್ಧಾರಿ ವಿಲಾಸೀ ತಮ್ಮ ಇರುತ್ತಾನೆ. ಆತನಿಗೆ ಸದಾ ಅಣ್ಣನ ಸಿಂಹಾಸನದ ಮೇಲೆ ಕಣ್ಣು. ಅವನ ಆಸೆಯ ಬೆಂಕಿಗೆ ತುಪ್ಪ ಸುರಿಯುವಂತೆ ತುಂಗಾಮಯ್ಯ ಇರುತ್ತಾನೆ.. ಆತನಿಗೆ ಸಹಾಯಕಳಾಗಿ ತಿಮ್ಮು..

ಇವರೆಲ್ಲರ  ಕುತಂತ್ರಗಳು ನಾಗೇಂದ್ರ ದೈವದ ಅನುಗ್ರಹದಿಂದ ಹೇಗೆ ವಿಫಲವಾಗುತ್ತವೆ ಎನ್ನವುದೇ ಚಿತ್ರದ ತಿರುಳು. ಆ ದೈವ ಅನುಗ್ರಹಕ್ಕೆ ಸಾಥಿಯಾಗಿ ರಂಗನಾಯಕಿ..

ಇತಿಹಾಸದ ಕೆಲವು ಪುಟಗಳನ್ನು ತೆರೆಗೆ ತಂದಿರುವ ಈ ಚಿತ್ರದಲ್ಲಿ ಭಾವನಾತ್ಮಕತೆಗೆ ಜಾಸ್ತಿ ಒತ್ತು ನೀಡಿದ್ದಾರೆ.. ಸಂಬಂಧಗಳಿಗೆ ಪ್ರಾಮುಖ್ಯತೆ  ನೀಡಿದ್ದಾರೆ..

ಈ ಚಿತ್ರ ಕೆಲವು ವಿಶಿಷ್ಟ ಕಾರಣಗಳಿಗೆ ಇಷ್ಟವಾಗುತ್ತದೆ.. ಸಾಮಾನ್ಯ ನರಸಿಂಹರಾಜು ಹಾಸ್ಯ ಪಾತ್ರಗಳಿಗೆ ಹೆಸರುವಾಸಿ.. ಹಾಸ್ಯ ಮಾಡುತ್ತಲೇ ಚಿತ್ರದ ನಾಯಕನಿಗೆ ಸಹಾಯ ಮಾಡುತ್ತಾ ಖಳನಾಯಕನಿಗೆ ಚಳ್ಳೆ ಹಣ್ಣು ತಿನ್ನಿಸುವ ಪಾತ್ರಗಳು ಇದುವರೆಗೂ ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ನೋಡಿದ್ದು.. ಆದರೆ ಈ ಚಿತ್ರದಲ್ಲಿ ಅವರ ಪಾತ್ರ ವಿಶೇಷವಾಗಿದೆ.. ಎರಡನೇ ನಾಯಕ ರಾಜಾಶಂಕರ್ ಅವರ ಕಿವಿ ತುಂಬುತ್ತ ರಾಜಕೀಯ ಮಾಡುವ ಪಾತ್ರದಲ್ಲಿ ಮಿಂಚಿದ್ದಾರೆ.. ಅವರಿಗೆ ಸಾತ್  ನೀಡುವ ಎಂ ಎನ್ ಲಕ್ಷ್ಮೀದೇವಿಯ ಆನೆಯ ಹುಚ್ಚು ನಗೆ ತರಿಸುತ್ತದೆ.



ಶಿವಪ್ಪನಾಯಕನ ಪಾತ್ರದಲ್ಲಿ  ರಾಜ್ ಕುಮಾರ್ ಅವರ ಅಭಿನಯ ಸೊಗಸಾಗಿದೆ..ಆರಂಭದ ದೃಶ್ಯದಲ್ಲಿಯೇ  ಪಂಡರೀಬಾಯಿಯವರನ್ನು ನೋಡುತ್ತಲೇ ಅವರ ಸೌಂದರ್ಯಕ್ಕೆ ಮಾರು ಹೋಗಿ ಕಲ್ಯಾಣಕ್ಕೆ ಪ್ರಸ್ತಾಪ ಇಡುವ ದೃಶ್ಯದಲ್ಲಿ ಅವರ ಅಭಿನಯ ಇಷ್ಟವಾಗುತ್ತದೆ.



ಕೀಳು ಜಾತಿ ಹೆಣ್ಣು ನಾನು ಎಂದಾಗ, ಅದಕ್ಕೆ ಸಮಜಾಯಿಸಿ ಕೊಡುವ ರೀತಿ, ಆಕೆಯನ್ನು ವಿವಾಹ ಮಾಡಿಕೊಂಡು ತನ್ನ ಹೆಂಡತಿ ಪದ್ಮಳಿಗೆ ಅಂದರೆ ಆದವಾನಿ ಲಕ್ಷ್ಮೀದೇವಿಯವರ ಜೊತೆಯಲ್ಲಿ ಸುಗಮವಾಗಿ ಸಾಗುವ ಸಂಸಾರದ ಸಾರಥಿಯಾಗಿ ರಾಜ್ ಕುಮಾರ್ ಅವರ ಅಭಿನಯ ಸೊಗಸು.

ರಾಜನಾಗಿ, ಪತಿಯಾಗಿ,  ದಕ್ಷ ಅಧಿಕಾರಿಯಾಗಿ ಅವರ ಪಾತ್ರ ಪೋಷಣೆ ಚೆನ್ನಾಗಿದೆ.. ತಿರುವುಗಳು ಕಂಡು, ರಾಜಕೀಯ ಕುತಂತ್ರಗಳಿಗೆ ಬಲಿಯಾಗಿ ಕಣ್ಣು ಕಳೆದುಕೊಂಡರು ತಮ್ಮನ ಮೇಲಿನ ಅಭಿಮಾನ ಕಳೆದುಕೊಳ್ಳದೆ ಇರುವುದು, ಚಿತ್ರದ ಅಂತ್ಯದಲ್ಲಿನ ರೋಷಭರಿತ ಅಭಿನಯದಲ್ಲಿ ಅವರನ್ನು ನೋಡುವುದೇ ಖುಷಿ.

ಅನೇಕ ಚಿತ್ರಗಳ ನಂತರ ತಮ್ಮನ್ನು ಬೆಳ್ಳಿ ತೆರೆಗೆ ಪರಿಚಯಿಸಿದ ಎಚ್ ಎಲ್ ಎನ್ ಸಿಂಹ ಅವರ ನಿರ್ದೇಶನದಲ್ಲಿ ಅಭಿನಯಿಸಿರುವುದು ವಿಶೇಷ.

ನಿರ್ಮಾಪಕಿಯಾಗಿ ಪಂಡರಿಬಾಯಿ ಹಾಗೂ ರಂಗನಾಯಕಿಯಾಗಿ ಪಂಡರಿಬಾಯಿಯವರ ಅಭಿನಯ ಸುಂದರವಾಗಿದೆ. ತಮ್ಮ ಪಾತ್ರಕ್ಕೆ ಸಿಕ್ಕಷ್ಟೇ ಅವಕಾಶ ಇತರ ಪಾತ್ರಗಳಿಗೂ  ನೋಡಿಕೊಂಡಿರುವುದು ಅವರ ಚಿತ್ರ ಪ್ರೇಮಕ್ಕೆ ಸಾಕ್ಷಿ. ಮಮತಾಮಯಿ ಪಾತ್ರದಲ್ಲಿ ಎಲ್ಲರನ್ನೂ ಸರಿ ದಾರಿಗೆ ತರುವ ಪಾತ್ರದಲ್ಲಿ ಆವರಿಸಿಕೊಂಡಿದ್ದಾರೆ.






ಆಡಳಿತ ಅಧಿಕಾರಿಯಾಗಿ ರಾಮಚಂದ್ರ ಶಾಸ್ತ್ರೀ ಪಾತ್ರಕ್ಕೆ  ತಕ್ಕ ಅಭಿನಯ ನೀಡಿದ್ದಾರೆ.. ಪುಟ್ಟ ಪಾತ್ರದಲ್ಲಿ ಗಣಪತಿ ಭಟ್ ಮತ್ತು ಹನುಮಂತ ಚಾರ್ ಗಮನಸೆಳೆಯುತ್ತಾರೆ.. ಹಾಗೆಯೆ ಘಟವಾಣಿಯಾಗಿ ರಮಾದೇವಿ ಮತ್ತು ಶಾಂತ ಸ್ವಭಾವದ ದೇಶಪ್ರೇಮಿಯಾಗಿ ಪಾಪಮ್ಮ ಉತ್ತಮ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ




ಅಶ್ವಥ್ ಮತ್ತು ಬಾಲಕೃಷ್ಣ ಒಂದೇ ದೃಶ್ಯದಲ್ಲಿ ಬಂದು ಹೋಗುತ್ತಾರೆ..



ಚಿತ್ರದುದ್ದಕ್ಕೂ ಗಮನ ಸೆಳೆಯುವುದು ರಾಜಾಶಂಕರ್ ಮತ್ತು ನರಸಿಂಹರಾಜು ಅವರ ಜುಗಲ್ ಬಂದಿ ಮಾತುಗಳು.. ಜೊತೆಯಲ್ಲಿ ಚಿಂದೋಡಿ ಲೀಲಾ ಅವರ ಚುರುಕು ಅಭಿನಯ ಹಾಗೂ ರಾಜಶ್ರೀ ಅವರ ಮುಗ್ಧ ಸೌಂದರ್ಯ.

ಶಿವಪ್ಪನಾಯಕನ ದಾಯಾದಿಯಾಗಿ ಡಿಕ್ಕಿ ಮಾಧವರಾವ್ ಪುಟ್ಟ ಪಾತ್ರದಲ್ಲಿ ಅಬ್ಬರಿಸಿದ್ದಾರೆ..



ನಾವೇನೇ ಮಾಡ ಹೋದರು ದೈವ ಪ್ರೇರಣೆ ಮತ್ತು ದೈವ ಸಹಾಯ ಇರಲೇಬೇಕು.. ಅದೇ ನಮ್ಮನ್ನು ಕಾಪಾಡುತ್ತದೆ  ಮತ್ತು ತಾಳ್ಮೆ ಕಳೆದುಕೊಳ್ಳದೆ ಎಲ್ಲವನ್ನೂ ನಿಭಾಯಿಸುವ ಕಲೆ ಬೆಳೆಸಿಕೊಳ್ಳಬೇಕು ಎನ್ನುವ ನೀತಿ ಈ ಚಿತ್ರದಲ್ಲಿ ಹರಡಿಕೊಂಡಿದೆ..

ಇನ್ನೊಂದು ಚಿತ್ರದ ಜೊತೆಗೆ ರಾಜ್ ಕುಮಾರ್ ಅವರ ಚಿತ್ರಗಾಥೆಯನ್ನು ಮುಂದುವರೆಸೋಣ.. !

Wednesday, July 1, 2020

ವಿಧಿಯೇ ಬಾಸ್.. ವಿಧಿವಿಲಾಸ (1962) (ಅಣ್ಣಾವ್ರ ಚಿತ್ರ ೩೨ / ೨೦೭)

ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ ಅಂತ ಡಿವಿಜಿ ಅಜ್ಜ ಶತಮಾನಗಳ ಹಿಂದೆ ತಮ್ಮ ಮಂಕುತಿಮ್ಮನ ಕಗ್ಗದ ಸರಣಿಯೊಂದರಲ್ಲಿ ಹೇಳಿದ್ದರು. 

 ವಿಧಿಲಿಖಿತದ ಮುಂದೆ ಬೇರೇನೂ ನೆಡೆಯದು ಎನ್ನುವ ತಳಹದಿಯೊಂದಿರುವ ಚಿತ್ರವಿದು.. ವಿಶೇಷ ಎಂದರೆ.. ಆ ವಿಚಾರವನ್ನು ಮುಂದಿಟ್ಟುಕೊಂಡು.. ಅದರಿಂದ ಕೊಂಚವೂ ಆಚೀಚೆ ಹೋಗದೆ ಚಿತ್ರವನ್ನು ನಿರೂಪಿಸಿರುವುದು.. ಪ್ರತಿದೃಶ್ಯವೂ, ಪ್ರತಿ ಮಾತು, ಪ್ರತಿ ಹಾಡು ಹಾಕಿಕೊಂಡಿರುವ ಚೌಕಟ್ಟನ್ನು ದಾಟದೆ ಇರೋದು. 


ರಾಜನಿಗೆ ಬೆಳಗಿನ ಜಾವ ಸ್ವಪ್ನದ ಅನುಭವವಾಗುತ್ತದೆ.. ಕಾಡಿನಲ್ಲಿ ಬೇಟೆಗೆ ಹೋದವನಿಗೆ ಹುಲಿ ಹೆದರಿಸುತ್ತದೆ.. ಅದನ್ನು ಸಾವರಿಸಿಕೊಂಡು ಮುಂದೆ ನೆಡೆದಾಗ.. ಒಂದು ಹಾವು ಕಾಣುತ್ತದೆ.. ದಾರಿ ಹೋಕನನ್ನು ಕಚ್ಚಿಕೊಂದ ಹಾವು ಹೆಣ್ಣಾಗಿ ಮಾರ್ಪಾಡಾಗುತ್ತದೆ.. ಅಚ್ಚರಿಯಿಂದ ಈ ವಿದ್ಯಮಾನಗಳನ್ನು ರಾಜ ಮರೆಯಿಂದ ನೋಡುತ್ತಿರುತ್ತಾನೆ.. 

ಅದೇ ದಾರಿಯಲ್ಲಿ ಇಬ್ಬರು ವಯಸ್ಕರು ಈ ಹೆಣ್ಣಿನ ವಯ್ಯಾರವನ್ನು ಕಂಡು.. ಇಬ್ಬರೂ ಮೋಹಿಸುತ್ತಾರೆ.. ಅವರಿಬ್ಬರಲ್ಲಿಯೇ ಜಗಳ ಶುರುವಾಗಿ ಹೊಡೆದಾಡಿ ಇಬ್ಬರೂ ಸಾಯುತ್ತಾರೆ.. 

ಅದನ್ನು ಕಂಡ ಆ ಹೆಣ್ಣು ಪಕ ಪಕ ನಗುವುದನ್ನು ಕಂಡು ರಾಜ ಕುಪಿತನಾಗಿ ಆ ಹೆಣ್ಣು ಮಾತಾಡಿಸಿ ಬಯ್ಯುತ್ತಾನೆ.. ಆಗ ಆ ಹೆಣ್ಣು ತಾನು ವಿಧಿಯೆಂದು.. ತಾನು ಎಣಿಸಿದ ಹಾಗೆ ಭುವಿಯಲ್ಲಿ ಘಟನೆಗಳು ನೆಡೆಯುವುದು ಎನ್ನುತ್ತಾಳೆ... 

ಕೆಟ್ಟ ಕುತೂಹಲದಿಂದ ವಿವರ ಕೇಳುತ್ತಾ, ಸವಾಲು ಹಾಕುತ್ತಾನೆ.. ಮತ್ತೆ ತನ್ನ ಮರಣದ ಬಗ್ಗೆ ಕೇಳುತ್ತಾನೆ.. ಆಗ ವಿಧಿ ಹೇಳುತ್ತದೆ.. ನೀ ಅತಿಯಾಗಿ ಪ್ರೀತಿಸುವ ನಿನ್ನ ಮಗಳ ಮಗನಿಂದ ಅಂದರೆ ನಿನ್ನ ಮೊಮ್ಮಗನಿಂದಲೇ ನಿನ್ನ ಸಾವು ಎಂದು ಹೇಳಿ ವಿಧಿ ಮಾಯವಾಗುತ್ತದೆ.. 

ಇದನ್ನೇ ಸವಾಲಾಗಿ ತೆಗೆದುಕೊಂಡು, ತನ್ನ ಮಗಳ ಮದುವೆಯ ಬಗ್ಗೆ ಯೋಚಿಸುವ ಮೊದಲೇ, ತನ್ನ ಮಗಳು ತನ್ನ ಸೇನಾಧಿಪತಿಯ ಮಗನೊಡನೆ ಪ್ರೀತಿಯ ಮಾಯೆಗೆ ಬಿದ್ದಿರುವ ವಿಚಾರ ತಿಳಿಯುತ್ತದೆ.. 

ಅದನ್ನು ತಪ್ಪಿಸಲು ಏನೇ ಮಾಡಿದರೂ ಅದು ಫಲಕಾರಿಯಾಗದೆ, ರಾಜ ಆ ಯುವಕನಿಗೆ ಕಠಿಣವಾದ ಎರಡು ಪರೀಕ್ಷೆಗಳನ್ನು ಒಡ್ಡಿ, ಅದರಲ್ಲಿ ಯಶಸ್ವಿಯಾದರೆ ತನ್ನ ಮಗಳನ್ನು ಕೊಡುವುದಾಗಿ ಹೇಳುತ್ತಾನೆ.. 


ಮೊದಲನೆಯದು ಕಲ್ಲಿನ ಗೊಂಬೆ ಕುಣಿಯಬೇಕು.. ಕಲ್ಲು ಗುಂಡು ಕರಗಬೇಕು.. 

ಆಗ ಆ ಯುವಕನಿಗೆ ಯೋಗಿಯ ಕೃಪಾಕಟಾಕ್ಷವಾಗಿ ಆ ಪರೀಕ್ಷೆಯಲ್ಲಿ ಗೆಲ್ಲುತ್ತಾನೆ.. 


ಎರಡನೆಯ ಪರೀಕ್ಷೆಯಲ್ಲಿ ಮಾಯಾವಿಯ ತಲೆ ತರಬೇಕೆಂಬುದು.. 

ಅದಕ್ಕಾಗಿ ರಾಜ್ಯ ಬಿಟ್ಟು ಹೊರಟಾಗ.. ಇತ್ತ ರಾಜನ ಮಗಳು ಮಾಲತಿ ದೇವಿಯನ್ನು ಬೇಡಿಕೊಳ್ಳಲು, ಆಕೆ, ಮೋಹಿನಿ ರಾಜ್ಯದಲ್ಲಿರುವ ಮೋಹಿನಿಯ ಬಳಿ ಕತ್ತಿ ಗುರಾಣಿ ತೆಗೆದುಕೊಂಡರೆ ಕಾರ್ಯ ಯಶಸ್ವಿಯಾಗುತ್ತದೆ ಎಂದು ಹೇಳುತ್ತಾರೆ.. 



ಅದನ್ನು ಹೇಗೋ ಆ ಯುವಕ ಮಾಧವನಿಗೆ ತಲುಪಿಸುವ ಮೊದಲು.. .. ರಾಜನಿಗೆ ತನ್ನ ಮಗಳು ಗರ್ಭಿಣಿಯಾಗಿರುವ ವಿಚಾರ ತಿಳಿಯುತ್ತದೆ.. ಮದುವೆಯಾಗದೆ ತಾಯಿಯಾಗುತ್ತಿರುವ ವಿಷಯ ತಿಳಿದು ಅವಮಾನವಾಗುತ್ತದೆ ಎಂದು ಕಾರಗೃಹ ಬಂಧನದಲ್ಲಿಡುತ್ತಾನೆ.. ಜನಿಸಿದ ಮಗುವನ್ನು ಕಾಡು ಪಾಲು ಮಾಡುತ್ತಾನೆ.. 

ಇತ್ತ ಮಾಧವ ತನ್ನ ಶಕಿಯುಕ್ತಿಯಿಂದ ಕತ್ತಿ ಗುರಾಣಿ ತೆಗೆದುಕೊಂಡು ಮಾಯಾವಿಯ ತಲೆ ಕಡಿದು ಹಾಕುತ್ತಾನೆ.. 

ಹಾದಿಯಲ್ಲಿ ಸಿಕ್ಕಿದ್ದ ಮಗುವನ್ನು ಪಕ್ಕದ ಊರಿನವ ತೆಗೆದುಕೊಂಡು ಹೋಗಿ ಸಾಕುತ್ತಾನೆ.. 

ಉಳಿದ ದೃಶ್ಯಗಳಲ್ಲಿ ಚಿತ್ರ  ಅಂತಿಮ ಹಂತಕ್ಕೆ ಬಂದು ರಾಜ ತನ್ನ ಮಗಳು ಮತ್ತು ಅಳಿಯನನ್ನು ಕೊಳ್ಳಲು ಪ್ರಯತ್ನ ಪಟ್ಟಾಗ.. ಅದು ಫಲಕಾರಿಯಾಗೋಲ್ಲ.. ಕತೆ ಮುಂದುವರಿದು, ಸಾಕಿದ ಮಗು ಬೆಟ್ಟದ ತುದಿಯಲ್ಲಿ ಕಟುಕರ ಕೈಯಲ್ಲಿ ಕೊಲ್ಲಬೇಕೆಂಬ ಗಡಿಬಿಡಿಯಲ್ಲಿ, ,, ಅದು ತನ್ನದೇ ಮೊಮ್ಮಗು ಎಂದು ಅರಿಯದ ರಾಜ.. ಅದನ್ನು ಕಾಪಾಡಲು ಹೋಗಿ ಬೆಟ್ಟದ ಮೇಲಿಂದ ಬಿದ್ದು ಪ್ರಾಣ ಹೋಗುವ ಸ್ಥಿತಿಗೆ ಬರುತ್ತಾನೆ.. ಆಗ ವಿಧಿಯು ಪ್ರತ್ಯಕ್ಷವಾಗಿ  ತಾನೇ ಗೆದ್ದೇ ಎಂದು ಹೇಳುತ್ತದೆ.. ಮಾಧವ ತನ್ನ ಮಗು ಹಾಗು ಮಡದಿಯೊಡನೆ ತನ್ನ ರಾಜ್ಯಕ್ಕೆ ಹೋಗುತ್ತಾನೆ.. 

ಇಡೀ ಚಿತ್ರ ಬೋರ್ ಆಗದಂತೆ ಚಿತ್ರಿಸಿದ್ದಾರೆ ಮತ್ತು ಕತೆಯಿಂದ ಅರೆ ಕ್ಷಣವೂ ಆಚೆಗೆ ಹೋಗೋದಿಲ್ಲ.. 

ಮಾಧವನಾಗಿ ರಾಜ್ ಕುಮಾರ್ ಲೀಲಾಜಾಲವಾಗಿ ಅಭಿನಯಿಸಿದ್ದಾರೆ.. ಆ ಪೋಷಾಕುಗಳಲ್ಲಿ, ಹಾಡುಗಳಲ್ಲಿ, ಕತ್ತಿ ವರಸೆಗಳಲ್ಲಿ, ಹೊಡೆದಾಟಗಳಲ್ಲಿ ಹಾಗೆ ಮೋಹಿನಿ ರಾಜ್ಯದಲ್ಲಿ ಅವರ ಅಭಿನಯ ಸೊಗಸಾಗಿದೆ.. 

ತಮಗೆ ಒದಗಿಬಂದ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸೋದು ಕರತಲಮಲಕವಾಗುತ್ತಿರುವುದು ಗೊತ್ತಾಗುತ್ತದೆ.. ದೃಶ್ಯ ಏನು ಅಂತ ಹೇಳಿದರೆ ಅದಕ್ಕೆ ಬೇಕಾಗಿರುವ ಆಂಗೀಕ ಅಭಿನಯ, ಮುಖಭಾವ, ಸಂಭಾಷಣೆ ಹೇಳುವ ಶೈಲಿ ಇಷ್ಟವಾಗುತ್ತದೆ.. 


ನಾಯಕಿಯಾಗಿ ಲೀಲಾವತಿ ಮಾಲತಿ ಪಾತ್ರದಲ್ಲಿ ಸೊಗಸಾದ ಅಭಿನಯ


ನಾಯಕನ ಗೆಳೆಯನ ಪಾತ್ರದಲ್ಲಿ ನರಸಿಂಹರಾಜು ಇಷ್ಟವಾಗುತ್ತಾರೆ.. ಇಬ್ಬರು ಬಜಾರಿ ಪಾತ್ರಗಳು 
ಎಂ ಎನ್ ಲಕ್ಷ್ಮೀದೇವಿ ಮತ್ತು ಜಯ ಅವರ ನಡುವೆ ಹೆಣಗಾಡುವ ಪಾತ್ರದಲ್ಲಿ ಮಿಂಚಿದ್ದಾರೆ. 




ಖಾಯಂ ಮೋಹಿನಿ ಪಾತ್ರಗಳಾಗುವತ್ತ ಹೆಜ್ಜೆ ಹಾಕುತ್ತಿರುವ ಹರಿಣಿ ಮುದ್ದಾಗಿ ಕಾಣುತ್ತಾರೆ


ರಾಜನ ಪಾತ್ರದಲ್ಲಿ ಅಶ್ವಥ್ ಗಮನ ಸೆಳೆಯುವ ಅಭಿನಯ.. ರಾಜನ ದರ್ಪ, ಅಹಂ, ಸಿಟ್ಟು, ಸೇಡಿನ ಮುಖಭಾವ.. ತಪ್ಪು ಒಪ್ಪಿಕೊಳ್ಳುವ ಅಭಿನಯ ಸೊಗಸಾಗಿದೆ.. 


ಸಣ್ಣ ಪಾತ್ರದಲ್ಲಿ ಉದಯಕುಮಾರ್ ಮನಸೆಳೆಯುತ್ತಾರೆ.. 

ನನ್ನ ಗಮನಕ್ಕೆ ಬಂದಿದ್ದು ಚಿತ್ರದ ಉತ್ತರಾರ್ಧದಲ್ಲಿ ಲೀಲಾವತಿ ಅವರ ಪಾತ್ರಕ್ಕೆ ಜಯಶ್ರೀ ಕಂಠದಾನ ಮಾಡಿದ್ದಾರೇನೋ ಅನಿಸುತ್ತದೆ. ಆದರೆ ಅದಕ್ಕೆ ಎಲ್ಲೂ ವಿವರಗಳು ಸಿಗುವುದಿಲ್ಲ.. 

ಮುರುಗನ್ ಪ್ರೊಡಕ್ಷನ್ ಲಾಂಛನದಲ್ಲಿ ಎನ್ ಎನ್ ಮುರುಗನ್ ನಿರ್ಮಿಸಿರುವ ಈ ಚಿತ್ರವನ್ನು ಎಸ್ ವಿ ಮಹೇಶ್ ನಿರ್ದೇಶಿಸಿದ್ದಾರೆ. ಕತೆ ಸಂಭಾಷಣೆ ಹಾಡುಗಳನ್ನು ಎಚ್ ಎಲ್ ನಾರಾಯಣರಾವ್ ರಚಿಸಿದ್ದಾರೆ, ಹಿನ್ನೆಲೆ ಗಾಯಕರ ದಂಡೇ ಇದೆ ಈ ಚಿತ್ರದಲ್ಲಿ. ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಕೆ ಜಮುನಾರಾಣಿ, ನಾಗೇಂದ್ರಪ್ಪ, ಸರೋಜಿನಿ ಇದ್ದಾರೆ. ಚಿತ್ರಕ್ಕೆ ಟಿ ಪದ್ಮನ್ ಸಂಗೀತವಿದೆ. ಛಾಯಾಗ್ರಹಣ ಎಸ್ ಕೆ ವರದರಾಜ್ ಹಾಗೂ ಕೆ ಗೋವಿಂದಸ್ವಾಮಿ. 

ಒಂದು ಸುಂದರ ಚಿತ್ರವಿದು.. 

ಮತ್ತೊಂದು ಚಿತ್ರದ ಜೊತೆಯಲ್ಲಿ ಸಿಗೋಣ. !