ಸತಿಶಕ್ತಿ, ಮಹಿಶಾಸುರ ಮರ್ಧಿನಿ, ದಶಾವತಾರ ಹೀಗೆ ಕೆಲವು ಚಿತ್ರಗಳಲ್ಲಿ ಅಬ್ಬರಿಸಿದ ರಾಜಕುಮಾರ್ ಮಿಕ್ಕ ಪಾತ್ರಗಳು ಬಹುತೇಕ ಸೌಮ್ಯ ಪಾತ್ರಗಳೇ ಆಗಿದ್ದವು.. ಅವರೊಂದು ಸಂದರ್ಶನದಲ್ಲಿ ಹೇಳಿದಂತೆ, ಖಳಪಾತ್ರಗಳಲ್ಲಿ ಅಂದರೆ ರಾಕ್ಷಸ ಪಾತ್ರಗಳಲ್ಲಿ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಬಹಳ ಪ್ರಸಿದ್ದರು.. ತಮಗೂ ಆ ರೀತಿಯ ಪಾತ್ರಗಳನ್ನೂ ಹೆಚ್ಚು ಮಾಡಬೇಕೆಂದು ಅಸೆ ಅಂತ.. ಆದರೆ ಕರುನಾಡಿನ ಚಿತ್ರಾಭಿಮಾನಿಗಳು ರಾಜಕುಮಾರ್ ಅವರನ್ನು ದೈವ ಸ್ವರೂಪಿಯಾಗಿ ನೋಡುತ್ತಾ ತಮ್ಮ ಮನೆಮಗನನ್ನು ನೋಡಿಕೊಂಡಂತೆ ನೋಡುತ್ತಿದ್ದರು ಹಾಗಾಗಿ ಸೌಮ್ಯ ಪಾತ್ರಗಳು, ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂಥ ಪಾತ್ರಗಳೇ ಹೆಚ್ಚಾಗಿ ಹುಡುಕಿ ಕೊಂಡು ಬಂದಿದ್ದು ಎಂದಿದ್ದರು..
ಆದರೂ ಅವರ ಒಳಗಿನ ಆಸೆಗೆ ತಕ್ಕಂತೆ ಅಲ್ಲೊಂದು ಮನಸ್ಸಿಗೆ ಹುಮ್ಮಸ್ಸು ತುಂಬುವ ಪಾತ್ರಗಳು ಸಿಗುತ್ತಿದ್ದವು.. ಆ ರೀತಿಯ ಒಂದು ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ಅದನ್ನು ಪೂರ್ಣವಾಗಿ ಉಪಯೋಗಿಸಿಕೊಂಡು ಅಬ್ಬರಿಸಿದ್ದಾರೆ.
ಆರಂಭದ ದೃಶ್ಯದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಪ್ರಸನ್ನನಾದ ಪರಮೇಶ್ವರ ಗಂಧರ್ವ ಚಿತ್ರಕಂಠನಿಗೆ ಮಾಯಾ ವಿದ್ಯೆ ಕರುಣಿಸುತ್ತಾನೆ. ಅದರ ಮುಂದಿನ ದೃಶ್ಯವೇ ತನ್ನ ಕಣ್ಣಿಗೆ ಕಾಣುವ ಸುಂದರಿಯನ್ನು ಮೋಹಿಸುವ ದೃಶ್ಯ.. ಜೊತೆಯಲ್ಲಿ ಆಕೆಯನ್ನು ಮದುವೆಯಾಗುವ ಆತನ ಪ್ರಿಯಕರನಿಗೆ ತನ್ನ ಮಾಯಾ ಶಕ್ತಿಯನ್ನು ಉಪಯೋಗಿಸುವ ದೃಶ್ಯದಲ್ಲಿ ಅದ್ಭುತ ಅಭಿನಯ..
ನಂತರ ರಾಜ ವಿಷ್ಣುವರ್ಧನನಾಗಿ ಸೌಮ್ಯವಾಗಿ ಅಭಿನಯಿಸುವ ರಾಜಕುಮಾರ್ ಮುಂದಿನ ದೃಶ್ಯದಲ್ಲಿ ತನ್ನ ರಾಜ್ಯದ ಪ್ರಜೆ ಪರನಾರಿಯ ಮೋಹಕ್ಕೆ ಬಿದ್ದು ತನ್ನ ಪತ್ನಿಗೆ ಮೋಸ ಮಾಡಿದ್ದಾನೆ ಎಂದು ಗೊತ್ತಾದ ಮೇಲೆ ಆ ಪ್ರಜೆಗೆ ಆತನ ಮಡದಿಯಿಂದ ಚಾವಟಿ ಏಟು ಕೊಡುವಂತೆ ಆಜ್ಞಾಪಿಸುವ ದೃಶ್ಯದಲ್ಲಿ ಅವರ ಅಭಿನಯ ಸೊಗಸು.
ನಂತರ ತನ್ನ ಸಾಮಂತ ರಾಜ್ಯಕ್ಕೆ ಹೋಗಿ ಅಲ್ಲಿ ವಾಸವಿಯನ್ನು ಕಂಡು ಆತನ ಮೋಹ ಕೆರಳುತ್ತದೆ.. ಅಲ್ಲಿಂದ ಅವರ ಅಭಿನಯ ಆಹಾ.. ರಾಜಕುಮಾರ್ ಅವರ ಅಭಿನಯದ ಹಂತಗಳು ಅರಿವಾಗುತ್ತಾ ಹೋಗುತ್ತದೆ.. ಅದೇ ಅಭಿನಯದ ಗಟ್ಟಿತನ ಅಂತಿಮ ದೃಶ್ಯದ ತನಕ ಅವರ ಅಬ್ಬರದ ಅಭಿನಯ ಖುಷಿಕೊಡುತ್ತದೆ.
ಪೌರಾಣಿಕ ಕಥೆ ಎನ್ನಿ, ದೇವತಾ ಕಥೆ ಎನ್ನಿ, ಯಾವುದೇ ಆದರೂ ಕಥೆಯನ್ನು ಗಟ್ಟಿಯಾಗಿ ಹೆಣೆದು, ಚಿತ್ರಕಥೆ, ಸಂಭಾಷಣೆ,ಹಾಡುಗಳು, ನಿರ್ಮಾಣ, ನಿರ್ದೇಶನ ಎಲ್ಲವನ್ನೂ ಅದ್ಭುತವಾಗಿ ನಿಭಾಯಿಸಿರುವ ಶ್ರೇಯಸ್ಸು ಹುಣಸೂರು ಕೃಷ್ಣಮೂರ್ತಿಯವರಿಗೆ ಸಲ್ಲಬೇಕು..
ಎವರ್ ಗ್ರೀನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ಚಿತ್ರವನ್ನು ಅದ್ಭುತವಾಗಿ ತೆರೆಕಾಣಿಸಲು ರಾಜಾರಾಂ ಛಾಯಾಗ್ರಹಣ, ರಾಜನ್ ನಾಗೇಂದ್ರ ಸಂಗೀತ ಸಾತ್ ಕೊಟ್ಟಿದೆ.
ನಾಗೇಂದ್ರ ರಾವ್ - ಜಯಶ್ರೀ ದಂಪತಿಗಳಾಗಿ ತೆರೆಯ ಮೇಲೆ ಸೊಗಸಾಗಿ ಅಭಿನಯ ನೀಡಿದ್ದಾರೆ.
ಅವರ ಮಕ್ಕಳಾಗಿ ಕಲ್ಪನಾ ಮತ್ತು ಬಿ. ಎಂ ವೆಂಕಟೇಶ್ ಚಿತ್ರಕಥೆಗೆ ಬೇಕಾದಂತೆ ನಟಿಸಿದ್ದಾರೆ. ಕಲ್ಪನಾ ತಾನೆಂತ ಅದ್ಭುತ ನಟಿ ಎಂದು ಚಿತ್ರದ ಅಂತಿಮ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.
ರಾಮಚಂದ್ರ ಶಾಸ್ತ್ರೀ ರಾಜ್ಯದ ಗುರುಗಳಾಗಿ ಸಮಚಿತ್ತ ಅಭಿನಯ ನೀಡಿದ್ದಾರೆ. ಚಿತ್ರದ ಅಂತಿಮ ಹಂತದಲ್ಲಿ ಅವರಾಡುವ ಗಟ್ಟಿತನದ ಮಾತುಗಳು ಚಿತ್ರದ ವಿಶೇಷ.
ಬಹಳ ಚಿತ್ರಗಳ ನಂತರ ಪಂಡರೀಬಾಯಿಯವರು ರಾಜಕುಮಾರ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ,
ಚಿತ್ರದಲ್ಲಿ ಸೇನಾಧಿಪತಿಯಾಗಿ ಎಂ ಪಿ ಶಂಕರ್ ಸೌಮ್ಯವಾಗಿ ನಟಿಸಿದ್ದಾರೆ. ಹಿಂದಿನ ಹಲವಾರು ಚಿತ್ರಗಳಲ್ಲಿ ಖಳನಾಗಿ ಅಬ್ಬರಿಸಿದ್ದ ಶಂಕರ್ ಈ ಚಿತ್ರದಲ್ಲಿ ಸಹ್ಯವಾಗಿ ನಟಿಸಿರುವುದು ವಿಶೇಷ.
ಹಾಸ್ಯದ ದೃಶ್ಯಗಳಲ್ಲಿ ನರಸಿಂಹರಾಜು, ದ್ವಾರಕೀಶ್, ರಮಾ, ರಮಾದೇವಿ ಕೆಲವು ದೃಶ್ಯಗಳಲ್ಲಿ ಹಾಸ್ಯ ಉಕ್ಕಿಸುವ ನಟನೆ ಮಾಡಿದ್ದಾರೆ.
ಚಿತ್ರದ ಆರಂಭದ ಹೆಸರು ತೋರಿಸುವ ದೃಶ್ಯದಲ್ಲಿ ರಾಷ್ಟ್ರಧ್ಯಕ್ಷರು ಡಾ. ರಾಧಾಕೃಷ್ಣನ್ ಹೆಸರು ಅವರಿಗೆ ಗೌರವದ ಸಂಕೇತವಾಗಿ ತೋರಿಸಿದ್ದಾರೆ.
ಈ ಚಿತ್ರದಲ್ಲಿ ಅನೇಕ ಹಾಡುಗಳಿವೆ ಅದರಲ್ಲಿ "ಕುಂತಲ್ಲಿ ಅವಳು ನಿಂತಲ್ಲಿ ಅವಳು" ಪಿಬಿಶ್ರೀನಿವಾಸ್ ಅವರ ಕಂಠ ಸಿರಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ.
ಹುಣಸೂರು ಕೃಷ್ಣಮೂರ್ತಿ ಅವರ ಗಟ್ಟಿತನ, ಪೌರಾಣಿಕ ಚಿತ್ರಗಳನ್ನು ತೆರೆಗೆ ತರುವಲ್ಲಿ ಅವರ ಜಾಣ್ಮೆ, ಶಕ್ತಿ ಎಲ್ಲವೂ ಈ ಚಿತ್ರದಲ್ಲಿ ಮೂಡಿಬಂದಿದೆ