Sunday, April 24, 2022
ಗಾನ ಗಂಧರ್ವ ಗಂಧರ್ವ ಸಂಗೀತ ನಿರ್ದೇಶಕರ ಬಗ್ಗೆ ಮಾತುಗಳು ... ಅಣ್ಣಾವ್ರ ಜನುಮದಿನ (2022)
Friday, April 15, 2022
ಕನ್ನಡ ಗುಡ್ ಫಿಲ್ಮ್ - ಕೆ.ಜಿ.ಎಫ್ II (2022)
ಪಡುವಾರಹಳ್ಳಿ ಪಾಂಡವರು ಕನ್ನಡ ಒಂದು ಉತ್ತಮ ರೆಬೆಲ್ ಚಿತ್ರ.. ಅವ್ಯವಸ್ಥೆಯ ವಿರುದ್ಧವಾಗಿ ಹೋರಾಡುವ ಚಿತ್ರಕತೆ ಹೊಂದಿತ್ತು.. ಅದರಲ್ಲಿ ಐದು ಮಂದಿ ಸಂತ್ರಸ್ತರು ಸಾಹುಕಾರನ ದಬ್ಬಾಳಿಕೆಯಿಂದ ಬೇಸತ್ತು ನಿಂತಿದ್ದಾಗ, ಐದು ಮಂದಿಯಲ್ಲಿ ಒಬ್ಬರಾದ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಪಾತ್ರ ಕರಿಯನನ್ನು ಹಳ್ಳಿಯಿಂದ ಬಹಿಷ್ಕಾರ ಹಾಕಿದ್ದಾರೆ ಅಂತ ತಮಟೆ ಬಾರಿಸಿಕೊಂಡು ಕುಲ್ವಾಡಿಯುವ ಬರುತ್ತಾನೆ.. ಅದನ್ನು ಕಿತ್ತುಕೊಂಡು ರಾಮಕೃಷ್ಣ ಪಾತ್ರದಾರಿ ರಾಮಣ್ಣ, ಐದು ಜನರನ್ನು ಒಂದೂಗೂಡಿಸಿಕೊಂಡು ಸಾಹುಕಾರನ ಮುಂದೆ ತಮಟೆ ಬಾರಿಸುತ್ತಾ ಬಹಿಷ್ಕಾರವನ್ನು ಪ್ರತಿಭಟಿಸುತ್ತಾರೆ..
ಆಗ ಸಾಹುಕಾರನ ಪರಮಾಪ್ತ ಸ್ನೇಹಿತ ಕಾಳಪ್ಪ ಅರ್ಥಾತ್ ಕನಕ್ಸನ್ ಕಾಳಪ್ಪ - ಮುಸುರಿ ಕೃಷ್ಣಮೂರ್ತಿಯವರು "ನಮ್ಮ ಸಾಹುಕಾರರು ಅಂದರೆ ಯಾರು, ಅವರ ಹಿಂದೆ ಯಾರ್ಯಾರು ಇದ್ದಾರೆ, ಎಂತೆಂತವರು ಅವ್ರೆ, ಎಲ್ಲೆಲ್ಲಿ ಅವ್ರೆ, ಹೆಂಗೆಂಗೆ ಅವ್ರೆ, ಅಂತ ವಿಸ್ಯ ನಿಮಗೇನು ಗೊತ್ತಿದೇಯೇನ್ರೋಲೇ ... ತಡಕಾಲಂಟಿ ತಮಟೆ ತಕ್ಕೊಂಡು ಟ ಟ ಟ ಟ ಅಂತ ಬಂದ್ಬಿಟ್ರು.. ನಮ್ ತಾವ ಬಾರಿ ದೊಡ್ಡ ನಗಾರಿ ಐತಲೇ.. ಒಂದು ಸಾರಿ ಬಾರಿಸಿದರೆ ಚಂಡಮಾರುತ ಬೀಸಿದಂಗೆ.. ಅದರಲ್ಲಿ ನಿಮ್ಮಂತ ತರಗೆಲೆಗಳು ತೂರಿ ಹೋಗ್ತಾವೆ.. "
ಹೌದು ಈ ಚಿತ್ರದ ಸಂಭಾಷಣೆಯಂತೆ.. ಕನ್ನಡ ಚಿತ್ರಗಳು ವಿಜೃಂಬಿಸಿದ ಕಾಲವೊಂದಿತ್ತು.. ನಂತರ ಅನೇಕ ದೊಡ್ಡ ಹೆಸರಾಂತ ನಿರ್ದೇಶಕರು, ಕಲಾವಿದರು, ಸಂಗೀತ, ಸಾಹಿತ್ಯ, ಸಹಕಲಾವಿದರ ತಂಡದ ಸದಸ್ಯರು ಒಬ್ಬೊಬ್ಬರಾಗಿ ಜಗದಿಂದ ಜಾಗ ಖಾಲಿ ಮಾಡಿದರು, ಇಲ್ಲವೇ ನೇಪಥ್ಯಕ್ಕೆ ಸರಿದಿದ್ದರು.. ಕನ್ನಡ ಚಿತ್ರಗಳು ಕೂಡ ಆಹಾ ಒಹೋ ಅನ್ನುವಂತಹ ಚಿತ್ರಗಳ ಸಂಖ್ಯೆ ಕಡಿಮೆಯಾಗಿದ್ದು ಸುಳ್ಳಲ್ಲ.. ಆದರೆ ಮತ್ತೆ ನಗಾರಿ ಬಾರಿಸೋಕೆ ಶುರುವಾದವು.. ಹೊಸ ತಲೆಮಾರಿನ ತಂತ್ರಜ್ಞರು, ಕಲಾವಿದರು, ನಿರ್ದೇಶಕರು ಚಿತ್ರರಂಗಕ್ಕೆ ಬಂದು ತಮ್ಮದೇ ವಿಭಿನ್ನ ದೃಷ್ಟಿಕೋನದಿಂದ ಚಿತ್ರಿಸಿದ ಸಿನೆಮಾಗಳು ವಿಭಿನ್ನವಾಗಿ ಕಾಣತೊಡಗಿದವು..
ಈ ದೃಷ್ಟಿಯಿಂದ ಬಂದ ಒಂದು ಚಿತ್ರ ಕೆ ಜಿ ಎಫ್ ೨೦೧೮ ರಲ್ಲಿ ತೆರೆಗೆ ಅಪ್ಪಳಿಸಿ ಅಪಾರ ಸದ್ದು ಮಾಡಿತು.. ಅದರ ಬಗ್ಗೆ ನನಗೆ ತಿಳಿದದ್ದು ಬರೆದಿದ್ದೆ.. KGF Chapter 1 ಈಗ ನಾಲ್ಕು ವರ್ಷಗಳ ಪರಿಶ್ರಮದ ನಂತರ ಎರಡನೇ ಅಧ್ಯಾಯ ಚಂಡಮಾರುತವಾಗಿ ಅಪ್ಪಳಿಸಿದೆ...
ಕೋಟ್ಯಂತರ ವೀಕ್ಷಕರು ಈ ಚಿತ್ರಕ್ಕೆ ಕಾಯುತ್ತಿದ್ದದ್ದು ಎಲ್ಲರಿಗೂ ಗೊತ್ತಿದೆ.. ಸಿನಿಮಾ ತಂಡವೂ ಕೂಡ ಪ್ರಚಾರಕ್ಕೆ, ಕುತೂಹಲದ ಮಟ್ಟ ಏರುವಂತೆ ಅನೇಕಾನೇಕ ಪ್ರೋಮೋಗಳು, ಸ್ಟಿಲ್ಲುಗಳು, ಅದರ ಬಗ್ಗೆ ಫೇಸ್ಬುಕ್, ವಾಟ್ಸಪ್ಪ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹೀಗೆ ಸಿಗಬಹುದಾದ ಎಲ್ಲಾ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತಾಪಮಾನವನ್ನು ಏರಿಸಿದ್ದರು.. ಬಿಡುಗಡೆ ದಿನ ನಿಗದಿಯಾದಂತೆ, ಚಿತ್ರಮಂದಿರಗಳ ಸೀಟುಗಳು ಭರ್ತಿಯಾಗತೊಡಗಿತ್ತು...
ಅಪ್ಪ ಕೆ ಜಿ ಎಫ್ ಹೋಗೋಣ್ವಾ.. ಮಗಳು ಕೇಳಿದಾಗ.. ಮೊದಲ ವಾರ ಬೇಡಾ.. ಸಿಕ್ಕಾಪಟ್ಟೆ ಹೆಚ್ಚಿರುತ್ತದೆ ಟಿಕೆಟ್ ದುಡ್ಡು.. ಒಂದು ವಾರ ಕಳೆಯಲಿ ನಂತರ ಹೋಗೋಣ ಅಂದಿದ್ದೆ.. ಆದ್ರೆ ಅವಳ ಬಾಡಿದ ಮೊಗ ನೋಡಿದಾಗ.. ಜೀವನದಲ್ಲಿ ರಗಳೆ ಇದ್ದದ್ದೇ, ಚಿಕ್ಕ ಪುಟ್ಟ ಆಸೆಗಳನ್ನು ಈಡೇರಿಸಿಕೊಂಡು ಬದುಕೋದೇ ಜೀವನ ಅನ್ನಿಸಿ, ಒಂದಷ್ಟು ಜಾಲಾಡಿದ ಮೇಲೆ, ಆದಷ್ಟು ಕಡಿಮೆ ದರ ಇರುವ ಟಾಕೀಸು ಆರಿಸಿಕೊಂಡು ಚಿತ್ರ ನೋಡಲು ಹೋದೆವು..
ಇತ್ತೀಚಿಗೆ ನಮ್ಮನ್ನೆಲ್ಲ ಬಿಟ್ಟು ಹೋದ ಪುನೀತ್ ರಾಜ್ ಕುಮಾರ್ ಅವರ ಹೆಸರು, ಅವರ ಕೆಲವು ಚಿತ್ರಗಳು ತೆರೆಯ ಮೇಲೆ ಮೂಡಿ ಬಂದಾಗ ಶಿಳ್ಳೆಗಳು ಕೂಗಾಟ ಜೈಕಾರ... ಕಿವಿಗಡಚಿಕ್ಕುವಂತೆ ಸದ್ದು.. ನಂತರ ಶುರುವಾದದ್ದೇ ಚಂಡಮಾರುತದ ಆಗಮನ..
ಮುಂದಿನ ಎರಡೂವರೆ ಘಂಟೆಗಳು ನೆಡೆದದ್ದು ಇತಿಹಾಸ.. ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ಅನ್ನುವ ಪದಗಳು ಕೆಲವು ಪುಟ್ಟಣ್ಣ ಕಣಗಾಲ್ ಚಿತ್ರದಲ್ಲಿ, ನಂತರ ರವಿಮಾಮನ ಚಿತ್ರಗಳಲ್ಲಿ.. ಕೋಟಿ ರಾಮು ಚಿತ್ರಗಳಲ್ಲಿ ಹರಿದಾಡಿದ್ದುಕೇಳಿದ್ದೆ ..ನೋಡಿದ್ದೇ.. ಆದರೆ ಇಲ್ಲಿ ಅಕ್ಷರಶಃ ಪ್ರತಿ ಫ್ರೇಮಿನಲ್ಲೂ ಅದ್ದೂರಿತನ ಎದ್ದು ಕಾಣುತ್ತಿತ್ತು..
ಯಶ್ ನಾಯಕನಾಗಿ ಈ ಚಿತ್ರವನ್ನು ಆವರಿಸಿಕೊಂಡಿರುವ ರೀತಿ ಇಷ್ಟವಾಗುತ್ತದೆ.. ಅನೇಕಾನೇಕ ಬಿಲ್ಡ್ ಅಪ್ ದೃಶ್ಯಗಳು ಇವೆ.. ಆದರೆ ಅವೆಲ್ಲವೂ ಈ ಚಿತ್ರಕ್ಕೆ, ಕತೆಗೆ ಬೇಕಾದಂತೆಯೇ ಇದೆ.. ಆ ಕಾಲದ ದಿರುಸುಗಳಲ್ಲಿ ಅವರನ್ನು ನೋಡೋದು ಇಷ್ಟವಾಗುತ್ತದೆ.. ಕೇಶವಿನ್ಯಾಸ, ಆ ಗಡ್ಡ, ಇರಿಯುವಂತಹ ನೋಟ.. ಚಿಕ್ಕ ಚೊಕ್ಕ ಇಂಗ್ಲಿಷ್ ಪದಗಳು, ತನ್ನ ತಾಯಿಯ ಆಸೆಯನ್ನು ಈಡೇರಿಸಬೇಕು ಎನ್ನುವಾಗ ಅವರ ಅಭಿನಯ.. ಜಗತ್ತಿಗೆ ಎದುರಾಗಿ ನಿಲ್ಲುತ್ತೇನೆ ಎನ್ನುವಾಗ ಕಣ್ಣಿನ ಹೊಳಪು.. ಎಲ್ಲವೂ ಸೊಗಸಾಗಿದೆ..
ಅಕ್ಷರಶಃ ರಾಕಿ ಪಾತ್ರದಲ್ಲಿ ಬೇರೆ ಯಾವ ಕಲಾವಿದರನ್ನೂ ಕಲ್ಪಿಸಿಕೊಳ್ಳಲು ಆಗದಷ್ಟು ಪರಕಾಯ ಪ್ರವೇಶ ಮಾಡಿದ್ದಾರೆ.. ಪಾಂಡವರಹಳ್ಳಿ ಪಾಂಡವರು ಚಿತ್ರದಲ್ಲಿ ಹೇಳಿದಂತೆ ಸಾಹುಕಾರರು ಅಂದರೆ ಪಡುವಾರಹಳ್ಳಿ, ಪಡುವಾರಹಳ್ಳಿ ಅಂದ್ರೆ ಸಾಹುಕಾರರು.. ಅನ್ನುವ ಹಾಗೆ ರಾಕಿ ಅಂದ್ರೆ ಯಶ್.. ಯಶ್ ಅಂದ್ರೆ ರಾಕಿ ಆಗಿ ಬಿಟ್ಟಿದ್ದಾರೆ..
ಪ್ರತಿ ಫ್ರೇಮಿನಲ್ಲೂ ಅವರ ಅಬ್ಬರ.. ಅಭಿನಯ.. ಆ ಬಣ್ಣಗಳ ಸಮುದ್ರದಲ್ಲಿ ಅವರು ಮೂಡಿರುವುದು ಅದ್ಭುತ ಎನಿಸುತ್ತದೆ..
ತನ್ನ ಪ್ರೇಮಿಯನ್ನು ರಮಿಸುವ ಶೈಲಿ ಕೂಡ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.. ಅದನ್ನು ತೆರೆಯ ಮೇಲೆ ತೋರಿಸಿರುವ ರೀತಿ ಕೂಡ ಯಶ್ ಗೆ ಮಾತ್ರ ಸಾಧ್ಯವೇನೋ ಅನಿಸುವಂತಿದೆ.. ಮತ್ತೆ ಇದು ಹೀಗೆ ಇರಬೇಕು ರಾಕಿಯ ಹಾವಭಾವಕ್ಕೆ ಎನ್ನುವಂತಿದೆ.
ಈ ಸಿನೆಮಾಗಾಗಿಯೇ ಐದಾರು ವರ್ಷಗಳಿಂದ ಗಡ್ಡ ಮೀಸೆ ತಲೆಗೂದಲನ್ನು ಹುಲುಸಾಗಿ ಬೆಳೆಸಿಕೊಂಡು, ಆ ಪಾತ್ರವೇ ತಾವಾಗಿರುವುದು ಕಲಾವಿದನ ಶ್ರದ್ಧೆಯನ್ನು ತೋರಿಸುತ್ತದೆ... ನಿಜ ಅದಕ್ಕೆ ಬೇಕಾದ ಸಂಭಾವನೆ ಪಡೆದಿರುತ್ತಾರೆ.. ಆದರೆ ಆ ಮಟ್ಟದ ಶ್ರದ್ಧೆ, ತಾಳ್ಮೆ ಅವರನ್ನು ಈ ವೃತ್ತಿಯಲ್ಲಿ ಮೇಲೇರಿಸುತ್ತಿದೆ ಎಂದರೆ ತಪ್ಪಿಲ್ಲ..
ನಾಯಕಿ ಶ್ರೀನಿಧಿ ಶೆಟ್ಟಿ ಮೊದಲ ಭಾಗದಲ್ಲಿ ಸ್ಕ್ರೀನ್ ಸಮಯ ಅಷ್ಟೊಂದು ಇರಲಿಲ್ಲ.. ಆದರೆ ಈ ಭಾಗದಲ್ಲಿ ಹಲವಾರು ದೃಶ್ಯಗಳಿವೆ.. ಮತ್ತೆ ಅಷ್ಟೇ ಮುದ್ದಾಗಿ ಕಾಣುತ್ತಾರೆ.. ಅಭಿನಯಕ್ಕೆ ಅಷ್ಟೊಂದು ಅವಕಾಶವಿಲ್ಲದಿದ್ದರೂ, ಸಿಕ್ಕ ಅವಕಾಶದಲ್ಲಿ ಆಹಾ ಮತ್ತೊಮ್ಮೆ ನೋಡಬೇಕು ಅನಿಸುತ್ತದೆ. ಮುದ್ದು ಮುದ್ದಾಗಿ ಕಾಣುವ ಅವರ ಮೊಗವನ್ನು ನೋಡುವುದೇ ಕುಶಿ.. ನಾಯಕನ್ನು ದ್ವೇಷಿಸುವಾಗಲಿ, ಅಥವ ಪ್ರೀತಿ ವ್ಯಕ್ತಪಡಿಸುವಾಗಲಿ ಅವರ ಅಭಿನಯ ನೋಡಲು ಚೆನ್ನಾ.. ಆ ಮುಗ್ಧ ಕಣ್ಣುಗಳಲ್ಲಿನ ಅವರ ಸೌಂದರ್ಯವನ್ನು ತೆರೆಯ ಮೇಲೆ ನೋಡಲು ಖುಷಿಯಾಗುತ್ತದೆ..
ನನ್ನ ನೆಚ್ಚಿನ ರವೀನಾ ಟಂಡನ್.. ಅರೆ ಇದೆ ಪಾತ್ರವನ್ನು ಅವರ ಯೌವ್ವನ ಕಾಲದಲ್ಲಿ ಮಾಡಿದಿದ್ದರೆ ಎಷ್ಟು ಚೆನ್ನಾ ಅನಿಸಿತ್ತು.. ಸಿಕ್ಕ ಅವಕಾಶವನ್ನು ಸೊಗಸಾಗಿ ಉಪಯೋಗಿಸಿಕೊಂಡಿದ್ದಾರೆ.. ಆ ದೃಶ್ಯಗಳಿಗೆ ಬೇಕಾಗುವ ಮುಖಾಭಿನಯ ನೋಡಲು ಚೆನ್ನಾ.. ಅವರ ವೇಷಭೂಷಣಗಳು ಮುದ್ದಾಗಿ ಕಾಣಲು ಸಹಕಾರಿಯಾಗಿದೆ ..
ಸಂಜಯ್ ದತ್ ಅವರ ಅಭಿನಯದ ಅಬ್ಬರತೆಯನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು..
ಮಾಳವಿಕಾ ಮೊದಲ ಭಾಗದ ಮುಗ್ಧತೆ, ಸೌಂದರ್ಯ, ಭಾಷಾ ಶುದ್ದತೆ ಎಲ್ಲವನ್ನೂ ಉಳಿಸಿಕೊಂಡಿದ್ದಾರೆ.. ಇಡೀ ಚಿತ್ರದ ನಿರೂಪಣೆಯನ್ನು... ತಿರುವುಗಳ ಬಗ್ಗೆ ಇರುವ ಸುಳಿವನ್ನು, ಅಗತ್ಯವಾದಾಗ ಚಿತ್ರಕ್ಕೆ ನೀಡಬಹುದಾದ ವೇಗವನ್ನು ಕೊಡುವ ಪಾತ್ರದಲ್ಲಿ ಲೀಲಾಜಾಲವಾದ ಅಭಿನಯ ಅವರದ್ದು.. ಭಾಷೆಯನ್ನ ಎಷ್ಟು ಸೊಗಸಾಗಿ ಉಚ್ಚರಿಸುತ್ತಾರೆ.. ಹಾಗೆ ಆ ಜೇನು ಧ್ವನಿ.. ಬಹಳ ಇಷ್ಟವಾಗುತ್ತದೆ..
ನಾಗಾಭರಣ ಯತೋಚಿತವಾಗಿ ಅಭಿನಯಿಸಿದ್ದಾರೆ.. ಪ್ರಕಾಶ್ ರೈ ಚಿತ್ರಕ್ಕೆ ಬೇಕಾದ ನಿಟ್ಟಿನಲ್ಲಿ ಅಭಿನಯಿಸಿದ್ದಾರೆ... ಟೀ ಕಾಫೀ ಕೊಡುವ ಪಾತ್ರದಾರಿ ಅರಿವಿಲ್ಲದೆ ಇಷ್ಟವಾಗುತ್ತಾರೆ. .. ತಿರುವು ಕೊಡುವ ಪಾತ್ರದಲ್ಲಿ ಅಚ್ಯುತ್ ಕುಮಾರ್ ಬೊಂಬಾಟ್.. ಅವರ ಸಹಚರರು.. ಅವರ ವೇಷಭೂಷಣ ಎಲ್ಲವೂ ೧೦೦ ಕ್ಕೆ ೧೦೦ ಅಂಕಗಳು..
ಉಳಿದ ಸಹಕಲಾವಿದರು ಚಿತ್ರಕ್ಕೆ, ತಮ್ಮ ಪಾತ್ರಕ್ಕೆ ತಕ್ಕಂತೆ ಅಭಿನಯ ನೀಡಿದ್ದಾರೆ..
ಇಲ್ಲಿ ಎದ್ದು ಕಾಣುವುದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕ್ರಮಬದ್ಧವಾದ ಪರಿಶ್ರಮ.. ತರ್ಕಬದ್ಧವಾದ ಕತೆ, ಅದರ ನಿರೂಪಣೆ.. ಎಲ್ಲಾ ಪರಿಕರಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಿರುವ ರೀತಿ.. ರವಿಯವರ ತಾಪಮಾನ ಇರುವಂತಹ ಹಿನ್ನೆಲೆ ಸಂಗೀತ, ಭುವನ್ ಅವರ ಅದ್ಭುತ ಛಾಯಾಗ್ರಹಣ... ಕ್ಯಾಮೆರಾ ಎಲ್ಲೆಲ್ಲಿ ಇಟ್ಟಿದರಪ್ಪ ಅಂತ ಹುಡುಕುವ ಹಾಗೆ ಕ್ಯಾಮೆರಾ ಕೈ ಚಳಕ... ಬೆಳಕನ್ನು ಅದ್ಭುತವಾಗಿ ಉಪಯೋಗಿಸಿರುವ ರೀತಿ.. ನಮ್ಮ ಕನ್ನಡ ಚಿತ್ರರಂಗ ಯಾವುದಕ್ಕೂ ಕಮ್ಮಿ ಇಲ್ಲ ಅಂತ ಜಗತ್ತಿಗೆ ತೋರಿಸಿದ ಚಿತ್ರತಂಡದ ಪರಿಶ್ರಮವಿದು..
ಪಕ್ಷಿನೋಟ ಕೊಡುವ ದೃಶ್ಯಗಳು.. ಅದರ ವರ್ಣ ವಿನ್ಯಾಸ, ಆ ಸೈನೈಡ್ ಗುಡ್ಡವನ್ನು ಉಪಯೋಗಿಸಿಕೊಂಡಿರುವ ರೀತಿ.. ಪಂಜಿನ ಬೆಳಕಲ್ಲಿ ಚಿತ್ರೀಕರಿಸುವ ಹಲವಾರು ದೃಶ್ಯಗಳು ಕಣ್ಣಿಗೆ ಹಬ್ಬ ಮಾಡುತ್ತವೆ..
ಹೋಳಿ ಸಂಭ್ರಮ.. ದೀಪಾವಳಿಯ ಬೆಳಕು ಎರಡೂ ಒಮ್ಮೆಲೇ ನೋಡಬೇಕೆ.. ಇಲ್ಲಿದೆ ಹೋಗಿ ನೋಡಿ ಬನ್ನಿ.. ಬೆಳ್ಳಿ ಪರದೆಯ ಮೇಲೆ ನೋಡುವ ಅನುಭವ ಮನೆಯಲ್ಲಿ ಟಿವಿಯಲ್ಲಿ ಇಲ್ಲವೇ ಮೊಬೈಲಿನಲ್ಲಿ ಕಾಣಸಿಗುವುದಿಲ್ಲ..
(ಇಲ್ಲಿ ಹಾಕಿರುವ ಎಲ್ಲಾ ಚಿತ್ರಗಳು ಗೂಗಲೇಶ್ವರ ದಯಪಾಲಿಸಿದ್ದು)
ಹಿಂದಿಯ ಚಿತ್ರಗಳ ನಟಿ ಈ ಚಿತ್ರವನ್ನು ಯಶಸ್ವೀ ಮಾಡಲು ಹೊರಟಿದ್ದಾರೆ ನಾವು ಹೊರಡೋಣ ಅಲ್ವೇ!!! |
Tuesday, April 12, 2022
ಅಣ್ಣಾವ್ರು .. ಹಾಡುಗಳ ಜುಗಲ್ ಬಂದಿ ... ಪುಣ್ಯ ದಿನ - 2022
ಯಾರು ಮುಂದೇನು ಎಂದು ಹೇಳುವರು ಯಾರು..
ಬರುವುದು ಬರಲೆಂದು
ನಸುನಗುತ್ತಾ ಬಾಳದೆ
ನಿರಾಸೆ ವಿಷಾದ ಇದೇಕೆ ಇದೇಕೆ" (ಹೊಸಬೆಳಕು.. ಕಣ್ಣೆರ ಧಾರೆ ಇದೇಕೆ)