ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ||
ಇದೊಂದು ವಚನ ಸಾಕು ಸರ್ವಜ್ಞ ಮೂರ್ತಿ ಎಂಬ ಮಹಾಶಿಖರವನ್ನು, ವಿದ್ಯೆ, ಅನುಭವ ಎಂಬ ಮಹಾನ್ ಪ್ರತಿಭೆಯನ್ನು ಗುರುತಿಸೋಕೆ...
ಡಿವಿಜಿ ಅಜ್ಜನ ಕಗ್ಗಗಳು, ಸರ್ವಜ್ಞನ ವಚನಗಳು ಇವೆರಡು ಸಮಾಜವನ್ನು ನೋಡುತ್ತಾ, ಸಮಾಜದಲ್ಲಿನ ಹುಳುಕುಗಳು, ಸಮಾಜದಲ್ಲಿನ ಉತ್ತಮ ದೃಶ್ಯಗಳು, ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಬಲ್ಲ ಮಹಾನ್ ಮಾರ್ಗಸೂಚಿಗಳು.. ಇತ್ತ ಆಧ್ಯಾತ್ಮವೂ ಹೌದು, ಇತ್ತ ಗುಣಾತ್ಮಕ ಸಂದೇಶಗಳು ಹೌದು.. ಎರಡರ ಸಮಮಿಶ್ರಣಗಳು ಇವು.
ಈ ಪಾತ್ರ ಒಂದು ರೀತಿಯ ವಿಶಿಷ್ಟತೆಯಿಂದ ಕೂಡಿದೆ ಕಾರಣ.. ಸಿದ್ಧ ಸೂತ್ರಗಳ ಸುತ್ತ ಸುತ್ತೋದಿಲ್ಲ.. ನಿರ್ದಿಷ್ಟ ನಾಯಕಿ, ಖಳನಾಯಕ, ಹಾಸ್ಯ.. ಹಾಡುಗಳು ಇವುಗಳ ಜಂಜಾಟವಿಲ್ಲದೆ.. ಎಲ್ಲರಿಗೂ ತಿಳಿದ.. ಎಲ್ಲರಿಗೂ ತಿಳಿಯದ .. ಹೌದು ಮತ್ತೊಮ್ಮೆ ಓದಿ.. ವಿಷಯಗಳನ್ನು, ಆ ಮಹಾನ್ ಪ್ರತಿಭೆಯ ಜೀವನ ಚರಿತ್ರೆಯನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನವನ್ನು ಸಾಹಿತಿ ಎಂ ನರೇಂದ್ರಬಾಬು ಅವರು ಮಾಡಿದ್ದಾರೆ. ಅವರ ಪರಿಶ್ರಮ ಎದ್ದು ಕಾಣುತ್ತದೆ, ಕಾರಣ ಕಥೆ, ಸಂಭಾಷಣೆ, ಹಾಡುಗಳು, ನಿರ್ಮಾಣ ಅವರದ್ದೇ.. ಇಡೀ ಚಿತ್ರವನ್ನು ತಮ್ಮ ಭುಜದ ಮೇಲೆ ಹಾಕಿಕೊಂಡಿದ್ದಾರೆ.. ಸಿದ್ಧ ಪ್ರತಿಯನ್ನು ನಿರ್ದೇಶಕ ಆರೂರು ಪಟ್ಟಾಭಿಯವರಿಗೆ ವಹಿಸಿದ್ದಾರೆ.
ಇಡೀ ಚಿತ್ರ ಕೆಲವೊಂದು ದೃಶ್ಯಗಳನ್ನು ಬಿಟ್ಟರೆ, ಮಿಕ್ಕ ದೃಶ್ಯಗಳು ಸ್ಟುಡಿಯೋ ಸೆಟ್ಟಿನಲ್ಲಿಯೇ ಅಂದರೆ ಒಳಾಂಗಣದಲ್ಲಿ ನೆಡೆದಿರುವುದು. ಹಾಗಾಗಿ ದೃಶ್ಯ ಜೋಡಣೆ ಕೆಲವೊಮ್ಮೆ ಆಹಾ ಅನಿಸಿದರೆ.. ಕೆಲವೊಮ್ಮೆ ಉಫ್ ಎನಿಸುತ್ತದೆ.
ಸರ್ವಜ್ಞ ಮೂರ್ತಿ ಇದೊಂದು ಕಾಲ್ಪನಿಕವಲ್ಲ.. ತನ್ನದೇ ಶತಮಾನದಲ್ಲಿ ತನ್ನ ಜೀವಿತಕಾಲದಲ್ಲಿ ತನ್ನ ಬುದ್ಧಿಮತ್ತೆಗೆ ತಾಕಿದಂತೆ, ಸಮಾಜದಲ್ಲಿ ನೆಡೆವ ಘಟನೆಗಳನ್ನು ಕೆಲವು ಪದಗಳಲ್ಲಿ ಹಿಡಿದಿಟ್ಟು ಅಂದಿನ ಸಮಾಜಕ್ಕೂ.. ಇಂದಿನ ಸಮಾಜಕ್ಕೂ.. ಮತ್ತೆ ಶತಮಾನಗಳೇ ಕಳೆದರೂ ಎಂದಿಗೂ ಚಿರನೂತನವಾಗಿರುವ ಸಂದೇಶಗಳನ್ನು ಕೊಟ್ಟ ಮಹಾನ್ ಪ್ರತಿಭಾವಂತ..
ಶಿವಗಣದ ಒಂದು ಪ್ರಮುಖ ಎಂಬ ವ್ಯಾಖ್ಯಾನ ಈ ಚಿತ್ರಕತೆಯಲ್ಲಿ ಸಿಗುತ್ತದೆ.. ಅದು ನಿಜವಿದ್ದರೂ ಇರಬಹುದು.. ಕಾರಣ.. ಆತನಿಗೆ ಲಿಂಗಧಾರಣೆಯಾದ ಮೇಲೆ, ಶಿವಶರಣರ ಪದ್ದತಿಗಳನ್ನು ಪಾಲಿಸುವುದು ಇದೊಂದು ಕಾರಣಸಿಗುತ್ತದೆ.
ಈ ಚಿತ್ರದ ತನಕ ರಾಜಕುಮಾರ್ ಅವರ ಹೆಸರು ಪರದೆಯ ಮೇಲೆ "ರಾಜಕುಮಾರ್"ಅಂತ ತೋರಿಸುತ್ತಿದ್ದರು.. ಈ ಚಿತ್ರದಲ್ಲಿ "ವರನಟ" ಎಂಬ ಬಿರುದು ತೋರಿಸುತ್ತಾರೆ...
ರಾಜಕುಮಾರ್ ಅವರ ಇಮೇಜ್ ಅಥವ ಅಲ್ಲಿಯ ತನಕ ಅಭಿನಯಿಸಿದ ಹಲವಾರು ಚಿತ್ರಗಳಲ್ಲಿ ಚಿತ್ರಕಥೆ ಅವರ ಸುತ್ತಲೇ ಸುತ್ತುವುದು.. ಮತ್ತು ಅವರ ಪಾತ್ರದ ಬೆಳವಣಿಗೆ ಕೂಡ ಅದ್ಭುತವಾಗಿರುವುದು ಸಾಬೀತಾಗಿತ್ತು.. ಮತ್ತೆ ಅವರ ಚಿತ್ರಗಳು ಇದೆ ಕಾರಣಕ್ಕೆ ಯಶಸ್ವಿ ಕೂಡ ಆಗಿತ್ತು.. ಪ್ರೇಕ್ಷಕರು ಕೂಡ ಈ ರೀತಿಯ ಪಾತ್ರಗಳನ್ನೇ ರಾಜಕುಮಾರ್ ಅವರು ಮಾಡಬೇಕು ಎಂದು ಪ್ರೇಕ್ಷಕರು, ಅವರ ಅಭಿಮಾನಿಗಳು ಇಷ್ಟ ಪಡುತ್ತಿದ್ದರು..
ಈ ಚಿತ್ರದಲ್ಲಿ ಅನೇಕ ಬಾರಿ ಹೇಳುವುದು "ಇದು ಮನುಷ್ಯರಿಗೆ ಅನ್ವಯಿಸುತ್ತದೆ.. ಆದರೆ ನಾನು ಮನುಷ್ಯನೇ ಅಲ್ಲ.. ಹಾಗಾಗಿ ಇದು ನನಗೆ ಅನ್ವಯಿಸುವುದಿಲ್ಲ" ಅಂತ.. ಆ ಸಂಭಾಷಣೆಯನ್ನೇ ಹಿಡಿದು ಅವರ ದೃಶ್ಯಗಳನ್ನು ಚಿತ್ರಿಸಿದ್ದಾರೆ ಅನಿಸುತ್ತದೆ.. ಕಾರಣ.. ಸಾಮಾನ್ಯ ಚಿತ್ರದ ದೃಶ್ಯಗಳ ಚಿತ್ರೀಕರಣಗಳಲ್ಲಿ ಪ್ರತಿ ಪಾತ್ರವೂ ಕೂಡ ತನ್ನ ಸುತ್ತಲ ಪಾತ್ರಗಳನ್ನ ನೋಡುತ್ತಾ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಅಭಿನಯಿಸುವುದು ವಾಡಿಕೆಯಾಗಿತ್ತು.. ಆದರೆ ಈ ಚಿತ್ರದಲ್ಲಿ ರಾಜಕುಮಾರ್ ಅವರು ಯಾವುದೇ ಪಾತ್ರಗಳ್ನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ.. ಬದಲಿಗೆ ಆ ಪಾತ್ರ ನೇರ ದೃಷ್ಟಿಯಿಂದ ನೋಡುತ್ತಾ ಮಾತಾಡುವುದು.. ರಾಜಕುಮಾರ್ ಅವರು ಪ್ರಾಯಶಃ ಪರಕಾಯ ಪ್ರವೇಶ ಮಾಡಿದ್ದಾರೆ (ಅವರ ಪ್ರತಿ ಚಿತ್ರದ ಅಭಿನಯ ಕೂಡ ಪರಕಾಯ ಪ್ರವೇಶವೇ ಹೌದು)
ಅಶ್ವಥ್ ಅವರ ಪಾತ್ರ ಬಹಳ ಚಿಕ್ಕದು.. ಆದರೆ ಚಿತ್ರಕ್ಕೆ ತಿರುವು ಕೊಡುವುದೇ ಅವರ ಪಾತ್ರ.. ಸಂತಾನವಾಗದೆ ಇರುವುದು ಅವರನ್ನು ಕಾಶಿ ಯಾತ್ರೆ ಮಾಡಲು ಪ್ರೇರೇಪಿಸುತ್ತದೆ.. ಕಾಶಿ ವಿಶ್ವನಾಥನ ದರ್ಶನ ಮಾಡಿಕೊಂಡು ಬರುವಾಗ ಬಿರುಗಾಳಿ ಮಳೆಗೆ ಸಿಕ್ಕಿ.. ವಿಚಿತ್ರ ಪರಿಸ್ಥಿತಿಯಲ್ಲಿ ಮಡಿಕೆ ಮಾಡುವ ಮನೆಯಲ್ಲಿ ತಂಗುತ್ತಾರೆ.. ಮತ್ತೆ ಆ ಮನೆಯ ಒಡತಿಯ ಜೊತೆಯಲ್ಲಿ ಬಂಧ ಏರ್ಪಾಡುಗುತ್ತದೆ.. ಆ ಕಾರಣಕ್ಕೆ ಆಕೆ ಗರ್ಭವತಿಯಾಗುತ್ತಾಳೆ.. ಜೊತೆಗೆ ಹಳ್ಳಿಯ ಜನತೆಯ ಜತೆ ಜಗಳವಾಡಿ ಒಬ್ಬಂಟಿಯಾಗುತ್ತಾಳೆ.. ವಿಚಿತ್ರ ಎಂದರೆ ಮತ್ತೆ ಅಶ್ವಥ್ ಅವರು ಆ ಮಹಿಳೆಯನ್ನು ಭೇಟಿಯಾಗೋದೇ ಇಲ್ಲ..
ಅದೇ ಸಮಯದಲ್ಲಿ ಬಿರುಗಾಳಿ ಮಳೆಗೆ ಸಿಲುಕಿದ ಅಮ್ಮ ಮತ್ತೆ ಗರ್ಭವತಿ ಮಗಳು ಆ ಮಹಿಳೆಯ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ.. ಆ ತಾಯಿ ಇಬ್ಬರಿಗೂ ಹೆರಿಗೆ ಮಾಡಿ.. ಯಾರ ಮಗು ಯಾರದು ಎನ್ನುವ ಗೊಂದಲದಲ್ಲಿ ಮಕ್ಕಳನ್ನು ಅದಲು ಬದಲು ಮಾಡುತ್ತಾರೆ.. ಆದರೆ ಪರ ಊರಿನಿಂದ ಬಂದ ಮಹಿಳೆಯ ಹತ್ತಿರದಲ್ಲಿದ್ದ ಮಗು ಅಸುನೀಗುತ್ತದೆ.. ಅದೇ ಬೇಸರದಲ್ಲಿ ಅಮ್ಮ ಮಗಳು ತಮ್ಮ ಊರಿಗೆ ಹೋಗುತ್ತಾರೆ.. ಆದರೆ ಆ ಮನೆಯ ಒಡತಿಗೆ ಇದು ಅನುಮಾನ ಉಂಟುಮಾಡುತ್ತದೆ.. ಮತ್ತೆ ಸತ್ತ ಮಗು ನಂದು.. ಈ ಮಗುವಲ್ಲ ಅಂತ ಅನುಮಾನ ಬಲವಾಗುತ್ತದೆ.. ಮತ್ತೆ ಅದೇ ಅನುಮಾನದಲ್ಲಿ ಆ ಮಗುವನ್ನು ತಿರಸ್ಕಾರದ ದೃಷ್ಟಿಯಿಂದ ಬೆಳಸುತ್ತಾಳೆ.. ಮತ್ತೆ ಮಮತೆ, ಪ್ರೀತಿ ಆ ಮಗುವಿಗೆ ಮರೀಚಿಕೆಯಾಗುತ್ತದೆ..
ಅದೇ ಸ್ಥಿತಿಯಲ್ಲಿ ಬೆಳೆಯುವ ಮಗುವಿಗೆ ವಿದ್ಯೆ ಬುದ್ದಿ ಕಲಿಸುವ ಪಾತ್ರದಲ್ಲಿ ಬಾಲಣ್ಣ ಬರುತ್ತಾರೆ.. ತನ್ನ ಹೆತ್ತ ಮಗುವಿಗಿಂತಲೂ ಅಧಿಕ ಪ್ರೀತಿ ಮಾಡುತ್ತಾರೆ.. ಆದರೆ ಆ ಮಗು ಸರ್ವಜ್ಞ ಮೂರ್ತಿ ಅಂತ ನಾಮಕರಣ ಮಾಡಿ.. ಲಿಂಗಧಾರಣೆ ಮಾಡಿದ ಮೇಲೆ.. ಆಧ್ಯಾತ್ಮಿಕ ಧಾಟಿಯಲ್ಲಿ ಮಾತಾಡುವ ಸರ್ವಜ್ಞ ಮೂರ್ತಿ ಯ ವಚನಗಳು ಚಿತ್ರದುದ್ದಕ್ಕೋ ಹರಿದಾಡುತ್ತದೆ..
ಬಾಲಣ್ಣ ಅವರ ಪಾತ್ರ ಚಿತ್ರದುದ್ದಕ್ಕೂ ಬರುತ್ತಲೇ ಇರುತ್ತದೆ.. ಅವರ ಪಂಚಿಂಗ್ ಸಂಭಾಷಣೆಗಳು ಖುಷಿ ಕೊಡುತ್ತದೆ..
ಉಳಿದಂತೆ..ಮೈನಾವತಿ, ಎಂ ಏನ್ ಲಕ್ಷ್ಮೀದೇವಿ, ಹರಿಣಿ ಮುಂತಾದವರು ಚಿತ್ರಕ್ಕೆ ಆಧಾರವಾಗಿದ್ದಾರೆ..
ಸಂಗೀತ ಒಂದು ಪ್ರಮುಖ ಪಾತ್ರ ವಹಿಸಿದೆ ಅದು ಜಿ ಕೆ ವೆಂಕಟೇಶ್ ಅವರದ್ದು.. ಛಾಯಾಗ್ರಹಣ ಕೆ ಜಾನಕಿರಾಮ್ ಅವರದ್ದು.. ಉದಯಕುಮಾರ್ ಅವರ ಪುಟ್ಟ ಪಾತ್ರ ಚಿತ್ರದ ಅಂತ್ಯದಲ್ಲಿ ಬಂದಿದೆ.. ಆದರೆ ಗಮನ ಸೆಳೆಯುತ್ತದೆ..
ನಿರಂಜನ ಚಿತ್ರದ ಲಾಂಛನದಲ್ಲಿ ಈ ಚಿತ್ರ ಮೂಡಿ ಬಂದಿದೆ..
ಮತ್ತೆ ಮುಂದಿನ ಚಿತ್ರದಲ್ಲಿ ಸೇರೋಣ !
No comments:
Post a Comment