ಅಚ್ಚರಿ ಎನಿಸಬಹುದು ಆದರೆ ನಿಜ.. ಸುಮಧುರ ಪದಪುಂಜಗಳಿಂದ ಮಧುರವಾದ ಗೀತೆಗಳನ್ನು ರಚಿಸಿದ ಸಾಹಿತಿ ಆರ್ ಎನ್ ಜಯಗೋಪಾಲ್ ಅವರು ಸಾಹಸ ಪ್ರಧಾನವಾದ ಚಿತ್ರ ನಿರ್ದೇಶಿಸಿದ್ದು ಅಚ್ಚರಿಯೇ ಹೌದು.
ಚಿತ್ರಕಥೆ, ಸಂಭಾಷಣೆ, ಹಾಡುಗಳು ಮತ್ತು ನಿರ್ದೇಶನ ಅವರದ್ದೇ..ತಮ್ಮ ಮೊದಲ ಪ್ರಯತ್ನವನ್ನು ತಮ್ಮ ಪಿತ ಆರ್ ನಾಗೇಂದ್ರರಾಯರಿಗೆ ಅರ್ಪಿಸಿದ್ದಾರೆ.
ಶ್ರೀ ಭಗವತಿ ಆರ್ಟ್ಸ್ ಪ್ರೊಡಕ್ಷನ್ಸ್ ಅವರ ಲಾಂಛನದಲ್ಲಿ ಅವರ ಕಥಾವಿಭಾಗದಿಂದ ರಚಿತವಾದ ಕತೆಯ ಆಧಾರಿತ ಚಿತ್ರ ಧೂಮಕೇತು..
ಸುಮಧುರ ಹಾಡುಗಳನ್ನು ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಎಲ್ ಆರ್ ಈಶ್ವರಿ ಹಾಡಿದ್ದಾರೆ.
ಛಾಯಾಗ್ರಹಣ ನಿರ್ದೇಶಕರ ಸಹೋದರರಾದ ಆರ್ ಎನ್ ಕೆ ಪ್ರಸಾದ್
ಸಂಗೀತ ಟಿ ಜಿ ಲಿಂಗಪ್ಪ ಅವರದ್ದು
ಇಲ್ಲಿ ನಾಯಕಿ ಉದಯಚಂದ್ರಿಕಾ ಅತೀ ಮುದ್ದಾಗಿ ಕಾಣುತ್ತಾರೆ. ಚಿತ್ರದ ಉದ್ದಕ್ಕೂ ಇರುತ್ತಾರೆ.
ಧೂಮಕೇತುವಾಗಿ ಉದಯಕುಮಾರ್ ಅವರ ಅಭಿನಯ ಅತಿ ಅದ್ಭುತ.. ಅವರ ವೇಷಭೂಷಣ, ಆ ಗತ್ತು, ಆ ಧ್ವನಿ, ಮುಖಾಭಿನಯ ಪರಿಣಾಮಕಾರಿಯಾಗಿ ಖಳನನ್ನು ತೆರೆಗೆ ತಂದಿದ್ದಾರೆ.
ಅಶ್ವಥ್ ಪೊಲೀಸ್ ಅಧಿಕಾರಿಯಾಗಿ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ.. ಪ್ರಭಾವಿ ಪಾತ್ರ, ಪೊಲೀಸ್ ಅಧಿಕಾರಿಯ ಗತ್ತು ಸೊಗಸಾಗಿದೆ..
ನರಸಿಂಹರಾಜು ಅನೇಕಾನೇಕ ಯಂತ್ರೋಪಕರಣಗಳನ್ನು ಕಂಡು ಹಿಡಿದು ತಯಾರಿಸುವ ಹಾಸ್ಯ ಪಾತ್ರ.. ಸದ್ದಿಲ್ಲದೇ ನಾಯಕನಿಗೆ ಸಹಾಯ ಮಾಡುವ ಪಾತ್ರವದು.. ಅಲ್ಲಲ್ಲಿ ನಗಿಸುತ್ತಾರೆ. ಅಂತಿಮ ಹಣಾಹಣಿಯ ದೃಶ್ಯಗಳಲ್ಲಿ ನಗಿಸುತ್ತಾರೆ.
ಖಳನ ಸಹಾಯಕನಾಗಿ ಶಕ್ತಿಪ್ರಸಾದ್, ನಾಗಪ್ಪ ಮೊದಲಾದವರು ಇದ್ದಾರೆ
ಶೈಲಶ್ರೀ ಸಿಐಡಿ ಸಹಾಯಕಿಯಾಗಿ ಪಾತ್ರವಿದ್ದರೂ ಖಳನ ಕಾಣಿಸಿಕೊಳ್ಳುವುದರಿಂದ ಆಕೆಯೂ ಖಳನಟಿ ಇರಬಹುದು ಎನಿಸುತ್ತದೆ.. ಆದರೆ ಒಂದು ಹಾಡು ಒಂದೆರಡು ದೃಶ್ಯಗಳಿಗೆ ಮಾತ್ರ ಸೀಮಿತವಾಗಿದೆ
ಉಳಿದಂತೆ ಸಂಪತ್, ಗಣಪತಿ ಭಟ್, ಪೊಲೀಸ್ ಇನ್ಸ್ಪೆಕ್ಟರ್ ಆಗಿ ರಂಗ ಇದ್ದಾರೆ
ಮುಖ್ಯ ಪಾತ್ರದಲ್ಲಿ ರಾಜಕುಮಾರ್ ನಟನೆ ಸ್ಮರಣೀಯವಾಗಿದೆ. ಕಾರಣ ಮೊದಲ ಹಲವಾರು ದೃಶ್ಯಗಳಲ್ಲಿ ಜವಾಬ್ಧಾರಿ ಇಲ್ಲದೆ ಮೋಜು ಮಸ್ತಿಗಳಲ್ಲಿ ಸಮಯ ಕಳೆಯುವ ಪಾತ್ರ... ಅರೆ ರಾಜಕುಮಾರ್ ಅವರು ಹೀಗೂ ಇರಬಹುದೇ ಅನಿಸುತ್ತದೆ. ತನ್ನ ಅಪ್ಪ ಕೆಲವು ತಪ್ಪು ನಿರ್ಧಾರಗಳಿಂದ ಸಾಲಗಳಲ್ಲಿ ಮುಳುಗಿದ್ದಾರೆ ಎಂದು ತಿಳಿದಾಗ ಹತಾಶೆ ವ್ಯಕ್ತ ಪಡಿಸುವ ಅಭಿನಯ ಸೂಪರ್ ಇದೆ.
ತಮ್ಮ ದೊಡ್ಡಪ್ಪನ ಬಳಿ ಸಹಾಯ ಕೇಳಲು ಬಂದಾಗ ತನ್ನ ತಮ್ಮನ ಮಗನ ಬೇಜವಾಬ್ಧಾರಿತನದ ಬಗ್ಗೆ ಗೊತ್ತಿದ್ದ ಅವರು ನಿನಗೆ ಸಹಾಯ ಮಾಡಲಾರೆ .. ಆದರೂ ಸಹಾಯ ಮಾಡುವೆ ಅಂತ ಹೇಳಿದಾಗ ತನ್ನ ಪರಿಶ್ರಮದ ಬಲದಿಂದಲೇ ಮೇಲೆ ಬರುತ್ತೇನೆ ಎಂದು ಹೇಳುವ ದೃಶ್ಯದಲ್ಲಿ ಇಷ್ಟವಾಗುತ್ತಾರೆ.
ನೂರು ಚಿತ್ರಗಳನ್ನು ಮುಗಿಸಿದ ಮೇಲೆ ಚಿತ್ರವನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳುವ ಪರಿ ಕಾಣುತ್ತದೆ. ನೂರು ಚಿತ್ರಗಳ ನಟನಾಗಿ ಪೂರ್ಣಗೊಳಿಸಿದ ಮೇಲೆ ಅವರನ್ನು ನಟಸಾರ್ವಭೌಮ ಎಂಬ ಬಿರುದು ಅವರ ಹೆಸರಿನೊಂದಿಗೆ ಸೇರಿದೆ.


