Sunday, May 16, 2021

ಮೆಲ್ಲನೆ ಮದುವೆಯಲ್ಲಿ ತನ್ನ ಗುರಿ ಸಾಧಿಸುವ ಮಲ್ಲಿ ಮದುವೆ (1963) (ಅಣ್ಣಾವ್ರ ಚಿತ್ರ ೪೦ / ೨೦೭)

"ಛಲಗಾರ ಎಂದರೆ ನೀನೆ ಸರಿ.. ಎಲ್ಲೆಲ್ಲೂ ಗಲಬರಿಸಿದರೂ ಕಾಣದ.. " 

"ಅಣ್ಣಾವ್ರೇ ಅಣ್ಣಾವ್ರೇ ನೀವು ಏಕದಂ ಮೂವತ್ತು ವರ್ಷ ದಾಟಿ ಬಿಟ್ಟಿದ್ದೀರಾ.. ದಯಮಾಡಿ ಹಿಂದೆ ಬನ್ನಿ"

"ಓಹ್ ಓಹ್ ಓಹ್.. ನಿನ್ನ ಶ್ರಮವನ್ನು ಕಂಡು.. ನಾ ಹಾಗೆ ಮುಂದೆ ಹೋಗಿಬಿಟ್ಟಿದ್ದೆ ಶ್ರೀ.. ಓಕೆ ಓಕೆ.. ಶುರು ಮಾಡು"

****

ಹೌದು.. 

ಯು ಟ್ಯೂಬ್ ಇಲ್ಲ

ಕನ್ನಡ ಮೂವೀಸ್ ಇಲ್ಲ 

ಟೋಟಲ್ ಕನ್ನಡ ಇಲ್ಲ 

ಸಪ್ನ ಬುಕ್ ಸ್ಟಾಲ್ ಇಲ್ಲ 

ರಾಗ.ಕಾಮ್ ಇಲ್ಲ 

ಹೀಗೆ ಹುಡುಕದ ಜಾಗವಿಲ್ಲ.. ಹುಡುಕದ ಹಾಡಿಗಳಿಲ್ಲ.. ಹಾಗೂ ಹೀಗೂ.. ಟೋಟಲ್ ಕನ್ನಡದಲ್ಲಿ ಒಮ್ಮೆ ಸಿಕ್ಕಿ.. ಹಣವನ್ನು ಸಂದಾಯ ಮಾಡಿ ಹದಿನೈದು ದಿನಗಳು ಕಳೆದ ಮೇಲೆ ಕರೆ ಬಂತು " ಸರ್.. ಆ ಚಿತ್ರವಿಲ್ಲ.. ಆದರೆ ನೀವು ಸಂದಾಯ ಮಾಡಿದ ಹಣಕ್ಕೆ ಬದಲಾಗಿ ಬೇರೆ ಚಿತ್ರದ ಸಿಡಿ ಕಳಿಸುತ್ತೇವೆ.. " ಎಂದು ಹೇಳಿ ರಾಜ್ ಕುಮಾರ್ ಅವರ ಇನ್ನೊಂದೆರಡು ಚಿತ್ರವಿರುವ ಡಿವಿಡಿ ಬಂತು.. 

ಮಧ್ಯೆ ಜೀವನದ ಪದರಗಳಲ್ಲಿ ಏರು ಪೇರಾಯಿತು  ಆದರೂ ಬಿಡದೆ ಹುಡುಕುತ್ತಲೇ ಇದ್ದೆ.. ಅಂತೂ ಮತ್ತೆ ಸಿಕ್ಕಿತು.. ಆದರೆ ಈ ಬಾರಿ ಸಿಡಿ ಪ್ಲೇಯರ್ ಆಟವಾಡತೊಡಗಿತು.. ಒಂದಷ್ಟು ದಿನ.. ಆ ಸಿಡಿಯನ್ನು ಸೋಪಿನಲ್ಲಿ ತೊಳೆದು... ತೊಳೆದು.. ಕಡೆಗೂ ಪೂರ್ತಿ ಸಿನಿಮಾ ನೋಡಿಯೇ ಬಿಟ್ಟೆ.. ಅದಕ್ಕೆ ಅಣ್ಣಾವ್ರು ಮೂವತ್ತು ವರ್ಷ ದಾಟಿ.. ಭಕ್ತ ಪ್ರಹ್ಲಾದ ಚಿತ್ರದ ಸಂಭಾಷಣೆ ಹೇಳೋಕೆ ಹೊರಟಿದ್ದು :-)

***

ಈ ಚಿತ್ರ ಒಂದು ರೀತಿಯ ಸಮಾಜದಲ್ಲಿ ಶೋಷಿತ ವರ್ಗವನ್ನು ದಹಿಸುವ ಸಿರಿವಂತರ ಬಗ್ಗೆ ಆಧಾರಿತವಾಗಿದೆ. 

ಈ ಚಿತ್ರದ  ವಿಶೇಷತೆಗಳು.. 

೧) ತಮಿಳುನಾಡಿನ ಮೊದಲ ಮುಖ್ಯಮಂತ್ರಿ ಶ್ರೀ ಸಿ  ಎನ್ ಅಣ್ಣಾದುರೈ  ಅವರು ಬರೆದ ಕಥೆಯಾಧಾರಿತ ಚಿತ್ರವಿದು 

೨) ಒಂದೆರಡು ಕ್ಷಣದ ದೃಶ್ಯದಲ್ಲಿ ರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸಿದ ಚಿತ್ರವಿದು 

೩) ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಗಾಯಕರಾಗಿಯೂ ಮಿಂಚಿದ ಚಿತ್ರವಿದು 

ಆ ಪುಟ್ಟ ಹಳ್ಳಿಯಲ್ಲಿ ಸಾಹುಕಾರ ಊರಿನವರಿಗೆ ಕೊಟ್ಟ ಸಾಲವನ್ನು ವಸೂಲಿ ಮಾಡಲು ಎಲ್ಲಾ ರೀತಿಯ ದುಷ್ಟ ಮಾರ್ಗವನ್ನಲ್ಲದೆ, ಅಂತಃಕರಣವಿಲ್ಲದ, ಶುದ್ಧ ಜಿಪುಣನಾಗಿರುತ್ತಾನೆ.  ಆದರೆ ಈ ಸಾಹುಕಾರ ಕೂಡಿಟ್ಟ ಹಣವನ್ನೆಲ್ಲ ಅವನ ಮಗಳು ದುಂದು ವೆಚ್ಚಮಾಡೋದನ್ನ ಸಹಿಸಲಾರದೆ ಯಾವಾಗಲೂ ಖರ್ಚುವೆಚ್ಚ ಕಡಿಮೆ ಮಾಡಬೇಕು ಅಂತ ತಾಕೀತು ಮಾಡುತ್ತಲೇ ಇರುತ್ತಾನೆ. 

ಹಳ್ಳಿಯವನೊಬ್ಬ ಸಾಲವನ್ನು ಹಿಂದಿರುಗಿಸಲಾಗದೆ ಹೋದಾಗ, ಕೋರ್ಟಿನ ನೋಟಿಸಿಗೆ ಬೆದರಿ, ತನ್ನನ್ನು ಕಾಪಾಡಬೇಕು ಎಂದು ಅಂಗಲಾಚಿದಾಗಿಯೂ, ಹಣದ ದಾಹದ ಸಾಹುಕಾರ ಮುಂದಿನ ಕ್ರಮ ಜರುಗಿಸಿಯೇ ಬಿಡುತ್ತಾನೆ. ಆ ಅವಮಾನ ತಾಳಲಾರದೆ, ಆ ಹಳ್ಳಿಯವ ನೇಣು ಹಾಕಿಕೊಳ್ಳುತ್ತಾನೆ.. 

ಈ ಚಿತ್ರದ ತಳಹದಿ ಈ ದೃಶ್ಯ.. ಊರಿನಿಂದ ಬರುವ ಆತನ ಮಗನಿಗೆ ನಿಜ ವಿಷಯ ತಿಳಿದಾಗ ತನ್ನ ತಂದೆಯ ಸಾವಿಗೆ ಕಾರಣನಾದ ಧನದಾಹಿ ಸಾಹುಕಾರನ ಮೇಲೆ ಸೇಡು ತೀರಿಸಿಕೊಳ್ಳುವ ಪಣ ತೊಡುತ್ತಾನೆ.. 


ಈ ದೃಶ್ಯ ಚಿತ್ರದ ಹೈ ಲೈಟ್ ಕಾರಣ.. ಬೆಳಕಿನ ಸಂಯೋಜನೆ ಉಗ್ರವಾಗಿ ಕಾಣುವ ರಾಜ್ ಕುಮಾರ್ ಅಬ್ಬಬ್ಬಾ ಎನಿಸುತ್ತದೆ.. 





ದೃಶ್ಯದಲ್ಲಿ ಚಾಣಕ್ಯ ಚಂದ್ರಗುಪ್ತನಿಗೆ ದಾರಿ ತೋರಿಸಿದ ಹಾಗೆ, ರಾಜ್ ಕುಮಾರ್ ಗೆಳೆಯರಾಗಿ ಉದಯಕುಮಾರ್ ಬರುತ್ತಾರೆ.. 


ಸಾಹುಕಾರನ ಮಗಳನ್ನು ಮದುವೆಯಾಗಿ, ಅವಳಿಗೆ ಕಷ್ಟ ಕೊಟ್ಟು, ಬೇಕು ಬೇಕಾದಾಗ ಸಾಹುಕಾರನ ದುಡ್ಡು ಕರಗಿಸುವತ್ತ ಗಮನ ರಾಜ್ ಕುಮಾರ್ ಪಾತ್ರ, ನಂತರ ತನ್ನ ಮಡದಿಯ ಅಣ್ಣನ ಒಲವು ಆತನ ಮನೆಕೆಲಸದಾಕೆ ಲೀಲಾವತಿಯ ಮೇಲೆ ಇರುವುದನ್ನು ಕಂಡು, ಅದಕ್ಕೆ ಇಂಬು ಕೊಡುತ್ತಲೇ ಸಾಹುಕಾರನ ಗೌರವಕ್ಕೆ ಪೆಟ್ಟು ಕೊಡಲು ಅನುವಾಗುತ್ತಾರೆ.  ಆದರೆ ಸಾಹುಕಾರನ ಹಣದ ದರ್ಪಕ್ಕೆ ಲೀಲಾವತಿಯ ಮನೆ ಸುತ್ತು ಹೋಗುತ್ತದೆ, ಆದರೆ ಉಪಾಯವಾಗಿ ರಾಜ್ ಕುಮಾರ್ ಮಲ್ಲಿ ಅಂದರೆ ಲೀಲಾವತಿಯ ಕುಟುಂಬವನ್ನು ಉಳಿಸಿ, ಪಟ್ಟಣಕ್ಕೆ ಕಳಿಸುತ್ತಾರೆ.  ನಿರಾಶೆಯಲ್ಲಿದ್ದ ಮಲ್ಲಿಯ ಪ್ರಿಯಕರ ಜಿಗುಪ್ಸೆಗೊಂಡು, ಆಶ್ರಮಕ್ಕೆ ಸೇರಿದಾಗ. ಅಲ್ಲಿಯ ಸ್ವಾಮಿಯ ದುರ್ನಡತೆಯನ್ನು ಕಂಡು ವಿರೋಧಿಸುವ ಸನ್ನಿವೇಶದಲ್ಲಿ ಆ ಸ್ವಾಮಿಯ ಸಾವಿಗೆ ಕಾರಣನಾಗುತ್ತಾನೆ.  ಕೇಸಿನ ವಿಚಾರಣೆಯನ್ನು ರಾಜ್ ಕುಮಾರ್ ಪಾತ್ರಧಾರಿ ನಿರ್ವಹಿಸಿ, ಕೇಸು ಗೆಲ್ಲಲು ಸಹಾಯ ಮಾಡುತ್ತಾರೆ.. ಅದಕ್ಕೆ ಸಹಾಯ ಮಾಡಿದ ಕಾರಣ ಮುಲಾಜಿಗೆ ಒಪ್ಪಿ ಮಲ್ಲಿಯನ್ನು ಬಿಟ್ಟು ಇನ್ನೊಬ್ಬ ಸಾಹುಕಾರನ ಮಗಳ ಮದುವೆಗೆ ಅಣಿಯಾಗುತ್ತಾರೆ.. ಇದೆಲ್ಲಾ ರಾಜ್ ಕುಮಾರ್ ಮತ್ತು ಉದಯಕುಮಾರ್ ಉಪಾಯವಾಗಿರುತ್ತದೆ.. ಅಂತ್ಯದ್ಲಲಿ ಸಾಹುಕಾರನ ಮುಂದೆ ಎಲ್ಲವೂ ತೆರೆ ಬೀಳುತ್ತದೆ.. ಹಾಗೂ ಸಾಹುಕಾರನ ದರ್ಪವೂ ಅಡಗುತ್ತದೆ.. ರಾಜ್ ಪಾತ್ರ ಗೆಲ್ಲುತ್ತದೆ ..ಸುಖಾಂತ್ಯವಾಗುತ್ತದೆ  









ಪ್ರತಿಯೊಂದು ದೃಶ್ಯದಲ್ಲಿಯೂ ಉದಯಕುಮಾರ್ ರಾಜ್ ಕುಮಾರ್ ಅವರಿಗೆ ಹಾದಿ ತೋರಿಸುತ್ತಾ ಹೋಗುವ ದೃಶ್ಯ ಸೊಗಸಾಗಿ ಮೂಡಿ ಬಂದಿದೆ.  ರಾಜ್ ಕುಮಾರ್ ಅವರ ಪಾತ್ರದ ಸಿಟ್ಟು, ರೋಷವನ್ನು, ಉದಯಕುಮಾರ್ ಪಾತ್ರಧಾರಿ ಅಚ್ಚುಕಟ್ಟಾಗಿ ಉಪಯೋಗಿಸುವ ರೀತಿ ಚಿತ್ರಕಥೆಯಲ್ಲಿ ಮೂಡಿಸಿರುವ ರೀತಿ ಸೂಪರ್.. 

ರಾಜ್ ಕುಮಾರ್ ಅವರ ಪಾತ್ರ ಪೋಷಣೆ ಇಷ್ಟವಾಗುತ್ತದೆ..  ರೋಷ ಸಿಟ್ಟು ಎಲ್ಲವನ್ನು ಮೇಳೈಸಿಕೊಂಡು ಅಭಿನಯಿಸಿರುವ ರೀತಿ ಸೊಗಸು.. ಇದುವರೆಗೂ ಮಾಡಿಕೊಂಡು ಬಂದು ಚಿತ್ರಗಳಿಗಿಂತ ಕೊಂಚ ಭಿನ್ನವಾದ ಪಾತ್ರವಿದು.. ಸಿಗರೇಟ್ ಸೇದುವ ದೃಶ್ಯವಿದ್ದರೂ ರಾಜ್ ಕುಮಾರ್ ಸಿಗರೇಟ್ ಸೇದುವ ದೃಶ್ಯದಲ್ಲಿ ಕಾಣುವುದಿಲ್ಲ. ಕುಡಿತ ದೃಶ್ಯವಿದ್ದರೂ ಅವರು ಇದರಲ್ಲಿ ಕಾಣುವುದಿಲ್ಲ.. ತಮ್ಮ್ ಪಾತ್ರದ ಬಗ್ಗೆ ಅವರು ತೋರುವ ಕಾಳಜಿ, ಹಾಗೆಯೇ ಸಾಮಾಜಿಕ ಜವಾಬ್ಧಾರಿಯ ಬಗ್ಗೆ ಹೆಮ್ಮೆಯೆನಿಸುತ್ತದೆ. 

ಅವರ ವೇಷಭೂಷಣ, ಮಾತುಗಾರಿಕೆ, ಮಚ್ಚು ಮಸೆಯುವಾಗ ತೋರುವ ರೌದ್ರಾವತಾರ, ಲಾಯರ್ ಆಗಿ ಅಚ್ಚುಕಟ್ಟಾಗಿ ನಿರ್ವಹಿಸಿರುವ ರೀತಿಗೆ ಮೆಚ್ಚುಗೆ ಸೂಚಿಸಬೇಕಾಗುತ್ತದೆ. 

ಆರಂಭದ ದೃಶ್ಯದಿಂದ ಅಂತಿಮ ದೃಶ್ಯದವರೆಗೂ ಚಿತ್ರದಲ್ಲಿ ಆವರಿಸಿರುವ ಪಾತ್ರಪೋಷಣೆ ಇಷ್ಟವಾಗುತ್ತದೆ. 

ಚಾಣಕ್ಯನ ಹಾಗೆ ಉಪಾಯ ಮಾಡುವ ಪಾತ್ರದಲ್ಲಿ ಉದಯಕುಮಾರ್ ಪ್ರತಿಹಂತದಲ್ಲೂ ಇಷ್ಟವಾಗುತ್ತಾರೆ. ಸನ್ನಿವೇಶಕ್ಕೆ ತಕ್ಕಂತೆ ಮಾತುಗಳನ್ನು ಆಡುವ ಅವರ ಪಾತ್ರ ಸೂಪರ್.  

ಗರ್ವ ತುಂಬಿದ ಹೆಣ್ಣಾಗಿ ಸಾಹುಕಾರ್ ಜಾನಕಿ, ಕೆಲಸದ ಆಳು ಮಗಳಾಗಿ ಲೀಲಾವತಿ, ಸಾಹುಕಾರನ ಮಗನಾಗಿದ್ದರೂ ಅಂತಃಕರಣವುಳ್ಳ ಪಾತ್ರದಲ್ಲಿ ರಾಜಾಶಂಕರ್ ಇವರೆಲ್ಲರ ಜೊತೆಯಲ್ಲಿ ಸಾಹುಕಾರನ ದರ್ಪದ ಪಾತ್ರದಲ್ಲಿ ಸೌಮ್ಯ ಪಾತ್ರದಲ್ಲಿಯೇ ಪಾತ್ರ ಮಾಡುತ್ತಿದ್ದ ಅಶ್ವಥ್ ಇಲ್ಲಿ ಖಳಛಾಯೆ ಪಾತ್ರದಲ್ಲಿ ಮೆರೆದಿದ್ದಾರೆ. ನರಸಿಂಹರಾಜು ಪಾತ್ರ ಪುಟ್ಟದಾಗಿದ್ದರೂ, ಆರಂಭಿಕ ದೃಶ್ಯಗಳಲ್ಲಿ ಸದಾ ಕಾಣಸಿಗುತ್ತಾರೆ.  

ಪ್ರತಿಯೊಬ್ಬರ ಪಾತ್ರ ಪೋಷಣೆ ಚೆನ್ನಾಗಿದೆ.. ಹಾಡುಗಳು ಖುಷಿ ಕೊಡುತ್ತದೆ. ಜಿ ಕೆ ವೆಂಕಟೇಶ್ ಅವರ ಸಂಗೀತ, ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ. ಆರು ಹಾಡುಗಳು ಇಂಪಾಗಿವೆ. 

ನಗುವೇ ನಾಕ ಅಳುವೇ ನರಕ ಹಾಡಲ್ಲಿ ಜೆ ಕೆ ವೆಂಕಟೇಶ್ ಮತ್ತು ಪಿ ಬಿ ಶ್ರೀನಿವಾಸ್ ಹಾಡುಗಾರಿಕೆ ಲಯಬದ್ಧವಾಗಿದೆ ... ಜನಪ್ರಿಯ ಗೀತೆ  ಆಡೋಣ ಬಾ ಬಾ ಗೋಪಾಲ.. ಇವತ್ತಿಗೂ ಜನಪ್ರಿಯವಾಗಿದೆ. ಸಂಗೀತ ಸಾಹಿತ್ಯದಿಂದ ಹಾಗೂ ಚಿತ್ರೀಕರಣ ಇಷ್ಟವಾಗುತ್ತದೆ.. 

ರಾಜ್ ಕುಮಾರ್ ಅವರ ಪ್ರತಿ ದೃಶ್ಯವೂ ಅವರಲ್ಲಿ ಬೆಳೆಯುತ್ತಿರುವ ಕಲಾವಿದನನ್ನ ತೆರೆಯ ಮೇಲೆ ಎದ್ದು ಕಾಣುತ್ತಿರುತ್ತದೆ.. ರೋಷಾವೇಷದ ಮಾತುಗಳಲ್ಲಿ, ಸಾಹುಕಾರನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಕಟುವಾಗಿ ಮಾತನಾಡುವಾಗ ಅವರ ಸಂಭಾಷಣೆ ಸೂಪರ್ 

ಸಿಕ್ಕ ಪಾತ್ರ, ಕೊಟ್ಟ ಸಂಭಾಷಣೆ, ಸನ್ನಿವೇಶಕ್ಕೆ ಬೇಕಾಗುವ ಅಭಿನಯ ಎಲ್ಲದರಲ್ಲಿಯೂ ಎದ್ದು ಕಾಣುವ ಅವರ ಅಭಿನಯ ಕಲಾವಿದ ಹೊರಹೊಮ್ಮುವ ಪರಿ ಸುಂದರ.. !

ಜ್ಯೂಪಿಟರ್ ಪಿಕ್ಚರ್ಸ್ ಲಾಂಛನದಲ್ಲಿ ೧೯೬೩ರಲ್ಲಿ ತಯಾರಾದ ಈ ಚಿತ್ರವನ್ನು ಸಿ ಎನ್ ಅಣ್ಣಾದುರೈ ಕಥೆಯನ್ನು ಆಧರಿಸಿ, ಹುಣಸೂರು ಕೃಷ್ಣಮೂರ್ತಿ, ಹಾಗೂ ಕನಾಲ್ ಪ್ರಭಾಕರ್ ಶಾಸ್ತ್ರೀ ಅವರ ಸಾಹಿತ್ಯವನ್ನು ಹೊಂದಿತ್ತು, ಮತ್ತು ಜಿ ಕೆ ವೆಂಕಟೇಶ್ ಅವರ ಸಂಗೀತ ಹಾಗೂ ಜಿ ಆರ್ ನಾಥನ್ ಅವರ ಛಾಯಾಗ್ರಹಣ ಮತ್ತು ನಿರ್ದೇಶನವಿತ್ತು, 

ರಾಜ್ ಕುಮಾರ್ ಅವರ ಚಿತ್ರಜೀವನದ ನಲವತ್ತನೆಯ ಚಿತ್ತದಿಂದ ನಲವತ್ತೊಂದನೇ ಚಿತ್ರದ ಕಡೆಗೆ ಪಯಣ ಮಾಡೋಣ.. !

                                                                                   ***