Sunday, November 25, 2018

ಅಜಾತಶತ್ರು .. ಸ್ನೇಹಮಯ ಅಂಬಿ ಅಜರಾಮರ

ಎಂಭತ್ತರ ದಶಕದ ಆರಂಭ.. ಆಗ ನಮ್ಮ ಮನೆ ತ್ಯಾಗರಾಜನಗರದದಲ್ಲಿ.. ನನ್ನ ಅಣ್ಣ ಇವರ  ದೊಡ್ಡ ಅಭಿಮಾನಿ.. ನಮಗೆ ಚಿತ್ರಗಳು ನೋಡುವುದೆಂದರೆ ಒಂದು ಹಬ್ಬ ಅನ್ನುವ ಪರಿಸ್ಥಿತಿ...

ಒಂದು ದಿನ ಅಣ್ಣ ಮನೆಗೆ ದೊಡ್ಡ ಪೇಪರ್ ತಂದು.. ಅದರಲ್ಲಿ ಇವರ ಅನೇಕ ಪುಟ್ಟ ಪುಟ್ಟ ಚಿತ್ರಗಳನ್ನು ತಂದು. ಅಂಟಿಸುತ್ತಿದ್ದ.. ಬಾಲ್ಯ ಸಹಜ ಕುತೂಹಲ.. ನಾವು ಕೈ ಹಾಕಿದೆವು.. ಜಾಕೆಟಿನಲ್ಲಿ, ಜರ್ಕಿನಲ್ಲಿ, ಜೀನ್ಸ್ ಪ್ಯಾಂಟ್, ಕಪ್ಪು ಕನ್ನಡಕ, ತಲೆಗೆ ಟೋಪಿ, ಗಜೇಂದ್ರ ಚಿತ್ರದ ಒಂದು ಪ್ಲಾಸ್ಟಿಕ್ ಬ್ಯಾರೆಲ್ ಎತ್ತಿ ಹಿಡಿದ ಚಿತ್ರ.. ಹೀಗೆ ತರಹಾವರಿ ಚಿತ್ರಗಳನ್ನು ಅಂಟಿಸಿದ ಒಂದು ಪೋಸ್ಟರ್ ಸಿದ್ಧಪಡಿಸಿದ ಅವನು ಮತ್ತು ಅವನ ಗೆಳೆಯರು.. ಆಮೇಲೆ ಒಂದು ಥೀಯೇಟರ್ ನಲ್ಲಿ ಹಾಕಿದರು ಎಂದು ಹೇಳಿದ..  ಅದು ಬೇರೆ ವಿಷಯ.. ಆದರೆ ಜನರನ್ನು ಅಭಿಮಾನಿಗಳನ್ನಾಗಿ ಮಾಡಿದ ನಟ ಇವರು ಎಂದು ಹೇಳಲು ಇಷ್ಟಪಡುತ್ತೇನೆ.. ಆರು

ಇಮೇಜ್,  ಸ್ಟಾರ್ ಗಿರಿ, ಹಿರಿತನ, ಪಾತ್ರ ದೊಡ್ಡದು ಚಿಕ್ಕದು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ, ತನಗೆ ತೋಚಿದಂತೆ ಪಾತ್ರಕ್ಕೆ ನ್ಯಾಯ ಸಲ್ಲಿಸಿ ರೆಬಲ್ ಸ್ಟಾರ್ ಎಂಬ ಬಿರುದು ಪಡೆದ ನಟ..

ಮಠ ಚಿತ್ರ.. ಸಾಧುಕೋಕಿಲ ನಿರ್ಮಾಪಕರಿಗೆ ಕತೆ ಹೇಳುತ್ತಿರುತ್ತಾರೆ.. ಮಹಾಭಾರತವನ್ನು ಈಗಿನ ಕಾಲಕ್ಕೆ ಹೊಂದಿಸುವ ಕತೆ.. ಪಾಂಡವರ, ಕೌರವರ ಪಾತ್ರಕ್ಕೆ ಈ ಈ ನಟರನ್ನು ಆಯ್ಕೆ ಮಾಡೋಣ ಅಂತ ಹೇಳುತ್ತಾರೆ.. ಆಗ ಅಲ್ಲಿದ್ದ ಒಬ್ಬ ಅಣ್ಣ ಕರ್ಣ ಪಾತ್ರ  ಯಾರು ಮಾಡುತ್ತಾರೆ ಎಂದಾಗ..

"ಅಯ್ಯೋ ನಿನ್ನ ಯೋಗ್ಯತೆಗೆ ಬೆಂಕಿ ಹಾಕ.. ಇಂಡಸ್ಟ್ರಿನಲ್ಲಿ ಎಷ್ಟು ವರ್ಷದಿಂದ ಇದ್ದೀಯ.. "ಕರ್ನಾಟಕದ ಕರ್ಣ ಯಾರು "ಅಂಬರೀಷ್"  ಎಂದು ಸಾಧುಕೋಕಿಲ ಹೇಳುತ್ತಾರೆ.. ಇದೊಂದು ಮಾತು ಅಂಬರೀಷ್  ಅವರ ಜೀವನದ ಸಾರ್ಥಕತೆಯನ್ನು ಹೇಳುತ್ತದೆ..

ಕಷ್ಟ ಎಂದು ಹೋದವರ್ಯಾರಿಗೂ ಬರಿಗೈಯಲ್ಲಿ ಕಳಿಸಿದ ಉದಾಹರಣೆ ಇಲ್ಲ ಎಂದು ಅವರಿಂದ ಸಹಾಯ ಪಡೆದ ನೂರಾರು ಮಂದಿ ಹೇಳುತ್ತಾರೆ.. ಯಾರಿಗೂ ತಿಳಿಯದೆ ಸಹಾಯ ಮಾಡಿರೋದು ಅವರಿಗೆ, ಸಹಾಯ ಪಡೆದವರಿಗೆ ಮತ್ತು ಆ ಭಗವಂತನಿಗೆ ಗೊತ್ತು..

ಪುಟ್ಟ ಹನಿ ಜಿನುಗಿ ಮುಂದೆ ಅದೇ ಹೊನಲಾಗಿ, ಝರಿಯಾಗಿ, ತೊರೆಯಾಗಿ, ನದಿಯಾಗಿ, ಸಾಗರವಾಗುವಂತೆ, ಮೈಲಿಗಲ್ಲು ಚಿತ್ರ ನಾಗರಹಾವು ಚಿತ್ರದ ಒಂದೆರಡು ದೃಶ್ಯಗಳಲ್ಲಿ ಬರುವ ಜಲೀಲ ಪಾತ್ರದಿಂದ ಬೆಳೆಯುತ್ತ ಹೋದ ಪರಿ ಅಚ್ಚರಿಯಾಗುತ್ತದೆ.

ಅವರ ಸ್ನೇಹಪರತೆ, ವಿಷ್ಣುವಿನ ಜೊತೆಯ ಅಗಾಧ ಗೆಳೆತನ, ಎಲ್ಲರೊಡನೆ ಬೆರೆಯುವ ಅವರ ಮನೋಭಾವ ಅವರ ಪಾತ್ರಗಳಿಗಿಂತ ಹೆಚ್ಚು ಕಾಡಿದ್ದು ಸುಳ್ಳಲ್ಲ.. ಅವರ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನನ್ನ ಕಾಡುವ ಹತ್ತು ಚಿತ್ರಗಳ ಬಗ್ಗೆ ಒಂದಷ್ಟು ಹೇಳುವೆ..

ನ್ಯೂ ಡೆಲ್ಲಿ
ಪತ್ರಕರ್ತ ತನಗಾದ ನೋವು, ಅವಮಾನ ಮತ್ತು ತನ್ನ ಗೆಳತಿಗಾದ ಅವಮಾನವನ್ನು ತಣ್ಣಗಿನ ಕ್ರೌರ್ಯದಿ ತಣಿಸಿಕೊಳ್ಳುವ ಪಾತ್ರದಲ್ಲಿ ನಿಜಕ್ಕೂ ಮನಕ್ಕೆ ಇಳಿಯುತ್ತಾರೆ.. ಎರಡನೇ ಭಾಗದಲ್ಲಿ ವಿಗ್ ಧರಿಸಿದ್ದರೂ ಮುದ್ದಾಗಿ ಕಾಣುವ ಅಂಬರೀಷ್ ಈ ಚಿತ್ರದ ಜೀವವಾಗಿದ್ದರೆ.  "ಚಂದ್ರಪ್ಪ" ಎನ್ನುವ ಅವರ ರಾಗವಾಗಿ ಹೇಳುವ ದನಿ ಬಲು ಇಷ್ಟ

ಶುಭಮಂಗಳ
ಈ ಶತಮಾನದ ಮಾದರಿ ಹೆಣ್ಣು ಎನ್ನುವ ಹಾಡಿನಲ್ಲಿ ಕುಣಿಯುವ ದೃಶ್ಯ,
ನಾಯಕಿ ಆರತಿಗೆ ಅವಮಾನವಾದಾಗ.. ನಾಯಕಿ ಅಂಬರೀಷ್ ಅವರಿಗೆ ಏನಾಯಿತು ಎಂದು ಮೂಕಭಾಷೆಯಲ್ಲಿ ಹೇಳಿದಾಗ ಅಂಬಿ ಅಭಿನಯ
ಮೂಕನಾದರೂ ಭಾವ ತುಂಬುವ ಆ ಪಾತ್ರ ಚಿತ್ರದುದ್ದಕ್ಕೂ ಕಾಡುತ್ತದೆ.

ಪಡುವಾರಹಳ್ಳಿ ಪಾಂಡವರು
"ಸಾಹುಕಾರ್ರೆ ನನಗೆ ದುಡ್ಡು ಕೊಡಿ.. ಒಂದು ಚಿನ್ನದ ಸರ ಮಾಡಿಸಿ ಮದುವೆ ಆಯ್ತು ಎನ್ನಿಸಿಬಿಡಿ.. ಸಾಯೊಗಂಟ ನಿಮ್ಮ ಮನೆಯಲ್ಲಿ ನಾನು ಚೆನ್ನೈ ಜೀತ ಮಾಡುತ್ತೀವಿ.. " ಎನ್ನುವಾಗ ಅವರ ಕಣ್ಣಿನಲ್ಲಿ ಕಾಣುವ ಧೈನ್ಯತೆ ಅಬ್ಬಾ.. !
"ನೀವು ಹೋಗದೆ ಇದ್ರೆ ..  ಸಾಹುಕಾರ ಕರಿಯ ಅವರಿಗೆ ಹೊಡಿ ಅಂತಾನೆ, ನಾ ಅವನ ಮನೆ ಉಪ್ಪು ತಿಂದಿದ್ದೀನಿ.. ಆಗೋಲ್ಲ ಅನ್ನೋಕಾಗಲ್ಲ.. ಒಂದೇ ಏಟು.. ಬೇಡಪ್ಪಾ.. ಹೋಗ್ರೋ, ಹೋಗ್ರಣ್ಣ ..." ಎನ್ನುವ ಕಾಳಜಿ..

ರಂಗನಾಯಕಿ
ಏನ್ ಅಪ್ಪಾಜಿ ಎಲ್ಲರೆದುರು ಕೈ ಇದೆ ಅಂತ ಪಟ ಪಟ ಅಂತ ಹೊಡೆದುಬಿಟ್ರಲ್ಲ. .ನಾ ಮಾಡಿದ್ದು ತಪ್ಪು ಅಂದ್ರೆ ಹೇಳಿ.. ಆ ಸಾಹುಕಾರನ ಕಾಲು ಮುಟ್ಟಿ ಕರೆದುಕೊಂಡು ಬರ್ತೀನಿ.. ಎನ್ನುತ್ತಾರೆ.. ಆಗ ರಾಜಾನಂದ್ "ಇಲ್ಲ ಕಣೋ ರಾಮಣ್ಣ ನಾಟಕ ಮಾಡುವವರಿಗೂ ಮರ್ಯಾದೆ ಇದೆ ಅಂತ ಹೇಳೋ ನಿನ್ನಂತ ಲಕ್ಷ ಲಕ್ಷ ರಾಮಣ್ಣ ಇರಬೇಕು ಕಣೋ" ಎಂದಾಗ ಅಂಬಿ ಮೊಗ.. ಸೂಪರ್

ಇಂದ್ರಜಿತ್  
ತನ್ನ ಮೇಲೆ ಆಪಾದನೆ ಹೊರಿಸಿದ ಸಾಕ್ಷಿಯನ್ನು ಕರೆತಂದು ಕಮಿಷನರ್ ಮುಂದೆ ತಳ್ಳಿ "ನನ್ನ ತಲೆಮೇಲೆ ಕೂರಿಸಲು ಪ್ರಯತ್ನ ಪಟ್ಟ ಗೊಂಬೆಯಿದು" ಎಂದು ಹೇಳುವ ಅಂಬರೀಷ್.. ಈ ಚಿತ್ರದುದ್ದಕ್ಕೂ ಸಂಭಾಷಣೆಯಲ್ಲಿ ಗಮನಸೆಳೆಯುತ್ತಾರೆ.. ಈ ಚಿತ್ರ ಅವರ ಚಿತ್ರಜೀವನದಲ್ಲಿ ಒಂದು ತಿರುವು ಕೂಡ.. ಯಶಸ್ಸು ಕಂಡ ಚಿತ್ರವಿದು..

ಮಸಣದ ಹೂವು 
ಯಾಕೆ ಈ ಪಾತ್ರ ಒಪ್ಪಿಕೊಂಡಿರಿ ಎಂದು ಈ ಚಿತ್ರ ನೋಡಿದ ಅಭಿಮಾನಿಗಳು ಕೇಳುವಷ್ಟು ವಿಚಿತ್ರ ಪಾತ್ರವಿದು.. ತಲೆಹಿಡುಕನ ಪಾತ್ರ.. ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾಗ ಈ ಚಿತ್ರ ಗುರುಗಳು ಪುಟ್ಟಣ್ಣನವರು ನೀಡಿದಾಗ ಮರು ಮಾತಿಲ್ಲದೆ ಒಪ್ಪಿಕೊಂಡು ಅಚ್ಚುಕಟ್ಟಾಗಿ ಅಭಿನಯಿಸಿದ್ದರು.. ಈ ಪಾತ್ರಕ್ಕೆ ಪೋಷಕ ಪಾತ್ರ ಪ್ರಶಸ್ತಿ ಸಿಕ್ಕಿತು. ಪುಟ್ಟಣ್ಣನವರು ಚಿತ್ರಿಸಿದ ಇಡೀ ಪಾತ್ರ ಸೊಗಸಾಗಿ ಮೂಡಿಬಂದಿದೆ..

ಅಂತ
ಕುತ್ತೆ ಕನ್ವರ್ ನಹಿ ಕನ್ವರ್ ಲಾಲ್ ಬೋಲೋ ಎನ್ನುವ ಈ ಸಂಭಾಷಣೆ ಪ್ರಸಿದ್ಧಿಯಾಗಿದ್ದು ಅವರು ಹೇಳುವ ಶೈಲಿ ಮತ್ತು ಸಿಗರೇಟಿನ ಹೊಗೆಯನ್ನು ಒಳಗೆ ಎಳೆದುಕೊಂಡು ಕೆಂಡ ಕಾರುವ ಕಣ್ಣುಗಳನ್ನು ದೊಡ್ಡದಾಗಿ ಬಿಡುವ ಆ ಅಭಿನಯ ಚಿತ್ರರಸಿಕರ ಮನದಲ್ಲಿ ಕೂತು ಬಿಟ್ಟಿದೆ.. ಹಿಂಸೆ ಮಾಡಿದಾಗ ಅವರು ಕಿರುಚುವ ಅಭಿನಯ.. ಒಬ್ಬೊಬ್ಬ ಖಳನನ್ನು ಮುಗಿಸುವಾಗ ಅವರ ಮಾತುಗಳು ಸೊಗಸಾಗಿದೆ.. ಈ ಚಿತ್ರ ಹಲವಾರು ಭಾಷೆಯಗಳಲ್ಲಿ ಬಂದರೂ ಅಂಬರೀಷ್ ಅಭಿನಯ ಮುಟ್ಟಲಾಗಿಲ್ಲ..

ಚಕ್ರವ್ಯೂಹ 
ಭಾರತ ಚಿತ್ರರಂಗದ ಮೊದಲ ರಾಜಕೀಯ ಚಿತ್ರವಿದು ಎಂದು ಬಾಲ್ಯದಲ್ಲಿ ಎಲ್ಲೋ ಓದಿದ ನೆನಪು.. ಈ ಚಿತ್ರದಿಂದ ಅವರ ಅಭಿಮಾನಿಗಳ ಬಳಗ ಇನ್ನಷ್ಟು ದೊಡ್ಡದಾಯಿತು.. ಮತ್ತು ಚಿತ್ರರಂಗದ ಒಂದು ಆಸ್ತಿಯಾದರು..

ಹೃದಯ ಹಾಡಿತು
ರೆಬೆಲ್ ಸ್ಟಾರ್ ಬರಿ ಹೊಡೆದಾಟ ಬಡಿದಾಟದ ಸಿನೆಮಾಗಳಲ್ಲಿ ಕಳೆದು ಹೋಗಿದ್ದಾರೆ ಅನ್ನಿಸುವಾಗ ಧುತ್ ಎಂದು ಬಂದ ಚಿತ್ರವಿದು.. ವಿಭಿನ್ನ ಮೇಕಪ್.. ಸುಂದರವಾಗಿ ಇವರನ್ನು ಸೆರೆಹಿಡಿದ ಛಾಯಾಗ್ರಾಹಕ ಗೌರಿಶಂಕರ್ ಇಷ್ಟವಾಗುತ್ತಾರೆ.. ಚಿತ್ರಕ್ಕೋಸ್ಕರ ಒಂದೇ ಒಂದು ಫೈಟ್ ಇದ್ದರೂ ಪೂರ್ತಿ ಕೌಟುಂಬಿಕ ಚಿತ್ರವಿದು..ಸಂಯಮದ ಅಭಿನಯದಲ್ಲಿ ಇಷ್ಟವಾಗುತ್ತಾರೆ..

ಏಳು ಸುತ್ತಿನ ಕೋಟೆ 
ಛಾಯಾಗ್ರಾಹಕ ಗೌರಿಶಂಕರ್ ನಿರ್ದೇಶಿಸಿದ ಈ ಚಿತ್ರ ಯಶಸ್ಸಾಗಲಿಲ್ಲ ಆದರೆ ಕತೆ, ಚಿತ್ರಕತೆ ಮತ್ತು ಅಂಬರೀಷ್ ಅಭಿನಯ ಅದ್ಭುತವಾಗಿದೆ.. ಕೋಪದ ಭರದಲ್ಲಿ ಮಾಡಿದ ಒಂದು ತಪ್ಪು ಅವರನ್ನು ಕಾಡುವ ಪರಿ ಜೊತೆಯಲ್ಲಿ ಅದನ್ನು ವ್ಯಕ್ತ ಪಡಿಸುವ ರೀತಿ ಅಮೋಘವಾಗಿದೆ.. ಹಾಡುಗಳು, ಅಭಿನಯ ಎಲ್ಲವೂ ಸೊಗಸು..

ಇಲ್ಲಿ ಪರಿಗಣಿಸದ ಚಿತ್ರಗಳು ನನ್ನ ಮನ ಮುಟ್ಟಿದ ಕೆಲವು ಚಿತ್ರಗಳು.. ಆದರೆ ಅವರು ಅಭಿನಯಿಸಿದ ಅಷ್ಟೂ ಚಿತ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅವರ ತಾಕತ್ತು ತೋರಿಸಿದ್ದಾರೆ.. ಯಾರಿಗೂ ಹೆದರದೆ, ಯಾರಿಗೂ ಬಗ್ಗದೆ,, ಆದರೆ ವಿನಯ ಬಿಟ್ಟು ಹೋಗದೆ, ಮಾತು ಬಿರುಸಾದರೂ ಹೃದಯವಂತ ಜೀವಿ ಅಂಬರೀಷ್..

ಅವರ ಮಿತಿ ಅವರಿಗೆ ಗೊತ್ತಿತ್ತು ಆದರೂ ಅಭಿನಯದಲ್ಲಿ ಆಹಾ ಎನ್ನಿಸುವಂತೆ ಅಭಿನಯಿಸಿದ್ದಷ್ಟೇ ಅಲ್ಲದೆ, ಎಲ್ಲರ ಸ್ನೇಹಿತನಾಗಿದ್ದರು.. ಇದಕ್ಕೆ ಸಾಕ್ಷಿ ಅಂಬಿ ೬೦:೪೦ ಕಾರ್ಯಕ್ರಮದಲ್ಲಿ ಭಾರತ ಚಿತ್ರರಂಗದ ದಿಗ್ಗಜರೆಲ್ಲಾ ವೇದಿಕೆಬಂದಿದ್ದು..

ಅವರ ನಿರ್ಮಾಪಕರಿಗೆ, ನಿರ್ದೇಶಕರಿಗೆ ಯಾವತ್ತೂ ತೊಂದರೆಯಾಗದಂತೆ ನೋಡಿಕೊಂಡ ಅಪರೂಪದ ನಟ ಇವರು.

ಎಲ್ಲರಿಗೂ ಒಂದು ಆಸೆ ಇರುತ್ತೆ.. ನಾವಿಲ್ಲದೆ ಇದ್ದಾಗ ನಮ್ಮ ಬಗ್ಗೆ ಜನರ ಅಭಿಪ್ರಾಯ ಹೇಗಿರುತ್ತೆ ಅಂತ.. ಇದು ನಿಜವಾಗಿದ್ದು ಕೆಲವು ವರ್ಷಗಳ ಹಿಂದೆ.. ಆರೋಗ್ಯ ಹದಗೆಟ್ಟಿದ್ದಾಗ ಚಿಕಿತ್ಸೆ ತೆಗೆದುಕೊಳ್ಳುವ ಸಮಯದಲ್ಲಿ ಕಾಲಯಮನೊಡನೆ ಹೋರಾಡಿ ಬಂಡ ಸಂಧರ್ಭ ದೃಶ್ಯ ಮಾಧ್ಯಮ, ಪತ್ರಿಕೆ ಎಲ್ಲದರಲ್ಲೂ ಅವರ ಬಗ್ಗೆ ಬಂದಿದ್ದನ್ನು ಅವರು ಹುಷಾರಾಗಿ ಬಂದ ಮೇಲೆ ಅವರೇ ಹೇಳಿದ್ದು "ನಾ ಹೋದ ಮೇಲೆ ನನ್ನ ಮೇಲಿನ ಅಭಿಮಾನ ಹೇಗಿರುತ್ತೆ ಅಂತ ಜೀವಂತವಾಗಿದ್ದಾಗಲೇ ನೋಡಿ ಮನತುಂಬಿ ಬಂತು"

ಅವರ ಕಾಲಘಟ್ಟದ ಎಲ್ಲಾ ನಂತರ ಜೊತೆ ಅಭಿನಯಿಸಿದ್ದ ನಟ.. ನಂತರ ಬದಲಾದ ಕಾಲಮಾನದಲ್ಲಿಯೂ ಕಿರಿಯ ನಟರ ಜೊತೆಯಲ್ಲಿಯೂ ಅದೇ ರೀತಿ ಅಭಿನಯಿಸಿ ಎಲ್ಲರೊಡನೆ ಒಂದಾಗಿದ್ದು ಅವರ ಹೆಗ್ಗಳಿಕೆ.. 

ನಟರಾಗಿ, ಸ್ನೇಹಿತನಾಗಿ, ಎಲ್ಲರ ಜೊತೆ ಬೆರೆಯುವ ಹಿರಿಯನಾಗಿ ಚಿತ್ರರಂಗಕ್ಕೆ ಒಂದು ಶಕ್ತಿಯಾಗಿದ್ದ ಅಂಬರೀಷ್ ಧ್ರುವತಾರೆಯಾಗಿದ್ದಾರೆ.. ಅವರ ಚಿತ್ರಗಳಲ್ಲಿ, ಅವರ ಅಭಿನಯದಲ್ಲಿ, ಅವರ ಮಾತುಗಳಲ್ಲಿ ಸದಾ ಅಮರ.. !!!

ಪುಟ್ಟಣ್ಣ ಕಣಗಾಲ್ ಕುಲುಮೆಯಲ್ಲಿ ಎದ್ದು ಬಂದ ಚಿನ್ನ ತಾಯಿ ಭುವನೇಶ್ವರಿ ಕೊರಳಿನಲ್ಲಿ ಆಭರಣವಾಗಿದ್ದರೆ!!!
ಅಜಾತಶತ್ರು .. ಸ್ನೇಹಮಯ ಅಂಬಿ ಅಜರಾಮರ


Wednesday, November 21, 2018

ಮನದ ಮೊಂಡು ಕೋಣವನ್ನು ಅಡಗಿಸುವ ಮಹಿಷಾಸುರ ಮರ್ಧಿನಿ (1959) (ಅಣ್ಣಾವ್ರ ಚಿತ್ರ ೧೩ / ೨೦೭)

ಜೀವನದಲ್ಲಿ ಏನೇನೂ ಆಗಿ ಹೋಗುತ್ತದೆ.. ಅತೀವೃಷ್ಟಿಯೂ ಹೌದು ಅನಾವೃಷ್ಟಿಯೂ ಹೌದು.. ಇದ್ಯಾಕೆ ಹೀಗೆ ಹೇಳುತ್ತಿದ್ದೀನಿ ಅಂದ್ರ.. ಕಡೆಯಲ್ಲಿ ಹೇಳುತ್ತೇನೆ.. !

ಪೌರಾಣಿಕ ಸಿನಿಮಾ ಮಾಡುವುದು ಒಂದು ಅದ್ಭುತ ಅನುಭವ.. ಅಣ್ಣಾವ್ರ ಹದಿಮೂರನೇ ಸಿನಿಮಾ ಇದು.. ಇದರಲ್ಲಿ ಸಿಂಹಪಾಲು ಪೌರಾಣಿಕ ಅಥವಾ ಐತಿಹಾಸಿಕ ಚಿತ್ರಗಳೇ ತುಂಬಿಕೊಂಡಿವೆ..

ಕರುನಾಡಿನಲ್ಲಿ ಮಹಿಷಾಸುರ ಅಂದ ಕೂಡಲೇ ಎಲ್ಲರ ಕಣ್ಣು ಓಡುವುದು ಚಾಮುಂಡಿ ಬೆಟ್ಟದಲ್ಲಿರುವ ಆ ಮೂರ್ತಿಯ ಕಡೆಗೆ. ಹೌದು ಅಲ್ಲಿಂದಲೇ ನಮ್ಮ ಬಾಲ್ಯದ ನೆನಪು ಶುರುವಾಗೋದು.. ಅನೇಕ ಬಾರಿ ನೋಡಿದರೂ, ಏನೋ ಒಂದು ರೀತಿಯ ಅವ್ಯಕ್ತ ಸಂತೋಷ ಪ್ರತಿ ಬಾರಿ ನೋಡಿದಾಗಿಯೂ ಅರಿವಾಗುವಂತೆ, ಈ ಚಿತ್ರದ ಕಥೆ ಹೊಸದೇನಲ್ಲ.. ಗೊತ್ತಿರುವುದೇ ಆದರೂ, ಅದನ್ನು ತೆರೆಯ ಮೇಲೆ ತಂದ ವಿಕ್ರಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅನರ್ಘ್ಯ ರತ್ನ ಎಂದೇ ಹೆಸರಾದ ನಿರ್ದೇಶಕ ಶ್ರೀ ಬಿ ಎಸ್ ರಂಗ ಅವರು ಚಿತ್ರಕಥೆ ಬರೆದು, ನಿರ್ಮಿಸಿ, ಛಾಯಾಗ್ರಹಣದ ಹೊಣೆ ಹೊತ್ತು ನಿರ್ದೇಶಿಸಿರುವ ಚಿತ್ರವಿದು.

ಈ ಚಿತ್ರ ಗಮನ ಸೆಳೆಯುವುದು ಚಿತ್ರಕಥೆಯಲ್ಲಿ. ಎಲ್ಲರಿಗೂ ಗೊತ್ತಿರುವ ಕಥೆಯಲ್ಲಿ ನರಸಿಂಹರಾಜು, ರಮಾದೇವಿ, ಎಂ ಏನ್ ಲಕ್ಷ್ಮೀದೇವಿ ಇವರ ಕಥೆಯನ್ನು ಸೇರಿಸಿ, ಹಾಸ್ಯ ಬಡಿಸುವ ಅದ್ಭುತ ಕಲೆಗಾರಿಕೆ ತುಂಬಿದೆ.. ರಾಕ್ಷಸ ಕುಲದ ವೇಷಭೂಷಣಗಳಿದ್ದರೂ ಹಾಸ್ಯಕ್ಕೆ ಕೊರತೆಯಿಲ್ಲ ಎನ್ನುವುದು ಈ ಮೂರು ಕಲಾವಿದರ ಅಭಿನಯ ಮತ್ತು ಸಂಭಾಷಣೆಯಲ್ಲಿ ಅಡಕವಾಗಿದೆ..

ಚುರುಕಾದ, ಚುಟುಕಾದ ಸಂಭಾಷಣೆ ಬರೆದಿರುವ ಶ್ರೀ ಚಿ ಸದಾಶಿವಯ್ಯನವರ ಜಾದೂ ಈ ಚಿತ್ರದ ತುಂಬಾ ಹರಡಿಕೊಂಡಿದೆ.  ಹಾಡುಗಳು ಈ ಚಿತ್ರದ ತುಂಬಾ ಹರಡಿಕೊಂಡಿದ್ದರೂ ಗಮನ ಸೆಳೆಯುವುದು
"ನಾರಾಯಣ ವನಮಾಲಿ" ನಾರದ ಹಾಡಿಕೊಂಡಿ ಬರುವ ಹಾಡು 
"ತುಂಬಿತು ಮನವ" ಯುಗಳ ಗೀತೆ.. ಇದರ ವಿಶೇಷತೆ ಏನೂ ಅಂದರೆ ರಾಜ್ ಹಿನ್ನೆಲೆ ಗಾಯನದ ಎರಡನೇ ಚಿತ್ರವಿದು. ಮೊದಲನೆಯ ಚಿತ್ರ ಓಹಿಲೇಶ್ವರದ "ಶರಣು ಶಂಭೋ". ಈ ಗೀತೆಯ ಸಂಗೀತ ನಿರ್ದೇಶಕರೂ ಕೂಡ ಶ್ರೀ ಜಿ ಕೆ ವೆಂಕಟೇಶ್ ಅವರು."

ಕಥೆ ಸರಳ.. ರಕ್ಕಸ ಕುಲದ ರಂಭೇಶ ಸೋದರರ ಕುಲ ಸಂತಾನವಿಲ್ಲದೆ ಕೊರಗುತ್ತಿರುವಾಗ, ರಾಕ್ಷಸರ ಗುರು ಶುಕ್ರಾಚಾರ್ಯರ ಅಣತಿಯಂತೆ, ವರುಣ ದೇವನನ್ನು ತಪಸ್ಸು ಮಾಡುವಾಗ, ಕಪಟಿ ಇಂದ್ರ ಮೊಸಳೆಯನ್ನು ಕಳಿಸಿ ರಂಭೇಶ ಅಗ್ರಜನನ್ನು ಸಾಯಿಸುತ್ತೆ, ನಂತರ ಪಣ ತೊಟ್ಟು ನಾಗಲೋಕಕ್ಕೆ ಹೋಗಿ ಸಂತಾನ ಫಲವ ತಂದು, ಗುರುವಿನ ಅಣತಿಯಂತೆ ಮದುವೆಗೆ ಸಿದ್ಧನಾಗುತ್ತಾನೆ. ಯಥಾಪ್ರಕಾರ ಇಂದ್ರ, ಮಹಿಷ ಗುಂಪನ್ನು ಹೆಣ್ಣುಗಳನ್ನಾಗಿ ಮಾಡಿ,  ರಂಭೇಶ ಒಂದು  ಸುಂದರಿಗೆ ಮನಸೋಲುವಂತೆ ಮಾಡುತ್ತಾನೆ.

ಮದುವೆಯಾದ ಮರುಕ್ಷಣವೇ ತನ್ನ ಮಾಯಾಜಾಲದಿಂದ ಸುಂದರಿಯನ್ನು ಮಹಿಷನನ್ನಾಗಿ ಮಾಡುತ್ತಾನೆ., ಇದನ್ನು ಅರಿತ ಶುಕ್ರಾಚಾರ್ಯರು ತಮ್ಮ ತಪಶಕ್ತಿ ಧಾರೆಯೆರೆದು ಹೆಣ್ಣಿನ ರೂಪವನ್ನು ಸ್ಥಿರಗೊಳಿಸುತ್ತಾರೆ. ಮುಂದೆ ಮಗುವಾಗುವ ಮುನ್ನವೇ, ಇಂದ್ರ ಕುತಂತ್ರದಿಂದ ರಂಭೇಶನ ಅವಸಾನವಾಗುತ್ತದೆ, ಮತ್ತು ಆತನ ಪತ್ನಿಯೂ ಕೊನೆಯುಸಿರೆಳೆಯುತ್ತಾಳೆ. ಮಗು ಬೆಳೆದು ದೊಡ್ಡವನಗಾಗುವ ತನಕ ಅದರ ತಂದೆ ತಾಯಿ ಮತ್ತು ಆತನ ದೊಡ್ಡಪ್ಪನ ಅಂತ್ಯದ ಕಾರಣ ಹೇಳದೆ, ನಂತರ ಹೇಳಿದಾಗ, ಮಹಿಷ ಕುಪಿತನಾಗಿ, ಉಗ್ರ ತಪಸ್ಸು ಮಾಡಿ, ಬ್ರಹ್ಮನಿಂದ ಯಾವ ಗಂಡಿನಿಂದಲೂ, ಪ್ರಾಣಿ ಪಕ್ಷಿಗಳಿಂದಲೂ ಮರಣಬಾರದಂತೆ ವರ ಪಡೆದು, ಉನ್ಮತ್ತನಾಗಿ ಇಂದ್ರನ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಿ, ಬಂಧಿಸಿ, ಶಚೀದೇವಿಯನ್ನು ಮೋಹಿಸುತ್ತಾನೆ. ಅಹಂಕಾರ ತುಂಬಿಕೊಂಡು, ತಾನೇ ಸರ್ವೇಶ್ವರ ಎಂದು ಘೋಷಿಸಿಕೊಂಡು, ಎಲ್ಲರೂ ತನ್ನ ಪ್ರತಿಮೆಯನ್ನೇ ಪೂಜಿಸಬೇಕೆಂದು ತಾಕೀತು ಮಾಡಿ ಮೆರೆದಾಡುತ್ತಾನೆ. ನಂತರ ಎಲ್ಲರಿಗೂ ಅರಿವಿರುವಂತೆ, ತಾಯಿ ಸರ್ವಮಂಗಳೇ ದೇವತೆಗಳು ಕೊಟ್ಟ ಅಸ್ತ್ರಗಳ ಸಹಾಯದಿಂದ ಮದೋನ್ಮತ್ತ ಮಹಿಷನನ್ನು ಸಂಹರಿಸುತ್ತಾಳೆ ಮಹಿಷಾಸುರ ಮರ್ಧಿನಿಯಾಗುತ್ತಾಳೆ.. !

ಈ ಚಿತ್ರದಲ್ಲಿ ರಾಜ್ ಅಭಿನಯ ಸೊಗಸು.. ಅವರ ಆರಂಭಿಕ ದೃಶ್ಯದಲ್ಲಿಯೇ ಈ ಚಿತ್ರದಲ್ಲಿ ಘರ್ಜಿಸುವ ಕುರುಹು ತೋರುತ್ತಾರೆ. ಅಭಿನಯ, ಭಾಷ ಶುದ್ಧತೆ, ಆ ಪಾತ್ರಕ್ಕೆ ಬೇಕಾದ ಹಾವಭಾವ, ಗತ್ತು ಎಲ್ಲವೂ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರ ಅವರ ಮುಂದಿನ ಭಕ್ತ ಪ್ರಹ್ಲಾದದ ಹಿರಣ್ಯಕಶಿಪು ಪಾತ್ರಕ್ಕೆ ಟ್ರೈಲರ್ ತರಹ ಮೂಡಿ ಬಂದಿದೆ.. ಸೊಗಸಾದ ಯುಗಳ ಗೀತೆಯನ್ನು ಹಾಡಿರುವ ಈ ಚಿತ್ರದಲ್ಲಿ ಸೊಗಸಾದ ಅಭಿನಯವಷ್ಟೇ ಅಲ್ಲದೆ, ಆರಂಭಿಕ ದೃಶ್ಯಗಳಲ್ಲಿ ಮುದ್ದಾಗಿ ಕಾಣುತ್ತಾರೆ, ನಂತರ ಆರ್ಭಟ ಮಾಡುವ ಪಾತ್ರದಲ್ಲಿ ರಾಜ್ ಗಮನ ಸೆಳೆಯುತ್ತಾರೆ.

ಉದಯಕುಮಾರ್ ರಂಭೇಶನ ಪಾತ್ರದಿ ಗಮನಸೆಳೆಯುತ್ತಾರೆ. ಈ ಗಿರಿಜಾ ಮೀಸೆಯಲ್ಲಿ ಜುಮ್ ಎನಿಸುವಂತೆ ಕಾಣುವ ಇವರು, ಆರಂಭಿಕ ದೃಶ್ಯಗಳಲ್ಲಿ ಅಭಿನಯ ಸೊಗಸಾಗಿದೆ. ನಾರದನ ಪಾತ್ರ ಮಾಡಿರುವ ಅಶ್ವಥ್, ನಾರದ ಹೀಗೆ ಇದ್ದರೇನೊ ಅನ್ನಿಸುವಷ್ಟು ಸಹಜ ನಟನೆ. ನರಸಿಂಹರಾಜು ಹಾಸ್ಯದೃಶ್ಯದಲ್ಲಿ ನಗಿಸುತ್ತಾರೆ, ಅವರನ್ನು ಗೋಳುಹುಯ್ದುಕೊಳ್ಳುವ ರಮಾದೇವಿ, ಮತ್ತು ಲಕ್ಷ್ಮೀದೇವಿಯವರ ದೃಶ್ಯಗಳು ನಗೆ ತರಿಸುತ್ತದೆ..

ಶುಕ್ರಾಚಾರ್ಯರಾಗಿ ವಿ ನಾಗಯ್ಯನವರ ಧ್ವನಿ ಇಷ್ಟವಾಗುತ್ತದೆ. ಆ ಕಪ್ಪು ಬಿಳುಪಿನ ಕಾಲದ ಚಿತ್ರದಲ್ಲಿ ಅಚ್ಚುಕಟ್ಟಾಗಿ ಕಾಣುವ ಇವರು ಪೋಷಕ ಪಾತ್ರಧಾರಿಯಾಗಿ ಹಲವಾರು ಪೌರಾಣಿಕ ಚಿತ್ರಗಳಲ್ಲಿ ವಿಜೃಂಭಿಸಿದ್ದಾರೆ.

ದೇವನು ಏನೂ ಇಲ್ಲದ ಕಾಲದಲ್ಲಿ ಒಂದೊಂದಾಗಿ ಕೊಡುತ್ತಾ ಹೋಗುತ್ತಾನೆ, ಅದನ್ನು ಪಡೆದು ಜೀವನದಲ್ಲಿ ಅನ್ಯ ಮಾರ್ಗತುಳಿಯದೆ, ಧರ್ಮ ಮಾರ್ಗದಿ ಸಾಗುತ್ತಾ ಹೋದಾಗ ಆ ಮಹಾಮಹಿಮನು ಎಂದಿಗೂ ಕೈಬಿಡದೆ, ಬೇಕಾದ ಅನುಕೂಲಗಳನ್ನು ಮಾಡಿಕೊಡುತ್ತಾನೆ. ಆದರೆ ಧರ್ಮ ಮಾರ್ಗ ತ್ಯಜಿಸಿ, ವರಗರ್ವಿತನಾಗಿ, ಅಹಂಕಾರ ತುಂಬಿಕೊಂಡು ಪಾಪದ ಕೊಡ ತುಂಬಿಕೊಳ್ಳುತ್ತಾ ಸಾಗಿದಾಗ ಪವಾಡ ನೆಡೆಯುವಂತೆ, ಅನಿರೀಕ್ಷಿತ ಘಟನೆಗಳು ತೀರಾ ಸಾಮಾನ್ಯ ಅನ್ನುವಂತೆ ನೆಡೆದು ಅಂತ್ಯಕಾಣಿಸುತ್ತದೆ..
 
ಇದೆ ಅಲ್ಲವೇ ಜೀವನ.. ರಾಜ್ ಅವರ ಚಿತ್ರದ ಜೈತ್ರಯಾತ್ರೆ ಮುಂದುವರೆಸುತ್ತಾ.. ಈ ಚಿತ್ರದ ಕೆಲವು ದೃಶ್ಯಗಳನ್ನು ನಿಮಗಾಗಿ ಲಗತ್ತಿಸುತ್ತಿದ್ದೇನೆ..

ಜಾನಕೀ ಮುಂದೆ ಸಾಹುಕಾರ್ ಜಾನಕೀ ಎಂದೇ ಹೆಸರಾದ ನಾಯಕಿ 

ಹಾಸ್ಯ ಜೋಡಿ ನರಸಿಂಹರಾಜು ಮತ್ತು ಲಕ್ಷ್ಮೀದೇವಿ 

ಇವಳೇ ನನ್ನ ಗಂಡತಿ ಎನ್ನುವ ನರಸಿಂಹರಾಜು ಮತ್ತು ರಮಾದೇವಿ 


ಯುಗಳ ಗೀತೆ..ತುಂಬಿತು ಮನವ 

ಗಾಯಕ ಮತ್ತು ಗಾಯಕಿಯರ ಪಟ್ಟಿಯಲ್ಲಿ ರಾಜ್!

ರಾಜ್ ಮೊದಲ ದೃಶ್ಯದಲ್ಲಿ ಕಾಣುವುದು ಹೀಗೆ 

ಶ್ರೀ ವಿ. ನಾಗಯ್ಯ ಶುಕ್ರಾಚಾರ್ಯರಾಗಿ 

ನಾರದನಾಗಿ ಅಶ್ವತ್ 

ಸುಂದರ ಉದಯಕುಮಾರ್ 

ನೋಡ್ರಪ್ಪಾ ಅಣ್ಣಾವ್ರ ಅಭಿನಯ 

ಮುಂದಿನ ಚಿತ್ರದೊಂದಿಗೆ ಮತ್ತೆ ಬರುವ, ನೋಡುವ, ಓದುವ ಖುಷಿಪಡುವ.. ಏನಂತೀರಾ.. !!!

Friday, November 2, 2018

ಟಿ ಎನ್ ಬಾಲಕೃಷ್ಣ... ಬಂಗಾರದ ಬಾಲಣ್ಣ (ಚಿತ್ರ - ೩)

ಬಂಗಾರ ತೊಡದೆ ಇರೋರು ಇದ್ದರೂ ಇರಬಹುದು
ಬಂಗಾರ ಬಿಸ್ಕತ್ ನೋಡದೆ ಇರೋರು ಇರಬಹುದು 
ಅಣ್ಣಾವ್ರ ಬಂಗಾರದ ಮನುಷ್ಯ ನೋಡದೆ ಇರೋರು ಬಲು ಅಪರೂಪ!

ಒಂದು ಸಾಮಾಜಿಕ ಕ್ರಾಂತಿ ಮಾಡಿತ್ತು ಎಂದು ಹೇಳಲಾದ ಈ ಚಿತ್ರ ಎಲ್ಲ ಸಿನಿ ಆರಾಧಕರ ಅಚ್ಚುಮೆಚ್ಚಿನ ಚಿತ್ರ ಅನ್ನೋದರಲ್ಲಿ ಸಂದೇಹವೇ ಇಲ್ಲ.. ಶ್ರೀ ಟಿ ಕೆ ರಾಮರಾಮ್ ಅವರ ಬಂಗಾರದ ಮನುಷ್ಯ ಕಾದಂಬರಿಯನ್ನು ಶ್ರೀ ಸಿದ್ದಲಿಂಗಯ್ಯನವರು ಚಿತ್ರ ಮಾಡಿದ್ದು.. ನಂತರ ಅದು ಇತಿಹಾಸ ಮಾಡಿದ್ದು ಎಲ್ಲಾ ನಿಮಗೆ ಗೊತ್ತು.. 

ಅದರಲ್ಲಿ ಮುಖ್ಯ ಪಾತ್ರದ ರಾಜೀವ.. ಆ ಪಾತ್ರಕ್ಕೆ ಪ್ರೋತ್ಸಾಹ ಕೊಡುತ್ತಾ.. ರಾಜೀವ ತನ್ನ ಮುರಿದು ಬಿದ್ದ ಸಂಸಾರವನ್ನು ಎತ್ತಿ ನಿಲ್ಲಿಸಲು ಜೊತೆಯಾಗಿ ನಿಲ್ಲೋದು ರಾಚೂಟಪ್ಪನ ಪಾತ್ರ.. ಬಾಲಣ್ಣ ಅವರು ಆ ಪಾತ್ರವನ್ನು ಎಷ್ಟು ಅಚ್ಚುಕಟ್ಟಾಗಿ ಜೀವ ತುಂಬಿ ನಟಿಸಿದ್ದಾರೆ ಎಂದರೆ.. ಅವರಿಗೆ ಶ್ರೇಷ್ಠ ಪೋಷಕ ನಟ ರಾಜ್ಯ ಪ್ರಶಸ್ತಿ ಸಿಕ್ಕಿತು. 

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ..   ಅವರ ತಪ್ಪುಗಳನ್ನು ಸರಿ ಮಾಡುತ್ತಾ ಸಾಗುವ ಈ ಪಾತ್ರ ಹಲುಬುವುದು ಕಡೆಯ ದೃಶ್ಯದಲ್ಲಿ.. ರಾಜೀವ ತನ್ನ ಅಕ್ಕನ ಮಗನಿಂದ ಅವಮಾನಿತನಾಗಿ.. ಮನೆಯನ್ನೇಕೆ.. ಊರನ್ನೇ ಬಿಟ್ಟು ಹೋದರೆಂದು  ತಿಳಿದ ರಾಚೂಟಪ್ಪ "ನಾ ಊರಾಗಿದ್ದಿದ್ರೆ ಇಷ್ಟೊಂದು ನೆಡೆಯೋಕೆ ಅವಕಾಶನೇ ಕೊಡ್ತಾ ಇರ್ಲಿಲ್ಲ.. .ಎಲ್ಲಾ ಶಿವನಿಚ್ಛೆ ..  ರಾಜೀವಪ್ಪ ಅವತ್ತು ಏನು ಹೇಳಿದ್ರಿ.. ಸಾಹುಕಾರ್ರೆ ನಾನು ಏನು ಬೇಕಾದರೂ ಕಳ್ಕೋತೀನಿ .. ನಿಮ್ಮನ್ನು ಮಾತ್ರ ಕಳ್ಕೊಳೋಕೆ ತಯಾರಿಗಿಲ್ಲ ಅಂದ್ರಿ.. .. ಇವತ್ತು ನೀವು ನನ್ನ ಕಳಕೊಂಡ್ರೋ.. ನಾನು ನಿಮ್ನ ಕಳೆಕೊಂಡನೋ .. ಆ ಶಿವನೇ ಬಲ್ಲ..  ... ರಾಜೀವಪ್ಪ ಎಲ್ಲಾದರೂ ಇರಿ.. ಹೆಂಗಾದರೂ ಇರಿ.. ಈ ಮಕ್ಕಳನ್ನು, ಊರನ್ನು ಹರಸ್ತಾ ಇರಿ..  ನಿಮ್ಮಂಥ ಸತ್ಯವಂತರ ಆಶೀರ್ವಾದ ಎಂದೂ ಹುಸಿಯಾಗೋಲ್ಲ.. ನಿಮ್ಮಂತವರ ಆಶೀರ್ವಾದದ ಬಲದಲ್ಲಿ ಸುಖಿಯಾಗಿ ಬಾಳ್ತಾರೆ .. ಊರು ಸುಭಿಕ್ಷವಾಗಿರುತ್ತೆ..  "

ಅದ್ಭುತ ಮಾತುಗಳು.. ಇಲ್ಲಿ ಈ ಸಂಭಾಷಣೆಯನ್ನು ಒಬ್ಬ ನಟ ಹೇಳಿದ್ದಾರೆ ಅನಿಸೋದಿಲ್ಲ.. ಮನೆಯ ಯಜಮಾನ.. ಮನೆಯ ಹಿತವನ್ನು ನೋಡಿಕೊಳ್ಳುವ ಒಬ್ಬ ಹಿರಿಯ ಹೇಳುತ್ತಿದ್ದಾರೆ ಎನಿಸುವಷ್ಟು ಪರಿಣಾಮಕಾರಿಯಾಗಿದೆ.. ಪಾತ್ರದೊಳಗೆ ಬಾಲಣ್ಣ ಹೋಗಿಲ್ಲ.. ಈ ಚಿತ್ರದಲ್ಲಿ ರಾಚೂಟಪ್ಪನೆ ಆಗಿದ್ದಾರೆ.. 

ಅದಕ್ಕೆ ಅಲ್ವೇ "ಹನಿ ಹನಿ ಗೂಡಿದರೆ ಹಳ್ಳ" ಹಾಡಿನಲ್ಲಿ "ರಾಶಿ ರೊಕ್ಕ ಇರೋರೆಲ್ಲ ರಾಚೂಟಪ್ಪನಂಗೆ ಇರಬೇಕು" ಎಂದು ಹೇಳಿರುವುದು.. 

ಇಡೀ ಚಿತ್ರದಲ್ಲಿ ಬಾಲಣ್ಣ ಇರುವ ಪ್ರತಿದೃಶ್ಯವೂ ಒಂದು ಪಾಠ ಕಲಿಸುತ್ತದೆ.. 

ಆರಂಭದ ದೃಶ್ಯದಲ್ಲಿ.. ಸಾಲ ಪಡೆದುಕೊಂಡ ರೈತ.. ಅದನ್ನು ಹುಡಿ ಮಾಡಿ .. ದುಂಡು ವೆಚ್ಚ ಮಾಡಿ.. ಜಮೀನು ಹರಾಜಿಗೆ ಬಂದಿರುತ್ತೆ.. ಮತ್ತೆ ಸಾಲಕ್ಕೆ ಬಂದಾಗ ಚೆನ್ನಾಗಿ ಬೈದು ಬುದ್ದಿ ಹೇಳುತ್ತಾ "ರೈತರು ಹೋಟೆಲಿನಲ್ಲಿ ತಿನ್ನೊದು, ಜೂಜಾಡೋದು ಕಲಿತಿರಿ ನಾಶವಾಗೋದ್ರಿ"  ಎಷ್ಟು ಸುಂದರ ಮಾತು..  ಅದೇ ಮಾತನ್ನು ಮುಂದುವರೆಸುತ್ತಾ "ತಿನ್ನೊದು ತಂಗಲು.. ಮುಕ್ಕಳಿಸೋಕೆ ಪನ್ನೀರು" ಈ ಮಾತುಗಳನ್ನು ಅವರ ಬಾಯಲ್ಲಿಯೇ ಕೇಳಬೇಕು .. ಅದ್ಭುತ 

ಊರಿಗೆಲ್ಲಾ ಉಪಕಾರ ಮಾಡುವ ರಾಚೂಟಪ್ಪನಿಗೆ ತನ್ನ ಮಗ ಓದದೇ ಪೆದ್ದನಾಗಿರೋದು ಕಂಡಾಗ.. ಬೇಸರವಾದರೂ ಆ ದೃಶ್ಯದಲ್ಲಿಯೂ ನೀತಿ ಹೇಳುತ್ತಾ.. ಹಾಸ್ಯ ಉಕ್ಕಿಸುತ್ತಾರೆ "ದುಡ್ಡಿರೋರ ಮಕ್ಕಳಿಗೆ ಬುದ್ದಿ ಇಲ್ಲ.. ಬುದ್ದಿ ಇರೋರ ಮಕ್ಕಳಿಗೆ ದುಡ್ಡಿಲ್ಲ ಅನ್ನೋ ತರ ಆಯಿತು" ಎಂದು ಹೇಳುತ್ತಾ ಸಹಾಯ ಬೇಡಿ ಬಂದ ರಾಜೀವನಿಗೆ ಹಣಕಾಸು ಕೊಡುತ್ತಾರೆ. . 


ಹಳ್ಳಿಯ ಹೊನ್ನನ ಬಳಿ ತಮ್ಮ ಪುಟ್ಟ ಜಮೀನನ್ನು ಆಧಾರ ಮಾಡಿ ಸಾಲ ಮಾಡಿದ್ದ ರಾಜೀವನಿಗೆ ದುಡ್ಡು ಕೊಟ್ಟು ಜಮೀನು ಬಿಡಿಸಿಕೊಳ್ಳಲು ಸಹಾಯ ಮಾಡುತ್ತಾರೆ.. 

ನಂತರ ಆರಂಭ ಮಾಡುವ ದೃಶ್ಯದಲ್ಲಿ ರಾಜೀವ ರಾಚೂಟಪ್ಪನವರಿಗೆ ನಮಸ್ಕಾರ ಮಾಡಿದಾಗ "ನೋಡು ರಾಜೀವಪ್ಪ.. ನಂಬಿಕೆಯಿಂದ ದುಡಿದವರಿಗೆ ಭೂಮಿತಾಯಿ ಎಂದೂ ಕೈ ಬಿಡಾಕಿಲ್ಲ" ಎಂದು ಹೇಳುತ್ತಾರೆ.. 

ರಾಜೀವ ಎತ್ತುಗಳ ಮೈಸವರಿ ಹೊಲ ಊಳೋಕೆ ಶುರುಮಾಡುವಾಗ ಅದನ್ನು ನೋಡುತ್ತಾ "ಆರಂಭಗಾರ ಯಾವಾಗಲೂ ಇಂಥ ಮಮತೆ ತುಂಬ್ಕೊಂಡಿರಬೇಕು" ಎನ್ನುತ್ತಾರೆ..  

ಹೀಗೆ ಪ್ರತಿಯೊಂದು ಹಂತದಲ್ಲೂ ರಾಜೀವನಿಗೆ ಬೆನ್ನೆಲುಬಾಗಿ ನಿಲ್ಲುವ ರಾಚೂಟಪ್ಪ.. ರಾಜೀವನಿಗೆ ಮಾರ್ಗದರ್ಶಕ. ಗುರುಗಳ ಸ್ಥಾನದಲ್ಲಿ ನಿಲ್ಲುತ್ತಾರೆ.. ಕಷ್ಟ ಎನಿಸಿದಾಗ ರಾಜೀವ ಓಡಿ ಬರೋದು ರಾಚೂಟಪ್ಪನವರ ಬಳಿಗೆ ಎನ್ನುವಷ್ಟು ಪರಿಣಾಮಕಾರಿಯಾಗಿದೆ ಚಿತ್ರಕಥೆ.. 

ಹೀಗೆ ಸಾಗುವ ಕಥೆಯಲ್ಲಿ... ರಾಜೀವ ತನ್ನ ಸಂಸಾರವನ್ನು ಎತ್ತಿಕಟ್ಟಿ ನಿಲ್ಲಿಸುವ ಶ್ರಮದಲ್ಲಿ ಕೊಂಚ ಯಶಸ್ಸು ಕಾಣುವಾಗ.. ಇನ್ನೊಂದು ಸಾಹಸಕ್ಕೆ ಕೈ ಹಾಕುತ್ತಾರೆ.. ನೇರಳೆ ಗುಡ್ಡದ ಕಲ್ಲು ಜಮೀನನ್ನು ಕೊಂಡು ಕೊಳ್ಳುವ ಆಶಯ ವ್ಯಕ್ತಪಡಿಸಿದಾಗ ಹೇಳುವ ಮಾತು "ಅಲ್ರಿ ಆ ಜಮೀನಲ್ಲಿ ಸ್ವಲ್ಪ ಸತ್ವ ಇದೆ ಅಂತ ಅನ್ನಿಸಿದ್ದರೆ ನಾವು  ಬಿಡ್ತಾ ಇದ್ವಾ.. " ಎನ್ನುತ್ತಾರೇ.. ಆಗ ಸಹಾಯ ಸಿಗುವ ಬಗ್ಗೆ ಕೊಂಚ  ಅನುಮಾನ ವ್ಯಕ್ತಪಡಿಸುವ ರಾಜೀವಪ್ಪ ಬೇರೆ ಕಡೆ ಹಣ ಹೊಂದಿಸೋಕೆ  ಪ್ರಯತ್ನ ಪಡಲೇ ಎಂದಾಗ "ಅಲ್ರಿ ನಾ ಕೊಡೋಲ್ಲ ಅಂದ್ನಾ.. ಒಸಿ ಯೋಚನೆ ಮಾಡಿ ಅಂದೇ" ಎನ್ನುತ್ತಾ ಎಚ್ಚರಿಕೆಯ ಕರೆಘಂಟೆ ಕೊಡುತ್ತಾರೆ.. 

ನಂತರ ಆ ಜಮೀನಿನನ್ನು ತೋರಿಸಿದಾಗ "ರಾಜೀವಪ್ಪ ಇದೇನು ಬೆಲೆ ಬೆಳೆಯೋಕೆ ಜಮೀನು ಕೊಂಡ್ರಾ .. ಇಲ್ಲ ರೈಲ್ ರಸ್ತೆಗೆ ಜಲ್ಲಿ ಮಾಡೋಕೆ ತಗೊಂಡ್ರ.. ಆಗದು ಆಗದು" ಎಂದಾಗ  ಕಿರಿಯರಾಗಿದ್ದ ರಾಜೀವ "ಆಗದು ಎಂದು ಕೈಕಟ್ಟಿ ಕುಳಿತರೆ" ಹಾಡು ಹೇಳುತ್ತಾ ನೀತಿ ಪಾಠ ಹೇಳಿದಾಗ ದೊಡ್ಡವರಾಗಿದ್ದರೂ ಅದನ್ನು ಸಾವಧಾನವಾಗಿ ಕೇಳಿ.. ಆ ಜಮೀನಿನಲ್ಲಿ ಬಂಗಾರದ ಬೆಲೆ ಬೆಳೆದು.. ಮಾಡಿದ ಸಾಲ ತೀರಿಸಿ.. ಮನೆಯನ್ನು ಕಟ್ಟಿ.. ಕಾರನ್ನು ಕೊಂಡಾಗ ರಾಜೀವನನ್ನು ಬೆನ್ನು ತಟ್ಟಿ ಪ್ರಶಂಸೆ ಮಾಡುವ ಗುಣ ಹೊಂದಿರುತ್ತಾರೆ 

ರಾಜೀವನ ಜೀವನದ ಪ್ರತಿಹಂತದಲ್ಲಿಯೂ.. ಅವರ ಮದುವೆಯ ವಿಚಾರದಲ್ಲಿಯೂ ಮುಂದುವರೆದು ಕಣ್ಣಲ್ಲಿ ಕಾಯುವ ರಾಚೂಟಪ್ಪ, ರಾಜೀವನ ಹೆಂಡತಿ ಲಕ್ಷ್ಮಿಅನೀರೀಕ್ಷಿತ ಆಘಾತದಲ್ಲಿ ಸಾವನ್ನಪ್ಪಿದಾಗ "ಸತಾಯಿಸಿ ಸತಾಯಿಸಿ ಮದುವೆ ಆದ್ರಿ ಆದರೆ .. ಎಲ್ಲಾ ಶಿವನ ಸಂಕಲ್ಪ.." ಎನ್ನುತ್ತಾ ಭರವಸೆ ತುಂಬುತ್ತಾರೆ.. 

ಇಡೀ ಚಿತ್ರದಲ್ಲಿ ಆವರಿಸಿರುವ ರಾಚೂಟಪ್ಪನವರ ಒಳ್ಳೆಯತನ, ಅವರ ಸಂಭಾಷಣೆಯ ಶೈಲಿ, ನಗು ಉಕ್ಕುವಂಥಹ ಮಾತುಗಳು, ಮಗನನ್ನು ದಾರಿಗೆ ತರಲು ರಾಜೀವನನ್ನು ಉಪಯೋಗಿಸಿಕೊಳ್ಳುವ ದಾರಿ, ಎಲ್ಲವೂ ಹೊಂದಾಣಿಕೆಯಾಗಿ ರಾಚೂಟಪ್ಪ ಎನ್ನುವ ಒಂದು ಜೀವಿ ಈ ಪ್ರಪಂಚದಲ್ಲಿ ಇದೆ ಎನ್ನುವಷ್ಟು ಸಹಜವಾಗಿ ಅಭಿನಯಿಸಿದ್ದಾರೆ... 
ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜೀವನ ತ್ಯಾಗ, ಪರಿಶ್ರಮ, ಬುದ್ದಿವಂತಿಕೆ ಎಲ್ಲವೂ ಎಷ್ಟು ಮುಖ್ಯವಾಗಿ ನಿಲ್ಲುತ್ತದೆಯೋ, ಆ ಪಾತ್ರಕ್ಕೆ ಸರಿಸಮನಾಗಿ ಸಾಗುವ ರಾಚೂಟಪ್ಪನ ಪಾತ್ರ.. ಸಹಾಯ ಮನೋಭಾವ, ಇತರರ ಕಷ್ಟದಲ್ಲಿ ತನ್ನನ್ನು ತೊಡಗಿಸಿಕೊಂಡು ಮಾರ್ಗದರ್ಶನ ನೀಡುವ ರೀತಿ, ಊರು ನನ್ನದು, ಎಲ್ಲರೂ ನನ್ನವರು ಎನ್ನುತ್ತಾ ಎಲ್ಲರೊಡನೆ ಬಾಳುವ ಈ ಪಾತ್ರ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ.. 

ಅದಕ್ಕೆ ಬಾಲಣ್ಣ ಅವರು ಆ ಪಾತ್ರವೇ ಆಗಿ ಹೋಗಿದ್ದಾರೆ.. ಶ್ರೀ ಟಿ ಕೆ ರಾಮರಾವ್ ಅವರ ಕಾದಂಬರಿಯನ್ನು ಓದಿಲ್ಲ.. ಆದರೆ ಅವರ ಕಣ್ಣಿನಲ್ಲಿ ಮೂಡಿಬಂದ ಪಾತ್ರವನ್ನು ಸ್ವಲ್ಪವೂ ಹೆಚ್ಚುಕಮ್ಮಿಯಾಗದಂತೆ ನೋಡಿಕೊಂಡಿದ್ದಾರೆ ಬಾಲಣ್ಣ ಅವರು ಅನ್ನೊದು ನನ್ನ ಅಭಿಪ್ರಾಯ.. 

ರಾಜ್ಯ ಸರಕಾರ ಕೊಡುವ ಪೋಷಕ ನಟ ಪ್ರಶಸ್ತಿ ಈ ಪಾತ್ರಕ್ಕೆ ಕೊಟ್ಟಿದ್ದು ಆ ಪ್ರಶಸ್ತಿಗೆ ಒಂದು ಗೌರವ ಎನ್ನುವ ಮಾತು ನನ್ನದು.. 

ಬಾಲಣ್ಣ ರಾಚೂಟಪ್ಪ ಒಂದೇ ನಾಣ್ಯದ ಎರಡು ಮುಖವಾಗಿ ಬಿಟ್ಟಿದೆ.. !

ಇಂದು ಬಾಲಕೃಷ್ಣ ಅವರ ಜನುಮದಿನ.. ಹುಟ್ಟಿದ್ದು ಆದ ಮೇಲೆ ಭುವಿಯಲ್ಲಿ ಗುರುತಾಗುವಂತೆ ಬದುಕಿದ ಬಾಲಣ್ಣ ಅವರ ಸುಂದರ ಬದುಕಿಗೆ ಒಂದು ನಮನ ಈ ಲೇಖನದ ಮೂಲಕ ಸಲ್ಲಿಸುತ್ತೇನೆ.. !!!