Sunday, March 26, 2017

ಜಾದೂ ಮಾಡುವ ಗಾರುಡಿ ಶ್ರೀ ಕೃಷ್ಣಗಾರುಡಿ (1958) (ಅಣ್ಣಾವ್ರ ಚಿತ್ರ ೦೯ / ೨೦೭)

ಭಗವಂತ ಒಂದು ದೊಡ್ಡ ಕೃತಿಯನ್ನು ತಯಾರಿಸುವ ಮುನ್ನಾ ಒಂದು ಚಿಕ್ಕ ಅಣಕು ಮಾದರಿ ತಯಾರಿಸುತ್ತಾನೆ..

ನಂದಿ ಪಿಕ್ಚರ್ಸ್ ಲಾಂಛನದಲ್ಲಿ ಶ್ರೀ ಬೆಳ್ಳಾವಿ ನರಹರಿಶಾಸ್ತ್ರಿಗಳ ರಚಿಸಿದ ಕಥೆಯನ್ನು ಆಧರಿಸಿ ಪೆಂಡ್ಯಾಲ ಅವರ ಸಂಗೀತದ ಗಾರುಡಿಯಲ್ಲಿ ಮೂಡಿಬಂದ ಚಿತ್ರ ಶ್ರೀ ಕೃಷ್ಣಗಾರುಡಿ.  ಜಿ ದೊರೈ ಅವರ ಛಾಯಾಗ್ರಹಣ ಹೊಂದಿದ್ದ ಈ ಚಿತ್ರಕ್ಕೆ ಘಂಟಸಾಲ, ಪಿಬಿ ಶ್ರೀನಿವಾಸ್, ಸುಶೀಲ, ಜಕ್ಕಿ, ಕಾಣಾಕಿ, ರಾಣಿ ತಮ್ಮ ಗಾನ ಪ್ರತಿಭೆಯನ್ನು ತುಂಬಿದ್ದರು.

ಕರುನಾಡಿನ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಹುಣುಸೂರು ಕೃಷ್ಣಮೂರ್ತಿ ರಾಜಕುಮಾರ್ ಎಂಬ ರತ್ನಕ್ಕೆ ಇನ್ನಷ್ಟು ಹೊಳಪು ನೀಡಲು ಬಂದರು. ಚಿತ್ರಕಥೆ, ಸಂಭಾಷಣೆ, ಹಾಡುಗಳು ಮತ್ತು ನಿರ್ದೇಶನ ಹೀಗೆ ಉನ್ನತ ಹೊಣೆಗಾರಿಕೆ ಹೊತ್ತು ರೂಪಿಸಿದ ಚಿತ್ರವನ್ನು ಕೆ ಎಂ ನಾಗಣ್ಣ ನಿರ್ಮಿಸಿದ್ದಾರೆ.

ಮನುಜ ಸಾಹಸಪಟ್ಟು, ಸಾಧನೆಮಾಡಿ, ತನ್ನೊಳಗಿನ ಆಕ್ರೋಶ, ಸೇಡು, ಅನುಭವಿಸಿದ ಅವಮಾನ  ಇವುಗಳನ್ನು ಅಸ್ತ್ರಗಳನ್ನಾಗಿಸಿ, ಸರಿಯಾದ ಮಾರ್ಗದರ್ಶನದಲ್ಲಿ ಮುನ್ನೆಡೆದಾಗ ಜಯವು ಸಿಕ್ಕೇ ಸಿಗುತ್ತದೆ. ಆದರೆ ಆ ಗೆಲುವನ್ನು ಬರಿ ಹೃದಯದಲ್ಲಿ ಮಾತ್ರ ಇಟ್ಟುಳ್ಳದೇ ಅದನ್ನು ಇನ್ನೊಂದು ಅಡಿ ಮೇಲಕ್ಕೆ ಅಂದರೆ ತಲೆಗೆ ತಂದುಕೊಂಡರೆ ಎಂಥಹ ಪ್ರಮಾದ ಆಗಬಹುದು, ಎಂಥಹ ಅವಮಾನವಾಗಬಹುದು, ಮತ್ತೆ ಮಾಯೆಯ ಸುಳಿ ಚಕ್ರಕ್ಕೆ ಸಿಲುಕಿ ನರಳುವಂತೆ ಮಾಡುತ್ತದೆ ಎನ್ನುವ ಸಂದೇಶ ಹೊತ್ತ ಈ ಚಿತ್ರ, ಅಂತಿಮವಾಗಿ ಕಾಣದ ಶಕ್ತಿ, ಕಾಣುವ ಶಕ್ತಿ, ಪ್ರೇರಕ ಶಕ್ತಿ ಇವುಗಳನ್ನು ನೆನೆದು ಭಕ್ತಿ ಮಾರ್ಗದಲ್ಲಿ ಮಾತ್ರ ಜಯ...  ಶಕ್ತಿ ಮಾರ್ಗ ಕಷ್ಟಕ್ಕೆ ಆಗಿಬರೋಲ್ಲ ಎಂದು ನಿರೂಪಿಸುತ್ತದೆ.

ಕುಂತಿಮಕ್ಕಳಿಗೆ ರಾಜ್ಯವಿಲ್ಲ ಎನ್ನುವ ನಾಣ್ಣುಡಿಯಂತೆ ಸಣ್ಣ ವಯಸ್ಸಿನಿಂದ ಬರಿ ಕಷ್ಟ ಕೋಟಲೆಗಳಲ್ಲಿಯೇ ಬಳಲುವ ಪಾಂಡವರು, ಕೌರವರ ಮೋಸಕ್ಕೆ ಬಲಿಯಾಗಿ ರಾಜ್ಯ, ಅಧಿಕಾರ ಕಳೆದುಕೊಂಡು ಕಾಡು ಪಾಲಾಗಿ ಕಡೆಯಲ್ಲಿ ಶ್ರೀ ಕೃಷ್ಣನ ಅನುಗ್ರಹದ ಕವಚ ತೊಟ್ಟು, ಬಂಧು ಬಾಂಧವರನ್ನು ಬದಿಗೆ ಸರಿಸಿ ಜಯಶೀಲರಾಗುತ್ತಾರೆ. ಇಲ್ಲಿಂದ ಮುಂದಕ್ಕೆ ಈ ಚಿತ್ರ ಪ್ರಾರಂಭವಾಗುತ್ತದೆ.

ತನ್ನ ಮನದ ತೊಳಲಾಟವನ್ನು ಹೇಳಿಕೊಳ್ಳುತ್ತಲೇ ಧರ್ಮರಾಯ ತನ್ನ ಮನದ ಇಂಗಿತವನ್ನು ಹೊರಗೆಡುವುತ್ತಾ, ಜನರ ಹಿತ ದೃಷ್ಟಿಯಿಂದಾಗ ಅಧಿಕಾರವನ್ನು ವಹಿಸಿಕೊಳ್ಳುತ್ತೇನೆ ಎಂದು ಭರವಸೆ ಕೊಡುತ್ತಾನೆ. ಸಮರ್ಥ ರಾಜನಿಗೆ, ಸಮರ್ಥ ನಾಯಕನಿಗೆ, ಸಮರ್ಥ ಚಕ್ರವರ್ತಿಗೆ ಸರಿಯಾದ ಅನುಯಾಯಿಗಳು, ಸಲಹೆ ಕೊಡುವ ಮಂತ್ರಿಗಳು, ದಕ್ಷ ಆಡಳಿತಗಾರರು ಬೇಕು ಎಂದು ನಕುಲ ಸಹದೇವರಿಗೆ ಪ್ರಧಾನ ಹುದ್ದೆಗಳನ್ನು ನೀಡುತ್ತಾ, ಭೀಮಾರ್ಜುನರಿಗೆ ಕಡಿಮೆ ದರ್ಜೆಯ ಹುದ್ದೆಗಳನ್ನು ನೀಡುತ್ತಾನೆ ಶ್ರೀ ಕೃಷ್ಣ.

ತಮ್ಮಿಬ್ಬರಿಂದಲೇ ಕುರುಕ್ಷೇತ್ರ ಯುದ್ಧವನ್ನು ಗೆದ್ದಿದ್ದು ಎನ್ನುವ ಅಹಂ ತುಂಬಿಕೊಂಡಿದ್ದ ಭೀಮಾರ್ಜುನರಿಗೆ ತಮ್ಮ ತಪ್ಪಿನ ಅರಿವನ್ನು ಮೂಡಿಸುವ ಸಲುವಾಗಿ ಶ್ರೀ ಕೃಷ್ಣ ರೂಪಿಸಿದ ದೃಶ್ಯನಾಟಕವಿದು.  ತಮ್ಮಂಥಹ ವೀರರಿಗೆ ಮಾಡಿದ ಅವಮಾನ ಎಂದು ನಿರ್ಧರಿಸಿ, ಭೀಮಾರ್ಜುನರು ತಮ್ಮ ಭಾಗದ ರಾಜ್ಯಕ್ಕೆ ಹಠ ತೊಡುತ್ತಾರೆ, ಸಮಾಧಾನವಾಗಿ ಕೊಟ್ಟರೆ ಸರಿ, ಇಲ್ಲದೆ ಹೋದರೆ ಯುದ್ಧಕ್ಕೂ ಸಿದ್ಧ ಎನ್ನುವ ಮಾತ್ರನ್ನು ಧರ್ಮನಂದನನಿಗೆ ಹೇಳುತ್ತಾರೆ.

ಪಾಂಡವರ ಒಗ್ಗಟ್ಟನ್ನು ಮುರಿಯಬೇಡಿ ಎನ್ನುವ ಅವನ ಮಾತಿಗೆ ಮನ್ನಣೆ ಕೊಡೋಲ್ಲ, ಇಡೀ ಸಾಮ್ರಾಜ್ಯವನ್ನೇ ನಿಮಗೆ ಕೊಡುತ್ತೇನೆ ಎಂದರೂ ನಮಗೆ ಭಿಕ್ಷೆ ಬೇಡ ಎಂದು ನಿರಾಕರಿಸುತ್ತಾರೆ, ತಾಯಿ ಕುಂತೀಮಾತಿಗೂ ಬೆಲೆ ಕೊಡೋಲ್ಲ.
ಅಹಂ ತುಂಬಿಕೊಂಡ ರೋಷಾವೇಷದ ಸಹೋದರರು 
ಕುಂತಿ ಹಲುಬುತ್ತಾ
"ಸತ್ತ ಮಕ್ಕಳನ್ನು ಸ್ಮರಿಸುತ್ತಾ ಗಾಂಧಾರಿ ರೋಧಿಸುತ್ತಿದ್ದರೆ
ಈ ಬದುಕಿರುವ ಮಕ್ಕಳ ಅವಿವೇಕವನ್ನು ಕಂಡು ನಾನು ಅಳಬೇಕಿದೆ" ಎನ್ನುತ್ತಾಳೆ, ಅದ್ಭುತ ಸಂಭಾಷಣೆ ಇದು.

ಶ್ರೀ ಕೃಷ್ಣನಿಗೆ ಇದು ಅರಿವಾಗಿ ಗಾರುಡಿಯ ವೇಷದಲ್ಲಿ ನಾನಾ ಚಮತ್ಕಾರ ತೋರಿಸುತ್ತಾ, ಭೀಮಾರ್ಜುನರನ್ನು ಕೆಣುಕುತ್ತಾನೆ. ಮದ ತುಂಬಿದ್ದ ಇಬ್ಬರೂ ಗಾರುಡಿಯ ಸವಾಲನ್ನು ಸ್ವೀಕರಿಸುತ್ತಾರೆ.
ಗಾರುಡಿಯ ಜಾದೂ 
ಉರಗವನ್ನು ಎತ್ತಬೇಕು ಎನ್ನುವ ಸವಾಲಿಗೆ ಭೀಮ ಅಹಂಕಾರದಿಂದ ಆಗಬಹುದು ಎಂದು ಮೊದಲು ಕಾಲಿನಿಂದ ಹಾವಿನ ಬುಟ್ಟಿಯನ್ನು ಒದೆಯುತ್ತಾನೆ, ಮತ್ತೆ ತನ್ನ ಅಹಂಕಾರಕ್ಕೆ ತಕ್ಕ ಬೆಲೆಯನ್ನು ತೆರುತ್ತಾನೆ. ನಾಗಲೋಕದಲ್ಲಿ ಕಾರಾಗೃಹದಲ್ಲಿ ಸೆರೆಯಾಗಿ, ಚಿತ್ರಹಿಂಸೆ ಅನುಭವಿಸಿ, ರೋಧಿಸುತ್ತಾ ಶ್ರೀಕೃಷ್ಣನನ್ನು ನೆನೆಯುತ್ತಾನೆ. ಗಾರುಡಿಯ ಮಾಯಾಜಾಲದಿಂದ ಹೊರಬಂದು ಶ್ರೀ ಕೃಷ್ಣನಿಗೆ ಶರಣಾಗುತ್ತಾನೆ.

ಅರ್ಜುನ ಮಾಯಕುದುರೆಯನ್ನು ಏರಿ, ಅದರಿಂದ ಬಿದ್ದು ಗಾರುಡಿಯ ಮಾಯೆಯ ಮೋಹಿನಿಗೆ ಮನಸೋತು, ಅವಳು ಮೋಹಿನಿ ಎಂದು ಗೊತ್ತಾದ ಮೇಲೆ, ತಪ್ಪಿಸಿಕೊಂಡು ಓಡಿ ಬರುವ ಅರ್ಜುನನನ್ನು ಮತ್ತೆ ಕಾಪಾಡಲು ಶ್ರೀ ಕೃಷ್ಣನೇ ಬರಬೇಕಾಗುತ್ತದೆ.
ಮಾಯೆಯ ಮುಸುಕು 
ಅಹಂ ಎಂದೂ ಒಳ್ಳೆಯದಲ್ಲ, ಅದು ನಮ್ಮ ಬೆಳವಣಿಗೆಯನ್ನು ಕಡಿತಗೊಳಿಸುತ್ತದೆ ಎನ್ನುವ ತಿಳುವಳಿಕೆ ಹೇಳುತ್ತಾ, ಭಕ್ತಿ ಮಾರ್ಗದಿಂದ ಮಾತ್ರ ನಕುಲ ಸಹದೇವರು ಗಾರುಡಿಯ ಮಾಯೆಯನ್ನು ಮೆಟ್ಟಿ ನಿಲ್ಲುತ್ತಾರೆ ಮತ್ತು ಭೀಮಾರ್ಜುನರಿಗೆ ತಮ್ಮ ತಪ್ಪಿನ ಅರಿವನ್ನು ಮೂಡಿಸುತ್ತಾರೆ.

ಆರು ಹಾಡುಗಳಿರುವ ಈ ಚಿತ್ರದಲ್ಲಿ ಹುಣುಸೂರ್ ಕೃಷ್ಣಮೂರ್ತಿ ಇವರ ಸಂಭಾಷಣೆ ಮನಸ್ಸೆಳೆಯುತ್ತದೆ, ಮತ್ತು ಆ ಕಾಲಕ್ಕೆ ವಿಭಿನ್ನವಾದ ಸಾಹಿತ್ಯ ರಚಿಸಿ ಗಮನಸೆಳೆಯುತ್ತಾರೆ.

ರಾಜಕುಮಾರ್ ಇಲ್ಲಿ ಅರ್ಜುನನಾಗಿ ಮಿಂಚುತ್ತಾರೆ, ಇಡೀ ಚಿತ್ರ ಭೀಮ ಮತ್ತು ಅರ್ಜುನರ ಸುತ್ತಲೇ ಸುತ್ತುವುದರಿಂದ ಇತರ ಪಾತ್ರಗಳು ತಮ್ಮ ಅಳತೆಗೆ ತಕ್ಕಂತೆ ಅಭಿನಯ ನೀಡಿದ್ದಾರೆ. ಭೀಮನ ಪಾತ್ರಧಾರಿ ವೀರಣ್ಣ ಹೂಂಕರಿಸುತ್ತಲೇ ಮಾತಾಡುವ ಶೈಲಿ ಚೆನ್ನಾಗಿದೆ.
ರಾಜ್ ಎಂಟ್ರಿ 
ರಾಮಚಂದ್ರ ಶಾಸ್ತ್ರಿ ಧರ್ಮರಾಯನಾಗಿ, ರಮಾದೇವಿ ಕುಂತಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇಲ್ಲಿ ಗಮನಸೆಳೆಯುವ ಅಂಶ ಎಂದರೆ ಶ್ರೀ ಕೃಷ್ಣನ ಪಾತ್ರಧಾರಿಯ  ತುಂಟ ನಗೆ, ಸ್ಪಷ್ಟ ಮಾತುಗಳು, ಗಾರುಡಿಯ ಹಾವಭಾವ ನೃತ್ಯ, ಮಾತುಗಳು ಇಷ್ಟವಾಗುತ್ತವೆ, ಆತನ ಸ್ನೇಹಿತ ಮಕರಂದನಾಗಿ ನರಸಿಂಹರಾಜು ಅಭಿನಯ ಕುಶಲತೆಯನ್ನು ಮೆರೆದಿದ್ದಾರೆ.
ಗಾರುಡಿಯ ದೃಶ್ಯಕ್ಕೆ ಮುನ್ನುಡಿ 
ರಾಜಕುಮಾರ್ ಪೌರಾಣಿಕ ಪಾತ್ರದಲ್ಲಿ ವಿಜೃಂಭಿಸಿದ್ದಾರೆ. ಅರ್ಜುನನಾಗಿ ರೋಷ ವೇಷ, ಒಳಗಿನ ಆಕ್ರೋಶ, ಮೋಹಿನಿಯ ಜೊತೆಯಲ್ಲಿ ಮಾತಾಡುವಾಗ ಪ್ರೇಮನಿವೇದನೆ ಮಾಡಿಕೊಳ್ಳುವಾಗ ತೋರುವ ಆಂಗೀಕ ಅಭಿನಯ, ಸಂಭಾಷಣೆ ಶೈಲಿ ಇಷ್ಟವಾಗುತ್ತದೆ. ಸಂಭಾಷಣೆಯಲ್ಲಿನ ಸ್ಪಷ್ಟತೆ, ನಿಖರವಾದ ಉಚ್ಚಾರಣೆ ಅವರ ಅಭಿನಯದ ಮಾರ್ಗದ ಹರಿವು ವಿಸ್ತರಿಸುತ್ತಾ ಇರುವ ಸೂಚನೆ ನೀಡುತ್ತದೆ.

ಒಂದು ಸುಂದರ ಚಿತ್ರ..ಸುಂದರ ಅಭಿನಯ.. ಮುಖ್ಯ ವಾಹಿನಿಯಿಂದ ಎಲ್ಲಿಯೂ ಹಾದಿ ತಪ್ಪದಂತೆ ಚಿತ್ರವನ್ನು ರೂಪಿಸಿದ್ದಾರೆ.

ಮೊದಲ ವಾಕ್ಯವನ್ನು ಮತ್ತೊಮ್ಮೆ ಓದಿರಿ.. ನಂತರ ಹುಣುಸೂರು ಕೃಷ್ಣಮೂರ್ತಿ ಮತ್ತು ರಾಜಕುಮಾರ್ ಜೋಡಿಯ ಬಭೃವಾಹನ ಚಿತ್ರವನ್ನು ನೆನೆಪಿಸಿಕೊಳ್ಳಿ. ಆ ಚಿತ್ರದ ಸರತಿ ಬಂದಾಗ ಇನ್ನಷ್ಟು ಬರೆಯುವೆ..

ಇನ್ನೊಂದು ರಾಜ್ ಚಿತ್ರ ಮಾಣಿಕ್ಯವನ್ನು ಹಿಡಿದು ಸಧ್ಯದಲ್ಲಿ ಬರೋಣ ಅಲ್ಲವೇ 

Saturday, February 18, 2017

ಮನವನ್ನು ಹರನ ತಾಣವ ಮಾಡುವ ಭೂ ಕೈಲಾಸ (1958) (ಅಣ್ಣಾವ್ರ ಚಿತ್ರ ೦೮ / ೨೦೭)


ಅವಕಾಶಗಳು ಹೇಗೆ ಬರುತ್ತದೆಯೋ ಹಾಗೆ ನುಗ್ಗಬೇಕು. ಉಳಿವಿನ ಒತ್ತಡ ಒಂದು ಕಡೆ,  ಬಣ್ಣದ ಕನಸ್ಸು ಇನ್ನೊಂದೆಡೆ. ಈ ಹಾದಿಯಲ್ಲಿ ಸಿಕ್ಕ ಪಾತ್ರಗಳು ಚಿಕ್ಕದೇ ಇರಲಿ ದೊಡ್ಡದೇ ಇರಲಿ ಒಪ್ಪಿಕೊಂಡು ತಮಗೆ ಹೇಳಿದಷ್ಟು ಅಭಿನಯ ನೀಡುತ್ತಿದ್ದ ರಾಜ್ ಅವರಿಗೆ ಇನ್ನೊಂದು ಉತ್ತಮ ಅವಕಾಶ ಸಿಕ್ಕಿತು.. !

ಆ ಕಾಲದ ಉತ್ತಮ ತಾಂತ್ರಿಕತೆ - ಹಲವಾರು ರಾಜ್!
ಹಿಂದಿನ ಚಿತ್ರಗಳಲ್ಲಿನ ತಮ್ಮ ಅಭಿನಯದ ಮುದ್ರೆಯನ್ನು ಇನ್ನಷ್ಟು ಗಟ್ಟಿಯಾಗಿ ಒತ್ತಲು ಈ ಚಿತ್ರ ಸಹಾಯ ಮಾಡಿತು. ಪ್ರತಿಷ್ಠಿತ ಎ. ವಿ. ಎಂ  ಸಂಸ್ಥೆ ನಿರ್ಮಿಸಿದ ಈ ಚಿತ್ರವನ್ನ ನಿರ್ದೇಶಿಸಿದ್ದು ಕೆ. ಶಂಕರ್.

ಕು ರಾ ಸೀತಾರಾಮಶಾಸ್ತ್ರಿ ಅವರ ಸಾಹಿತ್ಯ ಸಂಭಾಷಣೆ ಇದ್ದ ಈ ಚಿತ್ರದಲ್ಲಿ ಸುಮಾರು ೧೮ ಹಾಡುಗಳಿದ್ದದು ವಿಶೇಷ.

ಒಂದು ಹಾಡಿನಲ್ಲಿ ಇಡೀ ರಾಮಾಯಣವನ್ನು ರಚಿಸಿದ್ದು. ದೃಶ್ಯದ ಮೂಲಕ ತೋರಿಸಿದ್ದಾರೆ.  ಸಂಗೀತ, ಗಾಯನ ಎಲ್ಲವೂ ಸುಂದರವಾಗಿದೆ. ಇಂದಿಗೂ "ರಾಮನ ಅವತಾರ ರಘುಕುಲ ಸೋಮನ ಅವತಾರ" ಅತ್ಯಂತ ಜನಪ್ರಿಯ ಕನ್ನಡ ಹಾಡುಗಳಲ್ಲಿ ಒಂದು.  ರಾಮನ ಜನನದಿಂದ ಪಟ್ಟಾಭಿಷೇಕದವರೆಗೆ ಸಮಗ್ರ ಕತೆಯನ್ನು ಚಿಕ್ಕ ಪುಟ್ಟ ದೃಶ್ಯದಲ್ಲಿ ಚಿತ್ರಿಸಿರುವುದು ನಿರ್ದೇಶಕರ ಕಲಾವಂತಿಕೆಗೆ ಸಾಕ್ಷಿ.

ಆ ತುಣುಕುಗಳು ನಿಮಗಾಗಿ..

ಶ್ರೀ ರಾಮ ಮತ್ತು ಅನುಜರ ಜನನ 
ಅಹಲ್ಯೆ ಶಾಪ ವಿಮೋಚನೆ 

ಶಿವ ಧನಸ್ಸು ಮತ್ತು ಶ್ರೀ ರಾಮ 

ಕೈಕೇಯಿ ಮತ್ತು ದಶರಥ ... ಶಾಪವಾದ ಕೊಟ್ಟ ಮಾತು 

ಭರತನ ಭ್ರಾತೃ ಪ್ರೇಮ... ರಾಮನ ಪಾದುಕೆ ಹೊತ್ತ ಭರತ
ಲಕ್ಶ್ಮಣ ರೇಖೆ



ಸೀತಾಪಹರಣ 

ಕನ್ನಡ ಕುಲ ಪುಂಗವ ಹನುಮ 

ರಾಮನ ಮುದ್ರಿಕೆ ಕಂಡ  ಸೀತೆ 

ಲಂಕಾದಹನ 

ಮರಳಿ ಆಯೋಧ್ಯೆಗೆ 

ರಾಜ್ ಕುಮಾರ್ ಅವರು ರಾವಣನಾಗಿ ಅಬ್ಬರಿಸಿದ ಈ ಚಿತ್ರದಲ್ಲಿ ಅವರ ಅಭಿನಯದ ಪ್ರಚಂಡ ಪ್ರತಿಭೆ ತೆರೆಯ ಮೇಲೆ ಬಂದಿದೆ. ಸಂಭಾಷಣೆ, ಉಚ್ಚಾರಣೆ, ಕಣ್ಣಲ್ಲಿ ಕಾರುವ ಕೋಪ, ಗಹಗಹಿಸಿ ನಗುವುದು, ಓರೇ ನೋಟ, ಆಕ್ರೋಶ, ಸಿಟ್ಟು, ದೇಹ ಭಾಷೆ ಎಲ್ಲವೂ ಸುಸೂತ್ರವಾಗಿ ಮೂಡಿ ಬಂದಿದೆ. ತೆರೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ.
ರಾವಣನಾಗಿ ರಾಜ್ 

 ಈ ಚಿತ್ರದ ಕಥೆ ಎಲ್ಲರಿಗೂ ಗೊತ್ತಿರುವುದೇ. ಲಂಕೇಶ್ವರ ರಾವಣ ತನ್ನ ತಾಯಿಯ ಮೇಲಿನ ಅಪರಿಮಿತ ಪ್ರೀತಿಯಿಂದಾಗಿ, ಅವಳ ನಿತ್ಯ ಪೂಜೆಗೆ ಶಿವನ ಆತ್ಮಲಿಂಗವನ್ನೇ ತರುವುದಾಗಿ ಉಗ್ರ ತಪಸ್ಸು ಮಾಡುತ್ತಾನೆ.
ರಾವಣನ ಮಾತೆ ಕೈಕಸಿಯ ಶಿವನ ಪೂಜೆ 
ಅವನ ತಪಸ್ಸಿನ ಭಕ್ತಿಗೆ ಮೆಚ್ಚಿದ ಪರಶಿವ ಪಾರ್ವತಿಯೊಂದಿಗೆ ಪ್ರಕಟವಾಗುತ್ತಾನೆ. ಅದಕ್ಕೆ ತುಸುಮುಂಚೆ ರಾವಣನ ತಪಸ್ಸಿನ ಇಂಗಿತವನ್ನು ತಿಳಿದ ಕಲಹಪ್ರಿಯ ಆದರೆ ಲೋಕಕಲ್ಯಾಣಕ್ಕಾಗಿ ಶ್ರಮಿಸುವ ನಾರದ, ಪಾರ್ವತಿಯನ್ನು ಹರಿಯ ಬಳಿ ಸಹಾಯ ಕೇಳುವಂತೆ ಮಾಡುತ್ತಾನೆ.  ಹರಿಯು ಮೋಹದ ಹೆಣ್ಣಿನ ರೂಪದಲ್ಲಿ ರಾವಣನ ಮನಸ್ಸನ್ನು ಸೇರಿಬಿಡುತ್ತಾನೆ.
ತಪಸ್ಸಿಗೆ ಹೊರಟ ರಾವಣ 

ಪರಶಿವ ಪಾರ್ವತಿ ಸಮೇತನಾಗಿ ಪ್ರಕಟವಾಗಿ ಬೇಡಿದ ವರ ಕೊಡುವೆ ಎಂದಾಗ, ಹರಿಯ ಮೋಹದ ಜಾಲದಲ್ಲಿ ಸಿಕ್ಕಿದ್ದ ರಾವಣ, ತಾಯಿ ಪಾರ್ವತಿಯ ಮೇಲೆಯೇ ಮೋಹವಶನಾಗಿ ಅವಳನ್ನೇ ಬೇಡುತ್ತಾನೆ. ಭಕ್ತರ ಇಷ್ಟ ನೆರವೇರಿಸುವ ಶಿವ, ಒಪ್ಪಿಗೆ ನೀಡಿ ಪಾರ್ವತಿಯನ್ನು ರಾವಣ ಜೊತೆಯಲ್ಲಿ ಕಳಿಸುತ್ತಾನೆ .
ಉಗ್ರರೂಪಿಯಾಗಿ ಪಾರ್ವತಿ 

ಮತ್ತೆ ನಾರದ ತನ್ನ ಕೈಚಳಕ ತೋರಿ, ರಾವಣನ  ಕಣ್ಣಿಗೆ ಪಾರ್ವತಿ ಉಗ್ರ ರೂಪಿಯಾಗಿ ಕಾಣುವ ಹಾಗೆ ಮಾಡುತ್ತಾನೆ.  ಕುಪಿತಗೊಂಡ ರಾವಣ, ಪಾರ್ವತಿಯನ್ನು  ಕೈಲಾಸಕ್ಕೆ ಬಿಟ್ಟು, ಶಿವನಿಗೆ  ಹರಿತವಾದ ಕುಪಿತ ಮಾತುಗಳನ್ನು ಹೇಳಿ ಹೊರಡುತ್ತಾನೆ.

ನಾರದ ರಾವಣನ ಉಗ್ರಮಾತುಗಳಿಗೆ ಸಮಾಧಾನ ಹೇಳುತ್ತಾ ಪಾರ್ವತಿಗಿಂತಲೂ ಸುಂದರಿ ಪಾತಾಳ ಲೋಕದ ದೊರೆ ಮಯನ ಮಗಳು ಮಂಡೋದರಿಯ ಜೊತೆ ಲಗ್ನವಾಗುವಂತೆ ಮಾಡುತ್ತಾನೆ. ಪಾರ್ವತಿಯ ಮೋಹ ಇನ್ನೂ ಇಳಿಯದ ಲಂಕೇಶ್ವರ ತನ್ನ ಅರಮನೆಗೆ ಬಂದು ತಾಯಿಯ ಆಶೀರ್ವಾದ ಬೇಡಿದಾಗ, ತಾಯಿ ಕೇಳುತ್ತಾಳೆ "ರಾವಣ ಆತ್ಮಲಿಂಗವೆಲ್ಲಿ"
ಮಂಡೋದರಿಯಾಗಿ ಜಮುನಾ 
 ತನ್ನ ತಪ್ಪಿನ ಅರಿವಾಗದ ರಾವಣ ಅಹಂನಲ್ಲಿ ಇನ್ನಷ್ಟು ಮಾತಾಡಿದಾಗ ನಾರದ ಹರಿಯ ಮೋಹರೂಪಿಯನ್ನು ರಾವಣನ ಮನದಿಂದ ದೂರವಾಗುವಂತೆ ಮಾಡಿದಾಗ, ರಾವಣನಿಗೆ ತನ್ನ ತಪ್ಪಿನ  ಅರಿವಾಗುತ್ತದ. ಮತ್ತೆ ಉಗ್ರತಪಸ್ಸಿಗೆ ಕೂರುತ್ತಾನೆ.

ಭಕ್ತರ ಭಕ್ತ ಮಹಾದೇವ ರಾವಣನಿಗೆ ತನ್ನ ಆತ್ಮ ಲಿಂಗವನ್ನು ಕೊಡುತ್ತಾ, ಇದರೊಳಗೆ ಅಡಗಿರುವ ಕಾಂತಿಗೆ, ಶಕ್ತಿಗೆ ಭೂ ಪ್ರಕೃತಿ ಸದಾ ಆಕರ್ಷಿಸಿರುತ್ತದೆ.. ನಿರ್ಧಾರಿತ ಸ್ಥಳ ಸೇರುವತನಕ ಇದು ಭೂಸ್ಪರ್ಶವಾಗದ ರೀತಿಯಲ್ಲಿ ನೋಡಿಕೋ ಎಂದು ಎಚ್ಚರಿಕೆಯ ಮಾತುಗಳನ್ನುಹೇಳುತ್ತಾನೆ.
ರಾವಣನಿಗೆ ಆತ್ಮಲಿಂಗ 
ಕರಾವಳಿಯ ಮಾರ್ಗದಲ್ಲಿ ಲಂಕೆಗೆ ಹೊರಟ ರಾವಣನ್ನು ಕಂಡು, ನಾರದ ಗಣಪತಿಗೆ ಹೇಳುತ್ತಾನೆ "ನಿನಗೆ ಆಗ್ರ ಪೂಜೆ ಮಾಡದೆ ತನ್ನ ಕಾರ್ಯ ಸಾಧಿಸಿದ್ದಾನೆ.. ಇನ್ನೂ ಆತ್ಮಲಿಂಗ ಲಂಕೆಗೆ ಸೇರಿದರೆ ಮುಗಿಯಿತು.. ನೀವೆಲ್ಲಾ ರಾವಣನ  ಊಳಿಗಕ್ಕೆ ಸಿದ್ಧವಾಗಿರಿ"
ಗಣಪನ  ಅಭಯ ಹಸ್ತ 

ಚತುರಮತಿ ಗಣಪತಿ ಗೋಪಾಲಕನಾಗಿ ರಾವಣನಿಗೆ ಕಾಣಿಸಿಕೊಂಡು, ಅರ್ಘ್ಯ ಕೊಡುವುದಕ್ಕಾಗಿ ರಾವಣ ಆತ್ಮಲಿಂಗವನ್ನು ತನ್ನ ಕೈಗೆ ನೀಡುವಂತೆ ಮಾಡುತ್ತಾನೆ. ಮೂರು ಬಾರಿ ಕರೆಯುತ್ತೇನೆ, ಅಷ್ಟರಲ್ಲಿ ನೀ ಬರದೇ ಹೋದರೆ ಕೆಳಗೆ ಇಟ್ಟು, ಅರ್ಘ್ಯ ನೀಡಲು ಹೋಗುತ್ತೇನೆ ಎನ್ನುತ್ತಾನೆ.
ಭೂಸ್ಪರ್ಶವಾದ ಆತ್ಮ ಲಿಂಗ 

ಗೋಪಾಲಕನನ್ನು ಥಳಿಸುವ ರಾವಣ 

ಗಣಪನ ಕುಚೋದ್ಯ 
ಪೂರ್ವನಿರ್ಧಾರಿತ ಯೋಜನೆಯಂತೆ ಮೂರು ಬಾರಿ ರಾವಣನ ಹೆಸರು ಕೂಗಿ, ರಾವಣ ಬರದೇ ಇರುವುದನ್ನು ನೋಡಿ ಭೂ ಸ್ಪರ್ಶ  ಮಾಡಿಸಿಯೇ ಬಿಡುತ್ತಾನೆ. ಕುಪಿತಗೊಂಡ ರಾವಣ ಆ ಗೋಪಾಲಕನಿಗೆ ಮನಬಂದಂತೆ ಬಯ್ದು, ಹೊಡೆದು.. ನಂತರ ಆ ಆತ್ಮಲಿಂಗವನ್ನು ಭೂ ತಾಣದಿಂದ ಹೊರ ತೆಗೆಯಲು  ಶ್ರಮಿಸಿ ಆಗದೆ ಹೋಗಿ ಕಡೆಗೆ ತನ್ನ  ಆತ್ಮಾರ್ಪಣೆ ಮಾಡಲು ಸಿದ್ಧವಾಗುತ್ತಾನೆ.

ಅವನ ಭಕ್ತಿಗೆ ಮೆಚ್ಚಿ, ಸದಾಶಿವ ಭೂ ಸ್ಪರ್ಶ ಮಾಡಿದ ಈ ತಾಣ ಭೂ ಕೈಲಾಸ ಎಂದು ಪ್ರಸಿದ್ಹಿಯಾಗಲಿ ಎಂದು
ಹರಸುತ್ತಾನೆ.
ಭೂಕೈಲಾಸ 
ಈ ಕಥೆಯನ್ನು ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿರುವ ರೀತಿ  ಸೊಗಸಾಗಿದೆ.  ಬರೋಬ್ಬರಿ ಹದಿನೆಂಟು ಹಾಡುಗಳು ಇದ್ದರೂ ಚಿತ್ರದ ಓಘಕ್ಕೆ ಅಡ್ಡಿಮಾಡದೆ ಚಿತ್ರದ ಕತೆಯನ್ನು  ಕೊಂಡೊಯ್ಯುತ್ತದೆ. "ರಾಮನ ಅವತಾರ" ಪ್ರಸಿದ್ಧವಾದ ಹಾಡಾಗಿದೆ.

ರಾವಣನಾಗಿ ರಾಜ್ ಕುಮಾರ್ ಅದ್ಭುತವಾಗಿ ನಟಿಸಿದ್ದಾರೆ..
ಭವಿಷ್ಯದ ತಾರಾ ಪಟ್ಟ - ರಾಜ್ 

ನಾರದನಾಗಿ  ತುಂಟನಗುವಿನ ಸರದಾರ ಕಲ್ಯಾಣ್ ಕುಮಾರ್ ಚಿತ್ರದುದ್ದಕ್ಕೂ ಕಾಣುತ್ತಾರೆ. ಸಂಭಾಷಣೆ, ಆ ಕುಟಿಲತೆ, ತರ್ಕಬದ್ಧವಾದ  ಮಾತುಗಳು.ಕುಚೋದ್ಯ ಎಲ್ಲದರಲ್ಲಿಯೂ ಮಿಂಚುತ್ತಾರೆ.
 ತುಂಟ ಕಲಹಪ್ರಿಯ ನಾರದನಾಗಿ ಕಲ್ಯಾಣ್ ಕುಮಾರ್ 
ಅಶ್ವಥ್ ರಾಜ್ ಚಿತ್ರಸರಣಿಯಲ್ಲಿ ಮೊದಲಬಾರಿಗೆ  ಸೇರಿಕೊಳ್ಳುತ್ತಾರೆ. ಶಿವನ ಪಾತ್ರದಲ್ಲಿ  ಹದವರಿತ ನಟನೆ. ಜೀವಂತ ಹಾವನ್ನು ಕೊರಳಿಗೆ ಸುತ್ತಿಕೊಂಡು  ಅಭಿನಯಿಸಿರುವುದು ವಿಶೇಷ.
ಪರಶಿವನಾಗಿ ಅಶ್ವತ್ 
ಮಂಡೋದರಿಯಾಗಿ ಜಮುನಾ ಅವರ ಅಭಿನಯ ಸೊಗಸಾಗಿದೆ.
ಶಿವನ ಸತಿ  ಪಾರ್ವತಿಯಾಗಿ ಬಿ ಸರೋಜಾದೇವಿ ಮುದ್ದಾಗಿ ಕಾಣುತ್ತಾರೆ.
ಕಪ್ಪುಬಿಳುಪಿನ ದೃಶ್ಯಗಳಲ್ಲಿ ನಟ ನಟಿಯರು ಮುದ್ದಾಗಿ ಕಾಣುತ್ತಾರೆ.  ಉಳಿದ ಪಾತ್ರವರ್ಗದಲ್ಲಿ ಚಿತ್ರಕತೆಗೆ ತಕ್ಕ ಅಭಿನಯ

ಪಾರ್ವತಿಯಾಗಿ ಬಿ ಸರೋಜಾದೇವಿ 
ಆರ್ ಸುದರ್ಶನಂ ಮತ್ತು ಆರ್ ಗೋವರ್ಧನಂ ಅವರ ಸಂಗೀತದಿಂದ ಬೆಳಗಿದ್ದ ಈ ಚಿತ್ರಕ್ಕೆ ಛಾಯಾಗ್ರಹಣ ಮಾಧವ ಬುಲ್ ಬುಲೆ ಅವರದ್ದು.  ಗಾಯಕರು  ಸಿ ಎಸ್ ಜಯರಾಮನ್, ಎಸ್ ಗೋವಿಂದರಾಜನ್, ಎಂ ಎಲ್ ವಸಂತಕುಮಾರಿ, ಪಿ ಸುಶೀಲ, ಟಿ ಎಸ್ ಭಗವತಿ ಮತ್ತು ಎ ವಿ ಕೋಮಲ.

ಗುರಿ ಕಣ್ಣ ಮುಂದೆ ಇದ್ದಾಗ ಅಡ್ಡಿ ಅಡಚಣೆಗಳು ಇರುತ್ತವೆ, ಗುರಿ ತಪ್ಪಿಸಲು ಹೊರಗಿನ ಶಕ್ತಿಗಳು  ತಡೆ ಹಾಕುತ್ತವೆ, ಆದರೆ ಅದನ್ನು ದಾಟಬೇಕು. ಗುರಿಯಲ್ಲಿ ಸೋತರು ಮತ್ತೊಮ್ಮೆ ಶಕ್ತಿ ಮೈಗೂಡಿಸಿಕೊಂಡು ಮುನ್ನುಗ್ಗಬೇಕು. ಇದೆಲ್ಲದರ ಜೊತೆಯಲ್ಲಿ  ಗುರಿ ಸಾತ್ವಿಕವಾಗಿದ್ದಾಗ ದೈವದ ಪ್ರೇರಣೆ ಇರುತ್ತದೆ, ಆದರೆ ಆ ಗುರಿಯಲ್ಲಿ ಹಾದಿ ತಪ್ಪಿದರೆ ದೈವವೇ ಕಾಡುವ ಭೂತವಾಗುತ್ತದೆ ಎನ್ನುವ ಸಂದೇಶ  ಸಿಗುತ್ತದೆ..

ರಾಜ್ ಕುಮಾರ್ ತಮಗೆ ಸಿಕ್ಕ ಪಾತ್ರ ದೊಡ್ಡದೇ ಇರಲಿ ಚಿಕ್ಕದೇ ಇರಲಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದದು ಅವರ ಹೆಗ್ಗಳಿಕೆ.. ಅಂತಹ ಇನ್ನೊಂದು  ಶ್ರದ್ಧೆಯಿಂದ ಕೂಡಿದ ಚಿತ್ರದ ಜೊತೆಯಲ್ಲಿ ಮತ್ತೊಮ್ಮೆ ಸೇರೋಣವೇ.. !

Sunday, February 5, 2017

ಸಾಮಾಜಿಕ ಕಳಕಳಿ ತುಂಬಿಕೊಂಡು ಬಂದ ರಾಯರ ಸೊಸೆ (1957) (ಅಣ್ಣಾವ್ರ ಚಿತ್ರ ೦೭ / ೨೦೭)

ಶಾಲೆಯಲ್ಲಿ ಮಾಸ್ತರು ಒಮ್ಮೆ ಪಾಠದ ಮಧ್ಯೆ "ನಮಗೆ ಬೇಕಿದ್ದಕ್ಕಿಂತ ಒಂದು ಗ್ರಾಂ ಹೆಚ್ಚಿಗಿದ್ದರೂ ಅದು ಅನ್ಯ ಮಾರ್ಗದಲ್ಲಿ ಸಂಪಾದಿಸಿದ್ದು ಎನ್ನಬಹುದು" ಎಂದು ಹೇಳಿದ್ದರು.. ಆಗ ನಮಗೆ ಬರಿ ಪದಗಳು ಮಾತ್ರ ಅರ್ಥವಾಗಿತ್ತು, ಆದರೆ ಭಾವವಾಗಲಿ ಅಥವಾ ಪದಗಳ ಮಧ್ಯೆ ಬಚ್ಚಿಟ್ಟುಕೊಂಡಿದ್ದ ಅರ್ಥವಾಗಲಿ ಆಗಿರಲಿಲ್ಲ. ಕಾಲಾನುಕಾಲಕ್ಕೆ ಬುದ್ಧಿ ವಿಕಸನಗೊಂಡಹಾಗೆ (???????) ಮಾಸ್ತರು ಹೇಳಿದ್ದ ಆ ಪದಗಳ ಗೂಢಾರ್ಥ ಅರಿವಾಗತೊಡಗಿತ್ತು.

ತನ್ನ ಬಳಿಯೇ ಅಪಾರ ಸಂಪತ್ತಿದ್ದರೂ,  ಧನದಾಹಕ್ಕೆ ಮರುಳಾಗಿ ಸುಂದರ ನಂದನವನದಂತಹ ಸಂಸಾರವನ್ನು ನಿರಾಶೆಯ ಕಡಲಿನ ಕಡೆಗೆ ದಾಪುಗಾಲು ಹಾಕುತ್ತಾರೆ.. ಸಮಯಕ್ಕೆ ಸರಿಯಾಗಿ ಸಿಕ್ಕ ತಿಳುವಳಿಕೆಯ ಮಾರ್ಗದಿಂದ ಹೇಗೆ ಬದಲಾಗಬಹುದು ಎನ್ನುವ ಪುಟ್ಟ ಸಂದೇಶ ಹೊಂದಿದ್ದು ಈ ಚಿತ್ರದ ಹೆಗ್ಗಳಿಕೆ.

ಭಕ್ತಿರಸದಲ್ಲಿ ಮೀಯುತ್ತಿದ್ದ ರಾಜ್ ತಮ್ಮ ಏಳನೇ ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ಮೂಡಿಬಂದಿದ್ದಾರೆ.   ವರದಕ್ಷಿಣೆ ಪಿಡುಗು ಹೆಣ್ಣುಮಕ್ಕಳನ್ನು ಮದುವೆಗೆ ಮುಂಚೆ ಮತ್ತು ನಂತರವೂ ಕಾಡುವ ಭೂತ. ವಿಶೇಷ ಎಂದರೆ ಈ ಚಿತ್ರವನ್ನು ನಿರ್ಮಿಸಿದ್ದು ರಾಜ್ ಅವರ ಹಿಂದಿನ ಆರು ಚಿತ್ರಗಳಲ್ಲಿ ಐದು ಚಿತ್ರಗಳಿಗೆ ನಾಯಕಿಯಾಗಿದ್ದ ಕರುನಾಡಿನ ಅಮ್ಮ ಪಂಡರಿಬಾಯಿ ಅವರು.

ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿತವಾದ ಈ ಚಿತ್ರವನ್ನು ಆರ್. ರಾಮಮೂರ್ತಿ ಮತ್ತು ಕೆ ಎಸ್ ಮೂರ್ತಿ ನಿರ್ದೇಶನ ಮಾಡಿದ್ದಾರೆ, ಅವರಿಗೆ ಕಥೆ ಸಂಭಾಷಣೆ ಕೊಟ್ಟವರು ಪಿ. ಗುಂಡೂರಾವ್. ಛಾಯಾಗ್ರಹಣಕ್ಕೆ ಕ್ಯಾಮೆರಾ ಹಿಡಿದವರು ಸಂಪತ್ ಮತ್ತು ಸಂಗೀತ ದಿವಾಕರ್ ಅವರದ್ದು.

ಕಲ್ಯಾಣ್ ಕುಮಾರ್ ಮತ್ತು ಮೈನಾವತಿ ದಾಂಪತ್ಯದಲ್ಲಿ ಕಲ್ಯಾಣ್ ಕುಮಾರ್ ಅವರ ಧನದಾಹಿ ಅಪ್ಪ ರಾಮಚಂದ್ರಶಾಸ್ತ್ರಿ ವರದಕ್ಷಿಣೆ ಬಾಕಿ ಬಾಬ್ತು ನೆಪದಲ್ಲಿ ತನ್ನ ಸೊಸೆಯನ್ನು ತವರಿಗೆ ಅಟ್ಟುತ್ತಾರೆ. ಅವರ ಮಡದಿ ಜಯಶ್ರೀ ಎಷ್ಟೇ ಗೋಗರೆದರು ಕೇಳದೆ ಸೊಸೆಯನ್ನು ತವರಿಗೆ ಹೋಗಿ ಬರಬೇಕಿದ್ದ ಹಣವನ್ನು ತಂದರೆ ನಿನಗೆ ಜಾಗ ಇಲ್ಲದೆ ಹೋದರೆ ಅಲ್ಲೇ ನೀನು ಇಲ್ಲೇ ಇವನು ಎಂದು ಕಠೋರವಾಗಿ ಹೇಳಿ ಶುಕ್ರವಾರ ಮುಸ್ಸಂಜೆ ತನ್ನ ಸೊಸೆಯನ್ನು ಹೊರಹಾಕುತ್ತಾರೆ.

ತವರು ಮನೆಯ ಪರಿಸ್ಥಿತಿ ಗೊತ್ತಿದ್ದ ಮೈನಾವತಿ, ಏನೂ ಮಾಡಲು ತೋಚದೆ ತವರು ಮನೆಯ ಹಾದಿ ಹಿಡಿಯುತ್ತಾರೆ. ಇದನ್ನೆಲ್ಲಾ ಸರಿ ಪಡಿಸಲು ಕಲ್ಯಾಣ್ ಕುಮಾರ್ ತನ್ನ ಮಿತ್ರ ರಾಜ್ ಕುಮಾರ್ ಸಹಾಯ ಕೋರುತ್ತಾರೆ. ಅಪರಿಮಿತವಾಗಿ ಪ್ರೀತಿಸುತ್ತಿದ್ದ ಕಲ್ಯಾಣ್ ಕುಮಾರ್ ತನ್ನ ಮಡದಿ ಮೈನಾವತಿಯನ್ನು ಬಿಟ್ಟಿರಲಾರದೆ, ರಾಜ್ ಕುಮಾರ್ ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಹೇಳಿ, ತಾನು ಅವಾಗವಾಗ ಅಲ್ಲಿಗೆ ಬರುತ್ತಿರುತ್ತಾರೆ.

ಬುದ್ದಿವಂತ ದಂಪತಿಗಳಾಗಿ ರಾಜ್ ಕುಮಾರ್ ಮತ್ತು ಪಂಡರಿಬಾಯಿ ಕೆಲವು ಉಪಾಯಗಳನ್ನು ಮಾಡಿ, ನೊಂದಿದ್ದ
ಸಂಸಾರವನ್ನು ಸರಿ ಪಡಿಸುತ್ತಾರೆ. ಇದರ ಮಧ್ಯೆ ಹಾದು ಬರುವ ಸನ್ನಿವೇಶಗಳು, ಹಾಡುಗಳು ಮತ್ತು ಸಂಭಾಷಣೆಗಳು ಈ ಚಿತ್ರವನ್ನು  ನೋಡುಗರ ಭಾವಕ್ಕೆ ಅನುಭವಿಸುವಂತೆ ಮಾಡಿದೆ.

****
ರಾಮಚಂದ್ರ ಶಾಸ್ತ್ರೀ ತಮ್ಮ ಮಗ ತಮ್ಮ ಮಾತಿಗೆ ವಿರುದ್ಧ ನೆಡೆದರೆ, ಮನೆಯಲ್ಲಿರುವ ರಮಾದೇವಿ ಅವರ ಪೆದ್ದು ಮಗ ನರಸಿಂಹರಾಜು ಅವರನ್ನೇ ದತ್ತುತೆಗೆದುಕೊಂಡು, ಇಡೀ ಆಸ್ತಿಯನ್ನು ಬರೆದುಬಿಡುತ್ತೇನೆ ಎಂದಾಗ.. ರಮಾದೇವಿ ಮತ್ತು ನರಸಿಂಹರಾಜು ಅವರ ನಡುವಿನ ಸಂಭಾಷಣೆ ಮಜಾ ಕೊಡುತ್ತೆ.


"ಅಮ್ಮ ಹಪ್ಪಳ ಕೊಡೆ.. ಸಪ್ಪಳ ಮಾಡದ ಹಾಗೆ ತಿಂದು ಬಿಡುತ್ತೇನೆ"

"ಗಣಪ ನಿನ್ನ ಅದೃಷ್ಟ ಆನೆ ಮೇಲೆ ಬರುತ್ತೆ ಕಣೋ.. "
"ಅಮ್ಮ ಆನೆ ಮೇಲೆ ಬೇಡ.. ಅದು ಎತ್ತರಕ್ಕೆ ಇರುತ್ತದೆ.. ಕತ್ತೆ ಮೇಲೆ ಬರೋಕೆ ಹೇಳು.. ಅದರ ಮೇಲೆ ನಾನೇ ಹತ್ತಿ ಬರುತ್ತೇನೆ"

"ನನ್ನನ್ನು ದತ್ತು ತೆಗೆದುಕೊಂಡರೆ, ಧಣಿಯ ಮಗನ ಹೆಂಡತಿ ನನ್ನ ಹೆಂಡತಿಯಾಗುತ್ತಾಳೆ" (ಆಹಾ ಎಂಥಹ ತರ್ಕ)
"ಹಣ ಕೊಡುತ್ತೇನೆ ಎಂದರೆ.. ಅವರ ಅಪ್ಪನಿಗೂ ದತ್ತುವಾಗುತ್ತೇನೆ"

****

ಹಣ ತರದ ಸೊಸೆಯ ಬದಲಿಗೆ, ತನ್ನ ಮಗನಿಗೆ ಯಥೇಚ್ಛ ಹಣ ಕೊಡುವ ಸಂಬಂಧ ಹುಡುಕುತ್ತಿರುವಾಗ, ಆ ಉದ್ದೇಶವನ್ನು ರಾಜ್ ಕುಮಾರ್ ವಿಫಲಗೊಳಿಸುತ್ತಾರೆ. ಆಗ ಆ ಸಂದರ್ಭವನ್ನು ರಮಾದೇವಿ ತನ್ನ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುವ ಸಲುವಾಗಿ ತನ್ನ ಪೆದ್ದು ಮಗ ನರಸಿಂಹರಾಜುವನ್ನು ಕರೆತಂದು..

"ಇವನೇ ಹುಡುಗ.. ಒಪ್ಪಿಸಿಕೊಳ್ಳಿ, ನೀವು ಹೇಳಿದಂತೆ ಕೇಳುತ್ತಾ, ಮನೆ ಅಳಿಯನಾಗಿ ನಿಮ್ಮ ಮನೆಯಲ್ಲಿಯೇ ಇದ್ದುಬಿಡುತ್ತಾನೆ, ಜೊತೆಯಲ್ಲಿ ನಾನು ಕೂಡ ಅದು ಇದು ಕೆಲಸ ಮಾಡುತ್ತಾ ನಿಮ್ಮ ಮನೆಯಲ್ಲಿಯೇ ಉಳಿದುಬಿಡುತ್ತೇನೆ, ನೆಡೆಯಿರಿ ನಮಗೂ ರೈಲ್ ಟಿಕೆಟ್ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುತ್ತಾಳೆ"

"ಏನಪ್ಪಾ ಓದಿದ್ದೀಯ" ಅಂತ ಹುಡುಗಿಯ ತಂದೆ ಕೇಳಿದಾಗ

ನರಸಿಂಹರಾಜು "ನೋಡಿ ಪುಸ್ತಕ ಇರೋ ತನಕ ಓದಿದೆ.. ಆಮೇಲೆ ಮಾಡಿದೆ ನಿದ್ದೆ.. ನಮ್ಮಮ್ಮ ಗಣಪನ ಗುಡಿಗೆ ಹೋದಾಗ.. ದೇವರ ಬಲಗಡೆಯಿಂದ ಪ್ರಸಾದ ಬಿತ್ತು.. ಆಗ ಮಗ ಬುದ್ದಿವಂತನಾಗುತ್ತಾನೆ ಎಂದರು.. ಹೇಗೂ ನಾ ಬುದ್ದಿವಂತ ಆಗುತ್ತೇನೆ, ಇನ್ಯಾಕೆ ಓದಲಿ ಅಂತ ಓದು ಬಿಟ್ಟೆ.... ನಮ್ಮಪ್ಪ ಗಣಪತಿ ಗುಡಿಗೆ ಹೋದಾಗ ಎಡಗಡೆ ಪ್ರಸಾದ ಬಿತ್ತು ... ನಿಮ್ಮ ಮಗ ದಡ್ಡನಾಗುತ್ತಾನೆ ಎಂದರು.. ಹೇಗೂ ನಾನು ದಡ್ಡನಾಗುತ್ತೇನೆ, ಸುಮ್ನೆ ಯಾಕೆ ಓದೋದು ಅಂತ ಬಿಟ್ಟೆ"

ನರಸಿಂಹರಾಜು ಈ ಮಾತನ್ನು ಹೇಳುವಾಗ ಅವರ ಮುಖಭಾವ ನೋಡಲು ಚಂದ.. !!!

ಬಾಲಕೃಷ್ಣ ಈ ಚಿತ್ರದಿಂದ ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಕಾಣತೊಡಗಿದರು. ರಾಜ್ ಕುಮಾರ್ ಅವರಿಗಿಂತ ಮೊದಲೇ ಚಿತ್ರರಂಗಕ್ಕೆ ಬಂದಿದ್ದರೂ.. ಆ ಕಾಲಕ್ಕೆ ತಯಾರಾಗುತ್ತಿದ್ದ ಚಿತ್ರಗಳು ಕಡಿಮೆಯೇ.. ಕಾಲಾನಂತರ ರಾಜ್ ಕುಮಾರ್ ಪ್ರಸಿದ್ಧರಾಗುತ್ತಾ ಬಂದ ಹಾಗೆ ಚಿತ್ರಗಳ ಸಂಖ್ಯೆಯೂ ಹೆಚ್ಚಿತು, ಜೊತೆಯಲ್ಲಿ ನರಸಿಂಹರಾಜು ಮತ್ತು ಬಾಲಕೃಷ್ಣ ಜೋಡಿಯೂ ಕೂಡ.

ಚಿಕ್ಕ ಚೊಕ್ಕ ಪಾತ್ರದಲ್ಲಿ ಬಾಲಕೃಷ್ಣ ತಮ್ಮ ಛಾಪನ್ನು ತೋರಿಸುತ್ತಾರೆ. ಸಂಭಾಷಣೆಯ ಶೈಲಿ, ಅಂಗೀಕಾ ಅಭಿನಯ ಇಷ್ಟವಾಗುತ್ತದೆ. ಚಿತ್ರದಲ್ಲಿ ಹೀಗೆ ಬಂದು ಹಾಗೆ ಹೋಗುವ ಒಂದೆರಡು ಚಿಕ್ಕ ಪುಟ್ಟ ಸನ್ನಿವೇಶಗಳು, ಅಷ್ಟರಲ್ಲಿಯೇ ತಮ್ಮ ಅಭಿನಯದ ಮಿಂಚನ್ನು ಹರಿಸುತ್ತಾರೆ.. !!!


ಈ ಚಿತ್ರದಲ್ಲಿ ವರದಕ್ಷಿಣೆ ಪಿಡುಗು ಹೇಗೆ ಹೆಣ್ಣು ಹೆತ್ತವರನ್ನು ಕಾಡುತ್ತದೆ  ಎಂದು ಸೂಚ್ಯವಾಗಿ ತೋರಿಸಿದ್ದಾರೆ.  ದಾಸನಾಗಿ, ಸಂತನಾಗಿ, ಭಕ್ತನಾಗಿ ಅಲ್ಲಿಯ ತನಕ ತೆರೆ ಮೇಲೆ ಕಂಡಿದ್ದ ರಾಜ್ ಕುಮಾರ್ ಇಲ್ಲಿ ಹಠಾತ್ ಸೂಟು ಬೂಟಿನಲ್ಲಿ ಕಂಗೊಳಿಸುತ್ತಾರೆ. ಕತ್ತರಿಸಿದ ಕೇಶರಾಶಿ, ಚಿಗುರು ಮೀಸೆ (ಅವರ ಕಡೆಯ ಚಿತ್ರದ ತನಕ ಚಿಗುರು ಮೀಸೆಯಲ್ಲಿಯೇ ಬಂದದ್ದು ಅವರ ವಿಶೇಷ).

ಡಾಕ್ಟರ್ ಪಾತ್ರದಲ್ಲಿ ಅದಕ್ಕೆ ಬೇಕಾದ ಆಯಾಮ ಒದಗಿಸಿದ್ದಾರೆ, ಹದವರಿತ ಮಾತು, ಉಚ್ಚಾರಣೆ, ಆಂಗ್ಲ ಭಾಷೆಯ ಪದಬಳಕೆ, ಎಲ್ಲವೂ ಲೀಲಾಜಾಲವಾಗಿ ಮೂಡಿಬಂದಿದೆ. ಹಿಂದಿನ ಚಿತ್ರಗಳಲ್ಲಿ ಭಕ್ತಿ ಭಾವ ಪೂರಿತ ಪಾತ್ರಗಳಿಂದ ಸಾಮಾಜಿಕ ಪಾತ್ರದಲ್ಲಿ ಅದರಲ್ಲೂ ಸುಶಿಕ್ಷಿತ ಡಾಕ್ಟರ್ ಪಾತ್ರದಲ್ಲಿ ಅಭಿನಯಿಸಿರುವ ರೀತಿ ತನ್ನೊಳಗೆ ಇರುವ ಕಲಾವಿದನ ಹಸಿವನ್ನು ತೋರಿಸಿದ್ದಾರೆ.

ಈ ಚಿತ್ರದಲ್ಲಿ ಪ್ರಮುಖ ಪಾತ್ರ ಎಂದರೆ ರಾಮಚಂದ್ರ ಶಾಸ್ತ್ರಿಯವರದ್ದು, ದುರಾಸೆಯ ಅಪ್ಪನಾಗಿ ಅವರ ಸಂಭಾಷಣೆ ವೈಖರಿ ಖುಷಿಯಾಗುತ್ತದೆ. ಮನೆಯ ಶಾಂತಿಗೆ, ನೆಮ್ಮದಿಗೆ ರುದ್ರದೇವರಿಗೆ ಜಲಾಭಿಷೇಕ, ವಿಷ್ಣುವಿಗೆ ಕ್ಷೀರಾಭಿಷೇಕ, ಆಂಜನೇಯನಿಗೆ ತೈಲಾಭಿಷೇಕ ಮಾಡಿಸಬೇಕು ಪುರೋಹಿತರು ಹೇಳಿದರೆ,  ಜಿಪುಣಾಗ್ರೇಸರ ಹೇಳುವ ಮಾತು

"ತಲೆಯ ಮೇಲೆ ಗಂಗೆಯನ್ನು ಹೊತ್ತ ಶಿವನಿಗೆ ಏಕೆ ಜಲಾಭಿಷೇಕ
ಕ್ಷೀರಸಾಗರದಲ್ಲಿಯೇ ಮಲಗಿರುವ ವಿಷ್ಣುವಿಗೆ ಒಂದು ತಂಬಿಗೆ ಹಾಲು ಏಕೆ ಬೇಕು
ಬಾಲ ಬ್ರಹ್ಮಚಾರಿ ಆಂಜನೇಯನಿಗೆ ಎಣ್ಣೆ ಸ್ನಾನ ಮಾಡಿಸೋರು ಯಾರು. . ಹೋಗ್ರಿ ಇವೆಲ್ಲ ದುಡ್ಡುಕೀಳುವ ತಂತ್ರ ಎಂದು ಬಯ್ದು ಅಟ್ಟುತ್ತಾರೆ..

ನಂತರ ".. ಗಿಣಿಯಂತೆ ಮಾತನಾಡಿ ಗುಡ್ ಬೈ ಹೇಳೋನು ನಾನು, ನನ್ನ ಹತ್ರ ದುಡ್ಡು ಕೇಳುತ್ತೀರಾ" ಎಂದು ಮೀಸೆ ತಿರುವುತ್ತಾರೆ. ಬಹುಶಃ ಅವರ ಚಿತ್ರ ಜೀವನದಲ್ಲಿ ಒಂದು ಚಿತ್ರದುದ್ದಕ್ಕೂ ಸಿಕ್ಕ ಪ್ರಮುಖ ಪಾತ್ರ ಇದಾಗಿತ್ತು ಅನ್ನಿಸುತ್ತದೆ.

ಪಂಡರಿಬಾಯಿ ಅವರು ಚಿತ್ರದ ನಿರ್ಮಾಪಕಿಯಾಗಿದ್ದರೂ ಕೂಡ ತಮ್ಮ ಪಾತ್ರಕ್ಕೆ ಅತಿ ಮಹತ್ವ ಕೊಡದೆ, ಕಥೆಯ ಜೊತೆಯಲ್ಲಿನ ಸಣ್ಣ ಪಾತ್ರವಾಗಿ ನಿಲ್ಲುವುದು ನಿಜಕ್ಕೂ ಅವರ ಮನಸ್ಸು ಎಂತಹದ್ದು ಎಂದು ತೋರಿಸುತ್ತದೆ.  ಮೈನಾವತಿ ಕೂಡ ಪಾತ್ರಕ್ಕೆ ಬೇಕಿದ್ದ ನಟನೆಯನ್ನು ತುಂಬಿಕೊಂಡು ಬಂದಿದ್ದಾರೆ.


ಮುದ್ದುಮುದ್ದಾಗಿ ಕಾಣುವ ಕಲ್ಯಾಣ್ ಕುಮಾರ್, ಪಂಡರಿಬಾಯಿ ನಂತರ ಮಮತಾಮಯಿ ತಾಯಿ ಪಾತ್ರದಲ್ಲಿ ಮಿಂಚುವ ಜಯಶ್ರೀ, ಘಟವಾಣಿಯಾಗಿ ರಮಾದೇವಿ, ಅವರ ಪೆದ್ದು ಮಗನಾಗಿ ನರಸಿಂಹರಾಜು ಸುಲಲಿತ ಅಭಿನಯ ನೀಡಿದ್ದಾರೆ.

ಇಲ್ಲಿ ರಾಜ್ ಕುಮಾರ್ ತುಂಬಾ ಮುದ್ದಾಗಿ ಕಾಣಲು ಕಾರಣ ಅವರ ಕತ್ತರಿಸಿದ ಕೇಶರಾಶಿ, ಚಿಗುರು ಮೀಸೆ, ಅಭಿನಯದಲ್ಲಿ ಪಳಗಿರುವ ಲಕ್ಷಣಗಳಿಂದ ಹಿತವಾಗಿದ್ದಾರೆ. ಶುದ್ಧ ಕನ್ನಡ ಭಾಷೆಯ ಉಚ್ಚಾರಣೆ ಅವರ ಮೊದಲ ಚಿತ್ರದಿಂದಲೂ ಇತ್ತು, ಆದರೆ ಈ ಚಿತ್ರದಲ್ಲಿ ಅಚ್ಚುಕಟ್ಟಾಗಿ ಆಂಗ್ಲ ಪದ ಬಳಕೆ, ಆ ಡಾಕ್ಟರ್ ವೃತ್ತಿಗೆ ಇರಬೇಕಾದ ಗಂಭೀರತೆ ತೋರುವುದು ಖುಷಿಕೊಡುತ್ತದೆ.


ಸಾಮಾಜಿಕ ಸಂದೇಶವಾಗಿ ಈ ಚಿತ್ರ ವರದಕ್ಷಿಣೆಯ ಪಿಡುಗನ್ನು ಗಮನದಲ್ಲಿಟ್ಟುಕೊಂಡು ಬೆಳ್ಳಿ ತೆರೆಯನ್ನು ಅಲಂಕರಿಸಿದ್ದು ೧೯೫೭ರಲ್ಲಿ.. ಇದು ರಾಜಕುಮಾರ್ ಅವರ ಬಿಡುಗಡೆಗೊಂಡ ಏಳನೇ ಮಣಿಯಾಗಿ  ತಾಯಿ ಭುವನೇಶ್ವರಿಯ ಮಾಲೆಯಲ್ಲಿ ಸೇರಿಕೊಂಡು ಬಿಟ್ಟಿತು. !!

ಮತ್ತೊಮ್ಮೆ ಇನ್ನೊಂದು ಚಿತ್ರರತ್ನದ ಜೊತೆಯಲ್ಲಿ!!!

Friday, January 27, 2017

ಕಾಣದೆ ಹೋದ ಸತಿ ನಳಾಯಿನಿ (1956) (ಅಣ್ಣಾವ್ರ ಚಿತ್ರ ೦೬ / ೨೦೭)

ದೂರದರ್ಶನದ ಆರಂಭದ ದಿನಗಳು..

ಮನೆಯಲ್ಲಿ ಟಿವಿ ಇದೆ ಎನ್ನುವುದೇ ಅವರ ಠೀವಿಗೆ ಇನ್ನೊಂದು ಕಾರಣವಾಗುತ್ತಿತ್ತು.. ಆ ಪೆಟ್ಟಿಗೆಯ ಹೊರಮೈಯಲ್ಲಿ ಕಾಣುವ ಗಾಜಿನ ತಟ್ಟೆಯ ಹಿಂದೆ ಮೂಡುತ್ತಿದ್ದ ಚಿತ್ರಗಳು ನಿಜವೇನೋ ಎನ್ನುವ ಭ್ರಮೆ ನಮಗೆ.. ಮುಟ್ಟೋಣ ಎಂದರೆ.. ಮುಟ್ಟುವುದಿರಲಿ, ಟಿವಿ ನೋಡಲು ನಮ್ಮನ್ನು ಒಳಗೆ ಸೇರಿಸುತ್ತಿದ್ದದ್ದೇ ಒಂದು ದೊಡ್ಡ ಸಾಹಸ.. ಇನ್ನೂ ಅದನ್ನು ಮುಟ್ಟುವುದು ಅಂದರೆ ದೇವರೇ ಗತಿ.. ಅದರಲ್ಲೂ ಪೆಟ್ಟಿಗೆಯೊಳಗೆ ಕೂತ ಟಿವಿಯನ್ನು .. ಅದರ ಬಾಗಿಲು ಸರಿಸಿ...  ಸ್ವಿಚ್ ಹಾಕಿ.. ಟಿವಿಯನ್ನು ಆನ್ ಮಾಡುವುದು ಗೌರವದ ಕೆಲಸ ಮತ್ತು ದರ್ಪವೂ ಇರುತ್ತಿತ್ತು.. ನನಗೆ ಗೊತ್ತು ಎಲ್ಲಾ ಎನ್ನುವ ಅಹಂ.. 

ಸರಿ.. ಟಿವಿ ಆನ್ ಮಾಡಿದರು.. ಕಾರ್ಯಕ್ರಮ ಶುರುವಾಯಿತು.. ಆಗಿನ ಕಾಲದಲ್ಲಿ ಜಾಹಿರಾತುಗಳು ಕಡಿಮೆ.. ಆದರೂ ನಮಗೆ ಟಿವಿ ನೋಡುವ ಚಪಲ.. ವಾರ್ತೆಗಳು, ಗೀತಾ ಚಿತ್ರ, ಚಿತ್ರಮಂಜರಿ.. ಕುಡಿತದ ಕೆಡುಕುಗಳು ಇದರ ಫಲಕ.. ಯಾವುದನ್ನು ಬಿಡುತ್ತಿರಲಿಲ್ಲ.. ಇದೆಲ್ಲದರ ಮಧ್ಯೆ ವಿದ್ಯುತ್ ಹೋಯಿತು ಅಂದರೆ.. ಕೆ ಇ ಬಿ ಗೆ ಹಿಡಿಶಾಪ.. ಕರೆಂಟ್ ಇಲ್ಲದ ಬೋರ್ಡ್ ಅಂತ ಹಾಸ್ಯ ಬೇರೆ.. 

ಸರಿ ಹೋಗಿದ್ದ ಕರೆಂಟ್ ಬಂತು.. ಕಾರ್ಯಕ್ರಮ ಮುಂದೆ ಓಡಿ ಹೋಗಿತ್ತು.. ಆದರೂ ನೋಡುವ ಚಪಲ ಕಡಿಮೆಯಾಗಿರುತ್ತಿರಲಿಲ್ಲ.. ಅರ್ಥವಾದಷ್ಟು ನಮಗೆ ಎನ್ನುವ ಚಪಲ.. ಇದೆಲ್ಲದರ ಮಧ್ಯೆ ಶುರುವಾಗುತ್ತಿತ್ತು.. ಆಂಟೆನಾ ಭರಾಟೆ.. ಗಾಳಿಗೆ, ಕಾಗೆಯ ಮಂಗಾಟಕ್ಕೆ, ಮಂಗಗಳ ಕಾದಾಟಕ್ಕೆ, ಬಿಸಿಲಿಗೆ.. ಚಿತ್ರಗಳು ಸರಿಯಾಗಿ ಮೂಡುತ್ತಿರಲಿಲ್ಲ.. ಆದರೂ ಹಠ ಬಿಡದ ವಿಶ್ವಾಮಿತ್ರನ ರೀತಿ  ಟಿವಿ ಪರದೆಯ ಮೇಲೆ ನಮ್ಮ ನೋಟ.. ಮನೆಯ ಮೇಲೆ ಯಾರೋ ದೊಡ್ಡವರು ಹತ್ತಿ ಅಂಟೆನಾವನ್ನು ಆ ಕಡೆ ಈ ಕಡೆ ಸರಿ ಮಾಡುತ್ತಾ.. ಬಂತಾ ಬಂತಾ ಎಂದು ಕೇಳುವುದು.. ನಾವು ಹುಮ್ಮಸ್ಸಿನಿಂದ ಬರ್ತಿಯಾ ಇದೆ, ಆ ಸ್ವಲ್ಪ.. ಇನ್ನೊಂದು ಚೂರು... ಆ ಆ ಇವಾಗ ಬಂತು.. ಅಯ್ಯೋ ಸರಿಯಾಗಿ ತಿರುಗಿಸಿ.. ಮತ್ತೆ ಇನ್ನೊಂದು ಚೂರು.. ಆ ಇವಾಗ ಸಕತ್.. ಸೌಂಡ್ ಕೊಡಿ.. ಹೀಗೆ ನಮ್ಮ ಕಾಮೆಂಟರಿ ಓಡುತ್ತಲಿತ್ತು.. ಕಡೆಗೆ ಟಿವಿ ಪರದೆಯ ಮೇಲೆ ಚಿತ್ರ ಸರಿಯಾಗಿ ಮೂಡುತ್ತಿದೆ ಎಂದಾಗ.. ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.. ಜೊತೆಯಲ್ಲಿ ಎದುರು ಮನೆಯವರು, ಪಕ್ಕದ ಮನೆಯವರು..ನಮ್ಮನ್ನೆಲ್ಲ ಹೊಗಳಿದರು ಎಂದರೆ.. ನಾವು ಕೊಂಬು ಹೊತ್ತ ಮಹಿಷಾಸುರಗಳಾಗಿ ಬಿಡುತ್ತಿದ್ದೆವು.. 

ಇದೇನು ರಾಜ್ ಅವರ ಚಿತ್ರದ ಬಗ್ಗೆ ಅಂತ ಹೇಳಿ.. ಇನ್ನೇನೂ ಕೊರೀತಾ ಇದ್ದೀನಿ ಅಂದು ಕೊಂಡ್ರಾ.. ಇರಿ.. ವಿಷಯಕ್ಕೆ ಬರುತ್ತೇನೆ.. 

ಸರಿ ಟಿವಿ ಚಿತ್ರಗಳು ಸರಿಹೋಯಿತು.. ಇನ್ನೇನು ಎಲ್ಲವೂ ಸರಿಹೋಗಿದೆ.. ಎಂದು ಕೊಂಡಾಗ ಶುರುವಾಗುತ್ತಿತ್ತು.. "ಅಡಚಣೆಗಾಗಿ ಕ್ಷಮಿಸಿ.. "

ಈ ಫಲಕವನ್ನೇ ನೋಡುತ್ತಾ ಕೂರುತ್ತಿದ್ದೆವು.. ಮನೆಯವರು.. "ಲೋ. .. ಕಾರ್ಯಕ್ರಮ ಶುರುವಾದಮೇಲೆ.. ಹೇಳ್ರೋ ಅಂತ ಹೊರಗೆ ಕೂತಿರೋರು.. ನಾವು ಯಾವಾಗ ಸರಿಹೋಗುತ್ತೆ ಅಂತ ಜಾತಕ ಪಕ್ಷಿಯ ಹಾಗೆ ನೋಡುತ್ತಲೇ ಕೂರುತ್ತಿದ್ದೆವು.. 

ರಾಜ್ ಅವರ ಐದು ಚಿತ್ರಗಳು ಸರಾಗವಾಗಿ ನೋಡಲು ಅನುಕೂಲವಾಯಿತು.. ನನಗೆ ಅರಿವಿಗೆ ಬಂದ ವಿಷಯಗಳನ್ನು ಬರೆದು ಆಯಿತ್ತು.. ಮುಂದಡಿ ಇಡೋಣ ಅಂತ ಸಾಗಿದರೆ.. ಕಂಡಿದ್ದು "ಅಡಚಣೆಗಾಗಿ ಕ್ಷಮಿಸಿ" ಫಲಕ.. 

ಗೂಗಲೇಶ್ವರ.. ಅಂಗಡಿಯೇಶ್ವರ, ಆನ್-ಲೈನೇಶ್ವರ, ಟೋಟಲ್-ಕನ್ನಡ ಡಾಟ್ ಕಾಮೇಶ್ವರ, ಯು ಟ್ಯುಬೇಶ್ವರ...  ಹೀಗೆ ದ್ವಾದಶ ಲಿಂಗೇಶ್ವರಗಳ ದರ್ಶನ ಮಾಡಿದರೂ.. ರಾಜ್ ಅವರ ಆರನೇ ಚಿತ್ರ ಸತಿ ನಳಾಯಿನಿ ಚಿತ್ರದ ಪ್ರತಿ ಎಲ್ಲೂ ಸಿಗುತ್ತಿಲ್ಲ.. ಎಲ್ಲರ ಉತ್ತರೇಶ್ವರ ಒಂದೇ.. ಆ ಚಿತ್ರದ ಪ್ರತಿ ಸಿಗೋಲ್ಲ ಎಂದು.. 

೧೯೫೭ರಲ್ಲಿ ಟಿ ಆರ್ ಎಸ್ ಗೋಪು ನಿರ್ದೇಶನದಲ್ಲಿ, ಕಾಮಧೇನು ಫಿಲಂಸ್ ಲಾಂಛನದಲ್ಲಿ ತಯಾರಾದ ಈ ಚಿತ್ರದಲ್ಲಿ ರಾಜ ಕುಮಾರ್ ಮತ್ತು ಪಂಡರೀಬಾಯಿ ಅವರ ಅಭಿನಯವಿತ್ತು. ಸಂಗೀತ ಟಿ ಕೆ ಕುಮಾರ್ ಅವರದ್ದು, ಛಾಯಾಗ್ರಹಣ ಸಿ ಜೆ ಮೋಹನ್ ಅವರದ್ದು. 

ಒಂದೊಮ್ಮೆ ಈ ಚಿತ್ರದ ಪ್ರತಿ ಸಿಕ್ಕರೆ.. ಅದರಲ್ಲಿ  ಸಿಕ್ಕ ಅನುಭವದ ಅಕ್ಷರ ರೂಪವನ್ನು ಖಂಡಿತಾ ನಿಮ್ಮ ಮುಂದೆ ಇಡುತ್ತೇನೆ.. 

ಮತ್ತೊಂದು ರಾಜ್ ಅವರ ಮಾಣಿಕ್ಯ ಮಣಿಯ ಜೊತೆ ಬರುತ್ತೇನೆ.... !

Wednesday, January 18, 2017

ದೇಹದೊಳಗಿನ ಆತ್ಮಕ್ಕೆ ಕಣ್ಣು ಕೊಡುವ ಓಹಿಲೇಶ್ವರ (1956) (ಅಣ್ಣಾವ್ರ ಚಿತ್ರ ೦೫ / ೨೦೭)

ಕ್ಯಾಲೆಂಡರ್ ಮಗುಚಿದೆ.. ಇನ್ನೊಂದು ವರ್ಷ ಶುರುವಾಯಿತು ಅನ್ನೋದು ಗೊತ್ತಾಯಿತು.. ಕಾರಣ ಜನವರಿ ತಿಂಗಳು ಅಂತ ಕಿರುಚುತಿತ್ತು ಕ್ಯಾಲೆಂಡರ್. ಓಹೋ ಆಗಲೇ ಹದಿನೆಂಟು ದಿನಗಳು ಕಳೆದುಹೋಗಿವೆ.. ಇನ್ನು ಏನೂ ಬರೆದಿಲ್ಲ.. ಸರಿ ಹೆಂಗೆ ಶುರುಮಾಡೋದು ಅನ್ನೋದು ಅನ್ನಿಸಿದಾಗ ನನ್ನ ಅದ್ಭುತ ಗೆಳತೀ ಹೇಳಿದರು.. ಸುಮ್ಮನೆ ನೆಡೆಯುತ್ತಾ ಹೋಗಿ.. ಗುರು ನಿಮ್ಮ ಹಿಂದೆ ಇರಲಿ ಗುರಿ ನಿಮ್ಮ ಮುಂದೆ ಇರಲಿ.. ಮೈಲಿಗಲ್ಲುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.

ಅದ್ಭುತ ಮಾತು!!!

ಅಣ್ಣಾವ್ರ ಫೋಟೋ ಕಡೆ ತಿರುಗಿದೆ.. "ಓಹಿಲೇಶ್ವರ"ನಾಗಿ ಬರುತ್ತಿದ್ದೇನೆ ಎಂದರು.


ವಿಶ್ವಕಲಾ  ಚಿತ್ರ ಲಾಂಛನದಲ್ಲಿ ೧೯೫೬ ರಲ್ಲಿ ತಯಾರಾದ ಈ ಚಿತ್ರದ ರಾಜ್ ಅವರ ಐದನೇ ಚಿತ್ರ. ಈ ಚಿತ್ರದ ಒಂದೇ ಒಂದು ನೆನಪು "ಈ ದೇಹದಿಂದ ದೂರನಾದೆ ಏಕೆ ಆತ್ಮನೇ" ಹಾಡು. ಘಂಟಸಾಲ ಮತ್ತು ಜಿ ಕೆ ವೆಂಕಟೇಶ್ ಅವರ ಅದ್ಭುತ ಜೋಡಿಯಲ್ಲಿ ಬಂದ ಈ ಗೀತೆ ತನ್ನ ಸಾಹಿತ್ಯದಿಂದ, ಹಾಡುಗಾರಿಕೆಯಿಂದ ಮನಸ್ಸೆಳೆದಿತ್ತು. ಸರಿ ನೋಡಲು ಶುರುಮಾಡಿದೆ.

ಈ ಚಿತ್ರ ವನ್ನು ನೋಡಿ ಮುಗಿಸಿದಾಗ ಮನದೊಳಗೆ ಅಡಗಿದ್ದ ಮಾತುಗಳೇ ಈ ಲೇಖನವಾಗಿ ಹೊರಬಂದಿದೆ..

ಗಿಡದ ಬೆಳವಣಿಗೆ ಮೊಳಕೆಯಲ್ಲಿ ಕಾಣಬಹುದು. ಮರ ಆಗಬೇಕು ಎಂದರೆ ಮರಗಟ್ಟಬೇಕು ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದೇಶ ಸಾರುವ ಚಿತ್ರ ಇದು.

ವಿಧಿಯಾಟದ ಮುಂದೆ ನಾವೆಲ್ಲರೂ ಕೈಗೊಂಬೆಗಳು. ಪೂರ್ವನಿರ್ಧಾರಿತ ಬರಹದಂತೆ ನಮ್ಮ ಜೀವನ. ಮುದ್ದುಕುವರನಾಗಿ ಜನಿಸುವ ಈ ಕಂದನಿಗೆ, ರಾಜ ಮನೆತನದ ಗತ್ತು ಗೈರತ್ತು ಏನೂ ಇರುವುದಿಲ್ಲ. ಒಂದು ದಿನ ತನ್ನ ತಂದೆಯೊಡನೆ ಪ್ರಯಾಣ ಮಾಡುತ್ತಿದ್ದಾಗ ಜೀವನದ ಮಗ್ಗಲುಗಳ ದರ್ಶನವಾಗುತ್ತದೆ. ಕಡುಬಡವನ ಹಪಾಹಪಿ, ಕುರುಡು ಮಗುವಿನ ಆಕ್ರಂಧನ, ಇವರೆಡು ದೃಶ್ಯಗಳು ಯುವರಾಜನ ಮಾನಸ ಸರೋವರವನ್ನು ಅಲುಗಾಡಿಸುತ್ತದೆ.

ಜೀವನ ಎಂದರೆ ಇಷ್ಟೆಯೇ.. ಬಡತನ, ಕುರುಡುತನ, ಯಾಕೆ ದೇವರ ಸೃಷ್ಟಿ ಏತಕ್ಕೆ ಹೀಗೆ.. ಈ ರೀತಿಯ ನಾನಾ ಪ್ರಶ್ನೆಗಳು ಆ ಮುಗ್ಧ ಮನದಲ್ಲಿ ಹುಟ್ಟಿದಾಗ, ಅವನ ತಂದೆ ಸಮಂಜಸ ಉತ್ತರ ಕೊಡದೆ, ನಾ ಬಡತನವನ್ನ ನಿರ್ಮೂಲನೆ ಮಾಡುತ್ತೇನೆ ಎಂದು ಒಂದಷ್ಟು ಕಾಸು ಕೊಡುತ್ತೇನೆ ಎಂದು ಭರವಸೆ ಕೊಡುತ್ತಾನೆ. ಆದರೆ ಬಡವರಿಗೆ ಸ್ವಾಭಿಮಾನ ದೊಡ್ಡದಾಗಿರುತ್ತದೆ.
ಆ ಬಾಲಕನ ಮನದಲ್ಲಿನ ಗೊಂದಲಗಳು ಇನ್ನಷ್ಟು ಜಟಿಲವಾಗುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ಬೆಳೆದಂತೆ ಅವು ದೊಡ್ಡದಾಗುತ್ತದೆ. ರಾಜಭೋಗಗಳು ಇದ್ದರೂ ದೇವರ ಕಡೆ ಇದ್ದ ಮನಸ್ಸು ಐಹಿಕ ಭೋಗಗಳಿಗೆ ಬಲಿಯಾಗುವುದಿಲ್ಲ.

ವಿಧಿಯಾಟದಂತೆ ಅಪ್ಪ ಅಮ್ಮ ಸಾವಿನ ಸುಖವನ್ನು ಅಪ್ಪಿಕೊಂಡಾಗ, ಮಾರುವೇಷದಲ್ಲಿ ಬರುವ ಈಶ್ವರ, "ನಿನಗೆ ಲೌಕಿಕ ಜ್ಞಾನಕ್ಕಿಂತ ಪಾರಮಾರ್ಥಿಕ ಜ್ಞಾನ ಹೆಚ್ಚು ಸುಖಕೊಡುತ್ತದೆ. ರೊಟ್ಟಿ ತಿನ್ನುವನೊಬ್ಬ, ನೀರು ಕುಡಿಯುವವ ಒಬ್ಬ ಎನ್ನುವಂತೆ ಆದರೆ ಉಪಯೋಗವಿಲ್ಲ. ಕಾಯಕವೇ ಕೈಲಾಸ ಎಂಬ ನುಡಿಯಂತೆ ನೆಡೆದುಕೋ" ಎನ್ನುವ ಮಾತನ್ನು ಹೇಳಿದಾಗ, ತಂದೆ ತಾಯಿಯ ಅಂತ್ಯ ಸಂಸ್ಕಾರವನ್ನು ಮಾಡದೆ, ಕಪಟಿ ರಾಜಗುರುವಿನ ಕೋಪಕ್ಕೆ ಗುರಿಯಾಗುತ್ತಾನೆ.

ಅನೇಕ ಭಾವನೆಗಳನ್ನು ಎದುರಿಸಿದರು, ಕುಗ್ಗದೆ, ಹಿಗ್ಗದೇ, ಕಷ್ಟಗಳನ್ನು ಎದುರಿಸಿ ಕಡೆಗೂ ಶಿವನ ಒಲುಮೆಯಿಂದ ಓಹಿಲೇಶ್ವರನಾಗಿ ಮುಕ್ತಿ ಹೊಂದುತ್ತಾನೆ.


ಈ ಸರಳಕಥೆಯನ್ನು ಅಚ್ಚುಕಟ್ಟಾಗಿ, ಅನೇಕ ಹಾಡುಗಳು, ಮತ್ತು ಹಿತ ಮಿತ ಸಂಭಾಷಣೆಯ ಜಲಕದಲ್ಲಿ ನಿಲ್ಲಿಸಿದ್ದಾರೆ ಟಿ ವಿ ಸಿಂಗ್ ಠಾಕೂರ್ ಅವರು.  ಜಿಕೆ ವೆಂಕಟೇಶ್ ಅವರ ಉತ್ತಮ ಸಂಗೀತವಿದ್ದ ಈ ಚಿತ್ರದಲ್ಲಿ ರಾಜ್ ಅವರ ಹಾಡುಗಾರಿಕೆಯ ಪ್ರತಿಭೆ ಅಲ್ಲಲ್ಲಿ ಕೇಳಸಿಗುತ್ತದೆ. ಕೆಲವು ಶ್ಲೋಕಗಳನ್ನು, ವಚನದ ರೂಪದಲ್ಲಿರುವ ಕೆಲವು ಮಾತುಗಳನ್ನು ಹಾಡಿನ ರೂಪದಲ್ಲಿ ತಂದಿರುವ ಈ ಚಿತ್ರ ಬಹುಶಃ ರಾಜ್ ಅವರ ಗಾಯನ ಪ್ರತಿಭೆಯ ಒಂದು ಪ್ರಭೆ ಕಂಡು ಬರುತ್ತದೆ.

ಜಿ ವಿ ಅಯ್ಯರ್ ಮತ್ತೆ ದುಷ್ಟನ ಪಾತ್ರದಲ್ಲಿ ಮಿಂಚುತ್ತಾರೆ. ಅವರಿಗೆ ತೊಡರುಗಾಲು ಕೊಡುವ ಪಾತ್ರದಲ್ಲಿ ಶುಖನಾಗಿ ನರಸಿಂಹರಾಜು ನಿಂತಿದ್ದಾರೆ.


ನರಸಿಂಹರಾಜು ಪಿಶಾಚಿಯ ಕಾಟದಿಂದ ಪೇಚಾಡುತ್ತಿದ್ದಾಗ ಬರುವ ಒಂದು ಪುಟ್ಟ ಸಂಭಾಷಣೆ ನಗೆ ತರಿಸುತ್ತದೆ.
ಭೂತಾಕಾರವಾಗಿ ನಿಂತು ಗಹಗಹಿಸುವ ಪಿಶಾಚಿ
"ನಾನು ಒಬ್ಬರಿಗೂ ಹಿಂಸೆ ಕೊಡೋಲ್ಲ"
ಅದಕ್ಕೆ ನರಸಿಂಹರಾಜು ಅವರ ಉತ್ತರ
"ದರ್ಶನ ಕೊಟ್ಟರೆ ಸಾಕು ಹಿಂಸೆ ಬೇರೆ ಕೊಡಬೇಕೇ"
ನಾನು ಯಾರ ಪ್ರಾಣವನ್ನು ತೆಗೆಯುವುದಿಲ್ಲ"
"ಅದೇ ಹೋಗುತ್ತೆ.. ನಿನ್ನ ನೋಡಿದ ತಕ್ಷಣ"


ಚುಟುಕು ಸಂಭಾಷಣೆ ಖುಷಿ ಕೊಡುತ್ತದೆ.

ಉಳಿದ ಪಾತ್ರಗಳಲ್ಲಿ ಅರ್ಧಂಬರ್ಧ ಬುದ್ಧಿವಂತಿಕೆಯ ಪಾತ್ರದಲ್ಲಿ ಮಹಾರಾಜನಾಗಿ ಕಲ್ಯಾಣ್ ಕುಮಾರ್ ಇದ್ದರೇ, ಓಹಿಲೇಶ್ವರನ ತಂದೆಯಾಗಿ ಎಚ್ ಎಲ್ ರಾಮಚಂದ್ರಶಾಸ್ತ್ರಿ ಬರುತ್ತಾರೆ. ಮಿಕ್ಕ ಕೆಲವು ಪಾತ್ರಗಳಲ್ಲಿ ಬರುವ ನಟರು ನಟಿಯರು ತಮ್ಮ ತಮ್ಮ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ನಟನೆಯನ್ನು ನೀಡಿದ್ದಾರೆ.

ಈ ಚಿತ್ರದ ಉತ್ತಮ ಅಂಶ ಎಂದರೆ ಕೆಲವು ನೆನಪಲ್ಲಿ ಉಳಿಯುವ ಸಂಭಾಷಣೆಗಳು.

ಮೇಲೆ ಹೇಳಿದ ಸಂಭಾಷಣೆಯ ಜೊತೆಯಲ್ಲಿ ಇನ್ನೊಂದಿಷ್ಟು
"ನಿಮ್ಮ ರಾಜ್ಯಕ್ಕೆ  ನೀವು ಹೋಗಿ
ನನ್ನ ರಾಜ್ಯಕ್ಕೆ ನಾನು ಹೋಗುತ್ತೇನೆ"  ಓಹಿಲೇಶ್ವರನಿಗೆ ಪ್ರಜೆಗಳು ರಾಜ್ಯ ನೋಡಿಕೊಳ್ಳಿ ಧಣಿ ಎಂದಾಗ ಹೇಳುವ ಮಾತಿದು.

"ಸಾವಿಲ್ಲದ ಮನೆಯಿಂದ ಬೂದಿ ಕೊಡಪ್ಪ" ಎಂದಾಗ ಹಳ್ಳಿಯವ "ಅಯ್ಯೋ ಸಿಹಿಯಾದ ಬೇವಿನ ಗಿಡ ತಂದು ಕೊಡಿ" ಎನ್ನುತ್ತಾನೆ. ಇಂತಹ ಮಾರ್ಮಿಕ ಮಾತಿದು.

ಇಬ್ಬರು ರಾಜಭಟರು ಬಂದು "ದೇವರು ಕರೆಯುತ್ತಿದ್ದಾನೆ ಬಾ" ಎಂದಾಗ ನರಸಿಂಹರಾಜು ಹೇಳುವ ಮಾತು
"ದೇವರು ಕರೆದರೆ ನಾಲ್ಕು ಜನದ ಜೊತೆ ಹೋಗಬೇಕು ನೀವು ಇಬ್ಬರೇ ಬಂದಿದ್ದೀರಲ್ಲೋ".. ನಗು ಬರುತ್ತದೆ ಹಾಗೆಯೇ ಅದರೊಳಗಿನ ಸಂದೇಶ  ಭರಿತ ಮಾತು ಸೂಪರ್.

ರಾಜ್ ತಮ್ಮದೇ ಪರಿಧಿಯಲ್ಲಿ ಈ ಚಿತ್ರದಲ್ಲಿ ಕಾಡುತ್ತಾರೆ. ಉತ್ತಮ ಚಿತ್ರ.. ಉತ್ತಮ ಗೀತೆಗಳು.. ಉತ್ತಮ ಅಭಿನಯ ಈ ಚಿತ್ರದ ತಾಕತ್ತು. ಬಸವಣ್ಣ, ಅಕ್ಕ ಮಹಾದೇವಿ ಹೀಗೆ ವಚನಕಾರರ ಮಾತುಗಳನ್ನು ಸೋಮನಾಥ ಎಂಬ ಅಂಕಿತನಾಮದಲ್ಲಿ ಉಪಯೋಗಿಸಿದ್ದೇವೆ ಎಂಬ ಫಲಕ ಆರಂಭದಲ್ಲಿ ತೋರಿಸುವುದು ನಿರ್ದೇಶಕರ ಜಾಣ್ಮೆ ಮತ್ತು ಆ ಮಹಾನ್ ವಚನಕಾರರ ಪದ ಸಂಪತ್ತನ್ನು ಗೌರವ ಪೂರಿತವಾಗಿ ಉಪಯೋಗಿಸುವ  ರೀತಿ ಇಷ್ಟವಾಗುತ್ತದೆ.


ಜೀವನ ಆರಂಭವಾದಾಗ ನಮ್ಮ ಜೀವನ ಹೇಗಿರುತ್ತದೆ ಎನ್ನುವ ಒಂದು ಚಿಕ್ಕ ಟ್ರೈಲರ್ ನಮಗೆ ಸಿಗುತ್ತದೆ, ಅದರ ಜಾಡು ಹಿಡಿದು ಹೊರಟರೆ.. ಜೀವನ ಸಾಕ್ಷಾತ್ಕಾರ ಎನ್ನುವ ಸಂದೇಶವನ್ನು ಹೊತ್ತು ತಂದ ಈ ಚಿತ್ರ ಒಂದು ರತ್ನವಾಗಿ ನಮ್ಮ ಮುಂದೆ ನಿಲ್ಲುತ್ತದೆ.

ಮತ್ತೊಂದು ಚಿತ್ರ ರತ್ನದ ಜೊತೆಯಲ್ಲಿ ರಾಜ್ ಬರುತ್ತಾರೆ.. !!!