Wednesday, April 24, 2013

ರಾಜ್ ಆಸ್ತಾನದಲ್ಲಿ ಅವರು ಅನಭಿಷಿಕ್ತ ಮಹಾರಾಜರೇ! (2013)

ರಾಜ್ ಕಲಾವಿದರಾಗಿ ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ. ಉತ್ತರ ಹುಡುಕುತ್ತ ಹೊರಟರೆ ಪ್ರಾಯಶಃ ಈ ಭೂಮಿ.... ಮಂಗಳ ಗ್ರಹವಾಗಿಬಿಡುತ್ತೆ ಅನ್ನಿಸುತ್ತೆ. ಯಾಕೆಂದರೆ ಈ ಪ್ರಶ್ನೆಯನ್ನು ಕೇಳುತ್ತಾ ಹೊರಟರೆ ಎಲ್ಲರೂ ಮುಖ ಕೆಂಪಗೆ ಮಾಡಿಕೊಳ್ತಾರೆ. ಇಡಿ ಭೂಮಂಡಲವೇ ಕೆಂಪಾಗಿ.. ಮಂಗಳ ಗ್ರಹದಂತೆ ಆಗುತ್ತದೆ. 

ಇಂದು ಅವರ ಜನುಮ ದಿನ.. ವರ್ಷವೆಲ್ಲಾ ನೆನಪಲ್ಲಿ ಇದ್ದರೂ ಇಂದು ಇನ್ನೊಮ್ಮೆ ಅವರನ್ನು ನೆನೆಸಿಕೊಂಡು ಮೈ ಮನ ಪುಳಕಗೊಳ್ಳುವ ತವಕ ಎಲ್ಲರಲ್ಲೂ ಇರುತ್ತದೆ. ಮಗುವನ್ನು ಎಷ್ಟೇ ಬಾರಿ ಮುದ್ದಿಸಿದರೂ....  ಇನ್ನೊಮ್ಮೆ ಮುದ್ದಿಸೋಣ ಅನ್ನುವ ಬಯಕೆಯಂತೆ ಅಲ್ಲವೇ!

ರಾಜ್ ಆಸ್ತಾನದಲ್ಲಿ ಅವರು ಅನಭಿಷಿಕ್ತ ಮಹಾರಾಜರೇ. 



ಅವರು ಮಹಾರಾಜರಾಗಿ ದರ್ಬಾರ್ ನಲ್ಲಿ ಕೂತಿದ್ದಾಗ ಅವರ ಆಸ್ಥಾನದಲ್ಲಿ ಯಾರು ಯಾರು ಇರಬಹುದು. ಹೀಗೊಂದು ಕಲ್ಪನೆ ನನ್ನ ಕಾಡುತಿತ್ತು. ಆ ಒಂದು ಕಲ್ಪನೆಗೆ ರೆಕ್ಕೆ ಪುಕ್ಕ ಸಿಕ್ಕ ಈ ಕ್ಷಣದಲ್ಲಿ ಮೂಡಿಬಂದ ಲೇಖನ ಇದು. 

ಮಹಾರಾಜ : ಶ್ರೀ ಶ್ರೀ ಮುತ್ತು ರಾಜಕುಮಾರ್ 

ರಾಜ ಮಾತೆ : ಪಂಡರಿಬಾಯಿ 

ರಾಜ ಗುರು : ಕೆ ಎಸ್ ಅಶ್ವತ್ 

ಸಲಹೆ : ಆದ್ವಾನಿ ಲಕ್ಷ್ಮೀದೇವಿ 

ಮಹಾಮಂತ್ರಿಗಳು  : ವರದರಾಜ್ (ತಮ್ಮ) ಹಾಗೂ ಚಿ. ಉದಯಶಂಕರ್ 


ದರ್ಬಾರಿನ ನಿರ್ದೇಶಕರು : ಎಚ್ ಎಲ್ ಎನ್ ಸಿಂಹ 
                                    ಬಿ ಆರ್ ಪಂತುಲು 
                                    ದೊರೈ ಭಗವಾನ್ 
                                    ವಿಜಯ್ 
                                    ಹುಣಸೂರ್ ಕೃಷ್ಣಮೂರ್ತಿ 
                                    ಟಿ ವಿ ಸಿಂಗ್ ಠಾಕೂರ್ 
                                    ಕು ರಾ ಸೀತಾರಾಮ ಶಾಸ್ತ್ರಿ ಇನ್ನೂ ಅನೇಕ 
                                    ಮಹನೀಯರು 

ದೃಶ್ಯಸೆರೆ ಹಿಡಿದವರು  : ಆರ್ ಮಧುಸೂದನ್ 
                                 ಶ್ರೀಕಾಂತ್ 
                                 ಚಿಟ್ಟಿಬಾಬು 
                                 ಡಿ ವಿ ರಾಜಾರಾಮ್ 
                                 ಗೌರಿಶಂಕರ್ ಇನ್ನೂ ಮುಂತಾದವರು     

ಗರಡಿ ಗುರು : ಎಂಪಿ ಶಂಕರ್ 

ಸಂಗೀತ ವಿದ್ವಾಂಸರು : ಉಸ್ತಾದ್ ಬಿಸ್ಮಿಲ್ಲಾ ಖಾನ್ 
                                ಜಿ ಕೆ ವೆಂಕಟೇಶ್ 
                                ರಾಜನ್ ನಾಗೇಂದ್ರ 
                                ಎಂ ರಂಗರಾವ್ 
                                ಉಪೇಂದ್ರ ಕುಮಾರ್ 
                                ಟಿ ಜಿ ಲಿಂಗಪ್ಪ 
                                ವಿಜಯಭಾಸ್ಕರ್ 
                                ಮತ್ತಿತರರು 

ಸೇನಾಪತಿಗಳು : ನಟ ಭೈರವ ವಜ್ರಮುನಿ ಹಾಗೂ ತೂಗುದೀಪ ಶ್ರೀನಿವಾಸ್   

ರಣಕಲಿಗಳು : ಶಕ್ತಿ ಪ್ರಸಾದ್, ನಾಗಪ್ಪ, ದಿನೇಶ್

ವಿಕಟಕವಿಗಳು : ಹಾಸ್ಯ ಬ್ರಹ್ಮ ಬಾಲಣ್ಣ 
                       ಹಾಸ್ಯ ಚಕ್ರವರ್ತಿ ನರಸಿಂಹರಾಜು 
                       ಕುಳ್ಳ ಏಜೆಂಟ್ ದ್ವಾರಕೀಶ್ 
                       ಹಾಸ್ಯ ರಸತಜ್ಞ ಶಿವರಾಂ  

ಪೋಷಕ ವೃಂದದಲ್ಲಿ : ಹೊನ್ನವಳ್ಳಿ ಕೃಷ್ಣ, ಶಾಂತಮ್ಮ, ಪಾಪಮ್ಮ, ಸಂಪತ್, ಶನಿ ಮಹಾದೇವಪ್ಪ, ಅನಂತರಾಮ್ ಮಚ್ಚೇರಿ, ಗೋ ರಾ ಭೀಮರಾವ್, ಎಂ ಎಸ್ ಉಮೇಶ್, ಎಂ ಎಸ್ ಸತ್ಯ, ರಾಮಚಂದ್ರ ಶಾಸ್ತ್ರಿ, ಗಣಪತಿ ಭಟ್, ಅಶ್ವತ್ ನಾರಾಯಣ, ಜೋಕರ್ ಶ್ಯಾಮ್, ಕುಳ್ಳಿ ಜಯ, ರಮಾ ದೇವಿ, ಎಂ ಎನ್ ಲಕ್ಷ್ಮೀದೇವಿ  ಹಾಗೂ ಮತ್ತಿತರರು 

ನೃತ್ಯ ಪಟುಗಳು : ಉಡುಪಿ ಜಯರಾಂ, ದೇವಿ

ಸಾಹಸ: ಶಿವಯ್ಯ, ವಿಜಯ್, ಜೂಡೋ ರತ್ನಂ  
                                                             
ಈ ಪಟ್ಟಿಯಲ್ಲಿ ಇನ್ನೂ ಅನೇಕ ವಿಖ್ಯಾತ ಕಲಾವಿದರ, ಸಭಿಕರ, ಕಲಾ ಪೋಷಕರ ಹೆಸರುಗಳು ಪ್ರಕಟವಾಗಿಲ್ಲ. ಅವರನೆಲ್ಲಾ ಸೇರಿಸಿ ಒಂದು ದೊಡ್ಡ ಒಡ್ಡೋಲಗ ಮಾಡುವ ಅಭಿಲಾಷೆ ಇದೆ. ಎಲ್ಲರ ಮುಖ ಚಿತ್ರಗಳು ಜಗತ್ತಿಗೆ ಪರಿಚಯವಾಗಬೇಕೆಂಬ ಹಂಬಲ ಇದೆ.... ನೋಡೋಣ..ಪ್ರಯತ್ನ ಪಡೋಣ 

ಅಣ್ಣಾವ್ರ ಈ ಹುಟ್ಟು ಹಬ್ಬಕ್ಕೆ ಒಂದು ಕಲಾವಿದರ ಪಟ್ಟಿ.. ಹಾಗೂ ತಾವು ಮರೆಯಲ್ಲಿ ನಿಂತು ಕಲಾ ರತ್ನವನ್ನು ಬೆಳಕಿಗೆ ತಂದು ಹೊಳಪು ಕೊಟ್ಟ ಎಲ್ಲ ಕಲಾ ಮಣಿಗಳಿಗೆ ಈ ಲೇಖನ ಅರ್ಪಿತ!

Friday, April 12, 2013

ಮೈ ನೇಮ್ ಇಸ್ ರಾಜ್ ರಾಜ್ ರಾಜ್! - ಶಂಕರ್ ರಾಜ್ ಗುರು (2013)

ನಿನ್ನೆ ಯುಗಾದಿ ಹಬ್ಬದ ದಿನ ಏನೋ ಆಟವಾಡುತಿದ್ದ  ಮಗಳು ಎರಡು ಕಣ್ಣರಳಿಸಿ "ಅಪ್ಪಾ!" ಎಂದು ಕಿರುಚಿ ಕಣ್ಣು ಹೊಡೆದು ನಕ್ಕಳು.  ಮನಮಡದಿ "ಅದೆಷ್ಟು ಸಲ ಬಂದ್ರು  ಬಾಯಿ ಬಿಟ್ಕೊಂಡು ನೋಡ್ತೀರಾ" ಅಂದ್ಲು. ನನ್ನ ಅಭಿರುಚಿ ಗೊತ್ತಿದ್ದ ಮಗಳು  ಟಿ.ವಿ ಯ ಸೌಂಡ್ ಸ್ವಲ್ಪ ಹೆಚ್ಚಾಗಿಯೇ ಕೊಟ್ಟಳು.

ಕಲಶಂ ಪ್ರತಿಷ್ಟಾಪನ ಮಹೂರ್ತ ಆರಂಭಂ . ಎನ್ನುವಂತೆ ಲೆಕ್ಕವಿಲ್ಲದಷ್ಟು ಭಾರಿ ನೋಡಿದರು ಮತ್ತೊಮ್ಮೆ ನೋಡಲು ಸಿದ್ಧವಾಗಿ ಕೂತೆವು. ನಿನ್ನೆ ಯುಗಾದಿ ಹಬ್ಬದ ದಿನ ಉದಯ ಮೂವೀಸ್ ನಲ್ಲಿ ಅಣ್ಣಾವ್ರ ಶಂಕರ್ ಗುರು ಸಿನಿಮಾ ಬಿತ್ತರಗೊಂಡಿತು.

ನನ್ನ ಮಗಳಿಗೂ ರಾಜ್ ಚಿತ್ರ ಗಳು ಎಂದರೆ ಖುಷಿಯಾಗುತ್ತಿದೆ ಎಂದರೆ ಈ ಕಲಾವಿದ ಎಲ್ಲಾ ತಲೆಮಾರುಗಳಿಗೂ ಸಲ್ಲುವ ಕಲಾವಿದ ಎನ್ನುವುದಕ್ಕೆ ಇದು ಉದಾಹರಣೆ..

ಈ ಲೇಖನವನ್ನು ಇಬ್ಬರೂ "ರಾಜ"ರಿಗೆ ಸಮರ್ಪಿಸುತ್ತಿದ್ದೇನೆ. ಒಂದು ರಾಜಣ್ಣ (ಅಣ್ಣಾವ್ರು)   ..ಇನ್ನೊಂದು ನನ್ನ ಸೋದರ ಮಾವ ರಾಜ (ಇವನ ಹೆಸರೂ - ಶ್ರೀಕಾಂತ್)  (ಇವ ನಮ್ಮನ್ನು ಅಗಲಿ ೫ ವರ್ಷಗಳು ಕಳೆದಿವೆ).

ಶ್ರೀಕಾಂತ್ & ಶ್ರೀಕಾಂತ್!
ನನ್ನ ಸೋದರಮಾವ ರಾಜನ ಸಿನಿಮಾ ಹುಚ್ಚು ಅದರ ಬಗ್ಗೆ ಇನ್ನೊಂದು ಸುಧೀರ್ಘ ಮಾಲಿಕೆಯೇ ಬರೆಯಬೇಕು. ಇವನಿಗೆ "ಶಂಕರ್ ಗುರು" ಸಿನಿಮಾ ಎಷ್ಟು ಹುಚ್ಚು ಹಿಡಿಸಿತ್ತು ಎಂದರೆ.. ಕಳೆದ ಹದಿನೈದು ವರ್ಷಗಳಲ್ಲಿ ಶಂಕರ್ ಗುರು ಚಿತ್ರ ಬೆಂಗಳೂರಿನಲ್ಲಿ ಬಿಡುಗಡೆ ಕಂಡ ಕಡೆಯಲ್ಲೆಲ್ಲಾ ನೋಡಿ ಬಂದಿದ್ದೇವೆ. ಒಂದು ಫೋನ್ "ಶ್ರೀಕಾಂತು.....  ಶಂಕರ್ ಗುರು... ಬೇಗ ಬಂದು ಬಿಡು" ಇಷ್ಟೇ ಅವನು ಹೇಳ್ತಾ ಇದ್ದದ್ದು. ನಾನು ಬಿಟ್ಟ ಕೆಲಸ ಬಿಟ್ಟು ಓಡಿ ಬಿಡುತಿದ್ದೆ.

ತ್ರಿಪಾತ್ರದಲ್ಲಿ ಅಮೋಘ ಅಭಿನಯ! 
ಇನ್ನು ಶಂಕರ್ ಗುರು ಸಿನಿಮಾ... ಪಕ್ಕ ವ್ಯಾಪಾರಿ ಚಿತ್ರವಾದರೂ, ಒಂದು ಜೀವನದಲ್ಲಿ ಇರಬೇಕಾದ ಶಿಸ್ತು, ನೆಡತೆ,       ಮಾತಾ-ಪಿತೃಗಳ ಬಗ್ಗೆ ಗೌರವ, ಪ್ರೀತಿ ಪ್ರೇಮ, ಹಿರಿಯರ ಮೇಲಿನ ಗೌರವ, ಮನಕಲಕುವ ಸಂಭಾಷಣೆಗಳು, ಸಾಹಸ ದೃಶ್ಯಗಳು, ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ.
  • "ಈಗ ನನ್ನ ಚಾನ್ಸ್" ಎನ್ನುತ್ತಾ ಕುಂಕುಮದ ಭರಣಿ ತೆಗೆದು ಮಡದಿಗೆ ಸಿಂಧೂರ ಇಡುವ ಪರಿ
  • ಕೆಲವೊಮ್ಮೆ ದೇಹಕ್ಕೆ ಈ ರೀತಿಯ ದಂಡನೆ ಅನಿವಾರ್ಯ ಎನ್ನುವ ಮಾತು.. 
  • ರೆಸ್ಟ್ ಬೇಕಾಗಿರೋದು ದೇಹಕ್ಕಲ್ಲ ಮನಸ್ಸಿಗೆ ... ಮನಸ್ಸಿಗೆ.. ಎನ್ನುವ ಸಂಭಾಷಣೆ  
  • ಫೋನ್ ನಲ್ಲಿ "ಜಿಂಕೆಯ ಕಣ್ಣೆ  ಚೆನ್ನಾ ಎನ್ನುತ್ತಾ ಹಾಗೆಯೇ ಅಳುತ್ತಾ ಕುಸಿದು ಕೂರುವ ದೃಶ್ಯ... "ಅಬ್ಬಬ್ಬಾ ಇಷ್ಟು ವರ್ಷಗಳಾದ ಇಂತಹ ಆನಂದ" ಎನ್ನುವಾಗ ಅವರ ಅಭಿನಯ!  
  • "ಅಡ್ರೆಸ್ ಕೇಳ್ತಾ ಇದ್ರೂ.. ನಾನು ಕೊಟ್ಟಿದ್ದೇನೆ.. ನೀವು ಮಿಕ್ಕಿದ್ದು ಕೊಡಿ"
  • "ಓಹ್ ಶಂಕರ್.. ನಾನು ಗೈಡ್ ಮಾಡ್ತೀನಿ ಅಂದೇ... ಕೇಳಲಿಲ್ಲ.. ಯಾರೋ ಮಿಸ್-ಗೈಡ್ ಮಾಡಿದ್ದಾರೆ"
  • "ಮೊದಲು ನಾನು ಹೇಳುವ ಮಾತು ಕೇಳೋ ಕ್ರಿಮಿನಲ್" ಎನ್ನುವ ಗುರು 
  • "ಕಾಶ್ಮೀರದ ಹೆಣ್ಣಿನ ಅಹಂಕಾರ ಇಳಿಸಿ.. ಕನ್ನಡ ನಾಡಿಗೆ ಕರೆತರದಿದ್ದರೆ ನನ್ನ ಹೆಸರು ಗುರು ಅಲ್ಲಾ" ಎಂದು ಎದೆ ತಟ್ಟಿ  ಕೊಳ್ಳುವ ಶೈಲಿ 
  • "ತಾತ.. ಹೀಗೆ ನನ್ನ ಇನ್ನೊಮ್ಮೆ ಹಿಡಿದುಕೊಂಡರೆ ನಾನು ಗೋತಾ"
  • ಸುಮಧುರ ಹಾಡುಗಳು, ಸುಂದರ ಪ್ರದೇಶಗಳಲ್ಲಿ ಚಿತ್ರಿಕರನವಾದ ಸಾಹಸ ದೃಶ್ಯಗಳು, ಮೂರು ಪಾತ್ರಗಳನ್ನೂ ಮಾಡಿದ್ದರೂ ಒಂದು ಪಾತ್ರದ ಛಾಯೆ ಇನ್ನೊಂದು ಪಾತ್ರದ ಮೇಲೆ ಮೂಡದಿರುವುದು.. ಇವೆಲ್ಲ ಕೇವಲ ಅಣ್ಣಾವ್ರಿಗೆ ಮಾತ್ರ ಸಾಧ್ಯ ಎನ್ನಿಸುತ್ತದೆ. ಧ್ವನಿಯಲ್ಲಿ ಏರಿಳಿತ, ಪಾತ್ರಕ್ಕೆ ತಕ್ಕ ಆಂಗಿಕ ಅಭಿನಯ. 
  • ತಾಂತ್ರಿಕವಾಗಿಯೂ ಶ್ರೀಮಂತವಾಗಿದ್ದ ಚಿತ್ರದ ಹೈ ಲೈಟ್ ಎಂದರೆ.. ಅಣ್ಣಾವ್ರ ಪಾತ್ರಗಳು ಒಬ್ಬರನ್ನು ಒಬ್ಬರು ಸಂಧಿಸಿದಾಗ ಭ್ರಮೆಯಲ್ಲ ನಿಜ ಅನ್ನುವಂತೆ ಮೂಡಿಬರುವ ಪಾತ್ರಧಾರಿಗಳ ಜೋಡಣೆ, ಮತ್ತು ಅಭಿನಯ. (ಮಧು ಅವರ ಛಾಯ ಚಿತ್ರಣ)
  • ಶಂಕರ್ ಪಾತ್ರ ಕೋಮಲವಾದ ಬಳ್ಳಿಯ ತರಹ ಇದ್ದರೇ, ಗುರುವಿನ ಪಾತ್ರ ಪಕ್ಕ ತರಲೆ, ನಗು ಬುಗ್ಗೆ ಉಕ್ಕಿಸುವ ಪಾತ್ರ, ಇನ್ನು ಇದಕ್ಕೆಲ್ಲ ಕಳಶಪ್ರಾಯ ಎನ್ನುವಂತೆ ಗಂಭೀರ ರಾಜ್ ಶೇಖರ್ ಪಾತ್ರ
  • ಈ ಚಿತ್ರದ ಬಗ್ಗೆ ಒಂದು ಬೇರೆಯೇ ಲೇಖನ ಬರೆಯುವ ಆಸೆ ಇದೆ.. ಕಾರಣ ನಾನು ತುಂಬಾ ಇಷ್ಟ ಪಟ್ಟು ಪದೇ ಪದೇ  ನೋಡಿದ ಹಲವಾರು ಚಿತ್ರಗಳಲ್ಲಿ ಇದೂ ಒಂದು. 
ಒಂದು ಕ್ಲಾಸಿಕ್ ದೃಶ್ಯ!
ಇಷ್ಟೆಲ್ಲಾ  ಮಾತುಗಳು ಏಕೆ ಅಂದ್ರೆ ಇನ್ನೂರು ಚಿಲ್ಲರೆ ಚಿತ್ರಗಳಲ್ಲಿ ಅಭಿನಯಿಸಿದರೂ, ಹಿರಿಯ ಕಿರಿಯ ಕಲಾವಿದರ ಜೊತೆ ಅಭಿನಯ, ಪಾತ್ರಕ್ಕೆ ಅಗತ್ಯವಿದ್ದಾಗ ಹಿರಿಯ ಕಿರಿಯಕಲಾವಿದ ಎಂದು ನೋಡದೆ.. ಕಾಲು ಮುಟ್ಟಿ  ನಮಸ್ಕರಿಸುವುದು, ಆಲಂಗಿಸಿಕೊಳ್ಳುವುದು, ಇದೆಲ್ಲ ತಲೆಯನ್ನು  ಭುಜದ ಮೇಲೆ ಸದಾ ಹೊತ್ತಿರೋರಿಗೆ ಮಾತ್ರ ಸಾಧ್ಯ. ನಿರ್ದೇಶಕರ, ನಿರ್ಮಾಪಕರ ನಟರಾಗಿದ್ದ ಇವರು ಒಂದು ರತ್ನವೇ...   ಅಂತಹ ಒಂದು ರತ್ನ ನಮ್ಮ ಅಣ್ಣಾವ್ರು. ಕಲಾವಿದ ರಾಜ್ ಎಂದಿಗೂ ಅಮರ! 

ಅವರ ಎಲ್ಲ ಚಿತ್ರಗಳನ್ನು ನೋಡಿ, ಪ್ರತಿಯೊಂದು ಚಿತ್ರದ ಬಗ್ಗೆ ನನಗನಿಸಿದ ಮಾತುಗಳನ್ನು ಬರೆಯುವ ಆಸೆ ಇದೆ. ಇದು  ಅಣ್ಣಾವ್ರಿಗೆ ತೋರುವ ಗೌರವ ಅಷ್ಟೇ ಅಲ್ಲಾ ... ಸಿನಿಮಾ ಹುಚ್ಚನ್ನು ನನಗೂ ದಾಟಿಸಿ, ಸಿನೆಮಾಗಳಲ್ಲಿ ಬರುವ ಒಳ್ಳೆಯ ವಿಚಾರಗಳನ್ನು ಕಲಿಸಿ, ತಿಳಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡಿದ ನನ್ನ ಪ್ರೀತಿಯ ಸೋದರಮಾವ ರಾಜನಿಗೂ ಇದು ಒಂದು ನುಡಿ ನಮನವಾಗುತ್ತೆ ಎನ್ನುವ ಒಂದು ಹಂಬಲ .  

ನನ್ನ ಹೃದಯವನ್ನು ಮುಟ್ಟಿದ ಇಬ್ಬರು ಅನಭಿಷಿಕ್ತ "ರಾಜ"ರಿಗೆ ನನ್ನ ಅಕ್ಷರಗಳಲ್ಲಿ ನಮನ ಸಲ್ಲಿಸುವ ಒಂದು ಸಣ್ಣ ಪ್ರಯತ್ನ! 

ಅಣ್ಣಾವ್ರ ಪುಣ್ಯ ತಿಥಿಯ ಈ ಸಮಯದಲ್ಲಿ.. ಸದಾ ನೆನಪಲ್ಲಿ ಇರುವ ಕಲಾವಿದನನ್ನು ಒಮ್ಮೆ ಕಣ್ಣ ಮುಂದೆ ತಂದು                         ನಿಲ್ಲಿಸಿಕೊಳ್ಳುವ ಒಂದು ಪುಟ್ಟ ಪ್ರಯತ್ನ!