Thursday, March 5, 2026

ಕಣ್ಣ ಮುಂದೆ ಬಂದ ಇತಿಹಾಸದ ಪ್ರಸಿದ್ಧ ಪುರುಷ ಶ್ರೀ ಕೃಷ್ಣದೇವರಾಯ 19೭೦ (ಅಣ್ಣಾವ್ರ ಚಿತ್ರ ೧೧೬/೨೦೭)

ಕೆಲವನ್ನು ನಾವು ಆರಿಸಿಕೊಂಡು ಹೋಗುತ್ತೇವೆ.. 
ಕೆಲವು ನಮ್ಮನ್ನು ಆರಿಸಿಕೊಂಡು ಬರುತ್ತವೆ.. 

ರಾಜಕುಮಾರ್ ಒಂದು ಸಂದರ್ಶನದಲ್ಲಿ ಹೇಳಿದ ಮಾತು..  ... 
ರಾಜಕುಮಾರ್ ಅವರ ಚಿತ್ರಜೀವನದಲ್ಲಿ ಅಕ್ಷರಶಃ ಈ ಮಾತು ನಿಜ...

ದಕ್ಷಿಣ ಭಾರತವನ್ನು ಶ್ರೀಮಂತಗೊಳಿಸಿದ ಮೇರು ವ್ಯಕ್ತಿಗಳಲ್ಲಿ ಶ್ರೀ ಕೃಷ್ಣದೇವರಾಯರು ಒಬ್ಬರು.. ಇವರಿದ್ದ ಕಾಲಘಟ್ಟದಲ್ಲಿ ಶ್ರೀಮಂತಿಕೆ ಬರಿ ಸಂಪತ್ತಿನ ವಿಚಾರದಲ್ಲಿ ಮಾತ್ರವಲ್ಲದೆ ಶಿಲ್ಪಕಲೆ, ಆಡಳಿತದ ವೈಖರಿ, ಸಾಮಾಜಿಕ ಸುಧಾರಣೆಗಳು, ನಾಡ ಹಬ್ಬಗಳು, ಸಂಗೀತ, ಸಾಹಿತ್ಯ, ಸೇನೆ ಹೀಗೆ ಎಲ್ಲಾ ಪ್ರಾಕಾರಗಳಲ್ಲಿಯೂ ಈ ಕಾಲ ಸುವರ್ಣಯುಗವಾಗಿತ್ತು ಅಂತ ಇತಿಹಾಸಕಾರರು ಹೇಳುತ್ತಾರೆ. 

ನಮ್ಮ ಅದೃಷ್ಟವೆಂದರೆ, ಆ ಕಾಲಘಟ್ಟಕ್ಕೆ ನಮ್ಮ ಗಡಿಯಾರವನ್ನು ತಿರುಗಿಸಿಕೊಂಡು ಹೋಗಲು ಸಾಧ್ಯವಿಲ್ಲ.. ಆದರೆ ಈ ಕಾಲಘಟ್ಟವನ್ನೇ ನಮ್ಮ ಕಣ್ಣುಗಳ ಮುಂದೆ ತಂದು ನಿಲ್ಲಿಸುವ ಶಕ್ತಿ ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ಚಿತ್ರಕತೆ, ನಿರ್ಮಾಣ, ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದ ಬಿ ಆರ್ ಪಂತುಲು ಮತ್ತು ತಂಡದವರಿಗಿತ್ತು.

ಅರಂಭದಲ್ಲಿ ಸಂಬಂಧ ಪಟ್ಟ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವುದು.. ಚಿತ್ರದ ಇತಿಹಾಸ ಪುರುಷನ ಬಗ್ಗೆ ಒಂದು ಸಣ್ಣ ಪರಿಚಯ.. ಹೀಗೆ ಶುರುವಾಗುವ ಸಿನಿಮಾ ಸಿನಿ ರಸಿಕರನ್ನು ಹಿಡಿದಿಡಲು ಸಹಾಯ ಮಾಡಿತು





ಆ ಮಹಾನ್ ಕಥಾನಾಯಕನನ್ನು ರಾಜಕುಮಾರ್ ಎಂಬ ಶ್ರೀಕೃಷ್ಣದೇವರಾಯನ ಪಡಿಯಚ್ಚಿನಂತೆ ಇರುವ ...ಅಲ್ಲ ಅಲ್ಲ ಶ್ರೀಕೃಷ್ಣದೇವರಾಯರೇ ಧರೆಗಿಳಿದು ಬಂದರೂ, ಅವರೇ ಅಚ್ಚರಿ ಪಡುವಂತೆ ಪಾತ್ರದೊಳಗೆ ಹೊಕ್ಕಿದ್ದ ರಾಜಕುಮಾರ್ ಅವರನ್ನು ತೆರೆಯ ಮೇಲೆ ತಂದದ್ದು ಅವರ ಅದ್ಭುತ ಪ್ರತಿಭೆಗೆ ಸಾಕ್ಷಿಯಾಗಿತ್ತು.. 

ನಾವ್ಯಾರು ಆ ಮಹಾನ್ಅ ಕಥಾನಾಯಕನ್ನು ನೋಡಿಲ್ಲ ಅಂತ ಸುಳ್ಳು ಹೇಳುವ ಬದಲು.. ಶ್ರೀಕೃಷ್ಣದೇವರಾಯರನ್ನು ನಾವು ತೆರೆಯ ಮೇಲೆ ನೋಡಿದ್ದೇವೆ ಅಂತ ಎದೆ ತಟ್ಟಿಕೊಂಡು ಹೇಳಬಹುದು.. 





ಶ್ರೀಕೃಷ್ಣದೇವರಾಯನಾಗಿ - ರಾಜಕುಮಾರ್ , ಮತ್ತು ತಿಮ್ಮರಸು ಅವರಾಗಿ ಬಿ ಆರ್ ಪಂತುಲು.. ಉಳಿದ ಪಾತ್ರಗಳಲ್ಲಿ ನರಸಿಂಹರಾಜು, ಭಾರತಿ, ಜಯಂತಿ, ದಿನೇಶ್, ಹನುಮಂತಚಾರ್, ಆರ್ ನಾಗೇಂದ್ರರಾವ್, ನರಸಿಂಹರಾಜು, ಆರ್ ಎನ್ ಸುದರ್ಶನ್, ಎಂ ವಿ ರಾಜಮ್ಮ, ಮೈನಾವತಿ, ಚಿಂದೋಡಿ ಲೀಲಾ, ಜಯ ಶನಿಮಹಾದೇವಪ್ಪ, ಜೋಕರ್ ಶ್ಯಾಮ್ ಉಳಿದ ಕೆಲವು ಮುಖ್ಯ ಪಾತ್ರಗಳಲ್ಲಿದ್ದಾರೆ. 


















ಈ ಚಿತ್ರ ವಿಶೇಷ ಅನಿಸೋದು ಎರಡು ಕಾರಣಗಳಿಗೆ.. ಶ್ರೀ ಕೃಷ್ಣದೇವರಾಯ ಎಂದರೆ  ರಾಜಕುಮಾರ್, ರಾಜಕುಮಾರ್ ಎಂದರೆ ಶ್ರೀ ಕೃಷ್ಣದೇವರಾಯ ಎನ್ನುವಷ್ಟು ಕರಾರುವಾಕ್ ಪಾತ್ರ ಮೂಡಿಬಂದಿದೆ. 

ಎರಡು ಇತಿಹಾಸವನ್ನು ಹತ್ತಿರದಿಂದ ತೋರಿಸಿರುವ ಹಾಗೂ ಹೊರಾಂಗಣ ಒಳಾಂಗಣ, ಯುದ್ಧದ ಸನ್ನಿವೇಶಗಳು, ರಾಜದರ್ಬಾರ್, ಹಾಸ್ಯ ದೃಶ್ಯಗಳು, ಹಾಡುಗಳು, ಸಂಗೀತ ಎಲ್ಲವೂ ಒಂದಕ್ಕೊಂದು ಮಿಳಿತಗೊಂಡಿದೆ. 

ಒಂದು ಚಿತ್ರರತ್ನವಾಗಿ ನಮ್ಮ ಮುಂದೆ ನಿಂತಿರುವ ಈ ಚಿತ್ರವನ್ನು ನೋಡದಿರುವ ಚಲನಚಿತ್ರ ರಸಿಕರಿಲ್ಲ ಎನ್ನುವಷ್ಟು ಪ್ರಸಿದ್ಧಿ ಪಡೆದಿದೆ.. 

ಆ ರಾಜಗಾಂಭೀರ್ಯ ನೆಡೆ ನುಡಿ ಹಾವ ಭಾವ ರಣಕ್ಕೆ ಇಳಿದಾಗ ಮೂಡುವ ರೋಷಾವೇಶ, ಹಾಗೆಯೇ ಅರಮನೆಯಲ್ಲಿ ತನ್ನ ಪರಿವಾರದೊಂದಿಗೆ ಇರುವಾಗ ತೋರುವ ಯಜಮಾನತನ, ರಾಜಸಭೆಯಲ್ಲಿ ತೋರುವ ಗೌರವ, ಅದೇ ತನ್ನ ರಾಜ್ಯದ ಪಂಡಿತರಿಗೆ ಅವಮಾನ ಮಾಡಲು ಸಂಚು ಮಾಡಿಕೊಂಡು ಬಂದವರನ್ನು ನಿಭಾಯಿಸುವ ಕಲೆ..ಮಂತ್ರಿಗಳೊಂದಿಗೆ ಚರ್ಚಿಸುವಾಗ ತೋರುವ ರಾಜಕೀಯ ಮುತ್ಸದ್ದಿತನ ಎಲ್ಲವೂ ಶ್ರೀ ಕೃಷ್ಣದೇವರಾಯ ಅವರ ಆತ್ಮವೇ ಒಳ ಹೊಕ್ಕಿದಿಯೆನೋ ಎನ್ನುವಷ್ಟು ಕರಾರುವಾಕ್ಕಾಗಿ ನಿಭಾಯಿಸಿರುವ ಪಾತ್ರದ ಯಶಸ್ಸು ರಾಜಕುಮಾರ್ ಅವರಿಗೆ ಸಲ್ಲಬೇಕು.. 

ಈ ಪಾತ್ರವನ್ನು ಅಷ್ಟೇ ಗಟ್ಟಿಯಾಗಿ ನಿರೂಪಿಸಿ ನಿರ್ದೇಶನ ಮಾಡಿರುವುದು ಅಲ್ಲದೆ, ಶ್ರೀಕೃಷ್ಣದೇವರಾಯ ಅವರ ವಿಜಯನಗರ ಸಾಮ್ರಾಜ್ಯ ಉತ್ತುಂಗ ತಲುಪಲು ನೇರವಾದ ಇನ್ನೊಂದು ಬಲಾಢ್ಯ ಹೆಸರು ಮಂತ್ರಿ ತಿಮ್ಮರಸು ಅವರ ಪಾತ್ರ ಪೋಷಣೆಯಲ್ಲಿ ಬಿ ಆರ್ ಪಂತುಲು ಸೊಗಸಾಗಿ ಗೆದ್ದಿದ್ದಾರೆ. 

ಇಡೀ ಚಿತ್ರ ಇವರೆಡು ಪಾತ್ರಗಳ ಸುತ್ತಲೇ ಸುತ್ತುತ್ತದೆ ಎಂದರೆ ಅಚ್ಚರಿಯಿಲ್ಲ.. ನಿಜ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಗೆದ್ದಿರುವುದು ಹೆಮ್ಮೆಯ ಮಾತು

ಮಾತೃಹೃದಯಿಯಾಗಿ ಎಂ ವಿ ರಾಜಮ್ಮ ಅವರದ್ದು ಮರೆಯಲಾರದ ಅಭಿನಯ.. 

ಜಯಂತಿ ಮತ್ತು ಭಾರತಿ ಪಾತ್ರೋಚಿತ್ರ ಅಭಿನಯ 

ನರಸಿಂಹರಾಜು ತೆನಾಲಿ ರಾಮಕೃಷ್ಣನ ಕೆಲವು ಬುದ್ಧಿವಂತಿಕೆಯ ದೃಶ್ಯಗಳಲ್ಲಿ ಜೀವ ತುಂಬಿದ್ದಾರೆ ಅವರ ಪತ್ನಿಯಾಗಿ ಮೈನಾವತಿ.. ಅವರ ತಂದೆಯಾಗಿ ಎಚ್ ಆರ್ ರಾಮಚಂದ್ರಶಾಸ್ತ್ರಿ ಇದ್ದಾರೆ. 

ಪಂತುಲು ಅವರ ಆಸ್ಥಾನ ಸಂಗೀತ ಗಾರುಡಿಗ ಟಿ ಜಿ ಲಿಂಗಪ್ಪ ಸಂಗೀತದ ಮಾಧುರ್ಯದಿಂದ ಮಿಂಚಿದ್ದಾರೆ 

ಸಾಹಿತ್ಯಕ್ಕೆ ಕಣಗಾಲ್ ಪ್ರಭಾಕರ್ ಶಾಸ್ತ್ರೀ ಮತ್ತು ಆರ್ ಎನ್ ಜಯಗೋಪಾಲ್ ಅವರದ್ದು 

ಛಾಯಾಗ್ರಹಣ ಉಸ್ತುವಾರಿ ಎ ಷಣ್ಮುಗಂ ಅವರದ್ದು 

ಈ ರೀತಿಯ ಇತಿಹಾಸವನ್ನು ಮರುಸೃಷ್ಟಿ ಮಾಡುವ ಚಿತ್ರಗಳು ಆರಂಭ ಎಷ್ಟು ಕ್ರೂರತೆಯಿಂದ ಕೂಡಿ ನಂತರ ಅದರ ಉಚ್ಛ್ರಾಯ ಸ್ಥಿತಿ ತಲುಪಿ ನಂತರ ಮತ್ತೆ ಧಾರುಣವಾಗಿ ಅಂತ್ಯಗೊಳ್ಳುತ್ತದೆ. ಅಂತ್ಯ ಜೀರ್ಣಿಸಿಕೊಳ್ಳಲು ಆಗೋಲ್ಲ ಆದರೆ ಅದನ್ನು ಹೇಳದಿದ್ದರೆ ಪೂರ್ತಿ ಇತಿಹಾಸ ಹೇಳಿದಂತಾಗದು.. 

ಅದನ್ನೇ ಸೂಕ್ಷ್ಮವಾಗಿ ನಿರ್ದೇಶಕರು ಅಂತಿಮ ದೃಶ್ಯಗಳಲ್ಲಿ ಹೇಳಿದ್ದಾರೆ.. 

ಇದೊಂದು ಚಿತ್ರವಲ್ಲ. ಐತಿಹಾಸಿಕ ಚಿತ್ರ.. ಅದರಲ್ಲೂ ಪ್ರವರ್ಧಮಾನಕ್ಕೆ ಬಂದು ಕನ್ನಡ ಚಿತ್ರರಂಗವನ್ನು ಗಟ್ಟಿಯಾಗಿ ಬೇರೂರಲು ಕಾರಣೀಕರ್ತರಾದ ಹಲವು ಮಹನೀಯರ ಹೆಸರಲ್ಲಿ ರಾಜಕುಮಾರ್ ಅವರದ್ದು ಇರುವುದು ಮತ್ತು ರಾಜಕುಮಾರ್ ಚಿತ್ರಜೀವನದ ಮೊಟ್ಟಮೊದಲ ವರ್ಣ ಚಿತ್ರವೂ ಹೌದು. ! 

Tuesday, February 24, 2026

ಸರಣಿ ಚಿತ್ರಗಳು ಆಪರೇಷನ್ ಜಾಕ್ ಪಾಟ್ ನಲ್ಲಿ ಸಿ ಐ ಡಿ ೯೯೯ - 1969 (ಅಣ್ಣಾವ್ರ ಚಿತ್ರ ೧೧೫/೨೦೭)

ಜೇಡರಬಲೆ ಹೆಣೆದಾಯ್ತು.. 

ಗೋವಾದಲ್ಲಿ ಸಿ ಐ ಡಿ ೯೯೯ ಹೋಗಾಯ್ತು 

ಈಗ ಆಪರೇಷನ್ ಜಾಕ್ ಪಾಟ್ 


ಬೇಡರಕಣ್ಣಪ್ಪನಾಗಿ ವನ್ಯ ಜೀವಿಗಳ ಜೊತೆಯಿದ್ದ ದಿಣ್ಣ ಠಾಕು ಠೀಕಾಗಿ ಪತ್ತೇದಾರನಾಗಿ ಅನೇಕ ರಹಸ್ಯಗಳನ್ನು ಭೇದಿಸುವುದು, ಸಮಾಜಘಾತುಕರನ್ನು ಭೇಟೆಯಾಡೋದು.. ರಾಜಕುಮಾರ್ ನೆಡೆದು ಬಂದ ದಾರಿಯೇ ವಿಭಿನ್ನ. 

ಹೀಗೆ ಅಂತ ಅವರನ್ನು ಒಂದು ಚೌಕಟ್ಟಿನೊಳಗೆ ಸೇರಿಸುವುದೇ ಅಲ್ಲ. ಕಾರಣ ಎಲ್ಲಾ ರೀತಿಯ ಪಾತ್ರಗಳನ್ನೂ ಅರೆದು ಕುಡಿದುಬಿಟ್ಟಿದ್ದಾರೆ.. ನೂರಾ ಹದಿನೈದನೇ ಸಿನಿಮಾ ಇದು.. 

ಅನುಪಮ ಮೂವೀಸ್ ಲಾಂಛನದಲ್ಲಿ ಬಿ ದೊರೈರಾಜ್ ಮತ್ತು ಎಸ್ ಕೆ ಭಗವಾನ್ ಕಥೆ ಚಿತ್ರಕಥೆ ರಚಿಸಿ ನಿರ್ಮಾಣ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರವಿದು. 

ಈ ರೀತಿಯ ಚಿತ್ರಗಳಲ್ಲಿ ವೇಗವಾದ ಚಿತ್ರಕಥೆ ದೃಶ್ಯಗಳ ಜೋಡಣೆ ಬುದ್ಧಿಮತ್ತೆಯ ನಾಯಕ, ಸಂಕಷ್ಟಗಳನ್ನು ನೇವರಿಸಿಕೊಂಡು ತನ್ನ ಸುತ್ತಲ ಜಗತ್ತನ್ನು ರಕ್ಷಿಸುವ ಕಥಾವಸ್ತುವನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ. 

ರಾಜಕುಮಾರ್ ಸಿಐಡಿ ಪ್ರಕಾಶ್ ಆಗಿ ಮತ್ತೆ ಪರಕಾಯ ಪ್ರವೇಶ ಮಾಡಿದ್ದಾರೆ.  ಆ ಸೂಟುಬೂಟಿನಲ್ಲಿ ಅತಿ ಸುಂದರವಾಗಿ ಕಾಣುತ್ತಾರೆ. ಆ ಪಾತ್ರಕ್ಕೆ ಬೇಕಾದ ಗತ್ತು ಗಾಂಭೀರ್ಯ ಚಾಣಾಕ್ಷತನ ಎಲ್ಲವನ್ನೂ ಮೇಳೈಸಿಕೊಂಡು ಅಭಿನಯಿಸಿದ್ದಾರೆ.. ಕ್ಷಮಿಸಿ ಆ ಪಾತ್ರವೇ ತಾವಾಗಿದ್ದಾರೆ. 

ಪ್ರತಿ ದೃಶ್ಯದಲ್ಲೂ ಕಾಣಸಿಗುವ ಅವರು ಅವರಿಲ್ಲದ ಚಿತ್ರ ಸಾಧ್ಯವೇ ಅನ್ನುವಷ್ಟು ಆವರಿಸಿಕೊಂಡಿದ್ದಾರೆ. 

ಅವರ ಮಾಮೂಲಿ ಚಿತ್ರಗಳಲ್ಲಿ ಇರುವಂತೆ ಹಾಡುಗಳಿಲ್ಲ.. ಆದರೆ ಹಾಡಿಗೆ ಬದಲಾಗಿ ಅನೇಕಾನೇಕ ಸಾಹಸ ದೃಶ್ಯಗಳು ಇವೆ. ಚಾಲಾಕಿತನದ ದೃಶ್ಯಗಳಲ್ಲಿ ಅವರನ್ನು ಮೀರಿಸುವವರಿಲ್ಲ ಅನಿಸುತ್ತದೆ. ತಾವೇ ತಾವಾಗಿ ಪಾತ್ರವನ್ನು ಜೀವಿಸುವುದು ಅವರಿಗೆ ಕರಗತವಾಗುತ್ತಿರುವ ಕಲೆ ಎನ್ನುವುದು ಅರಿವಾಗುತ್ತದೆ. ಸುಮಾರು ಇಪ್ಪತ್ತೊಂಭತ್ತು ನಿಮಿಷಗಳಾದ ಮೇಲೆ ರಾಜಕುಮಾರ್ ಚಿತ್ರದಲ್ಲಿ ಪ್ರವೇಶ ಮಾಡಿ, ಅನಂತರ ಇಡೀ ಚಿತ್ರವನ್ನೇ ತಮ್ಮ ಹೆಗಲ ಮೇಲೆ ಹೊತ್ತು ಕೊಂಡಿದ್ದಾರೆ. 

ರಾಜಕುಮಾರ್ ಅವರ ಮೊದಲ ದೃಶ್ಯದಲ್ಲಿ ಯೋಗ ಮಾಡುತ್ತಾ ತಲೆ ಮತ್ತು ಕಾಲುಗಳ ಆಧಾರದ ಮೇಲೆ ಮಲಗಿರುತ್ತಾರೆ .. ಅಚ್ಚರಿ ತರಿಸುತ್ತದೆ. 



ರೇಖ ಎಂಬ ನವ ನಟಿಯನ್ನು ಈ ಚಿತ್ರದಲ್ಲಿ ಪರಿಚಯಿಸಿದ್ದಾರೆ. ಸುಮಾರು ಒಂದು ಘಂಟೆ ಕಳೆದ ಮೇಲೆ ಅವರ ಪಾತ್ರ ಪ್ರವೇಶವಾಗುತ್ತದೆ.  ತಳುಕು ಬಳುಕು ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ. 

ನರಸಿಂಹರಾಜು ಮತ್ತೆ ಬೇಬಿ ಎಂಬ ಪಾತ್ರದಲ್ಲಿ ಬಂದಿದ್ದಾರೆ. 

ಉಳಿದ ಪಾತ್ರಗಳಲ್ಲೆಲ್ಲ ನಾಯಕನ ಪಾತ್ರದ ಸುತ್ತಲೇ ಸುತ್ತುತ್ತದೆ. ಹಾಗಾಗಿ ಉಳಿದ ಪಾತ್ರಗಳು ಅವಶ್ಯಕತೆಗೆ ತಕ್ಕಂತೆ ಅಭಿನಯಿಸಿದ್ದಾರೆ. ಖಳನನ್ನು ಅರ್ಧಮರ್ಧ ತೋರಿಸುವುದು, ಬರಿ ಧ್ವನಿಯಲ್ಲಿ ಪರಿಚಯ ಮಾಡಿಕೊಡೋದು.. ಕೈ ಕಾಲು ತೋರಿಸೋದು.. ಕಡೆಯಲ್ಲಿ ಅಯ್ಯೋ ಇವರೇ ಖಳನಾಯಕನಾ ಎಂದು ಅಚ್ಚರಿ ಬರುವಂತೆ ನಿರೂಪಿಸುವುದು ಈ ರೀತಿಯ ಚಿತ್ರಗಳ ವಿಶೇಷ 

ಸಂಗೀತ ಜಿ ಕೆ ವೆಂಕಟೇಶ್ 

ಹಾಡುಗಳು ಎಂ ನರೇಂದ್ರಬಾಬು ಮತ್ತು ಚಿ ಉದಯಶಂಕರ್ 

ಇರುವ ಮೂರು ಹಾಡುಗಳನ್ನು ಎಲ್ ಆರ್ ಈಶ್ವರಿ ಹಾಡಿದ್ದಾರೆ

ಛಾಯಾಗ್ರಹಣ ಬಿ ದೊರೈರಾಜ್ 

ಸಂಭಾಷಣೆ ಎಂ ನರೇಂದ್ರಬಾಬು ಅವರದ್ದು 

ಒಂದು ವೇಗವಾಗಿ ಚಲಿಸುವ ಚಿತ್ರವನ್ನು ಬೇಸರ ತರಿಸದೆ ನಿರೂಪಿಸಿರುವ ಚಿತ್ರವೇ ಇದು.






Wednesday, February 18, 2026

ಹಳ್ಳಿಯಿಂದ ದಿಳ್ಳಿಗೆ ಬಂದ ಮುತ್ತಣ್ಣ - ಮೇಯರ್ ಮುತ್ತಣ್ಣ 1969 (ಅಣ್ಣಾವ್ರ ಚಿತ್ರ ೧೧೪/೨೦೭)

ಎಲ್ಲವೂ ಪೂರ್ಣತೆಗೆ ಅವಕಾಶ ಸಿಗೋಲ್ಲ.. ಇಲ್ಲ ಕೆಲವೊಮ್ಮೆ ಸಾಧ್ಯವಾಗೋಲ್ಲ.. ಪೂರ್ಣ ಚಂದ್ರ ಬರೋದು ಮೂವತ್ತು ದಿನಗಳಿಗೊಮ್ಮೆ ಮಾತ್ರ.. 

ಏಕೆ ಹೀಗೆ ಹೇಳ್ತೀನಿ ಅಂದ್ರಾ.. 

ಮೇಯರ್ ಮುತ್ತಣ್ಣ ಸಿನೆಮಾ ನೋಡಿದಾಗ ಈ ಮಾತುಗಳು ಹಾಗೆಯೇ ಮನಸ್ಸಿಗೆ ಬಂದವು..



ರಾಜಕುಮಾರ್ ಕರುನಾಡಿನ ಸಾಂಸ್ಕೃತಿಕ ರಾಯಭಾರಿ ಎನ್ನುವಂತೆ ಎಲ್ಲರಿಗೂ ಗೊತ್ತಾಗಿದ್ದು ಬಹುಶಃ ಈ ಸಿನಿಮಾದಿಂದ ಅನಿಸುತ್ತದೆ. 

ಕಾರಣ ಹಳ್ಳಿಯ ಮುಗ್ಧ ಪಟ್ಟಣದ ತಳುಕು ಬಳುಕು ಜಾಲ ಹೆಣೆಯುವ ಜನ ಇವರ ಮಧ್ಯೆ ಸಿಕ್ಕಿಕೊಂಡರೂ ತನ್ನ ತನವನ್ನು ಮರೆಯದೆ.. ಎಲ್ಲರಿಗೂ ಮಾದರಿಯಾಗಿ ನಿಲ್ಲುವ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ಎಲ್ಲವೂ ಇದೆ. 

ಹಳ್ಳಿಯ ಮುಗ್ಧತೆ.. ತನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಜಯಶ್ರೀ ಕುಟುಂಬಕ್ಕೆ ಒದಗಿದ ಆಘಾತ... ಅದನ್ನು ಸರಿಪಡಿಸಲು ದೇವರ ಮೇಲೆ ಕೂಡ ಪ್ರಮಾಣ ಮಾಡುತ್ತೇನೆ ಎಂದು ಹೇಳುವ ದೃಶ್ಯ.. 

ಪಟ್ಟಣದಲ್ಲಿ ದುಶ್ಚಟಗಳಿಗೆ ಸಾಲ ಮಾಡಿ ಅದನ್ನು ತೀರಿಸಲಾಗದೆ, ತೊಳಲಾಡುವ ಊರಿನ ಪ್ರಮುಖನ ಮಗನನ್ನು ಕಾಪಾಡಲು ಕಳ್ಳತನದ ಆಪಾದನೆಯನ್ನು ತನ್ನ ಮೇಲೆ ಹಾಕಿಕೊಂಡು ಊರಿಂದ ಬಹಿಷ್ಕಾರಗೊಂಡು ಹಳ್ಳಿಯನ್ನು ಬಿಟ್ಟು ಓಡುವ ದೃಶ್ಯ.. 

ಹೊಟ್ಟೆ ಹಸಿದು ಊಟ ತಯಾರಾಗಿದೆ ಎನ್ನುವ ಬೋರ್ಡ್ ನೋಡಿ ಕಂಠ ಪೂರ್ತಿ ತಿಂದು ದುಡ್ಡಿಲ್ಲದೆ ಪರದಾಡುವ ದೃಶ್ಯ 

ಪಟ್ಟಣಕ್ಕೆ ಬಂದು, ಬದುಕಿಗಾಗಿ ಸ್ನೇಹಿತನ ಗುಡಿಸಲಿಗೆ ಹೋದಾಗ, ಅಲ್ಲಿ ಬರುವ ಮಾರ್ವಾಡಿಯ ಸಾಲವನ್ನು ಮುಗ್ಧತೆಯಿಂದ ತೀರಿಸಿ, ಆ ಕೊಳೆಗೇರಿಯಲ್ಲಿ ಜೀವನ ಶುರು ಮಾಡುವ ದೃಶ್ಯ 

ಪಟ್ಟಣದ ಹುಡುಗಿಗೆ ಚಿತ್ರಕಲೆಯಲ್ಲಿ ನಮ್ಮ ದೇಶದ ಬಡತನವನ್ನಲ್ಲ ಸಿರಿತನವನ್ನು ತೋರಿಸಬೇಕು ಎಂದು ತಿಳಿ ಹೇಳುವ ದೃಶ್ಯ 

ತನ್ನ ಊರಿನ ಹೆಣ್ಣು ಮಗಳು ದಾರಿಯಲ್ಲಿ ಸಿಕ್ಕಾಗ, ಮನೆಗೆ ಕರೆದು ತಂದು ಕ್ಷೇಮ ಸಮಾಚಾರ ನೋಡಿಕೊಳ್ಳುವ ದೃಶ್ಯ 

ತಾನು ವಾಸಮಾಡುವ ಪ್ರದೇಶ ಕೊಂಪೆಯಾಗಿದ್ದು ಕಂಡು, ಅದನ್ನು ಶುಚಿಗೊಳಿಸಲು ಮಂದಿಯನ್ನು ಒಟ್ಟುಗೂಡಿಸಿ, ಅಲ್ಲಿನ ನಾಯಕರಿಗೆ ಈ ಜಾಗವನ್ನು ಸರಿಯಾಗಿ ನೋಡಿಕೊಳ್ಳಲು ಪ್ರಯತ್ನ ಮಾಡಿ ಎಂದು ಕೇಳಿಕೊಳ್ಳುವ ದೃಶ್ಯ

ತನ್ನ ಸುತ್ತಮುತ್ತಲು ವಾಸಿಸುವ ಜನರ ಒತ್ತಾಸೆಯಂತೆ ಮೇಯರ್ ಚುನಾವಣೆಗೆ ನಿಂತು ಗೆಲ್ಲುವ ದೃಶ್ಯ.. 

ಕಡೆಯಲ್ಲಿ ತಾನು ಬಹಿಷ್ಕರಿಸಿಕೊಂಡ ಹಳ್ಳಿಯ ಜನರಿಂದಲೇ ಆನೆಯ ಮೇಲೆ ಮೆರವಣಿಗೆ ಮಾಡಿಸಿಕೊಳ್ಳುವ ದೃಶ್ಯ.. 

ಹೀಗೆ ಒಂದು ವ್ಯಾಪಾರೀ ಚಿತ್ರಕ್ಕೆ ಬೇಕಾದ ಎಲ್ಲಾ ಸರಕುಗಳನ್ನು ಅಚ್ಚುಕಟ್ಟಾಗಿ ಬಾಸುಮಣಿಯವರ ಮೂಲಕತೆಯನ್ನು ಅಚ್ಚುಕಟ್ಟಾದ ಚಿತ್ರಕಥೆಯ ಮೂಲಕ ಒಂದು ಸಹ್ಯ ಚಿತ್ರವನ್ನಾಗಿಸಿ ರಾಜಕುಮಾರ್ ಅವರನ್ನು ಮೆರೆಸಿದ ಚಿತ್ರದ ನಿರ್ದೇಶಕ ಸಿದ್ದಲಿಂಗಯ್ಯ ಅವರದ್ದು ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ ಅನಿಸೋದೇ ಇಲ್ಲ. 

ದ್ವಾರಕೀಶ್ ಚಿತ್ರ ಲಾಂಛನದಡಿ ಶ್ರೀಮತಿ ಅಂಬುಜಾ ದ್ವಾರಕೀಶ್ ನಿರ್ಮಿಸಿದ ಚಿತ್ರವಿದು. 

ಸಾಹಿತ್ಯ ಮತ್ತು ಸಂಭಾಷಣೆ ಚಿ ಉದಯಶಂಕರ್ ಮನಮುಟ್ಟುವಂತೆ ರಚಿಸಿದ್ದಾರೆ

ಇಂಪಾದ ಸರಳ ಸಂಗೀತ ರಾಜನ್ ನಾಗೇಂದ್ರ ಅವರದ್ದು, ಗಾಯನದಲ್ಲಿ ಪಿ ಬಿ ಶ್ರೀನಿವಾಸ್, ಎಲ್ ಆರ್ ಈಶ್ವರಿ, ಪಿ ಸುಶೀಲ 

ಪಿ ಎಸ್ ಪ್ರಕಾಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ 

ನಾಯಕ ಬೇಕೇ ಅದಕ್ಕೆ ರಾಜಕುಮಾರ್ ಇದ್ದಾರೆ. ಹಳ್ಳಿಯ ಹೈದನಾಗಿ ಅದೇ ಭಾಷೆ ಮಾತಾಡುತ್ತ ಮುಗ್ಧತೆಯಿಂದ ನಟಿಸಿದ್ದಾರೆ. ಪಟ್ಟಣಕ್ಕೆ ಬಂದಾಗ ಪಟ್ಟಣದ ರೀತಿ ರಿವಾಜುಗಳಿಗೆ ಬಾಗಿ ಅದಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ ಹೋಟೆಲಿನ ಊಟದಲ್ಲಿ, ದೋಸೆಯ ಪಾತ್ರೆಗೆ ಇಲಿ ಬಿದ್ದುದ್ದನ್ನು ಹೇಳುವ, ನಾಗರೀಕತೆಯ ಹಮ್ಮಿನಿಂದ ಮೆರೆಯುವ ನಾಯಕಿಗೆ ದೇಶ, ಭಾಷೆಯ ಬಗ್ಗೆ ಅಭಿಮಾನ ಬರುವ ಹಾಗೆ ಹೇಳುವ, ಅನ್ಯಾಯ ಕಂಡಾಗ ಅದನ್ನು ಮೆಟ್ಟಿ ನಿಲ್ಲಬೇಕು ಎನ್ನುವ, ತಾನು ಇರುವ ಜಾಗವನ್ನು ಸ್ವರ್ಗವನ್ನಾಗಿ ಮಾಡಬೇಕು ಎನ್ನುವ ಹಂಬಲದ, ನಾಯಕಿ ತನ್ನನ್ನು ಇಷ್ಟಪಟ್ಟಿದ್ದಾಳೆ ಎಂದು ಅರಿವಾದಾಗ ಅದನ್ನು ಒಪ್ಪಿಕೊಳ್ಳುವ, ಪುರ ಪ್ರಮುಖನಾದಾಗ ಪಟ್ಟಣದ ಕುಂದುಕೊರತೆಗಳನ್ನು ನಿವಾರಿಸಬೇಕು ಎನ್ನುತ್ತಲೇ ಖಳನಾಯಕನನ್ನು ಮೆಟ್ಟಿ ನಿಲ್ಲುವ .. ವೈವಿಧ್ಯಮಯ ಪಾತ್ರದಲ್ಲಿ ರಾಜಕುಮಾರ್ ಕಂಗೊಳಿಸುತ್ತಾರೆ 

ಹಳ್ಳಿಯ ಮುಗ್ಧತೆ ಎಷ್ಟು ಚಂದವೋ, ನಾಗರೀಕತೆಯೇ ತುಂಬಿದ ಪಾತ್ರವೂ ಕೂಡ ಅಷ್ಟೇ ಸುಂದರ. 

ಹಳ್ಳಿಯಾದರೇನು ಶಿವ 

ಅಯ್ಯಯ್ಯೋ ಹಳ್ಳಿ ಮುಖ 

ಹಾವಿಗೆ ಮುಂಗುಸಿಯುಂಟು 

 ಒಂದೇ ನಾಡು ಒಂದೇ ಕುಲವು 

ಈ ಎಲ್ಲಾ ಹಾಡುಗಳಲ್ಲಿ ಅವರ ಅಭಿನಯ ಉತ್ತಮೋತ್ತಮ. 

ಇನ್ನೊಂದು ಕ್ಯಾಬರೆ ಹಾಡು ಹಲ್ಲೋ ಹಲ್ಲೋ ...ಗಾಯಕಿ ಎಲ್ ಆರ್ ಈಶ್ವರಿ ಅದ್ಭುತ 

ನಾಯಕಿ ಎಂದರೆ ಬರಿ ಬಳುಕುವ ಬಳ್ಳಿಯಲ್ಲ.. ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಪಾತ್ರವೂ ಹೌದು ಎನ್ನುವಂತೆ ರೂಪುಗೊಂಡಿದೆ ಭಾರತಿಯವರ ಪಾತ್ರ. ಹಳ್ಳಿಯ ಹೈದನನ್ನು ಮೆಚ್ಚಿಕೊಂಡು, ಆತನ ಆಶಯಕ್ಕೆ ಆಸರೆಯಾಗಿ ನಿಲ್ಲುವ ಪಾತ್ರದಲ್ಲಿ ಭಾರತಿಯವರ ಅಭಿನಯ ಸುಂದರ 

ಹಾಸ್ಯಕ್ಕೆ ದ್ವಾರಕೀಶ್ ಇದ್ದರೂ ಅವರ ಪಾತ್ರ ಪಟ್ಟಣದ ಮಂದಿಯ ಸೋಗಲಾಡಿತನವನ್ನು ಎತ್ತಿ ತೋರಿಸುವ ಸಂದೇಶ ಕೊಡುವ ಪಾತ್ರ. 

ಒಳ್ಳೆಯವರಿದ್ದ ಮೇಲೆ ಒಳ್ಳೆಯತನವಿಲ್ಲದವರೂ ಬೇಕಲ್ಲವೇ.. ಎಂಪಿ ಶಂಕರ್, ರಾಜಾನಂದ್, ಬಾಲಕೃಷ್ಣ ಇದ್ದಾರೆ. 

ಪೋಷಕ ಪಾತ್ರಗಳಲ್ಲಿ ಎಚ್ ಆರ್ ರಾಮಚಂದ್ರಶಾಸ್ತ್ರಿ ಜಯಶ್ರೀ, ಬಿವಿ ರಾಧಾ, ಜೋಕರ್ ಶ್ಯಾಮ್, ನಾಗಪ್ಪ, ಬಿ ಎಂ ವೆಂಕಟೇಶ್ , ತೂಗುದೀಪ ಶ್ರೀನಿವಾಸ್ ಇದ್ದಾರೆ.  

ಹಳ್ಳಿಯ ಕಥೆ, ಹಳ್ಳಿಯ ಒಳಜಗಳ, ಒಗ್ಗಟ್ಟು, ಪಟ್ಟಣದ ಬಣ್ಣದ ಬದುಕು, ಸಿರಿವಂತರ ಆಡಂಬರ, ಸಿರಿವಂತರನ್ನು ಲೂಟಿ ಮಾಡುವ ಖದೀಮರು.. ಉತ್ತಮ ಕಥಾವಸ್ತು, ಹಾಡುಗಳು, ಮನಮುಟ್ಟುವ ಸಂಭಾಷಣೆ, ಅಭಿನಯ ಎಲ್ಲವೂ ಮೇಳೈಸಿ ಇದೊಂದು ಅಪರೂಪದ ಪೂರ್ಣಪ್ರಮಾಣದ ಮನೋರಂಜನೆಯ ಚಿತ್ರವಾಗಿದೆ.

















Sunday, February 8, 2026

ಎಲ್ಲರ ಮನವ ಗೆಲ್ಲುವ ಚಿಕ್ಕಮ್ಮ 1969 (ಅಣ್ಣಾವ್ರ ಚಿತ್ರ ೧೧೩/೨೦೭)

ಈ ಚಿತ್ರ ಒಂದು .... 

ತಕ್ಷಣ ತೆರೆಯ ಹಿಂದೆ ಯಾರೋ ಕೂಗಿದಂತೆ ಆಯಿತು.. 

ಶ್ರೀ ಶ್ರೀ ತಡೆಯಪ್ಪ.. ಈ ಚಿತ್ರದ ಬಗ್ಗೆ ನಿನ್ನ ಶಂಖ ಊದುವಂತೆ.. ಅದಕ್ಕಿಂತ ಮೊದಲು ನಾನು ಕೆಲವು ವಿಷಯ ಹೇಳುತ್ತೇನೆ ಅಂತ ಪರದೆಯ ಒಳಗಿಂದ ಬಿಳಿ ಪಂಚೆ ಬಿಳಿ ಶರ್ಟ್ ಧರಿಸಿದ್ದ ರಾಜಕುಮಾರ್ ಹೊರಬಂದರು.. 

ಅರೆ ರಾಜಕುಮಾರ್ ಸರ್ ನೀವು.. ನಮಸ್ಕಾರಗಳು ರಾಜಕುಮಾರ್ ಸರ್ ಅಂದೇ 

ನಮಸ್ಕಾರ ನಮಸ್ಕಾರ ಶ್ರೀ.. ನೋಡಪ್ಪ ಈ ಚಿತ್ರದ ಬಗ್ಗೆ ನೀನು ಬರೆಯೋಕೆ ಕೂತೆ ಅಂತ ಗೊತ್ತಾದ ತಕ್ಷಣ ನಾನೇ ಓಡಿ ಬಂದೆ.. ನಾ ಹೇಳ್ತೀನಿ ನೀ ಬರೀತಾ ಹೋಗು ಆಯ್ತಾ.. 

ಅರೆ ರಾಜಕುಮಾರ್ ಸರ್.. ನೀವು ಹೇಳೋದು ನಾ ಬರೆಯೋದು.. ಎಂಥಹ ಪುಣ್ಯ ನನ್ನದು.. ಚಿತ್ರ ನಿಮ್ಮದು.. ಬರಹ ನಿಮ್ಮದು.. ಆದರೆ ನೀವು ಹೇಳಿದ್ದನ್ನ ಬರೆಯೋದು ನಾನು.. ಆಹಾ ವೇದವ್ಯಾಸರು ಹೇಳಿ ಗಣಪನ ಕೈಯಲ್ಲಿ ಮಹಾಭಾರತ ಬರೆಸಿದಂತೆ ಆಯ್ತು.. ಸೂಪರ್ 

ನೋಡಪ್ಪ ಈ ಚಿತ್ರದ ಹೆಸರು ಚಿಕ್ಕಮ್ಮ.. ಅಂದರೆ ಸಾಮಾಜಿಕ ತೊಂದರೆಯಿಂದ ಮನೆಯ ಜವಾಬ್ಧಾರಿ ಹೊತ್ತ ಹೆಣ್ಣು ಮಗಳು ತನ್ನ ಸುಖ ಸಂತೋಷವನ್ನು ತ್ಯಾಗ ಮಾಡಿ ತನ್ನ ಕುಟುಂಬವನ್ನು ಎತ್ತಿ ಹಿಡಿದು ಒಂದು ನೆಲೆ ಕಾಣಿಸುತ್ತಲೇ.. ತಾನು ಹೊಕ್ಕ ಗಂಡನ ಮನೆಯನ್ನು ಕೂಡ ಬೆಳಗುವ ಉದಾತ್ತ ಕಥೆಯುಳ್ಳ ಚಿತ್ರ. 



ತಾಂತ್ರಿಕವರ್ಗ ತಾರಾಗಣ ಇದರ ಬಗ್ಗೆ ನಿನಗೆ ಗೊತ್ತೇ ಇದೆ.. ಅದನ್ನು ಬರೆದು ಬಿಡು.. 

ಸರಿ ಸರ್ 

ಇದು ಎಸ್ ಎಲ್ ವಿ ಫಿಲಂ ಕಂಬೈನ್ಸ್ ಲಾಂಛನದಲ್ಲಿ ತಯಾರಾದ ಚಿತ್ರ 

ಇದರ ನಿರ್ದೇಶಕ ಆರ್ ಸಂಪತ್ ಅವರೇ ಛಾಯಾಗ್ರಹಣದ ಮೇಲ್ವಿಚಾರಣೆ ಕೂಡ ಹೊತ್ತಿದ್ದಾರೆ. 

ಮೂಲಕತೆ ವಿ ಎಂ ಕೆ ಅವರದ್ದು 

ಸಂಭಾಷಣೆ ಕುಣಿಗಲ್ ನಾಗಭೂಷಣ್ 

ಹಾಡುಗಳು ಆರ್ ಎನ್ ಜಯಗೋಪಾಲ್ 

ಹಾಡುಗಳನ್ನು ಪಿ ಸುಶೀಲ, ಎಲ್ ಆರ್ ಈಶ್ವರಿ, ವಸಂತ, ಪಿ ಬಿ ಶ್ರೀನಿವಾಸ್, ಬಾಲಸುಬ್ರಮಣ್ಯಂ ಮತ್ತು ಪಿ ನಾಗೇಶ್ವರ ರಾವ್ ಹಾಡಿದ್ದಾರೆ 

ಛಾಯಾಗ್ರಹಣ ಕೆ ಜಯರಾಮ್ ಅವರದ್ದು 

ಸಂಗೀತ ಟಿ ವಿ ರಾಜು ಅವರದ್ದು 

ನಿರ್ಮಾಣ ಎಂ ಚಂದ್ರಕುಮಾರ್ ಮತ್ತು ಬಿ ವಿ ಆನಂದ್ 

ತಾರಾಗಣದಲ್ಲಿ ಜಯಂತಿ, ಬಾಲಕೃಷ್ಣ, ನರಸಿಂಹರಾಜು, ಎಂ ಎನ್ ಲಕ್ಷ್ಮೀದೇವಿ, ಬೆಂಗಳೂರು ನಾಗೇಶ್,ನಾಗಪ್ಪ, ಗಣಪತಿ ಭಟ್, ಶ್ರೀನಾಥ್, ಮಹದೇವಪ್ಪ, ಶಾಂತಮ್ಮ ಮತ್ತು ಇವರ ಜೊತೆಯಲ್ಲಿ ಕೆಲವು ದೃಶ್ಯಗಳಲ್ಲಿ ರಾಜಕುಮಾರ್ ಇದ್ದಾರೆ. 

ಸರಿನಾ ರಾಜಕುಮಾರ್ ಸರ್.. 

ಭಲೇ ಭಲೇ ನನ್ನ ಮನಸ್ಸನ್ನು ಸರಿಯಾಗಿ ಆರ್ಥ ಮಾಡಿಕೊಂಡಿದ್ದೀಯ.. ಹೌದು ಈ ಚಿತ್ರದಲ್ಲಿ ನಾನು ಅಭಿನಯಿಸಿದ್ದು ಕೆಲವೇ ದೃಶ್ಯಗಳಲ್ಲಿ.. ಆರಂಭದ ಕೆಲವು ದೃಶ್ಯಗಳು ಮತ್ತು ಅಂತಿಮ ದೃಶ್ಯ.. ಮಿಕ್ಕಿದ್ದು ಪೂರ್ತಿ ಬಾಲಣ್ಣ ಅವರಿಗೆ ಸೇರಿದ್ದು.. 

ಈ ಚಿತ್ರದ ನಾಯಕ ಮತ್ತು ಖಳನಾಯಕ ಬಾಲಣ್ಣ ಅವರೇ.. ನಾಯಕಿ ಜಯಂತಿ.. 

ಬಾಲಣ್ಣ ಅವರ ಅಭಿನಯ ನೋಡಿದೆಯಾ.. ಎಷ್ಟು ಲೀಲಾಜಾಲವಾಗಿದೆ. ಉದ್ದುದ್ದ ಸಂಭಾಷಣೆಗಳನ್ನು ಕತ್ತು ದೇಹವನ್ನು ಅಲುಗಾಡಿಸುತ್ತಾ.. ಎಷ್ಟು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಅಬ್ಬಬ್ಬಾ ನಾ ಅವರ ಅಭಿನಯವನ್ನು ನೋಡುತ್ತಾ ನೋಡುತ್ತಾ ನಾನೇ ಮರೆತು ಹೋಗುತ್ತಿದ್ದೆ.. ಹೌದು ಅವರ ಜೊತೆಯಲ್ಲಿ ನನಗೆ ದೃಶ್ಯಗಳಿಲ್ಲ ಆದರೆ ಅವರ ಅಭಿನಯ ನೋಡುವ ಸೌಭಾಗ್ಯ ನನಗೆ ದೇವರು ಕೊಟ್ಟಿದ್ದಾನೆ. ಅದ್ಭುತ ಕಲಾವಿದರು ನಮ್ಮ ಬಾಲಣ್ಣ. 

ಜಯಂತಿ ಆಕೆ ಅಭಿನಯ ಶಾರದೆ. ಚಿಕ್ಕಮ್ಮನ ಪಾತ್ರಕ್ಕೆ ತಕ್ಕ ನಟಿ.. ತವರು ಮನೆಯ ಸಮಸ್ಯೆಗಳನ್ನು ಹೆಗಲ ಮೇಲೆ ಹೊತ್ತುಕೊಂಡು.. ಇತ್ತ ಪತಿಯ ಮನೆಯನ್ನು ಸಂಭಾಳಿಸುವ ಪಾತ್ರ ಅಚ್ಚುಕಟ್ಟಾಗಿದೆ. 

ಶ್ರೀನಾಥ್, ಎಂ ಎನ್ ಲಕ್ಷ್ಮೀದೇವಿ, ನರಸಿಂಹರಾಜು, ಬೆಂಗಳೂರು ನಾಗೇಶ್, ನಾಗಪ್ಪ, ಮಹದೇವಪ್ಪ ಎಲ್ಲರ ಅಭಿನಯ ಸೊಗಸಾಗಿದೆ.. 

ಏನೇ ಹೇಳು ಶ್ರೀ ನಾನು ಇಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದರೂ, ಚಿತ್ರದ ಒಂದು ಚಿಕ್ಕ ಭಾಗವಾಗಿ ಮರೆಯಲ್ಲಿ ನಿಂತು ಎಲ್ಲರ ಅಭಿನಯ ನೋಡಿ ಖುಷಿ ಪಡೋದು ಇದೆಯಲ್ಲ ಅದರ ಅನುಭವ ಅದ್ಭುತ. 

ರಾಜಕುಮಾರ್ ಸರ್ ಇಂತಹ ಒಂದು ದೊಡ್ಡಗುಣವೇ ನಿಮ್ಮನ್ನು ನಟಸಾರ್ವಭೌಮನಾಗಿ ಮಾಡಿರುವುದು.. ನಿಮ್ಮ ಭೂಮಿತಾಯಿಯ ಗುಣಕ್ಕೆ ನನ್ನ ವಂದನೆಗಳು ..

ರಾಜಕುಮಾರ್  ನಸುನಕ್ಕು ಮತ್ತೆ ಸಿನಿಮಾ ಪರದೆಯ ಒಳಗೆ ಹೋದರು.